ಲೆಟ್ಯೂಸ್ ಉತ್ತಮ ಸೊಪ್ಪು ತರಕಾರಿ. ಹಲವಾರು ಬಗೆಯಲ್ಲಿ ಉಪಯುಕ್ತವಿದೆ.

ಪೌಷ್ಟಿಕ ಗುಣಗಳು : ಲೆಟ್ಯೂಸ್ ಪೌಷ್ಟಿ ಸೊಪ್ಪು. ಇದರಲ್ಲಿ ಹೆಚ್ಚಿನ ಪ್ರಮಾಣದ ಶರ್ಕರಪಿಷ್ಟ, ಪ್ರೊಟೀನ್, ಖನಿಜ ವಸ್ತುಗಳು ಹಾಗೂ ಜೀವಸತ್ವಗಳಿರುತ್ತವೆ.

೧೦೦ ಗ್ರಾಂ ಲೆಟ್ಯೂಸ್ ಸೊಪ್ಪಿನಲ್ಲಿರುವ ವಿವಿಧ ಪೋಷಕಾಂಶಗಳು

ತೇವಾಂಶ – ೯೪.೮ ಗ್ರಾಂ
ಶರ್ಕರಪಿಷ್ಟ – ೨.೮ ಗ್ರಾಂ
ಪ್ರೊಟೀನ್ – ೨.೮ ಗ್ರಾಂ
ಕೊಬ್ಬು – ೨.೧ ಗ್ರಾಂ
ಒಟ್ಟು ಖನಿಜ ಪದಾರ್ಥ – ೧.೨ ಗ್ರಾಂ
ನಾರು ಪದಾರ್ಥ – ೦.೬ ಗ್ರಾಂ
ರಂಜಕ – ೨೮ ಮಿ.ಗ್ರಾಂ
ಸುಣ್ಣ – ೫೦ ಮಿ.ಗ್ರಾಂ
ಕಬ್ಬಿಣ – ೨.೪ ಮಿ.ಗ್ರಾಂ
ಪೊಟ್ಯಾಷ್ – ೩೩ ಮಿ. ಗ್ರಾಂ
’ಎ’ ಜೀವಸತ್ವ – ೧೬೫೦ ಐಯು
ರೈಬೊಫ್ಲೇವಿನ್ – ೦.೧೩ ಮಿ.ಗ್ರಾಂ
ಥಯಮಿನ್ – ೦.೦೯ ಮಿ.ಗ್ರಾಂ
’ಸಿ’ ಜೀವಸತ್ವ – ೧೦ ಮಿ.ಗ್ರಾಂ


ಔಷಧೀಯ
ಗುಣಗಳು : ಲೆಟ್ಯೂಸ್ ಸೊಪ್ಪಿನಲ್ಲಿ ಶೈತ್ಯಕಾರಕ ಹಾಗೂ ಮೂತ್ರವರ್ಧಕ ಗುಣಗಳಿವೆ. ಇದನ್ನು ಬಳಸುವುದರಿಂದ ಶುದ್ಧರಕ್ತ ಹೆಚ್ಚುತ್ತದೆ. ದೌರ್ಬಲ್ಯ ಇರುವಂತವರು ಇದನ್ನು ಅಧಿಕ ಪ್ರಮಾಣದಲ್ಲಿ ಸೇವಿಸಬೇಕು. ಇದರ ಎಲೆಗಳನ್ನು ಅರೆದು ಬೆಚ್ಚಗೆ ಮಾಡಿ ಹುಣ್ಣುಗಳ ಮೇಲೆ ಹಚ್ಚಿದರೆ ನೋವು ಕಡಿಮೆಯಾಗುತ್ತದೆ. ಈ ಸೊಪ್ಪಿನ ಸೇವನೆ ಮಲಬದ್ಧತೆಗೂ ಒಳ್ಳೆಯದು. ಎಲೆಗಳನ್ನು ಅಗಿದು ತಿನ್ನುತ್ತಿದ್ದಲ್ಲಿ ಬಾಯಿ ಹುಣ್ಣು ವಾಸಿಯಾಗುತ್ತದೆ. ಇವುಗಳ ಬೀಜ ಕೆಮ್ಮು ಹಾಗೂ ಕಫ ನಿವಾರಕ.

ಉಗಮ ಮತ್ತು ಹಂಚಿಕೆ : ಇದರ ತವರೂರು ಪಶ್ಚಿಮ ಏಷ್ಯಾದ ಬೆಚ್ಚಗಿನ ಪ್ರದೇಶ ಹಾಗೂ ಯೂರೋಪ್. ಇದರ ಬೇಸಾಯ ಹೆಚ್ಚಾಗಿ ಅಮೆರಿಕ, ಆಫ್ರಿಕಾ, ದಕ್ಷಿಣ ಮತ್ತು ಪೂರ್ವ ಏಷ್ಯಾ ಹಾಗೂ ಭಾರತದಲ್ಲಿ ಕಂಡುಬರುತ್ತದೆ.

