(ಕ್ರಿ. ಶ. ೧೮೦೯-೧೮೫೨) (ಬ್ರೇಲ್ ಲಿಪಿ)

ಇಂದು ಲಕ್ಷಗಟ್ಟಲೆ ಕುರುಡರು ಓದಲು ಶಕ್ತರಾಗುವಂತೆ ಮಾಡಿದ ಫ್ರೆಂಚ್ ಪ್ರಜೆ ಲೂಯಿ ಬ್ರೇಲ್ ೧೮೦೯ರಲ್ಲಿ ಜನಿಸಿದರು. ಈತ ಹುಟ್ಟು ಕುರುಡನಾಗಿರಲಿಲ್ಲ. ಈತನ ತಂದೆ ಪಾದರಕ್ಷೆ ಅಂಗಡಿ ನಡೆಸುತ್ತಿದ್ದ. ಆತನ ಅಂಗಡಿಯಲ್ಲಿ ಪಾದರಕ್ಷೆ ತಯಾರಿಸಲು ಅಗತ್ಯವಾದ ಚರ್ಮ, ಚರ್ಮ ಕತ್ತರಿಸುವ ಸಾಮಾನುಗಳು ಇರಲೇಬೇಕಲ್ಲವೆ. ಲೂಯಿ ಮೂರು ವರ್ಷದ ಮಗುವಾಗಿದ್ದಾಗ ಅಂಗಡಿಯಲ್ಲಿ ಆಡುತ್ತಾ ಕುಳಿತಿರುತ್ತಿದ್ದ. ಹೀಗೆ ಒಮ್ಮೆ ಆಡುತ್ತಾ ಇದ್ದಾಗ ಆತನ ಕೈಗೆ ಚರ್ಮ ಕತ್ತರಿಸುವ ಸಾಮಾನುಗಳು ಸಿಕ್ಕವು. ದೊಡ್ಡವರು ಚರ್ಮ ಕತ್ತರಿಸುವುದನ್ನು ನೋಡಿದ್ದ ಆತನಿಗೆ ತಾನೂ ಚರ್ಮ ಕತ್ತರಿಸಬೇಕೆಂಬ ಹಂಬಲ. ಅಂಗಡಿಯಲ್ಲಿ ಬೇಕಾದಷ್ಟು ಚರ್ಮದ ತುಂಡುಗಳಿದ್ದವು. ಗಬಕ್ಕನೆ ಕೈಗೆ ಸಿಕ್ಕಷ್ಟು ಎತ್ತಿಕೊಂಡ. ಸರಿ, ಚರ್ಮ ಕತ್ತರಿಸುವ ಚೂರಿಯಿಂದ ಅದರ ಮೇಲೆ ಬಲವಾಗಿ ಎಳೆದ. ಅದು ಕತ್ತರಿಸಲಿಲ್ಲ. ಚೂರಿಯಿಂದ ಜೋರಾಗಿ ಪೆಟ್ಟು ಹಾಕಿದ. ಅದು ಚರ್ಮವನ್ನು ಕತ್ತರಿಸುವ ಬದಲು ಪುಟಿದು ಆತನ ಕಣ್ಣಿಗೆ ಗಾಯ ಮಾಡಿತು. ಲೂಯಿ ಕುರುಡನಾದ.

ಲೂಯಿ ಕುರುಡನಾದದ್ದು ಒಂದು ದುರದೃಷ್ಟ. ಆದರೆ ಆತನ ಈ ದುರದೃಷ್ಟ ಲಕ್ಷಗಟ್ಟಲೆ ಕುರುಡರಿಗೆ ಒಂದು ಉತ್ತಮ ಅದೃಷ್ಟವಾಗಿ ಮಾರ್ಪಟ್ಟಿತು. ಆಗ ಕುರುಡರಿಗೆ ಶಿಕ್ಷಣ ನೀಡುವ ಸಲುವಾಗಿ ಪ್ಯಾರಿಸ್ಸಿನಲ್ಲಿ ಕುರುಡ ಮಕ್ಕಳಿಗೋಸ್ಕರವಾದ ರಾಷ್ಟ್ರೀಯ ಸಂಸ್ಥೆಯೊಂದು ಕಾರ್ಯ ಮಾಡುತ್ತಿತ್ತು. ಲೂಯಿ ತನ್ನ ೧೦ನೆಯ ವಯಸ್ಸಿನಲ್ಲಿ ಆ ಸಂಸ್ಥೆಗೆ ಸೇರಿದ. ತನ್ನ ಪ್ರತಿಭೆಗೆ ತಕ್ಕಂತೆ ಆತ ಸ್ಕಾಲರ್ ಷಿಪ್‌ಅನ್ನೂ ಪಡೆದ. ಈ ಸಂಸ್ಥೆಯಲ್ಲಿ ಕ್ಯಾಪ್ಟನ್ ಬಾರ್ಬಿಯೆರ್ ಉಬ್ಬು ಚುಕ್ಕೆ ಮತ್ತು ಗೆರೆಗಳ ಮೂಲಕ ಸಂಕೇತಗಳನ್ನು ರಚಿಸಿ ಅವುಗಳ ಮೇಲೆ ಬೆರಳು ಆಡಿಸಿ ಸ್ಪರ್ಶಜ್ಞಾನದಿಂದ ಸಂದೇಶ ಗ್ರಹಿಸಲು ಸಾಧ್ಯವಾಗುವಂತೆ ಮಾಡುವ ಫಲಕವೊಂದನ್ನು ತಯಾರು ಮಾಡಿದ್ದರು. ಅದನ್ನು ಸಂಸ್ಥೆಯಲ್ಲಿ ಪ್ರದರ್ಶಿಸುತ್ತಿದ್ದಾಗ ಲೂಯಿ ಬ್ರೇಲ್‌ಗೆ ಕುರುಡರಿಗಾಗಿ ಉಬ್ಬು ಅಕ್ಷರಗಳ ಲಿಪಿಯನ್ನು ತಯಾರು ಮಾಡುವ ಆಲೋಚನೆ ಹೊಳೆಯಿತು. ಸತತ ಪರಿಶ್ರಮದ ಮೂಲಕ ಅವರು ೧೮೨೯ರಲ್ಲಿ ಕುರುಡರಿಗೋಸ್ಕರವಾದ ಉಬ್ಬು ಅಕ್ಷರ ಪದ್ಧತಿಯೊಂದನ್ನು ಕಂಡುಹಿಡಿದರು. ಅಲ್ಲಲ್ಲಿ ಅದರ ಪ್ರದರ್ಶನ ಮಾಡಿ ತೋರಿಸಿದರು. ಆದರೆ ಅವರು ಕಂಡು ಹಿಡಿದ ಪದ್ಧತಿಯನ್ನು ಅಂತರರಾಷ್ಟ್ರೀಯವಾಗಿ ಬಳಕೆಗೆ ತರಲು ೧೯೩೨ರವರೆಗೆ ಕಾಯಬೇಕಾಯಿತು. ಬ್ರೇಲ್ ಕಂಡು ಹಿಡಿದ ಲಿಪಿಯನ್ನು ಅವರ ಗೌರವಾರ್ಥವಾಗಿ “ಬ್ರೇಲ್ ಲಿಪಿ” ಎಂದೇ ಕರೆಯಲಾಗುತ್ತದೆ.

ಲೂಯಿ ಬ್ರೇಲ್ ೧೮೫೨ರಲ್ಲಿ ನಿಧನ ಹೊಂದಿದರು.