ಪುಟ್ಟ ಹುಡುಗಿ ಸ್ತ್ರೀಯಾಗಿ ಪರಿವರ್ತನೆಗೊಳ್ಳುವುದು, ಪುಟ್ಟ ಹುಡುಗ ಪುರುಷನಾಗಿ ವಿಕಾಸಗೊಳ್ಳುವುದು, ಹರೆಯದ ಅವಧಿಯಲ್ಲಿ ಹರೆಯ ಕಾಲಿಡುವವರೆಗೆ ಹುಡುಗ ಹುಡುಗಿಯರಲ್ಲಿ ಲಿಂಗ ಭಿನ್ನವಾಗಿರುವುದನ್ನು ಬಿಟ್ಟರೆ ಬೇರೆ ಶಾರೀರಕ ಭಿನ್ನತೆ ಇರುವುದಿಲ್ಲ. ಈಗ ೧೦ ಅಥವಾ ೧೨ ವರ್ಷಕ್ಕೆ ಹುಡುಗ ಹುಡುಗಿಯರು ‘ದೊಡ್ಡವರಾಗುತ್ತಾರೆ ಟೆಸ್ಪೊಸ್ಟೀರಾನ್, ಈಸ್ಟ್ರೋಜನ್, ಪ್ರೋಜೆಸ್ಟರಾನ್ ಲೈಂಗಿಕ ಹಾರ್ಮೋನುಗಳ ಸ್ರವಿಕೆಯಿಂದ ಈ ಕೆಳಕಂಡ ಬದಲಾವಣೆಗಳು ಅವರಲ್ಲಿ ಕಾಣಿಸಿಕೊಳ್ಳುತ್ತವೆ.

ಹುಡುಗ

 • ವೀರ್ಯೋತ್ಪತ್ತಿ ಮತ್ತು ವೀರ್ಯಸ್ಖಲನ ಪ್ರಾರಂಭ
 • ಗಡ್ಡ, ಮೀಸೆ, ಮೈಯಲ್ಲಿ ರೋಮಗಳು, ಕಂಕಳು ಜನನಾಂಗದ ಸುತ್ತ ರೋಮಗಳು.
 • ಧ್ವನಿ ಒಡೆಯುತ್ತದೆ
 • ಸ್ನಾಯುಗಳು ಬೆಳೆದು ಗಟ್ಟಿಮುಟ್ಟಿಯಾಗುತ್ತವೆ
 • ಜನನಾಂಗಗಳು, ಶಿಶ್ನ, ವೃಷಣಗಳು ದೊಡ್ಡವಾಗುತ್ತವೆ. ಈ ಭಾಗ ಹೆಚ್ಚು ಸಂವೇದನಾ ಶೀಲವಾಗುತ್ತದೆ. ಶಿಶ್ನ ಆಗಾಗ ನಿಮಿರುತ್ತದೆ.

 

ಹುಡುಗಿ

 • ಋತುಸ್ರಾವ-ಋತು ಚಕ್ರ   ಪ್ರಾರಂಭ
 • ಕಂಕಳು, ಜನನಾಂಗದ ಸುತ್ತ ರೋಮಗಳು
 • ಸ್ತನಗಳು/ಪುಷ್ಟ ಬೆಳೆಯುತ್ತವೆ
 • ಕೊಬ್ಬಿನ ಶೇಖರಣ ನಿರ್ಧಿಷ್ಟ ಜಾಗಗಳಲ್ಲಿ ನಡೆದು, ದೇಹ ಸ್ತ್ರೀ ರೂಪವನ್ನು ಪಡೆಯುತ್ತದೆ.
 • ಜನನಾಂಗಗಳು, ಯೋನಿ ತುಟಿಗಳು, ಗರ್ಭಕೋಶ, ಅಂಡಾಶಯ ದೊಡ್ಡವಾಗುತ್ತವೆ. ಸಂವೇದನಾ ಶೀಲವಾಗುತ್ತದೆ.

ಮನೋಲೈಂಗಿಕ ಬೆಳವಣಿಗೆ:

ಹುಡುಗ-ಹುಡುಗಿಯ ಮನಸ್ಸಿನಲ್ಲಿ ಪ್ರೀತಿ, ಪ್ರೇಮ, ಸಂಗಾತಿ, ಲೈಂಗಿಕ ಆಸೆ, ಕ್ರಿಯೆ ಬಗ್ಗೆ ಆಸಕ್ತಿ ಮೂಡತೊಡಗುತ್ತದೆ. ಅವರು ಪರಸ್ಪರ ಮಾತಾಡಲು, ಸ್ನೇಹ, ಪ್ರೀತಿಯನ್ನು ವ್ಯಕ್ತಪಡಿಸಲು ಒಬ್ಬ ವ್ಯಕ್ತಿಯನ್ನು ಆಯ್ದುಕೊಂಡು, ಜೀವನ ಸಂಗಾತಿಯನ್ನು ಕಾಣಲು ತವಕಿಸುತ್ತಾರೆ. ಪರಸ್ಪರ ಮುಟ್ಟಲು, ಆಲಂಗಿಸಿಕೊಳ್ಳಲು, ಮುತ್ತು ಕೊಡಲು, ಲೈಂಗಿಕ ಚಟುವಟಿಕೆ ನಡೆಸಲು, ಕನಸು ಕಾಣ ತೊಡಗುತ್ತಾರೆ. ಲೈಂಗಿಕತೆಯ ಬಗ್ಗೆ ಮಾತನಾಡಲು, ಲೈಂಗಿಕ ಸಾಹಿತ್ಯ ಓದಲು, ಚಿತ್ರಗಳನ್ನು ನೋಡಲು ಇಷ್ಟಪಡುತ್ತಾರೆ. ಕೆಲವರು ಸಾಹಸ ಮಾಡಿ ಲೈಂಗಿಕ ಚಟುವಟಿಕೆಯಲ್ಲಿ ತೊಡಗಿಯೂಬಿಡುತ್ತಾರೆ.

ಲೈಂಗಿಕ ಆಸೆ-ಅಭಿವ್ಯಕ್ತಿ:

