ಚಿಕಾಗೋದಿಂದ ಬೆಳಿಗ್ಗೆ ಎಂಟುಗಂಟೆಯ ವಿಮಾನವನ್ನು ಹಿಡಿದು, ಒಂದು ಗಂಟೆಯ ಪ್ರಯಾಣದ ನಂತರ ನಾನು ಇಳಿದದ್ದು ಸೇಂಟ್ ಲೂಯಿಸ್ ನಗರದಲ್ಲಿ. ಮಿಸ್ಸೌರಿ ಮತ್ತು ಮಿಸಿಸಿಪ್ಪಿ ನದಿಗಳ ನಡುವಣ ದಟ್ಟ ಹಸುರಿನ ಮಧ್ಯೆ ಹರಡಿಕೊಂಡಿರುವ ಸೇಂಟ್ ಲೂಯಿಸ್, ಮಿಸ್ಸೌರಿ ರಾಜ್ಯದ ಮುಖ್ಯ ನಗರಗಳಲ್ಲಿ ಒಂದು. ಅಮೆರಿಕಾ ದೇಶದಲ್ಲಿ ಮೊಟ್ಟಮೊದಲು ಐಸ್ ಕ್ರೀಂ ತಯಾರಾದದ್ದು ಈ ನಗರದಲ್ಲಿಯೇ. ಹಾಗೆಯೇ ‘ಟಾಂ ಸಾಯರ‍್ಸ್’ ಎಂಬ ಕಾದಂಬರಿಯನ್ನು ಬರೆದ ಸುಪ್ರಸಿದ್ಧ ಲೇಖಕ ಮಾರ್ಕ್‌ಟ್ವೇನ್ ಇದ್ದದ್ದು ಈ ಊರಿಗೆ ನೂರು ಮೈಲಿ ದೂರದ ಗ್ರಾಮವೊಂದರಲ್ಲಿ. ಸುಪ್ರಸಿದ್ಧ ನವ್ಯ ಕವಿ ಟಿ.ಎಸ್. ಎಲಿಯೆಟ್ ಹುಟ್ಟಿದ್ದೂ ಇದೇ ಊರಿನಲ್ಲಿ. ಚಾರಿತ್ರಿಕವಾಗಿ ಅಮೆರಿಕಾವನ್ನು ಹೊಸದಾಗಿ ಪ್ರವೇಶಿಸಿದ ಬಿಳಿ ಜನರು, ಇಲ್ಲಿನ ಮಿಸಿಸಿಪ್ಪಿ ನದೀ ತೀರವನ್ನು ತಲುಪಿ ಮೊಟ್ಟಮೊದಲು ಪಶ್ಚಿಮಾಭಿಮುಖವಾಗಿ ಪ್ರಯಾಣವನ್ನು ಕೈಕೊಂಡ ಘಟನೆಯ ನೆನಪಿಗಾಗಿ, ಭವ್ಯವಾಗಿ ನಿರ್ಮಿತಿಯಾಗಿರುವ ಉಕ್ಕಿನ ಕಮಾನು ಇರುವುದು ಇಲ್ಲಿಯೇ. ಈ ಕಮಾನನ್ನು ‘ಗೇಟ್‌ವೇ ಟು ದಿ ವೆಸ್ಟ್’ (ಪಶ್ಚಿಮದ ಹೆಬ್ಬಾಗಿಲು) ಎಂದು ಕರೆಯಲಾಗಿದೆ.

