ಹೆಚ್ಚು ಬೇಡಿಕೆಯಲ್ಲಿರುವ, ಕಷ್ಟಪಡದೇ ಬೆಳೆಸಬಹುದಾದ, ಹೆಚ್ಚು ಆದಾಯ ತರುವ ಸಸ್ಯಗಳಲ್ಲಿ ಔಷಧೀಯ ಹಾಗೂ ಸುಗಂಧ ಸಸ್ಯಗಳು ಮಹತ್ವದ ಪಾತ್ರ ವಹಿಸುತ್ತವೆ. ಮನೆಯ ಹಿತ್ತಲಿನಲ್ಲಿ ಹಾಗೂ ತೋಟಗಳಲ್ಲಿ ಅಗ್ರಸ್ಥಾನ ಪಡೆದಿವೆ. ಈ ರೀತಿಯ ಸಸ್ಯಗಳನ್ನು ಬೆಳೆಯುವುದರಿಂದ ಪರೋಕ್ಷವಾಗಿ ಆಗುವ ಲಾಭಗಳೇ ಅಧಿಕ. ವಾತಾವರಣವನ್ನು ಪ್ರದೂಷಣೆಯಿಂದ ಮುಕ್ತಗೊಳಿಸಿ, ಸುವಾಸಿತಗೊಳಿಸುತ್ತವೆ. ದೈಹಿಕ ಹಾಗೂ ಮಾನಸಿಕ ಆರೋಗ್ಯ ಕಾಪಾಡುವುದರಲ್ಲಿ ಇವುಗಳ ಪಾತ್ರ ಹಿರಿದು. ಅಲ್ಲದೆ ಇದರಿಂದ ತೆಗೆಯುವ ಎಣ್ಣೆ ಹೆಚ್ಚು ಸುವಾಸಿತ ಮತ್ತು ಬೇಡಿಕೆಯುಳ್ಳದ್ದು. ಸಂಬಂಧ ಪಟ್ಟ ಇಲಾಖೆಗಳು ಈ ಬಗ್ಗೆ ಪ್ರಚಾರ, ವಿಚಾರ ವಿನಿಮಯ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳುತ್ತಿವೆ. ಗಿಡಗಳನ್ನು ಬೆಳೆಸುವ ಬಗ್ಗೆ, ಅವುಗಳ ಸಂರಕ್ಷಣೆಯ ಬಗ್ಗೆ, ಸಂಸ್ಕರಣೆ, ಶೇಖರಣೆ ಬಗ್ಗೆ ಮಾಹಿತಿ ಪೂರೈಸುತ್ತಿವೆ. ಅವುಗಳ ಬಗ್ಗೆ ಹೆಚ್ಚಿನ ಸಂಶೋಧನೆಗಳು ನಡೆಯುತ್ತಿವೆ. ಹೆಚ್ಚು ಜಾಗವಿರುವವರು, ಇವುಗಳ ಕೃಷಿ ಕೈಗೆತ್ತಿಕೊಳ್ಳ ಬಹುದು.ಗಿಡಗಳ ಮಾರಾಟ, ಮೌಲ್ಯವರ್ಧಿಸಿದ ಎಣ್ಣೆಯ ಮಾರಾಟ  ಹೆಚ್ಚುವರಿ ಆದಾಯಕ್ಕೂ ದಾರಿ. ಆದರೆ ಕೆಲವೊಂದು ವಿಷಯಗಳಲ್ಲಿ ಎಚ್ಚರಿಕೆಯ ಅಗತ್ಯವಿದೆ.

