೧೫೧
ಆರೂ ಇಲ್ಲದಾರಣ್ಯದೊಳಗೆ ಮನೆಯ ಕಟ್ಟಿದರೆ
ಕಾಡುಗಿಚ್ಚು ಎದ್ದು ಬಂದು ಹತ್ತಿತಲ್ಲಾ
ಆ ಉರಿಯೊಳಗೆ ಮನೆ ಬೇವಲ್ಲಿ
ಮನೆಯೊಡೆಯನೆತ್ತ ಹೋದನೋ
ಆ ಉರಿಯೊಳಗೆ ಬೆಂದ ಮನೆ
ಛೇಗೆಯಾಗದುದ ಕಂಡು
ಮನೆಯೊಡೆಯನಳಲುತ್ತ ಬಳಲುತ್ತೈದಾನೆ ಗುಹೇಶ್ವರ
ನಿಮ್ಮ ಒಲವಿಲ್ಲದ ಠಾವ ಕಂಡು
ಹೇಸಿ ತೊಲಗಿದೆನಯ್ಯ

೧೫೨
ಆರೇನೆಂದರೂ ಓರಂತಿಪ್ಪುದೆ ಸಮತೆ
ಆರು ಜರಿದವರೆನ್ನ ಮನದ ಕಾಳಿಕೆಯ
ಕಳೆದರೆಂಬುದೆ ಸಮತೆ
ಆರು ಸ್ತೌತ್ಯವ ಮಾಡಿಹರೆನ್ನ ಜನ್ಮಜನ್ಮದ
ಹಗೆಗಳೆಂಬುದೆ ಸಮತೆ
ಇಂತು ಗುರುಕಾರುಣ್ಯ
ಮನವಚನಕಾಯದಲ್ಲಿ ಅವಿತಥವಿಲ್ಲರ್ದಡೆ
ಕಪಿಲಸಿದ್ಧಮಲ್ಲಿಕಾರ್ಜುನ ನಿನ್ನವರ ನೀನೆಂಬುದೆ ಸಮತೆ

೧೫೩
ಆಲಿಕಲ್ಲ ಮರದಡಿಯಲಿಹ ಮಘಮಘಿಸುವ ಗಿಳಿವಿಂಡು
ಊರವಣಿಸುವ ಪಕ್ಷಿಗಳು
ಸರಸಗೈವ ಕೋಗಿಲೆ
ಗಗನದ ಚಂದ್ರನು
ಅಗಲವಾರೆನು ಸಖಿಯೆ
ಬೆಳುದಿಂಗಳು ಬಿಸಿಲಾದವೆ
ಗಗನದ ದಶರಥನ ಬೀಡಿನಲ್ಲಿ ಕಾಮಿನಿ ಕೈವೋದಳೆ
ದಶಾವಸ್ಥೆಗೊಂಡೆನು ಮಹಾಲಿಂಗ ಗಜೇಶ್ವರನುಳಿದಡೆ

೧೫೪
ಆವ ಕಾಯಕವಾದಡೂ ಸ್ವಕಾಯಕವ ಮಾಡಿ
ಗುರು ಲಿಂಗ ಜಂಗಮದ ಮುಂದಿಟ್ಟು
ಒಕ್ಕುದ ಹಾರೈಸಿ ಮಿಕ್ಕುದ ಕೈಕೊಂಡು
ವ್ಯಾಧಿ ಬಂದಡೆ ನರಳು
ಬೇನೆ ಬಂದಡೆ ಒರಲು
ಜೀವ ಹೋದಡೆ ಸಾಯಿ
ಇದಕ್ಕಾ ದೇವರ ಹಂಗೇಕೆ
ಭಾಪು ಲದ್ದೆಯ ಸೋಮಾ

೧೫೫
ಆವ ಬೀಜವ ಬಿತ್ತಿದಡೂ
ಪೃಥ್ವಿಗೆ ಬೇರು ಬಲಲಿಂಗೆ ಶಾಖೆ ತಲೆದೋರಿ ಬೆಳೆವಂತೆ
ಐಕ್ಯಕ್ಕೆ ಮರೆ ಕ್ರೀಗೆ ಬಾಹ್ಯ
ಉಭಯದ ಭೇದವುಳ್ಳನ್ನಕ್ಕ ಭಕ್ತಿಯ ಹೋರಾಟ ಬಿಡದು
ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನಾ
ಮಣಿಯುಳ್ಳನ್ನಕ್ಕ ಪವಣಿಕೆಯ ಹಂಗು ಬಿಡದು

