೨೭೬
ಎಮ್ಮ ನಲ್ಲನ ಕೂಡಿದ ಕೂಟ
ಇದಿರಿಗೆ ಹೇಳಬಾರದವ್ವಾ
ನೀವೆಲ್ಲಾ ನಿಮ್ಮ ನಲ್ಲನ ಕೂಡಿದ ಸುಖವ
ಬಲ್ಲಂತೆ ಹೇಳಿ
ಉರಿಲಿಂಗದೇವ ಬಂದು
ನಿರಿಗೆಯ ಸೆರಗ ಸಡಿಲಿಸಲೊಡನೆ
ನಾನೊ ತಾನೊ ಏನೆಂದರಿಯನು

೨೭೭
ಎಮ್ಮ ನಲ್ಲನವ್ವಾ
ನಲ್ಲರಿಗೆ ನಲ್ಲನು
ವಂಚನೆಗೆ ನೆರೆಯನು
ನಿರ್ವಂಚನೆಗೆ ನೆರೆವನು
ಉರಿಲಿಂಗದೇವನು

೨೭೮
ಎಮ್ಮವರು ಬೆಸಗೊಂಡಡೆ
ಶುಭಲಗ್ನವೆನ್ನಿರಯ್ಯಾ
ರಾಶಿಕೂಟ ಗಣಸಂಬಂಧವುಂಟೆಂದು
ಹೇಳಿರಯ್ಯಾ
ಚಂದ್ರಬಲ ತಾರಾಬಲವುಂಟೆಂದು
ಹೇಳಿರಯ್ಯಾ
ಚಂದ್ರಬಲ ತಾರಾಬಲವುಂಟೆಂದು
ಹೇಳಿರಯ್ಯಾ
ನಾಳಿನ ದಿನಕಿಂದನ ದಿನ ಲೇಸೆಂದು
ಹೇಳಿರಯ್ಯಾ
ಕೂಡಲಸಂಗಮದೇವನ ಪೂಜಿಸಿದ ಫಲ ನಿಮ್ಮದಯ್ಯಾ

೨೭೯
ಎರದ ಮುಳ್ಳಿನಂತೆ ಪರಗಂಡರೆನಗವ್ವಾ
ಸೋಂಕಲಮ್ಮೆ
ಸುಳಿಯಲಮ್ಮೆ
ನಂಬಿ ನಚ್ಚಿ ಮಾತನಾಡಲಮ್ಮೆನವ್ವಾ
ಚನ್ನಮಲ್ಲಿಕಾರ್ಜುನನಲ್ಲದ ಗಂಡರಿಗೆ
ಉರದಲ್ಲಿ ಮುಳ್ಳುಂಟೆಂದು
ನಾನಪ್ಪಲಮ್ಮೆನವ್ವಾ

೨೬೦
ಎರೆದಡೆ ನನೆಯದು
ಮರೆದಡೆ ಬಾಡದು
ಹುರುಳಿಲ್ಲ ಹುರುಳಿಲ್ಲ ಲಿಂಗಾರ್ಚನೆ
ಕೂಡಲಸಂಗಮದೇವಾ
ಜಂಗಮಕ್ಕೆರೆದಡೆ ಸ್ಥಾವರ ನನೆಯಿತ್ತು

೨೮೧
ಎರೆಯಂತೆ ಕರಕರಗಿ
ಮಳಲಂತೆ ಜರಿಜರಿದು
ಕನಸಿನಲ್ಲಿ ಕಳವಳಿಸಿ ಆನು ಬೆರಗಾದೆ
ಆವಿಗೆಯ ಕಿಚ್ಚಿನಂತೆ ಸುಳಿಸುಳಿದು ಬೆಂದೆ
ಆಪತ್ತಿಗೆ ಸಖಿಯರನಾರನೂ ಕಾಣೆ
ಅರಸಿ ಕಾಣದ ತನುವ
ಬೆರಸಿ ಕೂಡದ ಸುಖವ
ಎನಗೆ ನೀ ಕರುಣಿಸಾ
ಚನ್ನಮಲ್ಲಿಕಾರ್ಜುನಾ

