೧೦೫೧
ಹೊತ್ತಾರೆ ಎದ್ದು ಅಗ್ಘವಣಿ ಪತ್ರೆಯ ತಂದು
ಹೊತ್ತು ಹೋಗದ ಮುನ್ನ ಪೂಜಿಸು ಲಿಂಗವ
ಹೊತ್ತ ಹೋದ ಬಳಿಕ ನಿನ್ನನಾರು ಬಲ್ಲರು
ಹೊತ್ತು ಹೋಗದ ಮುನ್ನ ಮೃತ್ಯುವೊಯ್ಯದ ಮುನ್ನ
ತೊತ್ತುಗೆಲಸವ ಮಾಡು ಕೂಡಲಸಂಗಮದೇವನ

೧೦೫೨
ಹೊತ್ತಿಂಗೊಂದು ಪರಿಯಹ ಮನವ ಕಂಡು
ದಿನಕ್ಕೊಂದು ಪರಿಯಹ ತನುವ ಕಂಡು
ಅಂದಂದಿಗೆ ಭಯದೋರುತ್ತಿದೆ
ಒಂದು ನಿಮಿಷಕ್ಕನಂತವನೆ ನೆನೆವ ಮನವ ಕಂಡು
ಅಂದಂದಿಂಗೆ ಭಯವಾಗುತ್ತಿದೆ
ಈ ಮನ ನಿಮ್ಮ ನೆನೆಯಲೀಯದು
ಮನ ಹಗೆಯಾದುದಯ್ಯಾ
ಸದ್ಗುರುವೆ ಪುರದ ಮಲ್ಲಯ್ಯಾ

೧೦೫೩
ಹೊನ್ನ ತೂತಿದ ತ್ರಾಸು ಕಟ್ಟಳೆ ಹೊನ್ನಿಂಗೆ ಸರಿಯಪ್ಪುದೆ
ಸನ್ನಹಿತರಾದೆವೆಂಬ ನುಡಿಗೆ ನಾಚರು ನೋಡಾ
ಕನ್ನದಲ್ಲಿ ಸವೆದ ಕಬ್ಬುನದಂತೆ
ಮುನ್ನ ಹೋದ ಹಿರಿಯರು
ಲಿಂಗದ ಸುದ್ದಿಯನರಿಯರು
ಇನ್ನಾರು ಬಲ್ಲರು ಹೇಳಾ ಗುಹೇಶ್ವರ

೧೦೫೪
ಹೊನ್ನ ಬಿಟ್ಟು ಲಿಂಗವನೊಲಿಸಬೇಕೆಂಬರು
ಹೊನ್ನಿಂಗೆಯೂ ಲಿಂಗಕ್ಕೆಯೂ ವಿರುದ್ಧವೆ
ಹೆಣ್ಣ ಬಿಟ್ಟು ಲಿಂಗವನೊಲಿಸಬೇಕೆಂಬರು
ಹೆಣ್ಣೆಂಗೆಯೂ ಲಿಂಗಕ್ಕೆಯೂ ವಿರುದ್ಧವೆ
ಮಣ್ಣ ಬಿಟ್ಟು ಲಿಂಗವನೊಲಿಸಬೇಕೆಂಬರು
ಮಣ್ಣಿಂಗೆಯೂ ಲಿಂಗಕ್ಕೆಯೂ ವಿರುದ್ಧವೆ
ಅಂಗವ ಬಿಟ್ಟು ಲಿಂಗವನೊಲಿಸಬೇಕೆಂಬರು
ಅಂಗಕ್ಕೆಯೂ ಲಿಂಗಕ್ಕೆಯೂ ವಿರುದ್ಧವೆ
ಇಂದ್ರಿಯಂಗಳ ಬಿಟ್ಟು ಲಿಂಗವನೊಲಿಸಬೇಕೆಂಬರು
ಇಂದ್ರಿಯಂಗಳಿಗೆಯೂ ಲಿಂಗಕ್ಕೆಯೂ ವಿರುದ್ಧವೆ
ಜಗವ ಬಿಟ್ಟು ಲಿಂಗವನೊಲಿಸಬೇಕೆಂಬರು
ಜಗಕ್ಕೆಯೂ ಲಿಂಗಕ್ಕೆಯೂ ವಿರುದ್ಧವೆ
ಇದು ಕಾರಣ
ಪರಂಜ್ಯೋತಿ ಪರಮಕರುಣಿ ಪರಮಶಾಂತನೆಂಬ ಲಿಂಗವು
ಕೋಪದ ಮುನಿಸನರಿದಡೆ ಕಾಣಬಹುದು ಮರೆದಡೆ
ಕಾಣಬಾರದು
ಅರಿವಿಂದ ಕಂಡೊದಗಿದ ಸುಖವು ಮಸಣಯ್ಯಪ್ರಿಯ ಗಜೇಶ್ವರಾ