ಸಸ್ಯ ವರ್ಣನೆ : ಇದು ಆಸ್ಟರೇಸೀ ಕುಟುಂಬಕ್ಕೆ ಸೇರಿದ ವಾರ್ಷಿಕ ಮೂಲಿಕೆ ಸಸ್ಯ. ಇದು ಸ್ವ-ಪರಾಗಸ್ಪರ್ಶದ ಬೆಳೆಯಾಗಿದ್ದು ಮೈದಾನ ಪ್ರದೇಶಗಳಲ್ಲಿ ಯಥೇಚ್ಛವಾಗಿ ಬೀಜ ಕಚ್ಚುತ್ತವೆ. ಕಾಂಡಭಾಗ ನೆಟ್ಟಗಿದ್ದು ದಟ್ಟ ಎಲೆಗಳಿಂದ ಹೊದಿಕೆಯಾಗಿರುತ್ತದೆ. ಎಲೆಗಳು ನೆರಿಗೆಗಟ್ಟಿದಂತೆ ಇದ್ದು ಹಸುರು ಬಣ್ಣದ್ದಿರುತ್ತವೆ. ಅರಿವು ಒತ್ತಾಗಿದ್ದು ಕೋಸಿನಂತೆ ಕಾಣುತ್ತವೆಯಾದರೂ ಬಿಗಿಯಾಗಿರುವುದಿಲ್ಲ. ಗಿಡಗಳ ಸುಳಿಯಲ್ಲಿ ಉದ್ದನಾದ ಹೂತೆನೆ ಕಾಣಿಸಿಕೊಳ್ಳುತ್ತದೆ. ಬೀಜವನ್ನು ’ಅಕೀನ್’ ಎನ್ನುತ್ತಾರೆ. ಬೀಜಗಳ ಮೇಲೆ ನಯವಾದ ತುಪ್ಪಳದ ಹೊದಿಕೆ ಇರುತ್ತದೆ. ಇದರ ಬೇರು ಸಮೂಹ ಬಲವಾಗಿದ್ದು ಮಣ್ಣಿನಲ್ಲಿ ಆಳವಾಗಿ ಇಳಿದಿರುತ್ತದೆ.

ಹವಾಗುಣ : ಇಂದು ತಂಪು ಹವಾಮಾನದ ಬೆಳೆ. ಚಳಿಗಾಲದಲ್ಲಿ ಬೆಳೆದಾಗ ಅಧಿಕ ಇಳುವರಿ ಸಿಗುವುದರ ಜೊತೆಗೆ ಫಸಲಿನ ಗುಣಮಟ್ಟ ಚೆನ್ನಾಗಿರುತ್ತದೆ. ಈ ಬೆಳೆಗೆ ೧೩ ರಿಂದ ೧೬ ಸೆ. ಉಷ್ಣತಾಮಾನ ಸೂಕ್ತವಿರುತ್ತದೆ. ಬಿಸಿಲು ಹೆಚ್ಚಾದಲ್ಲಿ ಬೇಗ ಹೂತೆನೆ ಕಾಣಿಸಿಕೊಳ್ಳುತ್ತವೆಯಲ್ಲದೆ ಅದರಿಂದ ಸೊಪ್ಪು ಕಹಿಯಾಗುವುದು. ಅಂತಹ ಸಂದರ್ಭಗಳಲ್ಲಿ ಎಲೆಗಳ ತುದಿಭಾಗ ಸುಟ್ಟಂತಾಗುವುದು ಇದನ್ನು ’ಟಿಪ್‌ಬರ್ನ್’ ಎನ್ನುತ್ತಾರೆ. ಮಣ್ಣಲ್ಲಿನ ಉಷ್ಣತೆ ೨೨ ರಿಂದ ೩೦ ಸೆ. ಇದ್ದಲ್ಲಿ ಬೀಜ ಸುಪ್ತಾವಸ್ಥೆ ಹೊಂದಿ ಸರಿಯಾಗಿ ಮೊಳೆಯುವುದಿಲ್ಲ.

ಭೂಗುಣ : ಇದನ್ನು ಎಲ್ಲಾ ತೆರನಾದ ಮಣ್ಣುಗಳಲ್ಲಿ ಬೆಳೆಯಬಹುದಾದರೂ ಸಾರವತ್ತಾದ ಮರಳುಮಿಶ್ರಿತ ಗೋಡು ಹಾಗೂ ರೇವೆಗೋಡು ಮಣ್ಣುಗಳು ಉತ್ತಮ ಮರಳು ಮಿಶ್ರಿತ ಗೋಡು ಮಣ್ಣಿನಲ್ಲಿ ಬೆಳೆ ಬೇಗ ಕೊಯ್ಲಿಗೆ ಬಂದರೆ ರೇವೆಗೋಡು ಮಣ್ಣಿನಲ್ಲಿ ತಡವಾಗಿ ಕೊಯ್ಲಿಗೆ ಬರುತ್ತದೆ. ಮಣ್ಣಿನ ರಸಸಾರ ೫.೮ ರಿಂದ ೬ ಇದ್ದಲ್ಲಿ ಉತ್ತಮ. ನೀರು ಬಸಿಯುವುದು ಬಹುಮುಖ್ಯ.

