೨೬
ಅಕಟಕಟಾ ಶಿವ ನಿನಗಿನಿತು ಕರುಣವಿಲ್ಲ
ಅಕಟಕಟಾ ಶಿವ ನಿನಗಿನಿತು ಮರುಕವಿಲ್ಲ
ಏಕೆ ಹುಟ್ಟಿಸಿದೆ
ಇಹಲೋಕ ದುಃಖಿಯ ಪರಲೋಕದೂರನ
ಏಕೆ ಹುಟ್ಟಿಸಿದೆ
ಕೂಡಲಸಂಗಮದೇವಾ ಕೇಳಯ್ಯಾ
ಎನಗಾಗಿ ಮತ್ತೊಂದು ತರುಮರನಿಲ್ಲವೆ

೨೭
ಅಕ್ಕ ಕೇಳೌ ಅಕ್ಕಯ್ಯಾ
ನಾನೊಂದು ಕನಸ ಕಂಡೆ
ಅಕ್ಕಿ ಅಡಕೆ ಓಲೆ ತೆಂಗನ ಕಾಯಿ ಕಂಡೆ
ಚಿಕ್ಕ ಚಿಕ್ಕ ಕೆಂಜೆಡೆಗಳು ಸುಲಿಪಲ್ಲ ಗೊರವನು
ಭಿಕ್ಷಕ್ಕೆ ಮನೆಗೆ ಬಂದುದ ಕಂಡೆನವ್ವಾ
ಮಿಕ್ಕು ಮೀರಿ ಹೋಹನ ಬೆಂಬತ್ತಿ ಕೈವಿಡಿದೆನು
ಚೆನ್ನಮಲ್ಲಿಕಾರ್ಜುನನ ಕಂಡು ಕಣ್ದೆರೆದೆನು

೨೮
ಅಕ್ಕಟಕ್ಕಟಾ ಸಂಸಾರದ ಹಗರಣ ಬಂದಾಡಿತ್ತಲ್ಲಾ
ಅಪ್ಪಾ ಬೊಪ್ಪಾ ಎಂಬ ಚೋಹವು
ಅದು ಮೊಟ್ಟಮೊದಲಲ್ಲಿ ಬಂದಾಡಿತ್ತು
ತುಪ್ಪುಳು ತೊಡೆದಂತೆ ಮೀಸೆಯ ಚೋಹವು
ಅದು ನಟ್ಟನಡುವೆ ಬಂದಾಡಿತ್ತು
ಮುಪ್ಪು ಮುಪ್ಪು ಎಂಬ ಚೋಹವು
ಅದು ಕಟ್ಟಕಡೆಯಲಿ ಬಂದಾಡಿತ್ತು
ನಿಮ್ಮ ನೋಡವು ತೀರಲೊಡನೆ
ಜಗದಾಟವು ತೀರಿತ್ತು ಕಾಣಾ
ಚೆನ್ನಮಲ್ಲಿಕಾರ್ಜುನಾ

೨೯
ಅಕ್ಷರವ ಬಲ್ಲೆವೆಂದು ಅಹಂಕಾರವೆಡೆಗೊಂಡು ಲೆಕ್ಕಗೊಳ್ಳರಯ್ಯ
ಗುರುಹಿರಿಯರು ತೋರಿದ ಉಪದೇಶದಿಂದ
ವಾಗದ್ವೈತವ ಕಲಿತು ವಾದಿಪರಲ್ಲದೆ
ಆಗುಹೋಗೆಂಬುದನರಿಯರು
ಭಕ್ತಿಯನರಿಯರು ಮುಕ್ತಿಯನರಿಯರು ಯುಕ್ತಿಯನರಿಯರು
ಮತ್ತೂ ವಾದಿಗೆಳಸುವರು
ಹೋದರು ಗುಹೇಶ್ವರ ಸಲೆ ಕೊಂಡ ಮಾರಿಂಗೆ

೩೦
ಅಗಲಲಿಲ್ಲದ ನಲ್ಲವನಗಲಿ ನೆರೆದೆಹೆನೆಂಬ
ಕಾಮಿನಿಯರ ಭಂಗವ
ನೋಡಾ
ಆ ನಮ್ಮ ನಲ್ಲನ ಅನುವಿನೊಳಿರ್ದು
ನೆರೆದೆಹೆನೆಂಬ ಭರವೆನಗವ್ವಾ
ಮಹಾಲಿಂಗ ಗಜೇಶ್ವರದೇವರನಗಲುವಡೆ
ನಾನೇನು ಕಲ್ಲುಮನದವಳೆ ಅವ್ವಾ