ಹರೆಯದವರು ಅನೇಕ ರೀತಿಗಳಲ್ಲಿ ತಮ್ಮ ಲೈಂಗಿಕ ಆಸೆ-ಕುತೂಹಲ-ಬಯಕೆಗಳನ್ನು ವ್ಯಕ್ತಪಡಿಸುತ್ತಾರೆ. ಅವರಿಗೆ ಈ ವಿಚಾರಗಳ ಬಗ್ಗೆ  ಸರಿಯಾದ ವೈಜ್ಞಾನಿಕ ಮಾಹಿತಿ ಇಲ್ಲದೇ ಇರುವುದರಿಂದ, ಅನೇಕ ತಪ್ಪು, ಅವಾಸ್ತವಿಕ ಹಾಗೂ ಉತ್ಪ್ರೇಕ್ಷಿತ ನಂಬಿಕೆಗಳನ್ನು ಬೆಳೆಸಿಕೊಳ್ಳುತ್ತಾರೆ. ಲೈಂಗಿಕತೆ ಬಗ್ಗೆ ತಮ್ಮದೇ ಆದ ಭಯ, ನಾಚಿಕೆ, ಮುಜುಗರ, ಕುತೂಹಲ, ರೋಚಕತೆಯನ್ನು ಬೆಳೆಸಿಕೊಳ್ಳುತ್ತಾರೆ. ತಮ್ಮ-ತಮ್ಮಲ್ಲಿ ಈ ಬಗ್ಗೆ ಮಾತಾಡಿಕೊಂಡರೂ ತಂದೆ-ತಾಯಿಯೊಡನೆ, ಹಿರಿಯರೊಡನೆ, ಶಿಕ್ಷಕರ ಜೊತೆ, ವೈದ್ಯರ ಜೊತೆ ಹೇಳಿಕೊಳ್ಳಲು ಹಿಂಜರಿಯುತ್ತಾರೆ. ಇವುಗಳಿಂದ ಹಾಗೂ ತಮ್ಮ ಲೈಂಗಿಕ ಅಭಿವ್ಯಕ್ತಿ ಚಟುವಟಿಕೆಗಳಿಂದ ಭಯ ತಪ್ಪಿತಸ್ಥ ಭಾವನೆ, ನಾಚಿಕೆ, ಕೀಳರಿಮೆಗಳಿಂದ ಬಳಲುತ್ತಾರೆ. ಕೆಲವರು ಲೈಂಗಿಕ ಅಪರಾಧಗಳನ್ನು ಮಾಡಿ ಸಂಕಷ್ಟಕ್ಕೆ ಸಿಕ್ಕಿಹಾಕಿಕೊಳ್ಳುತ್ತಾರೆ. ಲೈಂಗಿಕ ರೋಗಗಳನ್ನು ಅಂಟಿಸಿಕೊಳ್ಳುತ್ತಾರೆ. ಈ ಲೈಂಗಿಕ ಅಭಿವ್ಯಕ್ತಿ, ಚಟುವಟಿಕೆಗಳು ಯಾವುವು, ಯಾವುದು ಸ್ವೀಕಾರಾರ್ಹ ಯಾವುದು ಅಲ್ಲ, ಯಾವುದು ಸಹಜ ಯಾವುದು ಸಹಜವಲ್ಲ ಎಂಬುದನ್ನು ಸ್ವಲ್ಪ ಗಮನಿಸೋಣ.

ಲೈಂಗಿಕ ಕ್ರಿಯೆ ಬಗ್ಗೆ ತಿಳಿದುಕೊಳ್ಳಲು ಕುತೂಹಲ:

ಇದು ಪ್ರತಿಯೊಬ್ಬ ಆರೋಗ್ಯವಂತ ಹುಡುಗ-ಹುಡುಗಿಯಲ್ಲಿ ಕಂಡು ಬರುತ್ತದೆ. ಟಿವಿ, ಸಿನೆಮಾ, ನೆರೆಹೊರೆಯಲ್ಲಿ ಕಾಣುವ ಯುವದಂಪತಿಗಳನ್ನು ಅಥವಾ ಪ್ರೇಮಿಗಳನ್ನು ನೋಡುತ್ತಾರೆ. ಪ್ರೀತಿ, ಪ್ರೇಮ, ಪ್ರಣಯದ ಬಗ್ಗೆ ಕೇಳುತ್ತಾರೆ, ನೋಡುತ್ತಾರೆ, ಕಲ್ಪನೆಗಳನ್ನು ಮಾಡುತ್ತಾರೆ. ಲೈಂಗಿಕ ಸಾಹಿತ್ಯ, ಸ್ತ್ರೀಪುರುಷರ ಆಕರ್ಶಕ ಚಿತ್ರಗಳನ್ನು ನೋಡುವುದು, ಪ್ರಣಯಭರಿತ ಕಾದಂಬರಿ, ಸಿನೇಮಾಗಳ ವೀಕ್ಷಣೆ, ಬ್ಲ್ಯೂಫಿಲ್ಮ್‌ಗಳ ವೀಕ್ಷಣೆ. ಇಂಟರ್‌ನೆಟ್‌ನಲ್ಲಿ ಅಶ್ಲೀಲ ಚಿತ್ರಗಳನ್ನು ನೋಡುವುದು, ತಮ್ಮತಮ್ಮಲ್ಲೇ ಲೈಂಗಿಕ ಜೋಕುಗಳನ್ನು ಮಾಡುವುದು ಇತ್ಯಾದಿ. ಅವರ ಈ ಕುತೂಹಲವನ್ನು ತಣಿಸಲು, ಲೈಂಗಿಕತೆ ಬಗ್ಗೆ ಹೆಚ್ಚು ವಾಸ್ತವಿಕವಾದ, ವೈಜ್ಞಾನಿಕವಾದ ಮಾಹಿತಿ ನೀಡುವ ಸಾಹಿತ್ಯ, ದೃಶ್ಯಮಾದ್ಯಮಗಳಲ್ಲಿ ಹರೆಯದವರಿಗೆ ಒದಗಿಸಕೊಡಬೇಕು. ಅವರ ಪ್ರಶ್ನೆ ಕುತೂಹಲಗಳಿಗೆ ಆತ್ಮೀಯವಾಗಿ ಉತ್ತರಿಸುವ  ವೈದ್ಯರು ಅಥವಾ ತಿಳಿವಳಿಕೆಯುಳ್ಳವರು ಬೇಕು. ಡಾ.ಅನುಪಮ ನಿರಂಜನರ ‘ಕೇಳು ಕಿಶೋರಿ, ಡಾ. ಸಿ.ಆರ್.ಚಂದ್ರಶೇಖರ್ ಅವರ ‘ಲೈಂಗಿಕ ಅರಿವು  ೧೦೬ ಪ್ರಶ್ನೆಗಳು ಇಂತಹ ಪುಸ್ತಕಗಳನ್ನು ಹರೆಯದವರಿಗೆ ನೀಡಬೇಕು.

ಹಸ್ತಮೈಥುನ, ಸ್ವಪ್ರಚೋದನೆ:

