೨೨೬
ಉಳ್ಳವರು ಶಿವಾಲಯ ಮಾಡಿಹರು
ನಾನೇನ ಮಾಡುವೆ ಬಡವನಯ್ಯಾ
ಎನ್ನ ಕಾಲೇ ಕಂಬ ದೇಹವೇ ದೇಗುಲ
ಶಿರವೆ ಹೊನ್ನ ಕಲಶವಯ್ಯಾ
ಕೂಡಲಸಂಗಮದೇವಾ ಕೇಳಯ್ಯಾ
ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ

೨೨೭
ಉಳ್ಳುದೊಂದು ತನು
ಉಳ್ಳುದೊಂದು ಮನ
ನಾನಿನ್ನಾವ ಮನದಲ್ಲಿ ಧ್ಯಾನವ ಮಾಡುವೆನಯ್ಯಾ
ಸಂಸಾರವನಾವ ಮನದಲ್ಲಿ ತಲ್ಲೀಯವಾಹೆನಯ್ಯಾ
ಅಕಟಕಟಾ ಕೆಟ್ಟೆ ಕೆಟ್ಟೆ
ಸಂಸಾರಕ್ಕಲ್ಲಾ ಪರಮಾರ್ಥಕ್ಕಲ್ಲಾ
ಎರಡಕ್ಕೆ ಬಿಟ್ಟ ಕರುವಿನಂತೆ
ಬಿಲ್ವ ಬೆಳವಲಕಾಯನೊಂದಾಗಿ ಹಿಡಿಯಬಹುದೆ
ಚೆನ್ನಮಲ್ಲಿಕಾರ್ಜುನಾ

೨೨೮
ಊಡಿದರುಣ್ಣದು ಒಡನೆ ಮಾತಾಡದು
ನೋಡದು ನುಡಿಯದು ಬೇಡದು ಕಾಡದು
ಕಾಡಬೆರಣಿಯ ಕೈಯಲ್ಲಿಕೊಟ್ಟು
ಹೇಳದೆ ಹೋದೆಯೋ ಮಾರೇಶ್ವರಾ

೨೨೯
ಊರ ಮಾಡುವನ ಭಕ್ತಿ
ಚೂರದ ಹೊಲನಂತೆ
ದೂರದಿಂದ ಬಂದು
ಅದು ನಿಂದು
ಮುಂದೆ ಸಾಗರವಾಗಲರಿಯದು
ರಾಮನಾಥ

೨೩೦
ಊರ ಹೊರಗಣ ಹೊಲೆಯರ ಮನೆಯಲ್ಲಿ ಈರೈದು ಮಗ್ಗ
ಆ ಮಗ್ಗಕ್ಕೆ ಒಬ್ಬನೆ ಹಾರುವ ನೈವಾತ
ಆ ಮಗ್ಗದೊಳಗಿದ್ದು ಸುಂಕಕಂಜಿ ಹೊಲೆಯನಾದ
ಬಂಕೇಶ್ವರಲಿಂಗವನರಿಯದೆ

೨೩೧
ಊರವಂಕದ ಹೊರಗಿದ್ದು ಮನೆಯ ಬಾಗಿಲ ಕಾಣಿನೆಂದು ಅರಸುವನಂತೆ
ಇದಿರಿನಲ್ಲಿ ತೋರುವ ಕುರುಹ ಮರದು
ಅರಿವನೊಳಕೊಂಡೆನೆಂಬುವನಂತೆ
ಜಂಬುಕ ಶಸ್ತ್ರದ ಫಳವ ನುಂಗಿ ಜಂಬೂದ್ವೀಪವೆಲ್ಲಾ
ಪ್ರಳಯವಾಯಿತ್ತು ಎಂದಡೆ ಅದು ಚಂದವೇ
ಜಾಂಬೇಶ್ವರಾ