೩೧
ಅಗಲಿದ ನಲ್ಲನ ಕನಸಿನಲಪ್ಪಿ ಸುಖಿಯಾದಿರವ್ವಾ
ಕಂಡ ಕನಸು ದಿಟವಾದಡೆ ಅವ ನಮ್ಮ ನಲ್ಲನವ್ವಾ
ಮನಸುಳ್ಳವರು ನೀವು ಪುಣ್ಯಗೈದಿರವ್ವಾ
ಮಹಾಲಿಂಗ ಗಜೇಶ್ವರನನಗಲಿದಡೆ ನಿದ್ರೆಯೆಮಗಿಲ್ಲ
ಕನಸಿನ್ನೆಲ್ಲಿ ಬಹುದವ್ವಾ

೩೨
ಅಗ್ಘವಣಿಗಡಿವಜ್ಜೆಯುಂಟೆ
ವಾಯುವ ಹಿಡಿದು ಬಂಧಿಸಬಹುದೆ
ಅನಲಂಗೆ ತಾಳು ತುದಿ ಸುಡುವುದಕ್ಕೆ ಬೇರೆ ಭಿನ್ನವುಂಟೆ
ಸುಗಂದಕ್ಕೆ ಬುಡ ತುದಿಯಿಲ್ಲ
ಅರ್ಕೇಶ್ವರಲಿಂಗವನರಿದುದಕ್ಕೆ ಎಲ್ಲಿಯೂ ತಾನೆ

೩೩
ಅಗ್ನಿ ಸುಡಲಲ್ಲದೆ ಸುಳಿಯಲರಿಯದು
ವಾಯು ಸುಳಿವುದಲ್ಲದೆ ಸುಡಲರಿಯದು
ಆ ಆಗ್ನಿ ವಾಯುವ ಕೂಡಿದಲ್ಲದೆ ಅಡಿಯಿಡಲರಿಯದು
ಈ ಪರಿಯಂತೆ ನರರರಿವರೆ ಕ್ರಿಯಾಜ್ಞಾನಭೇದವ ರಾಮನಾಥ

೩೪
ಅಗ್ನಿಗೆ ತಂಪುಂಟೆ ವಿಷಕ್ಕೆ ರುಚಿಯುಂಟೆ ಹೇಳಾ
ಕಂಗಳಿಗೆ ಮರೆಯುಂಟೆ ಹೇಳೈ ಲಿಂಗವೆ
ದಾಳಿಕಾರಂಗೆ ಧರ್ಮವುಂಟೆ
ಕಂಗಳಿಗೆ ಕರುಳುಂದಟೆ ಗುಹೇಶ್ವರ
ನಿಮ್ಮ ಶರಣರು ಮೂರುಲೋಕವರಿಯೆ ನಿಶ್ಚಿತರಯ್ಯ

೩೫
ಅಘಟಿತ ಘಟಿತನ ಒಲಿವಿನ ಶಿಶು
ಕಟ್ಟಿದೆನು ಜಗಕ್ಕೆ ಬಿರಿದನು
ಕಾಮ ಕ್ರೋಧ ಲೋಭ ಮೋಹ ಮದ ಮತ್ಸರಂಗಳಿಗೆ
ಇಕ್ಕಿದೆನು ಕಾಲಲಿ ತೊಡರನು
ಗುರುಕೃಪೆಯೆಂಬ ತಿಗುರನಿಕ್ಕಿ
ಮಹಾಶರಣೆಂಬ ತಿಲಕವನಿಕ್ಕಿ
ನಿನ್ನ ಕೊಲುವೆ ಗೆಲುವೆ ಶಿವಸರಣೆಂಬ ಅಲಗ ಕೊಂಡು
ಬಿಡು ಬಿಡು ಕರ್ಮವೆ
ನಿನ್ನ ಕೊಲ್ಲದೆ ಮಾಣೆನು
ಕೆಡಹಿಸಿಕೊಳ್ಳದೆನ್ನ ನುಡಿಯ
ಕೇಳಾ
ಕೆಡದ ಶಿವಶರಣೆಂಬ ಅಲಗನೆ ಕೊಂಡು
ನಿನ್ನ ಕೊಲುವೆ ಗೆಲುವೆ ನಾನು
ಬ್ರಹ್ಮಪಾಶವೆಂಬ ಕಳನನೆ ಸವರಿ
ವಿಷ್ಣು ಮಾಯೆಯೆಂಬ ಎಡೆಗೋಲನೆ ನೂಕಿ
ಎನ್ನೊಡೆಯ ಚೆನ್ನಮಲ್ಲಿಕಾರ್ಜುನಯ್ಯ
ತಲೆದೂಗಲಿ ಕಾದುವೆನು ನಾನು

