ಜೈನಧರ್ಮದ ಇಳಿಗಾಲದಲ್ಲಿ, ಆಗಲೇ ಸಾಕಷ್ಟು ಸವೆದು ಹೋಗಿದ್ದ ಮಾರ್ಗಕಾವ್ಯ ಪರಂಪರೆಯಲ್ಲಿ ನಿಂತು ನೇಮಿಚಂದ್ರನು, ‘ನೇಮಿನಾಥ ಪುರಾಣ’ ಮತ್ತು ‘ಲೀಲಾವತೀ ಪ್ರಬಂಧ’ ಎಂಬ ಕೃತಿಗಳನ್ನು ರಚಿಸುವುದರ ಮೂಲಕ ಮತ್ತೆ ಮಾರ್ಗ ಕಾವ್ಯಪರಂಪರೆಯನ್ನು ಎತ್ತಿ ಹಿಡಿದವನು. ಈ ಪ್ರಯತ್ನದಲ್ಲಿ ಅವನು ತನಗಿಂತ ಹಿಂದಿನ ಅನೇಕ ಜೈನಕವಿಗಳ, ಮುಖ್ಯವಾಗಿ ಪಂಪ, ರನ್ನ, ನಯಸೇನಾದಿಗಳ ಪ್ರಭಾವಕ್ಕೆ ಧಾರಾಳವಾಗಿ ಒಳಗಾಗಿದ್ದಾನೆ. ಜೈನಧರ್ಮದ ಕವಿಯೊಬ್ಬ, ತನಗಿಂತ ಹಿಂದಿನ ಜೈನಕವಿಗಳ ಪ್ರಭಾವಕ್ಕೆ ಮನಃಪೂರ್ವಕವಾಗಿ ಒಳಗಾಗುವುದು ಆಶ್ಚರ್ಯದ ಸಂಗತಿಯೇನಲ್ಲ. ಸ್ವಾರಸ್ಯದ ಸಂಗತಿ ಎಂದರೆ, ನೇಮಿಚಂದ್ರ ತನ್ನ ಸಮೀಪಕಾಲೀನರಾದ ವೀರಶೈವ ವಚನಕಾರರ ಪ್ರಭಾವಕ್ಕೂ ಒಳಗಾಗಿದ್ದಾನೆ ಎನ್ನುವುದು. ಈ ಪ್ರಭಾವ ಅವನ ಕೃತಿಗಳ ಮೇಲೆ ಆಗಿರುವ ಜೈನ ಕವಿಗಳ ಪ್ರಭಾವದಷ್ಟು ದಟ್ಟವಾಗಿಲ್ಲ ಎಂಬುದು ನಿಜವಾದರೂ, ಅನ್ಯಧರ್ಮದ ಅದೂ ಅಂದು ಜೈನಧರ್ಮಕ್ಕೆ ಪ್ರಬಲ ಪ್ರತಿಸ್ಪರ್ಧಿಯಾಗಿದ್ದ ವೀರಶೈವ ಧರ್ಮದ ವಚನಕಾರರ ಪ್ರಭಾವ, ಗುರುತಿಸಿದರೆ ಕಾಣುವಷ್ಟಿದೆ ಎಂಬುದು ವಿಶೇಷದ ಸಂಗತಿಯಾಗಿದೆ.

ನೇಮಿಚಂದ್ರನ ‘ಲೀಲಾವತಿ’ ಮತ್ತು ‘ನೇಮಿನಾಥ ಪುರಾಣ’ಗಳಲ್ಲಿನ ಹಲವು ಉಕ್ತಿಗಳಲ್ಲಿ, ಅದರಲ್ಲೂ ವಿಶೇಷವಾಗಿ ‘ಲೀಲಾವತೀ ಪ್ರಬಂಧ’ದಲ್ಲಿ, ನಮ್ಮ ಗಮನಕ್ಕೆ ಬಂದಂತೆ ಬಸವಣ್ಣನವರ ಹತ್ತಕ್ಕೂ ಮಿಗಿಲಾದ ಸಂಖ್ಯೆಯ ವಚನಗಳ ನೆನಕೆ, ನೆರಳು ಮತ್ತು ಅಳವಡಿಕೆಗಳನ್ನು ಕಾಣಬಹುದಾಗಿದೆ. ಹಾಗೆಯೇ ಅಲ್ಲಮ, ಅಕ್ಕಮಹಾದೇವಿ ಇವರ ವಚನಗಳಿಂದ ಪ್ರಭಾವಿತವಾದ ಒಂದೆರಡು ಉಕ್ತಿಗಳೂ ಇವೆ.

ನೇಮಿಚಂದ್ರನ ‘ಲೀಲಾವತಿಯ ಪೀಠಿಕಾ ಪ್ರಕರಣದಲ್ಲಿ ಕಾವ್ಯಾಸ್ವಾದನ ರಸಿಕರಲ್ಲದ ಮೂರ್ಖ’ರನ್ನು ಕುರಿತು-

‘ತೀರ್ಥಾಂಬುವಂ ಸುರಿದೆಲ್ಲಂ ಪೊಡೆವಟ್ಟು
ಪೂಜಿಸಿದೊಡಂ ಕಲ್ ಮೆಲ್ಲಿತೇನಾದುದೇ
(ಲೀಲಾ. ೧-೫೧)

ಎಂಬ ಮಾತಿದೆ. ಈ ಉಕ್ತಿ ಬಸವಣ್ಣನವರ-

ಎನಿಸು ಕಾಲ ಕಲ್ಲು ನೀರೊಳಗಿರ್ದರೇನು
ನೆನೆದು ಮಿದುವಾಗಬಲ್ಲುದೇ    (ಬ.ವ.ಪು. ೨೫; ವ. ೯೯)

