೧೨೬
ಆಡುವಾತ ಗಣಿಮಿಣಿಯಲ್ಲಿ ಕುಣಿದಡೆ
ಕೆಳಗೆ ನೋಡುವಾತನಿಗೆ ಆಶ್ಚರ್ಯವಾದಂತೆ
ವಸ್ತುಕೂಟ ಆಟ
ಮರ್ತ್ಯರ ಬೇಟ
ನಿಶ್ಚಯವಾಗಿರಬೇಕು
ಐಘಟದೂರ ರಾಮೇಶ್ವರಲಿಂಗಕ್ಕೆ

೧೨೭
ಆತನ ನೋಡಿದಂದು
ದೇಸೆಗಳ ಮರೆದೆನಿನ್ನೆಂತವ್ವಾ
ಅವ್ವಾ ಅವ್ವಾ
ಆತನ ನುಡಿಸಿದಡೆ
ಮೈಯೆಲ್ಲಾ ಬೆವತುದಿನ್ನೆಂತವ್ವಾ
ಅವ್ವಾ ಅವ್ವಾ
ಆತನ ಕೈಯ ಹಿಡಿದಡೆ
ಎನ್ನ ನಿರಿಗಳು ಸಡಿಲಿದವಿನ್ನೆಂತವ್ವಾ
ಇಂದೆಮ್ಮ ಮಹಾಲಿಂಗ ಗಜೇಶ್ವರನನಪ್ಪಿದೆನೆಂದಡೆ
ನಾನಪ್ಪ ಮರೆದೆನಿನ್ನೆಂತವ್ವಾ

೧೨೮
ಆತನ ಬಿರುದೆನ್ನ ಉರದಲ್ಲಿ ಇದೆ ಕಂಡಯ್ಯಾ
ಏಕೆ ಬಂದರೋ ಎಲೆ ಅಣ್ಣಗಳಿರಾ
ನಿಮಗಪ್ಪುವುದಕ್ಕೆಡೆಯಿಲ್ಲ
ನಿಮಗಪ್ಪುವದಕಡ್ಡಬಂದಹನೆಮ್ಮ ನಲ್ಲ
ಏಕೆ ಬಂದಿರೋ ಉರಿಲಿಂಗದೇವನನಪ್ಪಿ ಸೊಪ್ಪಾದ ಹಿಪ್ಪೆಗೆ

೧೨೯
ಆತನ ಬೆರಸಿದ ಕೂಟವನೇನೆಂದು ಹೇಳುವೆನವ್ವಾ
ಹೇಳಲೂಬಾರದು ಕೇಳಲೂಬಾರದು
ಏನ ಹೇಳುವೆನವ್ವಾ ಶಿಖಿ ಕರ್ಪೂರ ಬೆರಸಿದಂತೆ
ಮಹಾಲಿಂಗ ಗಜೇಶ್ವರನ ಕೂಡಿದ ಕೂಟವ
ಹೇಳಲು ಬಾರದವ್ವಾ

೧೩೦
ಆತನ ಸುಖದುಃಖವೀತಗೇನ
ಈತನ ಸುಖದುಃಖವೀತಗೇನ
ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ
ನಿಮ್ಮ ನಿಮ್ಮ ಅರವ ಸಂತೈಸಿಕೊಳ್ಳಿ
ರಂಭೆ ಎಂದಡೆ ನಿನ್ನಂಗನೆಯಾಗಲಿಲ್ಲವು
ಒಂದಿನ ಸ್ವಪ್ನದಲ್ಲಾದಡೂ ರತಿಸಲಿಲ್ಲ ನೋಡಾ
ಕಪಿಲಸಿದ್ಧಮಲ್ಲಿಕಾರ್ಜುನ

೧೩೧
ಆತ್ಮಂಗೆ ಕಾಯವೆ ರೂಪು
ಆ ಕಾಯಕ್ಕೆ ಆತ್ಮನೆ ಹಾಹೆ
ಆ ಹಾಹೆಗೆ ಆರಿವೇ ಬೀಜ
ಆ ಬೀಜಕ್ಕೆ ಗೋಪತಿನಾಥ ವಿಶ್ವೇಶ್ವರಲಿಂಗವೆ ನಿರ್ವೀಜ

