೨೫೧
ಎತ್ತೆತ್ತ ನೋಡಿದಡೆ
ಅತ್ತತ್ತ ಬಸವನೆಂಬ ಬಳ್ಳಿ
ಎತ್ತಿ ನೋಡಿದಡೆ
ಲಿಂಗವೆಂಬ ಗೊಂಚಲು
ಒತ್ತಿ ಹಿಂಡಿದಡೆ
ಭಕ್ತಿಯೆಂಬ ರಸವಯ್ಯಾ
ಆಯತ ಬಸವಣ್ಣನಿಂದ
ಸ್ವಾಯತ ಬಸವಣ್ಣನಿಂದ
ಸನ್ನಿಹಿತವು ಬಸವಣ್ಣನಿಂದ
ಗುರು ಬಸವಣ್ಣನಿಂದ
ಲಿಂಗ ಬಸವಣ್ಣನಿಂದ
ಜಂಗಮ ಬಸವಣ್ಣನಿಂದ
ಪಾದೋದಕ ಬಸವಣ್ಣನಿಂದ
ಪ್ರಸಾದ ಬಸವಣ್ಣನಿಂದ
ಅತ್ತ ಬಲ್ಲಡೆ ನೀವು ಕೇಳಿರೆ
ಇತ್ತ ಬಲ್ಲಡೆ ನೀವು ಕೇಳಿರೆ
ಬಸವಾ ಬಸವಾ ಬಸವಾ
ಎಂದು ಮಜ್ಜನಕ್ಕೆರೆಯದವನ ಭಕ್ತಿ
ಶೂನ್ಯ ಕಾಣಾ
ಕಲಿದೇವರದೇವಾ

೨೫೨
ಎದೆಬಿರಿವನ್ನಕ್ಕರ
ಮನದಣಿವನ್ನಕ್ಕರ
ನಾಲಗೆ ನಲಿನಲಿದೋಲಾಡುವನ್ನಕ್ಕರ
ನಿಮ್ಮ ನಾಮಾಮೃತವ ತಂದೆರೆಸು ಕಂಡಯ್ಯಾ
ಶಿವನಾಮಾಮೃತವ ತಂದೆರೆಸು ಕಂಡೆಲೆ ಹರನೆ
ಬಿರಿಮುಗುಳಂದದ ಶರೀರ
ನಿಮ್ಮ ಚರಣದಮೇಲೆ ಬಿದ್ದುರುಳುಗೆ
ಸಂಗಯ್ಯ

೨೫೩
ಎನಗೆ ನೀನು ಮಾಡಿದ ಸಂಸಾರದ ಬಳಲಿಕೆ
ನಿನಗೆನ್ನ ಕಾಡುವ ಬಳಲಿಕೆ
ಬಳಲಿಕೆಯಿಬ್ಬರಿಗೆಯೂ ಸರಿ
ನಿನ್ನ ಹೆಚ್ಚೇನು ಎನ್ನ ಕುಂದೇನು
ನೀನು ಭಕ್ತದೇಹಿಕದೇವನಾದ ಬಳಿಕ
ಸಕಳೇಶ್ವರದೇವ
ನೀನೂ ಬಲ್ಲೆ
ನಾನೂ ಬಲ್ಲೆ

೨೫೪
ಎನಗೆ ಮನೆ ಇಲ್ಲ
ಎನಗೆ ಧನವಿಲ್ಲ
ಮಾಡುವುದೇನು
ನೀಡುವುದೇನು
ಮನೆ ಧನ ಸಕಲಸಂಪದಸೌಖ್ಯವುಳ್ಳ
ನಿಮ್ಮ ಶರಣರ ತಪ್ಪಲಕ್ಕಿಯನಾಯ್ದು ತಂದು
ಎನ್ನೊಡಲ ಹೊರೆವೆನಾಗಿ
ಅಮರೇಶ್ವರಲಿಂಗಕ್ಕೆ ನೀಡುವ ಬಯಕೆ ಎನಗಿಲ್ಲ
[ಸಂಗನಬಸವಣ್ಣಾ]

