ವಚನದೋಷ ಮತ್ತು ಅದೋಷ

ಉತ್ಪಲಮಾಲೆ || ಬಂ[1]ದುವು ಪಾವುಡಂ ನೃಪತಿಗೆಂಬುದುಮಾನೆಗಳೀ ಪ್ರದೇಶದೊಳ್

ನಿಂದುದಿದೆಂಬುದುಂ ವಚನ-ದೋಷ-ವಿಶೇಷಮನೈಪುಣೋಕ್ತಿಯಿಂ |

ಬಂದುದು ಪಾವುಡಂ ನೃಪತಿಗೆಂಬುದುಮಾನೆಗಳೀ ಪ್ರದೇಶದೊಳ್

ನಿಂದುವಿವೆಂಬುದುಂ ಬಗೆದು ನೋ[2]ಡೆ ಗುಣಂ ವಚನಕ್ಕೆ ನಿಕ್ಕುವಂ ||೧೧೮||

೧೧೭. ಹೀಗಲ್ಲದೆ (ಇನ್ನೊಂದು ರೀತಿಯಾಗಿಯೂ ಅದನ್ನು ಸರಿಪಡಿಸ ಬಹುದು), ಅದು (ನಾಮಪದವು) ತನ್ನ ಮುಂದಿರುವ ಕ್ರಿಯೆಯೊಡನೆ ಸಮಾಸ ಹೊಂದಿದ್ದಾದರೆ (ಎಂದರೆ ವರಮಂ ಈಗೆ=ಬರಂ+ಈಗೆ=‘ವರಮೀಗೆ’ ಎಂಬ ಕ್ರಿಯಾಸಮಾಸರೂಪ) ಕ್ರಮಬದ್ಧವಾಗಿಯೇ ‘ವರಮೀಗೆ’ ಎಂಬ ಪ್ರಯೋಗ (ಸಿದ್ಧಿಸುವುದು.). ಸಂಸ್ಕೃತ ನಾಮಕೃತಿಯಿದ್ದರೂ ಸಹ, ಮೊದಲು ಕಾರಕ ವಿಭಕ್ತಿಯನ್ನು ಪಡೆದುಕೊಂಡು ಅದು ಮುಂದೆ ಸಮಾಸವಾಗಲು ವಿಭಕ್ತಿಪ್ರತ್ಯಯ ಅದರೊಳಗೇ ಅಡಗಿಬಿಡುವುದರಿಂದ ಅಭಿನ್ನವಾಗಿ ಸೇರಿಕೊಂಡುಬಿಟ್ಟಂತಾಗುತ್ತದೆಯಾಗಿ, ಅಂತಹ ಕ್ರಿಯಾಪದದೊಡನೆ ಆಗುವ ಸಮಾಸ ಅದೋಷವೆನಿಸುವುದು.

೧೧೮. ‘ನೃಪತಿಗೆ ಪಾವುಡವು (=ಕಾಣಿಕೆಯು) ಬಂದುವು’ ಎನ್ನುವುದೂ, ‘ಆನೆಗಳು ಈ ಪ್ರದೇಶದಲ್ಲಿ ನಿಂದುದು’ ಎನ್ನುವುದೂ ಅರಿಯದವನು ಮಾಡುವ ‘ವಚನ’ ದೋಷಗಳೂ. ಅದನ್ನೇ ‘ನೃಪತಿಗೆ ಪಾವುಡವು ಬಂದಿತು’ ಎಂದೂ ‘ಆನೆಗಳು ಈ ಪ್ರದೇಶದಲ್ಲಿ ನಿಂದುವು’ ಎಂದೂ ಸತಿಮಾಡಿಕೊಂಡು ಓದಿದರೆ ವಾಕ್ಯಗಳು ನಿರ್ದುಷ್ಟವೆನಿಸುವುವು.