೧೩೨
ಆದಿ ಆಧಾರ ತನುಗುಣ ಉಳ್ಳನ್ನಕ್ಕರ ಸಮತೆ ಎಂಬುದೇನೋ
ಕಾಲಕಲ್ಪಿತ ಉಪಾಧಿ ಉಳ್ಳನ್ನಕ್ಕರ ಶೀಲವೆಂಬುದು ಭಂಗ
ಕಾಮವೆಂಬುದರ ಬೆಂಬಳಿಯ ಕೂಸಿನ
ಹುಸಿಯ ತಾನೆಂದು ತಿಳಿಯದನ್ನಕ್ಕರ
ಗುಹೇಶ್ವರ ನಿಮ್ಮ ನಾಮಕ್ಕೆ ನಾಚದವರ ನಾನೇನೆಂಬೆನು

೧೩೩
ಆದಿ ಪುರಾಣ ಅಸುರರಿಗೆ ಮಾರಿ
ವೇದಪುರಾಣ ಹೋತಿಂಗೆ ಮಾರಿ
ರಾಮಪುರಾಣ ರಕ್ಕಸರಿಗೆ ಮಾರಿ
ಭಾರತಪುರಾಣ ಗೋತ್ರಕ್ಕೆ ಮಾರಿ
ಎಲ್ಲ ಪುರಾಣ ಕರ್ಮಕ್ಕೆ ಮೊದಲು
ನಿಮ್ಮ ಪುರಾಣಕ್ಕೆ ಪ್ರತಿಯಿಲ್ಲ
ಕೂಡಲಸಂಗಮದೇವಾ

೧೩೪
ಆದಿಯ ಶರಣನ ಮದುವೆಯ ಮಾಡಲು
ಯುಗಜುಗದವರೆಲ್ಲಾ ನಿಬ್ಬಣ ಹೋದರು
ಹೋದ ನಿಬ್ಬಣಿಗರು ಮರಳರು
ಮದವಣಿಗನ ಸುದ್ದಿಯನರಿಯಲು ಬಾರದು
ಹಂದರವಳಿಯದು ಹಸೆ ಮುನ್ನಲುಡುಗದು
ಬಂದು ಬಂದವರೆಲ್ಲ ಮಿಂದುಂಡು ಹೋದರು
ಇದರಂತುವನರಿಯದೆ ಜಗವೆಲ್ಲ ಬರಡಾಯಿತ್ತು
ಗುಹೇಶ್ವರನೆಂಬ ಶಬ್ದವನೊಳಕೊಂಡ ಮಹಂತ ಬಯಲು

೧೩೫
ಆದಿಯಾಧಾರವಿಲ್ಲದಂದು
ಹಮ್ಮುಬಿಮ್ಮುಗಳಿಲ್ಲದಂದು
ಸುರಾಳ ನಿರಾಳವಿಲ್ಲದಂದು
ಸಚರಾಚರವೆಲ್ಲ ರಚನೆಗೆ ಬಾರದಂದು
ಗುಹೇಶ್ವರ ನಿಮ್ಮ ಶರಣಗನುದಯಿಸಿದನಂದು

೧೩೬
ಆನರಿಯೆನಯ್ಯಾ ಪಶು ನಂಬುವಂತೆ ನಂಬುವೆ
ನೀನು ಕೊಂದಲ್ಲಿ ಸಾವೆ ಆನರಿಯೆನಯ್ಯಾ
ನೀನು ಕಾಯ್ದಲ್ಲಿ ಬದುಕುವೆ ಆನರಿಯೆನಯ್ಯಾ
ಪಶುನಂಬುವಂತೆ ನಂಬುವೆ ಶಿಶು ಬೇಡುವಂತೆ ಬೇಡುವೆ
ಅರಿವಿಲ್ಲದವನಲ್ಲಿ ಅರಿವ ನೀನರಸುವರೆ
ನೀನರಿಯೆಂದಡರಿವೆ ಎನ್ನ ಕಪಿಲಸಿದ್ಧವಲ್ಲಿನಾಥಯ್ಯನ

೧೩೭
ಅನು ನೀನೆಂಬುದು ತಾನಿಲ್ಲ
ತಾನರಿದ ಬಳಿಕ ಮತ್ತೇನೂ ಇಲ್ಲ ಇಲ್ಲ
ಇಲ್ಲದ ಇಲ್ಲವೆಯೆಲ್ಲಿಂದ ಬಪ್ಪುದೋ
ಅನುವನರಿದು ತನುವ ಮರೆದು
ಭಾವರಹಿತ ಗುಹೇಶ್ವರ