ಶೇಕಡಾ ೯೯ ರಷ್ಟು ಹುಡುಗರು ಮತ್ತು ಶೇಕಡಾ ೩೦ ರಷ್ಟು ಹುಡುಗಿಯರು ತಮ್ಮ ಜನನಾಂಗಗಳನ್ನು ಸ್ಪರ್ಶಿಸಿ, ಸುಖಪಡುವ ಹಸ್ತ ಮೈಥುನ ಕ್ರಿಯೆಯಲ್ಲಿ ತೊಡಗುತ್ತಾರೆ. ಮಲಗಿದಾಗ, ಕೊಠಡಿಯಲ್ಲಿ ಒಂಟಿಯಾಗಿದ್ದಾಗ, ಸ್ನಾನ ಮಾಡುವಾಗ ಇದು ಸಾಮಾನ್ಯ. ಜೊತೆಗೆ ತಮಗೆ ಇಷ್ಟ ಬಂದ ವ್ಯಕ್ತಿಯನ್ನು ಕಲ್ಪಿಸಿಕೊಂಡು ಆ ವ್ಯಕ್ತಿಯೊಂದಿಗೆ ಲೈಂಗಿಕ ಚಟುವಟಿಕೆ ನಡೆಸಿದಂತೆ ಕನಸು ಕಾಣುತ್ತಾರೆ. ಇದು ಪ್ರತಿದಿನ ನಡೆಯಬಹುದು. ಅಥವಾ ವಾರಕ್ಕೆ ಒಂದು, ಎರಡು, ಮೂರು ಸಲ ನಡೆಯಬಹುದು. ಈ ಕ್ರಿಯೆ ಅತ್ಯಂತ ಸ್ವಾಭಾವಿಕ. ಸರಳ, ಸುರಕ್ಷಿತ ಹಾಗೂ ಮನೋಲೈಂಗಿಕ ಬೆಳವಣಿಗೆಯಲ್ಲಿ ಸಹಜವಾದ ಹಂತ ಎಂದು ಮನಶಾಸ್ತ್ರಜ್ಞರು ಮತ್ತು ಲೈಂಗಿಕ ತಜ್ಞರು ಅಭಿಪ್ರಾಯಪಡುತ್ತಾರೆ. ದುರದೃಷ್ಟವಶಾತ್ ನಮ್ಮ ಸಮಾಜದಲ್ಲಿ ಹಸ್ತಮೈಥುನದ ಬಗ್ಗೆ ಬಹು ಅಪಾಯಕಾರಿಯಾದ ಭಯ, ತಪ್ಪಿತಸ್ಥ ಭಾವನೆಯನ್ನುಂಟುಮಾಡುವ ಹತ್ತಾರು ಅವೈಜ್ಞಾನಿಕ ನಂಬಿಕೆ, ಧೋರಣೆಗಳಿವೆ. ಮದುವೆಯಾಗಿ ಲೈಂಗಿಕ ಚಟುವಟಿಕೆ ಮಾಡಲು, ಸಂಗಾತಿ ದೊರೆಯುವವರೆಗೆ, ಒಂದು ಸರಳ-ಸುರಕ್ಷಿತ ಕ್ರಿಯೆ ಎಂಬುದನ್ನು ನಮ್ಮ ಹದಿಹರೆಯದವರಿಗೆ ಮನನ ಮಾಡಿಕೊಡಬೇಕು. ಅದರಿಂದ ಈ ಕೆಳಕಾಣುವ ಯಾವುದೇ ದುಷ್ಪರಿಣಾಮ ಆಗುವುದಿಲ್ಲ ಎಂಬುದನ್ನು ತಿಳಿಸಿಹೇಳಬೇಕು.

 • ೧. ಹಸ್ತಮೈಥುನದಿಂದ ಜನನಾಂಗ ಚಿಕ್ಕದಾಗುವುದಿಲ್ಲ, ಅದು ದುರ್ಬಲವಾಗುವುದಿಲ್ಲ, ಲೈಂಗಿಕ ದುರ್ಬಲತೆ ಬರುವುದಿಲ್ಲ.
 • ೨. ಹಸ್ತಮೈಥುನದಿಂದ ಶರೀರದ ಶಕ್ತಿ ಕಡಿಮೆಯಾಗುವುದಿಲ್ಲ, ಶರೀರ ಸಣ್ಣಗಾಗುವುದಿಲ್ಲ. ಮೊಡವೆಗಳು ಹೆಚ್ಚಾಗುವುದಿಲ್ಲ. ಕಣ್ಣಿನ ಕಾಂತಿ ಕಡಿಮೆಯಾಗುವುದಿಲ್ಲ, ಲವಲವಿಕೆ ಕಡಿಮೆಯಾಗುವುದಿಲ್ಲ.

ಕೆಲವು ಹರೆಯದವರು ತಾವು ಹಸ್ತ ಮೈಥುನದ ಚಟಕ್ಕೆ ಒಳಗಾಗಿದ್ದೇವೆ ಎಂದು ಹೇಳುತ್ತಾರೆ. ದಿನಕ್ಕೆ ಎರಡು, ಮೂರು ಸಲ ಮಾಡಿಕೊಳ್ಳುತ್ತಾರೆ. ಮಾಡದೇ ಇರಲು ಸಾಧ್ಯವೇ ಇಲ್ಲ ಎಂದು ಹೇಳುತ್ತಾರೆ.  ಇದರ ಅರ್ಥ ಅವರ ಮನಸ್ಸು ಯಾವಾಗಲೂ ಲೈಂಗಿಕತೆ ಬಗ್ಗೆಯೇ ಯೋಚಿಸಿ, ಅಥವಾ ಅದನ್ನೇ ಯಾವಾಗಲೂ ಮೆಲುಕು ಹಾಕುತ್ತಾ ಪ್ರಚೋದನೆಗೆ ಒಳಗಾಗುತ್ತದೆ ಎಂದರ್ಥ. ಅಂಥವರು, ಇದನ್ನು ತಪ್ಪಿಸಲು ಮನಸ್ಸನ್ನು ಇತರ ವಿಷಯ/ ಚಟುವಟಿಕೆ/ ಆಸಕ್ತಿಗಳತ್ತ ಹರಿಸಬೇಕು. ಸಂಗೀತಾಭ್ಯಾಸ, ಕ್ರೀಡೆ, ವಿವಿಧ ಸಾಂಸ್ಕೃತಿಕ ಚಟುವಟಿಕೆಗಳತ್ತ ಗಮನ ಕೊಡಬೇಕು. ಲೈಂಗಿಕ ಸಾಹಿತ್ಯ, ಚಿತ್ರಗಳನ್ನು  ನೋಡಬಾರದು, ಲೈಂಗಿಕ ಪ್ರಚೋದನೆಗಳನ್ನು ನಿವಾರಿಸಬೇಕು.

ಹರೆಯದ ಪ್ರೇಮ (Teenage love)

ಅನೇಕ ಹದಿಹರೆಯದವರು ಪ್ರೀತಿ, ಪ್ರೇಮದ ಬಲೆಯಲ್ಲಿ ಬೀಳುತ್ತಾರೆ. ತಮ್ಮ ಸುತ್ತಮುತ್ತಲಿನ ವ್ಯಕ್ತಿಗಳನ್ನೋ, ಅಪರಿಚಿತರನ್ನೋ ಆಯ್ಕೆ ಮಾಡಿಕೊಂಡು, ಪ್ರೀತಿಸುತ್ತಾರೆ. ಆರಾಧಿಸುತ್ತಾರೆ. ಅವರನ್ನೇ ಜೀವನ ಸಂಗಾತಿಯನ್ನಾಗಿ ಮಾಡಿಕೊಳ್ಳಬೇಕೆಂದು ಹಾತೊರೆಯುತ್ತಾರೆ. ಆ ವ್ಯಕ್ತಿಯನ್ನು ಒಂದು ದಿನ ನೋಡದಿದ್ದರೆ, ಏನೋ ಕಳೆದುಕೊಂಡವರಂತೆ ವರ್ತಿಸುತ್ತಾರೆ. ಆ ವ್ಯಕ್ತಿ ತಮ್ಮ ಬಗ್ಗೆ ಗಮನ ಕೊಡದಿದ್ದರೆ ಉದಾಸೀನ ಮಾಡಿದರೆ ನೊಂದುಕೊಳ್ಳುತ್ತಾರೆ. ಆ ವ್ಯಕ್ತಿ ಮತ್ತೊಬ್ಬರೊಂದಿಗೆ ಹೆಚ್ಚು ಪ್ರೀತಿ ಸಲಿಗೆಯಿಂದ ಇದ್ದರೆ ವಿಪರೀತ ಮತ್ಸರಕ್ಕೆ ಒಳಗಾಗುತ್ತಾರೆ.

