೩೫೧
ಕಡೆಗೀಲಿಲ್ಲದ ಬಂಡಿ ಹೊಡೆಗೆಡೆಯದೆ ಮಾಣ್ಬುದೆ
ಕಡೆಗೀಲು ಬಂಡಿಗಾಧಾರ
ಈ ಕಡುದರ್ಪವೇರಿದ ಒಡಲೆಂಬ ಬಂಡಿಗೆ
ಮೃಡಭಕ್ತರ ನುಡಿಗಡಣವೆ ಕಡೆಗೀಲು
ಕಾಣಾ ರಾಮನಾಥ

೩೫೨
ಕಣ್ಣು ಮೀಸಲು ಶಿವನ
ಕೈ ಮೀಸಲು ಶಿವನ
ಕಾಲು ಮೀಸಲು ಶಿವನ
ನಾಲಗೆ ಮೀಸಲು ಶಿವನ
ಕಿವಿ ಮೀಸಲು ಶಿವನ
ನಾಸಿಕ ಮೀಸಲು ಶಿವನ
ತನು ಮನವೆಲ್ಲಾ ಮೀಸಲು ಶಿವನ
ಈ ಮೀಸಲು ಬೀಸರವಾಗದಂತಿರ್ದಡೆ
ಆತನೇ ಜಗದೀಶ ಕಾಣಾ ರಾಮನಾಥ

೩೫೩
ಕತ್ತಲೆಯ ಮನೆಯಲ್ಲಿ ಸಕ್ಕರೆಯ ಸವಿದವನಂತಿರಬೇಕು
ಬಟ್ಟಬಯಲಲ್ಲಿ ನಿಂದು ಇಷ್ಟಲಿಂಗವ ಕಂಡವನಂತಿರಬೇಕು
ಇದಕ್ಕೆ ಗುರುವಿನ ಹಂಗೇಕೆ
ಲಿಂಗದಪೂಜೆ ಏಕೆ
ಸಮಯದ ಹಂಗೇಕೆ
ತನ್ನ ತಾನು ಅರಿದವಂಗೆ
ಏಣಾಂಕನಶರಣರ ಸಂಗವೇಕೆ
ಇಷ್ಟವನರಿದವಂಗೆ ನಾನೇನು ನೀನೇನು ಎಂಬ
ಗೊಜಡಿನ ಭ್ರಮೆಯೇಕೆ
ಅಮುಗೇಶ್ವರಾ

೩೫೪
ಕತ್ತಲೆಯಲ್ಲಿ ಕನ್ನವನಿಕ್ಕಿದಡೆ
ಎನಗೆ ಕತ್ತಿಯ ಕೊಟ್ಟ ಕರ್ತುವಿಗೆ ಭಂಗ
ಅವರು ಮರದಿರ್ದಲ್ಲಿ ಮನೆಯ ಹೊಕ್ಕಡೆ
ಎನ್ನ ಚೋರತನದ ಅರಿಕೆಗೆ ಭಂಗ
ಮರದಿರ್ದವರ ಎಬ್ಬಿಸಿ ಅವರಿಗೆ ಅವರೊಡವೆಯ ತೋರಿ
ಎನ್ನೊಡವೆಯ ತಂದೆ ಮಾರನವೈರಿ ಮಾರೇಶ್ವಾರಾ

೩೫೫
ಕತ್ತಲೆಯೊಳಗಡಗಿದ ನೆಳಲಿನ ಬೀಜ
ಬಿತ್ತದ ಮುನ್ನ ಮಾಮರನಾಯಿತ್ತು
ತನ್ನ ನೆಳಲೆಲ್ಲಾ ಬೆಳದಿಂಗಳು
ನೋಡ ಹೋದವರ ಕಣ್ಣೆಲ್ಲಾ ಒಡೆದವು
ಉಲುಹಿದ್ದೂ ಉಲುಹಿಲ್ಲ
ಕಪಿಲಸಿದ್ಧಮಲ್ಲಿಕಾರ್ಜುನಯ್ಯ
ಆ ಮರದ ಹೋಟೆಯೊಳಗಣ ಮಧುವಿನಂತಿದ್ದನು

