೧೦೨೬
ಹಾವಿನ ಹೆಡೆಗಳ ಕೊಂಡು ಕೆನ್ನೆಯ ತುರಿಸುವಂತೆ
ಉರಿಯ ಕೊಳ್ಳಿಯ ಕೊಂಡು ಮಂಡೆಯ ಸಿಕ್ಕ ಬಿಡಿಸುವಂತೆ
ಹುಲಿಯ ಮೀಸೆಯ ಹಿಡಿದುಕೊಂಡು ಒಲಿದುಯ್ಯಲನಾಡುವಂತೆ
ಕೂಡಲಸಂಗನ ಶರಣರೊಡನೆ ಮರೆದು ಸರಸವಾಡಿದಡೆ
ಸುಣ್ಣಕಲ್ಲ ಮಡಿಲಲ್ಲಿ ಕಟ್ಟಿಕೊಂಡು ಮಡುವ ಬಿದ್ದಂತೆ

೧೦೨೭
ಹಾವು ತಿಂದವರ ನುಡಿಸಬಹುದು
ಗರ ಹೊಡೆದವರ ನುಡಿಸಬಹುದು
ಸಿರಿಗರ ಹೊಡೆದವರ ನುಡಿಸಲು ಬಾರದು
ನೋಡಯ್ಯಾ ಬಡತನವೆಂಬ ಮಂತ್ರವಾದಿ ಹೊಗಲು
ಒಡನೆ ನುಡಿವರಯ್ಯಾ ಕೂಡಲಸಂಗಮದೇವಾ

೧೦೨೮
ಹಿಂಡನಗಲಿ ಹಿಡಿವಡೆದ ಕುಂಜರ
ತನ್ನ ವಿಂಧ್ಯವ ನೆನೆವಂತೆ ನೆನೆವೆನಯ್ಯಾ
ಬಂಧನಕ್ಕೆ ಬಂದ ಗಿಳಿ
ತನ್ನ ಬಂಧುವ ನೆನೆವಂತೆ ನೆನೆವೆನಯ್ಯಾ
ಕಂದಾ ನೀನಿತ್ತ ಬಾ ಎಂದು
ನೀವು ನಿಮ್ಮಂದವ ತೋರಯ್ಯಾ
ಚೆನ್ನಮಲ್ಲಿಕಾರ್ಜುನಾ

೧೦೨೯
ಹಿಂದಣ ಅನಂತವನು ಮುಂದಣ ಅನಂತವನು
ಒಂದು ದಿನ ಒಳಕೊಂಡಿತ್ತು
ನೋಡಾ
ಒಂದು ದಿನವನೊಳಕೊಂಡು ಮಾತನಾಡುವ ಮಹಂತನ ಕಂಡು
ಬಲ್ಲವರಾರಯ್ಯ
ಆದ್ಯರು ವೇದ್ಯರು ಅನಂತ ಹಿರಿಯರು
ಲಿಂಗದಂತುವನರಿಯದೆ ಅಂತೆ ಹೋದರು
ಕಾಣಾ
ಗುಹೇಶ್ವರ

೧೦೩೦
ಹಿಂದಣ ಕಥೆಯ ಮುಂದೆ ಪೇಳುವ ಕಾವ್ಯವಲ್ಲ
ಮುಂದಣ ಕಥೆಯನಿಂದು ಹೇಳುವ ನಾಟಕವಲ್ಲ
ಬಂದ ಶಬ್ದವ ಸಂದಿಲ್ಲದುಸುರುವೆನೆಂಬ ಅಭ್ಯಾಸಿಯಲ್ಲ
ಛಂದ ವಿಚ್ಛಂದಯೆಂಬ ಸಂದೇಹಿಯಲ್ಲ
ಸೌರಾಷ್ಟ್ರ ಸೋಮೇಶ್ವರಾ
ನಿಮ್ಮ ಶರಣರ ಸ್ವಯಾನುಭಾವದ ಪರಿ ಬೇರೆ