ಕೆಲವರಲ್ಲಿ ಇದೊಂದು ಒನ್ ವೇ ಲವ್ – ಏಕಮುಖ ಪ್ರೀತಿಯಾಗಿರುತ್ತದೆ. ಈ ವ್ಯಕ್ತಿಯು ಪ್ರೀತಿಸುವ ಆವ್ಯಕ್ತಿಗೆ, ಈ ಪ್ರೀತಿಯ ಅರಿವೇ ಇರುವುದಿಲ್ಲ. ಈ ವ್ಯಕ್ತಿ ಮನಸ್ಸಿನಲ್ಲೇ ಪ್ರೀತಿಸುವ, ಮದುವೆಯಾಗುವ ಮಂಡಿಗೆಯನ್ನು ತಿನ್ನುತ್ತಿರುತ್ತಾನೆ/ಳೆ. ಆ ವ್ಯಕ್ತಿಯ ಬಳಿಗೆ ಹೋಗಿ ತನ್ನ ಭಾವನೆಗಳನ್ನು ಹೇಳಿಕೊಳ್ಳಲು, ನೀನು ನನ್ನನ್ನು ಪ್ರೀತಿಸುತ್ತೀಯಾ, ಮದುವೆಯಾಗುತ್ತೀಯಾ ಎಂದು ಕೇಳಲು ಸಂಕೋಚ, ಭಯ, ಹಿಂಜರಿಕೆಯನ್ನು ಅನುಭವಿಸುತ್ತಿರುತ್ತಾರೆ. ಇದನ್ನು INFATUATION (ಒಮ್ಮುಖ ಪ್ರೀತಿ) ಎಂದೂ ಕರೆಯುತ್ತಾರೆ. ಇದು ಕೆಲವು ಪ್ರಕರಣಗಳಲ್ಲಿ, ಹರೆಯದ ವ್ಯಕ್ತಿಯು ಆಯ್ಕೆಮಾಡಿಕೊಳ್ಳುವ ವ್ಯಕ್ತಿ ಪ್ರಸಿದ್ಧ ಹಾಗೂ ಅತಿ ಗಣ್ಯ ವ್ಯಕ್ತಿಯಾಗಬಹುದು. ಉದಾ ಸಿನಿಮಾ ಹೀರೋ ಅಥವಾ ಹೀರೋಯಿನ್, ಕ್ರೀಡಾ ತಾರೆ, ರಾಜಕೀಯ ವ್ಯಕ್ತಿ, ವಿಜ್ಞಾನಿ, ಉದ್ಯಮಿ ಇತ್ಯಾದಿ, ಹುಡುಗಿಯೊಬ್ಬಳಿಂದ ಈ ರೀತಿ ಪತ್ರ ನನಗೆ ಬಂದಿತ್ತು.

“ಡಾಕ್ಟರೇ, ನೀವು ದೊಡ್ಡ ವೈದ್ಯರು, ಸಮಾಜದಲ್ಲಿ ದೊಡ್ಡ ಹೆಸರು ಮಾಡಿದ್ದೀರಿ, ನಿಮ್ಮ ಮಾತನ್ನು ಎಲ್ಲರೂ ಕೇಳುತ್ತಾರೆ. ನಾನೊಬ್ಬ ಅನಾಮಧೇಯ ಹುಡುಗಿ. ಲಕ್ಷಣವಾಗಿದ್ದೇನೆ. ನನ್ನ ವಯಸ್ಸು ೧೬ ವರ್ಷ ೩ ತಿಂಗಳು. ನಾನು ಖ್ಯಾತ ಕ್ರಿಕೆಟ್ ತಾರೆ ಅನಿಲ್ ಕುಂಬ್ಳೆಯನ್ನು ಪ್ರೀತಿಸುತ್ತಿದ್ದೇನೆ. ಆತನಿಗೆ ಮದುವೆಯಾಗಿದೆ ಎನ್ನುವುದೂ ಗೊತ್ತು. ನಾನು ಆತನ ಹೆಂಡತಿಯಾಗಿ ಬದುಕಬೇಕು. ಅವನಿಂದ ಒಂದು ಮಗುವನ್ನು ಪಡೆದು, ಅವನಿಗಿಂತ ದೊಡ್ಡ ಕ್ರಿಕೆಟ್ ತಾರೆಯನ್ನಾಗಿ ಮಾಡಬೇಕೆಂಬ ಹೆಬ್ಬಯಕೆ ನನ್ನದು. ನಾನು ಮೂರು-ನಾಲ್ಕು ಪತ್ರ ಬರೆದೆ. ಅನಿಲ್ ಉತ್ತರ ಕೊಟ್ಟಿಲ್ಲ. ಬಹುಷಃ ಬಹಳ ಬಿಜಿ ಇರಬೇಕು ಅಥವಾ ಆತನ ಸೆಕ್ರಟರಿ/ಹೆಂಡತಿ ನನ್ನ ಪತ್ರವನ್ನು ನಾಶ ಮಾಡಿರಬೇಕು. ಎಷ್ಟಾದರೂ ಹೆಣ್ಣಿಗೆ ಮತ್ಸರ ಜಾಸ್ತಿ ಅಲ್ಲವೇ. ನೀವು ಅನಿಲ್ ಕುಂಬ್ಳೆ ಅವರೊಂದಿಗೆ ಮಾತನಾಡಿ, ನಾನು ಅವನಿಗೋಸ್ಕರ ಕಾಯುತ್ತಿರುವ ವಿಚಾರವನ್ನು ತಿಳಿಸಬೇಕು. ಹೀಗೆ ಮಾಡಿದರೆ ನಿಮಗೆ ಪುಣ್ಯ ಬರುತ್ತದೆ. ಇಲ್ಲದಿದ್ದರೆ ನನ್ನಂತಹ ಬಡಹುಡುಗಿಯ ಆತ್ಮಹತ್ಯೆಗೆ ಕಾರಣರಾಗುತ್ತೀರಾ, ಬೇಗ ಉತ್ತರ ಬರೆಯಿರಿ. ಇಂತೀ ತಮ್ಮ ವಿಶ್ವಾಸಿ ‘ಚಿತ್ರಾ

ಇನ್ನೊಂದು ಪತ್ರವನ್ನು ನೋಡಿ

“ಡಾಕ್ಟರ್ ಸಾಹೇಬರಿಗೆ ವಂದನೆಗಳು.