ಈದೋಷಕ್ಕೆ ಅಪವಾದ

ಉತ್ಪಲಮಾಲೆ || ಜಾತಿವಿ[3]ಭಾಗಮಂ ಬಗೆದು ಪೇೞೆ ಬಹುತ್ವಮನೇಕ-ವಾಕ್ಯ-ಸಂ*

ಜಾತ-ಗುಣಂ ತದೇಕವಚನಂಗಳೊಳಂ ದೊರೆವೆತ್ತು ಕೂಡುಗುಂ |

ಮಾ[4]ತಿನೊಳೇನೊ ಸಂಖ್ಯೆಗಳೊಳೇಕ-ಬಹುತ್ವ-ವಿ[5]ಪರ್ಯಯಕ್ಕಸಂ-

ಖ್ಯಾತಗುಣಂ ವಿಕಲ್ಪಮದು ಕನ್ನಡದೊಳ್ ಗುಣಮಂ ತಗುಳ್ಚುಗುಂ ||೧೧೯||

ಚಂಪಕಮಾಲೆ || ಕುದುರೆ ತಗುಳ್ದುವಾ ದೆಸೆಯ ಬಿಲ್ಲವರಂ ಸು[6]ೞದಾನೆ ಮೆ

ಟ್ಟಿದುವೆ[7]ಲೆ ನೋಡಿಮೆಂಬುದಿದು ಜಾತಿ-ಕೃತೈಕ-ಬಹುತ್ವ[8]ಮೊಂದುಗುಂ |

ಕುದಿಕುದಿದತ್ತಣಿಂ ಕುದುರೆ ನೂಱಱೊಳಾ ಬಲದಾನೆ ಪತ್ತು ತಾ

ಗಿದುವೆನೆ ದೋಷಮಾ ಪಿರಿದು ಸಂಖ್ಯೆಯೊಳೇಕ-ಬಹುತ್ವ ಸಂಗದಿಂ ||೧೨೦||

೧೧೯. *ಕರ್ತೃವಾದ ನಾಮಪದ* ‘ಜಾತಿ’ ಅತವಾ ಸಾಮಾನ್ಯವೆಂದು (=(=class ) (ವಿವಕ್ಷಿಸದೆ) ಅದರ ಪ್ರತ್ಯೇಕ ವ್ಯಕ್ತಿಯನ್ನೂ ಕುರಿತಿದ್ದರೆ ಅನೇಕ ಅಥವಾ ಬಹುವಚನದ ವಾಕ್ಯಕ್ರಿಯೆ ಗುಣವೇ ಆಗುವುದು; ಹಾಗಲ್ಲದೆ ಜಾತಿವಾಚಕವಾಗಿ (ಸಾಮಾನ್ಯ ವಿವಕ್ಷೆ) ಇರುವಾಗ ಏಕವಚನದ ಪ್ರಯೋಗವೂ ಸರಿಯೇ ಎನಿಸುವುದು. ಸಂಖ್ಯೆಗಳ ಸಂಬಂಧವೊದಗಿದಾಗ ಜಾತಿವಾಚಕ ಪದಕ್ಕೆ ಏಕವಚನ-ಬಹುವಚನಗಳ ವ್ಯತ್ಯಯ ಕೂಡ ವೈಕಲ್ಪಿಕವಾಗಿ ಅನಿರ್ದಿಷ್ಟವಿರುತ್ತದೆ; ಕನ್ನಡದಲ್ಲಿ ಅಂತಹ ವ್ಯತ್ಯಯವೂ ಗುಣವನ್ನೇ ಉಂಟುಮಾಡುತ್ತದೆ.