ಒಳಾಂಗಣದಲ್ಲಿ ನಿಂಬೆಹುಲ್ಲು

ಬೆಳೆಯ ಬಯಸುವ ಸಸ್ಯಗಳ ಬಗ್ಗೆ ಪೂರ್ಣ ಮಾಹಿತಿ ಕಲೆಹಾಕಬೇಕು. ಅವುಗಳ ಮಾರುಕಟ್ಟೆ ಬಗ್ಗೆ ಅಧ್ಯಯನ ಮಾಡಬೇಕು. ಇದಕ್ಕೆ ಮೊದಲು ಆ ಬೆಳೆ ಬೆಳೆದಿರುವವರ ಹೊಲಗಳಿಗೆ ಭೇಟಿ ಕೊಟ್ಟು ಪರಿಶೀಲಿಸಬೇಕು. ಅವರಿಂದ ಖರ್ಚು,ವೆಚ್ಚ, ಲಾಭ,ನಷ್ಟದ ಬಗ್ಗೆ ವಿಸ್ತೃತ ಮಾಹಿತಿ ಪಡೆಯಬೇಕು. ಬರುವ ಎಣ್ಣೆಯ ಪ್ರಮಾಣ, ತೆಗೆಯುವ ಬಗೆ, ಯಂತ್ರದ ಬಗ್ಗೆ ವಿವರಣೆ, ತಾಂತ್ರಿಕ ಮಾಹಿತಿ, ತರಬೇತಿ ಸೌಲಭ್ಯ, ದೊರೆಯುವ ಸ್ಥಳ ಇವುಗಳ ಬಗ್ಗೆ ವಿವರವಾದ ಮಾಹಿತಿ ಕಲೆಹಾಕಬೇಕು. ಇಷ್ಟಾದರೆ, ಬೆಳೆಯ ಬಹುದಾದ  ಸುಗಂಧ ಸಸ್ಯಗಳು ಅನೇಕ. ನಿಂಬೆಹುಲ್ಲು, ಪನ್ನೀರೆಲೆ, ಲಾವಂಚ ಇತ್ಯಾದಿ ಈ ಮಾಲಿಕೆಯಲ್ಲಿ ಬರುವ ಕೆಲವು ಸುಗಂಧ ಸಸ್ಯಗಳು.

‘ಸಿಂಬೊಪೋಗನ್-ಸಿಟ್ರೇಟಸ್,’ ಎಂಬ ಸಸ್ಯ ಶಾಸ್ತ್ರೀಯ ಹೆಸರಿನ ನಿಂಬೆಹುಲ್ಲಿಗೆ, ಮಜ್ಜಿಗೆ ಹುಲ್ಲು ಎಂಬ ಹೆಸರಿದ್ದರೂ, ‘ಲೆಮನ್-ಗ್ರಾಸ್’ ಎಂಬ ಹೆಸರಿನಿಂದಲೇ ಪ್ರಸಿದ್ಧವಾಗಿದೆ. ಹಿಂದೆಲ್ಲಾ ಮನೆಯ ಹಿತ್ತಿಲಲ್ಲಿ ಬೆಳೆಯುತ್ತಿದ್ದ ಹುಲ್ಲಿನ ಜಾತಿಗೆ ಸೇರಿದ ಗಿಡ. ಉತ್ತರ ಕನ್ನಡ ದಲ್ಲಿ ಮನೆ ಮಾತಾಗಿರುವ ‘ಗಾವಟೀ ಚಾಯ್ ‘ಇದಕ್ಕೆ ನಿದರ್ಶನ. ನಿಂಬೆ ಹುಲ್ಲು ಹಾಕಿ ಮಾಡಿದ ಚಹಕ್ಕೆ ನಿಂಬೆಯ ಪರಿಮಳ.  ಗಾಂವ್ ಕಿ ಚಾಯ್, ಎಂದು ಹಿಂದಿಯಲ್ಲೂ, ಗಾಂವಾಚಿ ಚಾಯ್ ಎಂದು ಮರಾಠಿ ಭಾಷೆಯಲ್ಲೂ, ಇದ್ದ ಹೆಸರು ಆಡುಭಾಷೆಯಲ್ಲಿ ಗಾವಟೀ ಚಾಯ್ ಆಗಿರಬಹುದು. ನಿಂಬೆ ಹುಲ್ಲು ಹಾಕಿ ಕುದಿಸಿದ ಚಹ ಸ್ವಾದಿಷ್ಟ ವಷ್ಟೇ ಅಲ್ಲ, ಔಷಧೀಯ ಗುಣಗಳನ್ನೂ ಹೊಂದಿದೆ. ಇತ್ತೀಚೆಗೆ ವಾಣಿಜ್ಯ ಕೃಷಿ ಪ್ರಾರಂಭವಾದ ಮೇಲೆ ಹಿತ್ತಿಲಿನಿಂದ ಮಾಯವಾಗ ತೊಡಗಿದೆ. ಇದರ ಕೃಷಿ ವಿಸ್ತರಣೆ ಕೃಷಿಕರಿಗೆ ವರದಾನವಾಗಬಹುದು.

