ಬೆಳಿಗ್ಗೆ ಎದ್ದಾಗಲೇ ಮಬ್ಬು ಮಂಜು. ಒಂದೇ ದಿನದಲ್ಲಿ ಮಾಸ್ಕೋದ ಮುಖ ಬದಲಾಗಿತ್ತು. ಹೊರಗೆ ಕಾಲಿಟ್ಟರೆ ಅಮರಿಕೊಳ್ಳುವ ಛಳಿ, ಹತ್ತು ಗಂಟೆಯಾದರೂ ಬಿಸಿಲಿನ ತಲೆಯಿಲ್ಲ.

ಈ ದಿನ ಲೆನಿನ್ ಲೈಬ್ರರಿಗೆ. ಬಸ್ಸು ಹಿಡಿದು ವಿಶ್ವವಿದ್ಯಾಲಯದ ಮೆಟ್ರೋ ಸ್ಟೇಷನ್ನಿನೊಳಕ್ಕೆ ಇಳಿದು, ಸುರಂಗ ರೈಲಲ್ಲಿ ಕೂತರೆ, ನೆಲದ ಮೇಲಿನ ಹವಾಮಾನಕ್ಕೂ ನಮಗೂ ಸಂಬಂಧವೇ ಇಲ್ಲ. ಇಪ್ಪತ್ತು ನಿಮಿಷದಲ್ಲಿ ಲೆನಿನ್ ಲೈಬ್ರರಿ ಸ್ಟೇಷನ್ನಿನಲ್ಲಿ ಇಳಿದು, ಮೇಲೇರಿ ಬಂದರೆ ಮತ್ತೆ ಮಂಜು ಕವಿದ ಮಹಾನಗರ.

ಲೆನಿನ್ ಲೈಬ್ರರಿಯ ಚಚ್ಚೌಕವಾದ ಮಹಾಸ್ತಂಭಗಳನ್ನು ದಾಟಿ, ಎತ್ತರದ ಗಾಜಿನ ಬಾಗಿಲು ದಬ್ಬಿ ಒಳಹೊಕ್ಕೆವು, ಒಳಗೆ ಅದೊಂದು ಅಮೃತ ಶಿಲೆಯ ಬೃಹತ್ ಭವನ. ೧೭೮೪ರಿಂದ ೧೭೮೬ ರವರೆಗಿನ ಅವಧಿಯಲ್ಲಿ ನಿರ್ಮಿತವಾದ ಈ ಕಟ್ಟಡದ ಒಂದು ಭಾಗ, ಅನೇಕ ಐತಿಹಾಸಿಕ ಘಟನೆಗಳ ನೆಲೆಯಾಗಿದೆ. ೧೮೯೩ರಂದು ಲೆನಿನ್ ಇಲ್ಲಿಗೆ ಭೇಟಿ ನೀಡಿದಾಗ ಸಣ್ಣದೊಂದು ವಾಚನಾಲಯ ಇದರಲ್ಲಿತ್ತು. ಟಾಲ್‌ಸ್ಟಾಯ್, ಡಾಸ್ಟೊವಸ್ಕಿ, ಅಂಟನ್ ಚೆಕೊವ್, ಇಂಥ ಮಹಾಸಾಹಿತಿಗಳೆಲ್ಲ ಈ ವಾಚನಾಲಯ ಹಾಗೂ ಪುಸ್ತಕ ಭಂಡಾರಕ್ಕೆ ಬರುತ್ತಿದ್ದರು. ೧೯೨೪ರ ವೇಳೆಗೆ ಈ ಪುಸ್ತಕ ಭಂಡಾರ ಈಗಿರುವ ರೂಪಕ್ಕೆ ಬಂದು ‘ಲೆನಿನ್ ಲೈಬ್ರರಿ’ ಎಂಬ ಹೆಸರನ್ನು ಪಡೆಯಿತು.

ಈ ಗ್ರಂಥ ಭಂಡಾರದಲ್ಲಿ ೧೭೦ ವಿವಿಧ ಭಾಷೆಗಳ ಪುಸ್ತಕಗಳಿವೆ. ಇಲ್ಲಿರುವ ಒಟ್ಟು  ಪುಸ್ತಕಗಳ ಸಂಖ್ಯೆ, ಇಪ್ಪತ್ತೈದು ಮಿಲಿಯನ್. ಇಲ್ಲಿರುವ ಪುಸ್ತಕದ ಕಪಾಟುಗಳನ್ನು ಒಂದರ ಬದಿಗೊಂದು ಜೋಡಿಸಿದರೆ, ಅದು ೨೧೦ ಮೈಲಿಗಳಷ್ಟು ಉದ್ದದ ಸ್ಥಳವನ್ನು ಆಕ್ರಮಿಸುತ್ತದೆ ! ದಿನಕ್ಕೆ ಸರಾಸರಿ ಹತ್ತು ಸಾವಿರ ಮಂದಿ ಈ ಗ್ರಂಥಭಂಡಾರದ ಉಪಯೋಗವನ್ನು ಮಾಡಿಕೊಳ್ಳುತ್ತಾರೆ. ಇಪ್ಪತ್ತೆರಡು ಸುಸಜ್ಜಿತ ವಾಚನ ಮಂದಿರಗಳಿವೆ. ವಿಶ್ವವಿದ್ಯಾಲಯದ ಪ್ರಾಧ್ಯಾಪಕರುಗಳಿಗೆ ಪ್ರತ್ಯೇಕವಾದ ಅಧ್ಯಯನ ಮಂದಿರವಿದೆ. ಅಲ್ಲಿ ಒಬ್ಬ ಪ್ರಾಧ್ಯಾಪಕನಿಗೆ ಒಂದು ಮೇಜನ್ನು ಮೀಸಲಾಗಿಡಲಾಗಿದೆ.

ಇಲ್ಲಿ ಒಂದು ಅಮೂಲ್ಯ ಪುಸ್ತಕ ವಿಭಾಗ (Valid Book Section) ಇದೆ. ಇಲ್ಲಿ ರಷ್ಯಾ ದೇಶದಲ್ಲಿ ಮೊಟ್ಟ ಮೊದಲು ಅಚ್ಚಾದ ಪುಸ್ತಕ ಇವಾನ್ ಪಾಯ್‌ದೊರೊವ್ (Ivan Fyodorov) ಎಂಬಾತನ Acts of the Apostles ಎಂಬುದು. ಇದು ಪ್ರಕಟವಾದದ್ದು ೧೫೬೩ನೇ ಏಪ್ರಿಲ್ ೧೯ನೇ ತಾರೀಕು. ಹದಿನೈದನೆಯ ಶತಮಾನದಲ್ಲಿ ಅಚ್ಚಾದ ಇನ್ನೊಂದು ಪುಸ್ತಕ ಷೆಬೆಲ್ ಎಂಬಾತನ Worlds Cronicle ಎಂಬುದು. ಇದು ಅನೇಕ ವರ್ಣಚಿತ್ರಗಳಿಂದ ಕೂಡಿದೆ. ೧೮೦೧ ರಲ್ಲಿ ಲಂಡನ್ನಿನಲ್ಲಿ ಪ್ರಕಟವಾದ Grammar of the Pure and Mixed East Indian Dialects: Sanskrit Language ಎಂಬ ಪುಸ್ತಕ ಕೂಡ ಇಲ್ಲಿದೆ. ಇದರ ಕರ್ತೃ Herasina Lebdeff. ಅಪರೂಪ ಪುಸ್ತಕ ವಿಭಾಗದಲ್ಲಿ ಅತ್ಯಂತ ಚಿಕ್ಕ, ಅರ್ಧ ಅಂಗುಲ ಗಾತ್ರದ ಪುಸ್ತಕ ಕೂಡಾ ಇದೆ – ಇದು ಲೆನಿನ್ನನ್ನು ಕುರಿತ ಕವಿತೆಗಳ ಸಂಗ್ರಹ.

