೩೦೧
ಐಗೈಮನೆ ನಾಗೈಕಂಬ ಮೂಗೈತೊಲೆ
ಭೇದ ಕರವಳವ ಹಾಕಿ
ನೋಡಿ ಅರಿದಡೆ ಆಯ ಬಂದಿತ್ತು
ಮಸದಡೆ ಆಯ ಹೋಯಿತ್ತು
ಮೂಗೆಯ್ಯ ಕರದಲ್ಲಿ ಇದರರಿಕೆಯಾಗಿ
ಹೇಳಾ ಧಾರೇಶ್ವರ ನಿನ್ನಾಲಯಕ್ಕೆ

೩೦೨
ಒಂದ ಬಿಟ್ಟು ಒಂದನರಿದೆಹೆನೆಂಬನ್ನಕ್ಕ
ಮರದ ಸಂದಿನ ಬೊಂಬೆಯೆ
ಅರಿವುದು ಕುರುಹೊ ಅರಿವೊ
ಸುಡುವುದು ಮರನೊ ಬೆಂಕಿಯೊ
ಎರಡರ ಹೆಚ್ಚು ಕುಂದ ತಿಳಿದು ಹೇಳೆಂದನಂಬಿಗ ಚವುಡಯ್ಯ

೩೦೩
ಒಂದು ಕೋಳಿ ಕೂಗುತ್ತದೆ ಎರುಳು ಹಗಲೆನ್ನದೆ
ಅದನರಿಯರಲ್ಲಾ ಮರ್ತ್ಯದ ಗಣಂಗಳು
ಅರಿದಡೆ ಭವಬಂಧವಿಲ್ಲ ಮರೆದಡೆ ಜನನ ಮರಣಕ್ಕಳವಿಲ್ಲ
ಕಪಿಲಸಿದ್ಧಮಲ್ಲಿಕಾರ್ಜುನ

೩೦೪
ಒಂದು ಮೊಲಕ್ಕೆ ನಾಯನೊಂಬತ್ತು ಬಿಟ್ಟಂತೆ
ಎನ್ನ ಬಿಡು ತನ್ನ ಬಿಡು
ಎಂಬುದು ಕಾಯವಿಕಾರ
ಎನ್ನ ಬಿಡು ತನ್ನ ಬಿಡು
ಎಂಬುದು ಮನೋವಿಕಾರ
ಕರಣೇಂದ್ರಿಯಂಗಳೆಂಬ ಸೊಣಗ ಮುಟ್ಟದ ಮುನ್ನ
ಮನ ನಿಮ್ಮನೈದುವುದೆ
ಕೂಡಲಸಂಗಮದೇವಾ

೩೦೫
ಒಂದು ಸರೀರ ನಾನಾ ಲಾಗ ಕಲಿತು ಆಡುವ ಭೇದ ಬೇರಾದಂತೆ
ಆಡುವವ ತಾನೊಬ್ಬನೆಯಾಗಿ ಆದುದ ಕಂಡು
ಅನ್ಯರ ಕೇಳಲೇಕೆ
ಇದಿರಿಗೆ ಹೇಳಲೇಕೆ
ವಸ್ತುವಾಟ ಒಂದು ವರ್ತನ ಬೇರೆ
ಉಭಯವೂ ತಾನೆ ಸದಾಶಿವಮೂರ್ತಿಲಿಂಗದ ಅಂಗ

೩೦೬
ಒಡಲ ಹೊರವ ಇಚ್ಛೆಯಿಂದ
ಹಗಲೆನ್ನದೆ ಇರುಳೆನ್ನದೆ
ಬೆಂದ ಬಸುರಿಂಗೆ ಕುದಿವುತ್ತಿದ್ದೇನೆ
ನಿಮ್ಮ ನೆನೆಯಲೂ ವೇಳೆಯಿಲ್ಲ
ಪೂಜಿಸಲೂ ವೇಳೆಯಿಲ್ಲ
ಒಂದುವೇಳೆಯಾದರೂ
ಶಿವಮಂತ್ರವ ಸ್ಮರಿಸ ತೆರಹಿಲ್ಲ
ಈ ಪ್ರಯಾಸವ ಬಿಡಿಸಿ
ನಿಮ್ಮ ನೆನೆವಂತೆ ಮಾಡಯ್ಯಾ
ಕಲಿದೇವರದೇವಾ
ನಿಮ್ಮ ಧರ್ಮ ನಿಮ್ಮ ಧರ್ಮ