ಸಮೃದ್ಧ ವಾದ ಹುಲ್ಲಿನ ಬೆಳೆ

ಪಕ್ಕದಿಂದ ಹೊರಡುವ ಸಣ್ಣ ಕಂದುಗಳಿಂದ (ರೂಟೆಡ್ sssಸ್ಲಿಪ್ಸ್) ಸಸ್ಯಾಭಿವೃದ್ಧಿ ಮಾಡಬಹುದು. ಕುಂಡದಲ್ಲಿ ಬೆಳೆಯುವುದಾದರೆ ಒಂದು ಗೆಡ್ಡೆ ಸಾಕು. ಹೆಚ್ಚು ಗಿಡ ಬೆಳೆಯ ಬೇಕಾದರೆ, ಸಾಲಿನಿಂದ ಸಾಲಿಗೆ ೪೫ ಸೆಂ.ಮೀ. ಗಿಡದಿಂದ ಗಿಡಕ್ಕೆ ೬೦ ಸೆಂ.ಮೀ. ದೂರದಲ್ಲಿ, ಹಾಗೂ ೧೫ಸೆಂ.ಮೀ. ಆಳದಲ್ಲಿ ನಾಟಿ ಮಾಡಿ. ನಾಟಿ ಸಮಯದಲ್ಲಿ ಹಾಕುವ ಗೊಬ್ಬರ ಬೆಳವಣಿಗೆಗೆ ಪೂರಕ. ಆದರೂ ನಾಲ್ಕು ತಿಂಗಳಿಗೊಮ್ಮೆ ಸ್ವಲ್ಪ ಗೊಬ್ಬರ ಕೊಡುವದು (ದ್ರವ ರೂಪಿ ಆದರೂ ಪರವಾಗಿಲ್ಲ) ಸೂಕ್ತ. ಗಿಡದ ಬೆಳವಣಿಗೆಯನ್ನು ಅನುಸರಿಸಿ, ವರ್ಷದಲ್ಲಿ ೨-೩ ಬಾರಿ ಕಟಾವು ಮಾಡಬಹುದು. ನೆಲದಿಂದ ಹತ್ತು ಸೆಂ. ಮೀ. ಬಿಟ್ಟು ಎಲೆ ಕತ್ತರಿಸಬೇಕು. ಪ್ರತಿ ಬಾರಿ ಕಟಾವು ಮಾಡಿದಾಗಲೂ, ಗಿಡಕ್ಕೆ ಪೋಷಕಾಂಶ ಪೂರೈಸ ಬೇಕು. ಮುಂದಿನ ಬೆಳೆ ಚೆನ್ನಾಗಿ ಬರ ಬೇಕಾದರೆ ಇದು ಅತ್ಯಂತ ಅವಶ್ಯಕ