೧೨೦. ‘ಕುದುರೆ ಆ ದಿಕ್ಕಿನ ಬಿಲ್ಲಾಳ್ಗಳನ್ನು ತಾಗಿದುವು’, ‘ಮುನ್ನುಗ್ಗಿ ಆನೆ ಅವರನ್ನು ನಿಂತು ಮೆಟ್ಟಿದವು, ನೋಡಿರಿ !’ ಎಂಬಲ್ಲಿ (ಕರ್ತೃಪದಗಳು) ಸ್ವಯಂ ಜಾತ್ಯೈಕವಚನಗಳಾಗಿ ಬಹುವಚನದ ಕ್ರಿಯೆಯೊಡನೆ ಸರಿಯಾಗಿಯೇ ಅನ್ವಯಿಸಿವೆ. ಆದರೆ “ಕುದಿಕುದಿದು ಅತ್ತಲಿಂದ ಕುದುರೆ ನೂರರಲ್ಲಿ ಸೈನ್ಯದ ಹತ್ತು ಆನೆ ತಾಗಿದವು” ಎಂದರೆ ಗುಣವಲ್ಲ, ದೋಷವೇ. ಏಕೆಂದರೆ ಒಂದೇ ಬಹುತ್ವವಾಚಕವಾದ ಸಂಖ್ಯೆಯಲ್ಲಿ ಏಕವಚನ-ಬಹುವಚನಗಳೆರಡೂ ಸೇರಿಕೊಂಡು ಬಂದಿವೆ. *ಇಲ್ಲಿ ‘ನೂರು’, ‘ಹತ್ತು’ ಎಂಬ ಬಹುತ್ವಸಂಖ್ಯೆಗೆ ಸಂಬಂಧಿಸಿದಂತೆ ಬರುವ ಕರ್ತೃಪದ ‘ನೂರು ಕುದುರೆ’, ‘ನೂರು ಕುದುರೆಗಳು’ ಎಂಬಂತೆ, ಅಥವಾ ‘ಉತ್ತು ಆನೆ, ಉತ್ತು ಆನೆಗಳು’ ಎಂಬಂತೆ ವೈಕಲ್ಪಿಕವಾಗಿ ಎರಡೂ ಸರಿಯೆ. *ಆದರೆ ಕ್ರಿಯಾಪದವು ಕರ್ತೃಪದದ ವಚನಾನುಗುಣವೇ ಇರಬೇಕಾಗುತ್ತದೆ. ‘ಹತ್ತು ಆನೆ’ ಎಂದು ಮಾಡಿಕೊಂಡ ಮೇಲೆ ‘ತಾಗಿತು’ ಎಂಬ ಏಕವಚನಕ್ರಿಯೆಯೇ ಅಗತ್ಯ; ಹಾಗಿಲ್ಲದೆ ‘ಹತ್ತು ಆನೆ ತಾಗಿದವು’ ಎಂಬಂತೆ ಕರ್ತೃವಿಗೆ ಸಂಖ್ಯಾಕೃತ ಏಕವಚನವನ್ನೂ, ಅದೇ ಸಂಖ್ಯಾಕೃತವಾದ ಬಹುವಚನವನ್ನು ಕ್ರಿಯಾಪದಕ್ಕೂ ಬೆರಸಿದರೆ* ಇಂತಹ ಏಕ-ಬಹುತ್ವಗಳೆರಡರ ಬೆರಕೆ ಬಹುತ್ವಸಂಖ್ಯೆಯ ವಿಷಯದಲ್ಲಿ ಬರುವುದು ದೋಷ.