ನಾನು ನನ್ನ ಕ್ಲಾಸ್‌ಮೇಟ್ ಮೀನಾಳನ್ನು ಮನಸಾರೆ ಪ್ರೀತಿಸುತ್ತಿದ್ದೇನೆ. ಅವಳನ್ನು ನೋಡದಿದ್ದರೆ ಅವಳ ಮುಗುಳ್ನಗೆಯನ್ನು ಕಾಣದಿದ್ದರೆ ಬದುಕಿರುವುದೇ ಬೇಡ ಎನಿಸುತ್ತದೆ. ದೇವರು ಆಕೆಯನ್ನು ಅದೆಷ್ಟು ಸುಂದರವಾಗಿ ಸೃಷ್ಟಿಸಿದ್ದಾನೆ. ನಿತ್ಯ ಮನಸ್ಸಿನಲ್ಲಿ ಆಕೆಯನ್ನು ಆರಾಧಿಸುತ್ತೇನೆ. ಒಮ್ಮೊಮ್ಮೆ ಅವಳ ದೃಷ್ಟಿ ನನ್ನ ಮೇಲೆ ಬೀಳುತ್ತದೆ. ಆ ನೋಟದಲ್ಲಿ ಎಂತಹಾ ಮಿಂಚಿರುತ್ತದೆ ಎಂಬುದು ನನಗಷ್ಟೇ ಗೊತ್ತು. ಆದರೆ ಅವಳ ಮನಸ್ಸಿನಲ್ಲಿ ನನ್ನ ಬಗ್ಗೆ ಏನು ಭಾವನೆಗಳಿವೆ ಎಂಬುದು ನನಗೆ ಗೊತ್ತಿಲ್ಲ. ಒಮ್ಮೆ ನೋಟ್ಸ್ ಕೇಳಿದೆ ಕೊಟ್ಟಳು. ಇನ್ನೊಮ್ಮೆ ಕೊಡಲಿಲ್ಲ. ಒಮ್ಮೆ ಕೆಫಟೇರಿಯಾಗೆ ಕಾಫಿಗೆ ಕರೆದೆ ಬಂದಳು. ಮತ್ತೊಮ್ಮೆ  ಬರಲಿಲ್ಲ. ನೀನು ನನ್ನನ್ನು ಪ್ರೀತಿಸುತ್ತೀಯಾ ಎಂದು ಕೇಳಿದರೆ ಅವಳು ಹೇಗೆ ರಿಯಾಕ್ಟ್ ಮಾಡಬಹುದು? ಕೋಪಿಸಿಕೊಂಡು ‘ಶಟಪ್ ಎನ್ನಬಹುದೇ ಕಾಲಲ್ಲಿರುವ ಚಪ್ಪಲಿಯನ್ನು ತೆಗೆದುಕೊಂಡು ನನ್ನತ್ತ ಒಗೆಯಬಹುದೇ?, ಬೇಡ ಸಾರ್, ಯೋಚಿಸುತ್ತಾ ಹೋದರೆ ದಿಗಿಲಾಗುತ್ತದೆ. ನೀವು ಮನೋವೈದ್ಯರು, ಮನಸ್ಸನ್ನು ಅಧ್ಯಯನ ಮಾಡಿದವರು ಅವಳ ಮನಸ್ಸಿನಲ್ಲಿ ನನ್ನ ಬಗ್ಗೆ ‘ಪ್ರೀತಿ ಇದೆಯಾ ಎಂಬುದನ್ನು ಪತ್ತೆ ಮಾಡುವುದಕ್ಕೆ ಮಾರ್ಗ ತೋರಿಸಿ. ಹಿಪ್ನೋಟೈಸ್ ಮಾಡಿ ಮನಸಸ್ಸಿನಲ್ಲಿರುವುದನ್ನು ತಿಳಿಯಬಹುದಂತೆ. ಎಲ್ಲಿ ಹಿಪ್ನೋಟೈಸ್ ಮಾಡುವುದನ್ನು ಕಲಿಸುತ್ತಾರೆ ಹೇಳಿ ಸರ್. ನೀವೇ ಕಲಿಸುವುದಾದರೆ ನಿಮ್ಮಲ್ಲಿಗೆ ಯಾವೊತ್ತು ಬರಲಿ ಹೇಳಿ, ನನ್ನ ಕೈ ಬಿಡಬೇಡಿ ಸರ್.

ಇತೀ ತಮ್ಮ ವಿಧೇಯ ‘ರಾಮಾನುಜ

ಲೈಂಗಿಕ ಸುಖ ಸವಿಯುವ ಚಪಲ

‘ನಾವಿಬ್ಬರೂ ಪರಸ್ಪರ ಪ್ರೀತಿಸುತ್ತಿದ್ದೇವೆ. ಕಳೆದ ಒಂದು ವರ್ಷದಿಂದ ನಮ್ಮ ಪ್ರೀತಿಯಲ್ಲಿ ಯಾವ ಹಿನ್ನಡೆಯೂ ಉಂಟಾಗಿಲ್ಲ. ನಮ್ಮದು ಬೇರೆ ಬೇರೆ ಜಾತಿ ವರ್ಗ ಮನೆಯವರು ನಮ್ಮ ಮದುವೆಗೆ ಒಪ್ಪುವ ಸಾಧ್ಯತೆ ಇಲ್ಲ. ನಮ್ಮಿಬ್ಬರಲ್ಲಿ ಯಾರಾದರೊಬ್ಬರು ಬೇಗ ಓದು ಮುಗಿಸಿ, ಉದ್ಯೋಗ ಮಾಡಿ, ಹಣ ಸಂಪಾದಿಸಲು ನಿಶ್ಚಯಿಸಿದ್ದೇವೆ. ಸ್ನೇಹಿತರ ಸಹಾಯದಿಂದ ಶಾಸ್ತ್ರೋಸ್ತ್ರವಾಗಿ ಅಥವಾ ರಿಜಿಸ್ಟ್ಟರ್ ಮದುವೆಮಾಡಿಕೊಳ್ಳುತ್ತೇವೆ. ಆದರೆ ಇತ್ತೀಚೆಗೆ ನನಗೊಂದು ದ್ವಂದ್ವ ಶುರುವಾಗಿದೆ. ಸತೀಶ್ ನಾವು ಏಕಾಂತದಲ್ಲಿದ್ದಾಗ, ನನ್ನ ಎದೆಯನ್ನೇ ಆಸೆಯಿಂದ ನೋಡುತ್ತಾನೆ, ಮುತ್ತಿಡುವಾಗ ಅವನ ಕೈ ನನ್ನ ಎದೆಯ ಮೇಲೆ ಆಡುತ್ತಿರುತ್ತದೆ. ಬೇಡ ಎಂದು ಅವನ ಕೈಯನ್ನು ದೂಡುತ್ತೇನೆ. ಅವನ ಮುಖದಲ್ಲಿ ನಿರಾಶೆ ಮಡುಗಟ್ಟುತ್ತದೆ. ನಾವಿಬ್ಬರೂ ಮದುವೆಯಾಗಬೇಕೆಂದು ತೀರ್ಮಾನ ಮಾಡಿದ್ದೇವೆ. ನನ್ನಲ್ಲಿ ನಿನಗೆ ನಂಬಿಕೆ ಇಲ್ಲವೇ. ಬಾ, ಒಟ್ಟಿಗೆ ಮಲಗಿ ಸುಖಪಡೆಯೋಣಾ ಎನ್ನುತ್ತಾನೆ. ಮದುವೆಗೆ ಮೊದಲು ಇದೆಲ್ಲ ಬೇಡ ಎಂದರೆ ಮುಖ ಚಿಕ್ಕದು ಮಾಡುತ್ತಾನೆ. ನಾವು ತಬ್ಬಿಕೊಂಡಾಗ, ಅವನ ಜನನಾಂಗ ಉದ್ರೇಕಗೊಂಡಿರುವುದು ನನ್ನ ಗಮನಕ್ಕೆ ಬರುತ್ತದೆ. ವಿವಾಹ ಪೂರ್ವ ಲೈಂಗಿಕ ಸಂಪರ್ಕ ಅಪಾಯಕಾರಿ ಎಂದು ನನ್ನ ಮನಸ್ಸು ಹೇಳುತ್ತದೆ ಅವನು ಕೇಳುವುದಿಲ್ಲ ಏನು ಮಾಡಲಿ ಎಂದಳು ಕವಿತ.