೨೫೫
ಎನಗೆ ಸೋಂಕಿದ ಸಕಲರುಚಿಪದಾರ್ಥಂಗಳನು
ನಿನಗೆ ಕೊಡವೆನೆಂದವಧಾನಿಸುವನ್ನಬರ
ಎನಗೂ ಇಲ್ಲದೆ ಹೋಯಿತ್ತು
ನಿನಗೂ ಇಲ್ಲದೆ ಹೋಯಿತ್ತು
ಈ ಭೇದಬುದ್ಧಿಯು ಬಿಡಿಸಿ
ಆನರಿದುದೆ ನೀನರಿದುದೆಂಬಂತೆ
ಎಂದಿಂಗೆನ್ನನಿರಿಸುವೆ ಸಕಳೇಶ್ವರಾ

೨೫೬
ಎನಿಸು ಕಾಲ ಕಲ್ಲು ನೀರೊಳಗಿದ್ದಡೇನು
ನೆನೆದು ಮೃದುವಾಗಬಲ್ಲುದೆ ಅಯ್ಯಾ
ಎನಿಸು ಕಾಲ ನಿಮ್ಮ ಪೂಜಿಸಿ ಏವೆನಯ್ಯಾ
ಮನದಲ್ಲಿ ದೃಢವಿಲ್ಲದನ್ನಕ್ಕ
ನಿಧಾನವ ಕಾಯ್ದಿರ್ದ ಬೆಂತರನಂತೆ
ಅದರ ವಿಧಿ ಎನಗಾಯಿತ್ತು ಕೂಡಲಸಂಗಮದೇವಾ

೨೫೭
ಎನ್ನ ಕಡೆಗಣ್ಣು ಕೆಂಪಾಯಿತವ್ವಾ
ಎನ್ನ ನಳಿತೋಳು ಉಡುಗಿದವವ್ವಾ
ಇಕ್ಕಿದ ಹವಳದ ಸರ ಬೆಳುಹಾದವವ್ವಾ
ಮುಕ್ತಾಫಳ ಹಾರದಿಂದ ಆನು ಬೆಂದೆನವ್ವಾ
ಇಂದೆನ್ನ ಮಹಾಲಿಂಗ ಗಜೇಶ್ವರನು
ಬಹಿರಂಗವನೊಲ್ಲದೆ ಅಂತರಂಗದಲಿ ನೆರೆದ ಕಾಣೆ ಅವ್ವಾ

೨೫೮
ಎನ್ನ ಕಣ್ಣೊಳಗಣ ಕಟ್ಟಿಗೆಯ ಮುರಿವವರನಾರನೂ ಕಾಣೆ
ಎನ್ನ ಕಾಲೊಳಗಣ ಮುಳ್ಳ ತೆಗೆವವರನಾರನೂ ಕಾಣೆ
ಎನ್ನ ಅಂಗದಲ್ಲಿದ್ದ ಅಹಂಕಾರದ ಸುಡುವವರನಾರನೂ ಕಾಣೆ
ಎನ್ನ ಮನದಲ್ಲಿಪ್ಪ ಮಾಯಾ ಪ್ರಪಂಚವ
ಕೆಡಸುವವರನಾರನೂ ಕಾಣೆನಯ್ಯಾ
ಆದ್ಯರ ವೇದ್ಯ ವಚನಂಗಳಿಂದ
ಆರಿದೆವೆಂಬವರು ಅರಿಯಲಾರರು
ನೋಡಾ
ಎನ್ನ ಕಣ್ಣೊರಗಣ ಕಟ್ಟಿಗೆಯ
ನಾನೆ ಮುರಿಯಬೇಕು
ಎನ್ನ ಕಾಲೊಳಗಣ ಮುಳ್ಳ
ನಾನೆ ತೆಗೆಯಬೇಕು
ಎನ್ನ ಅಂಡದಲ್ಲಿಪ್ಪ ಅಹಂಕಾರವ
ನಾನೆ ಸುಡಬೇಕು
ಎನ್ನ ಮನದಲ್ಲಿಪ್ಪ ಮಾಯಾಪ್ರಪಂಚವ
ನಾನೆ ಕಳೆಯಬೇಕು
ಅಮುಗೇಶ್ವರಲಿಂಗವ
ನಾನೆ ಅರಿಯಬೇಕು

೨೫೯
ಎನ್ನ ಕಷ್ಟ ಕುಲದಲ್ಲಿ ಹುಟ್ಟಿಸಿದೆಯಯ್ಯಾ
ಎಲೆ ಲಿಂಗ ತಂದೆ
ಕೆಟ್ಟೆಯನಯ್ಯಾ ನಿಮ್ಮ ಮುಟ್ಟಿಯೂ ಮುಟ್ಟದಿಹನೆಂದು
ಎನ್ನ ಕೈ ಮುಟ್ಟದಿರ್ದಡೆ ಮನ ಮುಟ್ಟಲಾಗದೆ
ಅಭಿನವ ಮಲ್ಲಿಕಾರ್ಜುನಾ

