೧೦೦೧
ಹರಿವ ನೀರಿನ ಅಡಿಯ ಕಾಣಬಹುದಲ್ಲದೆ
ನಿಂದ ಇಂಗಡಲಿನ ಅಡಿಯ ಕಂಡವರುಂಟೆ
ಚಲನೆಯಿಂದ ತೋರಿವ ತೋರಿಕೆಯ ಕಾಣಬಹುದಲ್ಲದೆ
ಶಬ್ದ ಮುಗ್ಧವಾದ ಶರಣನ ಚಿತ್ತವ ಭೇದಿಸಬಹುದೆ
ಅದು ಸರಿಹರಿದ ಸಂಬಂಧ
ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ
ಮಾತುಳಂಗ ಮಧುಕೇಶ್ವರನು

೧೦೦೨
ಹರಿವ ಸಕಟಿಂಗೆ ಕಡೆಗೀಲು ಕಡೆಯಾದಲ್ಲಿ
ಆ ಗಾಲಿ ಅಡಿಯಿಡಬಲ್ಲುದೆ
ಕುರುಹಿನ ಮೂರ್ತಿಯಲ್ಲಿ ಅರಿವು ಒಡಗೂಡದಿರೆ
ಆ ಜ್ಞಾನ ಹಿಂದ ಮರೆದು ಮುಂದಕ್ಕಡಿಯಿಡಲಿಲ್ಲ
ತಡಿಯಲ್ಲಿ ನಿಂದು ಮಡುವಿನಲ್ಲಿದ್ದ ಹರುಗೋಲಕ್ಕೆ ಅಡಿಯಿಟ್ಟು
ಅದುವೊಡಗೂಡಿ ಎಯ್ದುವಂತೆ
ಕುರುಹಿನ ತಡಿ ಮರವೆಯ ಮಡು
ಮಾಡುವ ವರ್ತಕ ಹರುಗೋಲಾಗಿ
ಅರಿಕೆ ಅಂಬಿಗನಾಗಿ
ಸಂಸಾರ ಸಾಗರವ ದಾಂಟಿ
ಆ ತಡಿಯ ಮರೆಯಲದೆ ನಿಜನೆಮ್ಮುಗೆಯ ಕಳೆಬೆಳಗು
ಬೆಳಗುತ್ತದೆ ಸದಾಶಿವಮೂರ್ತಿಲಿಂಗದಲ್ಲಿ

೧೦೦೩
ಹರಿವ ಹಾವಿಂಗೆ ಕಾಲ ಕೊಟ್ಟು
ಉರಿವ ಕಿಚ್ಚಿಗೆ ಕಯ್ಯನಿಕ್ಕಿ
ಅರಿವ ಆಯುಧಕ್ಕೆ ಕೊರಳ ಕೊಟ್ಟು
ಮತ್ತೆಂತೂ ಅರುಹಿರಿಯರಾದಿರಿರಿ
ಮುಂದಕ್ಕಾತನನರಿಯಬಲ್ಲಡೆ
ಹರಿವ ಚಿತ್ತವ ನಿಲಿಸಿ
ಕುದಿವ ಆಸೆಯ ಕೆಡಿಸಿ
ಸರ್ವವ್ಯಾಪಾರವೆಂಬ ಗೊತ್ತಿಗೆ ಚಿತ್ತವನಿಕ್ಕದೆ ನಿಶ್ಚಯನಾಗಿ
ನಿಂದುದು
ಆತನಿರವೆ ಸದಾಶಿವಮೂರ್ತಿಲಿಂಗವು ತಾನೆ

೧೦೦೪
ಹಲವು ಕೊಂಬಿಂಗೆ ಹಾಯಲುಬೇಡ
ಬರಿಕಾಯಕ್ಕೆ ನೀಡಲುಬೇಡ
ಲೋಗರಿಗೆ ಕೊಟ್ಟು ಭ್ರಮಿತನಾಗಿರಬೇಡ
ಆಚಾರವೆಂಬುದು ಹಾವಸೆಗಲ್ಲು
ಭಾವತಪ್ಪಿದ ಬಳಿಕ ಏಗೈದಡಾಗದು
ಅಂಜದಿರು ಅಳುಕದಿರು ಪರದೈವಕ್ಕೆರಗದಿರು
ಕೂಡಲಸಂಗಯ್ಯನ ಕೈಲು ಈಸುವುದೆನ್ನ ಭಾರ