೩೫೬
ಕದಳಿ ಎಂಬುದು ತನು
ಕದಳಿ ಎಂಬುದು ಮನ
ಕದಳಿ ಎಂಬುದು ವಿಷಯಂಗಳು
ಕದಳಿ ಎಂಬುದು ಭವಘೋರಾರಣ್ಯ
ಈ ಕದಳಿ ಎಂಬುದ ಗೆದ್ದು ತವೆ ಬದುಕಿ ಬಂದು
ಕದಳಿಯ ಬನದಲ್ಲಿ ಭವಹರನ ಕಂಡೆನು
ಭವ ಗೆದ್ದು ಬಂದ ಮಗಳೆ ಎಂದು
ಕರುಣದಿ ತೆಗೆದು ಬಿಗಿಯಪ್ಪಿದಡೆ
ಚೆನ್ನಮಲ್ಲಿಕಾರ್ಜುನನ ಹೃದಯಕಮಲದಲ್ಲಿ ಅಡಗಿದೆನು

೩೫೭
ಕನ್ನಡಿಯಲ್ಲಿ ಕಪ್ಪು ಹುಟ್ಟಿದಾಗ
ಕಪ್ಪ ಕಳೆದಲ್ಲದೆ ಒಪ್ಪದ ಕಾಣಬಾರದು
ತನ್ನ ಭಾವಶುದ್ಧಕ್ಕೆ ದರ್ಪಣದ ಒಪ್ಪವನರಸಬೇಕು
ಎನ್ನಯ ಮನದ ಕಪಟಕ್ಕೆ ನಿಮ್ಮಯ ಚಿತ್ತಶುದ್ಧವನರಸಬೇಕು
ನಿಮ್ಮಯ ನಿರ್ಮಲ ಎನ್ನಯ ಮಲದೇಹವ ತೊಳೆಯಬೇಕು
ಎಂಬುದಕ್ಕೆ ಅರಿವಿನ ಮಾರನ ಬಿನ್ನಹ
ಸದಾಶಿವಮೂರ್ತಿಲಿಂಗಕ್ಕೆ ತೆರಹಿಲ್ಲದ ಭಾವ

೩೫೮
ಕಬ್ಬಿನ ಬಿಲ್ಲಮಾಡಿ
ಪರಿಮಳದಲ್ಲಿ ಅಂಬ ಮಾಡಿ
ನಲ್ಲೊ ಬಿಲ್ಲಾಳೆ
ಎನ್ನ ಮನದಲ್ಲಿ ಎಸೆಯ ಬಲ್ಲೆಯಲ್ಲಾ
ಗುಹೇಶ್ವರನೆಂಬ ಲಿಂಗವನು

೩೫೯
ಕಬ್ಬುನದ ಕೋಡಗವ ಪರುಷ ಮುಟ್ಟಲು
ಅದು ಹೊನ್ನಾದಡೇನು
ಮತ್ತೇನಾದಡೇನು
ತನ್ನ ಮುನ್ನಿನ ರೂಹ ಬಿಡದನ್ನಕ್ಕ
ಕೂಡಲಸಂಗಮದೇವಾ
ನಿಮ್ಮ ನಂಬಿಯೂ ನಂಬದ ಡಂಬಕರುಗಳಯ್ಯಾ

೩೬೦
ಕರಗಿಸಿ ಎನ್ನ ಮನದ ಕಾಳಿಕೆಯ ಕಳೆಯಯ್ಯಾ
ಒರೆಗೆ ಬಣ್ಣಕ್ಕೆ ತಂದೆನ್ನ ಪುಟವನಿಕ್ಕಿ ನೋಡಯ್ಯಾ
ಕಡಿಹಕ್ಕೆ ಬಡಿಹಕ್ಕೆ ತಂದೆನ್ನ ಕಡೆಯಾಣಿಯ ಮಾಡಿ
ನಿಮ್ಮ ಶರಣರ ಪಾದಕ್ಕೆ ತೊಡಿಗೆಯ ಮಾಡಿ ಸಲಹು
ಕೂಡಲಸಂಗಮದೇವಾ

೩೬೧
ಕರಿ ಘನ ಅಂಕುಶ ಕಿರಿದೆನ್ನಬಹುದೆ
ಬಾರದಯ್ಯಾ
ಗಿರಿ ಘನ ವಬ್ರ ಕಿರಿದೆನ್ನಬಹುದೆ
ಬಾರದಯ್ಯಾ
ತಮಂಧ ಘನ ಜ್ಯೋಗಿ ಕಿರಿದೆನ್ನಬಹುದೆ
ಬಾರದಯ್ಯಾ
ಮರಹು ಘನ ನಿಮ್ಮ ನೆನೆವ ಮನ ಕಿರಿದೆನ್ನಬಹುದೆ
ಬಾರದಯ್ಯಾ
ಕೂಡಲಸಂಗಮದೇವಾ

