ಶಿವಶರಣರ ವಚನಗಳನ್ನು ಒಂದು ವಿಶೇಷ ಸಾಹಿತ್ಯ ಪ್ರಕಾರವೆಂದು ಪರಿಗಣಿಸಿ, ಕನ್ನಡ ‘ಸಾಹಿತ್ಯದಲ್ಲಿ ವಚನಗಳ ಸ್ಥಾನ’, ‘ಕನ್ನಡ ಸಾಹಿತ್ಯಕ್ಕೆ ವಚನಕಾರರ ಕೊಡುಗೆ’ ಹೀಗೆ ವಿಚಾರ ಮಾಡುವ ರೀತಿ ತೀರಾ ಇತ್ತೀಚಿನದು. ಇತ್ತೀಚಿನದು ಎಂದರೆ ಆಧುನಿಕ ವಿಮರ್ಶೆಗೆ ಸಂಬಂಧಪಟ್ಟದ್ದು. ಆಧುನಿಕ ಕಾಲದವರನ್ನು ಹೊರತು ಪಡಿಸಿದರೆ, ಹಿಂದಿನವರು ಯಾರೂ, ಅಂದರೆ ಮುಖ್ಯವಾಗಿ ಕವಿಗಳು, ವಚನಕಾರರನ್ನು ‘ಕೃತಿಕಾರ’ರೆಂದೋ, ‘ಕವಿ’ಗಳೆಂದೋ, ಕನ್ನಡ ಸಾಹಿತ್ಯಪರಂಪರೆಯ ಸಂದರ್ಭದಲ್ಲಿ ವಿನೂತನ ಅಭಿವ್ಯಕ್ತಿಗೆ ಕಾರಣರಾದವರೆಂದೋ ಸ್ಮರಿಸುವುದಿಲ್ಲ; ಅವರನ್ನು ಸ್ಮರಿಸುವುದು, ಅವರು ಮಹಾವ್ಯಕ್ತಿಗಳೆಂದೋ ಕಾರಣಿಕರೆಂದೋ ಮಾತ್ರ. ವಚನಕಾರರ ವ್ಯಕ್ತಿತ್ವದ ಹಾಗೂ ರಚನೆಯ ಪ್ರಭಾವ ಮುಂದಿನ ಅನೇಕ ಕವಿಗಳ, ಅದರಲ್ಲೂ ವೀರಶೈವ ಕವಿಗಳ ಸಾಹಿತ್ಯಕ ಧೋರಣೆಯ ಮತ್ತು ರಚನೆಯ ಮೇಲೆ ಸಾಕಷ್ಟು ಪ್ರಮಾಣದಲ್ಲಿ ಆಗಿದ್ದರೂ, ವಚನಕಾರರಲ್ಲಿ ಕೆಲವರನ್ನು ತಮ್ಮ ಕಾವ್ಯದ ನಾಯಕರನ್ನಾಗಿ ಮಾಡಿಕೊಂಡಂಥ ಕವಿಗಳು ಕೂಡಾ, ವಚನಕಾರರ ವ್ಯಕ್ತಿತ್ವದ ಮಹತ್ತಿಗೆ ಬೆಲೆಕೊಟ್ಟಂತೆ ತೋರುತ್ತದೆಯೆ ವಿನಾ, ಆಯಾ ವಚನಕಾರರಿಂದ ಸಾಹಿತ್ಯಕ್ಕೆ ಏನು ಲಾಭವಾಯಿತೆಂಬ ‘ಕವಿಕಾವ್ಯಪರ’ವಾದ ಮಾತುಗಳನ್ನು ಹೇಳುವುದೇ ಇಲ್ಲ. ಹೀಗಾಗಿ ‘ವಚನ’ಗಳನ್ನು ಸಾಹಿತ್ಯವೆಂದು ಪರಿಗಣಿಸುವ, ಚರ್ಚಿಸುವ, ಬೆಲೆಗಟ್ಟುವ ದೃಷ್ಟಿ ಬೆಳೆದದ್ದು ಆಧುನಿಕ ಕಾಲದಲ್ಲಿಯೇ.

ಕನ್ನಡ ಸಾಹಿತ್ಯ ಪರಂಪರೆಯ ಮೂಲಧೋರಣೆ ಕೂಡಾ ಈ ಪರಿಸ್ಥಿತಿಗೆ ಕಾರಣವಿರಬಹುದು: ಕಾವ್ಯ ಎನ್ನುವುದು ಮೂಲತಃ ಒಂದು ಸಾಹಿತ್ಯ ನಿರ್ಮಿತಿ ಎಂಬುದಕ್ಕಿಂತ ಅದೊಂದು ಧಾರ್ಮಿಕ ಕ್ರಿಯೆ (Ritual), ಧರ್ಮ ಪ್ರಸಾರದ, ಆತ್ಮೋದ್ಧಾರದ ಮಾರ್ಗ-ಎಂಬಂಥ ಭಾವನೆಗಳೇ ರೂಢಮೂಲವಾಗಿದ್ದುವೆಂಬುದನ್ನು ಗಮನಿಸಬಹುದು. ಆದರೂ ತಾವು ಬರೆದದ್ದು, ಬರೆಯುತ್ತಿರುವುದು ‘ಕಾವ್ಯ’ ಅಲ್ಲ ಎಂದೇನೂ ಕನ್ನಡ ಕವಿಗಳು ಅಂದುಕೊಳ್ಳಲಿಲ್ಲ. ಆದುದರಿಂದ ಕಾವ್ಯರಚನೆಗೆ ಮುನ್ನ ಪೂರ್ವಕವಿ ಸ್ಮರಣೆ, ಕುಕವಿನಿಂದೆ, ಸ್ವಕಾವ್ಯದ ಅಗ್ಗಳಿಕೆ ಹಾಗೂ ವಸ್ತು ರೀತಿ ಉದ್ದೇಶಗಳನ್ನು ಕುರಿತ ಒಂದು ರೀತಿಯ ಕಾವ್ಯಮೀಮಾಂಸೆಯ ಹಿನ್ನೆಲೆ ಇತ್ಯಾದಿಗಳನ್ನು ಪ್ರಸ್ತಾಪಿಸುವುದರ ಮೂಲಕ, ತಾವು ಒಂದು ಕಾವ್ಯಪರಂಪರೆಯಲ್ಲಿ ಅಥವಾ ಸಾಹಿತ್ಯಕ ಸಂದರ್ಭದಲ್ಲಿ ಬರೆಯುತ್ತಿದ್ದೇವೆ ಎಂಬ ಅರಿವನ್ನು ಪ್ರಕಟಿಸಿದ್ದಾರೆ. ಆದರೆ ವಚನಕಾರರು ಮಾತ್ರ ಇದಕ್ಕೆ ಹೊರತಾಗಿದ್ದಾರೆ. ಸಾಹಿತ್ಯಪರಂಪರೆ, ಸಾಹಿತ್ಯಾಭಿವ್ಯಕ್ತಿ, ಸಾಹಿತ್ಯದಲ್ಲಿ ಕ್ರಾಂತಿ ಇತ್ಯಾದಿಯಾದ ಕಲ್ಪನೆಗಳನ್ನೇ ತಲೆಗೆ ಹಚ್ಚಿಕೊಳ್ಳದೆ, ಅತ್ಯಂತ ತಟಸ್ಥರಾಗಿದ್ದುಕೊಂಡು, ಆದರೆ ತಮ್ಮ ಅನುಭವದ ಬಗೆಗೆ ಅತ್ಯಂತ ತಲ್ಲೀನತೆಯನ್ನು ಉಳಿಸಿಕೊಂಡು, ತಮ್ಮ ಕಾಲದ ಧಾರ್ಮಿಕ ಸಾಮಾಜಿಕ ಆಂದೋಲನದ ಕಾವಿಗೆ ತಮ್ಮನ್ನು ತಾವು ಸಂಪೂರ್ಣವಾಗಿ ಒಪ್ಪಿಸಿಕೊಂಡು ವಚನಗಳನ್ನು ಬರೆದರು. ಆದುದರಿಂದಲೇ ಈ ವಚನವಾಙ್ಮಯ ಕನ್ನಡಸಾಹಿತ್ಯದಲ್ಲಿಯೇ ಒಂದು ವ್ಯಕ್ತಿ ವಿಶಿಷ್ಟ ದ್ವೀಪಸಂಭವದಂತೆ ತೋರುತ್ತದೆ.