ಚಂಪಕಮಾಲೆ || ಬೆರಸಿರೆ ಮುಂ ಸಮುಚ್ಚಯ-ಪದ-ದ್ವಿತಯೋಕ್ತಿ ವಿಭಕ್ತಿ ಕೂ[9]ಡೆ ಬಂ-

ದಿರದೆಯುಮೇ[10]ಕ-ವಾಕ್ಯದೊಳೆ ಕಾರಕಸಂಪದಮಂ ತಗುಳ್ಚುಗುಂ |

ನರಪತಿಯುಂ ನೃಪಾಂಗನೆಯರುಂ ನೆರೆದೞ್ತೆಯಿನಾಡಿ ಪೋದರಾ

ಪರಿಜನಮುಂ ಮಹೋತ್ಸವದೊಳೊಂದಿದುದೆಂಬುದಿದಲ್ಪದೂಷಿತಂ ||೧೨೧||

೧೨೧. ಮೊದಲು ಸಮುಚ್ಚಯಗಳಿಂದ ಅನ್ವಿತವಾದ ಎರಡು (ಕರ್ತೃ) ಪದಗಳು ಕೂಡಿಬಂದ ವಾಕ್ಯವಾಗಿದ್ದರೆ, ಮುಂದೆ (ಕ್ರಿಯೆಯಲ್ಲಿ) ಉಚಿತವಾದ ವಚನದ ವಿಭಕ್ತಿಪ್ರತ್ಯಕ್ಕೆ ಹಾನಿಯಾದರೂ ಸಹ, ಏಕವಾಕ್ಯದ ಅಂಗವಾಗಿ ಬಂದು ಸೇರುವ ಕಾರಣ, ಭಿನ್ನವಚನಪ್ರತ್ಯಯಾಂತದ ಪ್ರಯೋಗ ಕೂಡ ‘ಕಾರಕ’ ಅಥವಾ ಉಚಿತ ವಿಭಕ್ತಿಪ್ರಯೋಗದ ಸೌಷ್ಠವವನ್ನೇ ಪಡೆಯುವುದು. ಉದಾಹರಣೆಗೆ-‘ನರಪತಿಯೂ ನೃಪಾಂಗನೆಯರೂ ಸೇರಿ ಪ್ರೀತಿಯಿಂದ ಆಡಿಹೋದರು; ಆ ಪರಿಜನವೂ ಮಹೋತ್ಸವದಲ್ಲಿ ಕೂಡಿದ್ದಿತು.ಎಂಬುದು ಅಲ್ಪದೋಷ. *ಏಕೆಂದರೆ ಇಲ್ಲಿ ಎರಡು ಆಥವಾ ಮೂರು ಸ್ವತಂತ್ರ ವಾಕ್ಯಗಳಿಲ್ಲ. ‘ಊ’ ಎಂಬ ಸಮುಚ್ಚಯವಶದಿಂದ ‘ನರಪತಿ’ ‘ನೃಪಾಂಗನೆಯರು’, ಎರಡಕ್ಕೂ ಏಕವಾಕ್ಯತೆಯಿದೆ. ‘ನರಪತಿ’ ಎಂಬಾಗ ಏಕ ವಚನ ಮತ್ತು ‘ನೃಪಾಂಗನೆಯರು’ ಎಂಬಾಗ ಬಹುವಚನ ಬಂದಿದೆ. ಸಮುಚ್ಚಯ ಸೇರಿರುವ ಕಾರಣ ಎರಡೂ ಏಕವಾಕ್ಯವೆನಿಸಿ ಎರಡಕ್ಕೂ ಬಹುವಚನದ ಒಂದೇ ಕ್ರಿಯಾಪದ ಬಂದಿದೆ. *ಇಲ್ಲಿ ‘ಆ ಪರಿಜನವೂ ಮಹೋತ್ಸವದಲ್ಲಿ ಕೂಡಿದ್ದಿತು’ ಎಂಬುದು ವಾಕ್ಯಾಂತರವಾದ್ದರಿಂದ ‘ವಚನಭೇದ’ ದೋಷಾಭಾವಕ್ಕೆ ಲಕ್ಷ್ಯವಲ್ಲ.*