೩೬೨
ಕರಿಯನಿತ್ತಡೆ ಒಲ್ಲೆ ಸಿರಿಯನಿತ್ತಡೆ ಒಲ್ಲೆ
ಹಿರಿದಪ್ಪ ರಾಜ್ಯವನಿತ್ತಡೆ ಒಲ್ಲೆ
ನಿಮ್ಮ ಶರಣರ ಸೂಳ್ನುಡಿಯ
ಒಂದರೆಘಳಿಗೆಯಿತ್ತಡೆ ನಿನ್ನನಿತ್ತೆ
ಕಾಣಾ ರಾಮನಾಥ

೩೬೩
ಕರುವಿನ ರೂಹನರಗಿಳಿಯನೋದಿಸುವಂತೆ
ಓದಿಸುವುದಕ್ಕೆ ಜೀವವಿಲ್ಲ
ಕೇಳುವುದಕ್ಕೆ ಜ್ಞಾನವಿಲ್ಲ
ಚೆನ್ನಮಲ್ಲಿಕಾರ್ಜುನದೇವಯ್ಯಾ
ನಿಮ್ಮನರಿಯದವನ ಭಕ್ತಿ
ಕರುವಿನ ರೂಹು ಆ ಅರಗಿಳಿಯನೋದಿಸುವಂತೆ

೩೬೪
ಕರೆಯದೆ ಬಂದುದ
ಹೇಳದೆ ಹೋದುದನಾರು ಅರಿಯರಲ್ಲಾ
ಅದಂದಂದಿಗೆ ಬಂದ ಪ್ರಾಣಿಗಳು
ಆರೂ ಅರಿಯರಲ್ಲಾ
ಗುಹೇಶ್ವರಲಿಂಗ ಉಣ್ಣದೇ ಹೋದುದನಾರೂ ಅರಿಯರಲ್ಲಾ

೩೬೫
ಕರ್ಪೂರದ ಗಿರಿಯ ಉರಿಯು ಹಿಡಿದಡೆ ಇದ್ದಿಲುಂಟೆ
ಮಂಜಿನ ಶಿವಾಲಯಕ್ಕೆ ಬಿಸಿಲ ಕಳಶವುಂಟೆ
ಕೆಂಡದ ಗಿರಿಯನರಗಿನ ಬಾಣದಲೆಚ್ಚಡೆ
ಮರಳಿ ಬಾಣವನರಸಲುಂಟೆ
ಗುಹೇಶ್ವರನೆಂಬ ಲಿಂಗವನರಿದು
ಮರಳಿ ನೆನೆಯಲುಂಟೆ

೩೬೬
ಕರ್ಮ ನಾಸ್ತಿಯೆಂಬೆ ಅನಾಸ್ತಿಯೆಂಬೆ
ಜ್ಞಾನಕೊಬ್ಬಿನಲ್ಲಿ ಉಲಿವೆ
ಉಲಿದಂತೆ ನಡೆವೆ
ಸಂಗಡಸಹಿತ ಕರಸ್ಥಲಕ್ಕೆ ಬಂದು
ನೀನೂ ಬಯಲಾಗೆ
ಎನ್ನನೂ ಬಯಲು ಮಾಡೆ
ಗುಹೇಶ್ವರ

೩೬೭
ಕಲಿಯ ಕೈಯ ಕೈದುವಿನಂತಿರಬೇಕಯ್ಯಾ
ಎಲುದೋರೆ ಸರಸವಾಡಿದಡೆ ಸೈರಿಸಬೇಕಯ್ಯಾ
ರಣದಲ್ಲಿ ತಲೆ ಹರಿದು ಅಟ್ಟೆ ನೆಲಕ್ಕೆ ಬಿದ್ದು
ಬೊಬ್ಬಿಡಲದಕ್ಕೆ ಒಲಿವ ಕೂಡಲಸಂಗಮದೇವ