ಎಂಬ ವಚನವನ್ನು ಥಟ್ಟನೆ ನೆನಪಿಗೆ ತರುತ್ತದೆ. ಹಾಗೆಯೇ ನೇಮಿಚಂದ್ರನ ಮಾತು, ಬಸವಣ್ಣನವರ ಈ ವಚನದ ಪ್ರಭಾವದಿಂದಲೇ ಮೂಡಿರಬಹುದೇನೋ ಎಂಬ ಸಂದೇಹವೇಳುತ್ತದೆ. ಇಂಥ ಸಂದರ್ಭದಲ್ಲಿ ಒಂದು ಮತ್ತೊಂದರ ಪ್ರಭಾವದಿಂದಲೆ ಮೂಡಿದ್ದು ಎಂದು ಖಚಿತವಾಗಿ ಹೇಳುವುದು ಕಷ್ಟವಾಗುತ್ತದೆ. ಯಾಕೆಂದರೆ, ನೇಮಿಚಂದ್ರ ಹಾಗೂ ಬಸವಣ್ಣನವರಿಗೆ, ಮೂಲವಾದ ಬೇರೊಂದು ಇದೇ ಅರ್ಥದ ಮಾತು, ವಿವೇಕದ ನುಡಿಯಾಗಿ ಗಾದೆ ಮಾತಿನಂತೆ ಜನರಲ್ಲಿ ಬಳಕೆಯಾಗಿ ಇದ್ದಿರಬಹುದು ಎಂಬ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ‘ನೀರಲ್ಲಿ ನೆನೆದ ಕಲ್ಲು ಮಿದುವಾಗಲಾರದು’- ಎಂಬ ಆಲೋಚನೆಗೆ, ಬಸವಣ್ಣನವರಲ್ಲಿ ಮತ್ತು ನೇಮಿಚಂದ್ರನಲ್ಲಿ ಬಂದಿರುವ ಚಿತ್ರಗಳು ಬೇರೆಬೇರೆ. ಒಂದು ಎಷ್ಟು ಕಾಲವೂ ನೀರಲ್ಲಿ ಮುಳುಗಿರುವ ಕಲ್ಲು, ಇನ್ನೊಂದು ದೇವಸ್ಥಾನದ ತೀರ್ಥಾಭಿಷೇಕದಿಂದ ನೆನೆಯುವ ಕಲ್ಲು. ಆದರೆ ನೇಮಿಚಂದ್ರನ ಉಕ್ತಿ, ಬಸವಣ್ಣನವರ ಉಕ್ತಿಯನ್ನು ಥಟ್ಟನೆ ನೆನಪಿಗೆ ತರುವಷ್ಟು ಅರ್ಥಸಾಮ್ಯವನ್ನು ಹೊಂದಿದೆ.

ನೇಮಿಚಂದ್ರನಿಗೂ, ವಚನಕಾರರಿಗೂ ತೀರ ಹತ್ತಿರದ ಸಂಬಂಧವಿದೆ ಎಂಬುದನ್ನು ಬಹುಮಟ್ಟಿಗೆ ದೃಢಪಡಿಸುವ ಈ ಕೆಲವು ಉಕ್ತಿಗಳನ್ನು ಗಮನಿಸಿ:

೧.     ಕುರುಳಂ ಕೊಯ್ದೇಱಿಸುವರ್
ಮರುಳ್ಗಳಜ್ಞಾನಿ ದೇವತೆಯರ್ಗೆ (ಲೀಲಾ. ೭-೪೯)

೨.      ನಿಱಿಗಳನಿಕ್ಕಿ ದಾಂಟಿಸದೆ……. (ಲೀಲಾ. ೨-೯೩)

೩.      ಪುಲ್ಲಕಿರ್ಚುಂ ಪೊಲೆಯನ ಕೆಳೆಯಂ
ಮಾಡದಾವಂಗೆ ಕೇಡಂ (ಲೀಲಾ ೯-೨೦)

೪.     ನಾಯ್ಗೆ ತೆಂಗೇವುದೋ (ಲೀಲಾ. ೨-೧೧೧)

ಇವುಗಳು, ಅನುಕ್ರಮವಾಗಿ ಈ ಕೆಳಗಿನ ಉಕ್ತಿಗಳನ್ನು ನೆನಪಿಗೆ ತರುತ್ತವೆ :

೧.     ಕುರುಳು ಬೆರಳು ಮುಡುಹು ಮಂಬಲ್ಲ ಕೊಳ್ಳಾ[1]
(ಬ.ವ.ಪು. ೧೨೬-ವ.೪೯೯)

೨.      ನಿಱಿಯನಿಕ್ಕಿ ದಾಂಟಿದರೆ ಅಂತೆನ್ನ ನಂಬಾ
(ಬ.ವ.ಪು. ೧೨೬ ವ. ೪೯೯)

೩.      ಹುಲ್ಲ ಕಿಚ್ಚು-ಹೊಲೆಯನ ಮೇಳಾಪ;
ಅಲ್ಲಿ ಹುರುಳಿಲ್ಲ. ಕೂಡಲ ಸಂಗಮದೇವಾ
(ಬ.ವ.ಪು-೨೯-ವ. ೧೧೨)

೪.     ನಾಯಿಗೆ ನಾರಿವಾಣವಕ್ಕುವುದೇ……
(ಬ.ವ.ಪು.-೯ ವ.೩೧)

