ಲೈಮಾ ಅವರೆ ಪ್ರೊಟೀನ್ ಯುಕ್ತದ್ವಿದಳಧಾನ್ಯ  ತರಕಾರಿ. ಬಲಿತ ಕಾಳು ಹಾಗು ಒಣಕಾಳು ಅಡುಗೆಗೆ ಉಪಯುಕ್ತ. ನಮ್ಮಲ್ಲಿ ಅಷ್ಟಾಗಿ ಜನಪ್ರಿಯವಾಗಿಲ್ಲ. ಮಳೆ ಆಸರೆಯಲ್ಲಿ ಬೆಳೆಯಬಹುದು. ನೀರಾವರಿ ಇದ್ದರೆ ಹೆಚ್ಚು ಇಳುವರಿ ಸಾಧ್ಯ.

ಪೌಷ್ಟಿಕ ಗುಣಗಳು: ಲೈಮಾ ಅವರೆಕಾಳುಗಳಲ್ಲಿ (೧೦೦ ಗ್ರಾಂ) ೨೧.೫ ಗ್ರಾಂ ಪ್ರೊಟೀನ್ ಮತ್ತು ೧.೬೦ ಗ್ರಾಂ ಕೊಬ್ಬು ಇರುತ್ತವೆ.

ಉಗಮ ಮತ್ತು ಹಂಚಿಕೆ: ಅಮೆರಿಕಾ ತಳಿ. ನಮ್ಮ ದೇಶದ ಪುಣೆ ಕೃಷಿ ಕಾಲೇಜಿನಲ್ಲಿ ಮೊಟ್ಟ ಮೊದಲಿಗೆ ೧೯೨೪-೨೫ರಲ್ಲಿ ಬೆಳೆಯಲಾಯಿತು. ಈಗಲೂ ಸಹ ಇದರ ಬೇಸಾಯ ಮಹಾರಾಷ್ಟ್ರದಲ್ಲಿ ಸ್ವಲ್ಪಮಟ್ಟಿಗೆ ಕಂಡುಬರುತ್ತದೆ. ಕರ್ನಾಟಕದಲ್ಲಿ ಅಲ್ಲಲ್ಲಿ ಬೆಳೆಯುವರು.

ಸಸ್ಯ ವರ್ಣನೆ: ಇದು ಲೆಗ್ಯೂಮಿನೋಸೀ ಕುಟುಂಬ-ಫ್ಯಾಬೇಸೀ ಉಪಕುಟುಂಬಕ್ಕೆ ಸೇರಿದ ವಾರ್ಷಿಕ ಅಥವಾ ಕಡಿಮೆ ಅವಧಿಯ ಬಹುವಾರ್ಷಿಕ ಸಸ್ಯ. ಇದರಲ್ಲಿ ಎರಡು ಬಗೆ, ಒಂದರಲ್ಲಿ ಗಿಡಗಳು ಹೆಚ್ಚು ಕಾಲ ಫಸಲನ್ನು ಬಿಡಬಲ್ಲವು ಹಾಗೂ ಅಧಿಕ ಇಳುವರಿ ಕೊಡಬಲ್ಲವು. ಹಬ್ಬು ಬಗೆಗಳ ಕಾಂಡ ಹಗ್ಗದಂತೆ ತಿರುಚಿಕೊಂಡು ಆಸರೆಯ ಮೇಲಕ್ಕೆ ಹಬ್ಬಿ ಹರಡುತ್ತದೆ. ಕಾಂಡ ಹಸುರು ಬಣ್ಣ, ನಾರುಯುತ, ಎಲೆಗಳಿಗೆ ತೊಟ್ಟು ಇದ್ದು ಪ್ರತಿ ಎಲೆಯಲ್ಲಿ ಮೂರು ಈಟಿಯಾಕಾರದ ಉಪಪತ್ರಗಳು, ಬುಡ ಮತ್ತು ತುದಿಭಾಗಗಳು ಸಣ್ಣಗೆ ಸಂಕುಚಿತಗೊಂಡಿರುತ್ತವೆ. ಎಲೆಗಳ ಬಣ್ಣ ಹಸುರು, ಸಂಯೋಗ ಪ್ರತ್ಯೇಕ, ಹೂಗಳು ಗೊಂಚಲಲ್ಲಿ, ಬುಡಭಾಗದಿಂದ ತುದಿಯತ್ತ ಅರಳುತ್ತಾ ಹೋಗುತ್ತವೆ, ದ್ವಿಲಿಂಗಿಗಳು ಅನ್ಯ-ಪರಾಗಸ್ಪರ್ಶ ಜಾಸ್ತಿ. ಹೂದಳಗಳು ಬಿಳಿ ಹಳದಿ ಬಣ್ಣ. ಕಾಯಿ ಚಪ್ಪಟೆ, ಬಿಲ್ಲಿನಂತೆ ಬಾಗಿರುತ್ತವೆ, ಹಸುರು ಬಣ್ಣ, ಕಾಳು ಬಿಳಿ ಇಲ್ಲವೇ ವಿವಿಧ ಬಣ್ಣಗಳಿಂದ ಕೂಡಿರುತ್ತವೆ.

