೨೦೧
ಉಂಟೆಂಬಲ್ಲಿಯೆ ಜ್ಞಾನಕ್ಕೆ ದೂರ
ಇಲ್ಲಾ ಎಂಬಲ್ಲಿಯೆ ಸಮಯಕ್ಕೆ ದೂರ
ತನುವಿಗೆ ಬಂದ ಪ್ರಾಪ್ತಿಯ ಅನುಭವಿಸುವುದಕ್ಕೆ ಒಡಲಾಗಯಿತ್ತು
ಪ್ರಾಪ್ತಿಯನುಂಬುದು ಘಟವೋ ಆತ್ಮನೋ
ಒಂದನಹುದು ಒಂದನಲ್ಲಾ ಎನಬಾರದು
ಇಲ್ಲಾ ಎಂದಡೆ ಕ್ರೀವಂತರಿಗೆ ಭಿನ್ನ
ಅಹುದೆಂದಡೆ ಅರಿದಾತಂಗೆ ವಿರೋಧ
ತೆರಪಿಲ್ಲದ ಘನವ ಉಪಮಿಸಲಿಲ್ಲ
ಕಾಮಧೂಮ ಧೂಳೇಶ್ವರನ ಮುಂದೆ ಹೋಗಲಿಲ್ಲ
ಹಿಂದೆ ಉಳಿಯಲಿಲ್ಲ

೨೦೨
ಉಂಟೆಂಬುದು ಭಾವದ ನೆಮ್ಮುಗೆ
ಇಲ್ಲಾ ಎಂಬುದು ಚಿತ್ತದ ಪ್ರಕೃತಿ
ಉಭಯನಾಮ ನಷ್ಟವಾಗಿ ನಿಂದುಳುಮೆ
ಐಘಟದೂರ ರಾಮೇಶ್ವರಲಿಂಗ ಇಕ್ಕಿದ ಗೊತ್ತು

೨೦೩
ಉಂಬ ತಳಿಗೆಯ ಬೆಳಗಿದಡೆ
ನೊಂದಿತ್ತೆ ನನ್ನ ಬೆಳಗಿದರೆಂದು
ಬೆಂದ ಮಸಿಯ ತೊಳೆದಡೆ
ನೊಂದಿತ್ತೆ ಎನ್ನ ಹೊರೆಯನೆತ್ತಿದರೆಂದು
ಅಂದಮಂದದರಂದವ ನುಡಿದಡೆ ನೊಂದು ಬೇಯಲೇಕೆ
ಅವರು ನೊಂದರೂ ನೋಯಲಿ
ಹಿಂಗಬೇಕೆಂದೆ ನಿಃಕಳಂಕ ಮಲ್ಲಿಕಾರ್ಜುನಾ

೨೦೪
ಉಂಬ ಬಟ್ಟಲು ಬೇರೆ ಕಂಚಲ್ಲ
ನೋಡುವ ದರ್ಪಣ ಬೇರೆ ಕಂಚಲ್ಲ
ಭಾಂಡ ಒಂದೆ ಭಾಜನ ಒಂದೆ
ಬೆಳಗೆ ಕನ್ನಡಿಯೆನಿಸಿತ್ತಯ್ಯಾ
ಅರಿದಡೆ ಶರಣ ಮರೆದಡೆ ಮಾನವ
ಮರೆಯದೆ ಪೂಜಿಸು ಕೂಡಲಸಂಗನ

೨೦೫
ಉಂಬವರೆಲ್ಲ ಒಂದೇ ಪರಿಯೆ
ತಮ್ಮ ತಮ್ಮ ಬಾಯಿಚ್ಛೆಯಲ್ಲದೆ
ಇಕ್ಕುವರಂದಕ್ಕೆ ಉಂಡಡೆ
ತನಗೇ ಸಿಕ್ಕೆಂದೆ ಮಾರೇಶ್ವರಾ