ವಚನಕಾರರ ಸಾಮಾಜಿಕ ಪರಿಸರದಲ್ಲಿ ಅನೇಕ ಬಗೆಯ ಕ್ಷುದ್ರ ದೇವತಾರಾಧನೆಗಳು ಇದ್ದುವು. ತಾವು ಹರಸಿಕೊಂಡ ದೇವತೆಗಳಿಗೆ, ಕುರುಳನ್ನು (ತಲೆಗೂದಲು) ಕತ್ತರಿಸಿ ಕೊಡುವುದೂ, ಬೆರಳುಗಳನ್ನೆ ಕತ್ತರಿಸಿ ಒಪ್ಪಿಸುವುದೂ, ಮುಡುಹು (ಭುಜ)ಗಳ ಮೇಲೆ ಮುದ್ರೆಯೊತ್ತಿ ಕೊಳ್ಳುವುದೂ, ಮುಂಬಲ್ಲುಗಳನ್ನು ಕಳಚಿಕೊಡುವುದೂ ರೂಢಿಯಲ್ಲಿತ್ತೆಂಬುದು, ಇಲ್ಲಿ ಕಾಣಿಸಿರುವ ಬಸವಣ್ಣನವರ ಮಾತಿನಲ್ಲಿ ಸ್ಪಷ್ಟವಾಗಿದೆ. ನೇಮಿಚಂದ್ರನೂ ತನ್ನ ಕಾವ್ಯದ ಸಂದರ್ಭವೊಂದರಲ್ಲಿ ‘ಕುರುಳಂ ಕೊಯ್ದೇರಿಸುವರ್’ ಎಂಬ ಮಾತಿನಲ್ಲಿ ಅದೇ ಪೂಜಾವಿಧಿಯನ್ನು ಪ್ರಸ್ತಾಪಿಸುತ್ತಾನೆ; ಆದರೆ ಹಾಗೆ ಮಾಡುವವರು ‘ಮರುಳ್ಗಳ್’ ಎಂದೂ, ಅಂಥ ಪೂಜೆ ಸಲ್ಲುತ್ತಿದ್ದುದು ‘ಅಜ್ಞಾನಿ ದೇವತೆಯರ್ಗೆ’-ಎಂದೂ ಹೇಳುತ್ತಾನೆ. ವಾಸ್ತವವಾಗಿ ವಚನಕಾರರೂ ಇಂಥ ದೇವತೆಗಳನ್ನೂ ಮತ್ತು ಅವುಗಳಿಗೆ ಸಂಬಂಧಪಟ್ಟ ವಿಲಕ್ಷಣ ಆರಾಧನಾ ವಿಧಿಗಳನ್ನೂ ತೀವ್ರವಾಗಿ ಪ್ರತಿಭಟಿಸಿದವರು. ಆದರೆ ಬಸವಣ್ಣನವರು, ಇಂಥ ಆರಾಧನಾ ವಿಧಿಯನ್ನು ಪ್ರತಿಭಟಿಸುವ ಪಕ್ಷದವರಾಗಿದ್ದರೂ, ತಮ್ಮಇಷ್ಟದೈವವಾದ ಕೂಡಲಸಂಗನನ್ನು ಕುರಿತು ‘ಕುರುಳು ಬೆರಳು, ಮುಡುಹು ಮುಂಬಲ್ಲ ಕೊಳ್ಳಾ’- ಎಂದು, ಕ್ಷುದ್ರ ದೇವತಾರಾಧನೆಯ ಪರಿಭಾಷೆಯಲ್ಲೆ ಮಾತನಾಡಿರುವುದು ಆಶ್ಚರ್ಯದ ಸಂಗತಿಯಾಗಿದೆ. ಇದೇನೇ ಇರಲಿ, ನೇಮಿಚಂದ್ರನ ಹಾಗೂ ಬಸವಣ್ಣನವರ ಉಕ್ತಿಯಲ್ಲಿರುವ ಸಾಮ್ಯದ ಕಡೆಗೆ ಗಮನ ಸೆಳೆಯುವುದು ನಮ್ಮಉದ್ದೇಶ. ಜತೆಗೆ, ನೇಮಿಚಂದ್ರನ ಉಕ್ತಿ ಬಸವಣ್ಣನವರ ಉಕ್ತಿಯ ಅನುರಣನ ಮಾತ್ರವಾಗಿರದೆ, ಆ ಉಕ್ತಿಯಿಂದ ಅಭಿವ್ಯಕ್ತವಾಗುವ, ತನ್ನ ಪರಿಸರದ ಅದೇ ಪೂಜಾ ವಿಧಿಯ ಟೀಕೆಯೂ ಆಗಿದೆ ಎಂಬುದು ಗಮನಿಸಬೇಕಾದ ಸಂಗತಿಯಾಗಿದೆ.

ಇನ್ನು, ಮುಂದಿನ ಮಾತು ‘ನಿಱಿಗಳನಿಕ್ಕಿ ದಾಂಟಿಸು’ವುದು ಎಂದರೇನೋ ನಮಗೆ ತಿಳಿಯದು. ಕೊರಳು ಬೆರಳು ಮುಡುಹು ಮುಂದಲೆಗಳನ್ನು ಕೊಡುವುದು ಒಂದು ಪೂಜಾವಿಧಿಯಾದರೆ, ‘ನಿಱಿಗಳನಿಕ್ಕಿ ದಾಂಟಿಸು’ವುದು, ಗಂಡು ಹೆಣ್ಣಿನ ಸಂಬಂಧದಲ್ಲಿನ ಒಂದು ವಿಧಿ ಇರಬಹುದು. ಇಲ್ಲಿಯೂ ಗಮನಿಸಬೇಕಾದದ್ದು, ಬಸವಣ್ಣನವರ ಮತ್ತು ನೇಮಿಚಂದ್ರನ  ಉಕ್ತಿಗಳಲ್ಲಿರುವ ಸಾಮ್ಯವನ್ನು.

ಈಗ ಉಲ್ಲೇಖಿಸಿರುವ ಇನ್ನೆರಡು ಉಕ್ತಿಗಳು ರಚನೆಯಲ್ಲಿ ಅರ್ಥದಲ್ಲಿ ತೀರಾ ಹತ್ತಿರಹತ್ತಿರ ಬರುವಂಥವು. ‘ನಾಯಿಗೆ ನಾರಿವಾಣವಕ್ಕುವುದೆ’ ಎಂಬ ಬಸವಣ್ಣನವರ ಮಾತು, ನೇಮಿಚಂದ್ರನಲ್ಲಿ ‘ನಾಯ್ಗೆ ತೆಂಗೇವುದೋ’ ಎಂದು ಕಾಣಿಸಿಕೊಂಡಿದೆ. ಹಾಗೆಯೆ ‘ಹುಲ್ಲ ಕಿಚ್ಚು ಹೊಲೆಯನ ಮೇಳಾಪ; ಅಲ್ಲಿ ಹುರುಳಿಲ್ಲ’- ಎಂಬ ಬಸವಣ್ಣನವರ ಮಾತು ‘ಪುಲ್ಲ ಕಿರ್ಚುಂ ಪೊಲೆಯನ ಕೆಳೆಯುಂ ಮಾಡದಾವಂಗೆ ಕೇಡಂ’- ಎಂದು ನೇಮಿಚಂದ್ರನಲ್ಲಿ ಅನುರಣನಗೊಂಡಿದೆ. ಈ ಎರಡು ಉಕ್ತಿಗಳೂ, ಗಾದೆಯ ಮಾತುಗಳಂತೆ, ಅಂದಿನ ಸಾಮಾಜಿಕ ಪರಿಸರದಲ್ಲಿ ಪ್ರಚಲಿತವಾಗಿದ್ದಿರಬಹುದು ಎಂಬುದನ್ನು ತಳ್ಳಿ ಹಾಕುವಂತಿಲ್ಲ.

