ನಮ್ಮ ಮಿದುಳಿನ ಬಗ್ಗೆ ನಮಗಿರುವ ತಿಳುವಳಿಕೆ ಅತ್ಯಲ್ಪ. ಕೇವಲ ಒಂದೂವರೆ ಕಿಲೋಗ್ರಾಂ ತೂಗುವ ಈ ಅಂಗದ ರಚನೆ ಮತ್ತು ಕಾರ್ಯವೈಖರಿ ಊಹಿಸಲಾಗದಷ್ಟು ನರಕೋಶಗಳೊಳಗೆ ನಡೆಯುವ ರಾಸಾಯನ ಕ್ರಿಯೆಗಳು, ಈ ರಾಸಾಯನಿಕ ಕ್ರಿಯೆಗಳಿಗೆ ಕಾರಣವಾಗುವ ನರವಾಹಕಗಳು ನಮ್ಮ ನಡೆ ನುಡಿ ಭಾವನೆಗಳನ್ನು ನಿರ್ಧರಿಸುತ್ತವೆ! ಇಂದು ಎಂ.ಆರ್.ಐ. ಸಿಟಿ ಸ್ಕ್ಯಾನ್ ಮುಖಾಂತರ ಮಿದುಳಿನ ರಚನೆಯಲ್ಲಿನ ನ್ಯೂನತೆಗಳನ್ನು ಪೆಟ್‌ ಸ್ಕ್ಯಾನ್, ಫಂಕ್ಷನಲ್ ಎಂ.ಆರ್.ಐ. ಮುಖಾಂತರ, ಮಿದುಳು ಕೆಲಸ ಮಾಡುವ ವಿಧಾನವನ್ನು ಕಣ್ಣಾರೆ ಕಾಣಬಹುದು. ಈ ಹಿಂದೆ, ಕಾರಣ ಅಸ್ಪಷ್ಟವಾದದ್ದು ಎಂದು ಹೇಳಲಾದ ಅಥವಾ ಸುಪ್ತ ಮನಸ್ಸಿನ ದ್ವಂದ್ವಗಳಿಂದ ಬರಬಹುದು ಎನ್ನಲಾದ ಸ್ಕಿಜೋಫ್ರೀನಿಯಾ (ಹುಚ್ಚು ಕಾಯಿಲೆ) ಖಿನ್ನತೆ, ಗೀಳು ಮನೋರೋಗ, ಅತಿಭಯ ಅಥವಾ ಹಠಾತ್ ಭಯಗಳೆಲ್ಲ ಮಿದುಳಿನ ರೋಗಗಳೆಂದೇ ಈಗ ಸಾಬೀತಾಗಿದೆ.

೨೦೦೧ ರ ಮಾರ್ಚ್‌ ತಿಂಗಳ ೧೨ನೇ ತಾರೀಖಿನಿಂದ ೧೮ನೇ ತಾರೀಖಿನವರೆಗೆ ನಡೆದ ಅಂತರರಾಷ್ಟ್ರೀಯ ಮಿದುಳು ಜಾಗೃತಿ ಸಪ್ತಾಹದ ಅಂಗವಾಗಿ, ಆರೋಗ್ಯ ಮತ್ತು ಅನಾರೋಗ್ಯದಲ್ಲಿ ಮಿದುಳಿನ ರಚನೆ ಮತ್ತು ಕಾರ್ಯ ವಿಧಾನ  ಈ ಪುಸ್ತಕವನ್ನು ಪ್ರಕಟಿಸಲಾಗಿದೆ. ಈ ಪ್ರಕಟಣೆಗೆ ನೆರವಾದ ನವದೆಹಲಿಯ ರಾಷ್ಟ್ರೀಯ ಮಿದುಳು ಸಂಶೋಧನಾ ಕೇಂದ್ರದ ನಿರ್ದೇಶಕರಾದ ಡಾ|| ವಿಜಯಲಕ್ಷ್ಮಿ ರವೀಂದ್ರನಾಥ್, ನಿಮ್ಹಾನ್ಸ್‌ನ ಮನೋವೈದ್ಯ ವಿಭಾಗದ ಮುಖ್ಯಸ್ಥ ಡಾ|| ಎನ್. ಜಾನಕೀರಾಮಯ್ಯ, ಸಹೋದ್ಯೋಗಿಗಳಾದ ಡಾ|| ಸುಮಂತ್‌ ಖನ್ನ ಡಾ|| ವೈ ಜನಾರ್ಧನ ರೆಡ್ಡಿ, ನಿಮ್ಹಾನ್ಸ್‌ನ ನಿರ್ದೇಶಕರಾದ ಡಾ|| ಎಂ. ಗೌರೀದೇವಿ, ಅಂದವಾಗಿ ಮುದ್ರಿಸಿರುವ ಶ್ರೀ ಸಿ. ರಮೇಶ್‌ ಬಾಬು ಈ ಎಲ್ಲರಿಗೆ ನನ್ನ ನಮನಗಳು.

ಡಾ|| ಸಿ. ಆರ್. ಚಂದ್ರಶೇಖರ್
ನಿಮ್ಹಾನ್ಸ್‌, ಬೆಂಗಳೂರು
ಮಾರ್ಚ್‌ ೨೦೦೧