೩೬೮
ಕಲಿಯಾಯಿತು ಕಲಿಯಾಯಿತು
ಕಲಿಯುಗದೊಳಗೊಂದು ಸೋಜಿಗವ ಕಂಡೆನು
ಸತ್ಯವರತಿತ್ತು
ಸಾತ್ವಿಕ ಬೆಂದಿತ್ತು
ವೈಶಿಕ ಘನವಾಯಿತ್ತು
ಠಕ್ಕು ಠವಣು ಮುಂಡು ಮುರುಹು ಭೂಮಂಡಲವೆಲ್ಲ ತುಂಬಿತ್ತು
ಆಗಳೆ ಭಕ್ತರು ಆಗಳೆ ಭಮಿಗಳು
ಅಂಗಯ್ಯ ಮೇಗಯ್ಯಾದರು ನೋಡಯ್ಯಾ
ಎನ್ನ ಸ್ವತಂತ್ರ ಕಪಿಲಸಿದ್ಧಮಲ್ಲೇಶ್ವರದೇವಯ್ಯಾ
ದೃಷ್ಟ ಲಿಂಗ ಜಂಗಮವೆಲ್ಲ ಕಲ್ಲು ಕೊರಡಾಗಿ ಹೋದರು

೩೬೯
ಕಲ್ಯಾಣವೆಂಬುದಿನ್ನಾರಿಗೆ ಹೊಗಬಹುಸು
ಹೊಗಬಾರದು ಅಸಾಧ್ಯವಯ್ಯಾ
ಆಸೆ ಆಮಿಷ ಅಳಿದಂಗಲ್ಲದೆ
ಕಲ್ಯಾಣದತ್ತಲಡಿಯಿಡಬಾರದು
ಒಳಹೊರಗು ಶುದ್ಧನಾದಂಗಲ್ಲದೆ
ಕಲ್ಯಾಣವ ಹೊಗಬಾರದು
ನೀನಾನೆಂಬುದ ಹರಿದಂಗಲ್ಲದೆ
ಕಲ್ಯಾಣದ ಒಳಗು ತಿಳಿಯಬಾರದು
ಚೆನ್ನಮಲ್ಲಿಕಾರ್ಜುನಂಗೊಲಿದು
ಉಭಯ ಲಜ್ಜೆ ಅಳಿದೆನಾಗಿ
ಕಲ್ಯಾಣವಂ ಕಂಡು
ನಮೋ ನಮೋ ಎನುತಿದ್ದೆನು

೩೭೦
ಕಲ್ಲ ನಾಗರ ಕಂಡಡೆ
ಹಾಲನೆರೆಯೆಂಬರು
ದಿಟದ ನಾಗರ ಕಂಡಡೆ
ಕೊಲ್ಲೆಂಬರಯ್ಯಾ
ಉಂಬ ಜಂಗಮ ಬಂದಡೆ
ನಡೆಯೆಂಬರು
ಉಣ್ಣದ ಲಿಂಗಕ್ಕೆ
ಬೋನವ ಹಿಡಿಯೆಂಬರಯ್ಯಾ
ನಮ್ಮ ಕೂಡಲಸಂಗನ ಶರಣರ ಕಂಡು ಉದಾಸೀನವ ಮಾಡಿದಡೆ
ಕಲ್ಲ ತಾಗಿದ ಮಿಟ್ಟೆಯಂತಪ್ಪರಯ್ಯಾ

೩೭೧
ಕಲ್ಲ ಮನೆಯ ಮಾಡಿ
ಕಲ್ಲ ದೇವರ ಮಾಡಿ
ಆ ಕಲ್ಲು ಕಲ್ಲ ಮೇಲೆ ಕೆಡೆದರೆ
ದೇವರೆತ್ತ ಹೋದರೋ
ಲಿಂಗಪ್ರತಿಷ್ಠೆಯ ಮಾಡಿದವಂಗೆ ನಾಯಕ ನರಕ
ಗುಹೇಶ್ವರ

೩೭೨
ಕಲ್ಲ ಹೊತ್ತು ಕಡಲೊಳಗೆ ಮುಳುಗಿದಡೆ
ಎಡರಿಂಗೆ ಕಡೆಯುಂಟೆ
ಅವ್ವಾ
ಉಂಡು ಹಸಿವಾಯಿತ್ತೆಂದಡೆ
ಭಂಗವೆಂದೆ
ಕಂಡ ಕಂಡ ಠಾವಿನಲ್ಲಿ ಮನ ಬೆಂದಡೆ
ಗಂಡ ಚನ್ನಮಲ್ಲಿಕಾರ್ಜುನನೆಂತೊಲಿವನವ್ವಾ