ಇಲ್ಲಿನ ಹಸ್ತಪ್ರತಿಗಳ ವಿಭಾಗವನ್ನು ಸಂದರ್ಶಿಸಿದೆ. ಈ ಹಸ್ತಪ್ರತಿಗಳ ವಿಭಾಗ ೧೮೬೨ ರಂದು  ಮೊದಲಾದದ್ದು. ರಷ್ಯನ್ ಸಾಹಿತ್ಯದ  ಪ್ರಾಚೀನ ಹಸ್ತಪ್ರತಿಗಳು ಇಲ್ಲಿವೆ. ಹಸ್ತಪ್ರತಿಗಳೆಲ್ಲ ಕಾಗದದವೆ. ಅತ್ಯಂತ ಪ್ರಾಚೀನವಾದ ರಷ್ಯನ್ ಹಸ್ತಪ್ರತಿ ಹನ್ನೊಂದನೆಯ ಶತಮಾನದ್ದು ಎಂದು ಈ ವಿಭಾಗದ ಮೇಲ್ವಿಚಾರಕರು ಹೇಳುತ್ತಾರೆ. ಆದರೆ ಆ ವೇಳೆಗೆ ಕಾಗದ ಬಳಕೆಯಲ್ಲಿತ್ತೆ ಎಂಬುದೆ ನನಗೆ ಸಂದೇಹ. ತಾಳೆಯೋಲೆಯ ಒಂದು ಸೊಗಸಾದ ಪ್ರತಿ ಇದೆ. ಅದು ಇಂಡಿಯಾದಿಂದ ತಂದದ್ದು. ಬುದ್ಧಘೋಷನ ‘ಸಮಹಾವಿನೋದಾನಿ’ (ರಷ್ಯನ್ ಭಾಷೆಯಲ್ಲಿ ಹಸ್ತಪ್ರತಿಯ ಮೇಲೆ ಲಿಖಿತವಾದ ಕೃತಿಯ ಹೆಸರನ್ನು, ನನಗೆ ಓದಿ ಹೇಳಲಾದದ್ದನ್ನು ಬರೆದುಕೊಂಡಿದ್ದೇನೆ) ಎಂಬ ಪಾಲಿ ಅಥವಾ ಪ್ರಾಕೃತ ಭಾಷೆಯ ಕೃತಿ ಇದು. ಕ್ರಿ. ಶ. ೯ನೆಯ ಶತಮಾನದ್ದು. ಈ ಹಸ್ತಪ್ರತಿ ಸಂಗ್ರಹಾಲಯದಲ್ಲಿ ಕೇವಲ ೬೭ ಕೃತಿಗಳು ಮಾತ್ರ ಇವೆ. ಇಷ್ಟು ದೊಡ್ಡ ಪುಸ್ತಕ ಭಂಡಾರದಲ್ಲಿ ಇದು ತೀರಾ ಸಣ್ಣ ಸಂಖ್ಯೆ.

ಈ ವಿಭಾಗದಲ್ಲಿ ಜಗತ್ತಿನ ಸುಪ್ರಸಿದ್ಧ ಸಾಹಿತಿಗಳ ಹಸ್ತಪ್ರತಿ – ಮುಖ್ಯವಾಗಿ ಅವರು ಬರೆದ ಪತ್ರಗಳನ್ನು ಸಂಗ್ರಹಿಸಿರುವುದು ವಿಶೇಷದ ಸಂಗತಿ. ಡಾಸ್ಟೊವಸ್ಕಿ, ಚಕೊವ್, ಯೂಸಿನೆಸ್, ಪಾಸ್ಟರ್‌ನಾಕ್, ರೂಸೋ, ಆಸ್ಕರ್ ವೈಲ್ಡ್, ಇಮ್ಯಾನುಯೆಲ್ ಕ್ಯಾಂಟ್, ರೊಮೆನ್ ರೋಲಾ, ವಾಲ್ಟರ್ ಸ್ಕಾಟ್, ಎಮಿಲಿ ಜೋಲಾ – ಹೀಗೆ ರಷ್ಯನ್ ಹಾಗೂ ರಷ್ಯನೇತರ ಸಾಹಿತಿಗಳ ಪತ್ರಗಳನ್ನು ಕಾಣಬಹುದು.

ಇಲ್ಲಿ ಕನ್ನಡ ಪುಸ್ತಕಗಳೇನಾದರೂ ಇವೆಯೇ ಎಂದು ನೋಡಿದೆ; ಕೆಲವೇ ಕೆಲವು ಪುಸ್ತಕಗಳಿದ್ದವು. ಕೇಶಿರಾಜನ ‘ಶಬ್ದಮರ್ಣಿದರ್ಪಣ’, ನಾಗವರ್ಮನ ‘ಛಂದೋಂಬುಧಿ,’ ಶ್ರೀರಂಗಪಟ್ಟಣದ ಕೃಷ್ಣಮಾಚಾರ್ಯರ ‘ಹೊಸಗನ್ನಡ ನುಡಿಗನ್ನಡಿ’ – ನನ್ನ ಗಮನವನ್ನು ಸೆಳೆದವು.

ಇಲ್ಲಿ  ಪುಸ್ತಕಗಳನ್ನು ಮನೆಗೆ ಒಯ್ಯಲು ಕೊಡುವುದಿಲ್ಲ; ಏನಿದ್ದರೂ ಅಲ್ಲೇ ಕೂತು ಓದಬೇಕು.