೨೮೨
ಎಲುವೆಂಬ ಹಂಜರ ಥಟ್ಟಾಗಿ
ಉಭಯವ ಘಟಿಸಿದ ತೊಗಲಬ್ರಹ್ಮನೆಂಬ ಅಳಿಲೆಯ ಕಾಯಲ್ಲಿ
ವಿಷ್ಣುವೆಂಬ ನೀರ ಹೊಯಿದು
ರುದ್ರನೆಂಬ ಚೂರ್ಣದಲ್ಲಿ ಖಾರಕ್ಕೆ ಮೆಟ್ಟಲಾಗಿ
ತೊಗಲ ಹೊಲಸು ಕೆಟ್ಟಿತ್ತು
ಹರಗುಲ ಹುದಿಯಿತ್ತು
ವರ್ತನವೆಂಬ ಹುಟ್ಟ ಹಿಡಿದು
ಮಾಟಕೂಟವೆಂಬ ಹೊಳೆಯಲ್ಲಿ ಕೂಟದವರು ದಾಟುತ್ತಿದ್ದಾರೆ
ಎಂದನಂಬಿಗ ಚೌಡಯ್ಯ

೨೮೩
ಎಲೆ ಅಯ್ಯಗಳಿರಾ
ಎಲೆಗಳೆದ ವೃಕ್ಷವ ಕಂಡಿರೆ ಬಸವನ
ಎಲೆ ಅಯ್ಯಗಳಿರಾ
ರೂಹಿಲ್ಲದ ಚೋಹವ ಕಂಡಿರೆ ಬಸವನ
ಎಲೆ ಸ್ವಾಮಿಗಳಿರಾ
ನಿಮ್ಮ ನಿಲವಿನ ದರ್ಪಣದ ಕಂಡಿರೆ ಬಸವನ
ಸಂಗಯ್ಯನಲ್ಲಿ ಸ್ವಯವಳಿದ ಬಸವನ ಕುರುಹ ಕಂಡಿರೆ

೨೬೪
ಎಲೆ ಇಲ್ಲದ ವೃಕ್ಷದಲ್ಲಿ ಹೂವಿಲ್ಲದ ಕಾಯಾಗಿತ್ತು
ಕಾಯಿ ಉದುರಿ ಹಣ್ಣು ಬಲಿಯಿತ್ತು
ಕಣ್ಣಿಗೆ ಹಣ್ಣಲ್ಲದೆ ಮೆಲುವುದಕ್ಕಲ್ಲ
ಏಣಾಂಕಧರ ಸೋಮೇಶ್ವರಲಿಂಗಕ್ಕೆ ಅರ್ಪಿತವಾಯಿತ್ತು

೨೮೫
ಎಲೆ ಎಲೆ ತಾಯೆ
ನೋಡವ್ವಾ
ಇರುಳು ತೊಳಲುವ ಜಕ್ಕವಕ್ಕಿಯಂತೆ ಹಲಬುತ್ತಿದ್ದೆ ನೋಡವ್ವಾ
ಮಾಗಿಯ ಕೋಗಿಲೆಯಂತೆ ಮೂಗಿಯಾಗಿದ್ದೆ ನೋಡವ್ವಾ
ಮಹಾಲಿಂಗ ಗಜೇಶ್ವರನ
ಅನುಭಾವಸಂಬಂಧಿಗಳ ಬರವೆನ್ನ
ಪ್ರಾಣದ ಬರವು ನೋಡವ್ವಾ

೨೮೬
ಎಲೆ ಗಂಡುಗೂಸೆ ನೀ ಕೇಳಾ
ನಿನಗೊಬ್ಬಗೆಂದುಟ್ಟೆ ಗಂಡುಡಿಗೆಯನು
ಮತ್ತೊಮ್ಮೆ ಆನು ಗಂಡಪ್ಪೆನಯ್ಯಾ
ಮತ್ತೊಮ್ಮೆ ಆನು ಹೆಣ್ಣಪ್ಪೆನಯ್ಯಾ
ಕೂಡಲಸಂಗಮದೇವಾ
ನಿಮ್ಮಡಿಗೆ ವೀರನಪ್ಪೆ
ನಿಮ್ಮ ಶರಣರಿಗೆ ವಧುವಪ್ಪೆ

೨೮೭
ಎಲೆಗಳೆದ ಮರದಲ್ಲಿ ನೆಳಲನರಸಲಿಲ್ಲ
ಕಳೆಯರತ ದೀಪದಲ್ಲಿ ಬೆಳಗನರಸಲಿಲ್ಲ
ಕುರುಹಳಿದ ಮೂರ್ತಿಯಲ್ಲಿ ರೂಪನರಸಲಿಲ್ಲ
ಶಬ್ದವಡಗಿ ನಿಶ್ಶಬ್ದನಾದ ಬಸವನಲ್ಲಿ ಶಬ್ದವನರಸಲಿಲ್ಲ
ಸಂಗಯ್ಯನಲ್ಲಿ ಕಾಯವಿಲ್ಲದ ಕಾರುಣಿಯಾದೆ ನಾನು