೧೫೬
ಆವ ಬೀಜವು ಬೀಳುವಲ್ಲಿ ಮೊಳೆ ಮುಖ ಹಿಂಚು ಮುಂಚುಂಟೆ
ನೀ ಮರೆದಲ್ಲಿ ನಾನರಿದಲ್ಲಿ ಬೇರೊಂದೊಡಲುಂಟೆ
ಮೂಲ ನಷ್ಟವಾದಲ್ಲಿ ಅಂಕುರ ನಿಂದಿತ್ತು
ಕೂಟಕ್ಕೆ ಸತಿಪತಿ ಎಂಬ ನಾಮವಲ್ಲದೆ
ಅರಿವಿಂಗೆ ಬೇರೊಂದೊಡಲುಂಟೆ
ಬೇರೊಂದಡಿಯಿಡದಿರು
ಮಾರಯ್ಯಪ್ರಿಯ ಅಮಲೇಶ್ವರಲಿಂಗವನರಿಯಬಲ್ಲಡೆ

೧೫೭
ಆವ ವಿದ್ಯೆಯ ಕಲಿತಡೇನು
ಸಾವ ವಿದ್ಯೆ ಬೆನ್ನಬಿಡದು
ಅಶನವ ತೊರೆದಡೇನು
ವ್ಯಸನವ ಮರೆದಡೇನು
ಉಸುರ ಹಿಡಿದಡೇನು
ಬಸುರ ಕಟ್ಟಿದಡೇನು
ಚೆನ್ನಮಲ್ಲಿಕಾರ್ಜುನದೇವಯ್ಯಾ
ನೆಲ ತಳವಾರನಾದಡೆ ಕಳ್ಳನೆಲ್ಲಿಗೆ ಹೋಹನು

೧೫೮
ಆವುಗೆಯ ಕಿಚ್ಚಿನಂತೆ
ಧಾಮಧೂಮವಾದಂತೆ
ಆವ ನಾಡ ಸುಟ್ಟನೆಂದರಿಯೆನವ್ವಾ
ಬೊಬ್ಬೆಯ ಕೊಂಡು ಹೋದವನೆಲ್ಲಿ ಉಳಿದನೆಂದರಿಯೆನವ್ವಾ
ನಿರಾಳ ನಿರಾಳದಲ್ಲಿ ಮಹಾಲಿಂಗ
ಗಜೇಶ್ವರದೇವನುಳಿದನೆಂದುಹೇಳಿದಡೆ
ಕಂಗಳ ನೀರಲ್ಲಿ ನಿಂದೆನವ್ವಾ

೧೫೯
ಆವುದ ಹಿಡಿದು ಬೀಸಿದಲ್ಲಿಯೂ ಗಾಳಿ ತಪ್ಪದು
ಏನ ಹಿಡಿದು ನುಡಿದಿಹೆನೆಂಬನ್ನಕ್ಕ ಮನದ ಸೂತಕ ಮೊದಲು
ಒಂದು ಕಂಡು ಒಂದರಲ್ಲಿ ಕೂಡಿಹೆನೆಂಬನ್ನಬರ
ಅರಿವಿನ ಸೂತಕ ಬಿಡದು
ದೀಪವ ಕೆಡಿಸಿದ ಸೆರಗಿನಂತೆ
ಅನಲನಾಹಿತಿಗೊಂಡ ಸಾರದಂತೆ
ಬಯಲು ಬಯಲ ಕೂಡಿದ ನಿರಾಲಕ್ಕೆ ಲಕ್ಷವುಂಟೆ
ಅರಿವುದಕ್ಕೆ ಮುನ್ನವೆ ಅರಿದ ಅರಿವನು
ಕರಿಗೊಂಡಲ್ಲಿಯೆ ಲೋಪ ಕಾಮಧೂಮ ಧೂಳೇಶ್ವರಾ