೧೦೩೧
ಹಿಂದಣ ಕವಿಗಳೆನ್ನ ತೊತ್ತಿನ ಮಕ್ಕಳು
ಮುಂದಣ ಕವಿಗಳೆನ್ನ ಕರುಣದ ಕಂದಗಳು
ಆಕಾಸದ ಕವಿಗಳೆನ್ನ ತೊಟ್ಟಿಲ ಕೂಸು
ಹರಿಬ್ರಹ್ಮರೆನ್ನ ಕಕ್ಷಕುಳ
ನೀ ಮಾವ ನಾನಳಿಯ ಗುಹೇಶ್ವರ

೧೦೩೨
ಹಿಂದಣ ಸುಖ ಮುಂದಣ ದುಃಖಂಗಳು
ಮುಂದಣ ಸುಖ ಹಿಂದಣ ದುಃಖಂಗಳು
ಇವ ತಾ ಸಂಧಿಸಿ ಅನುಭವಿಸಿದಲ್ಲಿ
ಸಂಚಿತ ಪ್ರಾರಬ್ಧ ಆಗಾಮಿಗಳೆಂದು
ಅಲ್ಲಿಯಲ್ಲಿ ಸಂಕಲ್ಪಿಸಿ ಕೇಳಲೇತಕ್ಕೆ
ಹಿಂದೆ ಅಳಿದವರ ಕೇಳಿ ಮುಂದೆ ಸಾವವರ ಕಂಡು
ಅಂದಂದಿಗೆ ನೂರು ತುಂಬಿತ್ತೆಂದು
ಸಂದೇಹ ನಿವೃತ್ತಿಯಾಗಿರಬೇಕು
ಸಂಗನಬಸವಣ್ಣ ಸಾಕ್ಷಿಯಾಗಿ
ಬ್ರಹ್ಮೇಶ್ವರಲಿಂಗವನರಿವುದಕ್ಕೆ

೧೦೩೩
ಹಿಂದಾದ ದುಃಖವನೂ
ಇಂದಾದ ಸುಖವನೂ ಮರೆದೆಯಲ್ಲಾ
ಯಜಮಾನ
ನೀನು ಮರೆದ ಕಾರಣ ಬಂಧನ ಪ್ರಾಪ್ತಿಯಾಯಿತ್ತಲ್ಲಾ
ಹೇಮ ಭೂಮಿ ಕಾಮಿನಿ ಎಂಬ ಸಂಕಲೆಯಲ್ಲಿ ಬಂಧಿಸಿದರಲ್ಲಾ
ಅರಿಷಡ್ವರ್ಗವೆಂಬ ಬಂಧನದಲ್ಲಿ ದಂಡಿಸಿದರಲ್ಲಾ
ಲಿಂಗವ ಮರೆದಡೆ ಇದೇ ವಿಧಿಯಲ್ಲಾ
ಮರೆದಡೆ ಬಂಧನ ಅರಿದಡೆ ಮೋಕ್ಷ
ಅರಿದ ಯಜಮಾನ ಇನ್ನು ಮರೆಯದಿರು
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರನ ಪರಿಯನು

೧೦೩೪
ಹಿಂದೆ ಎಷ್ಟು ಪ್ರಳಯ ಹೋಯಿತ್ತೆಂದರಿಯೆ
ಮುಂದೆ ಎಷ್ಟು ಪ್ರಳವಾಗುವುದೆಂದರಿಯೆ
ತನ್ನ ಸ್ಥಿತಿಯ ತಾನರಿದಡೆ ಅದೇ ಪ್ರಳಯವಲ್ಲಾ
ತನ್ನ ವಚನ ತನಗೆ ಹಗೆಯಾದಡೆ ಅದೇ ಪ್ರಳಯವಲ್ಲಾ
ಇಂಥ ಪ್ರಳಯ ನಿನ್ನಲ್ಲುಂಟೆ ಗುಹೇಶ್ವರ

೧೦೩೫
ಹಿಂದೆ ಬಯಸಿದೆ ಕಾಳುತನದಲ್ಲಿ
ಎನ್ನ ಮಂದಮತಿಯ ನೋಡದಿರಯ್ಯ
ಕೆರೆ ಬಾವಿ ಹೂದೋಟ ಚೌಕ ಛತ್ರಂಗಳ ಮಾಡಿ
ಜೀವಂಗಳ ಮೇಲೆ ಕೃಪೆಯುಂಟೆಂದು ಎನ್ನ ದಾನಿಯೆಂಬರು
ಆನು ದಾನಿಯಲ್ಲವಯ್ಯಾ ನೀ ಹೇಳಿದಂತೆ ನಾ ಮಾಡಿದೆನು
ನೀ ಬರಹೇಳಿದಲ್ಲಿ ಬಂದೆನು ನೀ ಇರಿಸಿದಂತೆ ಇದ್ದೆನು
ನಿನ್ನ ಇಚ್ಛಾಮಾತ್ರವ ಮೀರಿದೆನಾಯಿತ್ತಾದಡೆ
ಫಲಪದ ಜನನವ ಬಯಸಿದೆನಾದಡೆ ನಿಮ್ಮಾಣೆ
ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ
ಭವಕ್ಕೆ ಬರಿಸದಿರಯ್ಯಾ ನಿಮ್ಮ ಧರ್ಮ

೧೦೩೬
ಹಿಡಿವ ಕೈಯ ಮೇಲೆ ಕತ್ತಲೆಯಯ್ಯ
ನೋಡುವ ಕಂಗಳ ಮೇಲೆ ಕತ್ತಲೆಯಯ್ಯ
ನೆನೆವ ಮನದ ಮೇಲೆ ಕತ್ತಲೆಯಯ್ಯ
ಕತ್ತಲೆಯೆಂಬುದು ಇತ್ತಲೆಯಯ್ಯ
ಗುಹೇಶ್ವರನೆಂಬುದು ಅತ್ತಲೆಯಯ್ಯ

೧೦೩೭
ಹುಟ್ಟಿತ್ತಲ್ಲಾ ಉಂಟೆನಿಸಿತ್ತಲ್ಲಾ
ಕರುವಿಟ್ಟಿತ್ತಲ್ಲಾ
ರೂಪಾಯಿತ್ತಲ್ಲಾ
ನೋಡ ನೋಡ ವಾಯುಗುಂದಿತ್ತಲ್ಲಾ
ನೋಡ ನೋಡ ಭಾವಗುಂದಿತ್ತಲ್ಲಾ
ಅರಿವು ವಿಕಾರದಲ್ಲಿ ಆಯಿತ್ತು ಹೋಯಿತ್ತು
ಮಹಾಲಿಂಗ ತ್ರಿಪುರಾಂತಕಾ
ನಿಮಗೆರಗದ ತನು

೧೦೩೮
ಹುಟ್ಟುವರೆಲ್ಲರ ಹುಟ್ಟಬೇಡೆಂದೆನೆ
ಹೊಂದುವರೆಲ್ಲರ ಹೊಂದಬೇಡೆಂದನೆ
ಪ್ರಳಯದಲ್ಲಿ ಅಳಿವವರ ಅಳಿಯಬೇಡೆಂದೆನೆ
ಗುಹೇಶ್ವರ ನಿಮ್ಮನರಿಯ ನೆರೆದ ಬಳಿಕ
ಧರೆಯ ಮೇಲುಳ್ಳವರನಿರಬೇಡೆಂದೆನೆ

೧೦೩೯
ಹುಟ್ಟುವಾತ ಮದ್ದಳೆಯ ಕಟ್ಟಿದ
ನಡೆವಾತ ತಾಳವನೊತ್ತಿದ
ಬಿಡುವಾತ ಶ್ರುತಿಯನೆತ್ತಿದ
ತತ್ಥಾತಿತ್ಥಿ ಎಂಬಾಟ ಇತ್ತಲೇ ಉಳಿಯಿತ್ತು
ರೇಕಣ್ಣಪ್ರಿಯ ನಾಗಿನಾಥಾ