೨೩೨
ಊರಿಸೀರೆಗೆ ಅಗಸ ತಡಬಡಿವಡದಂತೆ
ಹೊನ್ನೆನ್ನದು
ಹೆಣ್ಣೆನ್ನದು
ಮಣ್ಣೆನ್ನದು
ಎಂದು ಮರುಳಾದೆ
ನಿಮ್ಮನರಿಯದ ಕಾರಣ
ಕೆಮ್ಮನೆ ಕೆಟ್ಟೆ ಕೂಡಲಸಂಗಮದೇವಾ

೨೩೩
ಊರಿಗೆ ಹೊಸಬರು ಬಂದರೆ
ಪುರದೊಳಗಣ ಸ್ವಾನ ನೋಡಿ ಬಗುಳದೆ ಸುಮ್ಮನೆ ಬಿಡುವುದೆ
ಊರಿಗೆ ಹೊರಗಾದ ಶರಣರು ಊರುಗಳ ಮಧ್ಯದೊಳಿರಲು
ದೂಷಕರು ದೂಷಿಸದಿಪ್ಪರೇ ಅಯ್ಯ
ದೂಷಕರ ಧೂಮಕೇತುಗಳು ನಿಮ್ಮ ಶರಣರು
ಕೂಡಲಸಂಗಮದೇವಾ

೨೩೪
ಊರಿಗೆ ಹೋಹಾತ ದಾರಿಯ ಭಯಂಗಳನರಿದು
ಆರೈಕೆಯಿಂದ ಹೋಗಬೇಕು
ಕುರಿತ ಕುರುಹ ಹಿಡಿವನ್ನಕ್ಕ
ಭೇದ ವಿವರವ ಸೋಧಿಸಬೇಕು
ಸೋಧಿಸಿ ಸ್ವಸ್ಥವಾಗಿ ನಿಜನಿಂದಲ್ಲಿ
ಉಭಯದ ಕುರುಹು ಅನಾದಿಯಲ್ಲಿ ಅಡಗಿತ್ತು
ಅಡಗಿದ ಮತ್ತೆ ವೀರಶೂರ ರಾಮೇಶ್ವರಲಿಂಗವ ಕುರುಹಿಡಲಿಲ್ಲ

೨೩೫
ಊರಿಗೊಕ್ಕಲಹ ಹೆಂಡತಿಗೆ ಗಂಡನಹ
ಮಕ್ಕಳಿಗೆ ತಂದೆಯಹ ಮಸಣಕ್ಕೆ ಹೆಣನಹ
ಸಕಳೇಶ್ವರದೇವಾ ನಿಮ್ಮ ಶರಣನ ಪರಿ ಬೇರೆ

೨೩೬
ಊರು ಕೆಟ್ಟು ಸೂರೆಯಾಡುವಲ್ಲಿ ಆರಿಗಾರೂ ಇಲ್ಲ
ಬಸವಣ್ಣ ಸಂಗಮಕ್ಕೆ
ಚನ್ನಬಸವಣ್ಣ ಉಳುವೆಗೆ
ಪ್ರಭು ಕದಳಿಗೆ
ಮಿಕ್ಕಾದ ಪ್ರಮಥರೆಲ್ಲರೂ ತಮ್ಮ ತಮ್ಮ ಲಕ್ಷ್ಯ ಭಾವಕ್ಕೆ
ಮುಕ್ತಿಯನೆಯ್ದಿಹರು
ನನಗೊಂದು ಬಟ್ಟೆಯ ಹೇಳಾ
ನಿಃಕಳಂಕ ಮಲ್ಲಿಕಾರ್ಜುನಾ