ಎಣ್ಣೆ ತೆಗೆಯುವುದಕ್ಕಾಗಿಯೇ ಗಿಡ ಬೆಳೆಯುವುದಾದಲ್ಲಿ, ೬ ವರ್ಷಗಳವರೆಗೆ ಲಾಭದಾಯಕವಾಗಿ ಬೆಳೆಯಬಹುದು. ನಂತರದಲ್ಲಿ ಹೊಸ ಗಿಡಗಳನ್ನು ಹಾಕಬೇಕು. ಎಣ್ಣೆಯನ್ನು ತೆಗೆಯಲು ಯಂತ್ರೋಪಕರಣಗಳಿವೆಯಾದರೂ, ವೈಯಕ್ತಿಕ ಬಳಕೆ ದುಬಾರಿ ಆಗಬಹುದು. ಹತ್ತಾರು ಜನ ಸೇರಿ ಒಟ್ಟಾಗಿ ಬೆಳೆದು, ಸಹಕಾರಿ ಸಂಸ್ಕರಣಾ ಘಟಕ ಸ್ಥಾಪಿಸಿದರೆ ಈ ಕೃಷಿ ಲಾಭದಾಯಕ.  ‘ಭಾಷ್ಪೀಕರಣ’ ಪದ್ಧತಿಯಿಂದ ತೆಗೆದ ಎಣ್ಣೆಯ ಗುಣಮಟ್ಟ ಚೆನ್ನಾಗಿರುವುದೆಂದು ತಿಳಿದುಬಂದಿದೆ.

ನಾಟಿಗೆ ಸಿದ್ಧವಾಗಿರುವ ಗಿಡ

ಉತ್ತರ ಕನ್ನಡದ ಕೆಲವು ಕೃಷಿಕರು, ಬೆಳೆ ಹಾಗೂ  ಸಂಸ್ಕರಣೆ ಬಗ್ಗೆ ತರಬೇತಿ ಪಡೆದು ಎಣ್ಣೆ ತೆಗೆದು ಮಾರಾಟ ಮಾಡುತ್ತಿದ್ದಾರೆ. ಅಕ್ಕ ಪಕ್ಕದ ಹಲವು ರೈತರು ಈ ಬೆಳೆ ಯನ್ನು ಬೆಳೆದು ಪೂರೈಸುತ್ತಿದ್ದಾರೆ. ಹೊಸದಾಗಿ ಈ ಬೆಳೆ ಪ್ರಾರಂಭಿಸುವ ರೈತರು ಬೆಳೆ ಮಾರಾಟದ ಒಪ್ಪಂದ ಮಾಡಿಕೊಂಡು ಪ್ರಾರಂಭಿಸುವುದು ಅಗತ್ಯ. ಇದನ್ನು ‘ಕಾಂಟ್ರ್ಯಾಕ್ಟ್’ ಫಾರ್ಮಿಂಗ್, ಅಥವ ಒಪ್ಪಂದ ಕೃಷಿ ಎನ್ನುತ್ತಾರೆ. ಮೊದಲೇ ಬೆಲೆ ನಿರ್ಧಾರವಾಗಿರುತ್ತದೆ. ಹಾಗಾಗಿ ನಷ್ಟದ ಚಿಂತೆಯಿಲ್ಲ. ಸ್ವಂತವಾಗಿ ಬೆಳೆಯುವುದಾದರೆ, ಸಂಸ್ಕರಣೆ, ಸಂರಕ್ಷಣೆ , ಮಾರುಕಟ್ಟೆಯ ಬಗ್ಗೆ ಎಲ್ಲ ವಿಷಯ ಕೂಲಂಕುಶವಾಗಿತಿಳಿದು ಕೊಳ್ಳುವುದು ಸೂಕ್ತ.  ಕಟಾವಿನ ಹಂತಕ್ಕೆ ಬಂದಾಗ ಮಾರುಕಟ್ಟೆ ಹುಡುಕುವುದು, ಅನರ್ಥಕ್ಕೆ ಆಹ್ವಾನ ಕೊಟ್ಟಂತೆ.