೨೦೬
ಉಂಬಾಗಳಿಲ್ಲೆನ್ನ ಉಡುವಾಗಳಿಲ್ಲೆನ್ನ
ಬಂಧುಗಳು ಬಂದಾಗಳಿಲ್ಲೆನ್ನ
ಲಿಂಗಕ್ಕೆ ಇಲ್ಲೆಂಬ
ಜಂಗಮಕ್ಕೆ ಇಲ್ಲೆಂಬ
ಬಂದ ಪುರಾತರಿಗೆ ಇಲ್ಲೆಂಬ
ಸಾವಾಗ ದೇಹವ ದೇಗುಲಕ್ಕೆ ಒಯ್ಯೆಂಬ
ದೇವರಿಗೆ ಹೆಣ ಬಿಟ್ಟಿ ಹೇಳಿತ್ತೆ ಕೂಡಲಸಂಗಮದೇವಾ

೨೦೭
ಉಂಬುದು ಉಡುವುದು ಶಿವಾಚಾರ
ಕೊಂಬುದು ಕೊಡುವುದು ಕುಲಾಚಾರ
ಎಂಬ ಅನಾಚಾರಿಯ ಮಾತ ಕೇಳಲಾಗದು
ವಿಪ್ರ ಮೊದಲು ಅಂತ್ಯಜ ಕಡೆಯಾಗಿ ಶಿವಭಕ್ತರ ಒಂದೆ
ಎಂದು ಕೊಟ್ಟು ಕೊಂಬುದು ಸದಾಚಾರ
ಉಳಿದುದೆಲ್ಲ ಅನಾಚಾರ
ಅದೆಂತೆಂದಡೆ
ಸ್ಫಟಿಕದ ಕೊಡದಲ್ಲಿ ಕಾಳಿಕೆಯನರಸುವ ಹಾಗೆ
ಸಿಹಿಯೊಳಗೆ ಕಹಿಯನರಸುವ ಹಾಗೆ
ರಜಸ್ಸೂತಕ ಕುಲಸೂತಕ ಜನನಸೂತಕ ಪ್ರೇತಸೂತಕ
ಉಚ್ಛಿಷ್ಟಸೂತಕ
ಎಂದಡೆ ಆತಂಗೆ ಗುರುವಿಲ್ಲ ಲಿಂಗವಿಲ್ಲ ಜಂಗಮವಿಲ್ಲ
ತೀರ್ಥಪ್ರಸಾದವಿಲ್ಲ
ಇಂತೀ ಪಂಚಚೂತಕವ ಕಳೆದಲ್ಲದೆ ಭಕ್ತನಾಗ
ಇಂತಹ ಭಕ್ತರಲ್ಲಿ ಕೊಟ್ಟುಕೊಂಬುದು ಸದಾಚಾರ
ಕೂಡಲಚೆನ್ನಸಂಗಮದೇವಾ

೨೦೮
ಉಣಲೆಂದು ಬಂದ ಸುಖ ಉಂಡಲ್ಲದೆ ಹರಿಯದು
ಕಾಣಲೆಂದು ಬಂದ ದುಃಖ ಕಂಡಲ್ಲದೆ ಹರಿಯದು
ತನುವಿಂಗೆ ಬಂದ ಕರ್ಮ ಹರಿವ ಕಾಲಕ್ಕೆ
ಚೆನ್ನಮಲ್ಲಿಕಾರ್ಜುನದೇವರು ಕಡೆಗಣ್ಣಿನಿಂದ ನೋಡಿದರು

೨೦೯
ಉತ್ತಮಕುಲದಲ್ಲಿ ಹುಟ್ಟಿದೆನೆಂಬ
ಕಷ್ಟತನದ ಹೊರೆಯ ಹೊರಿಸದಿರಯ್ಯಾ
ಕಕ್ಕಯ್ಯನೊಕ್ಕುದನಿಕ್ಕ ನೋಡಯ್ಯಾ
ದಾಸಯ್ಯ ಶಿವದಾನವನೆರೆಯ ನೋಡಯ್ಯಾ
ಮನ್ನಣೆಯ ಚೆನ್ನಯ್ಯನೆನ್ನುವ ಮನ್ನಿಸ
ಉನ್ನತ ಮಹಿಮ
ಕೂಡಲಸಂಗಮದೇವಾ
ಶಿವಧೋ ಶಿವಧೋ

