ಬ್ಲಾಗುಗಳ ಬಗ್ಗೆ ಯಾರಿಗೆ ತಾನೆ ಗೊತ್ತಿಲ್ಲ!? ತಮಗನಿಸಿದ್ದನ್ನು ವಿಶ್ವವ್ಯಾಪಿ ಜಾಲದ ಮೂಲಕ ಪ್ರಪಂಚದೊಡನೆ ಮುಕ್ತವಾಗಿ ಹಂಚಿಕೊಳ್ಳಲು ಲಕ್ಷಾಂತರ ಜನ ಬಳಸುವ ಮಾಧ್ಯಮ ಅದು.

ಬ್ಲಾಗನ್ನು ಆನ್‌ಲೈನ್ ದಿನಚರಿಯೆಂದು ಕರೆಯುತ್ತಾರಾದರೂ ಎಲ್ಲರೂ ಅದನ್ನು ದಿನಚರಿಯಂತೇನೂ ಬಳಸುವುದಿಲ್ಲ. ಆದರೆ ಖಾಸಗಿ ಡೈರಿಯಲ್ಲಿ ಬರೆದುಕೊಳ್ಳುವಂತೆಯೇ ಬ್ಲಾಗಿನಲ್ಲೂ ಬರೆದು ಅದನ್ನು ಪ್ರಪಂಚಕ್ಕೆಲ್ಲ ತೆರೆದಿಡುವವರೂ ಇದ್ದಾರೆ. ಇನ್ನು ಟ್ವಿಟ್ಟರಿನಂತಹ ಮೈಕ್ರೋಬ್ಲಾಗುಗಳನ್ನಂತೂ ಕೇಳುವುದೇ ಬೇಡ. ಈಗ ಎದ್ದೆ, ಆಫೀಸಿಗೆ ಹೊರಟೆ, ಟ್ರಾಫಿಕ್ ಜಾಮ್‌ನಲ್ಲಿದ್ದೇನೆ, ಕ್ಯಾಂಟೀನಿನಲ್ಲಿ ಇಡ್ಲಿ ತಿನ್ನುತ್ತಿದ್ದೇನೆ ಎಂಬಲ್ಲಿಂದ ಈಗ ಹೋಗಿ ನಿದ್ದೆಮಾಡುತ್ತೇನೆ, ಗುಡ್‌ನೈಟ್ ಎನ್ನುವವರೆಗೆ ತಾವು ದಿನನಿತ್ಯ ಮಾಡುವ ಎಲ್ಲ ಕೆಲಸಗಳನ್ನೂ ಟ್ವಿಟ್ಟರಿನಲ್ಲಿ ದಾಖಲಿಸುವ ಜನ ಬೇಕಾದಷ್ಟು ಸಂಖ್ಯೆಯಲ್ಲಿದ್ದಾರೆ.

ಇನ್ನೂ ಒಂದು ಹೆಜ್ಜೆ ಮುಂದೆಹೋಗಿ ಪ್ರತಿನಿತ್ಯವೂ ಬೆಳಗಿನಿಂದ ಸಂಜೆಯವರೆಗೆ ಮಾಡುವ ಕೆಲಸಗಳನ್ನೆಲ್ಲ ಛಾಯಾಚಿತ್ರಗಳ ರೂಪದಲ್ಲಿ ದಾಖಲಿಸಿಡುತ್ತಾ ಹೋದರೆ ಹೇಗಿರಬಹುದು?

ವಿಚಿತ್ರವೆಂದು ತೋರುವ ಈ ಕಲ್ಪನೆಯ ಹೆಸರೇ ‘ಲೈಫ್ ಲಾಗಿಂಗ್’. ಬದುಕಿನ ಘಟನೆಗಳನ್ನೆಲ್ಲ ಚಿತ್ರರೂಪದಲ್ಲಿ ‘ಲೈಫ್ ಲಾಗ್’ ಆಗಿ ದಾಖಲಿಸಿಟ್ಟುಕೊಳ್ಳುವ ವಿಭಿನ್ನ ಹವ್ಯಾಸ ಇದು.