೧೦೦೫
ಹಲವು ಗಿರಿಗಳ ತಪ್ಪಲಲ್ಲಿ
ಮಲೆಯ ಮಂದಿರಗಳಲ್ಲಿ
ಬಳನೆ ಬಳನೆ ಮೇದು
ಮತ್ತೆ ತಮ್ಮ ನೆಲಹೊಲಕ್ಕೆ ತಪ್ಪದೆ ಬಪ್ಪವು ನೋಡಾ
ಆ ಪಶುವಿಂಗೆ ಕಟ್ಟು ಗೊತ್ತಿಲ್ಲ
ಕಾವ ಕಟ್ಟಿಗೆ ಒಳಗಲ್ಲ
ತಮ್ಮ ಠಾವಿಂಗೆ ಬಂದು ಹಾಲ ಕೊಟ್ಟು
ಮತ್ತೆ ತಮ್ಮ ನೆಲೆಯ ಠಾವಿಗೆ ಹೋದ ಮತ್ತೆ
ಕಾವಲು ತಪ್ಪಿಲ್ಲ ಕಾಲಕರ್ಮವಿರಹಿತ ತ್ರಿಪುರಾಂಕ
ಲಿಂಗದೊಳಗಾದವಂಗೆ

೧೦೦೬
ಹಲವು ಚಿತ್ರವ ನೆನೆವ ಮನಕ್ಕೆ ಬೇರೆ ಸಲೆ ವಸ್ತು
ಒಂದೆಂದು ನೆಲೆಯಲ್ಲಿ ನಿಲಬಲ್ಲುದೆ
ಜಲವ ತಪ್ಪಿದ ಮತ್ಸ್ಯ ಬಿಲವ ತಪ್ಪಿದ ಸರ್ಪ
ನೆಲೆಯ ತಪ್ಪಿದ ಆತ್ಮ ಬೇರೊಂದಕ್ಕೆ ಒಲವರವುಂಟೆ
ಕಳನನೇರಿಯಿಳಿದ ಮತ್ತೆ ಒಡೆಯನ ಹೊಲಬಿಲ್ಲಾ ಎಂದೆ
ಕಾಮಧೂಮ ಧೂಳೇಶ್ವರಾ

೧೦೦೭
ಹಲವು ಸಂಸರ್ಗದಿಂದ ಬಂದ ಜಲ ನಿಲವಾಗಿ
ಒಂದು ಠಾವಿನಲ್ಲಿ ನದಿ ನಾಮವಾಯಿತ್ತು
ನಾನಾಭಾವಂಗಳಲ್ಲಿ ನೊಂದು ಬಂದ ಜೀವ
ಒಂದು ನೆಲೆಯಲ್ಲಿ ನಿಂದು ಸಂದೇಹವ ಬಿಡಲಾಗಿ
ಪರಮನಾಯಿತ್ತು
ಪ್ರಕಾಶವ ಕಂಡು ಕಾಲಾಂತಕ ಭೀಮೇಶ್ವರಲಿಂಗವೆಂಬ
ನಾಮವಾಯಿತ್ತು

೧೦೦೮
ಹಸಿವಾದಡೆ ಊರೊಳಗೆ ಭಿಕ್ಷಾನ್ನಗಳುಂಟು
ತೃಷೆಯಾದಡೆ ಕೆರೆ ಹಳ್ಳ ಬಾವಿಗಳುಂಟು
ಅಂಗಶೀತಕ್ಕೆ ಬೀಸಾಟ ಅರಿವೆಗಳುಂಟು
ಚೆನ್ನಮಲ್ಲಿಕಾರ್ಜುನಯ್ಯಾ
ಆತ್ಮಸಂಗಾತಕ್ಕೆ ನೀನೆನಗುಂಟು

೧೦೦೯
ಹಸಿವಿಂಗೆ ಲಯವಿಲ್ಲ
ವಿಷಯಕ್ಕೆ ಕುಲವಿಲ್ಲ
ಮರಣಕ್ಕೆ ಮನ್ನಣೆಯಿಲ್ಲ
ಆಸೆಗೆ ಹವಣಿಲ್ಲ
ವಂಚಕನನಾಮಿಕ ನಾಚಯ್ಯಪ್ರಿಯ ಚೆನ್ನರಾಮಯ್ಯ