೩೬
ಅಜಕೋಟಿ ಕಲ್ಪ ವರುಷದವರೆಲ್ಲರು ಹಿರಿಯರೆ
ಹುತ್ತೇರಿ ಬೆತ್ತ ಬೆಳೆದ ತಪಸ್ವಿಗಳೆಲ್ಲರು ಹಿರಿಯರೆ
ನಡುಮುರಿದು ಗುಡುಗೂರಿ
ತಲೆ ನಡುಗಿ ನೆರೆತೆರೆ ಹೆಚ್ಚಿ
ಧೃತಿಗೆಟ್ಟು ಒಂದನಾಡ ಹೋಗಿ ಒಂಬತ್ತನಾಡುವ
ಅಜ್ಞಾನಿಗಳೆಲ್ಲರು ಹಿರಿಯರೆ
ಅನುವನರಿದು ಘನವ ಬೆರಸಿ
ಹಿರಿದು ಕಿರಿದೆಂಬ ಭೇದವ ಮರೆದು
ಕೂಡಲಚೆನ್ನಸಂಗಯ್ಯನಲ್ಲಿ ಬೆರಸಿ ಬೇರಿಲ್ಲದಿಪ್ಪ ಹಿರಿಯತನ
[ನಮ್ಮ ಮಹಾದೇವಿಯಕ್ಕಂಗಾಯಿತ್ತು]

೩೭
ಅಜ್ಞಾನವೆಂಬ ತೊಟ್ಟಿಲೊಳಗೆ
ಜ್ಞಾನವೆಂಬ ಶಿಶುವ ಮಲಗಿಸಿ
ಸಕಲ ವೇದಶಾಸ್ತ್ರವೆಂಬ ನೇಣಕಟ್ಟಿ
ಹಿಡಿದು ತೂಗಿ ಜೋಗುಳವಾಡುತ್ತಿದಾಳೆ
ಭ್ರಾಂತಿಯೆಂಬ ತಾಯಿ
ತೊಟ್ಟಿಲು ಮುರಿದು ನೇಣು ಹರಿದು
ಜೋಗುಳ ನಿಂದಲ್ಲದೆ
ಗುಹೇಶ್ವರನೆಂಬ ಲಿಂಗವ ಕಾಣಬಾರದು

೩೮
ಅಟ್ಟಡವಿಯಲ್ಲಿ ಬಿಟ್ಟುಹೋದಿರಿ ಬಸವಯ್ಯಾ
ನಟ್ಟನಡುಗ್ರಾಮವ ಕೆಡಿಸಿಹೋದಿರಿ ಬಸವಯ್ಯಾ
ಹುಟ್ಟಿಲ್ಲದ ಬಂಜೆಗೆ ಮಕ್ಕಳಕೊಟ್ಟಿರಿ ಬಸವಯ್ಯಾ
ಆ ಮಕ್ಕಳ ಫಲವಿಲ್ಲದಂತೆ ಮಾಡಿದಿರಿ ಬಸವಯ್ಯಾ
ಸಂಗಯ್ಯನಲ್ಲಿ ನೀನೆಂತಪ್ಪ ಮಹಿಮನಯ್ಯಾ ಬಸವಯ್ಯಾ

೩೯
ಅಟ್ಟದ ಮೇಲೆ ಹರಿದಾಡುವ ಇಲಿ
ಕಾದಿರ್ದ ಬೆಕ್ಕ ತಪ್ಪಿಸಿ
ಬೆಕ್ಕಿನ ಕಣ್ಣೊಳಡಗಿತ್ತು
ಕಣ್ಣೂ ಇಲಿಯೂ ಕೂಡಿ ಗುಹೇಶ್ವರಲಿಂಗವ
ಕಂಡುದಿಲ್ಲಾ

