(ಕ್ರಿ. ಶ. ೧೮೨೨-೧೮೯೫) (ಪ್ಯಾಶ್ಚರೀಕರಣ ಪದ್ಧತಿ)

ಫ್ರೆಂಚ್ ವಿಜ್ಞಾನಿ ಲೂಯಿ ಪಾಶ್ಚರ‍್ ೧೮೨೨ರಲ್ಲಿ ಫ್ರಾನ್ಸ ದೇಶದ ಜೂರಾ ಪರ್ವತ ಪ್ರದೇಶದಲ್ಲಿ ಜನಿಸಿದರು. ಇವರು ಬೆಸಾಂಕನ್ ಕಾಲೇಜಿನಲ್ಲಿ ಓದಿದರು. ಪ್ಯಾರಿಸ್ಸಿನ ಈಕೋಲ್ ನಾರ್ಮೇಲ್ ಸಂಸ್ಥೆ ಆತನ ಹೆಚ್ಚಿನ ಅಧ್ಯಯನಗಳಿಗೆ ವಿಪುಲ ಅವಕಾಶ ಒದಗಿಸಿತು. ಪಾಶ್ಚರ್ ಭೌತಶಾಸ್ತ್ರ ಮತ್ತು ರಸಾಯನ ಶಾಸ್ತ್ರಗಳಲ್ಲಿ ಡಾಕ್ಟರೇಟ್ ಪದವಿ ಪಡೆದರು. ಸ್ಫಟಿಕಶಾಸ್ತ್ರದ ಬಗ್ಗೆ ಪ್ರಕಟಿಸಿದ ಪ್ರೌಢ ಪ್ರಬಂಧ ಇವರಿಗೆ ಅಪಾರ ಜನಪ್ರಿಯತೆ ತಂದಿತು.

೧೮೬೨ರಿಂದ ಲೂಯಿ ಪಾಶ್ಚರ್ ಸೂಕ್ಷ್ಮಜೀವಿಗಳ ಅಧ್ಯಯನದ ಮೇಲೆ ತಮ್ಮ ಲಕ್ಷ್ಯವನ್ನು ಕೇಂದ್ರೀಕರಿಸಿದರು. ಹುಚ್ಚುನಾಯಿ ಕಡಿದಾಗ ಬರುವ ರೋಗದ ಬಗ್ಗೆ ಇವರು ಮಾಡಿದ ಸಂಶೋಧನೆ ಮತ್ತು ಅದನ್ನು ತಡೆಯಲು ಆತ ಸೂಚಿಸುವ ವಿಧಾನ ಮುಂದೆ ಹುಚ್ಚುನಾಯಿ ಕಡಿತಕ್ಕೆ ವ್ಯಾಕ್ಸೀನು ತಯಾರಿಸಲು ತುಂಬ ಸಹಾಯಕವಾಯಿತು.

ಪ್ಯಾಶ್ಚರೀಕರಣ ಪದ್ಧತಿ ವಿಜ್ಞಾನ ಪ್ರಪಂಚಕ್ಕೆ ಇವರ ಒಂದು ಬಹು ದೊಡ್ಡ ಕೊಡುಗೆ. ಕ್ಷಯರೋಗದ ಮತ್ತು ಇತರ ರೋಗಗಳ ಬ್ಯಾಕ್ಟೀರಿಯಗಳು ಹಾಲಿಗೆ ಸೇರಿಕೊಂಡಾಗ ಹಾಲು ಕೆಡುತ್ತದೆ. ಅದನ್ನು ಸೇವಿಸುವವರು ರೋಗಗಳಿಗೆ ಒಳಗಾಗುತ್ತಾರೆ ಮತ್ತು ಹಲವು ಸಂದರ್ಭಗಳಲ್ಲಿ ಸಾವನ್ನೂ ಅಪ್ಪುತ್ತಾರೆ. ಹೀಗಾಗದಂತೆ ಹಾಲನ್ನು ಪರಿಶುದ್ಧವಾಗಿಡುವ ಪರಿಣಾಮಕಾರಿಯಾದ ವಿಧಾನವೊಂದನ್ನು ಕಂಡು ಹಿಡಿಯಲು ಲೂಯಿಪಾಶ್ಚರ್ ಶ್ರಮಿಸಿದರು. ಹಾಲನ್ನು ಅರ್ಧ ತಾಸು ೬೨ ಸೆಂಟಿಗ್ರೇಡ್ ಉಷ್ಣತಾಮಾನದಲ್ಲಿರಿಸಿ ತರುವಾಯ ಕೂಡಲೇ ತಣ್ಣಗೆ ಮಾಡಿದರೆ ಅದರಲ್ಲಿನ ರೋಗಾಣು ಜೀವಿಗಳು ಸಾಯುತ್ತವೆ. ಹೀಗೆ ಶುದ್ಧ ಮಾಡಲಾದ ಹಾಲನ್ನು ಹೆಚ್ಚು ಅವಧಿವರೆಗೆ ಸುರಕ್ಷಿತವಾಗಿಡಬಹುದು. ದ್ರಾಕ್ಷಾರಸ, ಬೆಣ್ಣೆ ಮೊದಲಾದ ಇತರ ಪದಾರ್ಥಗಳನ್ನೂ ಇಂಥ ವಿಧಾನದಿಂದ ಶುದ್ಧವಾಗಿಡಬಹುದು. ಈ ವಿಧಾನವನ್ನು ಪಾಶ್ಚರ್ ಅವರ ಗೌರವಾರ್ಥವಾಗಿ “ಪ್ಯಾಶ್ಚರೀಕರಣವಿಧಾನ” ಎಂದೇ ಕರೆಯುತ್ತಾರೆ.

ಬ್ಯಾಕ್ಟೀರಿಯಗಳ ಪರಿಣಾಮಗಳನ್ನು ಕುರಿತು ಲೋಕಕ್ಕೆ ಅಮೂಲ್ಯ ಮಾಹಿತಿಯನ್ನೊದಗಿಸಿದ ವಿಜ್ಞಾನಿ ಲೂಯಿ ಪಾಶ್ಚರ್ ೧೮೯೫ರಲ್ಲಿ ನಿಧನರಾದರು.