೨೩೭
ಊರ್ಧ್ವ ಭೂಮಿಯ ವಿರಾಗದಲ್ಲಿ
ಸಪ್ತಸಮುದ್ರಕ್ಕೆ ಭೂಮಿ ಒಂದೆ
ಭೂಮಿಯ ಮಧ್ಯದಲ್ಲಿ
ಒಂದು ವಟವೃಕ್ಷ ಹುಟ್ಟಿತ್ತು
ಕೊಂಬು ಮೂರು
ಅದರ ಬೆಂಬಳಿಯಲ್ಲಿ ಹುಟ್ಟಿದ ಕವಲಿಗೆ ಲೆಕ್ಕವಿಲ್ಲ
ಆ ಆಲದ ಹಣ್ಣಿಂಗೆ ಮೋನದ ಹಕ್ಕಿ ಈರೇಳುಕೋಟಿ ಕೂಡಿ
ಎಂಬತ್ತುನಾಲ್ಕು ಲಕ್ಷ ಬೇಟೆಕಾರರ ಬಲೆಯೊಳಗಾಯಿತ್ತು
ಇದರ ಒಲವರವ ಕೇಳಿಹರೆಂದು
ಅಲೇಖಮಯನಾದ ಶೂನ್ಯ ಕಲ್ಲಿನ ನಿಳಯದೊಳಗಾದ

೨೩೮
ಊರ್ವಸಿ ಕರ್ಪೂರವ ತಿಂದು
ಎಲ್ಲರಿಗೆ ಮುತ್ತ ಕೊಟ್ಟಡೆ ಮಚ್ಚುವರಲ್ಲದೆ
ಹಂದಿ ಕರ್ಪೂರವ ತಿಂದು
ಎಲ್ಲರಿಗೆ ಮುತ್ತ ಕೊಟ್ಟಡೆ ಮಚ್ಚುವರೆ
ಹುಡುಹುಡು ಎಂದಟ್ಟುವರಲ್ಲದೆ
ನಡೆನುಡಿ ಶುದ್ಧವುಳ್ಳವರು ಪುರಾತನರ ವಚನವ ಓದಿದಡೆ
ಅನುಭಾವವ ಮಾಡಿದಡೆ ಮಚ್ಚುವರಲ್ಲದೆ
ನಡೆನುಡಿ ಶುದ್ಧವಿಲ್ಲದವರು ಪುರಾತನರ ವಚನವ ಓದಿದಡೆ
ಅನುಭಾವವ ಮಾಡಿದಡೆ ಮಚ್ಚುವರೆ
ನಡೆನುಡಿ ಶುದ್ಧವಿಲ್ಲದವರು ಪುರಾತನರ ವಚನವ ಓದಿದಡೆ
ಆ ಹಂದಿಗಿಂತ ಕರಕಷ್ಟ
ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನಾ

೨೩೯
ಋತುಕಾಲ ತಪ್ಪಿದ ಕೋಗಿಲೆಯಂತೆ
ನುಡಿಯದಂತಿರ್ದಳಲ್ಲಾ
ಪರಿಮಳ ತಪ್ಪಿದ ಭ್ರಮರನಂತೆ
ಸುಳಿಸುಳಿಗೊಳುತಿರ್ದಳಲ್ಲಾ
ಫಲವು ತಪ್ಪಿದ ಬಂಜೆ ಬನದೊಳಗಣ ಅರಗಿಳಿಯಂತಿರ್ದಳಲ್ಲಾ
ಧುರಭಾರದ ಜವ್ವನದಲ್ಲಿ ತೋರಣದೆಲೆಯಂತೆ
ಮಹಾಲಿಂಗ ಗಜೇಶ್ವರನ ನೆರೆವ ಭರದಿಂದ
ಅಳಿಕಾವೃದ್ಧೆಯಾಗಿರ್ದಳಲ್ಲಾ]

೨೪೦
ಎಂದಿಂಗೂ ಸಾವುದು ತಪ್ಪದೆಂದು ಅರಿದು ಮತ್ತೆ
ವ್ರತಭಂಗಿತನಾಗಿ ಅಂದಿಂಗೆ ಸಾಯಲೇತಕ್ಕೆ
ನಿಂದೆಗೆಡೆಯಾಗದ ಮುನ್ನವೆ
ಅಂಗವ ಹಾಕಿ ಚಿತ್ತದ ನಿಜಲಿಂಗವನೆಯ್ದಿ
ಮನಕ್ಕೆ ಮನೋಹರ ಶಂಕೇಶ್ವರ ಲಿಂಗವ ಕೂಡಿ