೧೩೮
ಆನೆ ಕುದುರೆ ಭಂಡಾರವಿರ್ದಡೇನೊ
ತಾನುಂಬುದು ಪಡಿಯಕ್ಕಿ ಒಂದಾವಿನ ಹಾಲು
ಮನಗುವುದರ್ಧ ಮಂಚ
ಈ ಹುರುಳಿಲ್ಲದ ಸಿರಿಯ ನೆಚ್ಚಿ ಕೆಡಬೇಡ ಮನುಜಾ
ಒಡಲು ಭೂಮಿಯ ಸಂಗ
ಒಡವೆ ತಾನೇನಪ್ಪುದೊ
ಕೈವಿಡಿದ ಮಡದಿ ಪರರ ಸಂಗ
ಪ್ರಾಣ ವಾಯುವಿನ ಸಂಗ
ಸಾವಿಂಗೆ ಸಂಗಡವಾರೂ ಇಲ್ಲ
ಕಾಣಾ ನಿಃಕಳಂಕ ಮಲ್ಲಿಕಾರ್ಜುನಾ

೧೩೯
ಆನೆಂಬುದಿಲ್ಲ ತಾನು ತಾನೆಂಬುದಿಲ್ಲ
ವಿಜ್ಞಾನಮಾನಂದ ಬ್ರಹ್ಮವೆಂಬುದಿಲ್ಲ ಇಲ್ಲವೆಂಬುದಿಲ್ಲ
ಸಿಮ್ಮಲಿಗೆಯ ಚೆನ್ನರಾಮನೆಂಬುದು ಮುನ್ನಿಲ್ಲ

೧೪೦
ಆನೆಂಬುದಿಲ್ಲ ನೀನೆಂಬುದಿಲ್ಲ
ಸ್ವಯವೆಂಬುದಿಲ್ಲ ಪರವೆಂಬುದಿಲ್ಲ
ಅರಿವೆಂಬುದಿಲ್ಲ ಮರವೆಂಬುದಿಲ್ಲ
ಒಗೆಂಬುದಿಲ್ಲ ಹೊರಗೆಂಬುದಿಲ್ಲ
ಕೂಡಲಚೆನ್ನಸಂಗಯ್ಯನೆಂಬ ಶಬ್ದ ಮುನ್ನಿಲ್ಲ

೧೪೧
ಆಯಿತ್ತೆ ಉದಯಮಾನ ಹೋಯಿತ್ತೆ ಅಸ್ತಮಾನ
ಅಳಿದವಲ್ಲಾ ನೀರವಾದ ನಿರ್ಮಿತಂಗಳೆಲ್ಲವೂ
ಕತ್ತಲೆಗವಿಯಿತ್ತು ಮೂರುಲೋಕದೊಳಗೆ
ಇದರಚ್ಚುಗಮೇನು ಹೇಳಾ ಗುಹೇಶ್ವರ

೧೪೨
ಆಯುಷ್ಯ ತೀರಿದಲ್ಲದೆ ಮರಣವಿಲ್ಲ
ಭಾಷೆ ತಪ್ಪಿದಲ್ಲದೆ ದಾರಿದ್ಯ್ರವಿಲ್ಲ
ಅಂಜಲದೇಕೋ ಲೋಕ ವಿಗರ್ಭಣೆಗೆ
ಅಂಜಲದೇಕೋ ಕೂಡಲಸಂಗಮದೇವಾ ನಿಮ್ಮಾಳಾಗಿ

೧೪೩
ಆಯುಷ್ಯ ಹೋಗುತ್ತಿದೆ ಭವಿಷ್ಯ ತೊಲಗುತ್ತಿದೆ
ಕೂಡಿರ್ದ ಸತಿಸುತರು ತಮತಮಗೆ ಹರಿದು ಹೋಗುತ್ತೈದಾರೆ
ಬೇಡ ಬೇಡವೆಲೆ ಬಂಜೆಯಾಗಿ ಕೆಡಬೇಡ ಬಯಲಿಂಗೆ ಮನವೆ
ಚೆನ್ನಮಲ್ಲಿಕಾರ್ಜುನನ ಶರಣರ ಸಂಗದಲ್ಲಿ
ಹೂಣಿ ಹೊಕ್ಕು ಬದುಕು ಕಂಡಾಮನವೆ