ಗಿಡಗಳ ಬೇರುಗಳಲ್ಲಿ ಸಾರಜನಕ ಹೀರಿ ಹಿಡಿದಿಡುವ ಗಂಟುಗಳಿರುತ್ತವೆ. ಬೇರು ಸಮೂಹ ಬಲವಾಗಿದ್ದು ಮಣ್ಣಿನಲ್ಲಿ ಆಳಕ್ಕೆ ಇಳಿದಿರುತ್ತದೆ.

ಹವಾಗುಣ: ತಂಪಿನಿಂದ ಕೂಡಿದ ಒಣಹವೆ ಇರಬೇಕು. ವಾರ್ಷಿಕ ಮಳೆ ೫೦-೬೦ ಸೆಂ.ಮೀ. ಗಳಿಷ್ಟಿದ್ದರೆ ಸಾಕು. ಸ್ವಲ್ಪಮಟ್ಟಿಗೆ ಅನಾವೃಷ್ಟಿಯನ್ನು ತಡೆದುಕೊಳ್ಳಬಲ್ಲದು.

ಭೂಗುಣ: ಈ ಬೆಳೆಗೆ ಎಲ್ಲಾ ತೆರನಾದ ಮಣ್ಣು ಒಪ್ಪುತ್ತದೆ. ಸ್ವಲ್ಪಮಟ್ಟಿನ ಸಾರವತ್ತಾದ ಹಾಗೂ ನೀರುಬಸಿಯುವ ಮರಳು ಗೋಡು ಅಥವಾ ಕೆಂಪುಗೋಡು ಉತ್ತಮ. ಮಣ್ಣು ಹೆಚ್ಚು ಫಲವತ್ತಾಗಿದ್ದಲ್ಲಿ ಸಸ್ಯ ಬೆಳವಣಿಗೆ ಜಾಸ್ತಿಯಾಗಿ ಹೂಬಿಡುವುದು ಕಡಿಮೆಯಾಗುತ್ತದೆ. ಹೆಚ್ಚು ತೇವ ಹಿಡಿದಿಡುವ ಮಣ್ಣೂ ಸಹ ಸೂಕ್ತವಿರುವುದಿಲ್ಲ. ಮಣ್ಣಿನ ರಸಸಾರ ೬.೦ ರಿಂದ ೭.೦ ರಷ್ಟಿದ್ದರೆ ಸೂಕ್ತ.

ತಳಿಗಳು: ಇದರಲ್ಲಿ ಹಲವಾರು ತಳಿಗಳಿವೆ. ಬಹುತೇಕ ತಳಿಗಳು ಹೊರಗಿನಿಂದ ಬಂದಂತಹವುಗಳು. ಹಬ್ಬು ಬಗೆಗೆಳಿಗೆ ಆಸರೆ ಒದಗಿಸುವುದು ವೆಚ್ಚದಾಯಕ. ಕೆಂಪು ಚುಕ್ಕೆಗಳಿಂದ ಕೂಡಿದ ಕಾಳುಗಳು ಅನಾರೋಗ್ಯಕರ. ಅವು ಗ್ಲೂಕೋಸೈಡ್ ಎಂಬ ಹಾನಿಕರಕ ವಸ್ತುಗಳಿಂದ ಕೂಡಿರುತ್ತವೆ. ಬಿಳಿ ಬಣ್ಣದ ಕಾಳು ನಿರಪಾಯಕರ, ಸಿಪ್ಪೆ ಮಂದ. ಗಿಡ್ಡ  ಹಾಗೂ ಅಧಿಕ ಇಳುವರಿ ಕೊಡುವ ತಳಿಗಳು ಅಗತ್ಯ.

