ಅಂಕ ಕಳನೇರಿ ಕೈಮರೆದಿರ್ದಡೆ
ಮಾರಂಕ ಬಂದಿರಿವುದ ಮಾಬನೆ
ನಿಮ್ಮ ನೆನಹ ಮತಿ ಮರೆದಿರ್ದಡೆ
ಪಾಪ ತನುಮಂಡಲೆವುದ ಮಾಬುದೆ
ಕೂಡಲ ಸಂಗಯ್ಯನ ನೆನೆದಡೆ
ಪಾಪ ಉರಿಗೊಡ್ಡಿದರಗಿನಂತೆ ಕರಗುವುದಯ್ಯಾ


ಅಂಕುರ ಪಲ್ಲವ ತರು ಕುಸುಮಫಲರಸಸಾರಾಯ ಇನಿತಿನಿತೆಲ್ಲಿದ್ದುದೊ
ಬೀಜ ಮೊಳೆದೋರದಂದು
ನಾಭಿಗಳೆಯದ ಪಶುವಿನ ಅಮೃತವೆಲ್ಲಿದ್ದುದೊ
ವೃಷಬ ಮುಟ್ಟದಂದು
ಘನಕುಚ ಯೌವನೆಯರ ರಜಪ್ರಶ್ನೆಯಲ್ಲಿ ಒದಗಿದ ಹಸುಗೂಸು
ಎಲ್ಲಿದ್ದುದೊ ಕೊಡಗೂಸು ಕನ್ಯೆಯಳಿಯದಂದು
ತ್ರಿಜಗದ ಉತ್ಪತ್ಯ ಸಚರಾಚರದ ಗಂಭೀರವೆಲ್ಲಿದ್ದುದೊ
ಶಿವನ ಅಷ್ಟತನುಮೂರ್ತಿಗಳಿಲ್ಲದಂದು
ಸಪ್ತಸ್ವರ ಭಾವನ್ನಕ್ಷರವೆಲ್ಲಿದ್ದುದೊ
ಜ್ಞಾನ ಉದಯಿಸದಂದು
ಶರಧಿಯೊಳಗಣ ರತ್ನವೆಲ್ಲಿದ್ದುದೊ
ಸ್ವಾತಿಯ ಸಲಿಲವೆರಗದಂದು
ಶರಣಪಥ ಲಿಂಗೈಕ್ಯವೆಲ್ಲಿದ್ದುದೊ
ಆರಾಧ್ಯ ಸರಳೇಶ್ವರದೇವರು ಕರುಣಿಸಿ ಕಣ್ದೆರೆದು ತೋರದಂದು


ಅಂಗಕ್ಕೆ ಬಡತನವಲ್ಲದೆ ಮನಕ್ಕೆ ಬಡತನವುಂಟೆ
ಬೆಟ್ಟ ಬಲ್ಲಿತ್ತೆಂದಡೆ ಉಳಿಯ ಮೊನೆಯಲ್ಲಿ
ಬಡತನವಿದ್ದಡೆ ಒಡೆಯದೆ
ಘನಶಿವಭಕ್ತರಿಗೆ ಬಡತನವಿಲ್ಲ
ಸತ್ಯರಿಗೆ ದುಷ್ಕರ್ಮವಿಲ್ಲ
ಎನಗೆ ಮಾರಯ್ಯಪ್ರಿಯ ಅಮಲೇಶ್ವರಲಿಂಗವುಳ್ಳನ್ನಕ್ಕ
ಆರ ಹಂಗಿಲ್ಲ ಮಾರಯ್ಯಾ