ಬಸವಣ್ಣನವರಲ್ಲಿ ಮತ್ತು ನೇಮಿಚಂದ್ರನಲ್ಲಿ ಒಂದೇ ಅರ್ಥದಲ್ಲಿ ಕಾಣಿಸಿಕೊಳ್ಳುವ ಈ  ಎರಡನೆಯ ಮಾತು, ‘ಹೊಲೆಯ’ರೆಂಬ ವರ್ಗವನ್ನು ಕುರಿತು ಅಂದಿನ ಸಾಮಾಜಿಕ ನಿಲುವನ್ನು ಹೇಳುತ್ತದೆ. ಇಲ್ಲಿನ ಉಕ್ತಿಗಳಲ್ಲಿ ಸಾಮ್ಯವಿದ್ದರೂ ಅರ್ಥದಲ್ಲಿ ಸ್ವಲ್ಪವೇ ಸ್ವಲ್ಪ ವ್ಯತ್ಯಾಸವೂ ಇದೆ. ಬಸವಣ್ಣನವರಲ್ಲಿ ‘ಹೊಲೆಯರ ಸಹವಾಸ (ಮೇಳಾಪ) ಹುಲ್ಲ ಕಿಚ್ಚಿನಂತೆ ಕೇವಲ ತಾತ್ಕಾಲಿಕವೂ, ನಿರರ್ಥಕವೂ ಆದದ್ದು’- ಎಂಬ ತೀರ್ಮಾನಾರ್ಥದಲ್ಲಿ ಕಾಣಿಸಿಕೊಂಡರೆ, ನೇಮಿಚಂದ್ರನಲ್ಲಿ ‘ಹುಲ್ಲ ಕಿಚ್ಚು, ಹೊಲೆಯನ ಕೆಳೆತನ ಯಾರಿಗೆ ತಾನೆ ಕೇಡನ್ನುಂಟು ಮಾಡುವುದಿಲ್ಲ?’- ಎಂದು, ಹುಲ್ಲಿಗೆ ಹತ್ತಿದ ಬೆಂಕಿ, ಹಾಗೂ ಹೊಲೆಯನ ಕೆಳೆತನ ಇವೆರಡರಿಂದಾಗುವ ಕೇಡನ್ನು, ಪ್ರಶ್ನಾರ್ಥಕ ಧಾಟಿಯಲ್ಲಿ ಮಂಡಿಸುತ್ತದೆ. ನೇಮಿಚಂದ್ರ, ಉಚ್ಚವರ್ಗದವರು ಹೊಲೆಯರ ಬಗೆಗೆ ತಾಳುವ ಧೋರಣೆಯನ್ನು ಗಾದೆಮಾತೆಂಬಂತೆ ತನ್ನ ಕಾವ್ಯದ ಸಂದರ್ಭದಲ್ಲಿ ಪ್ರಾಸಂಗಿಕವಾಗಿ ತಂದಿದ್ದಾನೆ ಅಂದುಕೊಂಡರೂ, ಬಸವಣ್ಣನವರು, ಅದೇ ಮಾತನ್ನು ಅದೇ ಅರ್ಥದಲ್ಲಿ, ಸಮರ್ಥಿಸುವ ಧಾಟಿಯಲ್ಲಿ ಯಾಕೆ ಬಳಸಿದ್ದಾರೋ ತಿಳಿಯದು. ಈ ಮಾತು ‘ಹೊಲೆಯ’ ‘ಹೊಲೆತನ’ಗಳ ಬಗ್ಗೆ ವಚನಕಾರರು ಮತ್ತು ವೈಯಕ್ತಿಕವಾಗಿ ಬಸವಣ್ಣನವರು ತಾಳಿದ ನಿಲುವಿಗೆ ತೀರಾ ಆಘಾತಕಾರಿಯಾಗಿದೆ ಎಂಬುದನ್ನು ಹೇಳಬೇಕಾಗಿದೆ.