೨೬೦
ಎನ್ನ ಕಾಯ ಮಣ್ಣು
ಜೀವ ಬಯಲು
ಆವುದ ಹಿಡಿವೆನಯ್ಯಾ
ದೇವಾ
ನಿಮ್ಮನಾವ ಪರಿಯಲ್ಲಿ ನೆನೆವೆನಯ್ಯಾ
ಎನ್ನ ಮಾಯೆಯನು ಮಾಣಿಸಯ್ಯಾ
ಚೆನ್ನಮಲ್ಲಿಕಾರ್ಜುನಾ

೨೬೧
ಎನ್ನ ಕಾಯದ ದಂಡಿಗೆಯ ಮಾಡಯ್ಯಾ
ಎನ್ನ ಶಿರವ ಸೋರೆಯ ಮಾಡಯ್ಯಾ
ಎನ್ನ ನರವ ತಂತಿಯ ಮಾಡಯ್ಯಾ
ಎನ್ನ ಬೆರಳ ಕಡ್ಡಿಯ ಮಾಡಯ್ಯಾ
ಬತ್ತೀಸ ರಾಗವ ಪಾಡಯ್ಯಾ
ಉರದಲೊತ್ತಿ ಬಾರಿಸು ಕೂಡಲಸಂಗಮದೇವಾ

೨೬೨
ಎನ್ನ ಚಿತ್ತವು ಅತ್ತಿಯ ಹಣ್ಣು ನೋಡಯ್ಯಾ
ವಿಚಾರಿಸಿದಡೆ ಏನೂ ಹುರುಳಿಲ್ಲಯ್ಯಾ
ಪ್ರಪಂಚಿನ ಡಂಬಿನಲ್ಲಿ ಎನ್ನನೊಂದು ರೂಪುಮಾಡಿ
ನೀವಿರಿಸಿದಿರಿ ಕೂಡಲಸಂಗಮದೇವಾ

೨೬೩
ಎನ್ನ ನಡೆಯೊಂದು ಪರಿ
ಎನ್ನ ನುಡಿಯೊಂದು ಪರಿ
ಎನ್ನೊಳಗೇನೂ ಶುದ್ಧವಿಲ್ಲ
ನೋಡಯ್ಯಾ
ನುಡಿಗೆ ತಕ್ಕ ನಡೆಯ ಕಂಡಡೆ
ಕೂಡಲಸಂಗಮದೇವನೊಳಗಿಪ್ಪನಯ್ಯಾ

೨೬೪
ಎನ್ನ ನಲ್ಲನೆನ್ನನೊಲ್ಲದಿರ್ದಡೆ
ನಾ ಎಲ್ಲಿ ಅರಸುವೆನವ್ವಾ
ಗಂಗೆಯ ನೋನೆನು
ಗೌರಿಯ ನೋನೆನು
ಎಲ್ಲಿ ಅರಸುವೆನವ್ವಾ
ಎನ್ನ ಅಂತರಂಗದ ಆತ್ಮಜ್ಯೋತಿ
ಉರಿಲಿಂಗದೇವಾ
ಎಂದು ಇಲ್ಲಿಯೇ ಅರಸುವೆನವ್ವಾ

೨೬೫
ಎನ್ನ ನಾನರಿಯದಂದು ಮುನ್ನ ನೀನೇನಾಗಿದ್ದೆ
ಹೇಳಾ
ಮುನ್ನ ನೀ ಬಾಯ ಮುಚ್ಚಿಕೊಂಡಿದ್ದೆಯೆಂಬುದ
ನಾ ನಿನ್ನ ಕಣ್ಣಿಂದ ಕಂಡೆನು
ಎನ್ನ ನಾನರಿದ ಬಳಿಕ ಎನ್ನು ನೀ
ಬಾಯ್ದೆರೆದು ಮಾತನಾಡಿದರೆ
ಅದನೆನ್ನ ಕಣ್ಣಿಂದ ಕಂಡು ನಾಚಿದೆ ನೋಡಾ
ಎನ್ನ ಕಾವ ನಿನನಗೆ
ನಿನ್ನ ಕಾವ ಎನಗೆ
ಸಂಚದ ನೋಟ ಒಂದೆ ನೋಡಾ
ಗುಹೇಶ್ವರ
ನಿನ್ನ ಬೆಡಗಿನ ಬಿನ್ನಾಣವನರಿದೆ ನೋಡಾ