ಬಗೆಗಳು ಮತ್ತು ತಳಿಗಳು : ಲೆಟ್ಯೂಸ್‌ನಲ್ಲಿ ಹಲವಾರು ಬಗೆಗಳಿವೆ. ಅವುಗಳನ್ನು ಏಳು ಗುಂಪುಗಳಾಗಿ ವಿಂಗಡಿಸಬಹುದು. ಅವು ಹೀಗಿವೆ:

. ಹೆಡ್ಟೈಪ್ : ಇದರಲ್ಲಿ ಬಟರ್‌ಹೆಡ್ ಅಥವಾ ಬಿಬ್‌ಟೈಪ್ ಮತ್ತು ಕ್ರಿಸ್ಪ್‌ಹೆಡ್ ಅಥವಾ ಐಸ್‌ಬರ್ಗ್ ಎಂದು ಎರಡು ಬಗೆಗಳಿವೆ. ಬಟರ್ ಹೆಡ್ ಬಗೆಯಲ್ಲಿ ಎಲೆಗಳು ಸಡಿಲವಾಗಿ ಹೊದಿಕೆಯಾಗಿರುತ್ತವೆ. ಒಳಸುತ್ತುಗಳಲ್ಲಿನ ಎಲೆಗಳು ಕೆನೆ ಅಥವಾ ಹಳದಿ ಬಣ್ಣವಿದ್ದರೆ ಹೊರಸುತ್ತಿನ ಎಲೆಗಳು ಹಸುರು ಬಣ್ಣವಿರುತ್ತವೆ. ಉದಾ: ವೈಟ್‌ಬೋಸ್ಟನ್, ಬಿಬ್ ಮುಂತಾಗಿ. ಕ್ರಿಸ್ಟ್‌ಹೆಡ್ ಬಗೆಯು ಅಮೆರಿಕಾ ಮತ್ತು ಯೂರೋಪ್‌ಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಎಲೆಗಳು ತೆಳ್ಳಗೆ, ಗರಿಗರಿಯಾಗಿದ್ದು ಅಲೆಯಾಕಾರದ ಹಾಗೂ ಕಚ್ಚುಗಳಿಂದ ಕೂಡಿದ ಅಂಚನ್ನು ಹೊಂದಿರುತ್ತವೆ. ಇವುಗಳ ಕೋಸು ಬಿಗುವಾಗಿದ್ದು ಹೆಚ್ಚು ಕಾಲ ಸಂಗ್ರಹಿಸಿಡಬಹುದು. ಉದಾ: ಗ್ರೇಟ್‌ಲೇಕ್ಸ್, ಕ್ರಿಸ್ಟ್‌ಹೆಡ್, ಇಂಪೀರಿಯಲ್ ಮುಂತಾದುವು.

. ಲೀಫ್ಟೈಪ್ : ಇದರಲ್ಲಿ ಎಲೆಗಳು ಒತ್ತಾಗಿ ಗುಂಪು ಕೂಡದೆ ಸಡಿಲವಾಗಿ ಬಿಡಿಬಿಡಿಯಾಗಿಯೇ ಉಳಿಯುತ್ತವೆ. ಬಿಡಿ ಎಲೆಗಳಲ್ಲಿ ಕಚ್ಚುಗಳಿರುತ್ತವೆ ಅಥವಾ ಆಳವಾಗಿ ಸೀಳಿದ್ದು ನೆರಿಗೆಗಟ್ಟಿದಂತಿರುತ್ತವೆ. ಎಲೆಗಳ ಬಣ್ಣ ತೆಳು ಹಸುರಿನಿಂದ ಕೆಂಪು ಬಣ್ಣದವರೆಗೆ ವ್ಯತ್ಯಾಸಗೊಳ್ಳುತ್ತದೆ. ಉದಾ: ಚೈನೀಸ್‌ಯೆಲ್ಲೊ, ಗ್ರ‍್ಯಾಂಡ್ ರ‍್ಯಾಪಿಡ್ಸ್, ಸ್ಲೋಬೋಲ್ಟ್ ಇತ್ಯಾದಿ.

. ಕಾಸ್ಟೈಪ್: ಇದರ ಸಸಿಗಳು ನೆಟ್ಟಗಿದ್ದು ಸುಮಾರು ೨೫ ಸೆಂ.ಮೀ. ಎತ್ತರಕ್ಕೆ ಬೆಳೆಯುತ್ತವೆ. ಹೊರಸುತ್ತಿನ ಎಲೆಗಳು ನಯವಾಗಿದ್ದು ಹಸುರು ಬಣ್ಣದ್ದಿರುತ್ತವೆ. ಒಳಸುತ್ತುಗಳಲ್ಲಿನ ಎಲೆಗಳ ಬಣ್ಣ ಬಿಳಿ ಹಸುರು. ಇತರ ಬಗೆಗಳಲ್ಲಿರುವುದಕ್ಕಿಂತ ಇದರಲ್ಲಿ ಎಲೆಗಳು ಹೆಚ್ಚು ಗರಿಗರಿಯಾಗಿರುತ್ತವೆ. ಉದಾ : ಡಾರ್ಕ್‌ಗ್ರೀನ್, ಲಿಟಲ್ ಜೆಮ್, ವಿಂಟರ್‌ಡೆನ್ಸಿಟಿ, ಪ್ಯಾರಿಸ್‌ಐಲೆಂಡ್, ಪ್ಯಾರಿಸ್‌ವೈಟ್, ಸ್ವೀಟ್ ಮಿಡ್ಜೆಟ್, ಮೇಕಿಂಗ್ ಇತ್ಯಾದಿ.