‘ನಾವು ಆಗಾಗ ಏಕಾಂತದಲ್ಲಿ ಸೇರುತ್ತೇವೆ. ಪಾರ್ಕು, ಸಿನೇಮಾಥಿಯೇಟರ್, ಊರ ಹೊರಗಿನ ತೋಪು ಅಥವಾ ನಮ್ಮ-ನಮ್ಮ ಮನೆಂiಲ್ಲೇ, ಮುತ್ತಿಡುವುದು, ಬಟ್ಟೆ ಸರಿಸಿ ನಗ್ನ ದೇಹವನ್ನು ಮುಟ್ಟಿ ಸವರುವುದು, ಜನನಾಂಗವನ್ನು ಪರಸ್ಪರ ಸ್ಪರ್ಶಿಸುವುದು ಇತ್ಯಾದಿ ಮಾಡಿ ಸಂತೋಷ ಪಡುತ್ತೇವೆ. ನಾವು ಮಾಡುತ್ತಿರುವುದು ತಪ್ಪು ಎಂದು ಒಮ್ಮೆ ಅನಿಸಿದರೆ ಮತ್ತೊಮ್ಮೆ ಈ ಸುಖದಿಂದ ಏಕೆ ವಂಚಿತರಾಗಬೇಕು, ಸಂಭೋಗಮಾಡದಿರುವುದರಿಂದ ಗರ್ಭ ಧಾರಣೆಯ ಭಯವಿಲ್ಲ. ಆದರೆ ನಾವು ಈ ರೀತಿ ಸರಸಸಲ್ಲಾಪವಾಡುವುದನ್ನು ಯಾರಾದರೂ ನೋಡಿದರೇನು ಗತಿ ಎಂದು ಭಯವಾಗುತ್ತದೆ. ಸಂಯಮದಿಂದ ಇರಬೇಕು ಎಂದರೂ, ಮನಸ್ಸನ್ನು ಹತೋಟಿ ಮಾಡಲಾಗುವುದಿಲ್ಲ, ಹತ್ತಿರದಲ್ಲಿದ್ದರೆ ಸಾಕು, ನಮ್ಮ ಕೈಗಳು ಸುಮ್ಮನಿರದೆ, ಮುಟ್ಟಿ ಸವರಿ ಸ್ಪರ್ಶ ಸುಖವನ್ನು ಪಡೆಯಲು ಹಾತೊರೆಯುತ್ತವೆ ಇದನ್ನು ನಿವಾರಿಸುವುದು ಹೇಗೆ ಎಂದ  ಸುಬ್ರಹ್ಮಣ್ಯ.

“ಒಂದು ತಿಂಗಳ ಕೆಳಗೆ, ನಾನು ನನ್ನ ಗರ್ಲ್ ಫ್ರೆಂಡ್ ಮನೆಗೆ ಹೋಗಿದ್ದೆ. ಅವರ ಮನೆಯಲ್ಲಿ ಯಾರೂ ಇರಲಿಲ್ಲ. ಇಬ್ಬರಿಗೂ ಆಸೆಯಾಯಿತು. ಬಟ್ಟೆಗಳನ್ನೆಲ್ಲಾ ತೆಗೆದು ತಬ್ಬಿಕೊಂಡು ಮಲಗಿದೆವು. ಸಂಭೋಗವನ್ನೂ ಮಾಡಿದೆವು. ಮೊದಲ ಅನುಭವ. ಆದರೀಗ ಭಯ ಶುರುವಾಗಿದೆ ಸರ್. ಆಕೆ ಗರ್ಭಿಣಿಯಾಗ ಬಿಟ್ಟರೆ ಏನು ಗತಿ ಸರ್. ಜೊತೆಗೆ ಇನ್ನೊಂದು ಕೊಳಕು ಆಲೋಚನೆಯೂ ಶುರುವಾಗಿದೆ ಸರ್. ಆಕೆ ನನ್ನೊಂದಿಗೆ ಮಲಗಿದ ಹಾಗೆ , ಬೇರೆಯವರೊಂದಿಗೂ ಮಲಗಿದ್ದರೆ, ಆಕೆಗೆ ಏಡ್ಸ್ ರೋಗವಿದ್ದರೆ, ಅದು ನನಗೂ ಅಂಟಿಕೊಂಡಿರುತ್ತದೆ. ಎನ್ನುವ ಭಯ ಪ್ರಾರಂಭವಾಗಿದೆ. ವೈದ್ಯರಲ್ಲಿಗೆ ಹೋಗಲು ಭಯ. ಮೊನ್ನೆಯಿಂದ ಮೂತ್ರ ಮಾಡುವಾಗ ಉರಿಯಾಗುತ್ತಿದೆ. ಖಂಡಿತ ನನಗೆ ಏಡ್ಸ್ ಬಂದಿದೆ ಸಾರ್, ಯೋಚಿಸಿ ತಲೆ ಸಿಡಿಯುತ್ತಿದೆ. ರಕ್ತ ಪರೀಕ್ಷೆ ಮಾಡಿಸದೇ, ನನಗೆ ಏಡ್ಸ್ ಇದೆಯೋ, ಇಲ್ಲವೋ ಎಂಬುದನ್ನು ತಿಳಿಯಲು ಸಾಧ್ಯವೇ? ಎಂದ ವಿಜಯ್‌ಕುಮಾರ್‌ನ ಮುಖದಲ್ಲಿ ಗಾಬರಿ ಮಡುಗಟ್ಟಿತ್ತು.

