೩೨೬
ಓಗರ ಹಸಿಯಿತ್ತೆಂದು ಉಂಬವರಿಲ್ಲ
ನೀರು ಬಾಯಾರಿತ್ತೆಂದು ಕುಡಿವರಿಲ್ಲ
ಭೂಮಿಗೆ ಬಡತನವೆಂದು ಬಿತ್ತುವರಿಲ್ಲ
ತಮ್ಮ ಒಲವರಕ್ಕೆ ತಾವು ಮಾಡುವಲ್ಲಿ ಗನ್ನದ ಆಸೆ ಬೇಡ
ಸದಾಶಿವಮೂರ್ತಿಲಿಂಗವನರಿವುದಕ್ಕೆ

೩೨೭
ಓಡುವಾತ ಲೆಂಕನಲ್ಲ
ಬೇಡುವಾತ ಭಕ್ತನಲ್ಲ
ಓಡುಲಾಗುದು ಲೆಂಕನು
ಬೇಡಲಾಗದು ಭಕ್ತನು
ಓಡೆನಯ್ಯಾ
ಬೇಡೆನಯ್ಯಾ
ಕೂಡಲಸಂಗಮದೇವಾ

೩೨೮
ಓಡೆತ್ತ ಬಲ್ಲುದೋ
ಅವಲಕ್ಕಿಯ ಸವಿಯ
ಕೋಡುಗ ಬಲ್ಲುದೆ
ಸೆಳೆಮಂಚದ ಸುಖವ
ಕಾಗೆ ನಂದನವನದೊಳಗಿದ್ದಡೇನು
ಕೋಗಿಲೆಯಾಗಬಲ್ಲುದೆ ಹೇಳಾ
ಕೊಳನ ತಡಿಯಲೊಂದು ಹೊರಸು ಕುಳ್ಳಿರ್ದಡೇನು
ಕಳಹಂಸಿಯಾಗಬಲ್ಲುದೆ
ಕೂಡಲಸಂಗಮದೇವಾ

೩೨೯
ಓತಿ ಬೇಲಿವರಿವಂತೆ ಎನ್ನ ಮನವಯ್ಯಾ
ಹೊತ್ತಿಗೊಂದು ಪರಿಯಪ್ಪ ಗೋಸುಂಬೆಯಂತೆನ್ನ ಮನವು
ಬಾವುಲ ಬಾಳುವೆಯಂತೆನ್ನ ಮನವು
ನಡುವಿರುಳೆದ್ದ ಕುರುಡಂಗೆ ಅಗುಸೆಯಲ್ಲಿ ಬೆಳಗಾದಂತೆ
ನಾನಿಲ್ಲದ ಭಕ್ತಿಯ ಬಯಸಿದಡುಂಟೆ
ಕೂಡಲಸಂಗಮದೇವಾ

೩೩೦
ಓದಿ ಬೋಧಿಸಿ ಇದಿರಿಗೆ ಹೇಳುವನ್ನಬರ ಚರುರತೆಯಲ್ಲವೆ
ತನ್ನ ತಾನರಿದಲ್ಲಿ ಆ ಅರಿಕೆ ಇದಿರಿಗೆ ತೋರದಲ್ಲಿ
ಅದೆ ದೇವತ್ವವೆಂದನಂಬಿಗ ಚವುಡಯ್ಯ

೩೩೧
ಓಲೆಯಕಾರ ಭಕ್ತನಾದಡೇನು
ಮನದ ಕ್ರೋಧ ಬಿಡದು
ಒಕ್ಕಲಿಗ ಭಕ್ತನಾದಡೇನು
ಅವನ ಪೂರ್ವಾಶ್ರಮ ಬಿಡದು
ಹಾರುವ ಭಕ್ತನಾದಡೇನು
ಅವನ ಜಾತಿ ಸೂತಕ ಬಿಡದು
ಬೆವಹಾರಿ ಭಕ್ತನಾದಡೇನು
ಅವನ ಭಕ್ತಿ ಒಂದು ಶಬ್ದದಲ್ಲಿ ಹೋಯಿತ್ತು
ಅರಸು ಭಕ್ತನಾದಡೇನು
ಅರಸಿ ನೋಡಲಿಲ್ಲ
ಸೂಳೆಯ ಭಕ್ತಿ ಹದಿನೆಂಟು ಜಾತಿಯ ಎಂಜಲ ತಿಂದಿತ್ತು
ಕೂಡಲಚೆನ್ನಸಂಗಯ್ಯ
ಮಜ್ಜನಕ್ಕೆರೆವ ಭವಿಗಳನೆಂತು ಭಕ್ತರೆಂಬೆ