.ಫೋರ್ಡ್ಹುಕ್: ಮಿಶ್ರ ತಳಿ. ಇದಕ್ಕೆ ಫೋರ್ಡ್‌ಹುಕ್ ೨೪೨ ಎಂಬ ಹೆಸರಿದೆ. ಹೆಂಡರ್‌ಸನ್ ಬುಷ್ ಲೈಮಾ ಮತ್ತು ಫೋರ್ಡ್‌‌ಹುಕ್ ತಳಿಗಳನ್ನು ಸಂಕರಿಸಿ ಇದನ್ನು ವೃದ್ಧಿಪಡಿಸಲಾಯಿತು. ಗಿಡಗಳು ಗಿಡ್ಡ, ೪೦-೫೦ ಸೆಂ.ಮೀ. ಎತ್ತರ, ಕಾಳು ಸಂಸ್ಕೃಣೆ ಸೂಕ್ತ.

. ಬರ್ಪೀಬುಷ್: ಪೊದೆ ತಳಿ, ಕಾಳು ರುಚಿಯಾಗಿರುತ್ತವೆ.

. ಹೆಂಡರ್ಸನ್ ಬೇಬಿ ಲೈಮಾ: ಪೊದೆ ತಳಿ, ಇವುಗಳಲ್ಲದೆ ಫ್ಲೋರಿಡಾಬಟರ್, ವಿಲ್ಬಾರ್, ಕರ್ನೂಲ್-೧ ಕಿಂಗ್ ಆಫ್ ಗಾರ್ಡನ್, ಕಾರ್ಡಿನ ಮುಂತಾದುವು ಸಹ ಅಲ್ಲಲ್ಲಿ ಕಂಡುಬರುತ್ತವೆ.

ಭೂಮಿ ಸಿದ್ಧತೆ ಮತ್ತು ಬಿತ್ತನೆ: ಉಳುಮೆ ಮಾಡಿ, ಕಳೆ ಕಸ ತೆಗೆದು, ಭೂಮಿ ಸಮ ಮಾಡಬೇಕು. ಹಬ್ಬು ಬಗೆಗೆಳಲ್ಲಿ ಸಾಲುಗಳ ನಡುವೆ ೧.೮ ಮೀಟರ್ ಮತ್ತು ಸಾಲಿನಲ್ಲಿ ೧.೨ ಮೀಟರ್ ಅಂತರ ಮತ್ತು ಪೊದೆ ಬಗೆಗಳಲ್ಲಿ ಸಾಲುಗಳ ನಡುವೆ ೬೦ ಸೆಂ.ಮೀ. ಮತ್ತು ಸಾಲಿನಲ್ಲಿ ೩೦ ಸೆಂ.ಮೀ ಅಂತರ ಕೊಡಬೇಕಾಗುತ್ತದೆ. ದಿಂಡು ಮತ್ತು ಕಾಲುವೆಗಳನ್ನು ಮಾಡಿ ತಿಪ್ಪೆಗೊಬ್ಬರ ಮತ್ತು ರಂಜಕಯುತ ರಾಸಾಯನಿಕ ಗೊಬ್ಬರವನ್ನು ಸಮನಾಗಿ ಹರಡಿ ಮಣ್ಣಿನಲ್ಲಿ ಮಿಶ್ರಣಮಾಡಬೇಕು. ಕಾಳು ಬಿತ್ತುವ ಮುಂಚೆ ಮಣ್ಣಿನಲ್ಲಿ ಸಾಕಷ್ಟು ತೇವ ಇಲ್ಲದಿದ್ದರೆ ತೆಳ್ಳಗೆ ನೀರು ಕೊಡುವುದು ಅಗತ್ಯ. ಬೀಜ ಬಿತ್ತಲು ಜೂನ್-ಜುಲೈ ಸರಿಯಾದ ಕಾಲ. ಹೆಕ್ಟೇರಿಗೆ ೧೦-೨೦ ಕಿ.ಗ್ರಾಂ ಕಾಳು ಬೇಕಾಗುತ್ತವೆ. ಕಾಳುಗಳನ್ನು ೨-೨.೫ ಸೆಂ.ಮೀ ಆಳಕ್ಕೆ ಬಿತ್ತಿದರೆ ಸಾಕು. ಅವು ಮೂರು ನಾಲ್ಕು ದಿನಗಳಲ್ಲಿ ಮೊಳೆಯುತ್ತವೆ.