ಶ್ರೀ ವಿಠಲ ಭಟ್ ಅವರ ಮನೆಯಲ್ಲಿ ಅವರ ಅತಿಥಿಯಾಗಿ ಉಳಿದುಕೊಂಡಿದ್ದ ನನ್ನನ್ನು, ಶ್ರೀ ಸತೀಶ್ ಅವರು (ಇವರು ಬೆಂಗಳೂರಿಗೆ ಹತ್ತಿರದ ಕನಕಪುರದವರು) ಮರುದಿನ ಬೆಳಿಗ್ಗೆ ಸೇಂಟ್ ಲೂಯಿಸ್‌ನ ‘ಗೇಟ್‌ವೇ ಟು ದಿ ವೆಸ್ಟ್’ ಕಮಾನನ್ನು ತೋರಿಸಲು ಕರೆದುಕೊಂಡು ಹೋದರು. ಊರ ನಡುವೆ ಹಾದು, ಪೇಟೆ ಬೀದಿಗಳನ್ನು ದಾಟಿ, ಮಿಸಿಸಿಪ್ಪಿ ನದಿಯ ದಡದಲ್ಲಿರುವ ‘ಜೆಫರ್‌ಸನ್ ಮೆಮೋರಿಯಲ್ ಪಾರ್ಕ್’ ನಲ್ಲಿರುವ ತಳಮಾಳಿಗೆಯೊಳಗೆ ಕಾರು ನಿಲ್ಲಿಸಿ, ಲಿಫ್ಟ್‌ನಲ್ಲಿ ಮೇಲೇರಿ ಬಂದು, ವಿಸ್ತಾರವಾದ ಉದ್ಯಾನವನ್ನು ದಾಟಿದೊಡನೆಯೇ ಧುತ್ತೆಂದು ಎದುರಾಗುತ್ತದೆ, ಮಿಸಿಸಿಪ್ಪಿ ನದೀ ಜಲದಲ್ಲಿ, ತನ್ನ ಛಾಯೆಯನ್ನು ಚೆಲ್ಲುತ್ತಾ ನಿಂತಿರುವ ಬೃಹದಾಕಾರದ ಲೋಹದ ಕಮಾನು. ಸ್ಟೇನ್‌ಲೆಸ್ ಸ್ಟೀಲಿನಿಂದ ನಿರ್ಮಿತವಾದ ಕಾಮನ ಬಿಲ್ಲೊಂದನ್ನು ಬಗ್ಗಿಸಿ ನೆಲಕ್ಕೆ ಬೇರೂರಿಸಿದಂತೆ ಕಾಣುವ ಈ ಕಮಾನು ಆಧುನಿಕ ವಿಜ್ಞಾನದ ಒಂದು  ಮಹಾ ಅದ್ಭುತವಾಗಿದೆ. ‘ಗೇಟ್ ವೇ ಆರ್ಚ್’ ಎಂದು ಕರೆಯಲಾಗಿರುವ, ಲೋಹದ ಈ ಕಮಾನು ಅಮೆರಿಕಾದ ರಾಷ್ಟ್ರೀಯ ಉದ್ಯಾನಗಳಲ್ಲಿರುವ ಸ್ಮಾರಕಗಳಲ್ಲಿಯೇ ಅತಿ ವಿಶಿಷ್ಟವಾದದ್ದು. ಈ ಕಮಾನಿನ ಎತ್ತರ, ನೆಲಮಟ್ಟದಿಂದ ಆರುನೂರಾ ಮೂವತ್ತು ಅಡಿಗಳು. ಈಜಿಪ್ಟಿನ ಅತ್ಯಂತ ಎತ್ತರವಾದ ಪಿರಮಿಡ್‌ನ ಅಳತೆ ನಾನೂರು ಐವತ್ತು ಅಡಿಗಳು ಮಾತ್ರ; ಆದರೆ ಈ ಲೋಹದ ಕಮಾನು ಅದಕ್ಕಿಂತಲೂ ಎತ್ತರವಾದದ್ದು.