೩೩೨
ಕಂಗಳ ನಾಮ ಹರುಗುಲವಾಗಿ
ನೋಡುವ ದೃಷ್ಟಿ ಅಂಬಿಗನಾಗಿ
ಕರಣೇಂದ್ರಿಯವೆಂಬ ಬಹುಜನಂಗಳು ಕೂಡಿ
ಆಸೆಯೆಂಬ ಹೊಳೆಯ ದಾಟುವುದಕ್ಕೆ ಹುಟ್ಟ ಕಾಣದೆ
ಹರುಗುಲು ಈಚೆ ಉಳಿಯಿತ್ತನೆಂದನಂಬಿಗ ಚವುಡಯ್ಯ

೩೩೩
ಕಂಗಳ ಬಲದಲ್ಲಿ ಮುನಿದೆಹೆನೆಂಬೆನೆ
ಕಂಗಳು ತನ್ನನಲ್ಲದೆ ನೋಡವು
ಮನದ ಬಲದಲ್ಲಿ ಮುನಿದೆಹೆನೆಂಬೆನೆ
ತನುಮನ ತಾಳಲಾರವವ್ವಾ
ಇಂತೀ ಮನಪ್ರೇರಕ ಮನ ಚೋರಕ
ತನ್ನಾಧೀನವಾಗಿ ಸಾಧನವಪ್ಪಡೆ
ಮನದ ಒಳ ಮೆಚ್ಚುವನವ್ವಾ
ಮನದಲ್ಲಿ ಬಯಸುವೆ
ಭಾವದಲ್ಲಿ ಬೆರಸುವೆ
ಮನಹಿಂಗೆ ಪ್ರಾಣನಾಥನಾಗಿ
ಮಹಾಲಿಂಗ ಗಜೇಶ್ವರದೇವ
ಮನಸಿಂಗೆ ಮನಸ ತರಲೀಸನವ್ವಾ

೩೩೪
ಕಂಗಳ ಮುಂದಣ ಕತ್ತಲೆಯಿದೇನೋ
ಮನದ ಮುಂದಣ ಮರಣವಿದೇನೋ
ಒಳಗಣ ರಣರಂಗ ಹೊರಗಣ ಶೃಂಗಾರ
ಬಳಕೆಗೆ ಬಂದ ಬಟ್ಟೆಯಿದೇನೋ
ಗುಹೇಶ್ವರ

೩೩೫
ಕಂಗಳ ಮುಂದೆ ತೋರಿದ ಮಿಂಚು
ಮನದ ಮೇಲೆ ತಿಳಿಯಿತ್ತಿದೇನೊ
ಕಳೆಯಬಾರದು ಕೊಳಬಾರದು
ಕಂಗಳ ಕತ್ತಲೆಯ ಮನದ ಮಿಂಚುವ
ಇದ ಬಲ್ಲವರನಲ್ಲೆನಿಸಿತ್ತು
ಸಿಮ್ಮಲಿಗೆಯ ಚೆನ್ನರಾಮನೆಂಬ ನಾಮದೊಡಕು

೩೩೬
ಕಂಗಳ ಸೂತಕದಿಂದ
ಕಾಣಿಸಿಕೊಂಬುದು
ಮನದ ಸೂತಕದಿಂದ
ನೆನೆಯಿಸಿಕೊಂಬುದು
ಕಾಯದ ಸೂತಕದಿಂದ
ಮುಟ್ಟಿಸಿಕೊಂಬುದು
ಮೂರರ ಸೂತಕದಲ್ಲಿ ಗಾರಾಗುತ್ತ
ಮೀರಿ ಕಾಬ ಅರಿವು ಸೂರೆಯೇ
ನೆನಹಿಂಗೆ ಮುನ್ನವೆ ನೆನೆಯಿಸಿಕೊಂಡು
ಅರಿವುದಕ್ಕೆ ಮುನ್ನವೆ ಅರುಹಿಸಿಕೊಂಡು
ಬಂದುದನರಿಯದೆ ಕುರುಹಿನ ಹಾವಸೆಯಲ್ಲಿ
ಮರೆದು ಒರಗುತ್ತಿಹರ ಕಂಡು
ಮರೆ ಮಾಡಿದೆಯಲ್ಲಾ
ಕಾಮಧೂಮ ಧೂಳೇಶ್ವರಾ