ಹಿತ್ತಿಲಲ್ಲಿ ಬೆಳೆದ ನಿಂಬೆಹುಲ್ಲಿಗೆ ಹತ್ತಾರು ಉಪಯೋಗಗಳು. ಅತಿಥಿಗಳಿಗಾಗಿ ಮಾಡುವ ನಿಂಬೆಹುಲ್ಲಿನ ‘ಚಹ’ ಸ್ವಾದಿಷ್ಟವಾಗಿರುವುದರ ಜೊತೆಗೆ, ರಕ್ತದೊತ್ತಡಕ್ಕೆ ಸಹಕಾರಿ. ಇದರ ಸೇವನೆಯಿಂದ ಹೊಟ್ಟೆಗೆ ಸಂಬಂಧಿಸಿದ ಕೆಲವು ಸಮಸ್ಯೆಗಳು ನಿವಾರಣೆಯಾಗುತ್ತದೆಂಬ ನಂಬಿಕೆ ಇದೆ. ನಿಂಬೆಹುಲ್ಲು ಹಾಗೂ ಜಾಜಿ ಹೂವಿನ ಗಿಡದ ಎಳೆ ಚಿಗುರು ಹಾಕಿ ಕುದಿಸಿ ಆರಿಸಿದ ನೀರಿನಿಂದ ಬಾಯಿ ಮುಕ್ಕಳಿಸಿದರೆ (ಗಾರ್ಗಲ್) ಹಲ್ಲು ನೋವು ಮಾಯ. ವಸಡುಗಳೂ ಗಟ್ಟಿಯಾಗುತ್ತವೆ.  ಸಾವಯವ ಸೊಳ್ಳೆ- ವಿಕರ್ಶಕ  ಬತ್ತಿ ತಯಾರಿಕೆಯಲ್ಲಿ ನಿಂಬೆಹುಲ್ಲು ಉಪಯೋಗವಾಗುತ್ತಿದೆ. ಸೋಪು ತಯಾರಿಕೆಯಲ್ಲಿ, ತಲೆಗೂದಲ ರಕ್ಷಣಾ ತೈಲಗಳ ತಯಾರಿಕೆಯಲ್ಲಿ ಇದರ ಎಣ್ಣೆ ಉಪಯುಕ್ತ. ಕೊಬ್ಬರಿ ಎಣ್ಣೆಯೊಂದಿಗೆ ಬೆರೆಸಿದ ಲೆಮೆನ್ ಗ್ರಾಸ್ ಎಣ್ಣೆಯನ್ನು ‘ಆರೋಮ ಥೆರಪಿ’ಯಲ್ಲಿ ಉಪಯೋಗಿಸುತ್ತಾರೆ.  ಅಲಂಕಾರಿಕ ಸಸ್ಯವಾಗಿ ಅಂಗಳದ ಅಂದವನ್ನೂ ಹೆಚ್ಚಿಸುತ್ತದೆ. ಪ್ರತಿದಿನ ನಿಂಬೆಹುಲ್ಲಿನ ಚಹ ಕುಡಿಯುವುದರಿಂದ ಆರೋಗ್ಯ ಸಹ ಉತ್ತಮವಾಗುತ್ತದೆ.

ಬರ ತಡೆಯುವ ಶಕ್ತಿ ಇರುವ ಗಿಡವಾದರೂ, ನೀರು ಒದಗಿಸಿದಾಗ, ಗಿಡ ಬಹಳ ಸೊಂಪಾಗಿ ಬೆಳೆಯುತ್ತದೆ. ತೋಟಗಳಲ್ಲಿ  ನಡೆಯುವ ಕಾಲುದಾರಿಯ ಇಕ್ಕೆಲಗಳಲ್ಲೂ ಬೆಳೆಯಬಹುದು. ಮನೆಯಲ್ಲಿ ಬೆಳೆಯುವಾಗ ಓಡಾಡಿದರೆ  ತಗುಲದ ಜಾಗದಲ್ಲಿ ಹಾಕುವುದು ಕ್ಷೇಮ. ಎಲೆಯ ಎರೆಡೂ ತುದಿಗಳು ‘ಹ್ಯಾಕ್ಸಾ’ ಬ್ಲೇಡಿನಷ್ಟು ಹರಿತವಾಗಿರುತ್ತೆ. ಹಾಗಾಗಿ ಸ್ವಲ್ಪ ಜಾಗ್ರತೆಯಾಗಿರಬೇಕು. ಗುಂಪಾಗಿ ಬೆಳೆಯುವ ಗಿಡವಾದ್ದರಿಂದ ವಿಶಾಲವಾದ ಜಾಗದ ಅವಶ್ಯಕತೆ ಇರುತ್ತದೆ

