೧೦೧
ಅರ್ಥ ಪ್ರಾಣವ ಕೊಟ್ಟಲ್ಲಿ
ಅಪಮಾನಕ್ಕೆ ಮುಚ್ಚಳನಿಕ್ಕುವ ಲೆಂಕನುಂಟೆ ಅಯ್ಯಾ
ತಲೆಯ ಮಾರಿದವಂಗೆ ಕಣ್ಣು ಹೊರಗಾದುದುಂಟೆ
ಭಕ್ತನಾದಲ್ಲಿ ಸತ್ಯ ಬೇಕಾದಡೆ
ಅರ್ಥ ಪ್ರಾಣ ಅಪಮಾನಕ್ಕೆ ಹೊರಗಾಗಬೇಕು
ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವನರಿವುದಕ್ಕೆ

೧೦೨
ಅರ್ಥರೇಖೆಯಿದ್ದಲ್ಲಿ ಫಲವೇನು ಆಯುಷ್ಯರೇಖೆ ಇಲ್ಲದನ್ನಕ್ಕರ
ಹಂದೆಯ ಕೈಯಲ್ಲಿ ಚಂದ್ರಾಯುಧವಿದ್ದಲ್ಲಿ ಫಲವೇನು
ಅಂಧಕನ ಕೈಯಲ್ಲಿ ದರ್ಪಣವಿದ್ದು ಫಲವೇನು
ಮರ್ಕಟನ ಕೈಯಲ್ಲಿ ಮಾಣಿಕವಿದ್ದು ಫಲವೇನು
ನಮ್ಮ ಕೂಡಲಸಂಗನ ಶರಣರನರಿಯದವರ ಕೈಯಲ್ಲಿ
ಲಿಂಗವಿದ್ದು ಫಲವೇನು ಶಿವಪಥವನರಿಯದನ್ನಕ್ಕ

೧೦೩
ಅರ್ಥಸನ್ಯಾಸಿ ಬ್ರಹ್ಮಚಾರಿ ಆನಯ್ಯ
ದೊರಕೊಳ್ಳದಿರ್ದಡೆ ಒಲ್ಲೆನೆಂಬೆನು
ದಿಟಕ್ಕೆ ಬಂದಡೆ ಪರಿಹರಿಸಲರಿಯೆನು
ಎನಗೆ ನಿಸ್ಪೃಹದ ದೆಸೆಯನೆಂದಿಂಗೀವೆಯಯ್ಯಾ
ಸಕಳೇಶ್ವರದೇವಾ

೧೦೪
ಅರ್ಪಿಸುವುದಕ್ಕೆ ಮುನ್ನವೆ
ಮನವರಿದು ಕಂಗಳು ತುಂಬಿ ಕಂಡ ಮತ್ತೆ
ಅರ್ಪಿತವೆಲ್ಲಿ ಅಡಗಿತ್ತು
ಸಂದೇಹವ ಬಿಟ್ಟು ನಿಂದಲ್ಲಿ
ಮನಸಂದಿತ್ತು ಮಾರೇಶ್ವರಾ

೧೦೫
ಅಲ್ಲಿಯರೂಪ ಇಲ್ಲಿಗೆ ಬಂದಿತ್ತು
ಇಲ್ಲಿಯ ಬಹುರೂಪ ಎಲ್ಲಿ ಅಡಗಿತ್ತೋ
ಎನ್ನ ಬಹುರೂಪ ಬಲ್ಲವರಾರೋ
ನಾದ ಹರಿದು ಸ್ವರವು ಸೂಸಿದ ಬಳಿಕ
ಈ ಬಹುರೂಪ ಬಲ್ಲವರಾರೋ
ರೇಕಣ್ಣಪ್ರಿಯ ನಾಗಿನಾಥನಲ್ಲಿ
ಬಸವಣ್ಣನಿಂದ ಬದುಕಿತೀ ಲೋಕವೆಲ್ಲ

೧೦೬
ಅವರಾರ ಪರಿಯಲ್ಲ ಎಮ್ಮ ನಲ್ಲನು
ವಿಶ್ವವೆಲ್ಲವು ಸತಿಯರು ಸೋಜಿಗದ ಪುರುಷನು
ಅವರವರ ಪರಿಯಲ್ಲೆ ಅವರವರ ನೆರೆವನು
ಅವರವರಿಗವರಂತೆ ಸುಖಮಯನು ನೋಡಾ
ಅವರೆಲ್ಲರ ವಂಚಿಸಿ ಎನ್ನನಗಲದ ಪರಿಯ ನೋಡಾ ಕೆಳದಿ
ನೀನೊಳ್ಳಿದಳಾದಡೆ ಮಹಾಮಂತ್ರವ ಜಪಿಸು
ನಿನ್ನನಗಲನು ನಿನ್ನಾಣೆ ಉರಿಲಿಂಗದೇವ ತನ್ನಾಣೆ ಕೆಳದಿ