. ಸ್ಟೆಮ್ಟೈಪ್: ಇದನ್ನು ಎರಡು ಬಗೆಗಳಲ್ಲಿ ಬಳಸಬಹುದು. ಎಳಸಾದ ಎಲೆಗಳನ್ನು ಲೆಟ್ಯೂಸ್‌ನಂತೆಯೂ ಮತ್ತು ಹೂತೆನೆಯ ದಂಟನ್ನು ಹಸಿಯಾಗಿ ಸೆಲರಿಯಂತೆ ಇಲ್ಲವೇ ಬೇಯಿಸಿ ತಿನ್ನಬಹುದು. ಉದಾ: ಸೆಲ್ಟೂಸ್

. ಕ್ಯಾಬೇಜ್ ಟೈಪ್: ಉದಾ: ಕಾಬ್‌ಹಾಮ್ಸ್‌ಗ್ರೀನ್, ಫಾರ್ಚೂನ್, ಡೀರ್‌ಟಂಗ್ ಇತ್ಯಾದಿ.

. ಹೊರಾಂಗಣದಲ್ಲಿ ಚಳಿಗಾಲದ ನಂತರ ಬೆಳೆಯುವಂತಹವು : ಉದಾ: ಆರ್ಕ್‌ಟಿಕ್‌ಕಿಂಗ್, ವಾಲ್ಟಾರ್ ಇತ್ಯಾದಿ.

. ಸಂರಕ್ಷಿತ ಬಗೆಗಳು : ಉದಾ : ಡೆಲ್ಟಾ, ನ್ಯಾಪ್, ಕ್ವಿಯೆಕ್ ಇತ್ಯಾದಿ.

ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ ಶಿಫಾರಸು ಮಾಡಿರುವ ತಳಿಗಳು : ಚೈನೀಸ್‌ಯೆಲ್ಲೋ, ಇಂಪೀಇಯಲ್ ೮೪೭, ಮೇಕಿಂಗ್ ಮತ್ತು ಪ್ಯಾರಿಸ್‌ವೈಟ್.

ಕೆಲವೊಂದು ಪ್ರಮುಖ ತಳಿಗಳು ಹಾಗೂ ಅವುಗಳ ಗುಣವಿಶೇಷಗಳು

. ಬಿಗ್ಬೋಸ್ಟನ್ : ಸಸಿಗಳು ಸಾಧಾರಣದಿಂದ ದೊಡ್ಡಗಾತ್ರದ್ದಿರುತ್ತವೆ. ಎಲೆಗಳು ಒತ್ತಾಗಿದ್ದು ಶಿರೋಭಾಗ ಗಡುಸಾಗಿರುತ್ತದೆ. ಎಲೆಗಳ ಅಂಚು ಕೆಂಪು ಕಂದು ಬಣ್ಣದ್ದಿರುತ್ತದೆ. ಒಳಸುತ್ತಿನ ಎಲೆಗಳು ಹಳದಿ ಹೊಂಬಣ್ಣದ್ದಿರುತ್ತವೆ.

. ಗ್ರೇಟ್ಲೇಕ್ಸ್ : ಇದರ ಎಲೆಗಳು ಗರಿಗರಿಯಾಗಿರುತ್ತವೆ. ಅವು ಗಾತ್ರದಲ್ಲಿ ದೊಡ್ಡವಿದ್ದು, ದಟ್ಟ ಹಸುರು ಬಣ್ಣವಿರುತ್ತವೆ. ಗುಣಮಟ್ಟದಲ್ಲಿ ಶ್ರೇಷ್ಠ, ಬಿಸಿಲನ್ನು ಸಹಿಸಿಕೊಳ್ಳುತ್ತದೆ.

. ವೇ ಅಹೆಡ್ : ಎಲೆಗಳು ಒತ್ತಾಗಿದ್ದು, ಮೃದುವಾಗಿ ಗರಿಗರಿಯಾಗಿರುತ್ತವೆ. ಅವುಗಳ ಬಣ್ಣ ಹೊಳಪು ಹಸುರು. ಒಳ ಎಲೆಗಳ ಬಣ್ಣ ಕೆನೆ ಹಳದಿ.

. ನ್ಯೂಯಾರ್ಕ್: ಕ್ಯಾಬೇಜ್ ಬಗೆಯ ಅತ್ಯುತ್ತಮ ತಳಿ. ಶಿರಭಾಗ ದೊಡ್ಡದಿದ್ದು, ದುಂಡಗಿರುತ್ತದೆ. ತಡವಾಗಿ ಕೊಯ್ಲಿಗೆ ಬಂದರೂ ಉತ್ತಮ ಗುಣಮಟ್ಟವನ್ನು ಹೊಂದಿದೆ. ಬಿಸಿಲು ಮತ್ತು ಮಳೆಗಳನ್ನು ಯಶಸ್ವಿಯಾಗಿ ಎದುರಿಸಬಲ್ಲದು.

. ಕಟಿಂಗ್ ಲೆಟ್ಯೂಸ್ : ಇದು ಕೈತೋಟದ ತಳಿ. ಬೇಗ ಕೊಯ್ಲಿಗೆ ಬರುತ್ತದೆ. ಬಿಸಿಲನ್ನು ಎದುರಿಸಬಲ್ಲದು.

. ಸೀಗ್ರೀನ್ : ಆಕರ್ಷಕ ಬಣ್ಣ ಹೊಂದಿದ್ದು ಉತ್ತಮ ಗುಣಮಟ್ಟದಿಂದ ಕೂಡಿರುತ್ತದೆ. ಇದು ಬಿಗ್‌ವೀನ್ ಬಾಧೆಗೆ ನಿರೋಧಕ.