೩೩೭
ಕಂಗಳಲ್ಲಿ ಕಾಂಬೆನೆಂದು
ಕತ್ತಲೆಯ ಹೊಕ್ಕಡೆಂತಹುದಯ್ಯಾ
ಬೆಟ್ಟದ ತುದಿಯ ಮೆಟ್ಟಲೆಂದು
ಹಳ್ಳಕೊಳ್ಳಂಗಳಲ್ಲಿ ಇಳಿದಡೆಂತಹುದಯ್ಯಾ
ನೀನಿಕ್ಕಿದ ಸಯದಾನವನೊಲ್ಲದೆ
ಬೇರೆ ಬಯಸಿದೊಡೆಂತಹುದಯ್ಯಾ
ಚೆನ್ನಮಲ್ಲಿಕಾರ್ಜುನನ ಘನವನರಿಯಲೆಂದು
ಕಿರುಕುಳಕ್ಕೆ ಸಂದಡೆಂತಹುದಯ್ಯಾ

೩೩೮
ಕಂಗಳಲ್ಲಿ ನಟ್ಟ ಗಾಯವನಾರಿಗೂ ತೋರಬಹುದೇ
ಮನ ಸೋಂಕಿದ ಸುಖವ ಮೊಟ್ಟೆಯ ಕಟ್ಟಬಹುದೆ
ಆತ ನಿಂದ ಸುಖವಾತಂಗೆ ಸಾಧ್ಯವಾಯಿತ್ತು
ಆತ ನಿಂದ ನಿಲವನೇನೆಂಬೆ
ಗುಹೇಶ್ವರ

೩೩೯
ಕಂಗಳಾಲಿಯ ಕರಿಯ ನಾಳದಲ್ಲಿ ಈರೇಳು ಭುವನಂಗಳಡಗಿದವು
ನಾಟಕ ನಾಟಕವ ನಟಿಸುತ್ತ
ಆಡಿಸುವ ಸೂತ್ರದ ಪರಿ
ಗುಹೇಶ್ವರ ಲಿಂಗ ನಿರಾಳಚೈತನ್ಯ

೩೪೦
ಕಂಗಳು ತುಂಬಿದ ಬಳಿಕ ನೋಡಲಿಲ್ಲ
ಕಿವಿಗಳು ತುಂಬಿದ ಬಳಿಕ ಕೇಳಲಿಲ್ಲ
ಕೈಗಳು ತುಂಬಿದ ಬಳಿಕ ಪೂಜಿಸಲಿಲ್ಲ
ಮನ ತುಂಬಿದ ಬಳಿಕ ನೆನೆಯಲಿಲ್ಲ
ಮಹಂತ ಕೂಡಲಸಂಗಮದೇವನ

೩೪೧
ಕಂಗಳೇಕೆ ನೋಡ ಬೇಡ ಎಂದಡೆ ಮಾಣವು
ಶ್ರೋತ್ರಂಗಳೇಕೆ ಆಲಿಸಬೇಡ ಎಂದಡೆ ಮಾಣವು
ಜಿಹ್ವೆಯೇಕೆ ರುಚಿಸಬೇಡ ಎಂದಡೆ ಮಾಣವು
ನಾಸಿಕವೇಕೆ ವಾಸಿಸಬೇಡ ಎಂದಡೆ ಮಾಣವು
ತ್ವಕ್ಕೇಕೆ ಸೋಂಕಬೇಡ ಎಂದಡೆ ಮಾಣವು
ಈ ಭೇದವನರಿದು ನುಡಿಸಲು ಸಮಧಾತುವಾಯಿತ್ತು
ಗುಹೇಶ್ವರಲಿಂಗಕ್ಕೆ ಒಲಿದ ಕಾರಣ
ಅಭಿಮಾನದ ಲಜ್ಜೆ ಬೇಸತ್ತು ಹೋಯಿತ್ತು