೧೦೭
ಅವಳ ವಚನ ಬೆಲ್ಲದಂತೆ ಹೃದಯದಲಿಪ್ಪುದು ನಂಜು ಕಂಡಯ್ಯಾ
ಕಂಗಳಲೊಬ್ಬನ ಕರೆವಳು ಮನದಲೊಬ್ಬನ ನೆರೆವಳು
ಕೂಡಲಸಂಗಮದೇವ ಕೇಳಯ್ಯಾ
ಮಾನಿಸಗಳ್ಳೆಯ ನಂಬದಿರಯ್ಯಾ

೧೦೮
ಅಶನ ವ್ಯಸನಾದಿಗಳನಂತನಂತ
ಕಾಶಾಂಬರಧಾರಿಗಳನಂತನಂತ
ಸಕಳೇಶ್ವರದೇವ ನೀನಲ್ಲದೆ
ಪೆರತಾನರಿಯದವರು ಎತ್ತಾನು ಒಬ್ಬರು

೧೦೯
ಅಶನದಲಾಯಷ್ಯ ವ್ಯಸನದ ಬೀಜ
ನಟನೆಯನೇನುವ ನಟಿಸದಿರಾ
ಆದುದೆ ಜನನ ಮಾದವೆ ಮರಣ
ತೋರಿವುದೆಲ್ಲವು ದಿವಸದ ವಿಸ್ತಾರ
ಸಿಮ್ಮಲಿಗೆಯ ಚೆನ್ನರಾಮನೆಂಬ ಲಿಂಗ
ಸಂಭ್ರಮ ಜೀವರಿಗೆಲ್ಲಿಯದೊ

೧೧೦
ಅಸಿಯ ಮೊನೆಯು ಮುರಿದಡೆ ಮಸೆದಡೆ ಮೊನೆಯಾಗದೆ
ಅಯ್ಯಾ ಅಸು ಮರೆದಡೆ ಆತ್ಮನನರಿದಡೆ ಕೇಡುಂಟೆ
ಅಯ್ಯಾ ಮರೆವುದು ಅರಿವುದು ಎರಡುಳ್ಳನ್ನಕ್ಕ
ಮರೆಯದೆ ಪೂಜಿಸು ಸದಾಶಿವಮೂರ್ತಿಲಿಂಗವ

೧೧೧
ಅಳವರಿಯದ ಭಾಷೆ ಬಹುಕುಳವಾದ ನುಡಿ
ಇಂತೆರಡರ ನುಡಿ ಹುಸಿಯಯ್ಯ
ಬಹುಭಾಷಿತರು ಸುಭಾಷಿತವರ್ಜಿತರು
ಶರಣಸತಿ ಲಿಂಗಪತಿಯೆಂಬರು ಹುಸಿಯಯ್ಯ
ಇಂತಪ್ಪವರ ಕಂಡು ನಾಚಿದೆನಯ್ಯ ಗುಹೇಶ್ವರ

೧೧೨
ಅಳಿವರಿಗೆ ಉಳಿವು ಎಲ್ಲಿಯೂ ಇಲ್ಲವೆಂಬುದ ತಿಳಿ
ಉಳಿವರಿಗೆ ಅಳಿವು ಎಲ್ಲಿಯೂ ಇಲ್ಲವೆಂಬುದ ತಿಳಿ
ಈ ಅಳಿವು ಉಳಿವು ಎಂಬುಭಯವನೇನೆಂಬುದ ತಿಳಿ
ತಿಳಿದ ಮತ್ತೆ ನಿಃಕಳಂಕ ಮಲ್ಲಿಕಾರ್ಜುನ
ಎನೂ ಇಲ್ಲವೆಂಬುದ ತಿಳಿ

೧೧೩
ಅಳಿಸಂಕುಲವೆ ಮಾಮರವೆ ಬೆಳುದಿಂಗಳೆ ಕೋಗಿಲೆಯೆ
ನಿಮ್ಮನೆಲ್ಲರನೂ ಒಂದ ಬೇಡುವೆನು
ಎನ್ನೊಡೆಯ ಚೆನ್ನಮಲ್ಲಿಕಾರ್ಜುನದೇವ ಕಂಡಡೆ
ಕರೆದು ತೋರಿರೆ