ಈ ಕಮಾನಿನ ತಳಭಾಗದ ವಿಸ್ತಾರದಲ್ಲಿ ಹಲವಾರು ಅಂಗಡಿಗಳೂ, ಒಂದು ರೆಸ್ಟೋರಾಂಟ್ ಮತ್ತು ಒಂದು ಸಣ್ಣ ಥಿಯೇಟರ್ ಇರುವುದರ ಜತೆಗೆ ಈ ಕಮಾನನ್ನು ಪಶ್ಚಿಮದ ಹೆಬ್ಬಾಗಿಲು ಎಂದು ಕರೆದಿದ್ದರ ಹಿಂದಿರುವ ಚರಿತ್ರೆಯನ್ನು ಚಿತ್ರಿಸುವ ಒಂದು ದೊಡ್ಡ ಮ್ಯೂಸಿಯಂ ಕೂಡಾ ಇದೆ. ಮೊಟ್ಟಮೊದಲು ಅಮೆರಿಕಾಕ್ಕೆ ಬಂದ ಪಶ್ಚಿಮದ ಬಿಳಿಯರು, ಮಿಸಿಸಿಪ್ಪಿ ನದಿಯನ್ನು ದಾಟಿ, ಪಶ್ಚಿಮ ಮುಖವಾಗಿ ತಮ್ಮ ವಿಸ್ತರಣೆಯ ಸಂಚಾರವನ್ನು ಕೈಕೊಂಡ ಕಥನ ಈ ಮ್ಯೂಸಿಯಂನಲ್ಲಿ ಸಚಿತ್ರವಾಗಿ ದಾಖಲಾಗಿದೆ. ಅಂದಿನ ಮೊದಲಿಗರು, ತಾವು ಕಂಡರಿಯದ ಈ ಭೂಖಂಡದಲ್ಲಿ ನೆಲೆಯನ್ನರಸಿಕೊಂಡು ಹೊರಟಾಗ, ದಾರಿಯುದ್ದಕ್ಕೂ ತಾವು ನೋಡಿದ ನೆಲಗಳ ವೈವಿಧ್ಯವನ್ನೂ, ಇಲ್ಲಿನ ಮೂಲನಿವಾಸಿಗಳಿಂದ ಎದುರಿಸಬೇಕಾಗಿ ಬಂದ ಪ್ರತಿಭಟನೆಗಳನ್ನೂ, ಪ್ರಾಕೃತಿಕವಾದ ಅಡ್ಡಿ ಆತಂಕಗಳನ್ನೂ, ಅನುಭವಿಸಬೇಕಾಗಿ ಬಂದ ಕಷ್ಟ-ನಷ್ಟಗಳನ್ನೂ, ಕಟ್ಟಿಕೊಂಡ ಊರುಗಳ ಸ್ವರೂಪವನ್ನೂ, ಕೈಕೊಂಡ ಕೃಷಿ ಪ್ರಧಾನವಾದ ಉದ್ಯೋಗಗಳನ್ನೂ, ಒಟ್ಟಾರೆಯಾಗಿ, ಹಿಂದಿನ ಅಮೆರಿಕನ್ನರ ಒಂದು ಶತಮಾನದ ಸಾಹಸದ ಕಥೆಯನ್ನು ತಕ್ಕ ಅಂಕಿ – ಅಂಶಗಳೊಂದಿಗೆ ಹಾಗೂ ಚಿತ್ರಗಳೊಂದಿಗೆ ಈ ವಸ್ತು ಪ್ರದರ್ಶನಾಲಯ ಪರಿಚಯ ಮಾಡಿಕೊಡುತ್ತದೆ.

ಈ ಚರಿತ್ರೆಯನ್ನು ಹಾಗೂ ಲೋಹದ ಕಮಾನನ್ನು ನಿರ್ಮಿಸಲಾದ ಸಂದರ್ಭವನ್ನು ಕುರಿತ ಸಾಕ್ಷ್ಯ ಚಿತ್ರವನ್ನು, ಈ ತಳಮಾಳಿಗೆಯೊಳಗಣ ಚಿಕ್ಕ ಥಿಯೇಟರಿನಲ್ಲಿ ತೋರಿಸಲಾಗುತ್ತದೆ. Monument to the Dream (ಕನಸಿಗೊಂದು ಸ್ಮಾರಕ) ಎಂಬ ಹೆಸರಿನ ಕಿರು ಚಿತ್ರದ ಪ್ರದರ್ಶನವನ್ನು ನೋಡಿದ ನಂತರ, ನಾವು ೧೨.