೨೪೧
ಎಡದ ಕೈಯಲ್ಲಿ ಕತ್ತಿ
ಬಲದ ಕೈಯಲಿ ಮಾಂಸ
ಬಾಯಲ್ಲಿ ಸುರೆಯ ಗಡಿಗೆ
ಕೊರಳಲ್ಲಿ ದೇವರಿರಲಿ
ಅವರ ಲಿಂಗವೆಂಬೆ ಸಂಗನೆಂಬೆ
ಕೂಡಲಸಂಗಮದೇವಾ
ಅವರ ಮುಖಲಿಂಗಿಗಳೆಂಬೆ

೨೪೨
ಎಡರಡಸಿದಲ್ಲಿ
ಮೃಡ ನಿಮ್ಮ ನೆನೆವರು
ಎಡರಡಸಿದ ವಿಪತ್ತು
ಕಡೆಯಾಗಲೊಡನೆ ಮೃಡ
ನಿಮ್ಮ ನೆಡಹಿಯೂ ಕಾಣರು
ರಾಮನಾಥ

೨೪೩
ಎಡರಿಂಗೆ ಕಡೆಯುಂಟೆ
ಅವ್ವಾ
ಉಂಡು ಹಸಿವ್ವಾಯಿತ್ತೆಂದಡೆ ಭಂಗವೆಂಬೆ
ಕಂಡ ಠಾವಿನಲ್ಲಿ ಮನ ಬೆಂದಡೆ
ಗಂಡ ಚನ್ನಮಲ್ಲಿಕಾರ್ಜುನಯ್ಯನೆಂತೊಲಿವನವ್ವಾ

೨೪೪
ಎಣ್ಣೆ ಬೇರೆ ಬತ್ತಿ ಬೇರೆ
ಎರಡೂ ಕೂಡಿ ಸೊಡರಾಯಿತ್ತು
ಪುಣ್ಯ ಬೇರೆ ಪಾಪ ಬೇರೆ
ಎರಡೂ ಕೂಡಿ ಒಡಲಯಿತ್ತು
ಮಿಗಬಾರದು ಮಿಗದಿರಬಾರದು
ಒಡಲಿಚ್ಛೆಯ ಸಲಿಸದೆ ನಿಮಿಷವಿರಬಾರದು
ಕಾಯಗುಣವಳಿದು ಮಾಯಾಜ್ಯೋತಿ ವಾಯುವ ಕೂಡದ ಮುನ್ನ
ಭಕ್ತಿಯ ಮಾಡಬಲ್ಲಾತನ್ನೇ ದೇವ
ಗುಹೇಶ್ವರ

೨೪೫
ಎತ್ತಣ ಮಾಮರ ಎತ್ತಣ ಕೋಗಿಲೆ
ಎತ್ತಣಿಂದೆತ್ತ ಸಂಬಂಧವಯ್ಯ
ಬೆಟ್ಟದ ನೆಲ್ಲಿಕಾಯಿ ಸಮುದ್ರದ ಉಪ್ಪು
ಎತ್ತಣಿಂದೆತ್ತ ಸಂಬಂಧವಯ್ಯ
ಗುಹೇಶ್ವರಲಿಂಗಕ್ಕೆಯು ಎನಗೆಯೂ
ಎತ್ತಣಿಂದೆತ್ತ ಸಂಬಂಧವಯ್ಯ