೧೦೫೫
ಹೊನ್ನ ಬಿಟ್ಟು ಹೆಣ್ಣ ಬಿಟ್ಟು ಮಣ್ಣ ಬಿಟ್ಟು ಬ್ರಹ್ಮಚಾರಿಗಳಾಗಬೇಕೆಂದು
ಬಣ್ಣವಿಟ್ಟು ನುಡಿವ ಅಣ್ಣಗಳ ಪರಿಯ ನೋಡಿರೋ
ಹೆಣ್ಣು ಬಿಟ್ಟಡೆಯೂ ಹೊನ್ನ ಬಿಡರಿ
ಹೊನ್ನ ಬಿಟ್ಟಡೆಯೂ ಮಣ್ಣ ಬಿಡರಿ
ಒಂದ ಬಿಟ್ಟಡೆಯೂ ಒಂದ ಬಿಡರಿ
ಬ್ರಹ್ಮಚಾರಿಗಳೆಂತಪ್ಪಿ ಹೇಳಿರಣ್ಣಾ
ಹೆಣ್ಣ ಬಿಟ್ಟು ಬ್ರಹ್ಮಚಾರಿಗಳಾಗಬೇಕೆಂದು
ಅವರೆಂದು ಹೇಳಿದರು
ನೀವೆಂತು ಕೇಳಿದಿರಿ
ಹೆಣ್ಣನು ಹೆಣ್ಣೆಂದರಿವಿರಿ
ಹೊನ್ನನು ಹೊನ್ನೆಂದರಿವಿರಿ
ಮಣ್ಣನು ಮಣ್ಣೆಂದರಿವಿರಿ
ಬ್ರಹ್ಮಚಾರಿಗಳೆಂತಪ್ಪಿರಣ್ಣಾ
ಬಿಟ್ಟಡೆ ಹೆಣ್ಣು ಹೊನ್ನು ಮಣ್ಣು ಈ ಮೂರನು ಬಿಟ್ಟು
ಜ್ಞಾನದಲ್ಲಿ ಸುಳಿಯಲ್ಲಡೆ ಭವಂ ನಾಸ್ತಿ ತಪ್ಪದು
ಹಿಡಿದಡೆ ಹೆಣ್ಣು ಮಣ್ಣು ಹೊನ್ನು ಈ ಮೂರನು ಹಿಡಿದು
ಸದ್ಭಕ್ತಿಯಿಂದ ದಾಸೋಹನ ಮಾಡಬಲ್ಲಡೆ
ಭವಂ ನಾಸ್ತಿ ತಪ್ಪದು
ಅದೆಂತೆಂದಡೆ: ವೀರಾಗಮೇ
ಮಾತರಃ ಪಿತರಶ್ಚೈವ ಸ್ವಪತ್ನೀ ಬಾಲಕಾಸ್ತಥಾ
ಹೇಮ ಭೂಮಿರ್ನಬಂಧಾಕಾಃ ಪ್ರಾಜ್ಞಾನಂ ಬ್ರಹ್ಮಚಾರಿಣಾಂ
ಎಂದುದಾಗಿ
ಹೆಣ್ಣು ಹೊನ್ನು ಮಣ್ಣು ಈ ಮೂರನು ಹಿಡಿದು
ಸದ್ಭಕ್ತಿಯಿಂ ದಾಸೋಹವ ಮಾಡಬಲ್ಲಡೆ ಭವಂ ನಾಸ್ತಿ
ಅಲ್ಲಿ ಇದ್ದಡೆಯೂ ನೀರ ತಾವರೆಯಂತಿಪ್ಪರು
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ ನಿಮ್ಮ ಶರಣರು