ಇನ್ನೊಂದು ಸೋಜಿಗದ ಸಂಗತಿ ಎಂದರೆ, ವಚನಕಾರರು ತಾವು ಯಾವ ಭಾಷೆಯಲ್ಲಿ ಬರೆದರೋ, ಆ ಭಾಷೆಯಲ್ಲಿ ಆಗಲೇ ನಡೆದ ಕೆಲಸವನ್ನು, ಅಂದರೆ ತಮಗೆ ಪೂರ್ವದ ಅಭಿವ್ಯಕ್ತಿಗಳನ್ನು, ಗಮನಿಸಲೇ ಇಲ್ಲವೆ- ಎಂಬುದು. ವಚನಕಾರರಲ್ಲಿ ಬಹುಮಂದಿ ಗಮನಿಸಿರಲಿಕ್ಕಿಲ್ಲ; ಆದರೆ ಕೆಲವರಾದರೂ ಗಮನಿಸಿದ್ದಿರಬಹುದು. ಆ ವೇಳೆಗೆ ನಯಸೇನಾದಿಗಳಿಂದ ಹದವಾದ ‘ಗದ್ಯ’ವನ್ನು ಗಮನಿಸಿದ್ದಿರಬಹುದು; ಹಾಗೆ ಗಮನಿಸಿ, ಜೇಡರ ದಾಸಿಮಯ್ಯನಂಥ ‘ಆದ್ಯ’ರು ಆಗಲೇ ಹಾಕಿಕೊಟ್ಟ ರೂಪದಿಂದ ಸ್ಫೂರ್ತಿಗೊಂಡು ಇನ್ನಷ್ಟು ಪ್ರಯೋಗಗಳನ್ನು ಮಾಡಿರಬಹುದು. ಇದೇನೇ ಇರಲಿ, ವಚನಕಾರರು ತಾವೊಂದು ಅಪೂರ್ವ ಸಾಹಿತ್ಯ ಪ್ರಕಾರವನ್ನು ರೂಢಿಸುತ್ತಿದ್ದೇವೆ ಎಂಬ ಪ್ರಜ್ಞೆಯನ್ನು ಖಂಡಿತ ಹೊಂದಿರಲಿಲ್ಲ. ಹಾಗೆಂದ ಮಾತ್ರಕ್ಕೆ ಅವರಿಗೆ ಸಾಹಿತ್ಯದ ಬಗ್ಗೆ ಅಥವಾ ಕಾವ್ಯದ ಬಗ್ಗೆ ತಿರಸ್ಕಾರವಿತ್ತು ಎಂದು ಅರ್ಥವಲ್ಲ; ಅವರಿಗೆ ತಿರಸ್ಕಾರವಿದ್ದುದು ವೇದಶಾಸ್ತ್ರಪುರಾಣಾಗಮಗಳ ಬಗೆಗೆ ಮತ್ತು ಇತಿಹಾಸ ಕಾವ್ಯಗಳ ಬಗೆಗೆ; ಒಟ್ಟಿನಲ್ಲಿ ವೈದಿಕಪರಂಪರೆಯ ಬಗೆಗೆ. ಆದುದರಿಂದ ಅವರು ಎದ್ದು ಕಾಣುವ ರೀತಿಯಲ್ಲಿ ವೇದಶಾಸ್ತ್ರ ಪುರಾಣಾಗಮಗಳನ್ನು ನಿರಾಕರಿಸುತ್ತಾರೆ. ಹಾಗೆಯೇ ರಾಮಾಯಣ ಮಹಾಭಾರತಗಳನ್ನು, ಏನೇನೋ ಕಾರಣಗಳನ್ನು ಕೊಟ್ಟು, ಕೆಲವು ವೇಳೆ ಅಪವ್ಯಾಖ್ಯಾನಗಳನ್ನು ಮಾಡಿ ತಿರಸ್ಕರಿಸುತ್ತಾರೆ. ಇದರಿಂದಾಗಿ, ವೀರಶೈವ ಕವಿಗಳಾರೂ ರಾಮಾಯಣ ಮಹಾಭಾರತಗಳನ್ನು, ಜೈನ ವೈಷ್ಣವ ಕವಿಗಳಂತೆ ತಮ್ಮ ಕಾವ್ಯಕ್ಕೆ ವಸ್ತುವನ್ನಾಗಿ ಮಾಡಿಕೊಳ್ಳಲೇ ಇಲ್ಲ. ಹಾಗೆಯೇ ಶಿವಶರಣರು ತಮ್ಮ ವಚನಗಳಲ್ಲಿ ಸ್ಮರಿಸುವ ಪೂರ್ವಪರಂಪರೆ, ಕನ್ನಡದ ಅಥವಾ ಇತಿಹಾಸ ಕಾವ್ಯದ ಕವಿಗಳಿಗೆ ಸಂಬಂಧಪಟ್ಟುದಲ್ಲ; ಅವರು ಸ್ಮರಿಸುವುದು ಬಾಣ, ಹಲಾಯುಧ, ಉದ್ಭಟ ಮೊದಲಾದ ಶಿವಕವಿಗಳನ್ನು; ಸಿಂಧುಬಲ್ಲಾಳ, ಚೀಲಾಳ, ನಂಬಿ, ದಾಸಿಮಯ್ಯ ಇತ್ಯಾದಿ ಶಿವಶರಣರನ್ನು.

ವಚನಕಾರರಲ್ಲಿ ‘ಸಾಹಿತ್ಯ’ ಎಂಬ ಮಾತೇನೋ ಬರುತ್ತದೆ. ಆದರೆ ಅದು, ವಾಙ್ಮಯ  (Literature) ವೆಂಬ ವಿಶೇಷಾರ್ಥದಲ್ಲಿ, ಆಲಂಕಾರಿಕರು, ಕವಿಗಳು, ಸಹೃದಯರು ತಿಳಿದುಕೊಂಡ ಅರ್ಥದಲ್ಲಿ ಬಳಕೆಯಾಗಿಲ್ಲ. ‘ಸಾಹಿತ್ಯ’ ಎಂದರೆ ಹೊಂದಾಣಿಕೆ, ಸಂಯೋಗ, ಒಂದು ಮತ್ತೊಂದಕ್ಕೆ ಇರಬೇಕಾದ ಸಂಬಂಧ ಎಂಬ ವಾಚ್ಯಾರ್ಥದಲ್ಲೇ ಅವರಲ್ಲಿ ಬಳಕೆಯಾಗಿದೆ. ‘ಲಿಂಗಸಾಹಿತ್ಯವಿಲ್ಲದವರ ಎನ್ನವರೆನ್ನೆನಯ್ಯಾ’ (ವ. ೭೧೯)[1] ಎನ್ನುತ್ತಾರೆ ಬಸವಣ್ಣನವರು; ‘ಅಂಗದ ಮೇಲೆ ಲಿಂಗ ಸಾಹಿತ್ಯವಾದರೇನು’ (ವ. ೮೭೭) ಎನ್ನುತ್ತಾರೆ ಚೆನ್ನಬಸವಣ್ಣನವರು.೧ ಎಂದರೆ ಇಲ್ಲೆಲ್ಲಾ ‘ಸಾಹಿತ್ಯ’ ಎಂದರೆ ಸಂಯೋಗ, ಸಂಘಟನೆ, ಎಂದೇ ಅರ್ಥ. ವಚನಕಾರರು ‘ಸಾಹಿತ್ಯ’ ಎಂಬ ಮಾತನ್ನು ‘ಲಿಟರೇಚರ್’ ಎಂಬ ವಿಶಾಲವಾದ ಅರ್ಥದಲ್ಲಿ ಎಲ್ಲಿಯೂ ಬಳಸಿದಂತೆ ನಮಗೆ ಕಾಣಲಿಲ್ಲ. ಹಾಗೆಯೇ ‘ಕಾವ್ಯ’ದ ಬಗೆಗೆ ಇವರಿಗೆ ಅನಾದರವಿಲ್ಲದಿದ್ದರೂ, ಆದರವೇನೂ ಇದ್ದ ಹಾಗೆ ತೋರುವುದಿಲ್ಲ. ಅನೇಕ ನೀತಿಕಾರರಿಗಿದ್ದಂತೆ ಮತ್ತು ಅನುಭಾವಿಗಳಿಗಿದ್ದಂತೆ ಕಾವ್ಯ ಕೂಡ ಒಂದು ‘ಕಾಮಮೌಲ್ಯ’ವೆಂಬ ಭಾವನೆ ವಚನಕಾರರಿಗೂ ಇದ್ದಿರಬಹುದು. ವೇದಶಾಸ್ತ್ರಪುರಾಣಾಗಮಗಳಿಂದ ಹೇಗೋ ಹಾಗೆಯೆ, ಕಾವ್ಯಾದಿಗಳ ಅಭ್ಯಾಸ-ಅಧ್ಯಯನಗಳಿಂದಲೂ ಆಧ್ಯಾತ್ಮ ತಿಳಿಯದೆಂಬುದೇ ಅವರ ನಿಲುವು. ‘ವಿದ್ಯೆ ಎಂದರೆ ರಾಮಾಯಣ ಮಹಾಭಾರತವಲ್ಲ’ (ವ. ೧೦೩) ಎನ್ನುತ್ತಾನೆ ಸಿದ್ಧರಾಮ ತನ್ನ ಒಂದು ವಚನದಲ್ಲಿ. ಇದು ರಾಮಾಯಣ ಮಹಾಭಾರತಗಳನ್ನು ಓದುವುದೇ ವಿದ್ಯೆ ಅಥವಾ ವಿದ್ಯಾವಂತನೆನ್ನಿಸಿಕೊಳ್ಳಬೇಕಾದರೆ ಈ ಮಹಾಕಾವ್ಯಗಳ ಅಧ್ಯಯನ ಅಗತ್ಯ-ಎಂಬ ರೂಢಮೂಲವಾದ ತಿಳಿವಳಿಕೆಯನ್ನು ವಿರೋಧಿಸುತ್ತದೆ. ಅಷ್ಟೇ ಅಲ್ಲ,