೩೦೭
ಒಡಲುಗೊಂಡವ ನಾನು
ಪ್ರಾಣವಿಡಿದವ ನೀನು
ಎನ್ನೊಡಲು ಸಂಚುವ ನೀ ಬಲ್ಲೆ
ನಿನ್ನ ಪ್ರಾಣದ ಸಂಚುವ ನಾ ಬಲ್ಲೆ
ಇದು ಕಾರಣ
ಇದು ಎನ್ನೊಡಲಲ್ಲ ನಿನ್ನೊಡಲು
ನಿನ್ನ ಪ್ರಾಣವೆನ್ನಲ್ಲಿ ಅಡಗಿದ ಭೇದವ
ನೀ ಬಲ್ಲೆ ನಾ ಬಲ್ಲೆನೈ
ರಾಮನಾಥ

೩೦೮
ಒಡಲುಗೊಂಡವ ಹಸಿವ
ಒಡಲುಗೊಂಡವ ಹುಸಿವ
ಒಡಲುಗೊಂಡವನೆಂದು
ನೀನೆನ್ನ ಜರಿದೊಮ್ಮೆ ನುಡಿಯದಿರ
ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ
ರಾಮನಾಥ

೩೦೯
ಒಡಲುಗೊಂಡೆನಾಗಿ ಮೃಡ
ನಿಮಗೆ ಹಗೆಯಾದೆನಯ್ಯ
ಆನು ಒಡಲುಗೊಂಡಡೇನು
ಕಡಲೊಳಗಣ ಬೊಬ್ಬಳಿಕೆ ಕಡಲೊಳಗೆ ಆಳಿವಂತೆ
ಎನ್ನ ಒಡಲಳಿದು ಹೋದಡೇನು
ಪ್ರಾಣ ನಿಮ್ಮ ಎಡೆಯಲಡಗುವದಯ್ಯಾ
ರಾಮನಾಥ

೩೧೦
ಒಡೆದ ಮಡಕೆಗೆ ಸರಿಯಿಂದ ಸಂದು ಕೂಡುವುದೆ
ದಗ್ಧವಾದ ಪಟ ಅಗಸರ ಕಲ್ಲಿಗೆ ಹೊದ್ದುವುದೆ
ಬದ್ಧ ಭವಿಗಳೆಂದು ಬಿಟ್ಟ ಮತ್ತೆ ಸಮಯದ ಹೊದ್ದಿಗೆ ಏಕೆ
ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂದೆ

೩೧೧
ಒಡೆದೋಡು ಎನ್ನ ಮನೆಯಲಿಲ್ಲದಂತೆ ಮಾಡಯ್ಯಾ
ಕೊಡು ದೇವ ಎನ್ನ ಕೈಯಲೊಂದು ಕರಿಕೆಯನು
ಮೃಡದೇವಾ ಸರಣೆಂದು ಭಿಕ್ಷಕ್ಕೆ ಹೋದಡೆ ಅಲ್ಲಿ
ನಡೆ ದೇವಾ ಎಂದೆನಿಸು
ಕೂಡಲಸಂಗಮದೇವಾ

೩೧೨
ಒತ್ತೆಯ ಹಿಡಿದು ಮತ್ತೊತ್ತೆಯ ಹಿಡಿಯೆ
ಹಿಡಿದಡೆ
ಬತ್ತಲೆ ನಿಲಿಸಿ ಕೊಲುವರಯ್ಯಾ
ವ್ರತಹೀನನನರಿದು ಬೆರೆದಡೆ
ಕಾದ ಕತ್ತಿಯಲ್ಲಿ ಕೈ ಕಿವಿ ಮೂಗ ಕೊಯ್ವರಯ್ಯಾ
ಒಲ್ಲೆನೊಲ್ಲೆ ಬಲ್ಲೆನಾಗಿ
ನಿಮ್ಮಾಣೆ
ನಿರ್ಲಜ್ಜೇಶ್ವರಾ

೩೧೩
ಒಬ್ಬಂಗೆ ಇಹವುಂಟು
ಒಬ್ಬಂಗೆ ಪರವುಂಟು
ಒಬ್ಬಂಗೆ ಇಹವಿಲ್ಲ ಒಬ್ಬಂಗೆ ಪರವಿಲ್ಲ
ಒಬ್ಬಂಗೆ ಇಹಪರವೆರಡೂ ಇಲ್ಲ
ಚೆನ್ನಮಲ್ಲಿಕಾರ್ಜುನದೇವರ ಶರಣರಿಗೆ
ಇಹಪರವೆರಡೂ ಉಂಟು