೨೧೦
ಉತ್ತಮತೇಜಿಗೆ ಚಬುಕಿನಲ್ಲಿ ತೆಗೆವರುಂಟೆ
ಪಟ್ಟಣಕ್ಕೆ ಒಡೆಯನಾದ ಬಳಿಕ ಜಾತಿಗೋತ್ರವನರಸಲುಂಟೆ
ಪರಮಸುಜ್ಞಾನಿಗೆ ಪ್ರಾಣದ ಹಂಗುಂಟೆ
ಲಿಂಗವನಪ್ಪಿದ ಶರಣನ ಕಂಡಕಂಡವರು ಜರಿದಡೆ ಸಂದೇಹವುಂಟೆ
ಇಹಲೋಕದವರು ಜರಿದರೆಂದು ವಿಪರೀತಗೊಳಲೇಕೆ
ಅಮುಗೇಶ್ವರಲಿಂಗವನರಿದ ಶರಣಂಗೆ
ಆರು ಹರಿಸಿದಡೇನು ಆರು ಹರಿದಡೇನು

೨೧೧
ಉತ್ತರಾಪಥದ ಮೇಲೆ ಮೇಘ ವರ್ಷ ಕರೆಯಲು
ಆದೇಶದಲ್ಲಿ ಬರನಾಯಿತ್ತು
ಆ ದೇಶದ ಪ್ರಾಣಿಗಳೆಲ್ಲರೂ ಮೃತರಾದರು
ಅವರ ಸುಟ್ಟು ರುದ್ರಭೂಮಿಯಲ್ಲಿ ನಾ ನಿಮ್ಮನರಸುವೆ ಗುಹೇಶ್ವರ

೨೧೨
ಉದಕ ನಿಂದಲ್ಲಿ ಪ್ರತಿಬಿಂಬ ನಿಶ್ಚಯವಾಯಿತ್ತು
ಆ ಜಲ ಸಂಚಾರದಿಂದ ಕದಲೆ ಮತ್ತೆ
ಪ್ರತಿರೂಪಿಂಗೆ ಎಡೆಯುಂಟೆ
ಚಿತ್ತ ಸಂಚಾರಿಸುವಲ್ಲಿ
ಕುರುಹಿನ ಗೊತ್ತಿಗೆ ಒಡೆತನವುಂಟೆ
ಇಂತೀ ಉಭಯದ ಸಕೀಲ ನಿಂದು ಕಳೆ ಬೆಳಗುತ್ತದೆ
ಸದಾಶಿವಮೂರ್ತಿಲಿಂಗದಲ್ಲಿ

೨೧೩
ಉದಕದೊಳಗೆ ಬಯ್ಚಿಟ್ಟ ಬಯ್ಕೆಯ ಕಿಚ್ಚಿನಂತಿದ್ದಿತ್ತು
ಸಸಿಯೊಳಗಣ ರಸದ ರುಚಿಯಂತಿದ್ದಿತ್ತು
ನನೆಯೊಳಗಣ ಪರಿಮಳದಂತಿದ್ದಿತ್ತು
ನನೆಯೊಳಗಣ ಪರಿಮಳದಂತಿದ್ದಿತ್ತು
ಕೂಡಲಸಂಗಮದೇವ
ಕನ್ನೆಯ ಸ್ನೇಹದಂತಿದ್ದಿತ್ತು

೨೧೪
ಉದಯದಲ್ಲಿ ಬ್ರಹ್ಮನ ಕಾವೆ
ಮಧ್ಯಾಹ್ನಕ್ಕೆ ವಿಷ್ಣುವ ಕಾವೆ
ಅಸ್ತಮಯದಲ್ಲಿ ರುದ್ದರನ ಕಾವೆ
ಕತ್ತಲೆಯಾದ ಮತ್ತೆ ತಮ್ಮ ತಮ್ಮ ಮಂದೆಗೆ ಹೊಡೆದು
ಈ ಕಾವ ಕಟ್ಟಿಗೆಯ ಇನ್ನೆಂದಿಗೆ ಬಿಡುವೆ
ಗೋಪತಿನಾಥ ವಿಶ್ವೇಶ್ವರಲಿಂಗವು ನಷ್ಟವಹನ್ನಕ್ಕ
ಎನ್ನ ಕೈಯ ಕಟ್ಟಿಗೆ ಬಿಡದು