. ಇಂಪೀರಿಯಲ್ ೮೫೯: ಗಾತ್ರದಲ್ಲಿ ಸಾಧಾರಣದಿಂದ ದೊಡ್ಡದಿದ್ದು, ಬಿಗುವಾಗಿರುತ್ತದೆ. ಹೊರಸುತ್ತಿನ ಎಲೆಗಳಲ್ಲಿ ಬೊಬ್ಬೆಗಳಿರುತ್ತವೆ. ಇದು ಬೇಸಿಗೆಗೆ ಸೂಕ್ತ ಸುಧಾರಿತ ತಳಿ.

. ಸ್ಲೋಬೋಲ್ಟ್ : ಎಲೆಗಳು ಅಗಲವಾಗಿದ್ದು ನೆರಿಗೆ ಕಟ್ಟಿರುತ್ತವೆ. ಅವುಗಳ ಬಣ್ಣ ತಿಳಿ ಹಳದಿ ಹಸುರು, ಹೂತೆನೆಗಳು ತಡವಾಗಿ ಕಾಣಿಸಿಕೊಳ್ಳುತ್ತವೆ. ಇದು ಕೈತೋಟಗಳಿಗೆ ಒಪ್ಪುವು ತಳಿ; ಬಿಸಿಲನ್ನು ಸಹಿಸಬಲ್ಲದು.

. ಚೈನೀಸ್ಯೆಲ್ಲೋ : ಎಲೆಗಳ ಬಣ್ಣ ಬಿಳಿ ಹಸುರು. ಮೃದುವಾಗಿದ್ದು, ತಿನ್ನಲು ಗರಿಗರಿಯಾಗಿರುತ್ತದೆ. ಬೇಗ ಕೊಯ್ಲಿಗೆ ಬರುವ ಹಾಗೂ ಅಧಿಕ ಇಳುವರಿ ಕೊಡುವ ತಳಿ. ಇದರ ಬೀಜ ಬೆಳ್ಳಗಿರುತ್ತವೆ.

೧೦. ರೂಬಿ : ಇದರ ಎಲೆಗಳು ಕೆಂಪು ಬಣ್ಣದ್ದಿರುತ್ತವೆ; ಚಳಿಗಾಲದಲ್ಲಿ ಕುಂಡಗಳಲ್ಲಿ ಬೆಳೆಸಲು ಸೂಕ್ತ.

೧೧. ಸ್ವೀಟ್ಮಿಡ್ಜೆಟ್ : ಗಾತ್ರದಲ್ಲಿ ಸಣ್ಣವಿದ್ದು ಕುಂಡಗಳಲ್ಲಿ ಬೆಳೆಸಲು ಸೂಕ್ತ.

೧೨. ಟಾಮ್ಥಂಚ್ ಇದೂ ಸಹ ಸಣ್ಣ ಗಾತ್ರದ್ದಿದ್ದು ಕುಂಡಗಳಲ್ಲಿ ಬೆಳೆಸಲು ಸೂಕ್ತ.

೧೩. ವೈಟ್ಬೋಸ್ಟನ್ : ಇದರ ಕೋಸು ಮೃದುವಾಗಿ, ಬಿಗುವಾಗಿರುತ್ತವೆ. ಒಳಸುತ್ತಿನ ಎಲೆಗಳು ಮೃದುವಾಗಿ, ತೈಲಯುಕ್ತವಿದ್ದು ಜಾರಿವಂತಿರುತ್ತವೆ. ಇದು ಸುಧಾರಿತ ತಳಿಯಾಗಿದೆ.

೧೪. ಡಾರ್ಕ್ಗ್ರೀನ್ : ಇದೂ ಸಹ ಸುಧಾರಿತ ತಳಿಯೇ. ಎಲೆಗಳು ಸಣ್ಣಗೆ ಉದ್ದಕ್ಕಿದ್ದು, ಕೋಸು ನೆಟ್ಟಗಿರುತ್ತವೆ.