ಗೊಬ್ಬರ: ಈ ಬೆಳೆಗೆ ಹೆಚ್ಚಿನ ಗೊಬ್ಬರ ಬೇಕಾಗಿಲ್ಲ. ಹೆಕ್ಟೇರಿಗೆ ೧೦ ಟನ್ ತಿಪ್ಪೆಗೊಬ್ಬರ ಮತ್ತು ೪೦ ಕಿ.ಗ್ರಾಂ ರಂಜಕಾಂಶಗಳನ್ನು ಶಿಫಾರಸುಮಾಡಿದೆ.

ನೀರಾವರಿ: ಮಳೆಗಾಲದಲ್ಲಿ ಹೆಚ್ಚು ನೀರು ಬೇಕಾಗಿಲ್ಲ. ಮಳೆ ಇಲ್ಲದ ದಿನಗಳಲ್ಲಿ ವಾರಕ್ಕೊಮ್ಮೆ ನೀರುಕೊಟ್ಟರೆ ಸಾಕು.

ಅಂತರ ಬೇಸಾಯ ಮತ್ತು ಕಳೆ ಹತೋಟಿ: ಕಳೆಗಳನ್ನು ಕಿತ್ತು ತೆಗೆಯಬೇಕು. ಬಿತ್ತನೆಯಾದ ಒಂದು ತಿಂಗಳ ನಂತರ ಸಾಲು ಎಳೆದರೆ ಸಾಕು.

ಆಸರೆ ಒದಗಿಸುವಿಕೆ: ಹಬ್ಬು ಬಗೆಗಳ ಗಿಡಗಳಿಗೆ ಸೂಕ್ತ ಆಸರೆ ಒದಗಿಸುವುದು ಅಗತ್ಯ. ಬಳ್ಳಿಗಳ ಹಂಬುಗಳ ಸಾಗುವ ಮುಂಚೆಯೇ ಅವುಗಳ ಬುಡದಲ್ಲಿ ಮುಳ್ಳುಕಂಟಿಗಳನ್ನು ಚು‌ಚ್ಚಿ ನಿಲ್ಲಿಸಬೇಕು. ಕೆಲವರು ತಂತಿ ಜಾಲರಿಯ ಚಪ್ಪರದ ಮೇಲೆ ಹಬ್ಬಿಸುತ್ತಾರೆ. ಚಪ್ಪರವು ನೆಲಮಟ್ಟದಿಂದ ೧.೮ರಿಂದ ೨.೦ ಮೀಟರ್ ಎತ್ತರದಲ್ಲಿದ್ದರೆ ಅನುಕೂಲ.