೩೧೪
ಒಬ್ಬನೆ ಗರುವನಿವ
ಒಬ್ಬನೆ ಚೆಲುವನಿವ
ಒಬ್ಬನೆ ಧನಪತಿ
ಕೇಳಾ ಕೆಳದಿ
ಇವಗೆ ಹಿರಿಯರಿಲ್ಲ
ಇವಗೆ ಒಡೆಯರಿಲ್ಲ
ಇಂತಪ್ಪ ನಲ್ಲನು ಲೇಸು ಕಾಣೆಲಗೆ
ನಾವೆಲ್ಲಾ ಒಂದಾಗಿ ಹಿಡಿದು ಬಿಡದಿರೆ
ಬಿಡಿಸುವರಿನ್ನಿಲ್ಲ ಉರಿಲಿಂಗದೇವನ

೩೧೫
ಒಮ್ಮೆ ಕಾಮನ ಕಾಲ ಹಿಡಿವೆ
ಮತ್ತೊಮ್ಮೆ ಚಂದ್ರಮಂಗೆ ಸೆರಗೊಡ್ಡಿ ಬೇಡುವೆ
ಸುಡಲೀ ವಿರಹವ
ನಾನಾರಿಗೆ ಧೃತಿಗೆಡುವೆ
ಚೆನ್ನಮಲ್ಲಿಕಾರ್ಜುನ ಕಾರಣ
ಎಲ್ಲರಿಗೆ ಹಂಗುಗಿತ್ತಿಯಾದೆನವ್ವಾ

೩೧೬
ಒರತೆಗಳ ಕಂಡಿಂತು ಕೆಲರೀ ಬಾವಿಯ ತೋಡೆಂಬರು
ಅರವಟಿಗೆ ಛತ್ರವು ತಮ್ಮದೆಂಬರು
ಎಲೆ ಪಯಿರೈದದಿರೆ
ಸುರಿವ ಮಳೆ ಸುರಿಸದಿದ್ದಡೆ
ಅವರೇತರಲ್ಲಿ ನೀಡುವರಯ್ಯ
ರಾಮನಾಥ

೩೧೭
ಒಲವಿಲ್ಲದ ಪೂಜೆ
ನೇಹವಿಲ್ಲದ ಮಾಟ
ಆ ಪೂಜೆಯು ಆ ಮಾಟವು
ಚಿತ್ರದ ರೂಹು ಕಾಣಿರಣ್ಣಾ
ಚಿತ್ರದ ಕಬ್ಬು ಕಾಣಿರಣ್ಣಾ
ಅಪ್ಪಿದಡೆ ಸುಖವಿಲ್ಲ
ಮೆಲಿದಡೆ ರುಚಿಯಿಲ್ಲ
ಕೂಡಲಸಂಗಮದೇವಾ
ನಿಜವಿಲ್ಲದವನ ಭಕ್ತಿ

೩೧೮
ಒಲಿದವರ ಕೊಲುವಡೆ ಮಸೆದ ಕೂರಲಗೇಕೆ
ಅವರನೊಲ್ಲೆನೆಂದಡೆ ಸಾಲದೆ
ಮಹಾಲಿಂಗ ಗಜೇಶ್ವರನ ಶರಣರನಗಲಿದಡೆ
ತುಪ್ಪದಲ್ಲಿ ಕಿಚ್ಚ ನಂದಿಸಿದಂತಾದೆನವ್ವಾ

೩೧೯
ಒಲುಮೆ ಒಚ್ಚತವಾದವರು
ಕುಲಛಲವನರಸುವರೆ
ಮರುಳುಗೊಂಡವರು
ಲಜ್ಜೆನಾಚಿಕೆಯ ಬಲ್ಲರೆ
ಚೆನ್ನಮಲ್ಲಿಕಾರ್ಜುನದೇವಗೊಲಿದವರು
ಲೋಕಾಭಿಮಾನವ ಬಲ್ಲರೆ