೧೦೫೬
ಹೊನ್ನಿನೊಳಗೊಂದೊರೆಯ
ಸೀರೆಯೊಳಗೊಂದೆಳೆಯ
ಅನ್ನದೊಳಗೊಂದಗುಳ
ಇಂದಿಂಗೆ ನಾಳಿಂಗೆ ಬೇಕೆಂದೆನಾದಡೆ
ನಿಮ್ಮಾಣೆ ನಿಮ್ಮ ಪುರಾತನರಾಣೆ
ನಿಮ್ಮ ಶರಣರಿಗಲ್ಲದೆ ಮತ್ತೊಂದನರಿಯೇ
ಕೂಡಲಸಂಗಮದೇವಾ

೧೦೫೭
ಹೊನ್ನು ಭಕ್ತನೆಂಬೆನೆ
ಹೊನ್ನಿನೊಳಗಣ ಮುದ್ರೆ ಭವಿ
ಹೆಣ್ಣು ಭಕ್ತನೆಂಬೆನೆ
ಹೆಣ್ಣಿನೊಳಗಣ ವಿರಹ ಭವಿ
ಮಣ್ಣು ಭಕ್ತನೆಂಬೆನೆ
ಮಣ್ಣಿನೊಳಗಣ ಬೆಳೆಸು ಭವಿ
ಈ ತ್ರಿವಿಧ ಭವಿಯ ಕಳೆದು ಪ್ರಸಾದವ ಮಾಡಿಕೊಳ್ಳಬಲ್ಲಡೆ
ಕೂಡಲಚೆನ್ನಸಂಗನಲ್ಲಿ ಅಚ್ಚಶೀಲವಂತನೆಂಬೆ

೧೦೫೮
ಹೊನ್ನು ಮಾಯೆಯೆಂಬರು
ಹೊನ್ನು ಮಾಯೆಯಲ್ಲ
ಹೆಣ್ಣು ಮಾಯೆಯೆಂಬರು
ಹೆಣ್ಣು ಮಾಯೆಯಲ್ಲ
ಮಣ್ಣು ಮಾಯೆಯೆಂಬರು
ಮಣ್ಣು ಮಾಯೆಯಲ್ಲ
ಮನದ ಮುಂದಣ ಆಶೆಯೇ ಮಾಯೆ
ಕಾಣಾ ಗುಹೇಶ್ವರ

೧೦೫೯
ಹೊರಿದ ಹರೆಗೆ ಕುಣಿದಾಡುವರೆಲ್ಲಾ
ಹಾಡಿದ ಗೀತಕ್ಕೆ ತಲೆದೂಗುವರೆಲ್ಲಾ
ಪಂಜರದೊಳಗಣ ಅರಗಿಳಿಯಂತೆ
ಅದು ಆಡುವದು ಹಾಡುವದು
ಸಕಳೇಶ್ವರದೇವರಲ್ಲಿ
ಅಭ್ಯಾಸಕ್ಕೆ ಮಜ್ಜನಕ್ಕೆ ಎರೆವರೆಲ್ಲಾ ಭಕ್ತರೆ