ಚಂಪಕಮಾಲೆ|| ಗ[11]ಣಿತದೊಳೊಂದಿ ಬರ್ಪ ಪದಮೊಂದೆಡೆ[12]ಗೊಂಡುವಿಶೇಷ್ಯಮುಂ ವಿಶೇ-

ಷಣಮುಮನೊಂದಲೀಯದಿರೆಯುಂ ಮಿಗೆ ಕಾರಕದೋಷ[13]ಮಲ್ತದುಂ|

ಪ್ರಣುತ-ಪದಾಂತರೀಕರಣಮಂ[14]ತರೆ ತಾಣದೊಳಾ[15]ದೊಡಂಮಹಾ-

ಗುಣಮನೆ ತರ್ಕುಮೇಕ-ಬಹು-ಭೇದ-ವಿಕಲ್ಪಮನಲ್ಲಿ ನೋಡಲಿಂ ||೧೨೨||

ಚಂಪಕಮಾಲೆ || ಗುಣಯುತನಪ್ಪನಂ ಸುಭಟನಪ್ಪನನಾಯುಧ-ಯುಕ್ತನಪ್ಪನಂ

ಪ್ರಣುತ-ಸಮಸ್ತ-ವೈರಿ-ಗಣನಪ್ಪನನುಜ್ವಲ-ಕೀರ್ತಿಯಪ್ಪನಂ |

ಗಣಿದಮನೇನುಮಂ ಬ[16]ಗೆಯದಾಗಡುಮಂತೆ ಪರೋಪಕಾರಕಾ-

ರಣ-ಪರನಪ್ಪನಂ ಮನದೆ ಮೆಚ್ಚದರಾರಭಿಮಾನಿಯಪ್ಪನಂ ||೧೨೩||

೧೨೨. ಮೇಲಿಂದಮೇಲೆ ಎಣಿಕೆಗನುಗುಣವಾಗಿ ಬರುತ್ತಿರುವ ಪದವೊಂದು ಪ್ರಯುಕ್ತವಾಗುವ ಕಾರಣ ವಿಶೇಷ್ಯವೂ ವಿಶೇಷಣವೂ ಅಕ್ಕಪಕ್ಕದಲ್ಲಿ ಹೊಂದಿಕೊಳ್ಳದಂತಾದರೂ ಸಹ (ಎಂದರೆ ಒಂದು ಅಧ್ಯಾಹೃತವಾಗಬೇಕಾಗಿದ್ದರೂ ಸಹ) ಅದು ಕಾರಕದೋಷವೆನಿಸದು. ವಿಶೇಷ್ಯ-ವಿಶೇಷಣಗಳು ಅಕ್ಕ-ಪಕ್ಕದಲ್ಲಿದ್ದಾಗ, ಆ ಸಮುಚಿತ ಸ್ಥಾನದಲ್ಲಿಯೇ ವಚನ-ವಿಭಕ್ತಿಗಳಲ್ಲಿ ಒಮ್ಮೊಮ್ಮೆ ವ್ಯತ್ಯಯ ಬಂದೊದಗಿದರೂ ಅದು ತುಂಬಾ ಗುಣಪೂರ್ಣವೆಂದೇ ಭಾಸವಾಗುವುದು. ಏಕವಚನ-ಬಹುವಚನಗಳಿಗೆ ಅಲ್ಲಿ ವಿಕಲ್ಪವನ್ನೇ ಕಂಡುಕೊಳ್ಳಬಹುದು.

೧೨೩. ಗುಣಯುಕ್ತನಾಗಿರುವವನನ್ನು, ಸುಭಟನಾಗಿರುವವನನ್ನು, ಆಯುಧಪಾಣಿಯಾದವನನ್ನು, ಸಮಸ್ತ ವೈರಿವೃಂದವೂ ಹೊಗಳುವವನನ್ನು, ಉಜ್ವಲಕೀರ್ತಿಶಾಲಿಯನ್ನು, ಯಾವದೇ ಲೆಕ್ಕಚಾರವನ್ನೂ ಮಾಡದೆ ಯಾವಾಗಲೂ ಪರೋಪಕಾರಿಯಾಗಿರುವವನನ್ನು, ಅಭಿಮಾನಿಯಾದವನನ್ನು ಮನಸ್ಸಿನಿಂದ ಮೆಚ್ಚದವರು ಯಾರು? *ಇಲ್ಲಿ ವಿಶೇಷಣಗಳು ಒಂದರಮೇಲೆ ಒಂದು ಅಂತಹವನನ್ನು, ಇಂತಹವನನ್ನು ಎಂದು ಸಾಲುಗಟ್ಟ ಬಂದಿವೆಯೇ ವಿನಾ ವಶೇಷ್ಯವಾದ ‘ಪುರುಷನು’ ಎಂಬುದು ನೇರವಾಗಿ ಉಕ್ತವೇ ಆಗಿಲ್ಲ; ಅದನ್ನು ಅಧ್ಯಾಹಾರಮಾಡಿಕೊಳ್ಳಬೇಕು; ಹಾಗೆ ಅಧ್ಯಾಹಾರ ಮಾಡಿಕೊಳ್ಳುವುದು ಸುಲಭವಾಗಿರುವುದರಿಂದ ಇದು ದೋಷವಲ್ಲ. ಇದು ಮೊದಲನೆಯ ನಿಯಮಕ್ಕೆ ಉದಾಹರಣೆ.*