“ನನ್ನ ಬಾಯ್‌ಫ್ರೆಂಡ್ ತುಂಬಾ ಒಳ್ಳೆಯ ಹುಡುಗ ಸರ್. ಸ್ಪುರದ್ರೂಪಿ, ಮದುವೆ ಆದರೆ ಅವನನ್ನೇ, ಇಲ್ಲದಿದ್ದರೆ ಮದುವೆಯೇ ಬೇಡ ಎಂದು ನಿರ್ಧರಿಸಿಬಿಟ್ಟಿದ್ದೇನೆ. ನನಗೆ ತಂದೆ ಇಲ್ಲ, ತಾಯಿ ಮಾತ್ರ ಇದ್ದಾರೆ, ಆಕೆ ಸ್ಕೂಲ್ ಟೀಚರ್. ಆಧುನಿಕ ಮನೋಧೋರಣೆಗಳನ್ನು ಮೈಗೂಡಿಸಿಕೊಂಡಿದ್ದಾಳೆ. ನನ್ನ ಬಾಯ್‌ಫ್ರೆಂಡ್ ನಿಖಿಲ್ ಬಗ್ಗೆ ಹೇಳಿದ್ದೇನೆ. ನನ್ನ ತಾಯಿ ಅವನನ್ನು ನೋಡಿ ಒಪ್ಪಿದ್ದಾಳೆ. ನಿನಗಿನ್ನೂ ೧೭ ವರ್ಷ. ಒಂದೆರೆಡು ವರ್ಷ ಕಾಯಿರಿ. ಆಮೇಲೂ ನಿಮ್ಮ ಪ್ರೀತಿ ಮುಂದುವರೆದರೆ ನಾನೇ ನಿಂತು ಮದುವೆಮಾಡುತ್ತೇನೆ ಎಂದು ಅಮ್ಮ ಹೇಳಿದ್ದಾಳೆ. ನಿಖಿಲ್‌ನ ಅಪ್ಪ, ಅಮ್ಮ ಏನು ಮಾಡುತ್ತಾರೋ ಗೊತ್ತಿಲ್ಲ. ನಾವು ಏಕಾಂತದಲ್ಲಿದ್ದಾಗ ನಿಖಿಲ್ ಒಂದು ಬೇಡಿಕೆ ಇಟ್ಟಿದ್ದಾನೆ. ‘ಓರಲ್ ಸೆಕ್ಸ್ ಮಾಡೋಣ ಅದು ಪೂರ್ಣ ಸುರಕ್ಷಿತ ಗರ್ಭಧಾರಣೆಯ ಭಯವಿರುವುದಿಲ್ಲ. ನಾವು ಪರಿಪೂರ್ಣ ಲೈಂಗಿಕ ಸುಖ ಪಡೆಯಬಹುದು ಎನ್ನುತ್ತಾನೆ. ‘ಓರಲ್ ಸೆಕ್ಸ್ ಎಂದರೆ ಏನೋ ಎಂದು ಅವನನ್ನು ಕೇಳಿದೆ. ಬಾಯಿ-ಜನಾನಾಂಗದ ಸ್ಪಶ, ಪ್ರಚೋದನೆಯೇ ಅದು ಎಂದು ಹೇಳಿ, ಕೆಲವು ಚಿತ್ರಗಳನ್ನು ತೋರಿಸಿದ. ನನಗೆ ಅಸಹ್ಯವಾಯಿತು. ನಿಖಿಲ್ ಮುನಿಸಿಕೊಂಡು ಮಾತು ಬಿಟ್ಟಿದ್ದಾನೆ. ಓರಲ್ ಸೆಕ್ಸ್ ಸಹಜವೇ ಅಥವಾ ಅದು ವಿಕೃತ ಕಾಮವೇ ನೀವೇನು ಹೇಳುತ್ತೀರಿ? ಇದು ಸ್ಮಿತಾಳ ಪ್ರಶ್ನೆ.

“ಸರ್, ನನ್ನ ತಾಯಿಯ ಸಂಬಂಧಿ ಒಬ್ಬರಿದ್ದಾರೆ. ಆಕೆಗೆ ಈಗ ಮೂವತ್ತು ವರ್ಷ ವಯಸ್ಸು. ಆಕೆಯ ಗಂಡ ಸರಿ ಇಲ್ಲ, ಕುಡಿತ, ಜೂಜು, ಬೇಜವಾಬ್ದಾರಿತನದಿಂದ ಹೆಂಡತಿಗೆ ತುಂಬಾ ನೋವು ದುಃಖವನ್ನು ಕೊಟ್ಟಿದ್ದಾನಂತೆ. ಆಕೆಯ ಜೊತೆ ಮಲಗುವುದೂ ಇಲ್ಲವಂತೆ. ಆಕೆಯ ಮನೆಗೆ ಹೋಗಿದ್ದೆ. ಇದೆಲ್ಲವನ್ನೂ ಹೇಳಿ, ಕಣ್ಣೀರು ಹಾಕಿದಳು. ನಿನ್ನಿಂದ ನನಗೊಂದು ಉಪಕಾರವಾಗಬೇಕು. ಉಪ್ಪು ಖಾರ ತಿನ್ನುವ ಈ ದೇಹಕ್ಕೆ ನಿನ್ನಿಂದ ಸುಖ ಸಿಗಬೇಕು ಎಂದು ಹೇಳಿ ಸೆರಗು ಜಾರಿಸಿದಳು. ಅವಳ ತುಂಬಿದ ಎದೆಯನ್ನು ನೋಡಿ ನಾನು ಉದ್ರೇಕಗೊಂಡೆ. ಆವಳ ಜೊತೆ ಶಾರೀರಕ ಸಂಪರ್ಕ ಮಾಡಿದೆ. ಇದು ತಪ್ಪು ನಾನು ಮಾಡಬಾರದಿತ್ತು ಎಂದು ಪಶ್ಚಾತ್ತಾಪಪಟ್ಟೆ. ಆದರೆ, ಆಕೆ ಕರೆದಾಗ ಇಲ್ಲ ಎನ್ನಲು ಮನಸ್ಸೇ ಬರುವುದಿಲ್ಲ. ಆಕೆ ನೀಡುವ ಲೈಂಗಿಕ ಸುಖಕ್ಕಾಗಿ, ನನ್ನ ಶರೀರ, ಮನಸ್ಸು ಹಾತೊರೆಯುತ್ತದೆ. ಮನಸ್ಸಿನ ನಿಗ್ರಹಕ್ಕೆ ಏನು ಮಾಡಬೇಕು ಎಂದ ಯೋಗೀಶ.