೧೦೬೦
ಹೊರಗಣ ಭವಿಯ ಕಳೆದೆವೆಂಬರು
ಒಳಗಣ ಭವಿಯ ಕಳೆಯಲರಿಯರು
ಕಾಮವೆಂಬುದೊಂದು ಭವಿ
ಕ್ರೋಧವೆಂಬುದೊಂದು ಭವಿ
ಲೋಭವೆಂಬುದೊಂದು ಭವಿ
ಮೋಹವೆಂಬುದೊಂದು ಭವಿ
ಮದವೆಂಬುದೊಂದು ಭವಿ
ಮಚ್ಚರವೆಂಬುದೊಂದು ಭವಿ
ಆಸೆಯೆಂಬುದೊಂದು ಭವಿ
ಆಮಿಷವೆಂಬುದೊಂದು ಭವಿ
ಹೊನ್ನೆಂಬುದೊಂದು ಭವಿ
ಹೆಣ್ಣೆಂಬುದೊಂದು ಭವಿ
ಮಣ್ಣೆಂಬುದೊಂದು ಭವಿ
ಇಂತೀ ಭವಿಯ ಕಳೆದುಳಿದು ನಿಂದ
ಕೂಡಲಚೆನ್ನಸಂಗಾ ನಿಮ್ಮ ಶರಣ

೧೦೬೧
ಹೊರಗಿದ್ದಹನೆಂದು ನಾನು ಮರೆದು ಮಾತನಾಡಿದೆ
ಅರಿಯಲೀಯದೆ ಬಂದೆನ್ನ ಅಂತರಂಗದಲ್ಲಿಪ್ಪನು
ತೆರಹಿಲ್ಲದಭವ ನುಡಿಗೆಡೆಹೊಡನು
ಆತನ ಬಯಲಿಂಗೆ ಬೇಟಗೊಂಡೆನವ್ವಾ
ನಾನೇನ ಮಾಡುವೆನೆಲೆ ತಾಯೆ
ಮರೆದಡೆ ಎಚ್ಚರಿಸುವ ಕುರುಹಿಲ್ಲದ ಗಂಡನು
ತನ್ನನರಿದಡೆ ಒಳ್ಳಿದನವ್ವಾ ನಮ್ಮ ಶಂಭುಜಕ್ಕೇಶ್ವರನು

೧೦೬೨
ಹೊರಿಸಿಕೊಂಡು ಹೋದ ನಾಯಿ ಮೊಲನನೇನ ಹಿಡಿವುದಯ್ಯಾ
ಇರಿಯದ ವೀರ ಇಲ್ಲದ ಸೊಬಗುವ ಹೇಳುವುದೆ ನಾಚಿಕೆ
ಆನು ಭಕ್ತನೆಂತೆಂಬೆನಯ್ಯಾ ಕೂಡಲಸಂಗಮದೇವಾ

೧೦೬೩
ಹೊಲೆಯ ಮಾದಿಗ ಭಕ್ತನಾದಡೆ
ಆತನ ಮನೆಯ ಸೊಣಗಂಗೆ
ಪಂಚಮಹಾವಾದ್ಯದಲಿ ಸನ್ಮಾನವ ಮಾಡೆನೆ
ನೆಲನನುಗ್ಘಡಿಸಿ ಉಘೇ ಚಾಂಗು ಭಲಾ ಎಂದು
ಕುಲಕಧಿಕ ಹಾರುವಂಗೆ ಸಿದ್ಧಿಗಯ್ಯೆಸಲೆ
ನಿಮ್ಮ ಶರಣರ ಮಹಿಮೆ ಘನಕ್ಕೆ ಘನ
ಎಲೆ ಎಲೆ ಕೂಡಲಸಂಗಮದೇವಾ
ನಿಮ್ಮ ನಂಬದವ ಹೊಲೆಯ

೧೦೬೪
ಹೊಲೆಯ ಹೊಲೆಯನೆಂದು ಹೊರಗಿರು ಎಂದೆಂಬರು
ಹೊಲೆಯನೆಂತವನಯ್ಯಾ
ತನ್ನ ಹೊಲೆಯ ತಾನರಿಯದೆ
ಮುನ್ನಿನವರ ಹೊಲೆಯನರಸುವ
ಭ್ರಷ್ಟರಿಗೆ ಏನೆಂಬೆನಯ್ಯಾ
ಮಹಾದಾನಿ ಕೂಡಲ ಚೆನ್ನಸಂಗಮದೇವಾ