‘ಕವಿತ್ವ ಸಾಧಕರೆಲ್ಲರೂ ಕಳವಳಿಸಿಹೋದರು
ವಿದ್ಯಾಸಾಧಕರೆಲ್ಲರೂ ಬುದ್ಧಿಗೆಟ್ಟರು’       (ಚೆನ್ನ. ವ.೫೧೮)

ಕಾವ್ಯರಚನೆಯಿಂದಾಗಲಿ, ಅವುಗಳಿಗೆ ಅಗತ್ಯವಾದ ವಿದ್ಯೆ (?) ಗಳಿಂದಾಗಲಿ, ಏನೂ ಪ್ರಯೋಜನವಿಲ್ಲ,[2] ನಿಜವಾದ ಅನುಭಾವ ಸಾಧನೆಗೆ-ಎಂದು ಈ ಅನುಭಾವಿಗಳು ಭಾವಿಸಿದರು. ಅವರಿಗೆ ಮುಖ್ಯವಾದದ್ದು ಅನುಭಾವ ಮತ್ತು ಅದನ್ನು ತಕ್ಕಮಾತುಗಳಲ್ಲಿ ಹಿಡಿದಿಡಬಲ್ಲ ಒಂದು ಅಭಿವ್ಯಕ್ತಿ ಪ್ರಕಾರ. ಈ ಅಭಿವ್ಯಕ್ತಿಗೆ ಅವರು ಸಾಹಿತ್ಯ ಸಂಬಂಧಿಯಾದ, ಹಾಗೂ ಪರಿಚಿತವಾದ ‘ಗದ್ಯ’, ‘ಪದ್ಯ’ ಇತ್ಯಾದಿ ಪದಗಳನ್ನು ಬಿಟ್ಟು ‘ವಚನ’ ಎಂಬ ವಿಶಿಷ್ಟವಾದ ಹೆಸರನ್ನು ಕೊಟ್ಟುಕೊಂಡರು. ಈ ವಚನ ರಚನೆಯ ಕ್ರಿಯೆಯೇ ಅವರಿಗೆ ತಮ್ಮೊಳಗನ್ನು ಶೋಧಿಸಿಕೊಳ್ಳುವ  ಒಂದು ವಿಧಿ(Ritual)ಯೂ ಆಗಿರಬಹುದು. ಆದುದರಿಂದಲೇ ವಚನರಚನೆಯ ಶ್ರೇಷ್ಠತೆಯನ್ನು ಅವರು ಎತ್ತಿ ಹಿಡಿದಂತೆ ತೋರುತ್ತದೆ. ಒಂದೆಡೆ ಸಿದ್ಧರಾಮನು ವಿವಿಧ ವಚನಕಾರರ ವಚನರಚನೆಗಳನ್ನು ಪ್ರಶಂಸಿಸುವ ಸಂದರ್ಭದಲ್ಲಿ

‘ಇಂತಪ್ಪ ವಚನ ರಚನೆಯ ಬಿಟ್ಟು, ಹುಡಿಮಣ್ಣ ಹೊಯ್ಯದೆ ಮಾಣನೆ,
ಕುತ್ಸಿತ ಕಾವ್ಯಾಲಂಕಾರವ ನೋಡುವವರ ನೋಡಿ
ಮಹಾದೇವ ಕಪಿಲಸಿದ್ಧ ಮಲ್ಲಿಕಾರ್ಜುನ’  (ಸಿದ್ಧ ರಾ.ವ. ೧೦೭)

-ಎನ್ನುತ್ತಾನೆ. ಇಂತಹ ಆತ್ಮಶೋಧನೆ ಹಾಗೂ ಸಾಧನೆಗೆ ಮಾಧ್ಯಮವಾಗುವ ವಚನರಚನೆಯನ್ನು ಬಿಟ್ಟು, ಕಣ್ಣೆದುರಿಗೆ ಆಗಲೇ ದೊಡ್ಡ ದೊಡ್ಡವರಿಂದ ರಚಿತವಾಗಿ ಮಾದರಿಯಾಗಿರುವ ವಚನಗಳನ್ನು ನೋಡದೆ, ತಮ್ಮ ತಮ್ಮ ರಚನೆಗಳಲ್ಲಿ ‘ಕುತ್ಸಿತ ಕಾವ್ಯಾಲಂಕಾರವ ನೋಡುವವರ ನೋಡಿ’ ಮಹಾದೇವನಾದ ಕಪಿಲಸಿದ್ಧಮಲ್ಲಿಕಾರ್ಜುನನು ಹುಡಿಮಣ್ಣ ಹೊಯ್ಯದೆ ಬಿಡುತ್ತಾನೆಯೆ-ಎಂಬುದು ಸಿದ್ಧರಾಮನ ಪ್ರಶ್ನೆ. ಸಿದ್ಧರಾಮನ ಈ ಉಕ್ತಿ ಒಂದೆರಡು ಮಹತ್ವದ ಸಂಗತಿಗಳನ್ನು ಹೇಳುತ್ತದೆ : ಮೊದಲನೆಯದಾಗಿ ಅಂದಿನ ಸಾಮಾಜಿಕ ಆಂದೋಲನದ ಹಿನ್ನೆಲೆಯಲ್ಲಿ, ಹೊಸ ಧಾರ್ಮಿಕ ಎಚ್ಚರದಲ್ಲಿ ತಮ್ಮ ಒಳಗು-ಹೊರಗನ್ನು ತೆರೆದಿಡಲು ತಾವೆಲ್ಲರೂ ವಚನಗಳನ್ನು ಬರೆಯುವುದು ಅಗತ್ಯ, ಅದೊಂದು ಶ್ರೇಷ್ಠವಾದ ಕರ್ತವ್ಯ ಕೂಡಾ-ಎಂಬ ಉದ್ದೇಶವನ್ನು ಸಾಮೂಹಿಕವಾಗಿ ವಚನಕಾರರು ಇರಿಸಿಕೊಂಡಿದ್ದರು ಎನ್ನುವುದು ಸ್ಪಷ್ಟವಾಗಿದೆ. ಆದುದರಿಂದಲೇ ಅಷ್ಟೊಂದು ಸಂಖ್ಯೆಯ ವಚನಕಾರರು ಅಂದು ಕಾಣಿಸಿಕೊಳ್ಳುತ್ತಾರೆ. ಎರಡನೆಯದಾಗಿ, ವಚನಗಳನ್ನು ಬರೆಯುವುದಕ್ಕೆ ಮುಖ್ಯವಾದದ್ದು ಸ್ವಾನುಭವ ಮತ್ತು ಆಗಲೇ ಹಿರಿಯರಿಂದ ರಚಿತವಾದ ಮಾದರಿಗಳು. ‘ಇಂತಪ್ಪ ವಚನರಚನೆ’ಯನ್ನು ಬಿಟ್ಟು, ಕ್ಷುಲ್ಲಕವಾದ ಕಾವ್ಯಾಲಂಕಾರಗಳ ಕಡೆ ಗಮನ ಕೊಡಬಾರದು; ಎಂದರೆ ‘ಸಾಹಿತ್ಯ’ದ ಆಕರ್ಷಣೆಯಿಂದ ಅಥವಾ ‘ಸಾಹಿತ್ಯ’ವಾಗುವ ‘ಅಪಾಯ’ದಿಂದ ಪಾರಾಗಬೇಕು ಅನ್ನುವುದು. ಈ ಮಾತಂತೂ ವಾಸ್ತವವಾಗಿ, ಸಾಹಿತ್ಯ ಅಥವಾ ಕಾವ್ಯವಿರೋಧಿಯಾದ ಒಂದು ನಿಲುವನ್ನೇ ಪ್ರತಿಪಾದಿಸುತ್ತದೆ! ವಚನರಚನೆ ಅನ್ನುವುದು ಕೇವಲ ಒಂದು ಬರೆಯುವ ಹವ್ಯಾಸವಲ್ಲ ರಂಜಿಸುವ ತಂತ್ರವಲ್ಲ; ಅದಿರುವುದು ಅನುಭವದ ಶೋಧನೆಗೆ, ಅನುಭಾವದ ಸಾಧನೆಗೆ ಎಂಬ ಎಚ್ಚರಿಕೆಯನ್ನು ಅಂದಿನ ಹಿರಿಯರು ಎತ್ತಿಹೇಳಿದಂತೆ ತೋರುತ್ತದೆ. ಆದುದರಿಂದಲೇ ಈ ಬಗ್ಗೆ ತಮಗೇ ತಾವೇ ಎಚ್ಚರಿಕೆಯನ್ನು ಕೊಟ್ಟುಕೊಂಡಿದ್ದಾರೆ:

ವಚನಾನುಭವ ವಾಗ್ರಚನೆಯಲ್ಲ ಮನವೆ
ವಚನಾನುಭವ ವಾಗ್ರಚನೆಯಲ್ಲ. (ಸಿದ್ಧ ರಾ.ವ. ೯೩೭
)

ವಚನಗಳಲ್ಲಿ ಕಂಡು ಬರುವ ಅನುಭವ ಕೇವಲ ವಾಗ್ರಚನೆಗೆ ನಿಲುಕುವಂಥದಲ್ಲ; ಅದರಾಚೆಯದು. ಉಳಿದ ಅನುಭವಗಳು ವಾಗ್ರಚನೆಗೆ ಸಿಕ್ಕಾವು. ಆದರೆ ಈ ಅನುಭವ ‘ಅಂತರಂಗದ ರತ್ನ’; ಅತ್ಯಂತ ಅಮೂಲ್ಯವಾದದ್ದು, ಕೇವಲ ಆಂತರಿಕವಾದದ್ದು. ಆದುದರಿಂದ ಇಂಥ ಅನುಭವವನ್ನು ಹೇಳುವ ವಚನಗಳನ್ನು ‘ವಾಗ್‌ರಚನೆ’ಯ ಪಂಕ್ತಿಗೆ ನಿಲ್ಲುವ ಸಾಹಿತ್ಯದೊಂದಿಗೆ ಸಮೀಕರಿಸಲು ಒಪ್ಪದೆ, ಅದಕ್ಕೂ ಮೀರಿದ ನೆಲೆಯಲ್ಲಿ ಪರಿಗಣಿಸತೊಡಗಿದರು. ಈ ಕಾರಣದಿಂದಲೇ ವಚನ ರಚನೆಗಳು ಆಗಲೇ ರೂಢಿಯಾದ, ಸಿದ್ಧಸಂಪ್ರದಾಯದ ‘ವಾಗ್ ರಚನೆ’ಗಳ ಮಾಧ್ಯಮದಲ್ಲಿ ಅಭಿವ್ಯಕ್ತವಾಗತಕ್ಕವುಗಳಲ್ಲ, ಅವುಗಳೇನಿದ್ದರೂ ಸಿದ್ಧ ಸಂಪ್ರದಾಯದ ‘ವಾಗ್‌ರಚನೆ’ಗಳ ನಿರಾಕರಣದಿಂದ, ಒಳಗಿನ ಅನುಭವವು ಕೊಡುವಂಥ ಆಕಾರದಿಂದ ಮೂಡುತ್ತವೆ ಎಂಬುದನ್ನು,

ತಾಳ ಮಾನ ಸರಿವನಱಿಯೆ
ಓಜೆ ಬಜಾವಣೆಯ ಲೆಕ್ಕವನಱಿಯೆ
ಅಮೃತಗಣ ದೇವಗಣವನಱಿಯೆ
ಕೂಡಲ ಸಂಗಮದೇವಾ, ನಿನಗೆ ಕೇಡಿಲ್ಲವಾಗಿ
ಆನು ಒಲಿದಂತೆ ಹಾಡುವೆ.     (ಬ.ವ. ೪೯೩)

ಎಂಬ ಈ ವಚನ ಸ್ಪಷ್ಟಪಡಿಸುತ್ತದೆ. ಈ ವಚನದಲ್ಲಿ ಬಸವಣ್ಣನವರು ತಮಗೆ ಆಗಲೇ  ಸಿದ್ಧವಾದ ವಾಗ್ರಚನೆಯ ವಿಧಾನಗಳು ತಿಳಿಯವು, ಈ ಕಾರಣದಿಂದ ‘ಆನು ಒಲಿದಂತೆ ಹಾಡುವೆ’ ಎನ್ನುತ್ತಾರೆ. ವಾಸ್ತವವಾಗಿ ಅದುವರೆಗಿನ ಕನ್ನಡ ಸಾಹಿತ್ಯದ ಹಿನ್ನೆಲೆಯಿಂದ ನೋಡಿದರೆ, ಇದು ಒಂದು ಹೊಸ ಪ್ರತಿಭಟನೆಯ ಮಾತಾಗಿ ತೋರುತ್ತದೆ. ಯಾಕೆಂದರೆ ಅದುವರೆಗೂ ಇದ್ದ ವಸ್ತುನಿಷ್ಠ ಕಾವ್ಯ (Objective poetry) ಪರಂಪರೆಯಲ್ಲಿ ಬರೆಯುವ ವ್ಯಕ್ತಿ, ತನ್ನ ವ್ಯಕ್ತಿತ್ವವನ್ನು ರಾಜಾಸ್ಥಾನ ಇತ್ಯಾದಿಗಳಿಗೆ, ಕಾವ್ಯ ವಸ್ತುವಿನ ಆಯ್ಕೆಯನ್ನು ತನ್ನದಲ್ಲದ, ಆಗಲೇ ಸಿದ್ಧ ಪ್ರಸಿದ್ಧವಾದ ವಸ್ತುವಿಗೆ, ಒಪ್ಪಿಸಿಕೊಂಡಂಥ ಪರಿಸರದಲ್ಲಿ, ಮೊಟ್ಟಮೊದಲಿಗೆ ಬಸವಣ್ಣನವರು ಸಿದ್ಧಪರಂಪರೆಯ ವಾಗ್‌ರಚನೆಗಳನ್ನು ನಿರಾಕರಿಸಿ ‘ಆನು ಒಲಿದಂತೆ ಹಾಡುವೆ’ ಎಂಬ ವ್ಯಕ್ತಿನಿಷ್ಠ ಸ್ವತಂತ್ರ ಮನೋಧರ್ಮದ ನೆಲೆಗೆ ಅಭಿವ್ಯಕ್ತಿಯನ್ನು ತಂದದ್ದರ ಘೋಷಣೆಯಾಗಿ ಇದು ಅತ್ಯಂತ ಗಮನಾರ್ಹವಾಗಿದೆ. ‘ಆನು ಒಲಿದಂತೆ ಹಾಡುವೆ’ ಎಂಬ ಈ ಮಾತು ಮುಂದೆ ಹರಿಹರನಲ್ಲಿ ಒಂದು ಮೂಲಭೂತ ಸಾಹಿತ್ಯಕ ಧೋರಣೆಯಾಗಿ ಕನ್ನಡಕಾವ್ಯ ಸಂಪ್ರದಾಯದಲ್ಲೇ ಹೊಸ ಹಾದಿಯನ್ನು ತೆರೆಯಿತೆಂಬುದನ್ನು ನೆನೆದಾಗ, ಈ ಘೋಷಣೆ ಎಷ್ಟು ಮಹತ್ವದ್ದೆಂಬುದನ್ನು ಹೇಳಬೇಕಾಗಿಲ್ಲ.

