೧೭೬
ಇನಿಯಂಗೆ ತವಕವಿಲ್ಲ
ಎನಗೆ ಸೈರಣೆಯಿಲ್ಲ
ಮನದಿಚ್ಛೆಯನರಿವ ಸಖಿಯರಿಲ್ಲ
ಇನ್ನೇವೆನವ್ವಾ
ಮನುಮಥವೈರಿಯ ಅನುಭವದಲ್ಲಿ ಎನ್ನ ಮನ ಸಿಲುಕಿ ಬಿಡದು
ಇನ್ನೇನ ಮಾಡುವೆನೆಲೆ ಕರುಣವಿಲ್ಲದ ತಾಯೆ
ದಿನ ವೃಥಾ ಹೋಯಿತ್ತಾಗಿ ಯೌವ್ವನ ಬೀಸರವಾಗದ ಮುನ್ನ
ಪಿನಾಕಿಯ ನೆರಯವ್ವಾ ಶಂಭುಜಕ್ಕೇಶ್ವರನ

೧೭೭
ಇನಿಯನೆನಗೆ ನೀನು
ಇನ್ನೇನನೊಂದ ನಾನರಿಯೆ
ನೀ ನುಡಿಸಲು ನುಡಿವೆನು
ನಡೆಸಲು ನಡೆವೆನು
ನೀನಲ್ಲದರಿಯೆನು
ನಲ್ಲ ನೀ ಕೇಳಾ
ನೀನೇ ಗತಿ ನೀನೇ ಮತಿ ನಿನ್ನಾಣೆಯಯ್ಯಾ
ಉರಿಲಿಂಗದೇವಾ

೧೭೮
ಇನ್ನಾಡುವೆ ಜಂಗಮ ಬಹುರೂಪ
ಅಲ್ಲಮನಂತೆ ಆಡುವೆ ಬಹುರೂಪ
ಅಜಗಣ್ಣನಂತೆ ಆಡುವೆ ಬಹುರೂಪ
ಮುಖವಾಡದಯ್ಯಗಳಂತೆ ಆಡುವೆ ಬಹುರೂಪ
ಪುರುಷಾಂಗಣವ ಮೆಟ್ಟಿ ಆಡುವೆ ಬಹುರೂಪ
ರೇಕಣ್ಣಪ್ರಿಯ ನಾಗಿನಾಥ
ಬಸವನಿಂದ ಬದುಕಿತೀ ಲೋಕವೆಲ್ಲಾ

೧೭೯

ಇನ್ನೆಲ್ಲರ ಕೇಳುವುದಕ್ಕೆ ಕುಲ ಛಲ ಮಲ ದೇಹಿಕರು ಬಿಡರೆನ್ನ
ಎದೆಯಲ್ಲಿ ಕಟ್ಟಿದ ಎಳೆಯಾಸೆ ಬಿಡದು
ಕೊಡುವ ಕೊಂಬಲ್ಲಿ ದ್ವಿಜರ ಒಡಗೂಡುವುದು ಬಿಡದು
ಎನ್ನೊಡೆಯ ಬಸವಣ್ಣ ಹೇಳಿದ ಮಾತಿಂಗೆ ಅಡಿಯಿಡಲಮ್ಮದೆ ಕಟ್ಟಿದೆ
ಹಿಡಿದು ಅರ್ಚಿಸುವುದಕ್ಕೆ ಶಿರದ ಕಡೆಯ ಕಾಣೆ
ಮಜ್ಜನ ಮಂಡೆಗೆಂದರಿಯೆ ಪಾದಕ್ಕೆಂದರಿಗಯೆ
ಕುಸುಮವನಿಕ್ಕುವುದಕ್ಕೆ ಸರಿಯಾದೆ ಮಕುಟದಲ್ಲಿ
ಪಾದಕ್ಕೆ ಮದನ ಪಿತನ ಅಕ್ಷಿಯಾದೆ ಉಂಗುಷ್ಠದಲ್ಲಿ
ಊಟಕ್ಕೆ ಬಾಯ ಕಾಣೆ
ಕೂಟಕ್ಕೆ ಅವಯವಂಗಳಿಲ್ಲ
ಮಾತಿಗೆ ಆತ್ಮನ ಕಾಣೆ
ಇದೇತರ ಮುರಿ
ಪಾಷಾಣದಂತಿದೆ ಇದರಾಟವೆನಗೆ ಕಾಟವಾಗಿದೆ
ಅಲೇಖನಾದ ಶೂನ್ಯ ಕಲ್ಲಾದ ಭೇದವ ಮೆಲ್ಲಗೆ ಎನಗೆ ಹೇಳು

