(ಕ್ರಿ. ಶ. ೧೮೬೪-೧೯೪೮) (ಚಲಚ್ಚಿತ್ರ ದರ್ಶಕ ಯಂತ್ರ)

ಲೂಯಿ ಲೂಮಿಯೆರ್ ೧೮೬೪ರಲ್ಲಿ ಜನಿಸಿದರು. ಈತನ ತಂದೆ ಫ್ರಾನ್ಸ್ ದೇಶದ ಬೆಸಾಂಕೋನ್ ಎಂಬಲ್ಲಿ ಛಾಯಾ ಚಿತ್ರಗ್ರಾಹಕನಾಗಿ ಕೆಲಸ ಮಾಡುತ್ತಿದ್ದರು. ಈ ಕೌಟುಂಬಿಕ ಹಿನ್ನೆಲೆ ಲೂಯಿಯನ್ನೂ ಮತ್ತು ಆತನ ಸಹೋದರ ಆಗಸ್ಟ್ ನನ್ನೂ ಛಾಯಾಚಿತ್ರ ಕಲೆಯ ಕಡೆಗೆ ಸೆಳೆಯಿತು.

ಲೂಯಿ ಮತ್ತು ಆಗಸ್ಟ್ ಇಬ್ಬರ ಹೆಸರುಗಳನ್ನೂ ಒಟ್ಟಿಗೇ ಸ್ಮರಿಸಲಾಗುತ್ತದೆ. ಏಕೆಂದರೆ ಇಬ್ಬರೂ ಜೊತೆಯಾಗಿಯೇ ತಮ್ಮ ಪ್ರಯೋಗಗಳನ್ನು ಮಾಡುತ್ತಿದ್ದರು. ಇಬ್ಬರೂ ಕಿರು ವಯಸ್ಸಿನಿಂದಲೇ ಛಾಯಾ ಚಿತ್ರಗಳ ವಿವಿಧ ರೂಪಗಳಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದರು.

ಇಬ್ಬರೂ ತಮ್ಮ ನಿರಂತರ ಪ್ರಯತ್ನಗಳ ಮೂಲಕ ಮತ್ತು ಥಾಮಸ್ ಆಲ್ವ ಎಡಿಸನ್ ಮಾಡಿದ್ದ ಸಂಶೋಧನೆಗಳ ಆಧಾರದ ಮೇಲೆ ಆಧುನಿಕ ಚಲಚ್ಚಿತ್ರ ದರ್ಶಕ ಯಂತ್ರವನ್ನು ಕಂಡು ಹಿಡಿಯುವಲ್ಲಿ ಸಫಲರಾದರು. ಇಂಗ್ಲಿಷಿನಲ್ಲಿ ಅದನ್ನು “ಸಿನಿಮೊಟೊಗ್ರಾಫ್ ” ಎಂದು ಕರೆಯುತ್ತ ಆರೆ. ನಾವು ಇಂದು ಬಳಸುವ ಸಿನೆಮಾ ಎಂಬ ಪದ ಅವರು ಕಂಡು ಹಿಡಿದ ಯಂತ್ರದಿಂದಲೇ ಬಂದುದು.

ಈ ಸಹೋದರರು ತಯಾರಿಸಿದ “ಲಂಚ್ ಬ್ರೆಕ್ ಆಯಟ್ ದಿ ಲೂಮಿಯರ್ ಫ್ಯಾಕ್ಟರಿ” ಎಂಬುದು ಮೊತ್ತ ಮೊದಲನೆಯ ಚಲನಚಿತ್ರವೆಂದು ಸಾಮಾನ್ಯವಾಗಿ ಪರಿಗಣಿಸಲ್ಪಟ್ಟಿದೆ. ಅದನ್ನು ೧೮೯೫ರಲ್ಲಿ ಲ್ಯೋನ್ ನಲ್ಲಿ ಪ್ರದರ್ಶಿಸಲಾಯಿತು. ಅವರು ಜೊತೆಯಾಗಿ ಹಲವಾರು ಚಲನಚಿತ್ರಗಳನ್ನು ತಯಾರಿಸಿದರು. ಅವುಗಳಲ್ಲಿ ಹೆಚ್ಚಿನವು ಫ್ರಾನ್ಸ್ ದೇಶದಲ್ಲಿನ ಬದುಕಿಗೆ ಸಂಬಂಧಪಟ್ಟ ಚಲನಚಿತ್ರಗಳೇ ಆಗಿದ್ದವು. ಇಂದು ಚಲನಚಿತ್ರ ಕಲೆಯಲ್ಲಿ ಅದ್ಭುತ ಪ್ರಗತಿಯನ್ನು ಸಾಧಿಸಲಾಗಿದೆ. ಜಗತ್ತಿನ ಮೂಲೆ ಮೂಲೆಗಳಲ್ಲಿ ಚಲನಚಿತ್ರಗಳನ್ನು ಪ್ರದರ್ಶಿಸಲಾಗುತ್ತದೆ. ಮೊದಲು ಐಂದ್ರಜಾಲಿಕ ತಂತ್ರದಂತೆ ಬಂದಿದ್ದ ಇದು ಪ್ರೇಕ್ಷಕರನ್ನು ಬೆರಗುಗೊಳಿಸಿತ್ತು. ಲೂಯಿ ಲೂಮಿಯೆರ್ ೧೯೪೮ರಲ್ಲಿ ನಿಧನರಾದರು.