೧೦೧೦
ಹಸಿವೆ ನೀನು ನಿಲ್ಲು ನಿಲ್ಲು
ತೃಷೆಯ ನೀನು ನಿಲ್ಲು ನಿಲ್ಲು
ನಿದ್ರೆಯೆ ನೀನು ನಿಲ್ಲು ನಿಲ್ಲು
ಕಾಮವೆ ನೀನು ನಿಲ್ಲು ನಿಲ್ಲು
ಕ್ರೋಧವೆ ನೀನು ನಿಲ್ಲು ನಿಲ್ಲು
ಮೋಹವೆ ನೀನು ನಿಲ್ಲು ನಿಲ್ಲು
ಲೋಭವೆ ನೀನು ನಿಲ್ಲು ನಿಲ್ಲು
ಮದವೆ ನೀನು ನಿಲ್ಲು ನಿಲ್ಲು
ಮಚ್ಚರವೆ ನೀನು ನಿಲ್ಲು ನಿಲ್ಲು
ಸಚರಾಚರವೆ ನೀನು ನಿಲ್ಲು ನಿಲ್ಲು
ನಾನು ಚೆನ್ನಮಲ್ಲಿಕಾರ್ಜುನದೇವರ
ಅವಸರದ ಓಲೆಯನೊಯ್ಯತ್ತಲಿದ್ದೇನೆ
ಶರಣಾರ್ಥಿ

೧೦೧೧
ಹಸಿವೆಂಬ ಹೆಬ್ಬಾವು ಬಸುರ ಬಂದು ಹಿಡಿದಡೆ
ವಿಷವೇರಿತ್ತಯ್ಯಾ ಆಪಾದಮಸ್ತಕಕ್ಕೆ
ಹಸಿವಿಗನ್ನವನಿಕ್ಕಿ ವಿಷವನಿಳುಹಬಲ್ಲಡೆ
ವಸುಧೆಯೊಳಗೆ ಆತನೆ ಗಾರುಡಿಗ ಕಾಣಾ
ರಾಮನಾಥ

೧೦೧೨
ಹಸುವ ಕಾವಲ್ಲಿ ದೆಸೆಯನರಿತು
ಎತ್ತ ಕಾವಲ್ಲಿ ಪೃಥ್ವಿಯನರಿದು
ಕರುವ ಕಟ್ಟುವಲ್ಲಿ ಗೊತ್ತ ಕಂಡು
ಧನವ ಕಾವಲ್ಲಿ ಸಜ್ಜನನಾಗಿ
ಜೀವಧನವ ಕಂಡಲ್ಲಿ ಮನ ಮುಟ್ಟದೆ
ಇಂತೀ ಭೇದೇಂದ್ರಿಯಂಗಳ ತುರುಮುಂದೆಯಲ್ಲಿ
ಕರು ಕಡುಸು ಎತ್ತು ಹಸುವಿನಲ್ಲಿ ಚಿತ್ರದ ವರ್ಣವನರಿಯಬೇಕು
ಗೋಪತಿನಾಥ ವಿಶ್ವೇಶ್ವರಲಿಂಗವನರಿವುದಕ್ಕೆ

೧೦೧೩
ಹಸುವಿಗೆ ಹಾಗ ಎತ್ತಿಗೆ ಹಣವಡ್ಡ
ಕರುವಿಗೆ ಮೂರು ಹಣ
ಎಮ್ಮೆ ಕೋಣಕುಲವ ನಾ ಕಾಯಲಿಲ್ಲ
ಅವು ಎನ್ನ ತುರುವಿಗೆ ಹೊರಗು
ತೊಂಡು ಹೋಗದಂತೆ ಕಾದೊಪ್ಪಿಸುವೆ
ಗೋಪತಿನಾಥ ವಿಶ್ವೇಶ್ವರಲಿಂಗಕ್ಕೆ

೧೦೧೪
ಹದಿಯ ಸೀರೆಯನುಟ್ಟು
ಬಳಹದೋಲೆಯ ಕಿವಿಯಲಿಕ್ಕಿ
ಮೊಳಡಂಗೆಯ ಪಿಡಿದು ಗುಲಗಂಜಿ ದಂಡೆಯ ಕಟ್ಟಿ
ತುತ್ತುರುತುರು ಎಂಬ ಕೊಳಲ ಬಾರಿಸುತ
ಅಪಳ ಚಪಳನೆಂಬ ಉಲಿವ ಗಂಟೆಯ ಕಟ್ಟಿ
ತುತ್ತುರು ಜಂಗುಳಿ ದೈವಗಳನೆಲ್ಲವ ಹಿಂಡುಮಾಡಿ
ಕಾವ ನಮ್ಮ ಶಂಭು ತೆಲುಗೇಶ್ವರನು ಮನೆಯ ಗೋವಳನೀತ