ಚಂಪಕಮಾಲೆ || ನೆಗೆದ ಮುಗಿಲ್ಗಳುಂ ಸುರಿವ ಪೆರ್ಮೞೆಯುಂ ಮಿಗೆ ನುಣ್ಣನಪ್ಪ ಕೇ-

ಕಿಗಳ ಸರಂಗಳುಂ ಪೊಳೆವ ಮಿಂಚುಗಳುಂ ಕರಮುಚ್ಚಮಪ್ಪ ಬೆ- |

ಟ್ಟುಗಳ ತಟಂಗಳಿಂ ಸುರಿವ ನಿರ್ಝರಮುಂ ಪೊಸಕಾ[17]ರೊಳಿಂತು ಬೆ-

ಳ್ಪಗೆ ಪಥಿಕಾಂಗನಾ-ಜನ-ಮನಂಜಿಸುವಂತಿರೆ ತೋಱೆಸುತ್ತಲುಂ ||೧೨೪||

ಗೀತಿಕೆ|| ಇಂತು ಕಾರಕಂಗಳೊಳ್

ಸಂ[18]ತಮಱಯೆ ಪೇೞ್ದ ಗುಣಮಂ ದೋಷಮುಮಂ |

ಚಿಂತಿಸಿ ಪೆಱವು ಮಿನ್ನಪ್ಪುವಂ

ಭ್ರಾಂ[19]ತಿಲ್ಲದಱೆದುಕೊಳ್ಗೆ ಕವಿಗಳ್ ಕೃತಿಗಳೊಳ್ ||೧೨೫||

೧೨೪. ಏರಿದ ಮೋಡಗಳೂ, ಸುರಿಯುವ ದೊಡ್ಡ ಮಳೆಯೂ, ನವಿಲುಗಳ ಇನಿದಾದ ದನಿಗಳೂ, ಹೊಳೆಯುವ ಮಿಂಚುಗಳೂ, ಬಹಳ ಎತ್ತರವಾಗಿರುವ ಬೆಟ್ಟಗಳ ದಡದಿಂದ ಹರಿಯುವ ತೊರೆಯೂ ಹೊಸ ಮಳೆಗಾಲದಲ್ಲಿ ಪಥಿಕಾಂಗನೆಯರನ್ನು ಬೆಪ್ಪುಮಾಡಿ ಬೆದರಿಸುವಂತೆ ಸುತ್ತಲೂ ಕಾಣಿಸಿಕೊಂಡಿರಲು….*ಇಲ್ಲಿ ‘ಏರಿದ, ‘ಸರಿಯುವ’, ‘ಇನಿದಾದ’ ಇತ್ಯಾದಿ ವಿಶೇಷಣಗಳು ಅನುಕ್ರಮವಾಗಿ ಅವುಗಳ ವಿಶೇಷ್ಯಗಳಾದ ‘ಮೋಡಗಳೂ’, ‘ಮಳೆಯೂ’, ‘ದನಿಗಳೂ’ ಮುಂತಾದುವುಗಳ ಜೊತೆ ಗೂಡಿಯೇ ಇವೆ. ಆದರೆ ಕೆಲವು ವಿಶೇಷ್ಯಗಳು ಏಕವಚನದಲ್ಲಿದ್ದರೆ, ಉದಾ-‘ಮಳೆ’, ‘ಮಿಂಚು’, ‘ತೊರೆ’-ಮತ್ತೆ ಕೆಲವು ಬಹುವಚನದಲ್ಲಿದೆ- ಉದಾ-‘ಮೋಡಗಳೂ’, ‘ದನಿಗಳೂ’, ‘ಮಿಂಚುಗಳೂ’ ಎಂದು. ಈ ವಚನವ್ಯತ್ಯಯದಿಂದ ಗುಣವೇ ಹೊರತು ದೋಷವೇನೂ ಇಲ್ಲ. ‘ಪದಾಂತರೀಕರಣ’ವೆಂದರೆ ‘ವಿಭಕ್ತ್ಯಂತಂ ಪದಂ ಎಂಬ ಸೂತ್ರಾನುಸಾರ, ಪದದ ವಚನ-ವಿಭಕ್ತಿ-ಪ್ರತ್ಯಯದ ಅನ್ಯಥಾಕರಣವಷ್ಟೇ ವಿವಕ್ಷಿತ ವಿರಬಹುದು ಎನಿಸುತ್ತದೆ.*