೪೦
ಅಟ್ಟಿ ಹಾವುತಲೊಮ್ಮೆ ಹೋಗಿ
ನಿಲುತಲೊಮ್ಮೆ ಬೀಗಿ
ನಗುತಲೊಮ್ಮೆ ಮರುಳಿನಂತೆ ಮಂಕಿನಂತೆ ದೆಸೆದೆಸೆಯ ನೋಡುತ್ತ
ಅಂಗಡಿ ರಾಜಬೀದಿಯ ಶೃಂಗಾರಂಗಳ ನಲಿನಲಿದು ನೋಡುತ್ತ
ಇತ್ತರದ ಭದ್ರದ ಮೇಲೆ ನಾಟ್ಯವನಾಡುವವರ ನೋಡಿ ನಗುತ್ತ
ನೋಡುವ ಗಾವಳಿಯ ಜನರನಟ್ಟಿ ಹೊಯಿವಂತೆ ಹರಿವುತ್ತ
ಗುದಿಯಿಕ್ಕಿದಂತೆ ನಿಂದಿರೆ ಬೀಳುತ್ತ
ನಾಟ್ಯವನಾಡುವವವರಿಗೆ ಇದಿರಾಗಿ ತಾ ಮರಳಿಯಾಡುತ್ತ
ಹಾಡುತ್ತ ಬೈವುತ್ತ ಕೆರಳಿ ನುಡಿವುತ್ತ
ವಾದ್ಯ ಮೇಳಾಪವ ಕಂಡು ಆಳಿಗೊಂಡು ನಗುತ್ತ
ಹಸ್ತವನಾಡಿಸಿ ಗತಿಯ ಮಚ್ಚರಿಸಿ ಕೈಯೊಡನೆ
ಮರುಳಾಟವನಾಡುತ್ತ
ಮೆಲ್ಲಮೆಲ್ಲನೆ ನಿಂದು ನೋಡಿ ನಡೆವುತ್ತ
ಎಂದಿನ ಸುಳುಹಿನೊಳಗಲ್ಲದ ಸುಳುಹು ಬಡವಣ್ಣ ನಿಮ್ಮಾಣೆ
ಸೊಡ್ಡಳನಾಗದೆ ಮಾಣನು

೪೧
ಅಟ್ಟೆಯ ಚುಚ್ಚುನ ಉಳಿಯ ಮೊನೆಯಲ್ಲಿ
ಪ್ರತ್ಯಕ್ಷವಾದ ಪರರಮೇಶ್ವರನ ಕಂಡು
ಇತ್ತಲೇಕಯ್ಯಾ ಕಾಯದ ತಿತ್ತಿಯ ಹೊತ್ತಾಡುವನ ಮುಂದೆ
ನಿನ್ನ ಭಕ್ತರ ಠಾವಿನಲ್ಲಿಗೆ ಹೋಗಿ ಮುಕ್ತಿಯ ಮಾಡು
ನೀ ಹೊತ್ತ ಬಹುರೂಪ[ದಿ] ತಪ್ಪದೆ
ರಜತಬೆಟ್ಟದ ಮೇಲಕ್ಕೆ ಹೋಗು
ನಿನ್ನ ಭಕ್ತರ ಮುಕ್ತಿಯ ಮಾಡು
ಕಾಮಧೂಮ ಧೂಳೇಶ್ವರನ ಕರುಣದಿಂದ ನೀನೆ ಬದುದು

೪೨
ಅಡವಿಗೆ ಹೋಗಿ ಏವೆನು
ಮನದ ರಜ ತಮ ಬಿಡದು
ಆಡ ಕಾವನ ತೋರಿ
ಗಿಡುವ ಕಡಿವನ ಬಡಿದೆ
ಆಶ್ರಮವ ಕೆಡಿಸಿತ್ತಲ್ಲಾ
ಸರಳೇಶ್ವರದೇವಾ
ನಿನ್ನ ಮಾಯೆ ಎತ್ತಹೋದಡೂ ಬೆನ್ನಬಿಡದು