೧೦೧೫
ಹಳೆಗಾಲದಲೊಬ್ಬ ಪುರುಷಂಗೆ
ಎಳೆಯ ಕನ್ನಿಕೆಯ ಮದುವೆಯ ಮಾಡಲು
ಕೆಳದಿಯರೈವರು ನಿಬ್ಬಣ ಬಂದರು
ಹಸೆಯ ಮೇಲೆ ಮದವಣಿಗನ ತಂದು ನಿಲಿಸಲೊಡನೆ
ಶಶಿವದನೆ ಬಂದು ಕೈವಿಡಿದಳು
ಮೇಲುದಾಯದಲೊಬ್ಬ ಸತಿ ಕಣ್ಣು ಸನ್ನೆಯ ಮಾಡುತ್ತಿರಲು
ಕೂಡೆ ಬಂದ ನಿಬ್ಬಣಗಿತ್ತಿಯರೆಲ್ಲಾ ಹೆಂಡಿರಾದರು
ದೂರವಿಲ್ಲದ ಗಮನಕ್ಕೆ ದಾರಿ ಪಯಣ ಹಲವಾಯಿತ್ತು
ಸಾರಾಯ ರ್ನಿಣಯವನೇನೆಂಬೆ ಗುಹೇಶ್ವರ

೧೦೧೬
ಹಳ್ಳದೊಳಗೊಂದು ಹುಳ್ಳಿ ಬರುತ್ತಿರಲು
ನೊರೆತೆರೆಗಳು ತಾಗಿದವಲ್ಲಾ
ಸಂಸಾರವೆಂಬ ಸಾಗರದೊಳಗೆ
ಸುಖದುಃಖಂಗಳು ತಾಗಿದವಲ್ಲಾ
ಇದು ಕಾರಣ ಮೂರ್ತಿಯಾದುದಕ್ಕೆ ಪ್ರಳಯ ತಪ್ಪದು
ಕಾಣಾ ಗುಹೇಶ್ವರ

೧೦೧೭
ಹಾಡುವೆ ನಲ್ಲನ ಬೇಡುವೆ ನಲ್ಲನ
ಕೂಡವೆ ನಲ್ಲನ ನಿಚ್ಚನಿಚ್ಚ
ನೋಡಾ ಅವನೆ ಸಖನೆನಗೆ ಅವನೆ ಸುಖವೆನಗೆ ಅವನೆ ಪ್ರಾಣವು
ಕೇಳಲೆ ಕೆಳದಿ
ಉರಿಲಿಂಗದೇವನೆನಗೆ ಸಂಜೀವನ ಕೆಳದಿ

೧೦೧೮
ಹಾದರಕ್ಕೆ ಹೋದಡೆ ಕಳ್ಳದಮ್ಮವಾಯಿತ್ತು
ಹಾಳು ಗೋಡೆಗೆ ಹೋದಡೆ ಚೇಳೂರಿತ್ತು
ಅಬ್ಬರವ ಕೇಳಿ ತಳವಾರ ಉಟ್ಟ ಸೀರೆಯ ಸುಲಿದ
ನಾಚಿ ಹೋದಡೆ ಮನೆಯ ಗಂಡ ಬೆನ್ನ ಬಾರನೆತ್ತಿದ
ಅರಸು ಕೂಡಲಸಂಗಮದೇವ ದಂಡವ ಕೊಂಡ

೧೦೧೯
ಹಾರುವ ಹಕ್ಕಿಯ ಹಿಡಿದೆ
ಬೀಸುವ ಗಾಳಿಯ ಹಿಡಿದೆ
ವೈಶಾಖದ ಬಿಸಿಲ ಹಿಡಿದು ಜಗವ ಹಾಸಿ ಕಟ್ಟಿದೆ
ಒಂದು ತಾರು ಗಂಟು
ಒಂದು ಜಿಗುಳು ಗಂಟು
ಒಂದು ಕುರುಹು ಗಂಟು
ಮೂರರ ಮುದ್ರೆಯ ಮೀರಿ ಹಾರಿತ್ತು ಹಕ್ಕಿ
ಬೀಸಿತ್ತು ಗಾಳಿ
ಹುಯ್ಯಿತ್ತು ಬಿಸಿಲು
ಬಿಸಿಲ ಢಗೆ ತಾಗಿ ವಸುಧೆಯವರೆಲ್ಲರೂ
ಬಾಯಿ ಕಿಸವುತ್ತಿದ್ದರು
ಕಿಸುಕುಳರ ನೋಡಿ
ಶರೀರದ ಗೂಡಿನ ಒಡೆಯ ಗುಮ್ಮಟನ ಪ್ರಾಣ
ಅಗಮ್ಯೇಶ್ವರಲಿಂಗ
ಒಡಗೂಡುತ್ತಿದ್ದ