ಭೂಮಿ ಸಿದ್ಧತೆ ಮತ್ತು ಬಿತ್ತನೆ/ನಾಟಿ : ಇದನ್ನು ಬೀಜ ಬಿತ್ತಿ ಇಲ್ಲವೇ ಒಟ್ಲು ಪಾತಿಗಳಲ್ಲಿ ಸಸಿ ಎಬ್ಬಿಸಿ, ನಾಟಿ ಮಾಡಿ, ಬೆಳೆಸಬಹುದು. ಬೀಜ ಗಾತ್ರದಲ್ಲಿ ಬಲು ಸಣ್ಣ. ಹೆಕ್ಟೇರಿಗೆ ೦.೫ ರಿಂದ ೧.೦ ಕಿ.ಗ್ರಾಂ. ಬೇಕಾಗುತ್ತವೆ. ಒಟ್ಲು ಎಬ್ಬಿಸಿ ನಂತರ ಸಸಿಗಳನ್ನು ನಾಟಿ ಮಾಡುವುದು ಒಳ್ಳೆಯದು. ಈ ಉದ್ದೇಶಕ್ಕೆ ೭.೫ ಮೀಟರ್ ಉದ್ದ, ೧.೨ ಮೀಟರ್ ಅಗಲ ಹಾಗೂ ೧೦ ಸೆಂ.ಮೀ. ಎತ್ತರವಿರುವ ೫ ಮಡಿಗಳನ್ನು ಸಿದ್ಧಗೊಳಿಸಿ ತಲಾ ೨೦ ಕಿ.ಗ್ರಾಂ ತಿಪ್ಪೆಗೊಬ್ಬರ ಮತ್ತು ೧/೨ ಕಿ.ಗ್ರಾಂ ೧೫:೧೫:೧೫ ಎನ್‌ಪಿಕೆ ಮಿಶ್ರಣ ಹರಡಿ ಮಣ್ಣಿನಲ್ಲಿ ಮಿಶ್ರಮಾಡಬೇಕು. ಬಿತ್ತನೆಗೆ ಮುಂಚೆ ಯಾವುದಾದರೂ ಶಿಲೀಂಧ್ರನಾಶಕದೊಂದಿಗೆ ಉಪಚರಿಸಿ ಅನಂತರ ಬೀಜವನ್ನು ೭.೫ ಸೆಂ.ಮೀ. ಅಂತರದ ಗೀರು ಸಾಲುಗಳಲ್ಲಿ ತೆಳ್ಳಗೆ ಬಿತ್ತಿ ನೀರು ಕೊಡಬೇಕು. ಮಣ್ಣಿನಲ್ಲಿ ಉಷ್ಣತೆ ೩೦ ಸೆ. ಗಿಂತ ಕಡಿಮೆ ಇದ್ದರೆ ಮಾತ್ರ ಮೊಳೆಯಬಲ್ಲವು. ಬೀಜ ಬಿತ್ತಲು ಜನವರಿ-ಫೆಬ್ರುವರಿ ಮತ್ತು ಆಗಸ್ಟ್-ಸೆಪ್ಟೆಂಬರ್ ಉತ್ತಮ ಕಾಲಗಳು. ಒಂದು ತಿಂಗಳಲ್ಲಿ ಸಸಿಗಳು ನಾಟಿಗೆ ಸಿದ್ಧವಿರುತ್ತವೆ.

ಸಾಲುಗಳ ನಡುವೆ ೪೫ ರಿಂದ ೬೦ ಸೆಂ.ಮೀ. ಅಂತರ ಇರುವಂತೆ ದಿಂಡು ಮತ್ತು ಕಾಲುವೆಗಳನ್ನು ಸಿದ್ಧಗೊಳಿಸಿ ಪೂರ್ಣಪ್ರಮಾಣದ ತಿಪ್ಪೆಗೊಬ್ಬರ, ಅರ್ಧಭಾಗ ಸಾರಜನಕ ಮತ್ತು ಪೂರ್ಣಪ್ರಮಾಣದ ರಂಜಕ ಹಾಗೂ ಪೊಟ್ಯಾಷ್ ಸತ್ವಗಳನ್ನು ಸಮನಾಗಿ ಹರಡಿ ಮಣ್ಣಿನಲ್ಲಿ ಬೆರೆಸಿ ೩೦ ರಿಂದ ೪೫ ಸೆಂ.ಮೀ. ಗೊಂದರಂತೆ ಸಸಿಗಳನ್ನು ದಿಂಡುಗಳ ಇಳಿಜಾರಿನ ಒಂದು ಮಗ್ಗುಲ ಅರ್ಧಕ್ಕೆ ನೆಡಬೇಕು.

ಗೊಬ್ಬರ : ಮಣ್ಣಿನ ಫಲವತ್ತು ಮತ್ತು ತಳಿಗಳನ್ನನುಸರಿಸಿ ಹೆಕ್ಟೇರಿಗೆ ೨೫ ಟನ್ ತಿಪ್ಪೆಗೊಬ್ಬರ, ೧೨೦ ಕಿ.ಗ್ರಾಂ ಸಾರಜನಕ, ೧೦೦ ಕಿ.ಗ್ರಾಂ ಸತ್ವಗಳನ್ನು ಶಿಫಾರಸು ಮಾಡಿದೆ.

ನೀರಾವರಿ : ಮಣ್ಣು ಯಾವಾಗಲೂ ಹಸಿಯಾಗಿರುವುದು ಅಗತ್ಯ. ಹವಾ ಮತ್ತು ಭೂಗುಣಗಳನನ್ನುಸರಿಸಿ ವಾರಕ್ಕೊಮ್ಮೆ ನೀರು ಕೊಡಬೇಕಾಗುತ್ತದೆ.

ಅಂತರ ಬೇಸಾಯ ಮತ್ತು ಕಳೆ ಹತೋಟಿ : ಇದರಲ್ಲಿ ಬೇರು ಸಮೂಹ ಅಷ್ಟೊಂದು ಆಳಕ್ಕೆ ಇಳಿದಿರುವುದಿಲ್ಲವಾದ್ದರಿಂದ ಅಂತರ ಬೇಸಾಯ ಹಗುರವಾಗಿರಬೇಕು. ನಾಟಿ ಮಾಡಿದ ಒಂದು ತಿಂಗಳ ನಂತರ ಉಳಿದ ಅರ್ಧಭಾಗ ಸಾರಜನಕವನ್ನು ಮೇಲು ಗೊಬ್ಬರವಾಗಿ ಒಟ್ಟು ಸಾಲು ಎಳೆಯಬೇಕು.