೪೩
ಅಡವಿಯಲ್ಲಿ ತಡೆಗಡಿದ ಪಶುವಿನಂತಾದೆವಾವೆಲ್ಲ
ಅಯ್ಯಾ
ಅಕ್ಕಟಾ ಒಡೆಯರಿಲ್ಲದ ಅನಾಥರಾದೆವಾವೆಲ್ಲ
ಅಯ್ಯಾ
ಅಕ್ಕಟಾ ನಮಗಿನ್ನು ದಿಕ್ಕಾರು ದೆಸೆಯಾರು
ಅಕ್ಕಟಾ ನಮಗಿನ್ನು ಒಡೆಯರಾರು ಹೇಳಾ ತಂದೆ
ಅಯ್ಯಾ ಶ್ರೀಮಲ್ಲಿನಾಥಲಿಂಗಾ ಅವಧರಿಸು ಎನ್ನ ಬಿನ್ನಹವ
ಗಣಾಚಾರಕ್ಕೆ ಬುದ್ಧಿಗಲಿಸುವುದೆನ್ನ ತಂದೆ

೪೪
ಅತ್ತಲಿತ್ತ ಹೋಗದಂತೆ ಹೆಳವನ ಮಾಡಯ್ಯಾ ತಂದೆ
ಸುತ್ತಿ ಸುಳಿದು ನೋಡದಂತೆ ಅಂಧಕನ ಮಾಡಯ್ಯಾ ತಂದೆ
ಮತ್ತೊಂದ ಕೇಳದಂತೆ ಕಿವುಡನ ಮಾಡಯ್ಯಾ ತಂದೆ
ನಿಮ್ಮ ಶರಣದ ಪಾದವಲ್ಲದೆ ಅನ್ಯ ವಿಷಯಕ್ಕೆಳಸದಂತೆ
ಇರಿಸು ಕೂಡಲಸಂಗಮದೇವಾ

೪೫

ಅತ್ತೆ ಮಾಯೆ ಮಾವ ಸಂಸಾರಿ
ಮೂವರು ಮೈದುನರು ಹುಲಿಯಂತವದಿರು
ನಾಲ್ವರು ನಗೆವೆಣ್ಣು ಕೇಳು ಕೆಳದಿ
ಐವರು ಭಾವದಿರನೊಯ್ವ ದೈವವಿಲ್ಲ
ಆರು ಪ್ರಜೆಯತ್ತಿಗೆಯರ ಮೀರಲಾರೆನು
ತಾಯೆ ಹೇಳುವಡೆ ಏಳು ಪ್ರಜೆ ತೊತ್ತಿರ ಕಾಹು
ಕರ್ಮವೆಂಬ ಗಂಡನ ಬಾಯ ಟೊಣೆದು
ಹಾದರವನಾಡುವೆನು ಹರನಕೊಡೆ
ಮನವೆಂಬ ಸಖಿಯ ಪ್ರಸಾದದಿಂದ
ಅನುಭಾವವ ಕಲಿತೆನು ಶಿವನೊಡನೆ
ಕರಚೆಲುವ ಶ್ರೀಶೈಲ ಚೆನ್ನಮಲ್ಲಿಕಾರ್ಜುನನೆಂಬ
ಸಜ್ಜನದ ಗಂಡನ ಮಾಡಿಕೊಂಡೆ

೪೬
ಅದು ಬೇಕು ಇದು ಬೇಕುಯೆಂಬರು
ಎದೆಗುದಿಹ ಬೇಡ
ಸುದೈವನಾದಡೆ ಸಾಕು
ಪಡಿಪದಾರ್ಥ ತಾನಿದ್ದೆಡೆಗೆ ಬಹುದು
ನಿಧಿ ನಿಕ್ಷೇಪಗಳಿದ್ದೆಡೆಗೆ ಬಹವಯ್ಯಾ
ಹೃದಯಶುದ್ಧನಾಗಿ ಸರಳೇಶ್ವರಾ ಶರಣೆಂದಡೆ
ನಿಜಪದವನೀವ