೨೧೫
ಉದಯವಾಯಿತ್ತ ಕಂಡು
ಉದರಕ್ಕೆ ಕುದಿವರಯ್ಯ
ಕತ್ತಲೆಯಾಯಿತ್ತ ಕಂಡು
ಮಜ್ಜನಕ್ಕೆರೆವರಯ್ಯ
ಲಿಂಗಕ್ಕೆ ನೇಮವಿಲ್ಲ
ಇರುಳಿಗೊಂದು ನೇಮ
ಹಗಲಿಗೊಂದು ನೇಮ
ಲಿಂಗಕ್ಕೆ ನೇಮವಿಲ್ಲ
ಕಾಯವೊಂದಸೆ ಜೀವವೊಂದಸೆ
ಗುಹೇಶ್ವರನೆಂಬ ಲಿಂಗವು
ತಾನೊಂದೆಸೆ

೨೧೬
ಉದರವ ತಾಗಿದ ಮಾತು
ಅಧರದಲ್ಲಿ ಬೀಸರವೋದೀತೆಂದು
ಅಧರವ ಮುಚ್ಚಿಕೊಂಡಿರ್ದಳವ್ವೆ
ಕಂಗಳ ಮುಚ್ಚಿಕೊಂಡಿರ್ದಳವ್ವೆ
ಪರಿಮಳ ಬೀಸರವೋದೀತೆಂದು
ಅಳಿಗೆ ಬುದ್ಧಿಯ ಹೇಳಿದಳವ್ವೆ
ಮನ ಬೀಸರವೋದೀತೆಂದು
ದಿನಕರನ ಕಾವಲಕೊಟ್ಟಳವ್ವೆ
ಇಂದು ನಮ್ಮ ಮಹಾಲಿಂಗ ಗಜೇಶ್ವರನ ನೆರೆವ ಭರದಿಂದ

೨೧೭
ಉಪಚಾರದ ಗುರುವಿಂಗೆ
ಉಪಚಾರದ ಶಿಷ್ಯ
ಉಪಚಾರದ ಲಿಂಗ
ಉಪಚಾರದ ಜಂಗಮ
ಉಪಚಾರದ ಪ್ರಸಾದವ ಕೊಂಡು
ಗುರುವಿಂಗೆ ಭವದ ಲೆಂಕನಾಗಿ
ಅಂಧಕರ ಕೈಯ ಅಂಧಕ ಹಿಡಿದಂತೆ
ಇವರಿಬ್ಬರು ಹೊಲುಬುಗೆಟ್ಟರು ಕಾಣಾ ಗುಹೇಶ್ವರ

೨೧೮
ಉರಕ್ಕೆ ಜವ್ವನಗಳು ಬಾರದ ಮುನ್ನ
ಮನಕ್ಕೆ ನಾಚಿಕೆಗಳು ತೋರದ ಮುನ್ನ
ನಮ್ಮವರಂದೆ ಮದುವೆಯ ಮಾಡಿದರು
ಸಿರಿಶೈಲ ಚನ್ನಮಲ್ಲಿಕಾರ್ಜುನಂಗೆ
ಹೆಂಗೂಸೆಂಬ ಭಾವ ತೋರದ ಮುನ್ನ
ನಮ್ಮವರಂದೆ ಮದುವೆಯ ಮಾಡಿದರು

೨೧೯
ಉರವಣಿಸುವ ಮನ ಮುಟ್ಟುವನ್ನಕ್ಕ ಕಾಡುವುದು
ಘನಘನದಲ್ಲಿ ಮನ ನಂಬುವನ್ನಕ್ಕ ಕಾಡುವುದು
ಮಹಂತ ಸರಳೇಶ್ವರನೆಂಬ ಶಬ್ದವುಳ್ಳನ್ನಕ್ಕ ಕಾಡುವುದು