೧೮೦
ಇನ್ನೇವೆ
ನಾ ತಂದ ಬೆಂಕಿಯಲ್ಲಿ
ಸರ್ವಾಂಗವಿಷದ ಚೇಳು ಬಿದ್ದು ಬೇವುತ್ತಿದೆ
ಹಿಡಿದು ತೆಗೆದೆಹೆನೆಂದಡೆ ಉರಿ ತಾಗಿದ ಚೇಳು ಎನ್ನ ಹೊಯ್ದಿತ್ತು
ಸತ್ತಿತ್ತೆಂಬ ನೋವು ಬಿಡದು
ಎನಗೆ ವಿಷ ತಾಗಿತ್ತೆಂಬ ಆಸೆ ಬಿಡದು
ಬಿಟ್ಟಡೆ ಸಮಯಕ್ಕೆ ದೂರ
ಹಿಡಿದಡೆ ಜ್ಞಾನಕ್ಕೆ ದೂರ
ಉಭಯದ ಬೇನೆಯಲ್ಲಿ ಬೇವುದು
ಸದಾಶಿವಮೂರ್ತಿಲಿಂಗಕ್ಕೆ ದೂರ

೧೮೧
ಇಬ್ಬರಿಗೊಂದೆಂಬ ತೊಡವೆ ಗಡ ಕಾಮಾ
ಅರಿದರಿದು ಬಿಲುಗಾರನಹೆಯೊ
ಎಸೆದಿಬ್ಬರು ಒಂದಹರು ಗಡ
ಇದು ಹೊಸತು
ಚೋದ್ಯವೀ ಸರಳ ಪರಿ ನೋಡಾ
ಎನಗೆಯೂ ಉರಿಲಿಂಗದೇವಗೆಯೂ ತೊಟ್ಟೆಸು
ನಾವಿಬ್ಬರೊಂದಾಗೆ ಬಿಲ್ಲಾಳಹೆ
ಎಸೆಯೆಲೋ ಕಾಮಾ

೧೮೨
ಇಬ್ಬರು ಮೂವರು ದೇವರೆಂದು
ಉಬ್ಬಿ ಮಾತನಾಡಬೇಡ
ಒಬ್ಬನೆ ಕಾಣಿರೊ
ಇಬ್ಬರೆಂಬುದು ಹುಸಿ
ನೋಡಾ
ಕೂಡಲಸಂಗಮದೇವನಲ್ಲದಿಲ್ಲೆಂದಿತ್ತು ವೇದ

೧೮೩
ಇರಿವ ಆಸಿ ನೋವ ಬಲ್ಲುದೆ
ಬೇಡುವಾತ ರುಜವ ಬಲ್ಲನೆ
ಕಾಡುವ ಕಾಳುಮೂಳರ ವಿಧಿ ಎನಗಾಯಿತ್ತು
ನಿಃಕಳಂಕ ಮಲ್ಲಿಕಾರ್ಜುನಾ

೧೮೪
ಇರುಹು ಕಡೆ ಎಂಭತ್ತನಾಲ್ಕು ಲಕ್ಷ ಜೀವ
ಅವು ಹುಟ್ಟುವಾಗಲೆ ಸುಖದುಃಖ ಭೋಗಂಗಳ ಕೊಂಡು ಹುಟ್ಟಿದ್ದವು
ಇದು ತಪ್ಪದ ದೃಷ್ಟ
ಅರುಹಿರಿಯರೆಲ್ಲರು ಮರೆಯಬೇಡಿ
ಅರಿವಿನ ಹೊಲನ ನೋಡಿಕೊಳ್ಳಿ
ವೇಷಕ್ಕೆ ತಪ್ಪದಂತಾಡಿ ಹೋಗಿ
ಪುರುಷ ಸತ್ತಡೆ ಸತಿ ಮುಂಡೆತನದಂತೆ ನೀಸಲಾರೆ
ಕಳ್ಳನ ಹೆಂಡತಿಯಂತೆ ತಲ್ಲಳಿಸಲಾರೆ
ನಿಮ್ಮ ಅರಿವಿನ ಹಾನಿ ಎನ್ನ ಇಹಪರದ ಕೇಡು
ಈ ಪದಕ್ಕೆ ನೋಯಬೇಡ
ನೊಂದಡೆ ಸದಾಶಿವಮೂರ್ತಿಲಿಂಗಕ್ಕೆ ಹೊರಗು

