ಕಾಡು ಕಣಿವೆಗಳ ದಾರಿಯ ನಡುವೆ
ಥಟ್ಟನೆ ತೆರೆವ ಸರೋವರದ
ಜಲವಿಸ್ತೀರ್ಣ ದರ್ಪಣಗಳು, ಸು-
ತ್ತಲೂ ಮೈ ಕೊಡವಿಕೊಂಡೆದ್ದ

ಪರ್ಣಾಕೀರ್ಣ ಪರ್ವತದ ಏರುವೆ-
ಗಳು, ಕಂದರಗಳಲ್ಲಿ ಪ್ರಶಾಂತ-
ವಾಗಿ ಪವಡಿಸಿದ ಮುಗ್ಧ ಜಾನಪದ
ವಸತಿಗಳು, ಹಸಿರು ಮೇಯುತ್ತ

ಚಲಿಸಿಯೂ ಚಲಿಸದಂತಿರುವ
ಕುರಿಹಿಂಡುಗಳ ಬಿಳಿ ಉಂಡೆಗಳು,
ಅಲ್ಲಲ್ಲಿ ಮೊರಡು ಶಿಲೆಗಳ ಮಧ್ಯೆ ತು-
ತ್ತೂರಿಯೂದುತ್ತಿರುವ ಜಲಪಾತಗಳು,

ದೂರದೂರದವರೆಗೆ ಅಲೆಅಲೆ ಹಬ್ಬಿ-
ದಸ್ಪಷ್ಟ ಗಿರಿಪಂಕ್ತಿ ಛಾಯೆಗಳು,
ವರ್ಡ್ಸ್‌ವರ್ತ್ ಕವಿಯ ದಟ್ಟ ನೆನಪುಗಳಂತೆ
ಎಲ್ಲವನ್ನೂ ತಬ್ಬಿಕೊಂಡಿರುವ ಮೋಡಗಳು.