೨೮೮
ಎಲೆಗಳೆದ ವೃಕ್ಷಕ್ಕೆ ತಳಿಕ ಕೊನರಲ್ಲದೆ
ಬೇರು ಸಾರಗೆಟ್ಟು ನಷ್ಟವಾದ ತರುವಿಂಗೆ ಮತ್ತೆ ಅಂಕುರವುಂಟೆ
ತ್ರಿವಿಧಮಲಕ್ಕೆ ದೂರಸ್ಥನಾಗಿ ಅಪೇಯವೆಂದು ಬಿಟ್ಟಲ್ಲಿ
ಮತ್ತರಿದು ಹಿಡಿದೆಹೆನೆಂದಡೆ ಪೇಯವಪ್ಪುದೆ
ತಳನನಗೆದು ಮೇಲನರಿಯದೆ ಬೀಳಿಸಿಕೊಂಬವನಂತೆ
ತನ್ನ ಊಣೆಯವ ತಾನರಿಯದೆ
ಮೂಕೊರತಿ ಮೂರಕುತಿಯ ಮಣಿಯ
ತನಗೆಂದು ವಿಚಾರಿಸುವಂತೆ
ಇಂತೀ ನಿರ್ವಾಣ ಬರುದೊರೆವೋಯಿತ್ತಲ್ಲಾ ಸಂಗನಬಸವಣ್ಣಾ
ಇವರುವನರಿಯದಂತೆ
ಬ್ರಹ್ಮೇಶ್ವರಲಿಂಗಕ್ಕೆ ಉರಿಯದೆ ಹೋದರಲ್ಲಾ

೨೮೯
ಎಲ್ಲರ ಗಂಡಂದಿರು ಪರದಳವಿಭಾಡರು
ಎನ್ನ ಗಂಡ ಮನದಳವಿಭಾಡ
ಎಲ್ಲರ ಗಂಡಂದಿರು ಗಜವೇಂಟೆಕಾರರು
ಎನ್ನ ಗಂಡ ಮನವೇಂಟೆಕಾರ
ಎಲ್ಲರ ಗಂಡಂದದಿರು ತಂದಿಕ್ಕಿಸಿಕೊಂಬರು
ಎನ್ನ ಗಂಡ ತಾರದೆ ಇಕ್ಕಿಸಿಕೊಂಬ
ಎಲ್ಲರ ಗಂಡಂದಿರಿಗೆ ಮೂರು
ಎನ್ನ ಗಂಡಂಗೆ ಅದೊಂದೆ
ಅದೊಂದೂ ಸಂದೇಹ
ಕದಿರರೆಮ್ಮಿಯೊಡೆಯ ಗುಮ್ಮೇಶ್ವರಾ

೨೬೦
ಎಲ್ಲರ ಸುಂಕ
ಎತ್ತು ತೊತ್ತು ಬಂಡಿ ಬಲ್ಲೆತ್ತು
ಎನ್ನ ಸುಂಕ ಎಲ್ಲರ ಪರಿಯಲ್ಲ
ಕಟ್ಟಿದ ಕುರುಹಿಂಗೆ ಹಿಡಿದ ವ್ರತನೇಮನಿತ್ಯಕ್ಕೆ}
ತಪ್ಪಲಿಲ್ಲಾಯೆಂದು ಕೊಟ್ಟ ಚೀಟ ಸಿಕ್ಕಿಸಿದೆ ನಿಮ್ಮಂಗದಲ್ಲಿ
ಭಕ್ತರಾಗಿ ಕಳವು ಹಾದರ ಮಿಕ್ಕಾದೊಂದೂ ಬೇಡ
ಎಂದು ಕೊಟ್ಟ ಚೀಟು ವಿಶುದ್ಧ
ಜಗದ ಸುಂಕದೊಡೆಯ ಬಂಕೇಶ್ವರಲಿಂಗನು