೧೮೫
ಇರುಳಿಗೆ ಮೊಲೆ ಯೋನಿ ಅಧರ
ಹಗಲಿಗೆ ಸಂಪುಟ ಲೇಖ
ಮಾತಿನ ಮಾಲೆಯ ಸರಕು
ವೇಷದ ಪುಣ್ಯ
ಸುಡು ಭ್ರಾಂತರ ಮಾತು
ಸಾಕು ನಿಲ್ಲು
ಐಘಟದೂರ ರಾಮೇಶ್ವರಲಿಂಗ ಅವರ ಬಲ್ಲನಾಗಿ

೧೮೬
ಇರುಳಿನ ಮುಖ ಹಗಲೆಂದರಿಯರು
ಹಗಲಿನ ಮುಖ ಇರುಳೆಂದರಿಯರು
ಇರುಳಿನ ಮುಖದೊಳಗೊಂದು ನವರತ್ನದ
ಖಂಡಿತಹಾರವಡಗಿತ್ತು
ಹಗಲಿನ ಮುಖದೊಳಗೊಂದು ನವಚಿತ್ರ ಪತ್ರದ ವೃಕ್ಷವಡಗಿತ್ತು
ರತ್ನದ ಹಾರದ ವೃಕ್ಷಕ್ಕಾಹಾರವನಿಕ್ಕಿದಡೆ
ಗುಹೇಶ್ವರಲಿಂಗದಲ್ಲಿ ಪ್ರಾಣಲಿಂಗಕ್ಕೆ ಸುಖವಾಯಿತ್ತು

೧೮೭
ಇರುಳೊಂದು ಮುಖ ಹಗಲೊಂದು ಮುಖ
ಕಾಯವೊಂದು ಮುಖ ಜೀವವೊಂದು ಮುಖ
ಬುದ್ಧಿಯನರಿಯದಿದೆ ನೋಡಾ
ಪ್ರಾಣಲಿಂಗವೆಂಬ ಭ್ರಾಂತು ನೋಡಾ
ಇದು ಕಾರಣ ಮೂರು ಲೋಕವೆಯ್ದೆ
ಬರುಸೂರೆವೋಯಿತ್ತು ಗುಹೇಶ್ವರ

೧೮೮
ಇಲ್ಲವೆಯ ಮೇಲೊಂದು ಉಂಟೆಂಬ ಪರಿಭಾವ
ಅಲ್ಲಿ ಇಲ್ಲಿ ಎನ್ನದೆ ತಾನೆ ನಿಂದಿತ್ತು
ನೋಡಾ
ತನ್ನಲ್ಲಿಯ ಪ್ರಕೃತಿಯ ತಾನೆ ಹಿಂಗಿಸಲು
ಅಲ್ಲಿಯೆ ಸುಜ್ಞಾನ ಉದಯಸಿತ್ತು
ಎಲ್ಲಾ ಎಡೆಯಲ್ಲಿಯು ನಿಂದ ನಿಜಪದವ
ಗುಹೇಶ್ವರ ನಿಮ್ಮ ಶರಣ ಬಲ್ಲ

೧೮೯
ಇವನಾರವ ಇವನಾರವ ಇವನಾರವನೆಂದೆನಿಸದಿರಯ್ಯಾ
ಇವ ನಮ್ಮವ ಇವ ನಮ್ಮವ ಇವ ನಮ್ಮವನೆಂದೆನಿಸಯ್ಯಾ
ಕೂಡಲಸಂಗಮದೇವಾ ನಿಮ್ಮ ಮನೆಯ ಮಗನೆಂದೆನಿಸಯ್ಯಾ

೧೯೦
ಇಷ್ಟಲಿಂಗ ಗುರುವಿನ ಹಂಗು
ಚಿತ್ತ ಕಾಮನ ಹಂಗು
ಪ್ರಜೆ ಪುಣ್ಯ ಮಹಾದೇವನ ಹಂಗು
ಎನ್ನ ದಾಸೀಗ ಆರ ಹಂಗೂ ಇಲ್ಲ
ಚನ್ನಬಸವಣ್ಣಪ್ರಿಯ ಚಂದೇಶ್ವರಲಿಂಗವೆ
ಕಣ್ಣಿಯ ಮಾಡಬಲ್ಲಡೆ ಬಾ ಎನ್ನ ತಂದೆ