ಅಂಗಕ್ಕೊಂದು ಸುಗುಣ ದುರ್ಗಣ ಸೋಂಕುವಲ್ಲಿ
ಸೋಂಕಿದ ಕಲೆ ಅಂಗಕ್ಕೋ ಆತ್ಮಂಗೋ
ಅಂಗಕ್ಕೆಂದಡೆ ಚೇತನವಿಲ್ಲದೆ ಒಂದನೂ ಮುಟ್ಟದಾಗಿ
ಆತ್ಮಂಗೆಂದಡೆ ಒಂದು ಲಕ್ಷ್ಯದ ಮರೆಯಲಲ್ಲದೆ ಲಕ್ಷಿಸಿಕೊಳದು
ಇಂತೀ ಕಾಯವೂ ಆತ್ಮನೂ ಒಡಗೂಡಿ ಅರಿವಲ್ಲಿ.
ಆ ಅರಿವು ಲಿಂಗವನೊಡಗೂಡಿಯಲ್ಲದೆ ಬೇರೆ ಒಡಲುವಿಡಿಯದು
ಇಂತೀ ಅಂಗ ಆತ್ಮ ಲಿಂಗಮುರ್ತಿ ತ್ರಿವಿಧ ಸಂಗವಾದಲ್ಲದೆ
ಮುಂದಣ ಅರಿವಿನ ಕುರುಹು ನಿರಿಗೆಯಾಗದು
ಆ ನಿರಿಗೆಯ ಅಂಗ ಸುಸಂಗವಾದಲ್ಲಿ
ಭೋಗಬಂಕೇಶ್ವರಲಿಂಗವು ಅಂಗಸೋಂಕಿನಲ್ಲಿ ಅಡಗಿದ ತೆರ


ಅಂಗದ ಕಳವು ಕೈಯಲ್ಲಿದ್ದಂತೆ ಹಿಂಗುವದಕ್ಕೆ ನಾಲಿಗೆಯೇಕೊ
ಪರರಂಗವನರಿದು ಹೆರರಂಗದಲ್ಲಿ ಸಿಲ್ಕಿ ಭಂಗಿತನಾಗಲೇಕೊ
ನದಿಯೊಳಗೆ ಮುಳುಗಿ ತನ್ನೊಡವೆಯ ಸುದ್ದಿ ಯಾಕೊ
ಅದರ ವಿಧಿ ನಿಮಗಾಯಿತ್ತು ಬಿಡು ಕಡುಗಲಿತನವ
ನಿಃಕಳಂಕ ಮಲ್ಲಿಕಾರ್ಜುನಾ


ಅಂಗದ ಬೊಕ್ಕಸದ ಮಂದಿರಕ್ಕೆ
ಚಿದ್ಘನಲಿಂಗವೆಂಬುದೊಂದು ಬೀಗ
ತ್ರಿಗುಣವೆಂಬ ಮುರೆಸಳಿನ ಸಿಕ್ಕು
ಒಂದು ಪೂರ್ವಗತಿ
ಒಂದು ಮಧ್ಯಗತಿ
ಒಂದು ಉತ್ತರಗತಿಯಾಗಿ
ಸಿಕ್ಕದವು ಮೂರೆಸಳು
ಆ ಎಸಳೀಗೆ ಘಟ ಒಂದೆ ಒಡಲು
ಎಸಳ ತೆಗವುದಕ್ಕೆ ಕೈಯ ಕಾಣೆ
ಪ್ರತಿ ಕೈಗೆ ಎಸಳು ಅಸಾಧ್ಯ
ನೋಡಾ
ಇಂತೀ ಬೀಗದ ಗುಣವ
ಬಸವಣ್ಣಪ್ರಿಯ ನಾಗರೇಶ್ವರಲಿಂಗಾ
ನೀವೇ ಬಲ್ಲಿರಿ