೪೫ಕ್ಕೆ, ಈ ಕಮಾನಿನೊಳಗೆ ಏರಿ ಹೋಗುವ ಟಿಕೆಟ್ಟನ್ನು ಕೊಂಡುಕೊಂಡು, ಮೆಟ್ಟಿಲುಗಳ ಮೂಲಕ ಮತ್ತೆ ಐವತ್ತು ಅಡಿಗಳಷ್ಟು ಕೆಳಕ್ಕೆ ಇಳಿದು ಕ್ಯೂನಲ್ಲಿ ಕಾದು ನಿಂತೆವು. ಅಲ್ಲಿ ಎಂಟು ಬಾಗಿಲುಗಳು. ಆ ಬಾಗಿಲುಗಳ ಮೇಲೆ ಅಂಕಿಗಳನ್ನು ಕಾಣಿಸಲಾಗಿದೆ. ಧ್ವನಿವರ್ಧಕದ ಮೂಲಕ ಎಷ್ಟೆಷ್ಟು ಜನ ಒಂದು ಸಲಕ್ಕೆ ಒಂದೊಂದು ಬಾಗಿಲ ಮುಂದೆ ನಿಲ್ಲಬೇಕು ಎಂಬುದನ್ನು ಸೂಚಿಸಲಾಗುತ್ತದೆ. ಅದರಂತೆ ಒಂದೊಂದು ಬಾಗಿಲ ಮುಂದೆ ಐದೈದು ಜನ ನಿಲ್ಲಬೇಕಾಗುತ್ತದೆ. ನಾವು ನಿಂತ ಕೆಲವೇ ನಿಮಿಷಗಳಲ್ಲಿ, ಭೋರೆಂಬ ಸದ್ದಾಗಿ, ಆ ಸದ್ದು ನಿಂತ ಅರ್ಧ ನಿಮಿಷದ ಒಳಗೆ ಆ ಎಂಟೂ ಬಾಗಿಲುಗಳು ತಮಗೆ ತಾವೇ ತೆರೆದುಕೊಳ್ಳುತ್ತವೆ. ಒಳಗೆ ಕೂತವರು ಹೊರಗೆ ಬಂದಂತೆ, ಒಳಕ್ಕೆ ಹೋಗಲು ಕಾದವರು ತೆರೆದ ಬಾಗಿಲ ಮೂಲಕ ಬ್ಯಾರೆಲ್ ಆಕಾರದ ಗೂಡುಗಳ ಒಳಕ್ಕೆ ಹೋಗಿ ಅಲ್ಲಿ ವೃತ್ತಾಕಾರದಲ್ಲಿ ಅಳವಡಿಸಿರುವ ಸೀಟುಗಳಲ್ಲಿ ಕೂತುಕೊಳ್ಳುತ್ತಾರೆ. ಕೂತ ಒಡನೆಯ ಬಾಗಿಲುಗಳು ಸರಿದು ಮುಚ್ಚಿಕೊಳ್ಳುತ್ತವೆ. ಮಂದವಾದ ದೀಪದ, ಹವಾ ನಿಯಂತ್ರಿತವಾದ ಆ ಗೂಡುಗಳು, ಅವುಗಳಿಗೆ ಲಗತ್ತಾದ ಗಾಲಿಗಳಿಂದಾಗಿ, ಆ ಕಮಾನಿನ ಸುರಂಗಾಕಾರದ ಉದ್ದಕ್ಕೂ ಹಾಸಿದ ಕಂಬಿಗಳ ಮೇಲೆ ಉರುಳುತ್ತಾ, ಮೇಲೆ ಏರತೊಡಗುತ್ತವೆ. ಆ ಕಮಾನಿನಾಕಾರದೊಳಗೆ ಹೋದ ಹೋದಂತೆ, ನಾವು ಕೂತ ನಿಲುವಿನಲ್ಲಿ ಯಾವುದೇ ಏರುಪೇರಾಗದೆ, ಮೂರುವರೆ ನಿಮಿಷಗಳ ಪ್ರಯಾಣದ ನಂತರ ಚಲನೆ ನಿಲುಗಡೆಗೆ ಬಂದು, ಗೂಡಿನ ಬಾಗಿಲು ತಾನಾಗಿಯೇ ತೆರೆದುಕೊಳ್ಳುತ್ತದೆ. ಗೂಡಿನಿಂದ ಹೊರಗೆ ಬಂದು ನಾಲ್ಕಾರು ಮೆಟ್ಟಲನ್ನೇರಿದರೆ, ನಾವು ನೆಲಮಟ್ಟದಿಂದ ೬೩೦ ಅಡಿಗಳೆತ್ತರದ ಆ ಲೋಹದ ಕಮಾನಿನ ನಡುವಣ ‘ಬಾಗಿ’ (Bend) ನಲ್ಲಿ ೬೫ ಅಡಿ ಉದ್ದ ಮತ್ತು ಏಳಡಿ ಅಗಲವಾದ ಹವಾನಿಯಂತ್ರಿತ ಹಂತದಲ್ಲಿ ನಿಲ್ಲುತ್ತೇವೆ. ನಿಂತು ಕಮಾನಿನೊಳಗಣ ವಿಸ್ತಾರದೊಳಗಿನಿಂದ ಕೆಳಕ್ಕೆ ನೋಡಿದರೆ, ಇಡೀ ಸೇಂಟ್ ಲೂಯಿಸ್ ನಗರದ ಹರಹೂ, ಈ ಕಮಾನಿನ ಕೆಳಗೆಲ್ಲೋ ಸಣ್ಣಗೆ ತೊದಲುವ ನದಿಯೊಳಗೆ ತೇಲುವ ದೋಣಿಗಳ ಪುಟ್ಟ ಆಕೃತಿಗಳೂ ಕಾಣಿಸುತ್ತವೆ. ಸ್ವಲ್ಪ ಹೊತ್ತು ಈ ಕಮಾನಿನೊಳಗೆ ನಿಂತಿದ್ದು, ಮತ್ತೆ ಸರದಿ ಕಾದು ಕೆಳಪ್ರಯಾಣ ಮುಗಿಸಿ, ಹೊರಕ್ಕೆ ಬಂದು, ಉದ್ಯಾನದಲ್ಲಿ ನಿಂತು ನೋಡಿದರೆ, ಬೃಹದಾಕಾರದ ಲೋಹದ ಕಮಾನು, ಮಧ್ಯಾಹ್ನದ ಬಿಸಿಲಿನಲ್ಲಿ ಥಳಥಳ ಹೊಳೆಯುತ್ತಾ, ನೆಲದ ಪಾಣಿಪೀಠದ ಮೇಲೆ ವಿರಾಜಿಸುವ ವಿಜ್ಞಾನದ ಮಹಾ ಶಿವಲಿಂಗದಂತೆ ಆಕಾಶದ ಹಿನ್ನೆಲೆಯಲ್ಲಿ ವಿಸ್ಮಯವನ್ನುಂಟು ಮಾಡುತ್ತದೆ.

ಸೇಯಿಂಟ್ ಲೂಯಿಸ್‌ನಲ್ಲಿ ನಾನು ನೋಡಲು ಸಾಧ್ಯವಾದ ಮತ್ತೊಂದು ಆಶ್ಚರ್ಯವೆಂದರೆ ಮಿರಾಮಿಕ್ ಗುಹೆಗಳ ರಚನೆ. ಈ ನಗರದ ಪಶ್ಚಿಮಕ್ಕೆ ಐವತ್ತು ಮೈಲಿಗಳ ದೂರದಲ್ಲಿರುವ ಮಿರಾಮಿಕ್ ಗುಹೆಗಳು ನಿಸರ್ಗದ ಪವಾಡಗಳಲ್ಲಿ ಒಂದು. ಈ ಗುಹೆಗಳು ಮಿರಾಮಿಕ್ ಎಂಬ ಹೆಸರಿನ ಸಣ್ಣ ನದಿಯ ದಡದಲ್ಲಿರುವ ಬೆಟ್ಟದ ಸಾಲುಗಳ ಒಳಗಿವೆ. ಈ ಬೆಟ್ಟದ ಬುಡದಲ್ಲೊಂದು ಗುಹೆಯ ಬಾಯನ್ನು ಪ್ರವೇಶಿಸಿದರೆ, ಅಲ್ಲಿ ಈ ಗುಹೆಗಳಿಗೆ ಸಂಬಂಧಿಸಿದ ಸಣ್ಣದೊಂದು ಕಛೇರಿ ಮತ್ತು ರೆಸ್ಟೋರೆಂಟ್ ಹಾಗೂ ಒಂದು ಅಂಗಡಿ ಮಳಿಗೆ ಇವೆ. ಒಬ್ಬರಿಗೆ ಆರು ಡಾಲರ್ ಪ್ರವೇಶಕ್ಕೆ. ಟಿಕೆಟ್ ಪಡೆದು ಮಾರ್ಗದರ್ಶಿಯ ಜತೆಗೆ, ಬೆಚ್ಚನೆಯ ಉಡುಪು ತೊಟ್ಟು ಹೊರಟರೆ, ಆ ಗುಹೆಯ ವಿಸ್ತಾರ ಯಾರನ್ನೂ ದಂಗು ಬಡಿಸುತ್ತದೆ. ಒಳಗೆ, ತಣ್ಣಗೆ ಕೊರೆವ ತಂಪಿನಲ್ಲಿ, ಏರಿಳಿಯುವ ದಾರಿಗಳಲ್ಲಿ ಮಾರ್ಗದರ್ಶಿಯ ಜತೆಗೆ ನಾವು ಹೋದ ಹೋದಂತೆ ಆ ಗುಹೆಗಳೊಳಗೆ ಮಾರ್ಗದರ್ಶಿ ಸ್ವಿಚ್ ಅದುಮಿದಾಗ ಹತ್ತಿಕೊಳ್ಳುವ ಉಜ್ವಲವಾದ ಬಣ್ಣದ ದೀಪದ ಬೆಳಕಿನಲ್ಲಿ ತೆರೆದುಕೊಳ್ಳುವ ಶಿಲಾವಿನ್ಯಾಸಗಳಂತೂ, ನಿಸರ್ಗ ಪ್ರತಿಭೆಯ ಅದ್ಭುತ ಕೌಶಲಗಳಂತೆ ತೋರುತ್ತವೆ. ಬೆಳ್ಳನೆಯ ಸುಣ್ಣಕಲ್ಲಿನ ಈ ಗುಹೆಗಳಲ್ಲಿ ಪದರಪದರಗಳಾಗಿ, ದಳದಳಗಳಾಗಿ ವಿನ್ಯಾಸಗೊಂಡ ಶಿಲಾಕೃತಿಗಳು ಕಲ್ಲರಳಿ ಹೂವಾದ ಬೆರಗನ್ನು ಕವಿಸುತ್ತವೆ. ಕಲ್ಲು ಅನ್ನುವುದು ತನ್ನ ಘನರೂಪಕ್ಕೆ ಬೇಸತ್ತು, ದ್ರವರೂಪವಾಗಲು ಪ್ರಯತ್ನಿಸಿ, ತಾತ್ಕಾಲಿಕವಾಗಿ ಸ್ತಬ್ಧವಾಗಿದೆಯೋ ಅನ್ನುವಂತೆ, ಕಲ್ಲು ವಿವಿಧಾಕಾರದ ಎಳೆಗಳಾಗಿ, ಬಿಳಲುಗಳಾಗಿ, ಬೇರುಗಳಾಗಿ, ಅಸಂಖ್ಯಾತ ಚಿತ್ರವಿಚಿತ್ರಾಕೃತಿಗಳಾಗಿ ರೂಪುಗೊಂಡಿದೆ. ಮಾರ್ಗದರ್ಶಿ ಉದ್ದಕ್ಕೂ ಇಂತಹ ಅನೇಕ ಕುಹರಗಳೊಳಗೆ ಸ್ವಿಚ್ಚು ಹಾಕಿದಾಗ, ಬಿದ್ದ ಬಣ್ಣದ ಬೆಳಕಿನೊಳಗೆ ಮೇಲೆ ಹಾಗೂ ಅಕ್ಕಪಕ್ಕಗಳಲ್ಲಿ, ಸ್ತಬ್ಧವಾದ ಹಾಲಿನ ಧಾರೆಗಳಂತೆ, ಕಾಮನಬಿಲ್ಲಿನ ಎಳೆಗಳಂತೆ, ಎಳೆ ಮಿಂಚಿನ ಗೊಂಚಲುಗಳಂತೆ ವಿನ್ಯಾಸಗೊಂಡ ಕಲ್ಲಿನ ಕುಸುರಿಗೆಲಸ ನೋಟಕರನ್ನು ಹಿಡಿದು ನಿಲ್ಲಿಸುತ್ತದೆ. ಕಲ್ಲನ್ನು ಹೀಗೆ ಎಳೆ ಎಳೆಯಾಗಿ, ದಳದಳವಾಗಿ ಬಿಡಿಸಿದ ನಿಸರ್ಗದ ಅದೃಶ್ಯ ಹಸ್ತದ ಕಲೆಗಾರಿಕೆಯ ಈ ವಿಸ್ತಾರದಲ್ಲಿ ಏರಿ ಇಳಿದು, ಇಳಿದು ಎರಿ, ಅಲ್ಲಲ್ಲಿ ಮೊರೆಯುವ ಹಾಗೂ ಧುಮುಕುವ ನೀರಿನ ಸದ್ದನ್ನು ಕೇಳುತ್ತ, ಕೆಲವೆಡೆ ನಿಂತ ನೀರಿನಲ್ಲಿ ಪ್ರತಿಬಿಂಬಿತವಾಗುವ ಈ ಗುಹಾಶಿಲ್ಪ ಚಾತುರ‍್ಯದ ರಮಣೀಯತೆಯನ್ನು ನೋಡುತ್ತ, ಶಬ್ದ-ನಿಶ್ಯಬ್ದ ಮತ್ತು ನೆಳಲು – ಬೆಳಕಿನ ಹಲವು ಮೈಲಿಗಳಗಲದ ಈ ಗುಹಾ ಪ್ರಪಂಚದ ಪವಾಡದ ಕಲೆಯ ಬಲೆಯಿಂದಾಚೆಗೆ ಬರಲು ಸುಮಾರು ಎರಡೂವರೆ ಗಂಟೆಗಳೇ ಹಿಡಿಯುತ್ತವೆ.