೧೧೪
ಅಳೆವುತ್ತ ಅಳೆವುತ್ತ ಬಳಲುವರಲ್ಲದೆ”
ಕೊಳಗ ಬಳಲುವುದೆ
ನಡೆವುತ್ತ ನಡೆವುತ್ತ ಬಳಲುವರಲ್ಲದೆ
ಬಟ್ಟೆ ಬಳಲುವುದೆ
ಶ್ರವವ ಮಾಡುತ್ತ ಮಾಡುತ್ತ ಬಳಲುವರಲ್ಲದೆ
ಕೋಲು ಬಳಲುವುದೆ
ನಿಜವನರಿಯದ ಭಕ್ತ ಬಳಲುವನಲ್ಲದೆ
ಲಿಂಗ ಬಳಲುವುದೆ ಕೂಡಲಸಂಗಮದೇವಾ
ಅರಸರಿಯದ ಬಿಟ್ಟಿಯೋ

೧೧೫
ಆಕಾರನಿರಾಕಾರವೆಂಬೆರಡೂ ಸ್ವರೂಪಂಗಳು
ಒಂದು ಆಹ್ವಾನ ಒಂದು ವಿಸರ್ಜನ
ಒಂದು ವ್ಯಾಕುಳ ಒಂದು ನಿರಾಕುಳ
ಉಭಯ ಕುಳರಹಿತ ಗುಹೇಶ್ವರ
ನಿಮ್ಮ ಶರಣ ನಿಶ್ಚಿಂತನು

೧೧೬
ಆಕಾಶದ ನೀರಿಂಗೆ ಮತ್ತೇತರಲ್ಲಿಯು
ತಿಳಿದಿಹೆನೆಂಬ ಸೂತಕವುಂಟೆ
ಪೃಥ್ವಿಯ ಸಂಗವ ಕೂಡಿದ ಅಪ್ಪುವಿಂಗಲ್ಲದೆ
ನಿಶ್ಚಯದ ಸುಜಲಕ್ಕುಂಟೆ
ಕರ್ಮದ ಕಪಟ ನಿಶ್ಚಯವಾದ ನಿಜತತ್ವಭಾವಿಗೆ
ಮೇಲೊಂದು ಹತ್ತುವ ಹಾವಸೆ ಒಂದೂ ಇಲ್ಲ
ಕಾಮಧೂಮ ಧೂಳೇಶ್ವರಾ

೧೧೭
ಆಕಾಶವ ಮೀರುವ ತರು ಗಿರಿಗಳುಂಟೆ
ನಿರಾಕಾರವ ಮೀರುವ ಸಾಕಾರವುಂಟೆ
ಗೊಹೇಶ್ವರಲಿಂಗವ ಮೀರುವ ಒಡೆತನ ಉಂಟೆ
[ಸಂಗನ ಬಸವಣ್ಣ]

೧೧೮
ಆಗಳೂ ಲೋಗರ ಮನೆಯ ಬಾಗಿಲ
ಕಾಯ್ದುಕೊಂಡಿಪ್ಪವು ಕೆಲವು ದೈವಂಗಳು
ಹೋಗೆಂದಡೆ ಹೋಗವು ಕೆಲವು ದೈವಂಗಳು
ನಾಯಿಗಿಂದ ಕರಕಷ್ಟ ಕೆಲವು ದೈವಂಗಳು
ಲೋಗರ ಬೇಡಿಕೊಂಡುಂಬ ದೈವಂಗಳು
ತಾವೇನ ಕೊಡುವವು ಕೂಡಲಸಂಗಮದೇವಾ

೧೧೯
ಆಗಿಂಗೆ ಮುಯ್ಯಾನದಿರು ಚೇಗಿಂಗೆ ಬೆಂಬೀಳದಿರು
ಆಹಾ ಮನವೆ ಸಂತೈಸಿಕೊ ನಿನ್ನ ನೀನೆ
ಆಗೆಂದಡೆ ನಿನ್ನ ವಶವಲ್ಲ ಹೋಗೆಂದಡೆ ನಿನ್ನಚ್ಛೆಯಲ್ಲ
ಭೋಗಾದಿಭೋಗಂಗಳೆಲ್ಲವು ಸಂಗಯ್ಯನಧೀನವಾಗಿ