೩೨೦
ಒಲುಮೆಯ ಕೂಟಕ್ಕೆ ಹಾಸಿನ ಹಂಗೇಕೆ
ಬೇಟದ ಮರುಳಿಗೆ ಲಜ್ಜೆ ಮುನ್ನುಂಟೆ
ನಿಮ್ಮನರಿದ ಶರಣಂಗೆ ಪ್ರಜೆಯ ಹಂಬಲ ದಂದುಗವೇಕೆ
ಮಿಸುನಿಯ ಚಿನ್ನಕ್ಕೆ ಒರೆಗಲ್ಲ ಹಂಗೇಕೆ
ಗುಹೇಶ್ವಲಿಂಗಕ್ಕೆ ಕುರುಹು ಮುನ್ನುಂಟೆ

೩೨೧
ಒಲೆ ಹತ್ತಿ ಉರಿದಡೆ
ನಿಲಬಹುದಲ್ಲದೆ
ಧರೆ ಹತ್ತಿ ಉರಿದಡೆ
ನಿಲಲುಬಾರದು
ಏರಿ ನೀರುಂಬಡೆ
ಬೇಲಿ ಕೆಯ್ಯ ಮೇವಡೆ
ನಾರಿ ತನ್ನ ಮನೆಯಲ್ಲಿ ಕಳುವಡೆ
ತಾಯ ಮೊಲೆವಾಲು ನಂಜಾಗಿ ಕೊಲುವಡೆ
ಇನ್ನಾರಿಗೆ ದೂರುವೆ ಕೂಡಲಸಂಗಮದೇವಾ

೩೨೨
ಒಲೆಯ ಹೊಕ್ಕು ಉರಿಯ ಮರೆದವಳ
ಮಲೆಯ ಹೊಕ್ಕು ಉಲುಹ ಮರೆದವಳ ನೋಡು
ನೋಡಾ
ಸಂಸಾರ ಸಂಬಂಧವ ನೋಡಾ
ಸಂಸಾರ ಸಂಬಂಧ ಭವಭವದಲ್ಲಿ ಬೆನ್ನಿಂದ ಬಿಡದು
ಸರವು ನಿಸ್ಸರವು ಒಂದಾದವಳನು
ಎನ್ನಲೇನ ನೋಡುವಿರಯ್ಯಾ
ಚೆನ್ನಮಲ್ಲಿಕಾರ್ಜುನಯ್ಯ

೩೨೩
ಒಲ್ಲೆನಯ್ಯಾ ಒಲ್ಲೆನಯ್ಯಾ
ನಿಮ್ಮವರಲ್ಲದವರ
ಒಲ್ಲೆನಯ್ಯಾ ಒಲ್ಲೆನಯ್ಯಾ
ಜಗವೆಲ್ಲರಿಯಲು
ಒಲ್ಲೆನಯ್ಯಾ ಒಲ್ಲೆನಯ್ಯಾ
ನೀ ಮುನಿದಡೆ ಮುನಿ
ಕೂಡಲಸಂಗಮದೇವಾ
ನಿಮ್ಮಾಣೆ ನಿಮ್ಮ ಪ್ರಮಥರಾಣೆ

೩೨೪
ಒಳಗಣ ಗಂಡನಯ್ಯಾ
ಹೊರಗಣ ಮಿಂಡನಯ್ಯಾ
ಎರಡನೂ ನಡೆಸಲು ಬಾರದಯ್ಯಾ
ಲೌಕಿಕ ಪಾರಮಾರ್ಥವೆಂಬೆರಡನೂ ನಡೆಸಲು ಬಾರದಯ್ಯಾ
ಚೆನ್ನಮಲ್ಲಿಕಾರ್ಜುನಯ್ಯಾ
ಬಿಲ್ವ ಬೆಳವಲಕಾಯಿ ಒಂದಾಗಿ ಹಿಡಿಯಲು ಬಾರದಯ್ಯಾ

೩೨೫
ಒಳಗೆ ನೋಡಿಹೆನೆಂದರೆ
ಒಳಗೆ ನೋಡಲಿಲ್ಲ
ಹೊರಗೆ ನೋಡಿಹೆನೆಂದರೆ
ಹೊರಗೆ ನೋಡಲಿಲ್ಲ
ಜ್ಞಾನವೆಂತುಟೋ ಅಜ್ಞಾನವೆಂತುಟೋ
ಬಲೆಯ ಬೀಸಿ ಕೊಲುವನ ಮನೆಯಲ್ಲಿ ಸತ್ತಡೆ
ಏನು ಕಾರಣ ಅಳುವರೋ
ಗುಹೇಶ್ವರ