ದಿರಿಸಿನ ಭಾಗವಾಗಿ ಒಂದು ಸ್ವಯಂಚಾಲಿತ ಕ್ಯಾಮೆರಾವನ್ನು ನೇತುಹಾಕಿಕೊಂಡು ಓಡಾಡುವುದು ಲೈಫ್‌ಲಾಗಿಗರ ಅಭ್ಯಾಸ. ಅವರು ಒಂದೆಡೆಯಿಂದ ಇನ್ನೊಂದೆಡೆಗೆ ಹೋದಾಗ, ಯಾರೊಡನೆಯೋ ಮಾತಿಗೆ ನಿಂತಾಗ, ಮಾಡುತ್ತಿದ್ದ ಕೆಲಸ ಬಿಟ್ಟು ಬೇರೆಯದನ್ನು ಕೈಗೆತ್ತಿಕೊಂಡಾಗ – ಹೀಗೆ ಯಾವುದೇ ಬದಲಾವಣೆಯನ್ನು ಥಟ್ಟನೆ ಗ್ರಹಿಸುವ ಆ ಕ್ಯಾಮೆರಾ ಅಂತಹ ಪ್ರತಿಯೊಂದು ಘಟನೆಯ ಚಿತ್ರವನ್ನೂ ತೆಗೆದಿಟ್ಟುಕೊಳ್ಳುತ್ತದೆ. ಹೀಗೆ ಒಂದು ದಿನದಲ್ಲಿ ಕಡಿಮೆಯೆಂದರೂ ನಾಲ್ಕು ಸಾವಿರ ಚಿತ್ರಗಳು ಸಂಗ್ರಹವಾಗುತ್ತವಂತೆ. ಹೀಗೆ ಕ್ಲಿಕ್ಕಿಸಿದ ಚಿತ್ರಗಳನ್ನು ಕಂಪ್ಯೂಟರಿನಲ್ಲಿ ಒಂದೆಡೆ ಶೇಖರಿಸಿಡುವುದೋ ವಿಶ್ವವ್ಯಾಪಿ ಜಾಲದ ಮೂಲಕ ಇತರರೊಡನೆ ಹಂಚಿಕೊಳ್ಳುವುದೋ ಏನು ಬೇಕಿದ್ದರೂ ಮಾಡಬಹುದು.

ಲೈಫ್ ಲಾಗ್‌ಗಳ ಇತಿಹಾಸ ಹೆಚ್ಚೂಕಡಿಮೆ ಪರ್ಸನಲ್ ಕಂಪ್ಯೂಟರುಗಳ ಜೊತೆಗೇ ಶುರುವಾಯಿತು ಎನ್ನಬಹುದು. ವೆಬ್‌ಕ್ಯಾಮೆರಾಗಳನ್ನು ಬಳಸಿ ದಿನಪೂರ್ತಿ ಮನೆಯಲ್ಲಾಗುವ ಘಟನೆಗಳನ್ನೆಲ್ಲ ಸೆರೆಹಿಡಿದಿಟ್ಟುಕೊಳ್ಳುವ ಅಭ್ಯಾಸ ದಶಕಗಳ ಹಿಂದೆಯೇ ಇತ್ತು. ಆದರೆ ಲೈಫ್‌ಲಾಗ್‌ನ ಪರಿಕಲ್ಪನೆ ಇಂದಿನ ಸ್ವರೂಪ ಪಡೆದದ್ದು ಮಾತ್ರ ಧರಿಸಬಹುದಾದಂತಹ (‘ವೇರಬಲ್’) ಕ್ಯಾಮೆರಾಗಳು ಮಾರುಕಟ್ಟೆಗೆ ಬಂದಮೇಲೆ. ಕುತ್ತಿಗೆಗೆ ನೇತುಹಾಕಿಕೊಳ್ಳುವ, ಕಿವಿಗೋ ಕನ್ನಡಕಕ್ಕೋ ಸಿಕ್ಕಿಸಿಕೊಳ್ಳುವ, ಜೇಬಿನಲ್ಲಿಟ್ಟುಕೊಳ್ಳುವ – ಹೀಗೆ ವಿಭಿನ್ನ ಅವತಾರಗಳಲ್ಲಿ ದೊರಕುವ ಇಂತಹ ಕ್ಯಾಮೆರಾಗಳು ಬಂದ ಮೇಲೆ ಲೈಫ್‌ಲಾಗಿಂಗ್ ಇನ್ನಷ್ಟು ಜನಪ್ರಿಯವಾಯಿತು. ಲೈಫ್‌ಲಾಗಿಂಗ್ ಹವ್ಯಾಸಿಗಳ ಸಮುದಾಯಗಳೂ ಹುಟ್ಟಿಕೊಂಡವು.