೨೬೬
ಎನ್ನ ನಾನರಿವುದಕ್ಕೆ ಮುನ್ನ ಎಲ್ಲಿದ್ದೆಯಯ್ಯ
ಎನ್ನೊಳಗೆ ಇದ್ದೆಯಯ್ಯ
ಎನ್ನ ನಾನರಿಯಲು
ಮುಂದೆ ಗುರುರೂಪಾಗಿ
ಎನ್ನೊಳಗೆ ಅಡಗಿದ್ದೆಯಲ್ಲ ರಾಮನಾಥ

೨೬೭
ಎನ್ನ ಭವಭಾರ ನಿಮ್ಮದಯ್ಯಾ
ಎನ್ನ ಹಾನಿವೃದ್ಧಿ ನಿಮ್ಮದಯ್ಯಾ
ಎನ್ನ ಕರಕರ ಕಾಡದಿರು ತಂದೆ
ನಿನ್ನ ಕಾಟ ಎನ್ನ ಪ್ರಾಣದೋಟ
ಕಪಿಲಸಿದ್ಧಮಲ್ಲಿನಾಥಾ
ಕೊಲ್ಲು ಕಾಯಿ
ನಿಮ್ಮ ಧರ್ಮದವ ನಾನು

೨೬೮
ಎನ್ನ ಮನದ ಮರವೆ ಭಿನ್ನವಾಗದು
ಮರೆದು ಅರಿದೆಹೆನೆಂದಡೆ
ಅರಿವಿನ ಮರವೆಯ ಮಧ್ಯದಲ್ಲಿ ಎಡೆದೆರಪಿಲ್ಲ
ಕೋಲಿನಲ್ಲಿ ನೀರ ಹೊಯ್ದಡೆ ಸೀಳಿ ಹೋಳಾದುದುಂಟೆ
ಅರಿವುದೊಂದು ಘಟ
ಮರೆವುದೊಂದು ಘಟ
ಒಡಗೂಡುವ ಠಾವಿನ್ನೆಂತೊ
ಹುತ್ತದ ಬಾಯಿ ಹಲವಾದಡೆ
ಸರ್ಪನೆಯಿದುವಲ್ಲಿ ಒಡಲೊಂದೆ ತಪ್ಪದು
ತನ್ನ ಚಿತ್ತದ ಭೇದವಲ್ಲದೆ ವಸ್ತುವಿಗೆ ಭೇದವುಂಟೆ
ವಿಷ ವಿಷವ ವೇಧಿಸುವಲ್ಲಿ ಬೇರೊಂದು ಅಸುವಿನ ಕಲೆವುಂಟೆ
ಅಸಿಯ ಮಡುವಿನಲ್ಲಿ ಲತೆಯ ಹಾಸಿಕೆಯುಂಟೆ
ಇಂತೀ ಹುಸಿಗಂಜಿ ಗೂಡಿನಲ್ಲಿ ಅಡಗಿದೆ
ಗುಮ್ಮಟನಾಥನ ಒಡೆಯ ಅಗಮ್ಯೇಶ್ವರಲಿಂಗವೆ

೨೬೯
ಎನ್ನ ಮನದಲ್ಲಿ ದಿಟವಿಲ್ಲ
ಪೂಜಿಸಿ ಏವೆನು
ಹೃದಯದಲ್ಲೊಂದು ವಚನದಲ್ಲೊಂದು ಎನಗೆ
ನೋಡಾ
ಎನ್ನ ಕಾಯ ಭಕ್ತ
ಮನ ಭವಿ
ಸಕಳೇಶ್ವರ ದೇವಾ

೨೭೦
ಎನ್ನ ಮನವ ಮಾರುಗೊಮಡನವ್ವಾ
ಎನ್ನ ತನುವ ಸೂರೆಗೊಂಡನವ್ವಾ
ಎನ್ನ ಸುಖವನೊಪ್ಪುಗೊಂಡನವ್ವಾ
ಎನ್ನ ಇರವನಿಂಬುಗೊಂಡನವ್ವಾ
ಚೆನ್ನಮಲ್ಲಿಕಾರ್ಜುನನ ಒಲುಮೆಯವಳಾನು