ಕೊಯ್ಲು ಮತ್ತು ಇಳುವರಿ : ಸೊಪ್ಪು ಎಳಸಾಗಿದ್ದಷ್ಟೂ ಅದರ ರುಚಿ ಹೆಚ್ಚು. ತಡವಾಗಿ ಕೊಯ್ಲು ಮಾಡಿದರೆ ಅದರಲ್ಲಿ ನಾರಿನ ಅಂಶ ಹೆಚ್ಚಾಗಿ ತಿನ್ನಲು ಬಾರದಂತಾಗುತ್ತದೆ. ಅಂತಹ ಸೊಪ್ಪು ರುಚಿಯಲ್ಲಿ ಸಪ್ಪೆಯಾಗಿರುತ್ತದೆ. ಸಸಿಗಳನ್ನು ನಾಟಿ ಮಾಡಿದ ೫೦-೬೦ ದಿನಗಳಲ್ಲಿ ಕೊಯ್ಲು ಮಾಡಬಹುದು. ಸಡಿಲ ಎಲೆಗಳಿಂದ ಕೂಡಿದ ತಳಿಗಳಲ್ಲಿ ಎಳಸಾದ ಹಾಗೂ ಮೃದುವಾದ ಎಲೆಗಳನ್ನು ಮಾತ್ರವೇ ಬಿಡಿಸಿ ತೆಗೆಯಬೇಕು. ಕೋಸಿನಂತಹ ತಳಿಗಳಲ್ಲಿ ಇಡೀ ಕೋಸನ್ನೇ ನೆಲಮಟ್ಟಕ್ಕೆ ಕೊಯ್ಲು ಮಾಡಿ ತೆಗೆಯಬೇಕು. ಬೆಳೆ ಚೆನ್ನಾಗಿ ಫಲಿಸಿದಲ್ಲಿ ಹೆಕ್ಟೇರಿಗೆ ೧೦ ರಿಂದ ೨೦ ಟನ್ ಸೊಪ್ಪು ಸಾಧ್ಯ. ತಂಪು ಹೊತ್ತಿನಲ್ಲಿ ಕೊಯ್ಲು ಮಾಡುವುದು ಒಳ್ಳೆಯದು.

ಕೀಟ ಮತ್ತು ರೋಗಗಳು : ಕೀಟಗಳಲ್ಲಿ ಸಸ್ಯಹೇನು ಮುಖ್ಯವಾದುವು. ಇವು ಎಲೆಗಳಲ್ಲಿನ ರಸವನ್ನು ಹೀರುತ್ತವೆ. ಅಂತಹ ಎಲೆಗಳು ನೋಡಲು ಆಕರ್ಷಕವಾಗಿರುವುದಿಲ್ಲ. ತೀವ್ರ ಹಾನಿ ಇದ್ದಾಗ ಸಸಿಗಳು ಬಲಹೀನಗೊಂಡು ಸಾಯುತ್ತವೆ. ಅಲ್ಲದೆ ಇವು ನಂಜುರೋಗವನ್ನು ಹರಡುತ್ತವೆ. ಇವುಗಳ ಹತೋಟಿಗೆ ೧೦ ಲೀಟರ್ ನೀರಿಗೆ ೫ ಮಿ.ಲೀ. ಫಾಸ್ಫಮಿಡಾನ್ ಇಲ್ಲವೇ ೨೦ ಮಿ.ಲೀ. ಕ್ವಿನಾಲ್‌ಫಾಸ್ ಕೀಟನಾಶಕ ಬೆರೆಸಿ ಸಿಂಪಡಿಸಬೇಕು. ರೋಗಗಳಲ್ಲಿ ಲೋಳೆಯಿಂದ ಕೂಡಿದ ಮೆತು ಕೊಳೆ, ತುಪ್ಪುಳಿನ ರೋಗ ಮತ್ತು ವರ್ಣವಿನ್ಯಾಸ ನಂಜು ಮುಖ್ಯವಾದುವು.

ಮೆತುಕೊಳೆ ಅಣುಜೀವಿಗಳಿಂದ ಸಂಭವಿಸುವ ರೋಗ. ಎಲೆಗಳು ನೀರಿನಲ್ಲಿ ಅದ್ದಿದಂತಾಗಿ ಅನಂತರ ಅವುಗಳ ಮೇಲೆ ಅಲ್ಲಲ್ಲಿ ಮೆತ್ತಗಿರುವ ಬೊಕ್ಕೆಗಳು ಕಾಣಿಸಿಕೊಳ್ಳುತ್ತವೆ. ದಿನಕಳೆದಂತೆ ಈ ಬೊಕ್ಕೆಗಳು ಕಂದು ಇಲ್ಲವೇ ದಟ್ಟಕಂದು ಬಣ್ಣಕ್ಕೆ ಮಾರ್ಪಟ್ಟು ಲೋಳೆಯಂತಹ ದ್ರವಪದಾರ್ಥವನ್ನು ಒಸರುತ್ತವೆ. ಅಂತಹ ಗಿಡಗಳನ್ನು ಕೂಡಲೇ ಕಿತ್ತು ನಾಶಗೊಳಿಸಬೇಕು. ಮಣ್ಣಿನಲ್ಲಿ ಹೆಚ್ಚು ತೇವ ಇರದಂತೆ ಹದವರಿತು ನೀರು ಕೊಡುತ್ತಿದ್ದರೆ ಇದು ನಿವಾರಣೆಯಾಗುತ್ತದೆ.