ಕೊಯ್ಲು ಮತ್ತು ಇಳುವರಿ: ಬಿತ್ತನೆಯಾದ ನಾಲ್ಕೈದು ತಿಂಗಳಲ್ಲಿ ಹೂವು ಕಾಣಿಸಿಕೊಳ್ಳುತ್ತವೆ. ಹೂವು ಹಲವಾರು ಹಂತಗಳಲ್ಲಿ ಬಿಡುತ್ತಿರುತ್ತವೆ. ಪರಾಗಸ್ಪರ್ಶಗೊಂಡ ಒಂದು ತಿಂಗಳಲ್ಲಿ ಕಾಯಿ ಬಲಿತು ಕೊಯ್ಲಿಗೆ ಸಿದ್ದವಾಗುತ್ತವೆ. ಚೆನ್ನಾಗಿ ಬಲಿತ ಕಾಯಿಗಳನ್ನು ಮಾತ್ರವೇ ಬಿಡಿಸಬೇಕು. ಹತ್ತು ದಿನಗಳಿಗೊಮ್ಮೆ ಕೊಯ್ಲು ಮಾಡಿದರೆ ಸಾಕು. ಬೆಳೆಯ ಅವಧಿಯಲ್ಲಿ ಹತ್ತು ಹದಿನೈದು ಕೊಯ್ಲುಗಳಿರುತ್ತವೆ. ಆರು ಮತ್ತು ಏಳನೆಯ ಕೊಯ್ಲುಗಳಲ್ಲಿ ಹೆಚ್ಚು ಇಳುವರಿ. ಹೆಕ್ಟೇರಿಗೆ ೮-೧೨ ಟನ್‌ಗಳಷ್ಟು ಬಲಿತ ಕಾಯಿ ಸಾಧ್ಯ.

ಕೀಟ ಮತ್ತು ರೋಗಗಳು: ತಿಂಗಳ ಹುರುಳಿಯಲ್ಲಿದ್ದಂತೆ.

ಬೀಜೋತ್ಪಾದನೆ: ಬಹುಮಟ್ಟಿಗೆ ಸ್ವಪರಾಗಸ್ಪರ್ಶದಿಂದ ಕೂಡಿದ ಬೆಳೆ. ಸ್ವಲ್ಪ ಮಟ್ಟಿನ ಪರಕೀಯ -ಪರಾಗಸ್ಪರ್ಶ ಸಹ ಇರುತ್ತದೆ. ಯಾವುದೇ ಎರಡು ತಳಿಗಳ ನಡುವೆ ಕಡೇ ಪಕ್ಷ ೫೦ ಮೀಟರ‍್ಗಳಷ್ಟು ಅಂತರ ಇರುವುದು ಅಗತ್ಯ. ಕಾಯಿಗಳು ಪೂರ್ಣ ಬಲಿತು ಹಳದಿ ಬಣ್ಣಕ್ಕೆ ತಿರುಗಿ ಒಣಗಿದಾಗ ಕಿತ್ತು ತೆಗೆದು ಬಿಸಿಲಿನಲ್ಲಿ ಹರಡಿ ಕೋಲಾಡಿಸಿದರೆ ಕಾಳು ಬೇರ್ಪಡುತ್ತವೆ. ಚೆನ್ನಾಗಿರುವ ಕಾಳನ್ನು ಆರಿಸಿ ಮತ್ತೆ ಬಿಸಿಲಲ್ಲಿ ಹರಡಿ, ಒಣಗಿಸಿ ಗೋಣಿಚೀಲಗಳಲ್ಲಿ ತುಂಬಿ ಭದ್ರಪಡಿಸಬೇಕು. ಯಾವುದಾದರೂ ಕೀಟನಾಶಕದ ಪುಡಿ ಬೆರೆಸಿದರೆ ಹುಳುಗಳ ಕಾಟ ಇರುವುದಿಲ್ಲ. ಬೆಳೆ ಚೆನ್ನಾಗಿ ಫಲಿಸಿದರೆ ಹೆಕ್ಟೇರಿಗೆ ೬೦೦-೭೦೦ ಕಿ.ಗ್ರಾಂ ಒಣ ಕಾಳು ಸಾಧ್ಯ. ಕಾಳು ಹೆಚ್ಚೆಂದರೆ ಒಂದೆರಡು ವರ್ಷಗಳವರೆಗೆ ಮಾತ್ರ ಜೀವಂತವಿರುತ್ತವೆ. ಆದ್ದರಿಂದ ಬಿತ್ತನೆಕಾಳನ್ನು ಹೆಚ್ಚು ಕಾಲ ಸಂಗ್ರಹಿಸಿಡಬಾರದು.