ಹೀಗೆ ಅನೇಕ ಹದಿಹರೆಯದ ಹುಡುಗ ಹುಡುಗಿಯರು ಲೈಂಗಿಕ ಸುಖದ ಆಕರ್ಷಣೆ ಕುತೂಹಲ ಮತ್ತು ಅನುಭವಕ್ಕಾಗಿ ವಿವಾಹ ಪೂರ್ವಲೈಂಗಿಕ ಚಟುವಟಿಕೆ ಮಾಡಿ ಆನಂತರ, ಭಯ, ತಪ್ಪಿತಸ್ಥ ಭಾವನೆ, ಕೀಳರಿಮೆಗಳಿಂದ ಬಳಲುತ್ತಾರೆ. ಕೆಲವರು ಗರ್ಭಧಾರಣೆ, ಲೈಂಗಿಕ ವ್ಯಾಧಿ, ಏಡ್ಸ್ ಸೋಂಕಿನಂತಹ ಅಪಾಯಕ್ಕೂ ಸಿಕ್ಕಿಹಾಕಿಕೊಳ್ಳುತ್ತಾರೆ.

ಆದ್ದರಿಂದ ಎಷ್ಟೇ ಆಕರ್ಷಣೆ, ಒತ್ತಡ, ಸನ್ನಿವೇಶದ ಪ್ರಚೋದನೆ ಬಂದರೂ ಹರೆಯದವರು ಶಾರೀರಕ ಸಂಪರ್ಕವನ್ನು ಮಾಡಬಾರದು. ಪ್ರೀತಿ ಮಾಡಿದ ವ್ಯಕ್ತಿಯೊಂದಿಗೆ ಮಾತನಾಡಲಿ, ಸುತ್ತಾಡಲಿ, ಹೋಟೆಲ್, ಸಿನಿಮಾ ನೋಡಲಿ ಪ್ರವಾಸ ಮಾಡಲಿ, ಆದರೆ ಶಾರೀರಕ ಸ್ಪರ್ಷದಿಂದ ದೂರ‌ಉಳಿಯುವುದೇ ಕ್ಷೇಮ. ತನ್ನ ಗೆಳತಿಗೆ ‘ಲೈಂಗಿಕ ಸುಖ ನೀಡಲು ಹುಡುಗ ಒತ್ತಾಯಮಾಡಬಾರದು. ‘ಮುತ್ತು ಸುರಕ್ಷಿತ ಎಂದು, ಎದೆಯ ಸ್ಪಶದಿಂದ ಹಾನಿಯಿಲ್ಲ ಎಂದು ಶುರುವಾಗಿ ಅದು ಸಂಭೋಗದಲ್ಲಿ ಕೊನೆಗೊಳ್ಳುತ್ತದೆಯಾಗಿ ಯಾವುದೇ ರೀತಿಯ ಶಾರೀರಕ ಸಂಪರ್ಕ ಮಾಡದಿರಲು ಹುಡುಗ-ಹುಡುಗಿಯರಿಬ್ಬರೂ ನಿರ್ಧರಿಸಬೇಕು. ಸಂಯಮವನ್ನು ಪಾಲಿಸಬೇಕು.

ಲೈಂಗಿಕ ಶೋಷಣೆ ಮತ್ತು ಅತ್ಯಾಚಾರ:

ಅನೇಕ ಹದಿಹರೆಯದ ಹುಡುಗ/ಹುಡುಗಿಯರು ಪರಿಚಿತರಿಂದ ಅಥವಾ ಅಪರಿಚಿತರಿಂದ ಲೈಂಗಿಕ ಶೋಷಣೆ, ಅತ್ಯಾಚಾರಕ್ಕೆ ಒಳಗಾಗುತ್ತಾರೆ. ಆಮಿಷ, ಒತ್ತಾಯ, ಬೆದರಿಕೆ, ಬ್ಲಾಕ್‌ಮೇಲ್ ತಂತ್ರವನ್ನು ಉಪಯೋಗಿಸಿ, ಅತ್ಯಾಚಾರಿಗಳು ಹರೆಯದವರನ್ನು ತಮ್ಮ ಲೈಂಗಿಕ ಸುಖಕ್ಕೆ ಬಳಸಿಕೊಳ್ಳುತ್ತಾರೆ. ಹುಡುಗರು ಸಲಿಂಗ ಕಾಮಿಗಳ ಉಪಟಳಕ್ಕೆ ಒಳಗಾಗುತ್ತಾರೆ. ಇದು ಹಾಸ್ಟೆಲ್‌ಗಳಲ್ಲಿ, ಬೋರ್ಡಿಂಗ್ ಶಾಲೆಗಳಲ್ಲಿ ಹೆಚ್ಚು. ಸಹವಯಸ್ಕರು, ಶಿಕ್ಷಕರು, ಹಾಸ್ಟೆಲ್‌ನ ಕೆಲಸಗಾರರು ಈ ಕೃತ್ಯದಲ್ಲಿ ತೊಡಗುತ್ತಾರೆ. ವಿಕೃತಕಾಮಕೇಳಿಯ ಚಿತ್ರಗಳನ್ನು ತೋರಿಸಿ ಬ್ಲೂಫಿಲ್ಮ್‌ಗಳನ್ನು ಪ್ರದರ್ಶಿಸಿ, ಹರೆಯದವರನ್ನು ಆಕರ್ಷಿಸುತ್ತಾರೆ. ಮಾದಕ ವಸ್ತುಗಳು, ಆಲ್ಕೋಹಾಲ್ ಸೇವನೆಯೂ ಇದಕ್ಕೆ ಕುಮ್ಮಕ್ಕು ಕೊಡುತ್ತದೆ.

ಇತ್ತೀಚೆಗೆ ಅವಿಸಿಟ್ಟ ಕ್ಯಾಮರಾಗಳಿಂದ, ಮೊಬೈಲ್ ಕ್ಯಾಮರಾಗಳಿಂದ ಹುಡುಗ ಹುಡುಗಿಯರ ನಗ ಚಿತ್ರಗಳನ್ನು ತೆಗೆದು ಬ್ಲಾಕ್‌ಮೇಲ್ ಮಾಡಿ ಲೈಂಗಿಕ ಚಟುವಟಿಕೆಗೆ, ವೇಶ್ಯಾ ಚಟುವಟಿಕೆಗೆ ತಳ್ಳುವುದನ್ನು ಕಾಣುತ್ತಿದ್ದೇವೆ. ಆದ್ದರಿಂದ ಹದಿಹರೆಯದವರು, ಸಂಭವನೀಯ ಲೈಂಗಿಕ ಶೋಷಣೆ, ಅತ್ಯಾಚಾರದಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಬೇಕು. ಪರಿಚಿತರು/ ಅಪರಿಚಿತರು ಸಮೀಪ ಬರುವುದು, ಮೈಕೈ ಮುಟ್ಟುವುದು, ತಬ್ಬಿಕೊಳ್ಳಲು ಮುತ್ತುಕೊಡಲು ಪ್ರಯತ್ನಿಸುವುದು, ಲೈಂಗಿಕ ಚಿತ್ರ ನೋಡುತ್ತೀಯಾ ಎಂದು ಕೇಳುವುದು ಮಾಡಿದಾಗ ಅಪಾಯದ ಕರೆಗಂಟೆಯನ್ನು ಬಾರಿಸಬೇಕು. ಅವರಿಂದ ದೂರವಾಗಬೇಕು. ತಂದೆ-ತಾಯಿ, ಹಿರಿಯರಿಗೆ ವಿಷಯವನ್ನು ಹೇಳಬೇಕು.