ವಚನಗಳ ನುಡಿಗಟ್ಟಿಗೂ, ನೇಮಿಚಂದ್ರನ ನುಡಿಗಟ್ಟಿಗೂ ಅತ್ಯಂತ ಸಮೀಪ ಸಾದೃಶ್ಯವಿರುವ ಕೆಲವು ಉಕ್ತಿಗಳನ್ನು ಗಮನಿಸಬಹುದು: ಪಚ್ಚೆಯ ಭಿತ್ತಿಯಲ್ಲಿ ಮಾರ್ಪೊಳೆದ ಮಾವಿನ ಹಣ್ಣುಗಳನ್ನು, ನಿಜದ ಹಣ್ಣುಗಳೆಂದು ಕುಕ್ಕಿ, ಉದ್ಯಾನದ ಗಿಳಿಗಳು ‘ಕಲ್ಲಂ ತಾಗಿದ ಮಿಟ್ಟೆಯಂತೆ’ (ಲೀಲಾ, ೮-೮೦) ತಿರುಗಿ ಹಾರಿಹೋದುವೆಂದು ನೇಮಿಚಂದ್ರನು ವರ್ಣಿಸುತ್ತಾನೆ. ಈ ಉಕ್ತಿ ಬಸವಣ್ಣನವರ ವಚನವೊಂದರಲ್ಲಿ ಬರುವ ‘ಕಲ್ಲುತಾಗಿದ ಮಿಟ್ಟೆಯಂತಪ್ಪರಯ್ಯಾ’ (ಬ.ವ.ಪು. ೪೯-ವ. ೧೯೪) ಎಂಬ ಪಂಕ್ತಿಯ ಪೂರ್ಣಾನುಕರಣವಾಗಿದೆ. ಲೀಲಾವತಿಯು ಕನಸಿನಲ್ಲಿ ಕಂಡ ನಲ್ಲನಿಗಾಗಿ ಹಂಬಲಿಸುತ್ತಾ ವಿರಹತಾಪದಿಂದ ‘ಮೂಗರ್ ಕಂಡ ಕನಸಂತೇನುಮೆನಲಱಿಯದೆ’ (ಲೀಲಾ. ೭-೮೩ ವ.) ಇದ್ದಳೆಂದು ನೇಮಿಚಂದ್ರನು ಹೇಳುವ ಮಾತು, ಬಸವಣ್ಣನವರ ‘ಮೂಗ ಕಂಡ ಕನಸಿನಂತಾಯಿತೆನ್ನ ಭಕ್ತಿ’ (ಬ.ವ.ಪು ೭೪-ವ. ೨೯೪) ಎಂಬ ಮಾತಿನ ಪಡಿಯಚ್ಚಲ್ಲದೆ ಮತ್ತೇನು?

ಬಸವಣ್ಣನವರು ತಮ್ಮ ಮನಸ್ಸಿನ ದ್ವಂದ್ವ ಸ್ವಭಾವವನ್ನು ಟೀಕಿಸಿಕೊಳ್ಳುತ್ತಾ, ‘ಹೃದಯದ ಕತ್ತರಿ : ತುದಿನಾಲಗೆಯ ಬೆಲ್ಲೇಂಭೋ’ (ಬ.ವ.ಪು. ೭೦-ವ. ೨೭೯) ಎನ್ನುತ್ತಾರೆ. ಇದು ‘ಕಂಕುಳಲ್ಲಿ ದೊಣ್ಣೆ ಕೈಯಲ್ಲಿ ಶರಣಾರ್ಥಿ’- ಎಂಬ ಒಡಪನ್ನು ನೆನಪಿಗೆ ತರುವ ಮಾತಾಗಿದೆ. ಆದರೆ ಬಸವಣ್ಣನವರು ಬಳಸುವ ‘ಪ್ರತಿಮೆ’ ಬೇರೆಯದು. ಹೃದಯದಲ್ಲಿ ಕತ್ತರಿ, ತುದಿನಾಲಗೆಯಲ್ಲಿ ಎಂಥಾ ಬೆಲ್ಲ! ಒಳಗೆ ಮಾತ್ರ ಕತ್ತರಿಸುವ ಕುಯುಕ್ತಿ, ಮಾತಿನಲ್ಲಿ ಮಾತ್ರ ಮಾಧುರ‍್ಯ- ಇಂಥ ಒಂದು ವ್ಯಕ್ತಿಯ ಸ್ವಭಾವ ಈ ಚಿತ್ರದಲ್ಲಿದೆ. ನೇಮಿಚಂದ್ರ ತನ್ನ ‘ನೇಮಿನಾಥ ಪುರಾಣ’ದಲ್ಲಿ ಎರಡು ಕಡೆ, ಇದೇ ಪ್ರತಿಮೆಯನ್ನು ಬೇರೆ ಬೇರೆ ಉದ್ದೇಶಗಳಿಗೆ ಬಳಸಿಕೊಂಡಿದ್ದಾನೆ. ಒಂದೆಡೆ ರಾಜರ ಸ್ವಭಾವವನ್ನು ಕುರಿತು ‘ಶರ್ಕರೆ ನಾಲಗೆ, ನೃಪರೆರ್ದೆ ಕರ್ತರಿ’ (ನೇಮಿನಾ. ೫-೯) ಎಂದೂ, ಇನ್ನೊಂದೆಡೆ ದುಷ್ಟರ ‘ಎರ್ದೆ ಕತ್ತರಿ, ನಾಲಗೆ ಬೆಲ್ಲಮೆಂದು ಬಲ್ಲವರೊಳರೇ’ (ನೇಮಿನಾ. ೭-೨೧) ಎಂದೂ, ಉಲ್ಲೇಖಿಸಿದ್ದಾನೆ. ಈ ಎರಡು ನುಡಿಗಟ್ಟುಗಳೂ ಬಸವಣ್ಣನವರ ವಚನದ ಯಥಾನುಕರಣಗಳಾಗಿ ತೋರುತ್ತವೆ.