ಅಂಗದ ಭಂಗವ ಲಿಂಗಮುಖದಿಂದ ಗೆಲಿದೆ
ಮನದ ಭಂಗವ ಅರುಹಿನ ಮುಖದಿಂದ ಗೆಲಿದೆ
ಜೀವದ ಭಂಗವ ಶಿವಾನುಭಾವದಿಂದ ಗೆಲಿದೆ
ಕರಣದ ಕತ್ತಲೆಯ ಬೆಳಗನುಟ್ಟು ಗೆಲಿದೆ
ಜವ್ವನದ ಹೊರಮಿಂಚಿನಲ್ಲಿ ನಿಮ್ಮ ಕಣ್ಣಿಂಗೆ ತೋರುವ
ಕಾಮನ ಸುಟ್ಟುರುಹಿದ ಭಸ್ಮವ ನೋಡಯ್ಯಾ
ಮನಸಿಜನ ತಲೆಯ ಬರಹವ ತೊಡೆದೆನು


ಅಂಗದಿಚ್ಛೆಗೆ ಮದ್ಯಮಾಂಸವ ತಿಂಬರು
ಕಂಗಳಿಚ್ಛೆಗೆ ಪರಮಧುವ ನೆರೆವರು
ಲಿಂಗಲಾಂಛನಧಾರಿಯಾದಲ್ಲಿ ಫಲವೇನು
ಲಿಂಗಪಥವ ತಪ್ಪಿ ನಡೆವವರು
ಜಂಗಮಮುಖದಿಂದ ನಿಂದೆ ಬಂದಡೆ
ಕೊಂಡ ಮಾರಿಂಗೆ ಹೋಹುದು ತಪ್ಪದು
ಕೂಡಲಸಂಗಮದೇವಾ


ಅಂಗವ ಮರೆದವಂಗೆ ಲಿಂಗದ ಹಂಗೇಕೊ
ಅರಿವ ಕಂಡವಂಗೆ ಕುರುಹಿನ ಹಂಗೇಕೊ
ತಾನು ತಾನಾದವಂಗೆ ಧ್ಯಾನದ ಹಂಗೇಕೊ
ಮನ ಮುಗ್ಧವಾದವಂಗೆ ಮಾನವರ ಹಂಗೇಕೊ
ಆಸೆಯನಳಿದವಂಗೆ ರೋಷದ ಹಂಗೇಕೊ
ಕಾಮನ ಸುಟ್ಟವಂಗೆ ಕಳವಳದ ಹಂಗೇಕೊ
ಬಯಲು ಬಯಲಾದವಂಗೆ ಭಾವದ ಹಂಗೇಕೊ
ತನ್ನ ಮರೆದು ನಿಮ್ಮನರಿದ ಶರಣಂಗೆ
ಅಲ್ಲಿಯೆ ಐಕ್ಯ ಕಂಡೆಯಾ ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ

೧೦
ಅಂಗವ ಲಿಂಗಮುಖದಲ್ಲಿ ಅರ್ಪಿಸಿ
ಅಂಗ ಅನಂಗವಾಯಿತ್ತು
ಮನವ ಅರಿವಿಂಗರ್ಪಿಸಿ ಮನ ಲಯವಾಯಿತ್ತು
ಭಾವವ ತೃಪ್ತಿಗರ್ಪಿಸಿ ಭಾವ ಬಯಲಾಯಿತ್ತು
ಅಂಗ ಮನ ಭಾವವಳಿದ ಕಾರಣ
ಕಾಯ ಅಕಾಯವಾಯಿತ್ತು
ಎನ್ನ ಕಾಯದ ಸುಖಭೋಗವ ಲಿಂಗವೆ ಭೋಗಿಸುವನಾಗಿ
ಶರಣಸತಿ ಲಿಂಗಪತಿಯಾದೆನು
ಇದು ಕಾರಣ ಚೆನ್ನಮಲ್ಲಿಕಾರ್ಜುನನೆಂಬ ಗಂಡನ
ಒಳಹೊಕ್ಕು ಬೆರಸಿದೆನು