ವಚನಕಾರರು ತಾವು ಬರೆದದ್ದು ಸಾಹಿತ್ಯ ಹೌದೋ ಅಲ್ಲವೋ ಎಂಬುದರ ಬಗ್ಗೆ ತಟಸ್ಥರಾಗಿದ್ದರೂ, ಅವುಗಳನ್ನು ಇಂದು ನಾವು ಸಾಹಿತ್ಯವೆಂದೇ ಪರಿಗಣಿಸುವುದರಿಂದ ‘ಆನು ಒಲಿದಂತೆ ಹಾಡುವೆ’ ಎಂದ ಬಸವಣ್ಣನವರ ಮಾತನ್ನು, ನಾವು ವಚನಕಾರರ ‘ಕಾವ್ಯತತ್ವ’ ಎಂದೇ ಭಾವಿಸುತ್ತೇವೆ. ವಚನಕಾರರು ತಾವೇನನ್ನು ಬರೆಯುತ್ತಿದ್ದೇವೆ ಅಂದುಕೊಂಡದ್ದು, ಮತ್ತು ಬರೆದದ್ದು ನಿಜವಾಗಿರುವಾಗ, ಈ ಬರವಣಿಗೆಯ ಹಿನ್ನೆಲೆಗೆ ಇರಬಹುದಾದ, ಆದರೆ ಅವರು ಬಹುಶಃ ಗಮನಿಸದಿದ್ದ ಕೆಲವು ಸಾಹಿತ್ಯಕ ಧೋರಣೆಗಳನ್ನು, ಅವರ ‘ಕಾವ್ಯತತ್ವ’ ಎಂದು ನೋಡುವುದು ತಪ್ಪೇನಲ್ಲ. ಹೀಗೆ ನೋಡುವಾಗ ನಾವು ಭಾವಿಸುವ ಅರ್ಥದಲ್ಲೇ, ಅವರ ಕೆಲವು ಮಾತುಗಳನ್ನು ಅವರು ಭಾವಿಸಿದ್ದರೆಂದು ನಾವೇನೂ ಸಾಧಿಸಲು ಹೋಗುವುದಿಲ್ಲ. ಈ ಪ್ರಯತ್ನದಲ್ಲಿ ವಚನಕಾರರ ‘ಕಾವ್ಯತತ್ವ’ದ ಸಮರ್ಥನೆಗೆ ನಾವು ಅವರ ವಚನಗಳಿಂದ ಆಂಶಿಕವಾಗಿಯೋ ಇಡಿಯಾಗಿಯೋ ಮಾತುಗಳನ್ನು ಉದಾಹರಿಸುವಲ್ಲಿ ಅಥವಾ ಅರ್ಥ ಹಚ್ಚುವಲ್ಲಿ, ಆಯಾ ವಚನಗಳ ಸಂದರ್ಭದಲ್ಲಿ ಅವುಗಳಿಗಿರಬಹುದಾದ ಆಧ್ಯಾತ್ಮಿಕವೋ, ಇನ್ನಾವುದೋ ಮಹತ್ವವನ್ನು ಗಣನೆಗೆ ತೆಗೆದುಕೊಂಡಿಲ್ಲ. ಹಾಗೆ ಗಣನೆಗೆ ತೆಗೆದುಕೊಳ್ಳುವುದು ಪ್ರಸ್ತುತ ವಿಷಯ ಪ್ರತಿಪಾದನೆಗೆ ಹೊರತಾದುದು.

ಯಾವುದೇ ಸಾಹಿತಿ, ಒಂದು ಸಾಹಿತ್ಯ ಪರಂಪರೆಯಲ್ಲಿ ನಿಂತು ಬರೆಯುವ ವ್ಯಕ್ತಿಯಾಗಿರುತ್ತಾನೆ. ಅವನು ಕೃತಿ ರಚನೆಗೆ ತೊಡಗುವ ವೇಳೆಗೆ ಅವನಿಗೆ ಹಿಂದೆ ಒಂದು ಸಾಹಿತ್ಯ ಪರಂಪರೆ ಇರುತ್ತದೆ. ಹಾಗೆಯೇ ಅವನ ಸುತ್ತ ಸಮಕಾಲೀನವಾದ ಸಾಹಿತ್ಯರಚನೆಯೂ ಇರುತ್ತದೆ. ಹೀಗೆ ವರ್ತಮಾನದ ಸಮಕಾಲೀನ ಸಾಹಿತ್ಯ ಪರಿಸರದಲ್ಲಿ ನಿಂತು, ತನಗೆ ಹಿನ್ನೆಲೆಯಾದ ಒಂದು ಪರಂಪರೆಯಲ್ಲಿ ತನ್ನ ಅಭಿವ್ಯಕ್ತಿಯನ್ನು ಸಾಧಿಸಿಕೊಳ್ಳಲು ಬಯಸುವ ಸಾಹಿತಿ ಈ ಎರಡರ ಅರಿವನ್ನು ಹೊಂದಿರಬೇಕಾಗುತ್ತದೆ. ವಚನಕಾರರ ಒಂದು ವಚನ ಈ ಅಂಶವನ್ನು,

‘ಹಿಂದಣ ಹೆಜ್ಜೆಯ ನೋಡಿ ಕಂಡಲ್ಲದೆ
ನಿಂದ ಹೆಜ್ಜೆಯನಱಿಯಬಾರದು.’
(ಅವ.ವ. ೨೩೬. ಪು, ೧೩೦)

ಎಂದು ಹೇಳುತ್ತದೆ. ‘ಹಿಂದಣ ಹೆಜ್ಜೆ’ ಹಾಗೂ ‘ನಿಂದ ಹೆಜ್ಜೆ’ಗಳು, ಪರಂಪರೆ ಹಾಗೂ ಸಮಕಾಲೀನತೆಯನ್ನು ಸಂಕೇತಿಸುತ್ತವೆ. ತನ್ನ ಹಿಂದೆ, ನಡೆದವರ ಹೆಜ್ಜೆ ಗುರುತುಗಳ ಒಂದು ಪರಂಪರೆಯೇ ಇದೆ; ತನ್ನ ಎದುರು ‘ನಿಂದ ಹೆಜ್ಜೆ’ಯ ಗುರುತುಗಳಿವೆ. ಸೃಜನಶೀಲಸಾಹಿತಿ ಈ ಹೆಜ್ಜೆ ಗುರುತುಗಳ ನಡುವೆ ನಿಂತಿರುತ್ತಾನೆ. ಅವನು ಸಮಕಾಲೀನ ಸಾಹಿತ್ಯದ ಹೆಜ್ಜೆಗಳನ್ನರಿಯಬೇಕಾದರೆ, ತನಗಿಂತ ಹಿಂದಿನ ಹೆಜ್ಜೆ ಗುರುತುಗಳನ್ನು ಕಂಡವನಾಗಿರಬೇಕು. ಯಾಕೆಂದರೆ ಸಮಕಾಲೀನತೆ ಎಂಬುದು, ಪ್ರಾಚೀನತೆಯ ಬಗೆಗೆ ಇರಿಸಿಕೊಂಡ ಅರಿವು ಹಾಗೂ ಪ್ರತಿಕ್ರಿಯೆಯಾಗಿರುತ್ತದೆ. ಕವಿಗೆ ಪರಂಪರೆಯ ಅರಿವು ಬೇಕು; ಆದರೆ ಆತ ಅದರ ಹಿಡಿತದಿಂದ ಪಾರಾಗಿರಬೇಕು. ವರ್ತಮಾನದ ಸಮಕಾಲೀನ ನಿರ್ಮಿತಿಯ ಬಗೆಗೆ ಎಚ್ಚರಬೇಕು; ಆದರೆ ತಾನು ಮಾತ್ರ ಅದರ ಪ್ರಭಾವಗಳಿಂದಲೂ ಪಾರಾಗಿರಬೇಕು. ಒಟ್ಟಿನಲ್ಲಿ ಕವಿಗಾಗಲಿ, ವಿಮರ್ಶಕನಿಗಾಗಲಿ ಅದೊಂದು ಸೂತ್ರ; ವರ್ತಮಾನವನ್ನು ಅರಿಯಬೇಕಾದರೆ, ಅರಗಿಸಿಕೊಳ್ಳಬೇಕಾದರೆ, ಅಳೆದು ನೋಡಬೇಕಾದರೆ ಅದರ ಹಿಂದಿನ ಪರಂಪರೆಯ ಅರಿವು  ಅತ್ಯಂತ ಅಗತ್ಯವಾದದ್ದು.