೧೨೦
ಆಗಿಲ್ಲದ ಸಿರಿ ಆಯುಷ್ಯವಿಲ್ಲದ ಬದುಕು
ಸುಖವಿಲ್ಲದ ಸಂಸಾರ
ಎಳತಟೆಗೊಂಬ ಕಾಯದ ಸಂಗ
ಬಳಲಿಸುವ ಜೀವಭಾವ
ಇವರ ಕಳವಳವಳಿದಲ್ಲದೆ
ಮಳುಬಾವಿಯ ಸೋಮನ ತಿಳಿಯಬಾರದು

೧೨೧
ಆಚಾರವೆಂಬ ಬಿಲ್ಲಿಗೆ ವಿಚಾರವೆಂಬ ನಾರಿ
ಸಮತೆಯೆಂಬ ತಿರುವ ಮೆಟ್ಟಿ ಜೇವೊಡೆಗೆಯ್ದು
ಶಿಷ್ಯನೆಂಬ ಬಾಣವ ತೊಡಚಿ
ಗುರುವೆಂಬ ವ್ಯಾಧನು ಲಿಂಗವೆಂಬ ಬಯಲ ಗುರಿಯನೆಚ್ಚಡೆ
ಗರಿದೋರದಂತೆ ಮುಳುಗಿಯಡಗಿತ್ತು
ಆ ಗುರಿಯನು ಬಾಣವನು ಅರಸಲುಂಟೆ
ಕೂಡಲಚೆನ್ನಸಂಗಾ ನಿಮ್ಮಲ್ಲಿ

೧೨೨
ಆಡಬಾರದ ಬಯಲು
ಸೂಡಬಾರದ ಬಯಲು
ನುಡಿಯಬಾರದ ಬಯಲು
ಹಿಡಿಯಬಾರದ ಬಯಲು
ಈ ಒಡಲಿಲ್ಲದ ಬಯಲೊಳಗೆ ಅಡಗಿರ್ದ ಭೇದವ
ಈ ಲೋಕದ ಜಡರೆತ್ತ ಬಲ್ಲರೈ ರಾಮನಾಥ

೧೨೩
ಆಡಲಿಲ್ಲವಯ್ಯಾ ನಾನು ಹೆಣ್ಣುರೂಪ ಧರಿಸಿ
ನುಡಿಯಲಿಲ್ಲವಯ್ಯಾ ನಾನು ಹೆಣ್ಣುರೂಪ ಧರಿಸಿ
ನಾನು ಹೆಣ್ಣಲ್ಲದ ಕಾರಣ ನಾನು ಇಹಪರ ನಾಸ್ತಿಯಾದವಳಯ್ಯಾ
ನಾನು ಉಭಯದ ಸಂಗವ ಕಂಡು ಕಾಣದಂತಿದ್ದೆನಯ್ಯಾ
ಸಂಗಯ್ಯಾ ಬಸವ ಬಯಲ ಕಂಡ ಕಾರಣ

೧೨೪
ಆಡಿ ಕಾಲು ದಣಿಯವು
ನೋಡಿ ಕಣ್ಣು ದಣಿಯವು
ಹಾಡು ನಾಲಿಗೆ ದಣಿಯದು
ಇನ್ನೇವೆನಿನ್ನೇವೆ
ನಾ ನಿಮ್ಮ ಕೈಯಾರೆ ಪೂಜಿಸಿ
ಮನದಣಿಯಲೊಲ್ಲದಿನ್ನೇವೆನಿನ್ನೇವೆ
ಕೂಡಲಸಂಗಮದೇವಾ ಕೇಳಯ್ಯಾ
ನಿಮ್ಮ ಉದರವ ಬಗಿದಾನು ಹೋಗುವ ಭರವೆನಗೆ

೧೨೫
ಆಡುತ್ತ ಹಾಡುತ್ತ ಭಕ್ತಿಯ ಮಾಡಬಹುದು ಲಿಂಗಕ್ಕೆ
ಅದು ಬೇಡದು ಬೆಸಗೊಳ್ಳದು
ತಂದೊಮ್ಮೆ ನೀಡಬಹುದು ಲಿಂಗಕ್ಕೆ
ಕಾಡುವ ಬೇಡುವ ಜಂಗಮ ಬಂದಡೆ
ನೀಡಲುಬಾರದು ಕೂಡಲಸಂಗಮದೇವಾ