೧೧
ಅಂಗವಿಕಾರ ಸಾಕೇಳಿ
ಬಹುವಿಡಂಗದ ಪ್ರಕೃತಿಯ ಮರದೇಳಿ
ನಿಮ್ಮ ಭಕ್ತಿಮುಕ್ತಿಯ ಲಿಂಗದ ಕೂಟವ ನೆನೆದೇಳಿ
ನಿಮ್ಮ ಗುರುವಾಜ್ಞೆಯ
ನಿಮ್ಮ ವಿರಕ್ತಿ ಅರಿವಿನ ಸಾವಧಾನವನರಿದೇಳಿ ಸಾರಿದೆ
ಎವೆ ಹಳಚಿದಡಿಲ್ಲ
ಶುದ್ಧಸಿದ್ಧಪ್ರಸಿದ್ಧಪ್ರಸನ್ನ ಕುರುಂಗೇಶ್ವರಲಿಂಗವ ಕೂಡಬಲ್ಲಡೆ

೧೨
ಅಂಗವೆ ಭೂಮಿಯಾಗಿ ಲಿಂಗವೆ ಬೆಳೆಯಾಗಿ
ವಿಶ್ವಾಸವೆಂಬ ಬತ್ತ ಒಲಿದು ಉಂಡು
ಸುಖಿಯಾಗಿರಬೇಕೆಂದ ಕಾಮಭೀಮ ಜೀವಧನದೊಡೆಯ

೧೩
ಅಂಗಸಂಗದಲ್ಲಿದ್ದು ಬಂದುದನೆ ಕಂಡು
ಹಾ(ಆ)ವು ಹಸು ಮಗುವಿನಂತೆ ಆದೆ ನೋಡವ್ವಾ
ಕಂಗಳ ನೋಟದ ಸುಖಕ್ಕೆ ಮನವನೊಪ್ಪಿಸುವೆ
ಪತಂಗದ ಬೆಸನಿಯಂತೆ ಆದೆ ನೋಡವ್ವಾ
ಮದಾಳಿಯ ನಾಸಿಕದಂತೆ ಸುಳಿದು ಸುಖಬಡುವೆ
ಮಹಾಲಿಂಗ ಗಜೇಶ್ವರಾ ನಿನ್ನ ವಿನಯ ನೋಡವ್ವಾ

೧೪
ಅಂಜಿದಡೆ ಮಾಣದು
ಅಳುಕಿದಡೆ ಮಾಣದು
ವಜ್ರಪಂಜರದೊಳಗಿದ್ದಡೆ ಮಾಣದು
ತಪ್ಪದುವೋ ಲಲಾಟಲಿಖಿತ
ಕಕ್ಕುಲತೆಗೆ ಬಂದಡೆ ಆಗದು ನೋಡಾ
ಧೃತಿಗೆಟ್ಟು ಮನ ಧಾತುಗೆಟ್ಟಡೆ
ಅಪ್ಪುದು ತಪ್ಪದು ಕೂಡಲಸಂಗಮದೇವಾ

೧೫
ಅಂತರಂಗ ಸನ್ನಹಿತ ಬಹಿರಂಗ ನಿಶ್ಚಿಂತವೋ
ಅಯ್ಯ
ತನು ತನ್ನ ಸುಖ ಮನ ಪರಮಸುಖವೋ
ಅದು ಕಾರಣ ಕಾಯ ವಾಯವೋ
ಗುಹೇಶ್ವರ ನಿರಾಳವೋ
ಅಯ್ಯ

೧೬
ಅಂತರಂಗದ ಅರಿವು ಬಹಿರಂಗದ ಕ್ರಿಯೆ
ಈ ಉಭಯಸಂಪುಟ ಒಂದಾದ ಶರಣಂಗೆ
ಹಿಂಗಿತ್ತು ತನುಸೂತಕ ಹಿಂಗಿತ್ತು ಮನಸೂತಕ
ಕೂಡಲಚೆನ್ನಸಂಗಯ್ಯಲ್ಲಿ
ಸಂಗವಾದುದು ಸರ್ವೇಂದ್ರಿಯ