ಸಾಹಿತಿಗಿರಬೇಕಾದ ಸಾಂಸ್ಕೃತಿಕ ಜವಾಬ್ದಾರಿಯನ್ನು ಹೇಳಿದ ಮೇಲೆ ಕಾವ್ಯ ಕ್ರಿಯೆಯ ಸ್ವರೂಪವನ್ನು ಬಸವಣ್ಣನವರ ಒಂದು ವಚನ ಬಹು ಸೊಗಸಾಗಿ ನಿರೂಪಿಸುತ್ತದೆ. ಆ ವಚನ ಹೀಗಿದೆ :

‘ಬಯಲ ರೂಪ ಮಾಡಬಲ್ಲಾತನೆ ಶರಣನು
ಆ ರೂಪ ಬಯಲ ಮಾಡಬಲ್ಲಾತನೇ ಲಿಂಗಾನುಭಾವಿ’
(ಬ.ವ. ೯೨೨)

ಇಲ್ಲಿರುವುದು ಶರಣನಿಗೂ, ಲಿಂಗಾನುಭಾವಿಗೂ ಇರುವ ವ್ಯತ್ಯಾಸದ ವಿವರಣೆ. ನಮಗೆ ಪ್ರಕೃತವಾದದ್ದು, ಕಾವ್ಯನಿರ್ಮಿತಿಯ ಸ್ವರೂಪದ ಜತೆಗೆ, ಕವಿಗೂ ಮತ್ತು ಓದುಗನಿಗೂ ಇರುವ ಸಂಬಂಧ. ಈ ವಚನದ ಮಾತುಗಳನ್ನೇ ಕೊಂಚ ಪಲ್ಲಟಿಸಿಕೊಳ್ಳುವುದಾದರೆ ‘ಬಯಲ ರೂಪ ಮಾಡಬಲ್ಲಾತನೇ ಕವಿ; ಆ ರೂಪ ಬಯಲ ಮಾಡಬಲ್ಲಾತನೇ ಕಾವ್ಯಾನುಭವಿ’ ಎನ್ನಬಹುದಲ್ಲವೆ? ಕವಿಯ ಕಾವ್ಯ ರಚನೆಗೆ ಮೂಲವಾದ ಅನುಭವ ದ್ರವ್ಯವು ವಾಸ್ತವವಾಗಿ ನಿರಾಕಾರವಾದದ್ದು, ಅಸ್ಪಷ್ಟವಾದದ್ದು, ಅಖಚಿತವಾದದ್ದು- ಒಂದು ದೃಷ್ಟಿಯಲ್ಲಿ ಅದು ‘ಬಯಲು.’ ಇಂಥ ‘ಬಯಲು’ ಅನುಭವಕ್ಕೆ, ಸ್ಪಷ್ಟವಾದ, ಖಚಿತವಾದ ಒಂದು ರೂಪವನ್ನು ಕೊಡುವವನೆ, ‘ರೂಪ ಮಾಡಬಲ್ಲಾತನೆ’ ಕವಿ. ಕವಿಯ ಕೆಲಸವೇ ಇದು. ಆಕಾರವಿಲ್ಲದಕ್ಕೆ ಅಥವಾ ಆಕಾರವಲ್ಲದಕ್ಕೆ, ಒಂದು ಆಕಾರ (ರೂಪ)ವನ್ನು ಕೊಡುವುದು. ಆದರೆ ಈ ‘ರೂಪ’ ಇದೆಯಲ್ಲ, ಇದೇ ಸಹೃದಯನ ಪಾಲಿಗೆ ‘ಕೃತಿ’. ಈ ‘ರೂಪ’ದ ಮೂಲಕವೇ ಓದುಗನು ಮತ್ತೆ ಕವಿಯ ಮೂಲಾನುಭವಕ್ಕೆ, ಅಥವಾ ತತ್ಸಮೀಪದ ಅನುಭವಕ್ಕೆ ಹೋಗುವ ಕ್ರಿಯೆಯೇ ಕಾವ್ಯಾಸ್ವಾದವೆನ್ನಿಸಿಕೊಳ್ಳುತ್ತದೆ. ಯಾವ ಅನುಭವಕ್ಕೆ ಕವಿ ‘ರೂಪ’ ಕೊಟ್ಟನೋ, ಆ ‘ರೂಪ’ದ ಮೂಲಕವೇ ಓದುಗನಿಗೆ ಕವಿಯ ಅನುಭವದೆಡೆಗೆ ಪ್ರವೇಶ. ಆದ್ದರಿಂದ ಆ ‘ರೂಪ ಬಯಲ ಮಾಡಬಲ್ಲ’ ಕ್ರಿಯೆಯೇ ಕಾವ್ಯಾಸ್ವಾದನ ಕ್ರಿಯೆ. ಒಂದು ಅವತರಣ, ಇನ್ನೊಂದು ಉತ್ತರಣ. ಅನುಭವದಿಂದ ಆಕಾರಕ್ಕೆ, ಆಕಾರದಿಂದ ಅನುಭವಕ್ಕೆ ಈ ಕಾವ್ಯ ಸಂವಾದ. ಯಾವುದನ್ನು ಆಕಾರ ಅಥವಾ ರೂಪ ಎನ್ನುತ್ತೇವೆಯೋ ಅದು ಸಾಹಿತ್ಯದಲ್ಲಿ ಶಬ್ದ; ಪದ ರೂಪದಲ್ಲಿರುವ ಶಬ್ದ; ನಾದರೂಪದಲ್ಲಿ ಕಿವಿಯ ಮೇಲೆ ಬೀಳುವ ಶಬ್ದ. ಈ ‘ಶಬ್ದ ರೂಪ’ದ ಮೂಲಕ ನಾವು ತಲುಪುವ ಅನುಭವ ಅದರಾಚೆಯದು; ಅದೊಂದು ರೀತಿಯಲ್ಲಿ ನಿಶ್ಯಬ್ದ ಅಥವಾ ಮನೋಗೋಚರವಾಗುವ ಅನುಭವ. ಈ ಸಂಗತಿಯನ್ನು,

‘ಶಬ್ದದೊಳಗಣ ನಿಶ್ಯಬ್ದದಂತೆ
ಗುಹೇಶ್ವರಾ ನಿಮ್ಮ ಶರಣ ಸಂಬಂಧ’
(ಅ. ವ.ಚಂ ೧.ಪು. ೬೫)

ಎಂಬ ಅಲ್ಲಮನ ವಚನ ಅತ್ಯಂತ ಸೊಗಸಾಗಿ ಹೇಳುತ್ತದೆ. ದೈವೀ ಅನುಭವವನ್ನು ಹೇಳುವ ಅನುಭಾವಿಯ ಈ ಮಾತು ಕಾವ್ಯಾನುಭವದ ಸ್ವರೂಪವನ್ನೂ ತುಂಬ ಸೊಗಸಾಗಿ  ಹೇಳುತ್ತದೆ. ಕಾವ್ಯಾನುಭವದ ನಿಲುವೂ ಇದೇ, ಶಬ್ದದೊಳಗಣ ನಿಶ್ಯಬ್ದದಂತೆ. ಆಕಾರದ ಮೂಲಕ ನಿರಾಕಾರಕ್ಕೆ, ಶಬ್ದದ ಮೂಲಕ ನಿಶ್ಯಬ್ದಕ್ಕೆ ಹೋಗುವ ಆಸ್ವಾದ ಕ್ರಿಯೆ ಇದು. ಅನುಕ್ತವಾದರೂ, ಅರಿವಿಗೆ ಬರುವ ಅರ್ಥರಮ್ಯತೆಯ ಅನುರಣನವನ್ನೇ ಆಲಂಕಾರಿಕರು ‘ಧ್ವನಿ’ ಎಂದು ವರ್ಣಿಸುತ್ತಾರೆ; ಈ ಅನುಭವವನ್ನು ‘ಚಿತ್ತ ವಿಶ್ರಾಂತಿ’ ಎಂದೂ ‘ವಿಗಲಿತ ವೇದ್ಯಾಂತರ’ ಎಂದೂ ಕರೆದಿದ್ದಾರೆ.