ತುಪ್ಪುಳಿನ ರೋಗ ಶಿಲೀಂಧ್ರರೋಗ. ಎಲೆಗಳ ಮೇಲ್ಭಾಗದಲ್ಲಿ ಬಿಳಿ ಹಸುರು ಇಲ್ಲವೇ ಬಿಳಿ ಹಳದಿ ಮಚ್ಚೆಗಳು ಕಾಣಿಸಿಕೊಂಡು ಅವುಗಳ ತಳಭಾಗದಲ್ಲಿ ಬಿಳಿಯ ಬೂಜು ಕಂಡುಬರುವುದು. ದಿನಕಳೆದಂತೆಲ್ಲಾ ಮಚ್ಚೆಗಳು ಒಂದರಲ್ಲೊಂದು ವಿಲೀನಗೊಂಡು ಕಡೆಗೆ ಇಡೀ ಎಲೆಯೇ ಹಳದಿ ಇಲ್ಲವೇ ಕಂದು ಬಣ್ಣಕ್ಕೆ ಮಾರ್ಪಡುತ್ತದೆ. ಪೈರನ್ನು ನಾಟಿ ಮಾಡುವ ಮುಂಚೆ ಹಾಗೂ ನಂತರ ಡೈಥೇನ್ ಎಂ-೪೫ ದ್ರಾವಣದಿಂದ ಅದ್ದಿ ಉಪಚರಿಸಬೇಕು. ಇಂಪೀರಿಯಲ್-೧೭ ರಂತಹ ನಿರೋಧಕ ತಳಿಗಳನ್ನು ಬೆಳೆಯುವುದು ಲಾಭದಾಯಕ.

ವರ್ಣವಿನ್ಯಾಸಕ್ಕೆ ತುತ್ತಾದ ಎಲೆಗಳು ಒಳಮುಖವಾಗಿ ಮಗುಚಿಕೊಂಡು ಸುರುಳಿಗೊಳ್ಳುತ್ತವೆ. ಅಂತಹ ಎಲೆಗಳು ನೋಡಲು ವಿಕಾರವಾಗಿರುವುವು. ಎಲೆಗಳಲ್ಲಿ ವಿವಿಧ ಬಣ್ಣಗಳಲ್ಲಿ ಕಾಣಬಹುದು. ಕಡೆಗೆ ಎಲೆಗಳು ಹಳದಿ ಬಣ್ಣಕ್ಕೆ ಮಾರ್ಪಡುತ್ತವೆ. ಅಂತಹ ಗಿಡಗಳನ್ನು ಬೇರು ಸಹಿತ ಕಿತ್ತು ನಾಶಗೊಳಿಸಬೇಕು. ಅದರ ಜೊತೆಗೆ ನಂಜುರೋಗಾಣುಗಳನ್ನು ಹರಡುವ ಸಸ್ಯಹೇನುಗಳನ್ನು ಹತೋಟಿಯಲ್ಲಿಡಬೇಕು.

ಬೀಜೋತ್ಪಾದನೆ : ಲೆಟ್ಯೂಸ್ ಸ್ವ-ಪರಾಗಸ್ಪರ್ಶದ ಬೆಳೆಯಾದಾಗ್ಯೂ ಸಹ ಸ್ವಲ್ಪ ಪ್ರಮಾಣದ ಪರಕೀಯ ಪರಾಗಸ್ಪರ್ಶವಿರುವುದಾಗಿ ತಿಳಿದು ಬಂದಿದೆ. ಯಾವುದೇ ಎರಡು ತಳಿಗಳನ್ನು ಒಂದೆಡೆ ಬೆಳೆಯುವುದಿದ್ದಲ್ಲಿ ಅವುಗಳ ನಡುವೆ ಕಡೇ ಪಕ್ಷ ೫೦ ಮೀಟರ್ ಅಂತರವಾದರೂ ಇರಬೇಕು. ಬೇಸಾಯ ಕ್ರಮಗಳನ್ನು ಕಾಲಕಾಲಕ್ಕೆ ತಪ್ಪದೆ ಅನುಸರಿಸಬೇಕು. ಬೇಗ ಹೂ ಬಿಡುವ ತಳಿಗಳು ಒಳ್ಳೆಯ ಬೀಜವನ್ನು ಉತ್ಪತ್ತಿ ಮಾಡುತ್ತವೆ. ಬೀಜದ ಇಳುವರಿ ಆಯಾ ತಳಿಯನ್ನನುಸರಿಸಿ ವ್ಯತ್ಯಾಸಗೊಳ್ಳುತ್ತದೆ. ಚೈನೀಸ್ ಎಲ್ಲೊ ತಳಿಯಲ್ಲಿ ಹೆಕ್ಟೇರಿಗೆ ೫೯೫ ಕಿ.ಗ್ರಾ. ಗ್ರೇಟ್‌ಲೇಕ್ಸ್ ತಳಿಯಲ್ಲಿ ೧೦೦-೧೨೫ ಕಿ.ಗ್ರಾಂ ಮತ್ತು ಮೇಕಿಂಗ್ ತಳಿಯಲ್ಲಿ ೩೦ ಕಿ.ಗ್ರಾಂ ಬೀಜ ವರದಿಯಾಗಿದೆ.

* * *