೧೭
ಅಂತರಂಗದ ಭಕ್ತಿ ಹಾದರಗಿತ್ತಿಯ ತೆರನಂತೆ
ಬಹಿರಂಗದ ಭಕ್ತಿ ವೇಶಿಯ ತೆರನಂತೆ
ಅಂತರಂಗವೂ ಇಲ್ಲ ಬಹಿರಂಗವೂ ಇಲ್ಲ
ಶರಣನ ನಿಲವು ಬೇರೆ ಕೂಡಲಚೆನ್ನಸಂಗಾ
ನಿಮ್ಮ ಶರಣನ ಪರಿ ಬೇರೆ

೧೮
ಅಂದಂದಿನ ಮಾತ ಅಂದಂದಿಂಗೆ ಅರಿಯಬಾರದು”
ಹಿಂದೆ ಹೋದ ಯುಗಪ್ರಳಯಂಗಳ ಬಲ್ಲವರಾರಯ್ಯ
ಮುಂದೆ ಬಪ್ಪ ಯುಗಪ್ರಳಯಂಗಳ ಬಲ್ಲವರಾರಯ್ಯ
ಬಸವಣ್ಣನು ಆದಿಯಲ್ಲಿ ಲಿಂಗ ಶರಣನೆಂಬುವ ಭೇದಿಸಿ ನೋಡಿ
ಅರಿವರಿನ್ನಾರಯ್ಯ
[ಲಿಂಗ ಜಂಗಮ ಪ್ರಸಾದದ ಮಹಾತ್ಮೆಗೆ ಬಸವಣ್ಣನೆ
ಆದಿಯಾದನೆಂಬುದನರಿದ ಸ್ವಯಂಭುಜ್ಞಾನಿ]
ಗುಹೇಶ್ವರಲಿಂಗದಲ್ಲಿ [ಚೆನ್ನಬಸವಣ್ಣನೊಬ್ಬನೆ]

೧೯
ಅಂದಣವನೇರಿದ ಸೊಣಗನಂತೆ
ಕಂಡಡೆ ಬಿಡದು ನೋಡಾ ತನ್ನ ಮುನ್ನಿನ ಸ್ವಭಾವವನು
ಸುಡು ಸುಡು ಮನವಿದು ವಿಷಯಕ್ಕೆ ಹರಿವುದು
ಮೃಡ ನಿಮ್ಮನನುದಿನ ನೆನೆಯಲೀಯದು
ಎನ್ನೊಡೆಯ ಕೂಡಲಸಂಗಮದೇವಾ
ನಿಮ್ಮ ಚರಣವ ನೆನೆವಂತೆ ಕರುಣಿಸು
ಸೆರಗೊಡ್ಡಿ ಬೇಡುವೆ ನಿಮ್ಮ ಧರ್ಮ

೨೦
ಅಂದಿನವರು ಇಂದಿನವರು ಎಂಬ ಸಂದೇಹಿಗಳಿಗೆ
ಸಂದೇಹ ಮುಂದುಗೊಮಡಿಪ್ಪುದು
ನೋಡ
ಅಂದೊಂದು ಪರಿ ಇಂದೊಂದು ಪರಿಯೆ
ಗುರುಲಿಂಗಜಂಗಮ ಅಂದೊಂದು ಪರಿ ಇಂದೊಂದು ಪರಿಯೆ
ಪಾದೋದಕ ಪ್ರಸಾದ ಅಂದೊಂದು ಪರಿ ಇಂದೊಂದು ಪರಿಯೆ
ಶರಣಲಿಂಗಸಂಬಂಧ ಅಂದೊಂದು ಪರಿ ಇಂದೊಂದು ಪರಿಯೆ
ಅರಿವು ಆಚರಣೆ ಅಂದೊಂದು ಪರಿ ಇಂದೊಂದು ಪರಿಯೆ
ಸ್ಥಲಕುಳಂಗಳು ಅಂದೊಂದು ಪರಿ ಇಂದೊಂದು ಪರಿಯೆ
ಸೌರಾಷ್ಟ್ರ ಸೋಮೇಶ್ವರಲಿಂಗವು ಅಂದೊಂದು ಪರಿ
ಇಂದೊಂದು ಪರಿಯೆ