ಹೀಗೆ ಅನುಭವ ಅಭಿವ್ಯಕ್ತವಾಗಬೇಕಾದರೆ ಆಸ್ವಾದ್ಯವಾಗಬೇಕಾದರೆ, ಅಭಿವ್ಯಕ್ತಿಯ ಮಾಧ್ಯಮವಾದ ‘ವಾಗ್‌ರಚನೆ’ ಬಹು ಮುಖ್ಯವಾದದ್ದು. ತಕ್ಕ ಪದಗಳಲ್ಲಿ ‘ನಿರಾಕಾರ’ ವಾದ ಅನುಭವ ‘ಆಕಾರ’ ಪಡೆಯದೆ ಹೋದರೆ, ಅಲ್ಲಿ ‘ರೂಪ ಬಯಲ’ ಮಾಡುವ ಅಥವಾ ‘ಶಬ್ದ’ ‘ನಿಶ್ಯಬ್ದ’ವಾಗುವ ಕ್ರಿಯೆಯೇ ಸಾಧ್ಯವಾಗುವುದಿಲ್ಲ. ಆದುದರಿಂದ ಸಾಹಿತ್ಯದಲ್ಲಿ ಬಹುಮುಖ್ಯವಾದದ್ದು ‘ಬಯಲ ರೂಪ ಮಾಡಬಲ್ಲ’ ಶೈಲಿ ಅಥವಾ ಅನುಭವ ಆಕಾರವನ್ನು ಪಡೆಯುವ ಪದರಚನೆ. ಬಸವಣ್ಣನವರು ‘ಶಬ್ದ’ದ ಅಥವಾ ಪದದ ಬದಲು ‘ನುಡಿ’ ಎಂಬ ಮಾತನ್ನು ಬಳಸುತ್ತಾರೆ, ಅಭಿವ್ಯಕ್ತಿ ಎಂಬ ಅರ್ಥದಲ್ಲಿ. ‘ನುಡಿ’ ಅಥವಾ ಅಭಿವ್ಯಕ್ತಿ (Expression) ಹೇಗಿರಬೇಕೆಂಬುದನ್ನು ಕುರಿತು,

ನುಡಿದರೆ ಮುತ್ತಿನ ಹಾರದಂತಿರಬೇಕು
ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು
ನುಡಿದರೆ ಸ್ಫಟಿಕದ ಸಲಾಕೆಯಂತಿರಬೇಕು
ನುಡಿದರೆ ಲಿಂಗಮೆಚ್ಚಿ ಅಹುದಹುದೆನಬೇಕು
ನುಡಿಯೊಳಗಾಗಿ ನಡೆಯದಿದ್ದಡೆ
ಕೂಡಲಸಂಗಮದೇವನೆಂತೊಲಿವನಯ್ಯಾ
(ಬ.ವ. ೮೦೨)

ಎನ್ನುತ್ತಾರೆ. ವಾಸ್ತವವಾಗಿ ಅತ್ಯುತ್ತಮ ನುಡಿಗಟ್ಟಿನ ಅಥವಾ ಶೈಲಿಯ ಲಕ್ಷಣ ಇದು: ಮೊದಲ ಪಂಕ್ತಿ, ‘ನುಡಿದರೆ ಮುತ್ತಿನ ಹಾರದಂತಿರಬೇಕು’ ಎನ್ನುವುದು ಶಬ್ದಗಳ ಜೋಡಣೆಯನ್ನು ಕುರಿತ ಮಾತು. ಅಭಿವ್ಯಕ್ತಿ ಎಂದರೆ, ಅನುಭವವು ‘ನುಡಿ’ಗಳಲ್ಲಿ, ಶಬ್ದರೂಪದ ಪದಗಳಲ್ಲಿ ವಿನ್ಯಾಸಗೊಳ್ಳುವ ಕ್ರಮ. ಈ ಶಬ್ದಗಳ ಜೋಡಣೆಗೆ ಬಸವಣ್ಣನವರು ಕೊಡುವ ಉಪಮೆ ‘ಮುತ್ತಿನಹಾರ’ದ್ದು. ಮುತ್ತಿನ ಹಾರದಲ್ಲಿ ಮುತ್ತುಗಳು ಒಂದೇ ಸಮವಾಗಿ ನಿಬಿಡವಾಗಿ, ಏರುಪೇರಿಲ್ಲದೆ, ಮನೋಹರವಾಗಿ ಹೇಗೆ ಕೂಡಿಕೊಳ್ಳುತ್ತವೆಯೋ ಹಾಗೆ, ಪದಗಳೆಲ್ಲ ಭಾವದ ಸೂತ್ರದಲ್ಲಿ ಹೊಂದಿಕೊಂಡಿರಬೇಕು. ಕೋಲ್‌ರಿಜ್ ಹೇಳುವ ‘ಅತ್ಯುತ್ತಮ ಪದಗಳು ಅತ್ಯುತ್ತಮ ರೀತಿಯಲ್ಲಿ’ (Best words in the Best order) ಎಂಬ ಮಾತನ್ನು ಇಲ್ಲಿ ನೆನೆಯಬಹುದು. ಅಭಿವ್ಯಕ್ತಿಯಲ್ಲಿನ ಶಬ್ದ ಸಂಯೋಜನೆ ಹಾರದೊಳಗಿನ ಮುತ್ತುಗಳಂತೆ ಅನುಕ್ರಮವಾಗಿ ಮನೋಹರವಾಗಿ ಇರಬೇಕು ಎನ್ನುವುದು ಮೊದಲ ಲಕ್ಷಣ. ಈ ವಚನದ ಎರಡನೆಯ ಪಂಕ್ತಿ ಕೊಡುವ ಚಿತ್ರವೇ ಬೇರೆ, ಅದೇ ಅಭಿಪ್ರಾಯದ ವ್ಯಾಖ್ಯಾನಕ್ಕೆ. ‘ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು.’ ಮೊದಲ ಪಂಕ್ತಿ ಶಬ್ದಗಳ ಜೋಡಣೆಯ ಸೊಗಸನ್ನು ಹೇಳಿದರೆ, ಎರಡನೆಯ ಈ ಪಂಕ್ತಿ ಆ ಶಬ್ದ ಸಂಘಟನೆಯ ಮೂಲಕ ಅಭಿವ್ಯಕ್ತವಾಗುವ ಅರ್ಥವಂತಿಕೆಯನ್ನು ಹೇಳುತ್ತದೆ. ಮಾಣಿಕ್ಯಕ್ಕೆ ಒಂದು ಕಾಂತಿ ಅಥವಾ ದೀಪ್ತಿ ಇರಬೇಕು. ಮಾತುಗಳಿಂದ ಝಗ್ಗನೆ ಸ್ಫುರಿಸುವ ‘ದೀಪ್ತಿ’ಯೇ ಅದರ ಅರ್ಥವಂತಿಕೆಗೆ ಸಾಕ್ಷಿ. ಪದಗಳ ಮೂಲಕ ಪ್ರಕಟವಾಗುವ ಅರ್ಥದ ಬೆಳಕು ಇದು. ಶಬ್ದಗಳ ಮೂಲಕ ದೀಪ್ತವಾಗುವ ರಮಣೀಯಾರ್ಥವೆ ಕಾವ್ಯದ ಸಾರ ಎನ್ನುತ್ತಾರೆ ಆಲಂಕಾರಿಕರು; ಅಷ್ಟೇ ಅಲ್ಲ, ಶಬ್ದ ಗುಣಗಳನ್ನು  ಹೇಳುವಾಗ ‘ದೀಪ್ತಿ’ ಎಂಬ ಮಾತನ್ನೇ ಬಳಸುತ್ತಾರೆ. ಸ್ವಾರಸ್ಯವೆಂದರೆ ಕಾವ್ಯದಿಂದ ಹೊರಡುವ ಅರ್ಥವನ್ನು Delight ಎಂದು ಕರೆದಿದ್ದಾರೆ ಪಾಶ್ಚಾತ್ಯ ವಿಮರ್ಶಕರು.[3] ಅಭಿವ್ಯಕ್ತಿಯಲ್ಲಿನ ಶಬ್ದ ಜೋಡಣೆ ಮುತ್ತಿನ ಹಾರದಂತೆ ಕೇವಲ ರಮಣೀಯವಾಗಿದ್ದರೆ ಸಾಲದು, ಅದು ಮಾಣಿಕ್ಯದ ದೀಪ್ತಿಯಂತೆ ಒಳಗಿನ ಅರ್ಥದ ಬೆಳಕನ್ನು ತುಳುಕಿಸುವಂತಿರಬೇಕು. ಇನ್ನು ಮೂರನೆಯ ಪಂಕ್ತಿ ‘ನುಡಿದರೆ ಸ್ಫಟಿಕದ ಸಲಾಕೆಯಂತಿರಬೇಕು’ ಅನ್ನುವುದು ಮಾತಿಗಿರಬೇಕಾದ ಒಂದು ಮೊನಚನ್ನು, ಸ್ಪಷ್ಟತೆ(Clarity)ಯನ್ನು ಸೂಚಿಸುತ್ತದೆ. ಅಭಿವ್ಯಕ್ತಿಗೆ ಒಂದು ಮೊನಚು ಹಾಗೂ ಅರ್ಥಸ್ಪಷ್ಟತೆಯಿಲ್ಲದಿದ್ದರೆ, ಅದರಿಂದ ಅನುಭವವೇ ಸಾಧ್ಯವಾಗುವುದಿಲ್ಲ. ಇನ್ನು ನಾಲ್ಕು ಮತ್ತು ಐದನೆಯ ಪಂಕ್ತಿಗಳು ವಚನಕಾರರ ವಾಗ್ರಚನೆಯ ಪರಮೋದ್ದೇಶವನ್ನು ಒತ್ತಿ ಹೇಳುತ್ತವೆ. ‘ನುಡಿದರೆ ಲಿಂಗಮೆಚ್ಚಿ ಅಹುದಹುದೆನಬೇಕು’ -ಎಂಬ ಮಾತನ್ನು, ‘ನುಡಿದರೆ ಸಹೃದಯ ಮೆಚ್ಚಿ ಅಹುದಹುದೆನಬೇಕು’ ಎಂದು ತಿದ್ದಿಕೊಂಡರೆ ಕಾವ್ಯಮೀಮಾಂಸೆಯ ದೃಷ್ಟಿಯಿಂದ ಸರಿಹೋಗುತ್ತದೆ. ಕಾವ್ಯದ ಅಭಿವ್ಯಕ್ತಿ ಹೀಗೆ ಪರಿಪೂರ್ಣವಾಗಿದ್ದರೆ ಸಹೃದಯರು ಮೆಚ್ಚಿ ತಲೆದೂಗುವಂತಿರುತ್ತದೆ; ಮತ್ತು ಅದೇ ಅತ್ಯುತ್ತಮವಾದ ಶೈಲಿಯ ಲಕ್ಷಣ. ಆದರೆ ವಚನಕಾರರು ತಮ್ಮ ಉಕ್ತಿಗೆ ‘ಲಿಂಗ ಮೆಚ್ಚಿ ಅಹುದಹುದೆನಬೇಕು’- ಎಂಬುದನ್ನು ಗುರಿಯಾಗಿರಿಸಿಕೊಂಡಿದ್ದಾರೆ. ಮಾತು ಹೇಗಿರಬೇಕು ಎಂದರೆ, ಸಾಕ್ಷಾತ್ ದೇವರೇ ಮೆಚ್ಚಿ ಹೌದೆನ್ನುವಂತಿರಬೇಕಂತೆ. ಅಷ್ಟೇ ಅಲ್ಲ, ಯಾವ ಅಭಿಪ್ರಾಯ ಆಲೋಚನೆ ಅನಿಸಿಕೆಗಳು ಹೀಗೆ ಮಾತಿನ ನೆಲೆಯಲ್ಲಿ ಮೂರ್ತಗೊಳ್ಳುತ್ತವೋ ಅವು ದೈನಂದಿನ ವ್ಯವಹಾರದಲ್ಲಿ, ನಡವಳಿಕೆಗಳಲ್ಲಿ ಕಾಣಿಸಿಕೊಳ್ಳದಿದ್ದರೆ ಏನು ತಾನೇ ಪ್ರಯೋಜನ? ಅಂಥ ನಡವಳಿಕೆಯನ್ನು ದೇವರು ಹೇಗೆ ತಾನೆ ಮೆಚ್ಚುತ್ತಾನೆ- ಎಂಬ ಪ್ರಶ್ನೆಯ ಮೂಲಕ, ಬದುಕು ಬರೆಹಗಳಿಗಿರಬೇಕಾದ ಸಂಬಂಧವನ್ನು ಸವಾಲಿನ ಧಾಟಿಯಲ್ಲಿ ನಮ್ಮೆದುರು ಮಂಡಿಸುತ್ತಾರೆ.