೧೬೦
ಆಶೆಯಾಮಿಷವಳಿದು
ಹುಸಿ ವಿಷಯಂಗಳೆಲ್ಲ ಹಿಂಗಿ
ಸಂಶಯ ಸಂಬಂಧ ವಿಸಂಬಂಧವಾಯಿತ್ತು
ನೋಡಾ ಎನ್ನ ಮನದೊಳಗೆ ಘನಪರಿಣಾಮವ ಕಂಡು
ಮನ ಮಗ್ನವಾಯಿತ್ತಯ್ಯಾ
ಚೆನ್ನಮಲ್ಲಿಕಾರ್ಜನಾ
[ನಿಮ್ಮ ಶರಣ ಪ್ರಭುದೇವರ ಕರುಣದಿಂದ ಬದುಕಿದೆನಯ್ಯಾ]

೧೬೧
ಆಸತ್ತೆ ಅಲಸಿದೆನೆಂದಡೆ ಮಾಣದು
ಬೇಸತ್ತೆ ಬೆಂಬಿದ್ದೆನೆಂದಡೆ ಮಾಣದು
ಏವೆನೇವೆನೆಂದಡೆ ಮಾಣದು ಕಾಯದ ಕರ್ಮದ ಫಲಭೋಗವು
ಕೂಡಲಸಂಗನ ಶರಣರು ಬಂದು
ಹೋ ಹೋ ಅಂಜದಿರೆಂದಡಾನು ಬದುಕುವೆನು

೧೬೨
ಆಸೆಯಿಂದ ಬಿಟ್ಟು ಕಿರಿಯರಿಲ್ಲ
ನಿರಾಶೆಯಿಂದ ಬಿಟ್ಟು ಹಿರಿಯರಿಲ್ಲ
ದಯದಿಂದ ಬಿಟ್ಟು ಧರ್ಮವಿಲ್ಲ
ವಿಚಾರದಿಂದ ಬಿಟ್ಟು ಸಹಾಯಿಗಳಿಲ್ಲ
ಸಚರಾಚರಕ್ಕೆ ಸಕಳೇಶ್ವರನಿಂದ ಬಿಟ್ಟು ದೈವವಿಲ್ಲ

೧೬೩
ಆಸೆಗೆ ಸತ್ತುದು ಕೋಟಿ
ಆಮಿಷಕ್ಕೆ ಸತ್ತುದು ಕೋಟಿ
ಹೊನ್ನ ಹೆಣ್ಣು ಮಣ್ಣಿಂಗೆ ಸತ್ತುದು ಕೋಟಿ
ಗುಹೇಶ್ವರ
ನಿಮಗಾಗಿ ಸತ್ತವರನಾರನೂ ಕಾಣೆ

೧೬೪
ಆಸೆಗೆ ಹುಟ್ಟಿದ್ದು ಪ್ರಾಣಿ ಆಸೆಯನೆ ಕಲಿತು
ಪುಣ್ಯದ ಪದವಿಯ ಬಯಸಿದಡೆ
ಭವಮಾಲೆಯ ಬರವು ತಪ್ಪದು
ಬೇಡಲು ಹುಟ್ಟಿದ ಪ್ರಾಣಿಗೆ ಬೇಡಲು ವಿಧಿಯೆ
ಸೂಳೆಗೆ ಹುಟ್ಟಿದ ಪ್ರಾಣಿಗೆ ನಿಜಗುಣ ಸಜ್ಜನವಪ್ಪದೆ
ಲಿಂಗಉದಯ ಶರಣವಿಸ್ತಾರವು ಬಯಸಿದಡೊಳವೆ
ಕೂಡಲಸಂಗಮದೇವಾ ನಿಮ್ಮಲ್ಲಿ