ಕೊಯಿಲೋತ್ತರ ಹೊಸ ಎಲೆಗಳು

ಕೊನೆಹನಿ: ಸುಗಂಧ ಸಸ್ಯಗಳ ಬೆಳೆ, ಸಂಸ್ಕರಣೆ, ತೈಲೋತ್ಪಾದನೆ ಗಳ ಬಗ್ಗೆ ಹೆಚ್ಚಿನ ಮಾಹಿತಿ ಯನ್ನು ಬೆಂಗಳೂರಿನ ‘ಸೀಮ್ಯಾಪ್’ (ಸೆಂಟರ್ ಫಾರ್ ಮೆಡಿಸಿನಲ್ ಅಂಡ್ ಆರೋಮ್ಯಾಟಿಕ್ ಪ್ಲಾಂಟ್ಸ್ ) ನಿಂದ ಪಡೆಯಬಹುದು. ಇಲ್ಲಿ ಎಣ್ಣೆ ತೆಗೆಯುವ ಯಂತ್ರದ ಪ್ರಾತ್ಯಕ್ಷಿಕೆಯೂ ಇದೆ.  ಗಾಂಧಿ ಕೃಷಿ ವಿಜ್ಞಾನ ಕೇಂದ್ರದ ಔಷಧೀಯ ಮತ್ತು ಸುಗಂಧ ಸಸ್ಯ ವಿಭಾಗದಿಂದ ಸಹ ಮಾಹಿತಿ ಪಡೆಯಬಹುದು. ಉತ್ತಮ ಗುಣಮಟ್ಟದ ಸಸಿಗಳಿಗಾಗಿಯೂ ವಿಚಾರಿಸ ಬಹುದು.

ಬಾಕ್ಸ್: ದ್ರವ ಗೊಬ್ಬರ.

ಒಂದು ಕಿಲೊ ಸಗಣಿ, ೨೦೦ಗ್ರಾಂ ಹಿಂಡಿ(ಬೇವು ಅಥವ ಹೊಂಗೆ ಹಿಂಡಿ) ೨೦೦ಗ್ರಾಂ ಬೆಲ್ಲ, ೨೦ಗ್ರಾಂ ಅರಿಸಿನ, ೧೦೦ಗ್ರಾಂ ದ್ವಿದಳ ಧಾನ್ಯದ ಹಿಟ್ಟು. ಎಲ್ಲವನ್ನೂ ಐದು ಲೀಟರ್ ನೀರಿನಲ್ಲಿ ಹಾಕಿ ಬೆರೆಸಿ ಭದ್ರವಾಗಿ ಮುಚ್ಚಿಡಿ. ಪ್ರತಿದಿನ ಒಮ್ಮೆ ತೊಳೆಸುತ್ತಿರಿ. ಒಂದು ವಾರದ ನಂತರ ಒಂದು ಲೀಟರ್ ದ್ರಾವಣಕ್ಕೆ, ಒಂಬತ್ತು ಲೀಟರ್ ಬೇರೆ ನೀರು ಸೇರಿಸಿ, ಪ್ರತಿ ಗಿಡಕ್ಕೂ ೨೦೦ ಎಮ್ ಎಲ್ ನಷ್ಟು ಹಾಕಿ. ಹದಿನೈದು ದಿನಕ್ಕೊಮ್ಮೆ ಪುನರಾವರ್ತಿಸ ಬಹುದು.

– ಚಿತ್ರಗಳು: ಆರ್ ಎಸ್ ಶರ್ಮ