ಆದರೆ ಈ ಸವಾಲನ್ನೆದುರಿಸುವವರು ಎಷ್ಟು ಮಂದಿ? ನುಡಿಗೂ ಬದುಕಿನಲ್ಲಿ ಅದನ್ನು ಆಚರಿಸಿ ತೋರುವುದಕ್ಕೂ ಸಂಬಂಧವಿಲ್ಲದಿದ್ದ ಮೇಲೆ ಅಂಥ ನುಡಿಗಳಿಗೆ ಬಾಯಿ ಮಾತಿನದೇ ಆಗಲಿ, ಬರೆಹದ್ದೇ ಆಗಲಿ, ಏನು ಬೆಲೆ ಎಂಬ ಪ್ರಶ್ನೆ ಎಲ್ಲಕಾಲದಲ್ಲೂ ಇದ್ದದ್ದೇ. ಆದರೆ ಬರವಣಿಗೆಯ ನೆಲೆಯಲ್ಲಿ ಭಾವಿಸುವ, ಬದುಕುವ, ಸೃಜನಶೀಲ ವ್ಯಕ್ತಿತ್ವಕ್ಕೂ ಮತ್ತು ದೈನಂದಿನ ಸರಳ ಸಾಧಾರಣ ನೆಲೆಯಲ್ಲಿ ತಾಕಲಾಡುವ ದುರ್ಬಲ ಮನುಷ್ಯನಿಗೂ ವ್ಯತ್ಯಾಸವಿದೆ. ಹಾಗೆ ಮಾತಿಗೂ ನಡತೆಗೂ ವ್ಯತ್ಯಾಸವಿಲ್ಲದಂತೆ ಬದುಕಿದ ‘ಕೂಡಲ ಸಂಗನ ಶರಣ’ರು ಈ ಸವಾಲನ್ನೆದುರಿಸಿದರೆಂಬುದು ಮಹತ್ವದ ಸಂಗತಿಯಾಗಿದೆ.

ಅನುರಣನ (೧೯೭೮)

* * *


[1] ಈ ಲೇಖನದಲ್ಲಿ ಉದ್ಧರಿಸಿರುವ ವಚನಗಳು, ಕರ್ನಾಟಕ ವಿಶ್ವವಿದ್ಯಾನಿಲಯವು ಸಂಪಾದಿಸಿ ಪ್ರಕಟಿಸಿರುವ ವಚನ ಸಂಪುಟಗಳಿಂದ ಆಯ್ದುಕೊಂಡವುಗಳು.

[2] ಚೆನ್ನಬಸವಣ್ಣನವರ ವಚನಗಳು : ಸಂ. ಡಾ.ಆರ್.ಸಿ. ಹಿರೇಮಠ. ಇದೇ ಉಕ್ತಿಗೆ ಇನ್ನಷ್ಟು ವಚನಗಳನ್ನು ನೋಡಿ : ವಚನ ೨೪೩, ೨೫೯, ೨೬೯, ೭೬೧, ೮೭೭.

ವಸ್ತುಕ ವರ್ಣಕ ತ್ರಿಸ್ಥಾನದ ಮೇಲೆ ನುಡಿವ ನುಡಿಗಳು

ಇತ್ತಿತ್ತಲಲ್ಲದೆ, ಅತ್ತಲಾರುಬಲ್ಲರು?

-(ಅಲ್ಲಮನ ವಚನಗಳು : ಸಂ. ಡಾ|| ಎಲ್. ಬಸವರಾಜು

ವ. ೨೧೪; ಪು. ೧೫೨)

[3] ”Delight is the chief, if not the only end of Poetry”….. Dryden : I.A. Richards : Principles of Literary Criticism-p 68