೧೯೧
ಇಹಕ್ಕೊಬ್ಬ ಗಂಡನೆ
ಪರಕ್ಕೊಬ್ಬ ಗಂಡನೆ
ಲೌಕಿಕ್ಕೊಬ್ಬ ಗಂಡನೆ
ಪಾರಮಾರ್ಥಕ್ಕೊಬ್ಬ ಗಂಡನೆ
ಎನ್ನ ಗಂಡ ಚೆನ್ನಮಲ್ಲಿಕಾರ್ಜುನದೇವರಲ್ಲದೆ
ಮಿಕ್ಕಿನ ಗಂಡರೆಲ್ಲ ಮುಗಿಲ ಮರೆಯ ಬೊಂಬೆಯಂತೆ

೧೯೨
ಇಹಪರವೆಂಬ ಇದ್ದೆಸೆಯಾಗಿರ್ದನ ಪರಿ ಹೊಸತು
ನೆಯಿ ಹತ್ತದ ನಲಗೆಯಂತೆ
ಹುಡಿ ಹತ್ತದ ಗಾಳಿಯಂತೆ
ಕಾಡಿಗೆ ಹತ್ತದ ಆಲಿಯಂತೆ ಇರ್ದೆನಯ್ಯಾ
ಸಿಮ್ಮಲಿಗೆಯ ಚೆನ್ನರಾಮನೆಂಬ ಲಿಂಗದಲ್ಲಿ
ಆಚರಿಸುತ್ತ ಆಚರಿಸುತ್ತ ಆಚರಿಸದಂತಿರ್ದೆ ನೋಡಯ್ಯಾ

೧೯೩
ಇಹಲೋಕ ಪರಲೋಕ ತಾನಿದ್ದಲ್ಲಿ
ಗಗನಮೇರುಮಂದಿರ ತಾನಿದ್ದಲ್ಲಿ
ಸಕಲಭುವನ ತಾನಿದ್ದಲ್ಲಿ
ಸತ್ಯನಿತ್ಯ ನಿರಂಜನ ಶಿವತತ್ವ್ತ ತಾನಿದ್ದಲ್ಲಿ
ಉತ್ತರೋತ್ತರ ಚತುರ್ವಳಯ ತಾನಿದ್ದಲ್ಲಿ
ಚಂದ್ರ ಸೂರ್ಯ ತಾರಾಮಂಡಲ ತಾನಿದ್ದಲ್ಲಿ
ಅಂತರ ಮಹದಂತರ ತಾನಿದ್ದಲ್ಲಿ
ಸ್ವತಂತ್ರ ಗುಹೇಶ್ವರಲಿಂಗ ತಾನಿದ್ದಲ್ಲಿ

೧೯೪
ಇಳೆ ನಿಮ್ಮ ದಾನ ಬೆಳೆ ನಿಮ್ಮ ದಾನ
ಸುಳಿದು ಬೀಸುವ ಗಾಳಿ ನಿಮ್ಮ ದಾನ
ನಿಮ್ಮ ದಾನವನುಂಡು ಅನ್ಯರ ಹೊಗಳುವ
ಕುನ್ನಿಗಳನೇನೆಂಬ ರಾಮನಾಥ

೧೯೫
ಇಳೆಯನಾಧಾರ ಮಾಡಿ ಜಳವ ಜೀವನ ಮಾಡಿ
ಒಳಗಿಪ್ಪ ಭೇದವನು
ವಾಯುವ ಕಂಬವ ಮಾಡಿ ನಳವ ಚಂದ್ರಮನ ಮಡಗಿ
ಆಕಾಶವನು ಗಳನೆ ಮುಚ್ಚಿದ ಬೆಳಗಿಗೆ
ಆನು ಬೇಡಿಕೊಂಬೆ ರಾಮನಾಥ

೧೯೬
ಈ ನಲ್ಲನ ಬೇಟದ ಕೂಟದ ಪರಿಯನು ಏನೆಂದು ಹೇಳುವೆ
ವಿಪರೀತ ಕೆಳದಿ
ಪುರುಷ ಶಕ್ತಿಯಾಗಿ ಶಕ್ತಿ ಪುರುಷನಾಗಿ
ನೆರೆದು ಸುಖಿಸುವನು
ಕೇಳಾ ಕೆಳದಿ
ಅತಿ ಕಾಮಿ ವಿಪರೀತನು
ಉರಿಲಿಂಗದೇವನು
ನೆರೆಯಲು ನೆರೆವುದು ಮನದಿಚ್ಛೆ ಕೆಳದಿ