೨೨೦
ಉರಿ ಕುಡಿದ ಎಣ್ಣೆಯಂತೆ
ತಾರಕ ಕೊಂಡ ವಾರಿಯಂತೆ
ಯಾತನೆ ಕೊಂಡ ವ್ಯಾಪ್ತಿಯಂತೆ
ಮಹಾರ್ಣವ ಕೊಂಡ ಮಣ್ಣಿನಂತೆ
ಭಾವರೂಪು ಕ್ರೀಯಲ್ಲಿ ಅಡಗಿ
ಆ ಕ್ರೀ ಉರಿಕರ್ಪುರದಂತೆ ಉಭಯನಾಮವಡಗಿ
ಏಣಾಂಕಧರ ಸೋಮೇಶ್ವರಲಿಂಗದಲ್ಲಿ
ಸುಳುಹುದೋರದಿದ್ದಿತ್ತು

೨೨೧
ಉರಿತಾಗಿದ ಮೃಗ ಒಂದಡಿಯಿಡುವುದೆ
ತನುತಾಗಿದ ಸುಖವಗಲುವುದೆ
ಕೂಡಲಚೆನ್ನಸಂಗನ ಶರಣರನುಭಾವವರಿದ ಬಳಿಕ
ಮತ್ತೆ ಮರಳೆನು

೨೨೨
ಉಲಿವ ಉಯ್ಯಲೆಯ ಹರಿದುಬಂದೇರಲು
ತಾಗದೆ ತೂಗುವುದು ಭವಸಾಗರ ಮರಳಿ ಬಾರದಂತೆ
ಹಂಸೆಯ ಮೇಲೆ ತುಂಬಿ ಕುಳ್ಳಿದ್ದು ಸ್ವರಗೆಯ್ವ ಘೋಷವದೇನೋ
ಆತನಿದ್ದ ಸರ ಹರಿಯದೆ ಇದ್ದಿತ್ತು
ದೇಹಿಗಳೆಲ್ಲ ಅರಿವರೆ
ಗುಹೇಶ್ವರನ ಆಹಾರಮುಖವ

೨೨೩
ಉಲಿವ ಮರದ ಪಕ್ಷಿಯಂತೆ ದೆಸೆದೆಸೆಯನಾಲಿಸುತ್ತಿದ್ದೆ
ಅರಿವರಿಲ್ಲ ಅರಿವರಿಲ್ಲ
ಅರಿದು ಮರೆಯಿತ್ತಯ್ಯ
ಮಡುವಿನೊಳಗೆ ಬಿದ್ದ ಆಲಿಕಲ್ಲಿನಂತೆ
ತಾನಿದ್ದನು ಗುಹೇಶ್ವರಯ್ಯನು

೨೨೪
ಉಲುಹಿನ ವೃಕ್ಷದ ನೆಳಲಡಿಯಲಿದ್ದು
ಗಲಭೆಯನೊಲ್ಲೆನೆಂಬ ಪರಿಯೆಂತಯ್ಯ
ಪಟ್ಟದ ರಾಣಿಯ ಮುಖವ ಮುದ್ರೆಯನಿಕ್ಕಿ
ಮೆಟ್ಟಿ ನಡೆವ ಸತಿಯ ನೆತ್ತಿಯ ಮೇಲೆ
ನಿಲುವ ಪರಿ ಎಂತಯ್ಯ
ಆದಿಯ ಹೆಂಡತಿಯನುಲ್ಲಂಘಿಸಿದ ಕಾರಣ
ಮೇದಿನಿಯ ಮೇಲೆ ನಿಲಬಾರದು
ಸಾಧಕರೆಲ್ಲರು ಮರುಳಾದುದ ಕಂಡು
ನಾಚಿ ನಗುತ್ತಿದ್ದೆನು ಗುಹೇಶ್ವರ

೨೨೫
ಉಸುರಿನ ಪರಿಮಳವಿರಲು
ಕುಸುಮದ ಹಂಗೇಕಯ್ಯಾ
ಕ್ಷಮೆ ದಮೆ ಶಾಂತಿ ಸೈರಣೆಯಿರಲು
ಸಮಾಧಿಯ ಹಂಗೇಕಯ್ಯಾ
ಲೋಕವೆ ತಾನಾದ ಬಳಿಕ
ಏಕಾಂತದ ಹಂಗೇಕಯ್ಯಾ
ಚನ್ನಮಲ್ಲಿಕಾರ್ಜುನಾ