೧೦೨೦
ಹಾಲ ತೊರೆಗೆ ಬೆಲ್ಲದ ಕೆಸರು ಸಕ್ಕರೆಯ ಮಳಲು
ತವರಾಜದ ನೊರೆ ತೆರೆಯಂತೆ ಆದ್ಯರ ವಚನವಿರಲು
ಬೇರೆ ಬಾವಿಯ ತೋಡಿ ಉಪ್ಪನೀರನುಂಬವನ ವಿಧಿಯಂತೆ
ಆಯಿತ್ತೆನ್ನ ಮತಿ ಕೂಡಲಸಂಗಮದೇವಾ

೧೦೨೧
ಹಾವ ಹಿಡಿವುದ ಹಾವಾಡಿಗ ಬಲ್ಲನಲ್ಲದೆ
ಕಡೆಯಲಿದ್ದ ಜಾವಳಿಗನೆತ್ತ ಬಲ್ಲನು
ನೋವು ಬಂದರೆ ವ್ಯಾಧಿಯಲ್ಲಿ ನರಳುವಾತ ಬಲ್ಲನಲ್ಲದೆ
ಕಡೆಯಲಿಪ್ಪ ದುರುಳನೆತ್ತ ಬಲ್ಲನು
ದೇವ ನಿಮ್ಮ ಶರಣನು ಬೆರೆದಿಪ್ಪ ಭೇದವ
ನೋವುತ್ತ ಬೇವುತ್ತ ಧಾವತಿಗೊಳುತಿಪ್ಪ
ಗಾವಿಲರೆತ್ತ ಬಲ್ಲರು ಲಿಂಗೈಕ್ಯರನುವ
ಬಸವಪ್ರಿಯ ಕೂಡಲಚೆನ್ನಬಸವಣ್ಣಾ

೧೦೨೨
ಹಾವನೂ ಹದ್ದನೂ ಕೂಡೆ ಮೆದ್ದು
ಬೇವನೂ ಬೆಲ್ಲವನೂ ಕೂಡೆ ಕಲಸಿ
ಸಾಗರದಲ್ಲಿ ಸಾಧನೆಯ ಮಾಡುವರ ಬೇಗ ನೋಡಿ
ಅರ್ಕೇಶ್ವರಲಿಂಗನರಿವುದಕ್ಕೆ

೧೦೨೩
ಹಾವಿನ ಡೊಂಕು ಹುತ್ತಕ್ಕೆ ಸಸಿನ
ನದಿಯ ಡೊಂಕು ಸಮುದ್ರಕ್ಕೆ ಸಸಿನ
ನಮ್ಮ ಕೂಡಲಸಂಗನ ಶರಣರ ಡೊಂಕು ಲಿಂಗಕ್ಕೆ ಸಸಿನ

೧೦೨೪
ಹಾವಿನ ಬಿಲದಲ್ಲಿ ಕೋಲನಿಕ್ಕಲಾಗಿ
ಕೋಲ ಬೆಂಬಳಿಯಲ್ಲಿ ಹಾಯ್ದ ಹಾವಿನ ತೆರನಂತೆ
ನಿಶ್ಚಯವಸ್ತು
ಇದನರಿವುತ್ತವೆ ನಿಜವಸ್ತುವಿನ ಗುಣ
ಮೋಹದಲ್ಲಿ ಅಚ್ಚೊತ್ತಿದಂತೆ ಎರಡಳಿಯಬೇಕು
ವೀರಶೂರ ರಾಮೇಶ್ವರನಲ್ಲಿ

೧೦೨೫
ಹಾವಿನ ಹಲ್ಲ ಕಳೆದು ಹಾವನಾಡಿಸಬಲ್ಲಡೆ
ಹಾವಿನ ಸಂಗವೆ ಲೇಸು ಕಂಡಯ್ಯಾ
ಕಾಯದ ಸಂಗವ ವಿವರಿಸಬಲ್ಲಡೆ
ಕಾಯದ ಸಂಗವೆ ಲೇಸು ಕಂಡಯ್ಯಾ
ತಾಯಿ ರಕ್ಕಸಿಯಾದಂತೆ ಕಾಯವಿಕಾರವು
ಚೆನ್ನಮಲ್ಲಿಕಾರ್ಜುನಯ್ಯಾ
ನೀನೊಲಿದವರು ಕಾಯಗೊಂಡಿದ್ದರೆನಬೇಡ