೨೯೧
ಎಲ್ಲರ ಹೆಂಡಿರು ತೊಳಸಿಕ್ಕುವರು
ಎನ್ನ ಗಂಡಂಗೆ ತೊಳಸುವುದಿಲ್ಲ
ಎಲ್ಲರ ಗಂಡಂದಿರಿಗೆ ಬಸಿವರು
ಎನ್ನ ಗಂಡಂಗೆ ಬಸಿವುದಿಲ್ಲ
ಎಲ್ಲರ ಗಂಡಂದಿರಿಗೆ ಬೀಜವುಂಟು
ಎನ್ನ ಗಂಡಂಗೆ ಅಂಡದ ಬೀಜವಿಲ್ಲ
ಎಲ್ಲರ ಗಂಡಂದಿರು ಮೇಲೆ
ಎನ್ನ ಗಂಡ ಕೆಳಗೆ ನಾ ಮೇಲೆ
ಕದಿರರೆಮ್ಮಿಯೊಡೆಯ ಗುಮ್ಮೇಶ್ವರಾ

೨೬೨
ಎಲ್ಲವ ಬಿಟ್ಟು ಹಲ್ಲ ಸುಲಿಯ ಬಂದೆ
ಮುನ್ನಿನಲ್ಲಿಯ ಹಾವಚೆ ಹಲ್ಲ ಬಿಡದು ನೋಡಾ
ಮೆಲ್ಲನೆ ಢಾಳಿಸಿದಡೆ ಹಾವಚೆ ಒಲ್ಲಗಾಗದು
ಬಲ್ಲಿತ್ತಾಗಿ ಢಾಳಿಸಿದಡೆ ಒಸಡಿನಲ್ಲಿ ಜಾರಿತ್ತು
ಇಂತೀ ಬಲ್ಲತನದಲ್ಲಿ ಸಂಸಾರದ ಬಾಯ ಹಲ್ಲ ಸುಲಿಯಬೇಕು
ಇದ ಬಲ್ಲವರ ಬಲ್ಲ ತಾನರಿಯ
ಚೆನ್ನಬಸವಣ್ಣಪ್ರಿಯ ಕಮಳೇಶ್ವರಲಿಂಗ ಸಾಕ್ಷಿಯಾಗಿ

೨೬೩
ಎಸುವರ ಬಲ್ಲೆ
ಎಚ್ಚ ಬಾಣ ತಿರುಗಿ ಬಪ್ಪಂತೆ ಎಸುವರ ಕಾಣೆ
ಪೂಜಿಸುವವರ ಬಲ್ಲೆ
ಪೂಜಿಸಿದ ಲಿಂಗ ಅಭಿಮುಖವಾಗಿ
ಸರ್ವಾಂಗದಲ್ಲಿ ವೇಧಿಸುವರ ಕಾಣೆ
ನುಡಿಗೆ ನಡೆ ಆ ನಡೆಗೆ ನುಡಿ
ಉಭಯವ ಬೇಧಿಸುವರ ಕಾಣೆ
ಈ ಉಭಯವು ಸಿದ್ಧಿಯಾಗಿ ಸಿದ್ಧಾಂತವಾದಲ್ಲಿ
ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನನು
ಕ್ರೀಜ್ಞಾನ ನಿರುತವಾದವಂಗಲ್ಲದೆ ಸಾಧ್ಯವಿಲ್ಲ

೨೯೪
ಎಸೆಯದಿರು ಎಸೆಯದಿರು ಕಾಮ
ನಿನ್ನ ಬಾಣ ಹುಸಿಯಲೇಕೋ
ಕಾಮ ಕ್ರೋಧ ಲೋಭ ಮೋಹ
ಮದ ಮತ್ಸರ ಎದು ಸಾಲದೆ ನಿನಗೆ
ಗುಹೇಶ್ವರಲಿಂಗದ ವಿರಹದಲ್ಲಿ ಬೆಂದವರ
ಮರಳಿ ಸುಡಲುಂಟೆ ಮರುಳು ಕಾಮಾ

೨೯೫
ಏಕೆನ್ನ ಪುಟ್ಟಿಸಿದೆಯಯ್ಯಾ ಹೆಣ್ಣು ಜನ್ಮದಲ್ಲಿ
ಪುಣ್ಯವಿಲ್ಲದ ಪಾಪಿಯ
ನಾನು ಇರಪರಕ್ಕೆ ದೂರಳಯ್ಯಾ
ಎನ್ನ ನಾಮ ಹೆಣ್ಣು ನಾಮವಲ್ಲಯ್ಯಾ
ನಾನು ಸಿರಿಯಿದ್ದ ವಸ್ತುವಿನ ವಧುವಾದ ಕಾರಣ
ಸಂಗಯ್ಯನಲ್ಲಿ ಬಸವನ ವಧುವಾದ ಕಾರಣ
ಎನಗೆ ಹೆಣ್ಣುನಾಮವಿಲ್ಲವಯ್ಯಾ