೧೬೫
ಆಸೆಯುಳ್ಳನ್ನಕ್ಕ ರೋಷ ಬಿಡದು
ಕಾಮವುಳ್ಳನ್ನಕ್ಕ ಕಳವಳ ಬಿಡದು
ಕಾಯಗುಣವುಳ್ಳನ್ನಕ್ಕ ಜೀವನ ಬುದ್ಧಿ ಬಿಡದು
ಭಾವವುಳ್ಳನ್ನಕ್ಕ ಬಯಕೆ ಸವೆಯದು
ನಡೆಯುಳ್ಳನ್ನಕ್ಕ ನುಡಿಗೆಡದು
ಇವೆಲ್ಲವು ಮುಂದಾಗಿದ್ದು ಹಿಂದನರಿದೆನೆಂಬ
ಸಂದೇಹಿಗಳಿರಾ ನೀವು ಕೇಳಿರೋ
ನಮ್ಮ ಶರಣರು ಹಿಂದ ಹೇಗೆ ಅರಿದರೆಂದಡೆ
ಆಸೆಯನಳಿದರು ರೋಷವ ಹಿಂಗಿದರು
ಕಾಮನ ಸುಟ್ಟರು ಕಳವಳವ ಹಿಂಗಿದರು
ಕಾಯಗುಣವಳಿದರು ಜೀವನ ಬುದ್ಧಿಯ ಹಿಂಗಿದರು
ಭಾವವ ಬಯಲುಮಾಡಿದರು ಬಯಕೆಯ ಸವೆದರು
ಹಿಂದನರಿದು ಮುಂದೆ ಲಿಂಗವೆ ಗೂಡಾದ ಶರಣರ
ಈ ಸಂದೇಹಿಗಳೆತ್ತ ಬಲ್ಲರು ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ

೧೬೬
ಆಸೆಯುಳ್ಳವಂಗೆ ಮಾಟಕೂಟವಲ್ಲದೆ
ನಿರಾಸೆಯುಳ್ಳವಂಗೆ ಮಾಟಕೂಟವೇಕೆ
ಮನಪರಿಣಾಮಿಗೆ ಮತ್ಸರವೇಕೆ
ಸುತ್ತಿದ ಮಾಯಾಪ್ರಪಂಚವ ಜರಿದವಂಗೆ
ಅಂಗನೆಯರ ಹಿಂದು ಮುಂದೆ ತಿರುಗಲೇಕೆ
ಅಮ್ಮಗೇಶ್ವರನೆಂಬ ಲಿಂಗವನರಿದವಂಗೆ
ಅಷ್ಟವಿಧಾರ್ಚನೆ ಷೋಡಶೋಪಚಾರದ ಹಂಗೇಕೆ

೧೬೭
ಆಸೆಯೆಂಬ ಕೂಸನೆತ್ತಲು
ರೋಷವೆಂಬ ತಾಯಿ ಮುಂದೆ ಬಂದಿಪ್ಪಳು
ನೋಡಾ
ಇಂತೆರಡಿಲ್ಲದ ಕೂಸನೆತ್ತಬಲ್ಲಡೆ
ಆತೆನೆ ಲಿಂಗೈಕ್ಯನು
ಗುಹೇಶ್ವರ

೧೬೮
ಆಸೆಯೆಂಬುದು ಅರಸಿಂಗಲ್ಲದೆ
ಶಿವಭಕ್ತರಿಗುಂಟೆ ಅಯ್ಯಾ
ರೋಷವೆಂಬುದು ಯಮದೂತರಿಗಲ್ಲದೆ
ಅಜಾತರಿಗುಂಟೆ ಅಯ್ಯಾ
ಈಸಕ್ಕಿಯಾಸೆ ನಿಮಗೇಕೆ ಈಶ್ವರನೊಪ್ಪ
ಮಾರಯ್ಯಪ್ರಿಯ ಅಮಲೇಶ್ವರಲಿಂಗಕ್ಕೆ ದೂರ ಮಾರಯ್ಯ

೧೬೯
ಆಳಾಪದ ಸೊಬಗು
ಘಂಟೆ ವಾದ್ಯದ ಕೂಗಿನ ಕೊರಚು
ಪರಿಚಾರಕರ ಎಡೆಯಾಟದಿಂದ
ಸೊಬಗು ಮೆರೆಯಿತ್ತು
ಎನಗೆ ಇನ್ನಾವುದು ಇಲ್ಲ
ಇನ್ನೇವೆನೆಂದನಂಬಿಗ ಚೌಡಯ್ಯ