ಗುಹೇಶ್ವರನ ಅನುಗ್ರಹಕ್ಕೆ ಪಾತ್ರನಾದಾಗ, ಅಲ್ಲಮನು ಉದ್ಗರಿಸಿರಬಹುದೆಂದು ತೋರುವ ‘ಎತ್ತಣ ಮಾಮರ, ಎತ್ತಣ ಕೋಗಿಲೆ, ಎತ್ತಣಿಂದೆತ್ತ ಸಂಬಂಧವಯ್ಯಾ’ (ಅ.ವ.ಪು. ೭೬.ವ. ೩೯) ಎಂಬ ಮಾತು ಸುಪ್ರಸಿದ್ಧವಾಗಿದೆ. ಒಂದು ಮತ್ತೊಂದಕ್ಕೆ ಸಂಬಂಧವಿಲ್ಲದ ಸಂಗತಿಗಳು ಯಾವುದೋ ಆಕಸ್ಮಿಕದಿಂದ ಹೇಗೆ ಸಂಘಟನೆಗೊಳ್ಳುತ್ತವೆಯೆಂಬ ವಿಸ್ಮಯವೆ ಅಲ್ಲಮನ ವಚನದ ಈ ಮಾತಿನಲ್ಲಿ ಪ್ರಧಾನವಾಗಿದೆ. ನೇಮಿಚಂದ್ರನ ‘ಲೀಲಾವತೀ ಪ್ರಬಂಧ’ದಲ್ಲಿ  ನಾಯಿಕೆಯಾದ ಲೀಲಾವತಿಯು, ತನ್ನ ಕನಸಿನ ನಲ್ಲನಾದ ಕಂದರ್ಪದೇವನನ್ನು, ವಾಸ್ತವವಾಗಿ ಸಂಧಿಸಿದಾಗ, ಆಕೆಯ ಸಖಿಯರು, ಪದ್ಮಾವತಿದೇವಿಯ ಮಹಿಮೆಯಿಂದ ಈ ನಲ್ಲ ನಲ್ಲೆಯರು ಕೂಡುವಂತಾದ ಘಟನೆಯ ಅಪೂರ್ವತೆಯನ್ನು ಕುರಿತು ‘ಯೆತ್ತಣ ಕೋಗಿಲೆ, ಯೆತ್ತಣ ಮಾಮರ, ಉಂಟೆ ದೇವಿಗರಿದುಂ ಪಿರಿದುಂ’ (ಲೀಲಾ. ೧೨-೫೦) ಎಂದು ಬೆರಗಾಗುತ್ತಾರೆ. ಈ ಸಂದರ್ಭದಲ್ಲಿ ‘ಎತ್ತಣ ಮಾಮರ ಎತ್ತಣ ಕೋಗಿಲೆ’ ಎಂಬ ಅಲ್ಲಮನ ವಚನವನ್ನು ನೇಮಿಚಂದ್ರನು ಯಥಾವತ್ತಾಗಿ ಅಳವಡಿಸಿಕೊಂಡಿದ್ದಾನೆನ್ನುವುದು ಸ್ವಾರಸ್ಯವಾದ ಸಂಗತಿಯಾಗಿದೆ.

ಇದೆಲ್ಲಕ್ಕಿಂತಲೂ ಸ್ವಾರಸ್ಯವಾದ ಸಂಗತಿ ಎಂದರೆ, ಬಸವಣ್ಣನವರ ಇಡೀ ಒಂದು ವಚನದಲ್ಲಿನ ಪ್ರತಿಮೆಯನ್ನೇ, ನೇಮಿಚಂದ್ರ, ತನ್ನ ಕಾವ್ಯದ ಸಂದರ್ಭವೊಂದರಲ್ಲಿ, ಒಂದು ಪೂರ್ಣವೃತ್ತದಲ್ಲಿ ಹಿಡಿದಿರಿಸಿರುವುದು. ಅದು ಕೂಸುಳ್ಳ ಸೂಳೆ ಧನದಾಸೆಗೆ ಒತ್ತೆಯ ಕೊಂಡ ಒಂದು ದಾರುಣ ಚಿತ್ರ. ಬಸವಣ್ಣನವರ ವಚನ ಹೀಗಿದೆ:

ಕೂಸುಳ್ಳ ಸೂಳೆ, ಧನದಾಸೆಗೆ ಒತ್ತೆಯ ಕೊಂಡರೆ
ಕೂಸಿಂಗಲ್ಲ, ಬೊಜಗಂಗಲ್ಲ
ಕೂಸನೊಮ್ಮೆ ಸಂತಯ್ಸುವಳು ಬೊಜಗನನೊಮ್ಮೆ ನೆರೆವಳು
ಧನದಾಸೆ ಬಿಡದು, ಕೂಡಲಸಂಗಮದೇವಾ      (ಬ.ವ.ಪು. ೨೬-ವ ೧೦೧)

ಇದನ್ನೂ ಹಿಡಿಯದ, ಅದನ್ನೂ ಬಿಡದ ಮನಸ್ಸಿನ ವ್ಯಭಿಚಾರೀ ಭಾವದ ತಾಕಲಾಟಕ್ಕೆ ಒಡ್ಡಿದ ಪರಿಣಾಮಕಾರಿಯಾದ ಪ್ರತಿಮೆ ಇದು. ಅದರ ಜತೆಗೆ, ಸಾಮಾಜಿಕವಾಗಿ ಕೂಡ, ಸೂಳೆಯೊಬ್ಬಳ ಬಡತನದ ಅಸಹಾಯಕ ದಾರುಣ ಚಿತ್ರವನ್ನೂ ಇದು ಕೊಡುತ್ತದೆ. ನೇಮಿಚಂದ್ರನು ಈ ಅಂಶಕ್ಕೆ ಒತ್ತುಕೊಟ್ಟು, ಸೂಳೆಗೇರಿಯ ವರ್ಣನೆಯ ಸಂದರ್ಭವೊಂದರಲ್ಲಿ ಈಗ ಉಲ್ಲೇಖಿಸಿದ ಬಸವಣ್ಣನವರ ವಚನವನ್ನೇ ಪದ್ಯರೂಪಕ್ಕೆ ತಿರುಗಿಸಿದ್ದಾನೆ. ‘ಕೂಸುಳ್ಳ ಸೂಳೆ ಧನದಾಸೆಗೆ ಒತ್ತೆಯ ಕೊಂಡು’ ಪಡುವ ಪಾಡಿನ ಚಿತ್ರ ನೇಮಿಚಂದ್ರನಲ್ಲಿ ಹೀಗಿದೆ:

ರತಮನೆ ಮಧ್ಯದೊಳ್ ಮುಱಿದು ತಾಂ ಮಗುವಂ ಮೊಲೆಯೂಡಲೀಶಚ್ಚುಂ
ಬಿತ ವದನಾಬ್ಜಮಂ ತೆಗೆದು ತಾಂ ಶಿಶುವಂ ನುಡಿಸಲ್ಕೆ ಬಲ್ಪಿನಿಂ
ಪತಿ ಪತಿರಂಭಮಂ ಬಿಡಿಸಿ ಕೂಸಳೆ ನಂಬಿಸಲಿರ್ದ ಸೂಳೆವಾ
ಣತಿ ಯೆರಡರ್ಕೆ ಬಿಟ್ಟ ಕಱುವೋಲೆಡೆಯಾಡಿದಳದೊಂದು ಗೇಹದೊಳ್
(ಲೀಲಾ : ೨-೧೨೩)