ಮಿರಾಮಿಕ್ ಗುಹೆಗಳ ಈ ಶಿಲಾ ಪದರಗಳು ಹೀಗೆ ವಿವಿಧ ವಿನ್ಯಾಸಗಳನ್ನು ತಾಳಲು ಅನೇಕ ಶತಮಾನಗಳೇ ಹಿಡಿದಿರಬೇಕು. ಈ ಗುಹೆಗಳು ಮಿಸ್ಸೌರಿ ರಾಜ್ಯದ ವಿಶೇಷತೆಗಳು ಕೂಡಾ. ಈ ರಾಜ್ಯದಲ್ಲಿರುವ ಇಂಥ ಸಾವಿರಾರು ಗುಹೆಗಳಲ್ಲಿ ಮಿರಾಮಿಕ್ ಗುಹೆಗಳೇ ದೊಡ್ಡವೆಂದು ಹೇಳಲಾಗಿದೆ. ಅಮೆರಿಕದ ಮೂಲ ನಿವಾಸಿಗಳಾದ ರೆಡ್ ಇಂಡಿಯನ್‌ರು, ಈ ಗುಹೆಗಳು ತಮ್ಮ ದೇವರ ನಿವಾಸಗಳೆಂದು ತಿಳಿದಿದ್ದರಂತೆ. ಈ ಗುಹೆಗಳನ್ನು ಹದಿನೆಂಟನೆ ಶತಮಾನದ ಗಣಿ ಕೆಲಸಗಾರನೊಬ್ಬ ಮೊಟ್ಟ ಮೊದಲಿಗೆ ಕಂಡುಹಿಡಿದನಂತೆ. ಹತ್ತೊಂಭತ್ತನೆಯ ಶತಮಾನದಲ್ಲಿ ಜೆಸ್ಸೀ ಜೇಮ್ಸ್ ಎಂಬ ದರೋಡೆಕೋರನೊಬ್ಬ, ತನ್ನ ಸಂಗಡಿರೊಂದಿಗೆ ಈ ಗುಹೆಗಳಲ್ಲಿ ಅಡಗಿಕೊಂಡು, ತಾನು ಲೂಟಿ ಮಾಡಿದ ಸಂಪತ್ತನ್ನು ಇಲ್ಲಿ ಬಚ್ಚಿಟ್ಟಿದ್ದನಂತೆ. ನಮ್ಮ ಕನ್ನೇಶ್ವರ ರಾಮನನ್ನು ಕುರಿತು ಹೇಗೋ ಹಾಗೆಯೆ, ಈ ಜೆಸ್ಸೀ ಜೇಮ್ಸ್‌ನನ್ನು ಕುರಿತ ದಂತಕತೆಗಳೂ ಈ ಪರಿಸರದಲ್ಲಿ ಪ್ರಚಲಿತವಾಗಿವೆ. ಈಗಲೂ ಈ ಗುಹೆಯ ಪ್ರವೇಶದ್ವಾರದಲ್ಲಿ, ಮೇಣದಿಂದ ಮಾಡಿದ ಜೆಸ್ಸೀ ಜೇಮ್ಸ್‌ನ ಆಕೃತಿಯೊಂದು ಪ್ರವಾಸಿಗರನ್ನು ಎದುರುಗೊಳ್ಳುತ್ತದೆ.