೧೯೭
ಈ ಲೋಕದ ಭೀತರು ಪರ ಲೋಕದ ಕಲಿಗಳು
ಸಾಲೇಕ್ಯ ಸಾಮೀಪ್ಯ ಸಾರೂಪ್ಯ ಸಾಯುಜ್ಯರೆಲ್ಲರು
ಅಜನಿತಂಗೆ ಸರಿಯೆ
ಮೂಜಗದಲ್ಲಿ ನಿರತರು
ಕೂಡಲಸಂಗನ ಶರಣರು
ತ್ರಿವಿಧವನರಿಯರು

೧೯೮
ಈರೇಳುನೂರುವರಷ ಮಜ್ಜನಕ್ಕೆರೆದು ವೃಥಾ ಹೋಯಿತ್ತಲ್ಲಾ
ಏನೆಂದರಿಯದೆ ವೃಥಾ ಹೋಯಿತ್ತಲ್ಲಾ
ನೂಲುವರ ಕಂಡು ನೂತಿಹೆನೆಂದಡೆ
ಅಯ್ಯಾ
ಎನ್ನ ಕರಿಯ ಕದಿರು ಬಿಳಿದಾಗದು
ಅಯ್ಯಾ
ಎನ್ನ ತನುಮನಧನ ನಿಮ್ಮಲ್ಲಿ ಸಯವಾಗವು
ಬಂದವಸರದಲ್ಲಿ ಮನವು ಲಿಂಗದೊಳಗೆ ತೋರಿತ್ತು
ಅನುಭವಕ್ಕೊಳಗಾಗದೆ
ಎನ್ನ ವಿಚಾರಿಸಿ ನೋಡೆಹನೆಂದಡೇನೂ ಇಲ್ಲ
ಸುಳಿವಿನೊಳಗೆ ಅರಿದೆಹೆನೆಂದಡೆ ಸುಳಿಹಿಂಗೆ ಭಂಗವಾಯಿತ್ತು
ಎನಗಿನ್ನು ಸುಳುಹೇಕೆ ಹೇಳಾ ಸಕಳೇಶ್ವರದೇವಾ

೧೯೯
ಈಳೆ ನಿಂಬೆ ಮಾವು ಮಾದಲಕೆ
ಹುಳಿ ನೀರನೆರೆದವರಾರಯ್ಯಾ
ಕಬ್ಬು ಬಾಳೆ ಹಲಸು ನಾರಿವಾಳಕ್ಕೆ
ಸಿಹಿ ನೀರನೆರೆದವರಾರಯ್ಯಾ
ಕಳವೆ ರಾಜಾನ್ನ ಶಾಲ್ಯನ್ನಕ್ಕೆ
ಓಗರದ ಉದಕವನೆರೆದವರಾರಯ್ಯಾ
ಮರುಗ ಮಲ್ಲಿಗೆ ಪಚ್ಚೆ ಮುಡಿವಾಳಕ್ಕೆ
ಪರಿಮಳದುದಕವನೆರೆದವರಾರಯ್ಯಾ
ಇಂತೀ ಜಲವು ಒಂದೆ ನೆಲನು ಒಂದೆ ಆಕಾಶವು ಒಂದೆ
ಜನವು ಹಲವು ದ್ರವ್ಯಂಗಳ ಕೂಡಿ
ತನ್ನ ಪರಿಬೇರಾಗಿಹ ಹಾಗೆ
ಎನ್ನದೇವ ಚೆನ್ನಮಲ್ಲಿಕಾರ್ಜುನಯ್ಯನು
ಹಲವು ಜಗಂಗಳ ಕೂಡಿಕೊಂಡಿರ್ದಡೇನು
ತನ್ನ ಪರಿ ಬೇರೆ

೨೦೦
ಉಂಕೆಯ ನಿಗುಚಿ
ಸರಿಗೆಯ ಸಮಗೊಳಿಸಿ ಸಮಗಾಲನಿಕ್ಕಿ
ಅಣಿಯೇಳ ಮುಟ್ಟದೆ ಹಿಡಿದ ಲಾಳಿಯ ಮುಳ್ಳು
ಕಂಡಿಕೆಯ ನುಂಗಿತ್ತು
ಈ ಸೀರೆಯ ನೆಯ್ದವ ನಾನೊ ನೀನೋ ರಾಮನಾಥ