ಈ ಪದ್ಯದ ತಾತ್ಪರ್ಯ ಇದು : ವಿಟನೊಡನೆ ಮಲಗಿದ್ದ ಸೂಳೆ, (ಪಕ್ಕದಲ್ಲಿ ಮಗು ಅತ್ತಿದ್ದರಿಂದ) ಮಧ್ಯದಲ್ಲೇ ಅವನಿಂದ ಬಿಡಿಸಿಕೊಂಡು, ಮಗುವಿಗೆ ಮೊಲೆಯೂಡಲೆಂದು ಸ್ವಲ್ಪವೇ ಚುಂಬಿತವಾದ ತನ್ನ ಮುಖ ಕಮಲವನ್ನು ತಿರುಗಿಸಿ ಮಗುವನ್ನು ಮಾತನಾಡಿಸಿ ಸಮಾಧಾನಪಡಿಸುತ್ತಾಳೆ. ಆಗ ಮತ್ತೆ ಬಲವಂತದಿಂದ ಆ ವಿಟ ಮಗುವಿನಪ್ಪುಗೆಯಿಂದ ಆಕೆಯನ್ನು ಬಿಡಿಸಿ (ತನ್ನ ಕಡೆ) ಸೆಳೆದಾಗ ಮಗು ಅಳುತ್ತದೆ. ಆಗ ಆಕೆ ಮತ್ತೆ ಅದನ್ನು ಸಮಾಧಾನ ಪಡಿಸುತ್ತಾಳೆ. ಹೀಗೆ ಸೂಳೆಗೇರಿಯ ಮನೆಯೊಂದರಲ್ಲಿ ಬಾಣಂತಿಯಾದ (‘ಕೂಸುಳ್ಳ’) ಈ ಸೂಳೆ (ಸೂಳೆವಾಣತಿ) ಎರಡು ಹಸುಗಳ ನಡುವೆ ಬಿಟ್ಟ ಕರುವಿನಂತೆ ಹೊಯ್ದಾಡಿದಳು.

ಇಡೀ ಪದ್ಯ ನಿಸ್ಸಂದೇಹವಾಗಿ ಬಸವಣ್ಣನವರ ವಚನದ ಚಿತ್ರದಿಂದಲೇ ರೂಪಿತವಾಗಿದೆ. ಬಸವಣ್ಣನವರ ವಚನದ ‘ಕೂಸನೊಮ್ಮೆ ಸಂತಯ್ಸುವಳು, ಬೊಜಗನನೊಮ್ಮೆ ನೆರೆವಳು’- ಎಂಬಲ್ಲಿರುವ ಅರ್ಥ ಸ್ವಾರಸ್ಯವೆಲ್ಲಾ ನೇಮಿಚಂದ್ರನಲ್ಲಿ ಬಂದಿದೆ. ಆದರೆ, ಅದರ ಜೊತೆಗೆ ಸೂಳೆಯ, ಈ ಸಂದಿಗ್ಧತೆಯನ್ನು ಇನ್ನೂ ಸಚಿತ್ರವನ್ನಾಗಿಸುವ ಬೇರೊಂದು ಮಾತು, ಬಸವಣ್ಣನವರ ವಚನದಲ್ಲಿ ಇಲ್ಲದ ಮಾತು, ‘ಎರಡರ್ಕೆ ಬಿಟ್ಟ ಕಱುವೋಲೆಡೆಯಾಡಿದಳ್’ ಎಂಬುದು, ನೇಮಿಚಂದ್ರನಲ್ಲಿ ಕಾಣಿಸಿಕೊಂಡಿದೆ. ವಾಸ್ತವವಾಗಿ ಈ ಮಾತೂ ವಚನಕಾರರಿಂದಲೇ ಎತ್ತಿಕೊಂಡದ್ದು. ಅಕ್ಕಮಹಾದೇವಿ ತನ್ನ ಇಬ್ಬಂದಿತನವನ್ನು ಕುರಿತು, ಒಂದು ವಚನದಲ್ಲಿ ‘ಅಕಟಕಟಾ, ಕೆಟ್ಟೆ ಕೆಟ್ಟೆ ಸಂಸಾರಕ್ಕಲ್ಲಾ,! ಪರಮಾರ್ಥಕ್ಕಲ್ಲಾ! ಎರಡಕ್ಕೆ ಬಿಟ್ಟ ಕರುವಿನಂತೆ’ (ಅಕ್ಕವ. ೧೩) ಎಂದು ಹೇಳಿಕೊಂಡಿದ್ದಾಳೆ. ತನ್ನ ಮನಸ್ಸು ಚಂಚಲವಾಗಿ, ಅತ್ತ ಪರಮಾರ್ಥಕ್ಕೂ ಸಲ್ಲದೆ, ಇತ್ತ ಸಂಸಾರಕ್ಕೂ ಸಲ್ಲದೆ, ಯಾವುದೊಂದನ್ನೂ ಗಟ್ಟಿಯಾಗಿ ಹಿಡಿಯದೆ ‘ಎರಡಕ್ಕೆ ಬಿಟ್ಟ ಕರುವಿನಂತೆ’ ಎರಡು ಹಸುಗಳ ನಡುವೆ ಹಾಲು ಕುಡಿಯಲು  ಬಿಟ್ಟ (ತಬ್ಬಲಿ) ಕರುವಿನಂತೆ ಪರದಾಡುತ್ತದೆ ಎಂದು ಈ ಮಾತಿನ ಅರ್ಥ. ನೇಮಿಚಂದ್ರನ ಪದ್ಯದಲ್ಲಿನ ಕಡೆಯ ಸಾಲು ‘ಎರಡರ್ಕೆ ಬಿಟ್ಟ ಕಱುವೋಲ್‌ಯೆಡೆಯಾಡಿದಳ್’ ಎಂಬುದು ಅಕ್ಕನ ವಚನದ ಮಾತೇ ಆಗಿದೆ ಎಂಬುದನ್ನು ಗಮನಿಸಬೇಕು. ನೇಮಿಚಂದ್ರ, ಬಸವಣ್ಣ ಹಾಗೂ ಅಕ್ಕಮಹಾದೇವಿ ಇವರಿಬ್ಬರ ವಚನದ ಶಬ್ದಚಿತ್ರಗಳಿಂದ, ತಾನೇ ಒಂದು ಪೂರ್ಣಚಿತ್ರವನ್ನು ಕಟ್ಟಿದ್ದಾನೆ ಎಂಬುದು ಸುಸ್ಪಷ್ಟವಾಗಿದೆ.