೧೨೫. ಹೀಗೆ ‘ಕಾರಕ’ ಅಥವಾ ವಚನ-ವಿಭಕ್ತಿ-ಪ್ರತ್ಯಯಗಳ ಪ್ರಯೋಗದಲ್ಲಿ ಮೇಲೆ ಹೇಳಿದಂತೆ ಗುಣವನ್ನೂ ದೋಷವನ್ನೂ, ಸ್ಪಷ್ಟವಾಗಿ ತಿಳಿಯುವವರೆಗೂ ಅನುಶೀಲಿಸಿ, ಇದೇ ರೀತಿಯಾದ ಮಿಕ್ಕವನ್ನೂ ಕೃತಿಗಳಲ್ಲಿ ಕವಿಗಳು ಸಂಶಯವಿಲ್ಲದಂತೆ ಊಹಿಸಿಕೊಳ್ಳಬೇಕು.


[1] ಬಂದ ೞ, ‘ಅ’,

[2] ನಾಡೆ ‘ಬ’

[3] ವಿಭಾಗಮುಂ ‘ಅ, ಬ’.

[4] ಮಾತುಗಳೇನೋ‘ಬ’.

[5] ವಿಪರ್ಯಯರ್ಕಸಂಖ್ಯಾತ ಗುಣಂ ‘ಅ’.

[6] ಸುಳಿದಾನೆ ‘ಬ’

[7] ವಲೆ ‘ಅ’.

[8] ದೊಂದುಗಂ ‘ಕ’.

[9] ಮಾಡಿ ‘ಅ ಬ’.

[10] ಮೇಕ. ಕಾವ್ಯದೊಳೆ ‘ಪಾ’ ಮೆಕುವಾಕು ಕಾವ್ಯ ‘ಅ’

[11] ಗಣಿದ ‘ಮ ಸೀ’.

[12] ದೆಡೆಗೊಂದು ‘ಪಾ’.

[13] ಕಲ್ತಿದಂ.‘ಪಾ’ಕಲ್ತದಂ ‘ಮ’ *ಮಲ್ತದು* ‘ಸೀ’; ಇಲ್ಲಿ ಸ್ವೀಕೃತಪಾಠ ಮುಳಿಯ ತಿಮ್ಮಪ್ಪಯನವರಿಂದ ಸೂಚಿತ, “ಕವಿರಾಜಮಾರ್ಗ ವಿವೇಕ”.

[14] ಮಂತದೆ ‘ಪಾಮಸೀ’; ಇಲ್ಲಿ ಸ್ವೀಕೃತ ಪಾಠ ‘ಅ, ಬ’ ಗಳದು.

[15] ಳಾದುದಂ ‘ಬ’.

[16] ಬಗೆಯದಾಗದುಮಂತೆ ‘ಮ’

[17] ಗಾರೊಳಿಂತು ‘ಪಾ’.

[18] ಸಂತವಱೆಯೆ ‘ಪಾ’.

[19] ಭ್ರಾಂತಿಯಿಲ್ಲ ‘ಬ’.