೩೪೨
ಕಂಡ ಕನಸು ದಿಟವಾಗಿ ಕಂಡೆನೆಂಬೆ
ಕಂಡೆನೆಂಬುದು ಬೆನ್ನ ಬಿಡದು
ನೋಡಾ
ಕಂಡುದ ಕಾಣೆನೆಂಬುದ ಎರಡನೂ ಅರಿಯದೆ
ತವಕ ತಲ್ಲಣಕ್ಕೆ ಎಡೆಯಾದೆನು
ತವಕದ ಕೂಟ ನಿಮ್ಮಲ್ಲಿ ತದುಗತವಾದೆನು
ಕಪಿಲಸಿದ್ಧಮಲ್ಲಿನಾಥಯ್ಯಾ
ನಿಮ್ಮ ಕರುಣವೆನಗೆ ಸಾಧ್ಯವಾಯಿತ್ತು

೩೪೩
ಕಂಡುದ ಹಿಡಿಯಲೊಲ್ಲದೆ
ಕಾಣದುದನರಸಿ ಹಿಡಿದಹೆನೆಂದರೆ
ಸಿಕ್ಕದೆಂಬ ಬಳಲಿಕೆಯ ನೋಡಾ
ಕಂಡುದನೆ ಕಂಡು
ಗುರುಪಾದವ ಹಿಡಿದಲ್ಲಿ
ಕಾಣದುದ ಕಾಣಬಹುದು
ಗುಹೇಶ್ವರ

೩೪೪
ಕಂಡೆನೆಂಬುದು
ಕಂಗೆ ಮರವೆ
ಕಾಣೆನೆಂಬುದು
ಮನದ ಮರವೆ
ಕೂಡಿದೆನೆಂಬುದು
ಅರಿವಿನ ಮರವೆ
ಅಗಲಿದೆನೆಂಬುದು
ಮರಹಿನ ಮರವೆ
ಇಂತು
ಕಂಡೆ ಕಾಣೆ ಕೂಡಿದೆನಗಲಿದೆನೆಂಬ
ಭ್ರಾಂತಿಸೂತಕವ ತಿಳಿದು ನೋಡಲು
ಗೊಹೇಶ್ವರನೆಂಬ ಲಿಂಗವನಗಲಲೆಡೆಯಿಲ್ಲ [ಕೇಳಾ ಎಲೆ ತಾಯೆ]

೩೪೫
ಕಂಡೆಹೆನೆಂಬ ಭ್ರಾಂತಿ
ಕಾಣೆನೆಂಬ ಬಯಕೆ
ಅರಿವುದಕ್ಕೆ ಮುನ್ನ ಅರಿದ ಅರಿವು
ಮನಸಂದಿತ್ತು
ಮಾರೇಶ್ವರಾ

೩೪೬
ಕಂಥೆಯ ಕಟ್ಟಿ ತಿತ್ತಿಯ ಹೊತ್ತು
ಮರಿಯ ನಡಸುತ್ತ
ದೊಡ್ಡೆಯ ಹೊಡೆವುತ್ತ
ಅಡ್ಡಗೋಲಿನಲ್ಲಿ ಹೋಹ ಚುಕ್ಕಿ ಬೊಟ್ಟಿನವ ತಿಟ್ಟುತ್ತ
ಹಿಂಡನಗಲಿ ಹೋದ ದಿಂಡೆಯ
ಮಣೆಘಟ್ಟನ ಅಭಿಸಂದಿಯ ಕೋಲಿನಲ್ಲಿಡುತ್ತ”
ಈ ಹಿಂಡಿನೊಳಗೆ ತಿರುಗಾಡುತಿದೇನೆ
ಈ ವಿಕಾರದ ಹಿಂಡ ಬಿಡಿಸಿ
ನಿಜನಿಳಯ ನಿಮ್ಮಂಗವ ತೋರಿ ಸುಸಂಗದಲ್ಲಿರಿಸು
ಎನ್ನೊಡೆಯ ವೀರಬೀರೇಶ್ವರಲಿಂಗಾ