ವಿದ್ವಾಂಸರ ಅಭಿಪ್ರಾಯದ ಪ್ರಕಾರ ನೇಮಿಚಂದ್ರ ತನ್ನ ಕೃತಿಗಳನ್ನು ಬರೆದದ್ದು ಕ್ರಿ.ಶ. ೧೧೮೮ರಿಂದ ೧೧೯೨ರ ಅವಧಿಯಲ್ಲಿ. ಬಸವಣ್ಣನವರ ಜೀವಿತಾವಧಿ ಕ್ರಿ.ಶ. ೧೧೩೧ ರಿಂದ ೧೧೬೭. ೧೧೬೭ನ್ನು ಬಿಜ್ಜಳನ ಕೊಲೆಯಾದ ಕಲ್ಯಾಣ ಕ್ರಾಂತಿಯ ಕಾಲವೆಂದು ಇರಿಸಿಕೊಳ್ಳಬಹುದು. ಈ ದೃಷ್ಟಿಯಿಂದ ಬಸವಾದಿ ವಚನಕಾರರ ಕಾಲಕ್ಕೂ, ನೇಮಿಚಂದ್ರನ ಕಾಲಕ್ಕೂ ಇರುವ ಅಂತರ ತೀರಾ ಕಡಿಮೆ. ನೇಮಿಚಂದ್ರ ಇದ್ದದ್ದು ದೂರದ ರಟ್ಟರಾಜ್ಯದಲ್ಲಿ; ಬಸವಾದಿಗಳು ಇದ್ದದ್ದು ಇತ್ತ ಚಾಳುಕ್ಯರ ಕಲ್ಯಾಣದಲ್ಲಿ. ಹೀಗಿರುವಾಗ, ಅಂದಿನ ಕಾಲದಲ್ಲಿ, ನೇಮಿಚಂದ್ರನ ಕೃತಿಗಳ ಮೇಲೆ ವಚನಕಾರರ ಪ್ರಭಾವ ಆದದ್ದು ಹೇಗೆ? ಬಹುಶಃ ಕಲ್ಯಾಣ ಕ್ರಾಂತಿಯ ಅನಂತರ ಮುಂದಿನ ಇಪ್ಪತ್ತೆ ದು ವರ್ಷಗಳ ಅವಧಿಯಲ್ಲಿ, ನೇಮಿಚಂದ್ರನ ಗಮನಕ್ಕೆ ಬರುವಷ್ಟರ ಮಟ್ಟಿಗೆ ಕಲ್ಯಾಣದ ಪರಿಸರದಿಂದ ‘ವಚನ’ಗಳು ರಟ್ಟ ರಾಜ್ಯಕ್ಕೆ ಪ್ರಯಾಣ ಮಾಡಿರಬೇಕು. ಇದು ಸಾಧ್ಯ. ಯಾಕೆಂದರೆ ಕಲ್ಯಾಣ ಕ್ರಾಂತಿಯ ಅನಂತರ ಶಿವಶರಣರ ಅನುಯಾಯಿಗಳು ತಮಗೆ ದೊರೆತ ವಚನಗಳ ಕಟ್ಟುಗಳೊಂದಿಗೆ ಕರ್ನಾಟಕದ ಬೇರೆ ಬೇರೆಯ ಭಾಗಗಳಿಗೆ ಚದುರಿಹೋದದ್ದೇನೋ ನಿಜ. ಮತ್ತು ವಚನಕಾರರ ಉಜ್ವಲವಾದ ಬದುಕು, ಅವರ ವಚನಗಳ ಪ್ರಭಾವ ಮುಂದಿನ ಅನೇಕ ಕವಿಗಳ ಮೇಲೆ, ಅದರಲ್ಲೂ ಮುಖ್ಯವಾಗಿ ವೀರಶೈವ ಕವಿಗಳ ಮೇಲೆ ಆದದ್ದು ತೀರಾ ಸಹಜವಾಗಿದೆ. ಆದರೆ ವೀರಶೈವೇತರ ಕವಿಗಳ ಮೇಲೂ ವಚನಕಾರರ ಪ್ರಭಾವ ತಕ್ಕಷ್ಟು ಆಗಿದೆಯೆಂಬುದು ವಿಶೇಷದ ಸಂಗತಿಯಷ್ಟೆ ಅಲ್ಲ, ವಚನ ವಾಙ್ಮಯದ ಮಹತ್ವಕ್ಕೂ ಸಾಕ್ಷಿಯಾಗಿದೆ.

ಅನುರಣನ (೧೯೭೮)

* * *


[1] ಅಕ್ಕಮಹಾದೇವಿಯ ರಗಳೆಯಲ್ಲಿ ‘ಬಾರ ಮುಡುಹು ಮುಂದಲೆಗಳ ಕುರುಳನೀವೆ ಮಲ್ಲಿನಾಥ’- ಎಂಬ ಮಾತಿದೆ. (ಸ್ಥಲ. ೫-ಪ ೭೫). ಇದನ್ನೂ ಅಕ್ಕನ ವಚನವೆಂದೇ ಡಾ. ಎಲ್. ಬಸವರಾಜು ಅವರು ತಮ್ಮ ‘ಅಕ್ಕನ ವಚನಗಳು’ (ಪು. ೫೮-ವ.೮) ಪುಸ್ತಕದಲ್ಲಿ ಕೊಟ್ಟಿದ್ದಾರೆ.