೩೭೩
ಕಲ್ಲಿನ ಹೋಳ ಬೆಲ್ಲವೆಂದು ಮಕ್ಕಳ ಕೈಯಲ್ಲಿ ಕೊಟ್ಟಡೆ
ಹಲ್ಲಿನಲ್ಲಿ ಕಡಿದು ನಾಲಗೆಯಲ್ಲಿ ನಂಜಿ
ಬೆಲ್ಲವಲ್ಲಾ ಎಂದು ಹಾಕಿ ಮನೆಯವರೆಲ್ಲರ ಕಾಡುವಂತೆ
ನಾನರಿಯದೆ ಕುರುಹ ಹಿಡಿದು
ಅದು ಎನ್ನ ಮರವೆಯ ಮನಕ್ಕೆ ತೆರಹಾಗದು
ನಾನರಿವಡೆ ಎನ್ನ ಒಡಗೂಡಿದ ತುಡುಗುಣಿ ಬೆನ್ನಬಿಡದು
ಒಡೆಯ ಸತುವಿಲ್ಲದೆ ಬಡವನ ಬಂಟನಾದ ಮತ್ತೆ
ಬಾಯ ಹೊಡೆಯಿಸಿಕೊಂಬುದಕ್ಕೆ ಅಂಜಲೇಕೆ
ಬಿಡು ಬಡವೊಡೆಯನ
ಬಿಡದಿದ್ದಡೆ ಕಲ್ಲೆದೆಯಾಗು
ಇವರೆಲ್ಲರ ವಿಧಿ ಎನಗಾಯಿತ್ತು ಕೈಯಲ್ಲಿನ ಕಠಿಣವ ನಂಬಿ
ಇದರ ಬಲ್ಲತನವ ಹೇಳಾ
ಅಲೇಖನಾದ ಶೂನ್ಯ ಕ್ಲಲಿನ ಮರೆಯಾದವನೆ

೩೭೪
ಕಲ್ಲಿನಲ್ಲಿ ಕಠಿಣ
ಖುಲ್ಲರಲ್ಲಿ ದುರ್ಗುಣ
ಬಲ್ಲವರಲ್ಲಿ ಸುಗುಣ
ಉಂಟೆಂದೆಲ್ಲರೂ ಬಲ್ಲರು
ಇಂತೀ ಇವು ಎಲ್ಲರ ಗುಣ
ಅಲ್ಲಿಗಲ್ಲಿಗೆ ಸರಿಯೆಂದು
ಗೆಲ್ಲ ಸೋಲಕ್ಕೆ ಹೋರದೆ
ನಿಜವೆಲ್ಲಿತ್ತು ಅಲ್ಲಿಯೆ ಸುಖವೆಂದನಂಬಿಗ ಚವುಡಯ್ಯ

೩೭೫
ಕಲ್ಲಿನೊಳಗೆ ವಲ್ಲಭನಿದ್ದಹನೆಂದು
ಎಲ್ಲರೂ ಬಳಲುತಿರ್ಪರು ನೋಡಾ
ಅಲ್ಲಿ ಎಲ್ಲಿಯೂ ಕಾಣೆ
ತನ್ನಲ್ಲಿ ಕುರಿತು ಇದಿರಿಟ್ಟಲ್ಲಿಯಲ್ಲದೆ
ಮತ್ತೆಯಿಲ್ಲವಾಗಿ ಇದು ಬಲ್ಲವರ ಬಲ್ಲತನ
ಹಾಗಲ್ಲದೆ ತನ್ನ ಮರೆದು ಅನ್ಯವ ಕಂಡೆಹೆನೆಂದಡೆ
ಅದು ನನ್ನಿಯಲ್ಲ ಹುಸಿ
ಮನ್ನಣೆಗೆ ಸಿಕ್ಕಿದ ಶಿಲೆಯ ಬಣ್ಣಿಸುತ್ತಿರ್ಪವರ ನೋಡಾ
ಬಣ್ಣಿಸುತ್ತಿಪ್ಪ ಅಣ್ಣಗಳೆಲ್ಲರೂ ಸನ್ನದ್ಧವಾದರೂ
ಕೋಟೆಯಲ್ಲಿ ಸಿಕ್ಕಿ ಸತ್ತುದಿಲ್ಲ
ಎಲ್ಲರೂ ಕೋಟೆಯ ಹೊರಗಿರ್ದು ಸತ್ತು ಕೆಟ್ಟರಲ್ಲಾ
ನಿಃಕಳಂಕ ಮಲ್ಲಿಕಾರ್ಜುನಾ