೧೦೪೦
ಹುತ್ತಕ್ಕೆ ಏಸು ಬಾಯಾದಡೇನು
ಸರ್ಪನಿಪ್ಪುದು ಒಂದೇ ಸ್ಥಾನ
ಭಾವ ಭಾವಿಸಿ ಭ್ರಮೆಯಳಿದು
ನೋಡಾ
ಆ ಭಾವ ಭಾವಿಸಲು ನಿರ್ಭಾವ
ಕೂಡಲಸಂಗಮದೇವಾ

೧೦೪೧
ಹುತ್ತವ ಬಡಿದಡೆ ಹಾವು ಸಾಯಬಲ್ಲುದೆ
ಅಯ್ಯಾ
ಅಘೋರ ತಪವ ಮಾಡಿದಡೇನು
ಅಂತರಂಗ ಆತ್ಮಶುದ್ಧಿಯಿಲ್ಲದವರನೆಂತು ನಂಬುವನಯ್ಯಾ
ಕೂಡಲಸಂಗಮದೇವ

೧೦೪೨
ಹುಲಿ ಹುತ್ತ ಕಳ್ಳರ ಹಾದಿ ಬಲುಗೈಯರ ತೆಕ್ಕೆ
ಇದು ಬಲವಂತತನದಿಂದ ಆಗದು
ಅವರವರ ಒಲವರದಿಂದಲ್ಲದೆ
ಗೆಲುವ ಮನ ಸೋಲುವ ಕಾಯ
ಈ ಉಭಯದ ಒಲವರದಿರವು
ಶರೀರದ ಸುಂಕ ಬಂಕೇಶ್ವರಲಿಂಗಕ್ಕೆ

೧೦೪೩
ಹುಲ್ಲ ಮನುಷ್ಯನ ಕಂಡು ಹುಲ್ಲೆ ತಾ ಬೆದರುವಂತೆ
ಇಲ್ಲದ ಶಂಕೆಯನುಂಟೆಂಬನ್ನಕ್ಕ
ಅದಲ್ಲಿಯೇ ರೂಪಾಯಿತ್ತು
ಹೇಡಿಗಳನೇಡಿಸಿ ಕಾಡಿತ್ತು
ಸಿಮ್ಮಲಿಗೆಯ ಚೆನ್ನರಾಮನೆಂಬ ಭಾವದ ಗಸಣಿ

೧೦೪೪
ಹುವ್ವಿನ ಮೇರಳ ತುಂಬಿ
ಹುವ್ವ ತಿಂದು ಗಂಧವನುಳುಹಿತ್ತು
ಉಳುಹಿದ ಗಂಧ ತುಂಬಿಯ ತಿಂದು
ತುಂಬಿ ಗಂಧವೊಂದೆಯಾಯಿತ್ತು
ಅದು ನಿರಂಗದಿರವು ಸದಾಶಿವಮೂರ್ತಿಲಿಂಗವು ತಾನೆ

೧೦೪೫
ಹುಸಿಯೆಂಬ ಅಲಗಿಂಗೆ ಒಡಲೆ ಗುರಿಯಾಯಿತ್ತು
ಏನೆಂಬೆನೇನೆಂಬ ವಿಧಿ ಮಾಡಿತ್ತ
ಸಮೆದ ಮಾಡಿಗಳು ನೆಲೆಗೊಳ್ಳದೆ ಹೋದವು
ಮಹಾಲಿಂಗ ತ್ರಿಪುರಾಂತಕನ ಶರಣರೆ
ಎನ್ನೊಡೆಯರೆಂದರಿಯದೆ ಇದ್ದ ಕಾರಣ
ತೆರಹು ಮರಹಿನಲ್ಲಿ ತಾವೆಡೆಗೊಂಡವು