೨೧
ಅಂದಿನವರು ನಡೆದ ದಾರಿ ಇಂದಿನವರು ನಡೆಯರು
ಇಂದಿನವರು ನಡೆದ ದಾರಿ ಅಂದಿನವರು ಕಾಣರು
ಅಂದಿಂದೆಂಬ ದ್ವಂದ್ವ ಭೇದವನೆಂದೆಂದು ಕಾಣೆ ನೋಡ
ಕಪಿಲಸಿದ್ಧಮಲ್ಲಿಕಾರ್ಜುನಾ

೨೨
ಅಂಧಕನ ಕೈಯ ಅಂಧಕ ಹಿಡಿದಂತಿರಬೇಕು
ಮೂಗನ ಕೈಯಲ್ಲಿ ಕಾವ್ಯವ ಕೇಳಿದಂತಿರಬೇಕು
ದರ್ಪಣದೊಳಗಣ ಪ್ರತಿಬಿಂಬದಂತೆ
ಹಿಡಿವರಿಗಳವಲ್ಲದಿರಬೇಕು ಅಣ್ಣಾ
ಕೂರ್ಮನ ಶಿಶುವಿನ ಸ್ನೇಹದಂತೆ ಇರಲೊಲ್ಲದೆ
ಆರೂಢಗೆಟ್ಟೆಯೊ ಅಜಗಣ್ಣಾ

೨೩
ಅಂಬಿಗನು ಜಗದೊಳಗೆ ಇಂಬಿಲೋಲಾಡುವನು
ತುಂಬಿದ ಸಾಗರದೊಳಗೆ ನೋಡಯ್ಯ
ನಿಂದ ದೋಣಿಯನೇರಿದಂದಿನ ಹುಟ್ಟ
ಕಂಡವರಂದವನರಿದಾತ ತೊಳಸುತ್ತಿದ್ದನು
ಛಂದಗೆಟ್ಟವರೆಲ್ಲಾ ಬಂದೇರಿ ದೋಣಿಯನು
ಶಿವನೊಂದೆ ಠಾವಿಗೊಯ್ದಿಳುಹುವೆನೆಂದನಂಬಿಗ ಚೌಡಯ್ಯ

೨೪
ಅಂಬಿನ ಹಿಳಿಕಿನಲ್ಲಿ ಕಟ್ಟಿದ ವಿಹಂಗನ ಗರಿಯಂತೆ
ತಾಗುವ ಮೊನೆಗಾಧಾರವಾಗಿ
ದೂರ ಎಯಿದುವುದಕ್ಕೆ ಸಾಗಿಸುವ ಗುಣ ತಾನಾಗಿ
ಕ್ರೀ ಅರಿವಿನ ಭೇದದ ನೆರಿಗೆಯ ಕಾಬನ್ನಕ್ಕ
ಅರಿವು ಕುರುಹು ಎರಡು ಬೇಕೆಂದನಂಬಿಗ ಚೌಡಯ್ಯ

೨೫
ಅಂಬುವಿಲ್ಲದಿರ್ದದೆ ಅಂಬುಜವನಾರು ಬಲ್ಲರು
ನೀರಿಲ್ಲದಿರ್ದಡೆ ಹಲನಾರು ಬಲ್ಲರು
ನಾನಿಲ್ಲದಿರ್ಡಡೆ ನಿನ್ನನಾರು ಬಲ್ಲರು
ನಿನಗೆ ನಾ ನನಗೆ ನೀ
ನಿನಗೂ ನನಗೂ ಬೇರೊಂದು ನಿಜವುಂಟೆ
ನಿಃಕಳಂಕ ಮಲ್ಲಿಕಾರ್ಜುನಾ