ಈ ಗ್ರಂಥಭಂಡಾರದ ಪ್ರವೇಶ ದ್ವಾರದಲ್ಲಿ ‘ಪುಸ್ತಕವಿಲ್ಲದ ಮನೆ ಜೀವವಿಲ್ಲದ ದೇಹದಂತೆ’ ಎಂಬ ವಾಕ್ಯವನ್ನು ದೊಡ್ಡದಾಗಿ ಬರೆಯಿಸಲಾಗಿದೆ. ಗ್ರೀಕ್ ತತ್ವಜ್ಞಾನಿ ಸಿಸಿರೋ ಎಂಬಾತನ ಹೇಳಿಕೆ ಇದು.

ಮಧ್ಯಾಹ್ನ ಮೂರು ಗಂಟೆಗೆ ‘ವರ್ಲ್ಡ್ ಲಿಟರೇಚರ್ ಇನ್‌ಸ್ಟಿಟ್ಯೂಟ್’ನಲ್ಲಿ ‘ಕನ್ನಡ ಸಾಹಿತ್ಯ – ಶತಮಾನಗಳ ಹಾದಿಯಲ್ಲಿ (Kannada – Literature through the centuries) ಎಂಬ ವಿಷಯವನ್ನು ಕುರಿತು ಉಪನ್ಯಾಸ ನೀಡಿದೆ. ನಾನು ಬೆಂಗಳೂರು ಆಕಾಶವಾಣಿಯಿಂದ, ವಿವಿಧ ಕಲಾವಿದರು ಹಾಡಿರುವ ನನ್ನ ಕವನಗಳ ಟೇಪನ್ನು ಒಯ್ದಿದ್ದೆ. ಉಪನ್ಯಾಸದ ನಂತರ ಈ ಹಾಡುಗಳನ್ನು ಟೇಪ್‌ರೆಕಾರ್ಡರ್ ಮೂಲಕ ಕೇಳಿಸಿದೆ. ಕೇಳಿ ಅದರ ಧಾಟಿಗೆ, ಸಂಗೀತಕ್ಕೆ ಪ್ರೇಕ್ಷಕರು ಮೆಚ್ಚಿಕೊಂಡರು. ಕೆಲವು ಕನ್ನಡ ಕವಿತೆಗಳನ್ನು ಅವರ ಒತ್ತಾಯಕ್ಕೆ ಓದಿ ತೋರಿಸಿದೆ.

ನಾನು ಈ ಊರನ್ನು ಬಿಡಬೇಕಾದದ್ದು ೨೫ನೇ ತಾರೀಖು. ಅದಕ್ಕಾಗಿ ಏರ್ ಇಂಡಿಯಾ ಆಫೀಸ್‌ಗೆ ಹೋಗಿ ವಿಚಾರಿಸಿದ್ದಾಯಿತು. ಈ ಸಲ ೨೪ನೇ ತಾರೀಖು ಇಂಡಿಯಾದಿಂದ ಬರುವ ವಿಮಾನ ರದ್ದಾಗಿದೆಯೆಂದೂ, ಆದರೆ ನಾವು ೨೬ನೇ ಮಂಗಳವಾರ ಬಂದು, ೨೭ನೇ ಬುಧವಾರ ಬೆಳಿಗ್ಗೆ ದೆಹಲಿಗೆ ಹೋಗುವ ವಿಮಾನದಲ್ಲಿ ಹೊರಡಬಹುದೆಂದೂ ತಿಳಿಯಿತು. ಆದರೆ ಭಾರತದ ರಷ್ಯನ್ ರಾಯಭಾರ ಕಛೇರಿ, ನಮಗೆ ವೀಸಾ ಕೊಟ್ಟಿದ್ದು ೨೫ನೇ ತಾರೀಖಿನ ತನಕ; ಇನ್ನೆರಡು ದಿನ ಹೆಚ್ಚು ಇರಬೇಕಾದರೆ, ಮತ್ತೆ ಮಾಸ್ಕೋದ ವಿದೇಶಾಂಗ ಶಾಖೆಯಿಂದ ಎರಡು ದಿನಕ್ಕೆ ವೀಸಾ ಪಡೆಯಬೇಕು. ಈ ಬಗ್ಗೆ ಏರ್ಪಾಡು ಮಾಡುವುದಾಗಿ ವೊಲೋಜ ತಿಳಿಸಿದ.