೨೭೧
ಎನ್ನ ಮಾಯದ ಮದವ ಮುರಿಯಯ್ಯಾ
ಎನ್ನ ಕಯದ ಕತ್ತಲೆಯ ಕಳೆಯಯ್ಯಾ
ಎನ್ನ ಜೀವದ ಜಂಜಡವ ಮಾಣಿಸಯ್ಯಾ
ಎನ್ನ ದೇವ ಚನ್ನಮಲ್ಲಿಕಾರ್ಜುನಯ್ಯಾ
ಎನ್ನ ಸುತ್ತಿದ ಪ್ರಪಂಚವ ಬಿಡಿಸಾ
ನಿಮ್ಮ ಧರ್ಮ

೨೭೨
ಎನ್ನ ಲಿಂಗದ ಸೀಮೆಯಲ್ಲಿದ್ದ ಗೋವತ್ಸ ಮೊದಲಾದ ಫಟಕ್ಕೆಲ್ಲಕ್ಕೂ
ಶಿವಲಿಂಗಪೂಜೆ ಪಂಚಾಚಾರಶುದ್ಧ ನೇಮ
ಭಾವ ತಪ್ಪದೆ ಪಾದೋದಕ ಪ್ರಸಾದವಿಲ್ಲದೆ
ತೃಣ ಉದಕವ ಮುಟ್ಟಿದಡೆ
ಎನ್ನ ಸೀಮೆಗೆ ಎನ್ನ ವ್ರತಾಚಾರಕ್ಕೆ ನಾ ಕೊಂಡ ಗಮನಕ್ಕೆ
ತನುವಿಗೆ ಬಂದಲ್ಲಿ ಭೀತಿ
ಆತ್ಮಕ್ಕೆ ಬಂದಲ್ಲಿ ಸಂದೇಹವ
ಮಾಡಿದಡೆ
ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಕ್ಕೆ ದೂರ

೨೭೩
ಎನ್ನವರೊಲಿದು ಹೊನ್ನ ಶೂಲದಲ್ಲಿಕ್ಕಿದರೆನ್ನ ಹೊಗಳಿ ಹೊಗಳಿ
ಎನ್ನ ಹೊಗಳತೆ ಎನ್ನನಿಮೈಗೊಂಡಿತ್ತಲ್ಲಾ
ಅಯ್ಯೋ
ನೊಂದೆನು ಸೈರಿಸಲಾರೆನು
ಅಯ್ಯಾ
ನಿಮ್ಮ ಮನ್ನಣೆಯೆ ಮಸೆದಲಗಾಗಿ ತಾಗಿತ್ತಲ್ಲಾ
ಅಯ್ಯೋ
ನೊಂದೆನು ಸೈರಿಸಲಾರೆನು
ಕೂಡಲಸಂಗಮದೇವಾ
ನೀನೆನಗೆ ಒಳ್ಳಿದನಾದಡೆ
ಎನ್ನ ಹೊಗಳತೆಗಡ್ಡ ಬಾರಾ ಧರ್ಮೀ

೨೭೪
ಎನ್ನೊಡಲಾದಡೆ ಎನ್ನಿಚ್ಛೆಯಲ್ಲಿರದೆ
ನಿನ್ನೊಡಲಾದಡೆ ನಿನ್ನಿಚ್ಛೆಯಲ್ಲಿರದೆ
ಅದು ಎನ್ನೊಡಲೂ ಅಲ್ಲ
ನಿನ್ನೊಡಲೂ ಅಲ್ಲ
ಅದು ನೀ ಮಾಡಿದ ಜಗದ ಬಿನ್ನಾಣದೊಡಲು ಕಾಣಾ
ರಾಮನಾಥ

೨೭೫
ಎನ್ನೊಳಗೆ ನಾನು ಪ್ರವೇಶ
ನಿನ್ನೊಳಗೆ ನಾನು ಪ್ರವೇಶ
ದೇವ ನೀನಿಲ್ಲದಿಲ್ಲ
ಭಕ್ತ ನಾನಲ್ಲದಿಲ್ಲ
ಈ ಪರಿಯ ಮಾಡುವರಿನ್ನಾರು ಹೇಳಾ
ಎನಗೆ ನೀನೇ ಗತಿ
ನಿನಗೆ ನಾನೇ ಗತಿ
ಇನ್ನೇಕೆ ಜವನಿಕೆ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