೧೪೪
ಆಯುಷ್ಯವುಂಟು ಪ್ರಳಯವಿಲ್ಲೆಂದು
ಅರ್ಥವ ಮಡುಗುವಿರಿ
ಆಯುಷ್ಯ ತೀರಿ ಪ್ರಳಯ ಬಂದಡೆ
ನಿಮ್ಮ ಅರ್ಥವನುಂಬುವರಿಲ್ಲ
ನೆಲನನಗೆದು ಮಡುಗದಿರಾ
ನೆಲ ನುಂಗಿದಡುಗುಳುವುದೆ
ಕಣ್ಣಿನಲ್ಲಿ ನೋಡಿ ಮಣ್ಣಿನಲ್ಲಿ ನೆರಹಿ ಉಣ್ಣದೆ ಹೋಗದಿರಾ
ನಿನ್ನ ಮಡದಿಗಿರಲೆಂದಡೆ ಆ ಮಡದಿಯ ಕೃತಕ ಬೇರೆ
ನಿನ್ನ ಒಡಲು ಕಡೆಯಲು ಮತ್ತೊಬ್ಬನಲ್ಲಿಗಡಕದೆ ಮಾಬಳೆ
ಹೆರರಿಗಿಕ್ಕಿ ಹೆಗ್ಗುರಿಯಾಗಿ ಕೆಡಬೇಡ
ಕೂಡಲಸಂಗನ ಶರಣರಿಗೆ ಒಡನೆ ಸವೆಸುವುದು

೧೪೫
ಆರಂಬವ ಮಾಡಿ ಸಂಸಾರಸ್ಥಿತಿ ಕಳೆಯದಿದ್ದರೆ
ಆ ಆರಂಬವೆ ಕೇಡು
ವ್ಯವಹಾರವ ಮಾಡಿ ಸಂಸಾರಸ್ಥಿತಿ ಕಳೆಯದಿದ್ದರೆ
ಆ ವ್ಯವಹಾರವೆ ಕೇಡು
ಓಲಗವ ಮಾಡಿ ಸಂಸಾರಸ್ಥಿತಿ ಕಳೆಯದಿದ್ದರೆ
ಆ ಓಲಗವೆ ಕೇಡು
ಭಕ್ತಿಯ ಮಾಡಿ ಜನನ ಮರಣ ವಿರಹಿತನಾಗದಿದ್ದರೆ
ಆ ಭಕ್ತಿಯೆ ಕೇಡು ಕೂಡಲಚೆನ್ನಸಂಗಮದೇವಾ

೧೪೬
ಆರಿಕೆ ಬಿತ್ತಿದ ಗಿಡುವಿನ ಹೂವ ಕೊಯಿದು
ಊರೆಲ್ಲರೂ ಕಟ್ಟಿಸಿದ ಕೆರೆಯ ನೀರ ತಂದು
ನಾಡೆಲ್ಲರೂ ನೋಡಿಯೆಂದು ಪೂಜಿಸುತ್ತ
ಪೂಜಿಸಿದ ಪುಣ್ಯ ಹೂವಿಗೋ ನೀರಿಗೋ
ನಾಡೆಲ್ಲಕ್ಕೊ ಪೂಜಿಸಿದಾತಗೊ
ಇದ ನಾನರಿಯೇ ನೀ ಹೇಳಿಂದನಂಬಿಗ ಚೌಡಯ್ಯ