೨೪೬
ಎತ್ತನೇರಿ ಎತ್ತನರಸುವನಂತೆ
ತಾನಿರ್ದು ತನ್ನನರಸಿ ಕೇಶುವನಂತೆ
ಹೊತ್ತ ನಿಜವನರಿಯದತ್ತಲಿತ್ತ ಸುತ್ತಿ ಬಳಲುವನಂತೆ
ಹಿಡಿದಿರ್ದ ಲಿಂಗವ ಕಾಣದೆ ಮೂವಿಧಿಗಾಣ್ಬರನೇನೆಂಬೆನಯ್ಯಾ
ಅಜ್ಞಾನಬದ್ಧರನೆನಗೆ ತೋರದಿರಯ್ಯಾ ಸೌರಾಷ್ಟ ಸೋಮೇಶ್ವರಾ

೨೪೭
ಎತ್ತಪ್ಪೆ ಶರಣಂಗೆ
ತೊತ್ತಪ್ಪೆ ಶರಣಂಗೆ
ಭೃತ್ಯನಾಗಿ ಸದ್ಭಕ್ತರ ಮನೆಯ ಬಾಗಿಲು ಕಾಯ್ದಿಪ್ಪ ಸೊಣಗನಪ್ಪೆ
ಕರ್ತಾರ
ನಿನಗೆ ಕರವೆತ್ತಿ ಹೊಡವಡುವ
ಭಕ್ತರ ಮನೆಯ ಹಿತ್ತಿಲ ಬೇಲಿಯಾಗಿಪ್ಪೆನಯ್ಯಾ
ರಾಮನಾಥ

೨೪೮
ಎತ್ತು ನಿಮ್ಮದಾನ
ಬಿತ್ತು ನಿಮ್ಮದಾನ
ಸುತ್ತಿ ಹರಿವ ಸಾಗರವೆಲ್ಲ ನಿಮ್ಮ ದಾನ
ನಿಮ್ಮ ದಾನವನುಂಡು
ಅನ್ಯರ ಹೊಗಳುವ
ಕುನ್ನಿಗಳನೇನೆಂಬೆ
ಹೇಳ ರಾಮನಾಥ

೨೪೯
ಎತ್ತು ಬಿತ್ತಿತ್ತು ಒಕ್ಕಲಿಗನಿಂದ ಉತ್ತಮರಿಲ್ಲೆಂದು ನುಡಿವರು.
ಹೊತ್ತಾರೆದ್ದು ಶಿವಲಿಂಗಾರ್ಚನೆಯ ಮಾಡಲರಿಯರು.
ಎತ್ತಾಗಿ ಬಿತ್ತಿದ ನಮ್ಮ ಬಸವಣ್ಣ.
ಹೊತ್ತು ಹೊರೆದನು ಜಗವನು.
ಮತ್ತೆ ಮರಳಿ ಅನ್ಯದೈವವ ನೆನೆಯಲೇಕೊ
ಎತ್ತು ಬಿತ್ತಿತ್ತು ಹಾಲುಹಯನ ಬಸವನಿಂದಾಯಿತ್ತು.
ಇಂತೀ ಬೆಳೆದ ಬಸವನ ಪ್ರಸಾದವನೊಲಿದು
ಮೃತ್ಯು ಮಾರಿಯ ಎಂಜಲ ಮಾಡಿಕೊಂಡು
ಭುಂಜಿಸುವ ತೊತ್ತುಜಾತಿಗಳ ನುಡಿಯ ಕೇಳಲಾಗದೆಂದ
ಕಲಿದೇವವರದೇವ

೨೫೦
ಎತ್ತೆತ್ತ ನೋಡಿದಡತ್ತತ್ತ
ನೀನೇ ದೇವಾ
ಸಕಲವಿಸ್ತಾರದ ರೂಹು
ನೀನೇ ದೇವಾ
ವಿಶ್ವತಶ್ಚಕ್ಷು
ನೀನೇ ದೇವಾ
ವಿಶ್ವತೋಮುಖ
ನೀನೇ ದೇವಾ
ವಿಶ್ವತೋಬಾಹು
ನೀನೇ ದೇವಾ
ವಿಶ್ವತಃಪಾದ
ನೀನೇ ದೇವಾ
ಕೂಡಲಸಂಗಮದೇವಾ