೧೦೬೫
ಹೊಲೆಯರ ಬಾವಿಯಲೊಂದು ಎಲುನಟ್ಟಿದ್ದಡೆ
ಹೊಲೆಯೆಂಬುದು ಲೋಕವೆಲ್ಲ
ಹಲವೆಲುವಿದ್ದ ಬಾಯಿ ಒಲವರವ ನುಡಿದಡೆ
ಹೊಲೆಯರ ಬಾವಿಯಿಂದ ಕರಕಷ್ಟ ಕಾಣಾ ರಾಮನಾಥ

೧೦೬೬
ಹೊಳೆವ ಕೆಂಜೆಡೆಗಳ
ಮಣಿಮಕುಟದ ಒಪ್ಪುವ ಸುಲಿಪಲ್ಗಳ
ನಗೆಮೊಗದ ಕಂಗಳ ಕಾಂತಿಯ
ಈರೇಳು ಭುವನವ ಬೆಳಗುವ ದಿವ್ಯಸ್ವರೂಪನ ಕಂಡೆ ನಾನು
ಕಂಡೆನ್ನ ಕಂಗಳ ಬರ ಹಿಂಗಿತ್ತೆನಗೆ
ಗಂಡಗಂಡರೆಲ್ಲರ ಹೆಂಡಿರಾಗಿ ಆಳುವ
ಗರುವನ ಕಂಡೆ ನಾನು
ಜಗದಾದಿ ಶಕ್ತಿಯೊಳು ಬೆರಸಿ ಮಾತನಾಡುವ
ಪರಮಗುರು ಚೆನ್ನಮಲ್ಲಿಕಾರ್ಜುನನ ನಿಲವ ಕಂಡು ಬದುಕಿದೆನು

೧೦೬೭
ಹೋತನ ಕೊಯ್ದು ಕುರಿಯ ಸುಲಿದು
ಮರಿಯ ಕೊರಳನೊತ್ತಿ ಕಾವಲ ಕುನ್ನಿಯ ಕೆಡಹಿ
ತೋಳನ ಕುಲವ ಗೆದ್ದು ಕುರುಬನ ಕುರುಹಿನ ಕುಲವಡಗಿ
ನೆರೆ ಅರಿವಿನ ಕುಲದಲ್ಲಿ ಅಡಗಬೇಕು
ವೀರಬೀರೇಶ್ವರಲಿಂಗವನರಿದ ಶರಣ

೧೦೬೮
ಹೋತು ಹುಸಿ
ಆಡು ಬಹುಮಾತಿನ ನೀತಿ
ಕುರಿ ಸಕಲೇಂದ್ರಿಯದ ನೆಲ ಹೊಲ
ತಗರು ತಥ್ಯಮಿಥ್ಯದ ಹೋರಟೆ
ಹುಲಿ ದ್ವೇಷದಾಗರ
ತೋಳ ಕೊಂದು ತಿಂಬ ಕಾಟ
ಚೋರ ಮೃತ್ಯು ಇಂತಿವು ಮೊದಲಾದ
ಬಹುವಿಧದ ಪ್ರಕೃತಿಗಳಲ್ಲಿ ಕಾಯದ ನೆಲಹೊಲನಲ್ಲಿ
ಸಕಲೇಂದ್ರಿಯವೆಂಬ ಹಿಂಡು ಮುಂದೆಯಾಗಿವೇಕೊ
ಇದರ ಸಂಗವ ಬಿಡಿಸು ನಿಮ್ಮ ನಿಜದಂಗವ ತೋರಿ
ಭವಪಾಶದಂಗವ ಹರಿದು ನಿಮ್ಮ ಘನಲಿಂಗದಲ್ಲಿರಿಸು
ನೆರೆ ವೀರಬೀರೇಶ್ವರಾ