೧೪೭
ಆರು ದರ್ಶನವೆಲ್ಲ ಎನ್ನ ಬಾಚಿಯ ಕಲೆ
ಮಿಕ್ಕಾದ ಮೀರಿದ ಅವಧೂತರುಗಳೆಲ್ಲ
ಎನ್ನ ಉಳಿಯೊಳಗಣ ಒಡಪು
ಇಂತಿವ ಮೀರಿ ವೇಧಿಸಿ ಭೇದಿಸಿಹೆನೆಂಬವರೆಲ್ಲ
ಎನ್ನ ಕೊಡತಿಯಡಿಯಲ್ಲಿ ಬಡೆಯಿಸಿಕೊಂಬ ಬಡಿಹೋರಿಗಳು
ಇಂತೀ ವಿಶ್ವಗೋಧರೆಲ್ಲರೂ
ಕರ್ತಾರನ ಕರ್ಮಟದ ನಕ್ಕುಬಚ್ಚನೆಯ ಚಿಕ್ಕಮಕ್ಕಳು
ಇಂತಿವನರಿದು ಕಾಮದಲ್ಲಿ ಕರಗದೆ
ಕ್ರೋಧದ ದಳ್ಳುರಿಯಲ್ಲಿ ಬೇಯದೆ
ನಾನಾ ವ್ಯಾಮೋಹ ಋತುಕಾಲಂಗಳ ಕಾಹಿನ ಬಲೆಗೊಳಗಾಗುತ್ತ
ಮತ್ತೆ ಸಾವಧಾನವೆ
ಮತ್ತೆಯೂ ಜ್ಞಾನಾತೀತವೆ
ಮತ್ತೆ ಧ್ಯಾನಮೂರ್ತಿಯೆ
ಮತ್ತೆ ನಾನಾ ಕ್ರೀಯಲ್ಲಿ ಭಾವ ವ್ಯವಧಾನವೆ
ಮತ್ತೆ ಗುರು ಚರ ಪರವೆ
ಒಕ್ಕುಡಿತೆ ನೀರಿನಲ್ಲಿ ತಾ ಸತ್ತ ಮತ್ತೆ
ಸಮುದ್ರವೆಷ್ಟಾಳವಾದಡೇನು
ಕಿಂಚಿತ್ತು ಸುಖದಲ್ಲಿ ಲಿಂಗವ ಬಿಟ್ಟು
ಅಂಗನೆಯರುರಸ್ಥಲದಲ್ಲಿ ಅಂಗೀಕರಿಸಿ
ಅವರಧರ ಪಾನಂಗಳ ಮಾಡಿ ನಾ ಲಿಂಗಾಂಗಿಯೆಂದಡೆ
ಸರ್ವಸಂಗಪರಿತ್ಯಾಗವ ಮಾಡಿದ ಲಿಂಗಾಂಗಿಗಳೊಪ್ಪರು
ಬಸವಣ್ಣಪ್ರಿಯ ವಿಶ್ವಕರ್ಮಟಕ್ಕೆ ಕಾಳಿಕಾವಿಮಲ
ರಾಜೇಶ್ವರಲಿಂಗವು
ಸ್ವಪ್ನದಲ್ಲಿ ಕುರುಹುಗಾಣಿಸಿಕೊಳ್ಳಾ

೧೪೮
ಆರು ಮುನಿದು ನಮ್ಮನೇನ ಮಾಡುವರು
ಊರು ಮುನಿದು ನಮ್ಮನೆಂತು ಮಾಡುವರು
ನಮ್ಮ ಕುನ್ನಿಗೆ ಕೂಸ ಕೊಡಬೇಡ
ನಮ್ಮ ಸೊಣಗಂಗೆ ತಳಿಗೆಯಲಿಕ್ಕಬೇಡ
ಆನೆಯ ಮೇಲೆ ಹೋಹವನ ಶ್ವಾನ ಕಚ್ಚಬಲ್ಲುದೆ
ನಮಗೆ ನಮ್ಮ ಕೂಡಲಸಂಗನುಳ್ಳನ್ನಕ್ಕ

೧೪೯
ಆರುವನೊಲ್ಲೆನೆಂದು ಅರಣ್ಯವ ಹೊಗುವದು
ಕಾರ್ಯವಲ್ಲ ದುರುಳತನ
ಊರೋಳಗಿದಡೆ ನರರ ಹಂಗು
ಅರಣ್ಯದಲ್ಲಿದಡೆ ತರುಗಳ ಹಂಗು
ಬಂದ ಪದಾರ್ಥವ ಲಿಂಗಾರ್ಪಿತವ ಮಾಡಿಕೊಂಬ
ಶರಣನೆ ಜಾಣ ಸರಳೇಶ್ವರದೇವಾ

೧೫೦
ಆರು ಇಲ್ಲದವಳೆಂದು
ಆಳಿಗೊಳಲುಬೇಡ ಕಂಡೆಯಾ
ಎನ ಮಾಡಿದಡೂ ಆನಂಜುವಳಲ್ಲ
ತರಗೆಲೆಯ ಮೆಲಿದು ಆನಿಹೆನು
ಸರಿಯ ಮೇಲೊರಗಿ ಆನಿಹೆನು
ಚೆನ್ನಮಲ್ಲಿಕಾರ್ಜುನಯ್ಯಾ
ಕರ ಕೇಡನೊಡ್ಡಿದಡೆ
ಒಡಲನು ಪ್ರಾಣವನು ನಿಮಗರ್ಪಿಸಿ ಶುದ್ಧಳಹೆನು