೧೦೪೬
ಹೂವ ಕೊಯ್ಯುವರಲ್ಲದೆ
ಹೂವಿನ ಗಂಧವ ಕೊಯ್ದವರುಂಟೆ ಅಯ್ಯಾ
ಮಾತನಾಡುವರಲ್ಲದೆ
ಮಾತಿನ ಭೇದದ ವಾಸನೆಯ ಕಂಡವರುಂಟೆ ಅಯ್ಯಾ
ಇದು ನೀತಿಯ ಒದಗು
ಕ್ರೀಯ ನಿಹಿತವಾಗಿ ಮಾಡುವಲ್ಲಿ ಭಾವಶುದ್ಧವಾಗಿರಬೇಕು
ಮಾತನರಿದಾಡುವಲ್ಲಿ ಮಾತಿನ ರೀತಿಗೆ ತಾ ಒದಗು
ನಿಹಿತವಾಗಿರಬೇಕು
ಅದು ಕೂಟಸ್ಥ
ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಾ

೧೦೪೭
ಹೆಣ್ಣಳಿದ ಬಳಿಕ ಮಣ್ಣಿನ ಹಂಗೇಕಯ್ಯಾ
ಮಣ್ಣಳಿದ ಬಳಿಕ ಹೊನ್ನಿನ ಹಂಗೇಕಯ್ಯಾ
ಮುಕ್ಕಣ್ಣನಾದ ಬಳಿಕ ಮೂರರ ಹಂಗೇಕಯ್ಯಾ
ಕಪಿಲಸಿದ್ಧಮಲ್ಲಿಕಾರ್ಜುನ

೧೦೪೮
ಹೆಣ್ಣು ಹೆಣ್ಣಾದಡೆ ಗಂಡಿನಸೂತಕ
ಗಂಡು ಗಂಡಾದಡೆ ಹೆಣ್ಣಿನಸೂತಕ
ಮನದಸೂತಕ ಹಿಂಗಿದಡೆ
ತನುವಿನ ಸೂತಕಕ್ಕೆ ತೆರಹುಂಟೆ
ಅಯ್ಯಾ
ಮೊದಲಿಲ್ಲದ ಸೂತಕಕ್ಕೆ ಮರುಳಾಯಿತ್ತು ಜಗವೆಲ್ಲ
ಎನ್ನ ದೇವ ಚೆನ್ನಮಲ್ಲಿಕಾರ್ಜುನನೆಂಬ ಗರುವಂಗೆ
ಜಗವೆಲ್ಲ ಹೆಣ್ಣು ನೋಡಾ ಅಯ್ಯಾ

೧೦೪೯
ಹೆಸರಿಲ್ಲದ ಜವನಿಕೆಯ ಮರೆಯಲ್ಲಿ ಬಂದು
ಅಸುವಿನ ಬಹುರೂಪಮಂ ತೊಟ್ಟು
ಪಶುಪತಿಯ ಅವತಾರವನಾಡುತ್ತಿರಲಾಗಿ
ಹಸುಬೆಯ ತೆರೆಯ ಹರಿದು
ಆ ಅಸು ದೆಸೆಯಲ್ಲಿ ಇಲ್ಲಾ ಎಂದೆ
ರೇಕಣ್ಣಪ್ರಿಯ ನಾಗಿನಾಥನಲ್ಲಿ ಪುರೆಹರೆ ಎನುತಿರ್ದೆನು

೧೦೫೦
ಹೊಟ್ಟೆಯ ಮೇಲೆ ಕಟ್ಟೋಗರದ ಮೊಟ್ಟೆಯ ಕಟ್ಟಿದರೇನು
ಹಸಿವು ಹೋಹುದೇ
ಅಂಗದ ಮೇಲೆ ಲಿಂಗಸ್ವಾಯತವಾದರೇನು
ಭಕ್ತನಾಗಬಲ್ಲನೆ
ಇಟ್ಟ ಕಲ್ಲು ಮೆಳೆಯ ಮೇಲೆ ಸಿಕ್ಕಿದಡೆ
ಆ ಕಲ್ಲು ಲಿಂಗವೆ ಆ ಮೆಳೆ ಭಕ್ತನೆ
ಇಟ್ಟಾತ ಗುರುವೆ
ಇಂತಪ್ಪವರ ಕಂಡಡೆ
ನಾಚುವೆನಯ್ಯಾ ಗುಹೇಶ್ವರ