ಹಾಗೆಂದಮಾತ್ರಕ್ಕೆ ಇದು ಹವ್ಯಾಸಿಗಳಿಗೆ ಮಾತ್ರ ಸೀಮಿತ ಎಂದೇನೂ ಅಂದುಕೊಳ್ಳಬೇಕಾಗಿಲ್ಲ. ಲೈಫ್‌ಲಾಗಿಂಗ್ ಪರಿಕಲ್ಪನೆಯನ್ನು ವೈದ್ಯರು-ಮನಃಶಾಸ್ತ್ರಜ್ಞರೂ ಬಳಸಿಕೊಂಡಿದ್ದಾರೆ. ಅಲ್ಜೀಮರ್ಸ್ ಕಾಯಿಲೆ, ಅಮ್ನೀಸಿಯಾ ಮುಂತಾದ ನೆನಪಿಗೆ ಸಂಬಂಧಿಸಿದ ತೊಂದರೆಗಳಿರುವವರಿಗೆ ಇದು ಬಹಳ ಉಪಯುಕ್ತ ಎಂದು ಅವರು ಹೇಳುತ್ತಾರೆ. ಮರೆತುಹೋಗುವ ವಿಷಯಗಳನ್ನು ನೆನಪಿಸಿಕೊಳ್ಳುವಲ್ಲಿ ಹಾಗೂ ಮರೆವಿನ ಕಾರಣದಿಂದ ಉಂಟಾಗುವ ಖಿನ್ನತೆಯನ್ನು ಹೋಗಲಾಡಿಸಿಕೊಳ್ಳುವಲ್ಲೂ ಲೈಫ್‌ಲಾಗಿಂಗ್ ಸಹಾಯಮಾಡಬಲ್ಲದು ಎನ್ನುವುದು ಅವರ ಅಭಿಪ್ರಾಯ.

ನೆನಪಿನ ಶಕ್ತಿ ಚೆನ್ನಾಗಿರುವವರಿಗೂ ಲೈಫ್‌ಲಾಗಿಂಗ್ ಉಪಯುಕ್ತ ಎನ್ನುವ ವಾದವೂ ಇದೆ. ಅದರ ಸಹಾಯದಿಂದ ಒಟ್ಟಾರೆಯಾಗಿ ನಮ್ಮ ನೆನಪಿನ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು ಎನ್ನುವುದು ಆ ವಾದದ ಹೂರಣ. ಇಲ್ಲಿ ಚಿತ್ರಗಳ ಮೂಲಕ ನೆನಪುಗಳನ್ನು ದಾಖಲಿಸಿಡುವುದರಿಂದ ಅದು ದಿನಚರಿ ಬರೆದಿಡುವುದಕ್ಕಿಂತ ಹೆಚ್ಚು ನಿಖರ ದಾಖಲೆಯಾಗುತ್ತದೆ ಎನ್ನುವ ಅಂಶ ನಿಜವೂ ಹೌದು. ಚಿತ್ರಗಳ ಮೂಲಕ ಸನ್ನಿವೇಶಗಳನ್ನು ಯಥಾವತ್ತಾಗಿ ನೆನಪಿಸಿಕೊಂಡಾಗ ನಮ್ಮ ಸ್ವಭಾವವನ್ನು ನಾವೇ ವಿಮರ್ಶಾತ್ಮಕ ದೃಷ್ಟಿಯಿಂದ ನೋಡುವುದು ಕೂಡ ಸಾಧ್ಯವಾಗುತ್ತದೆ. ಅಷ್ಟೇ ಅಲ್ಲದೆ ನಮ್ಮ ದೈನಂದಿನ ಬದುಕಿನಲ್ಲಿ ಯಾವ ಕೆಲಸಕ್ಕೆ ಎಷ್ಟು ಸಮಯ ವ್ಯಯಿಸುತ್ತಿದ್ದೇವೆ, ಎಲ್ಲಿ ಕಾಲಹರಣ ಮಾಡುತ್ತಿದ್ದೇವೆ ಎಂಬಂತಹ ಅಂಶಗಳನ್ನೂ ಲೈಫ್ ಲಾಗ್‌ನಿಂದ ಅರಿತುಕೊಳ್ಳಬಹುದು.

ಆದರೆ ಇದರಲ್ಲಿ ಸಮಸ್ಯೆಗಳೂ ಇಲ್ಲದಿಲ್ಲ.