೨೯೬
ಏತ ತಲೆವಾಗಿದಡೇನು
ಗುರುಭಕ್ತನಾಗಬಲ್ಲುದೆ
ಇಕ್ಕುಳ ಕೈಮುಗಿದಡೇನು
ಭೃತ್ಯಾಚಾರಿಯಾಗಬಲ್ಲುದೆ
ಗಿಳಿಯೋದಿದಡೇನು
ಲಿಂಗವೇದಿಯಾಗಬಲ್ಲುದೆ
ಕೂಡಲಸಂಗನ ಶರಣರ ಬಂದ ಬರವ ನಿಂದ ನಿಲವ
ಅನಂಗಸಂಗಿಗಳೆತ್ತಬಲ್ಲರು

೨೯೭
ಏನಿ ಬಂದಿರಿ ಹದುಳವಿದ್ದಿರೆ
ಎಂದಡೆ ನಿಮೈಸಿರಿ ಹಾರಿ ಹೋಹುದೆ
ಕುಳ್ಳಿರೆಂದಡೆ ನೆಲ ಕುಳಿಹೋಹುದೆ
ಒಡನೆ ನುಡಿದಡೆ ಸಿರ ಹೊಟ್ಟೆಯೊಡೆವುದೆ
ಕೊಡಲಿಲ್ಲದಿದ್ದಡೊಂದು ಗುಣವಿಲ್ಲದಿದ್ದಡೆ
ಮೂಗ ಕೊಯ್ವುದ ಮಾಬನೆ ಕೂಡಲಸಂಗಮದೇವರು

೨೯೮
ಏನೆಂದೂ ಎನಲಿಲ್ಲ
ನುಡಿದು ಹೇಳಲಿಕ್ಕಿಲ್ಲ
ನಿಜದಲ್ಲಿ ನಿಂದ ಬೆರಗ ಕುರುಹ ಹರಿವುದೆ ಮರುಳೆ
ಹರಿದು ಹತ್ತುವುದೆ ಮರುಳೆ ಬಯಲು
ಅದು ತನ್ನಲ್ಲಿ ತಾನಾದ ಬಯಲು ತಾನಾದ ಘನವು
ಇನ್ನೇನನರಸಲಿಲ್ಲ
ಆದು ಮುನ್ನವೆ ತಾನಿಲ್ಲ
ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ

೨೯೯
ಏರಿದ ವಾಜಿ ಓಹೋ ಎಂದು ಕರೆದೋರಿದಲ್ಲಿ
ನಿಂದಿತ್ತು ವಾಹನ ವಾಹಕನ ಹೃದಯವನರಿತು
ವಸ್ತುವ ಮುಟ್ಟಿ ಆಡುವ ಚಿತ್ತ ನಿಜವಸ್ತುವಿನ ಗೊತ್ತನರಿಯದೆ
ತನ್ನ ಇಚ್ಛೆಯಲ್ಲಿ ಹರಿದಾಡುತ್ತಿದೆ ನೋಡಾ
ಇದಕ್ಕೆ ಒಂದು ಕಟ್ಟಣೆಯ ಗೊತ್ತ ಲಕ್ಷಿಸಿ
ಕಟ್ಟುವಡೆವಂತೆ ಮಾಡು
ಗೋಪತಿನಾಥ ವಿಶ್ವೇಶ್ವರಲಿಂಗ

೩೦೦
ಏರಿಯ ಕಟ್ಟಬಹುದಲ್ಲದೆ
ನೀರ ತುಂಬಬಹುದೆ
ಕೈದುವ ಕೊಡಬಹುದಲ್ಲದೆ
ಕಲಿತನವ ಕೊಡಬಹುದೆ
ವಿವಾಹವ ಮಾಡಬಹುದಲ್ಲದೆ
ಪುರುಷತನವ ಹರಸಬಹುದೆ
ಘನವ ತೋರಬಹುದಲ್ಲದೆ
ನೆನಹ ನಿಲಿಸಬಹುದೆ
ಓದು ಒಕ್ಕಾಲು ಬುದ್ಧಿ ಮುಕ್ಕಾಲು ಎಂಬ
ಲೋಕದ ಗಾದೆಮಾತಿನಂತೆ
ಸದ್ಗುರು ಕಾರುಣ್ಯವಾದಡೂ ಸಾಧಿಸಿದವನಿಲ್ಲ
ಸಕಳೇಶ್ವರಾ