೪೭
ಅದ್ವೈತವ ನೆಲೆಗೊಳಿಸಿ ಎರಡಳಿದೆನೆಂಬವರು
ಶಿಶುಕಂಡ ಕನಸಿನಂತಿರಬೇಕಲ್ಲದೆ
ನುಡಿದು ಹೇಳುವನ್ನಕ್ಕರ ಭಿನ್ನವಲ್ಲದೇನು
ಹೇಳಾ
ಅರಿವರತು ಮರಹು ನಷ್ಟವಾಗಿ ಗುರುವ ತೋರಿದೆನೆಂಬರು
ಇದಿರಿಂಗೆ ಕರುಳಕಲೆಯನರುಹುವ ಪರಿಯೆಂತು
ಹೇಳಾ
ಮನದ ಕೊನೆಯ ಮೊನೆಯ ಮೇಲಣ ಅರಿವಿನ ಕಣ್ಣಮುಂದೆ
ಸ್ವಯಂಪ್ರಕಾಶ ತೋರುತ್ತಿದ್ದಡೆ ತಾನಾಗಬಲ್ಲನೆ
ನೆರೆಯರಿತು ಮರೆಯಬಲ್ಲಡೆ
ಎನ್ನ ಅಜಗಣ್ಣನಂತೆ ಶಬ್ದಮುಗ್ಧನಾಗಿರಬೇಕಲ್ಲದೆ
ಶಬ್ದಸಂದಣಿಯ ಮಾತು ಸಯವಲ್ಲ ನೋಡಯ್ಯಾ

೪೮
ಅನವರತ ಮಾಡಿಹೆನೆಂದು ಉಪ್ಪರ ಗುಡಿಯ ಕಟ್ಟಿ ಮಾಡುವ
ಭಕ್ತನ ಮನೆಯದು ಲಂದಣಗಿತ್ತಿಯ ಮನೆ
ಸರ್ವಜೀವದಯಾಪಾರಿಯೆಂದು ಭೂತದೇಹಕಿಕ್ಕುವನ ಮನೆ
ಸಯಿದಾನದ ಕೇಡು
ಸೂಳೆಯ ಮಗ ಮಾಳವ ಮಾಡಿದಡೆ
ತಾಯ ಹೆಸರಾಯಿತ್ತಲ್ಲದೆ
ತಂದೆಯ ಹೆಸರಿಲ್ಲ ಕೂಡಲಸಂಗಮದೇವಾ

೪೯
ಅನುಭಾವ ಅನುಭಾವವೆಂದೆಂಬಿರಿ
ಅನುಭಾವವೆಂಬುದು ನೆಲದ ಮರೆಯ ನಿಧಾನ ಕಾಣಿ ಭೋ
ಅನುಭಾವವೆಂಬುದು ಶಿಶು ಕಂಡ ಕನಸು ಕಾಣಿ ಭೋ
ಅಂತರಂಗದ ಶುದ್ಧಿ ಕಾಣಿ ಭೋ
ಅನುಭಾವವೆಂಬುದು ರಚ್ಚೆಯ ಮಾತೆ
ಅನುಭಾವವೆಂಬುದು ಸಂತೆಯ ಸುದ್ದಿಯೆ
ಅನುಭಾವವೆಂಬುದೇನು ಬೀದಿಯ ಪಸರವೆ
ಏನೆಂಬೆ ಹೇಳಾ ಮಹಾಘನವನು
ಆನೆಯ ಮಾನದೊಳಗಿಕ್ಕಿದರಡಗುವುದೆ
ದರ್ಪಣದೊಳಗಡಗುವುದಲ್ಲದೆ
ಕಂಡ ಕಂಡಲ್ಲಿ ಗೋಷ್ಠಿ
ನಿಂದ ನಿಂದಲ್ಲಿ ಅನುಭಾವ
ಬಂದ ಬಂದಲ್ಲಿ ಪ್ರಸಂಗವ ಮಾಡುವ
ಪಾತಕರ ತೋರದಿರಯ್ಯಾ
ಕೂಡಲಚೆನ್ನಸಂಗಮದೇವ

೫೦
ಅನೇಕ ತರದ ಯೋನಿಮುಖಂಗಳ ಪೊಕ್ಕು
ನೀರ್ಗುಡಿಯಲು ಪೋದಡೆ
ಸುಡು ಪೋಗೆಂದು ನೂಂಕಿತ್ತೆ ಜಲ
ಅದರಂತಿರಬೇಡ ಹಿರಿಯರ ಮನ
ಮನವಿಚ್ಛಂದವಾಗದೊಂದೆಯಂದದಲಿಪ್ಪಂತಪ್ಪಾ
ನಿಮ್ಮದೊಂದು ಸಮತಾಗುಣವೆನ್ನನೆಂದು ಬಂದು ಪೊದ್ದಿರ್ದುದು
ಹೇಳಾ ಕಪಿಲಸಿದ್ಧಮಲ್ಲಿಕಾರ್ಜುನಾ