೧೭೦
ಆಳುತನದ ಮಾತನೇರಿಸಿ ನುಡಿದಡೆ
ಆಗಳೆ ಕಟ್ಟಿದೆನು ಗಂಡುಗಚ್ಚೆಯ
ತಿಗುರನೇರಿಸಿ ತಿಲಕವನಿಟ್ಟು
ಕೈದುವ ಕೊಂಡು ಕಳನೇರಿದ ಬಳಿಕ
ಕಟ್ಟಿದ ನಿರಿ ಸಡಿಲಿದಡೆ
ಇನ್ನು ನಿಮ್ಮಾಣೆ ಕಾಣಾ
ಚೆನ್ನಮಲ್ಲಿಕಾರ್ಜುನಾ

೧೭೧
ಇಂದಿಗೆಂತು ನಾಳೆಗೆಂತೆಂದು ಚಿಂತಿಸಲೇಕೆ
ತಂದಿಕ್ಕುವ ಸಿವಂಗೆ ಬಡತನವೆ
ರಾಮನಾಥ

೧೭೨
ಇಂದ್ರನೀಲ ಗಿರಿಯನೇರಿಕೊಂಡು
ಚಂದ್ರಕಾಂತ ಶಿಲೆಯನಪ್ಪಿಕೊಂಡು
ಕೊಂಬ ಬಾರಿಸುತ್ತ ಎಂದಿಪ್ಪೆನೋ ಶಿವನೆ
ನಿಮ್ಮ ನೆನೆವುತ್ತ ಎಂದಿಪ್ಪೆನೋ
ಹರನೆ ಎನ್ನ ಕುಂಭ ಕುಚದ ಮೇಲೆ ನಿನ್ನನೆಂದೆತ್ತಿಕೊಂಬೆನಯ್ಯಾ
ಅಂಗಭಂಗ ಮನಭಂಗವಳಿದು
ನಿಮ್ಮನೆಂದಿಗೊಮ್ಮೆ ನೆರೆವೆನಯ್ಯಾ
ಚನ್ನಮಲ್ಲಿಕಾರ್ಜುನಾ

೧೭೩
ಇಂಬಪ್ಪ ಶರಧಿಯ ಸಂಭ್ರಮದ ಮೊರಹಿನಲಿ
ಶಂಭುವೆ ನಿನ್ನನೊಡಗೂಡಿದೆನಯ್ಯಾ
ಬೇರೊಂದ ಕೇಳೆ ಬೇರೊಂದ ಕಾಣೆ
ಮಹಾ ಉಲುಹೆ ಒಡಮನೆಯಾದೆನಯ್ಯಾ
ಅನಿಮಿಷನೆಂಬ ಶರಧಿಯ ಮಹಾ ಉಲುಹಿನ
ಉಲುಹುಗೆಟ್ಟೆ ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ
ನೀನೆಂಬ ಸಮುದ್ರದಲಿ ಆನಿದ್ದೆನು

೧೭೪
ಇಂಬಿನ ಚುಂಬನ ಅಮೃತಾಹಾರ
ಆಲಿಂಗನವೆ ಆಭರಣ
ಸೋಂದೆ ವಸ್ತ್ರ
ನೋಟವೆ ಕೂಟ
ಒಡನಾಟವೆ ಅಷ್ಟಭೋಗವೆನಗೆ
ಉರಿಲಿಂಗದೇವನ ಕೂಟವೆ
ಪರಾಪರ ವಾಙ್ಮಯಾತೀತ ಪರಮಸುಖ

೧೭೫
ಇದಿರೆನ್ನ ಹಳಿವವರು ಮತಿಯ ಬೆಳಗುವರು
ಮನದ ಕಾಳಿಕೆಯ ಕಳೆವವರೆನ್ನ ನಂಟರು
ದುರಾಚಾರದಲ್ಲಿ ನಡೆವವರು ಕನ್ನಡಿ ಎನಗೆ
ಹೇಯೋಪಾದಿಯ ತೋರುವವರು
ಇದು ಕಾರಣ ನಾನನ್ಯ ದೇಶಕ್ಕೆ ಹೋಗೆನು
ಸರಳೇಶ್ವರದೇವರ ತೋರುವರೊಳರಿಲ್ಲಿಯೆ