೩೪೭
ಕಚ್ಚುವ ಹಾವ ಹಿಡಿವುದಕ್ಕೆ ಗಾರುಡವ ಕಲಿಸಿದುದಿಲ್ಲ
ಕುತ್ತುವ ಹಸುವಿನ ಕೊಂಬ ಹಿಡಿಯ ಕಲಿಸಿದುದಿಲ್ಲ
ತಿಂಬ ಹುಲಿಗೆ ಅಂಗವ ತಪ್ಪಿಸುವುದ ಕಲಿಸಿದುದಿಲ್ಲ
ಇದು ನಿನಗೆ ದಿಂಡೆಯತನವೊ
ನಿರಂಗ ನಿಃಕಳಂಕ ಮಲ್ಲಿಕಾರ್ಜುನಾ

೩೪೮
ಕಟ್ಟಿದ ಕೊಟ್ಟಿಗೆಯಲ್ಲಿ ಗುಬ್ಬಿ ಗೂಡನಿಕ್ಕದೆ
ತೋಡಿದ ಬಾವಿಯಲ್ಲಿ ತೊತ್ತು ನೀರ ತಾರಳೆ
ರಾಜಮಾರ್ಗದಲ್ಲಿ ಆರಾರೆಡೆಯಾಡರು
ಅಂತೆ ಎನಗಿವರ ಭ್ರಾಂತಿಯಿಲ್ಲ
ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ
ನಿಲ್ಲು ಮಾಣು

೩೪೯
ಕಟ್ಟಿದೆ ಘಟದಟ್ಟೆಯ ಹೊಲಿದು
ಇಕ್ಕಿದೆ ಚತುರ್ವಿಧದ ನಾಲ್ಕು ಗುಂಟವ ಬಲಿದು
ಗುಂಟದ ದ್ವಾರದಲ್ಲಿ ಉಭಯಸಂಚದ ಬಾರ ತೆಗೆದು
ತೊಡಕು ಬಂಧವನಿಕ್ಕಿ ಅಡಿಯ ಬಿಡದಂತೆ
ಹಿಂದಣ ಮಡ ಮುಂದಣ ಉಂಗುಷ್ಠಕ್ಕೆ
ಒಂದನೊಂದು ಜಾರದಂತೆ ಬಂಧಿಸಿ
ಸಕಲೇಂದ್ರಿಯವೆಂಬ ಉಭಯವ ಸಂಧಿಸಿ ಕುಣಿಕೆಯನಿಕ್ಕಿ
ಕಾಮದ ಒಡಲ ಮಾದಿಗ ಬಂದೆ
ಘಟ ತೋಕುಳು ತೊಗಲು ಹದಬಂದಿತ್ತು
ಹೊತ್ತು ಹೋದಿಹಿತಣ್ಣಾ
ಮೆಟ್ಟಡಿಯ ಕೊಂಡ ರೊಕ್ಕವ ಕೊಡಿ
ಒಪ್ಪಿದರಿರಲಿ ಒಪ್ಪದಿದ್ದಡೆ
ಮೂರು ಮುಖದಪ್ಪಗೆ ಕೊಟ್ಟೆಹೆ
ತಪ್ಪಡಿಯ ಮೆಟ್ಟೆ ಹೋಗುತ್ತಿದ್ದೇನೆ
ಚನ್ನಯ್ಯಪ್ರಿಯ ಧೂಳನ ಧೂಳಿಗೊಳಗಾಗಿ

೩೫೦
ಕಟ್ಟಿದೆನೊರೆಯ ಬಿಟ್ಟೆ ಜನ್ನಿಗೆಯರ
ಮುಟ್ಟಿ ಬಂದಿರಿದಡೆ ಓಸರಿಸುವನಲ್ಲ
ಓಡದಿರು ಓಡದಿರು
ನಿಮ್ಮ ಶರಣರ ಮನೆಯ ಬಿರಿದಿನ ಅಂಕಕಾರ
ಓಡದಿರು ಓಡದಿರು
ಎಲೆ ಎಲೆ ದೇವಾ
ಎಲೆ ಎಲೆ ಸ್ವಾಮಿ
ಎಲೆ ಎಲೆ ಹಂದೆ
ಕೂಡಲಸಂಗಮದೇವಾ