ಕುವೆಂಪುವಿನ ಮಲೆನಾಡಿಗಿದು ಸರಿಸಾಟಿ
ಎನ್ನಲಾರೆ. ಇಲ್ಲಿ ಅಲೆಅಲೆಯಾಗಿ ಹಬ್ಬಿ-
ರುವ ಬೆಟ್ಟಗಳಿವೆ. ಬೆಟ್ಟಗಳ ನಡುವೆ ಥಟ್ಟನೆ
ತೆರೆವ ಸರೋವರಗಳಿವೆ. ಸರೋವರಗಳೆದೆ-
ಯಲ್ಲಿ ಹಸಿರು ಹೆಪ್ಪುಗಟ್ಟಿದಂತಿರುವ ದ್ವೀಪ
ಗಳಿವೆ. ಬಿಳಿಯ ಕನಸುಗಳಂತೆ ತೇಲುವ ಹಂಸ
ಗಳಿವೆ. ಪಟಬಿಚ್ಚಿಕೊಂಡಲೆವ ದೋಣಿಗಳಿವೆ.
ಸಮೃದ್ಧವಾಗಿ ಬೆಳೆದ ದಟ್ಟ ಕಾಡುಗಳಿವೆ.
ಕೋಡುಗಲ್ಲುಗಳಲ್ಲಿ ತುತ್ತೂರಿಯೂದುತ್ತಿರುವ
ಜಲಪಾತಗಳಿವೆ. ಕಣಿವೆದಾರಿಗಳಲ್ಲಿ ಕನ-
ವರಿಸುತ್ತ ಮಲಗಿರುವ ಹಳ್ಳಿಗಳಿವೆ. ಆದರೂ
ಸಹ್ಯಾದ್ರಿಪರಿಸರದ ಆ ಮಲೆನಾಡಿಗಿರುವ
ಭೀಷ್ಮ ಭವ್ಯತೆಯಿಲ್ಲ. ಹುಲಿ ಹಂದಿ ಕಾಟಿ
ಕಾಡಾನೆ ನುಸಿ ಜಿಗಣೆಗಳ ಹೆಸರೇ ಇಲ್ಲ. ಅ-
ಲ್ಲಿನ ಹಾಗೆ ದೈತ್ಯ ಶಿಖರ ಕಂದರ ಮಹಾಕಾ
ನನದ ವಿಜೃಂಭಣೆಯಿಲ್ಲ. ಎಲ್ಲವೂ ರಮ್ಯ, ಪ್ರ-
ಶಾಂತ, ನಿರ್ಭಯ, ಗಂಭೀರ, ವರ್ಡ್ಸ್‌ವರ್ತನ ಕವಿ-
ತೆಯ ಹಾಗೆ, ಕುವೆಂಪುವಿನ ಕಾವ್ಯದಂತಲ್ಲ. ಇದು
ರಾಮಾಯಣದ ದಂಡಕಾರಣ್ಯವಲ್ಲ, ಹುಲಿಕಲ್ಲ
ನೆತ್ತಿಯ ಸುತ್ತಣಡವಿಯ ಹಾಗೆ ದುರ್ಗಮ-
ವಲ್ಲ; ಕಾನೂರುಕಾಡಿನ ಹಾಗೆ ಬೇಟೆಗಾರರಿ-
ಗೊಂದು ಆಹ್ವಾನವೂ ಅಲ್ಲ. ಇದು ಪ್ರವಾಸಿಗಳ
ಸ್ವರ್ಗ, ಅಲೆಮಾರಿಗಳ ಬೀಡು. ಅಲ್ಲಿನ ಕಾಡು
ಕುವೆಂಪುವಿನ ಕೃತಿಗಳಲ್ಲಿ ಮಾತ್ರವೆ ಉಳಿದು-
ಕೊಂಡಿದ್ದರೆ, ಇಲ್ಲಿನ ನಿಸರ್ಗ ನಿಜವಾಗಿಯೂ
ಅಂದಿನ ಹಾಗೆ ಇಂದೂ ಉಳಿದು, ಮತ್ತೊಬ್ಬ
ವರ್ಡ್ಸ್‌ವರ್ತನಿಗಾಗಿ ತುದಿಗಾಲಲ್ಲಿ ಕಾಯುತ್ತಿದೆ !