ಮರೆವು ಮನುಷ್ಯನಿಗೆ ನಿಸರ್ಗ ಕೊಟ್ಟಿರುವ ವರ; ಬದುಕಿನ ಪ್ರತಿಯೊಂದು ಘಟನೆಯನ್ನೂ ಸ್ಪಷ್ಟವಾಗಿ ದಾಖಲಿಸಿಟ್ಟುಕೊಂಡು ಮರೆವನ್ನೇ ಸೋಲಿಸಲು ಹೋಗುವುದು ಎಷ್ಟು ಸರಿ ಎನ್ನುವುದು ಈ ನಿಟ್ಟಿನಲ್ಲಿ ಮೊದಲ ಪ್ರಶ್ನೆ. ಖುಷಿಕೊಟ್ಟ ಕ್ಷಣಗಳಾದರೇನೋ ಸರಿ, ದುಃಖದಾಯಕ ಘಟನೆಗಳನ್ನೂ ಇಷ್ಟು ವಿವರವಾಗಿ ನೆನಪಿಟ್ಟುಕೊಳ್ಳುವ ಪ್ರಯತ್ನ ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆ ಕೂಡ ಇದೆ. ನಮ್ಮ ಬದುಕನ್ನು ದಾಖಲಿಸುವ ಪ್ರಯತ್ನ ಬೇರೊಬ್ಬರ ಖಾಸಗಿತನಕ್ಕೆ ಧಕ್ಕೆತಾರದಂತೆ ನೋಡಿಕೊಳ್ಳುವ ಜವಾಬ್ದಾರಿಯೂ ನಮ್ಮಮೇಲಿರುತ್ತದೆ. ಅದೆಲ್ಲ ಹೋಗಲಿ ಎಂದರೆ ಹೋದಬಂದ ಕಡೆಯೆಲ್ಲ ಚಿತ್ರಗಳನ್ನು ಕ್ಲಿಕ್ಕಿಸುವುದು ಕೂಡ ಸಮಸ್ಯೆಗಳಿಂದ ಮುಕ್ತವಲ್ಲ – ಲೈಫ್‌ಲಾಗಿಂಗ್ ಹೆಸರಿನಲ್ಲಿ ಛಾಯಾಗ್ರಹಣ ನಿಷಿದ್ಧವಾದ ಪ್ರದೇಶದಲ್ಲಿ ಫೋಟೋ ತೆಗೆಯಲು ಹೋದರೆ ತೊಂದರೆ ಗ್ಯಾರಂಟಿ!

ಎಲ್ಲ ಕ್ಷಣಗಳದೂ ಫೋಟೋ ಕ್ಲಿಕ್ಕಿಸದೆ ಇರಬಹುದು, ಆದರೆ ಬೇರೆ ಯಾವುದೋ ಒಂದು ರೂಪದಲ್ಲಿ ವಿಶ್ವವ್ಯಾಪಿ ಜಾಲದ ಬಳಕೆದಾರರು ಲೈಫ್‌ಲಾಗಿಂಗ್ ಮಾಡುತ್ತಲೇ ಇದ್ದೇವಲ್ಲವೆ? ಹುಟ್ಟಿದ ಊರು, ಓದಿದ ಶಾಲೆ, ಕೆಲಸಮಾಡುವ ಸ್ಥಳದಿಂದ ಪ್ರಾರಂಭಿಸಿ ಬೆಳಿಗ್ಗೆ ದೋಸೆತಿನ್ನಲು ಹೋದ ಹೋಟಲ್ಲಿನವರೆಗೆ ಪ್ರತಿಯೊಂದು ಮಾಹಿತಿಯನ್ನೂ ಸಮಾಜ ಜಾಲಗಳಲ್ಲಿ ಹಂಚಿಕೊಳ್ಳುವ, ಕಂಡದ್ದನ್ನೆಲ್ಲ ಮೊಬೈಲ್ ಕ್ಯಾಮೆರಾದಲ್ಲಿ ಕ್ಲಿಕ್ಕಿಸುವ ಅಭ್ಯಾಸ ಅನೇಕರಿಗೆ ಈಗಾಗಲೇ ಬಂದುಬಿಟ್ಟಿದೆ. ಇನ್ನು ಕ್ಯಾಮೆರಾ ಅಂಟಿಸಿಕೊಂಡು ಓಡಾಡುವ, ಲೈಫ್‌ಲಾಗಿಸುವ ಹವ್ಯಾಸವೂ ವ್ಯಾಪಕವಾಗಿ ಕಾಣಿಸಿಕೊಂಡರೆ ಅದರಲ್ಲೇನು ಆಶ್ಚರ್ಯ?

(ಮಾರ್ಚ್ ೧೩, ೨೦೧೨ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ)