೩೭೬
ಕಲ್ಲು ಕಲ್ಲು ತಾಕಿದಲ್ಲಿ ಕಿಚ್ಚಿನ ಕಿಡಿಯಲ್ಲದೆ
ಹೆಂಟೆ ಶಿಲೆ ಹೋರಿದಲ್ಲಿವುಂಟೆ
ಅರಿದವನಲ್ಲಿ ಒಡಗೂಡುವ ಸುಖವಲ್ಲದೆ
ಬರಿಯನಲ್ಲಿ ಅರಿವು ಹೀನನಲ್ಲಿ
ಅರಿವಿನ ಕುರುಹ ಮರೆದಾಡುವನಲ್ಲಿ
ಸುರೆಯ ಮಡಕೆಯ ಪೂಜಿಸಿ ಕುಡಿವವನಂತಾಗಬೇಡ
ಬರಿಯ ವಾಚಾಸಿದ್ಧಿಯಲ್ಲಿ ಅರಿದೆಹೆನೆಂದು
ಅವ ಕೊಟ್ಟರಿವಿನ ಕುರುಹ ಮರೆಯಬೇಡ
ಆ ಮರೆಯಲ್ಲಿ ಬೆಳಗು ತೋರುತ್ತದೆ
ಸದಾಶಿವಮೂರ್ತಿಲಿಂಗದಲ್ಲಿ

೩೭೭
ಕಲ್ಲು ಮರ ಮಣ್ಣಿನ ಮರೆಯಲ್ಲಿ ಪೂಜಿಸಿಕೊಂಬುದು ವಸ್ತುವೇ
ತನ್ನ ಮನಸ್ಸಿನ ಗೊತ್ತಲ್ಲದೆ
ಅಲ್ಲಿಪ್ಪುದನರಿವ ಅರಿವು
ತಾನೆ ನಿಜವಸ್ತುವಾಗಿ ಬೆಳಗುತ್ತದೆ
ಸದಾಶಿವಮೂರ್ತಿಲಿಂಗವೆಯಾಗಿ

೩೭೮
ಕಲ್ಲು ಲಿಂಗವಲ್ಲ
ಉಳಿಯ ಮೊನೆಯಲ್ಲಿ ಒಡೆಯಿತ್ತು
ಮರ ದೇವರಲ್ಲ
ಉರಿಯಲ್ಲಿ ಬೆಂದಿತ್ತು
ಮಣ್ಣು ದೇವರಲ್ಲ
ನೀರಿನ ಕೊನೆಯಲ್ಲಿ ಕದಡಿತ್ತು
ಇಂತಿವನೆಲ್ಲವನರಿವ ಚಿತ್ತ ದೆವರಲ್ಲ
ಕರಣಂಗಳ ಮೊತ್ತದೊಳಗಾಗಿ ಸತ್ವಗೆಟ್ಟಿತ್ತು
ಇಂತಿವ ಕಳೆದುಳಿದ ವಸ್ತುವಿಪ್ಪೆಡೆ ಯಾವುದೆಂದಡೆ
ಕಂಡವರೊಳಗೆ ಕೈಕೊಂಡಾಡದೆ
ಕೊಂಡ ವ್ರತದಲ್ಲಿ ಮತ್ತೊಂದನೊಡಗೂಡಿ ಬೆರೆಯದೆ
ವಿಶ್ವಾಸ ಗ್ರಹಿಸಿ ನಿಂದಲ್ಲಿ ಆ ನಿಜಲಿಂಗವಲ್ಲದೆ
ಮತ್ತೊಂದು ಪೆರತನರಿಯದೆ ನಿಂದಾತನೆ ಸರ್ವಾಂಗಲಿಂಗಿ
ವೀರಬೀರೇಶ್ವರಲಿಂಗದೊಳಗಾದ ಶರಣ

೩೭೯
ಕವುಳುಗೋಲ ಹಿಡಿದು ಶ್ರವವ ಮಾಡಬಹುದಲ್ಲದೆ
ಕಳನೇರಿ ಕಾದುವುದರಿದು ನೋಡಾ
ಬಣ್ಣವಿಟ್ಟು ನುಡಿದಲ್ಲಿ ಫಲವೇನು
ಚಿನ್ನಗೆಯ್ಕವನ್ನಾಡುವವನಂತೆ
ಬಂದ ಸಮಯವನರಿತು ಇದ್ದುದ ವಂಚಿಸದಿದ್ದಡೆ
ಕೂಡಸಂಗಮದೇವನೊಲಿದು ಸಲಹುವ

೩೮೦
ಕಸ್ತುರಿಯ ಮೃಗ ಬಂದು ಸುಳಿಯತ್ತಯ್ಯ
ಸಕಲ ವಿಸ್ತಾರದ ರೂಹು ಬಂದು ನಿಂದಿತ್ತಯ್ಯ
ಆವ ಗ್ರಹ ಬಂದು ಸೋಂಕಿತ್ತೆಂದರಿಯೆನಯ್ಯ
ಆವ ಗ್ರಹ ಬಂದು ಹಿಡಿಯಿತ್ತೆಂದರಿಯೆನಯ್ಯ
ಹೃದಯ ಕಮಲ ಮಧ್ಯದಲ್ಲಿ ಗುರುವನರಿದು
ಪೂಜಿಸಿ ಗುರು ವಿಖ್ಯಾತನೆಂಬುದ ನಾನರಿದೆನಯ್ಯ
ಗುರುಗುಹೇಶ್ವರನಲ್ಲಿ
ಹಿಂದಣ ಹುಟ್ಟುರತು ಹೋದುದ ಕಂಡೆನಯ್ಯ

೩೮೧
ಕಳನನೇರಿದಲ್ಲಿ ಕೈದನರಸಲಿಲ್ಲ
ಬಲ್ಲವನದೆನೆಂಬಲ್ಲಿ ಗೆಲ್ಲ ಸೋಲಕ್ಕೆ ಹೋರಲಿಲ್ಲ
ನೇಮ ಸಂದಲ್ಲಿ
ತನುವಿನಾಸೆಯು ಮನಸಂದಿತ್ತು
ಮಾರೇಶ್ವರಾ

೩೮೨
ಕಳಬೇಡ ಕೊಲಬೇಡ
ಹುಸಿಯ ನುಡಿಯಲು ಬೇಡ
ಮುನಿಯಬೇಡ
ಅನ್ಯರಿಗೆ ಅಸಹ್ಯಬಡಬೇಡ
ತನ್ನ ಬಣ್ಣಿಸಬೇಡ
ಇದಿರ ಹಳಿಯಲು ಬೇಡ
ಇದೇ ಅಂತರಂಗಶುದ್ಧಿ
ಇದೇ ಬಹಿರಂಗಶುದ್ಧಿ
ಇದೇ
ನಮ್ಮ ಕೂಡಲಸಂಗಮದೇವರನೊಲಿಸುವ ಪರಿ

೩೮೩
ಕಳವಳದ ಮನ ತಲೆಕೆಳಗಾದುದವ್ವಾ
ಸುಳಿದು ಬೀಸುವ ಗಾಳಿ ಉರಿಯಾದುದವ್ವಾ
ಬೆಳುದಿಂಗಳು ಬಿಸಿಯಾಯಿತ್ತು ಕೆಳದಿ
ಹೊಳಲ ಸುಂಕಿಗನಂತೆ ತೊಳಲುತ್ತಿದ್ದೆನವ್ವಾ
ತಿಳುಹಾ
ಬುದ್ಧಿಯ ಹೇಳಿ ಕರೆತಾರೆಲಗವ್ವಾ
ಚೆನ್ನಮಲ್ಲಿಕಾರ್ಜುನಂಗೆ ಎರಡರ ಮುನಿಸವ್ವಾ

೩೮೪
ಕಾಗೆ ಒಂದಗುಳ ಕಂಡಡೆ
ಕರೆಯದೆ ತನ್ನ ಬಳಗವನು
ಕೋಳಿ ಒಂದು ಕುಟುಕ ಕಂಡಡೆ
ಕೂಗಿ ಕರೆಯದೆ ತನ್ನ ಕುಲವೆಲ್ಲವ
ಶಿವಭಕ್ತನಾಗಿ ಭಕ್ತಿಪಕ್ಷವಿಲ್ಲದಿದ್ದಡೆ
ಕಾಗೆ ಕೋಳಿಯಿಂದ ಕರಕಷ್ಟ
ಕೂಡಲಸಂಗಮದೇವಾ

೩೮೫
ಕಾಗೆಯ ಮರಿ ಕೋಗಿಲೆಯಾಗಬಲ್ಲುದೆ
ಆಡಿನಮರಿ ಆನೆಯಾಗಬಲ್ಲುದೆ
ಸೀಳನಾಯಿ ಸಿಂಹದ ಮರಿಯಾಗಬಲ್ಲುದೆ
ಅರಿವು ಆಚಾರ ಸಮ್ಯಜ್ಞಾನವನರಿಯದೆ
ನಾಮವ ಹೊತ್ತುಕೊಂಡು ತಿರುಗುವ ಗಾವಿಲರ
ಮುಖವ ನೋಡಲಾಗದು ಅಮುಗೇಶ್ವರಾ

೩೮೬
ಕಾಡಪತ್ರೆಯ ನಾಡಕೀಡೆ ತಿಂದಿರವೆ
ತೋಳ ದಿಗಂಬರಿಯೆ
ಎತ್ತು ಬ್ರಹ್ಮಚಾರಿಯೆ
ಬಾವುಲ ತಲೆಕೆಳಗಾಗಿದ್ದಡೆ ತಪಸ್ವಿಯೆ
ಸಕಳೇಶ್ವರದೇವಾ
ನಿಮ್ಮ ನಿಜನರಿಯದ ಶರಣರು
ಹೊರಹಂಚೆ ಒಳಬೊಳ್ಳೆ
ಒಲ್ಲದು ಲಿಂಗೈಕ್ಯರು

೩೮೭
ಕಾಣದುದನರಸುವರಲ್ಲದೆ ಕಂಡುದನರಸುವರೇ
ಹೇಳಾ
ಘನಕ್ಕೆ ಘನವಾದ ವಸ್ತು
ತಾನೆ ಗುರುವಾದ
ತಾನೆ ಲಿಂಗವಾದ
ತಾನೆ ಜಂಗಮವಾದ
ತಾನೆ ಪ್ರಸಾದವಾದ
ತಾನೆ ಮಂತ್ರವಾದ
ತಾನೆ ಯಂತ್ರವಾದ
ತಾನೆ ಸಕಲ ವಿದ್ಯಾಸ್ವರೂಪನಾದ
ಇಂತಿವೆಲ್ಲವನೊಳಕೊಂಡು
ಎನ್ನ ಕರಸ್ಥಲಕ್ಕೆ ಬಂದು
ಇನ್ನು ನಿರ್ವಿಕಾರ ಗುಹೇಶ್ವರ

೩೮೮
ಕಾಣಬಹುದು ಕೈಗೆ ಸಿಲುಕದು
ಅರಿಯಬಹುದು ಕುರುಹಿಡಬಾರದು
ಭಾವಿಸಬಹುದು ಬೆರಸಬಾರದು
ಇಂತೀ ಉಪಮಿಸಬಾರದ ಮಹಾಘನವ
ಕಪಿಲಸಿದ್ಧಮಲ್ಲಿಕಾರ್ಜುನ
ನಿಮ್ಮ ಶರಣನೇ ಬಲ್ಲ

೩೮೯
ಕಾಣಬೇಕೆಂದು ಮುಂದೆ ನಿಂದು
ಕೇಳಬೇಕೆಂದು ಕೂಗಿ ಕರೆದು
ಈ ಕೇಣಸರದ ಜಾಣತನದ ಗುರುವೇಕೆ
ಸುಡು ಒಡಲ ಬಿಡು ಅಸುವ ನಿನಗೆ ಒಡೆಯತನವೇಕೆ
ಸುಖದಡಗಿಂಗೆ ಸಿಕ್ಕಿ ಹಿಡಿಮೊಲಕ್ಕೆ ಗಿಡುವಿನ ಹಂಗಿಲ್ಲ
ಬಿಡುವನವರ ಐಘಟದೂರ ರಾಮೇಶ್ವರಲಿಂಗ

೩೯೦
ಕಾಣುತ್ತ ಕಾಣುತ್ತ ಕಂಗಳ ಮುಚ್ಚಿದೆ
ನೋಡವ್ವಾ
ಕೇಳುತ್ತ ಕೇಳುತ್ತ ಮೈಮರೆದೊರಗಿದೆ
ನೋಡವ್ವಾ
ಹಾಸಿದ ಹಾಸಿಗೆಯ ಹಂಗಿಲ್ಲದೆ ಹೋಯಿತ್ತು
ಕೇಳವ್ವಾ
ಚೆನ್ನಮಲ್ಲಿಕಾರ್ಜುನದೇವರದೇವನ ಕೂಡುವ ಕೂಟವ
ನಾನೇನೆಂದರಿಯದೆ ಮರೆದೆ
ಕಾಣವ್ವಾ

೩೯೧
ಕಾಣುತ್ತ ಕಾಣುತ್ತ ಕಣ್ಣ ಮುಚ್ಚಿದೆ
ಕೇಳುತ್ತ ಕೇಳುತ್ತ ಮೈಮರದೊರಗಿದೆ
ಹಾಸಿದ ಹಾಸಿಗೆಯ ಬೀಸಾಡಿ ಕಳೆದೆ
ಚನ್ನಮಲ್ಲಿಕಾರ್ಜುನನ ಇರುಳೆಲ್ಲ ಕೂಡಿ
ಬೆಳಗಾಗಿ ಕಾಣದೆ ಬೆಂಬಿದ್ದೆನು

೩೯೨
ಕಾಣೆನೆಂಬ ಅರಿಕೆ
ಕಂಡೆನೆಂಬ ಸಂತೋಷ
ಉಭಯವ ವಿಚಾರಿಸುವನ್ನಬರ
ಮರವೆಯ ಬೀಜ
ಕಂಡೆನೆಂಬ ಕಾಣಿಕೆಯವನಲ್ಲ
ಕಾಣೆನೆಂಬ ಸಂಚಾರದವನಲ್ಲ
ಆ ಉಭಯದ ಅಂಗ ಲೇಪವಾದಲ್ಲಿ
ಮನಸಂದಿತ್ತು ಮಾರೇಶ್ವರಾ

೩೯೩
ಕಾದ ಹಾಲ ನೋಣ ಮುಟ್ಟಬಲ್ಲುದೆ
ಕಿಚ್ಚಿನೊಳಗಣ ಗುಂಡ ಬೆಕ್ಕು ಮುಟ್ಟಬಲ್ಲುದೆ
ಮರುಜವಣಿಯ ಕಡ್ಡಿ ಕಯ್ಯಲಿದ್ದವಂಗೆ ಸರ್ಪ ಕಡಿಯಬಲ್ಲುದೆ
ಈ ತ್ರಿವಿಧವನರಿದವಂಗೆ ಹಿಂದೆ ಶಂಕೆಯಿಲ್ಲ ಮುಂದೆ ಭೀತಿಯಲ್ಲ
ಕಳಂಕು ಇಲ್ಲದೆ ಅಮುಗೇಶ್ವರಲಿಂಗವು ಅಪ್ಪಿಕೊಂಡಿತ್ತು

೩೯೪
ಕಾಮಧೇನುವೆಂದಡೆ ಇಹುದಕ್ಕೆ ನೆಲೆ ಬೇಕು
ಕಲ್ಪತರುವೆಂದಡೆ ಹುಟ್ಟೂದಕ್ಕೆ ಭೂಮಿ ಬೇಕು
ಚಿಂತಾಮಣಿಯೆಂದಡೆ ತಾನೊಂದ ಚಿಂತಿಸಿ ಬೇಡಿಯಲ್ಲದೆ
ಕೊಡದೊಂದುವ
ಇವಕ್ಕೆಲ್ಲಕ್ಕೂ ಒಂದೊಂದು ನಿಂದ ನೆಲೆ ವಾಸವಾಯಿತ್ತು
ಮನದರಿವಿಂಗೆ ಕೈಯ ಕುರುಹಿಂಗೆ
ವಿಚಾರದಿಂದ ಒಳಹೊಕ್ಕು ನಿಂದು ನೋಡಲಾಗಿ
ಹಿಂದಳ ಕತ್ತಲೆಯ ಮುಂದಳ ಬೆಳಗಿನ ಉಭಯದ ಸಂಧಿಯಲ್ಲಿ
ಸಲೆ ಸಂದು ತೋರುತ್ತದೆ ನಿಜದ ಬೆಳಗು ತೋರುತ್ತದೆ
ಸದಾಶಿವಮೂರ್ತಿಲಿಂಗದಲ್ಲಿ

೩೯೫
ಕಾಮನೆಂಬ ಬಿಲ್ಲಾಳವುಂಟೆಂಬುದ
ನಾವು ಕೇಳಿ ಬಲ್ಲೆವೈಸೆ
ಅವನೆಲ್ಲರನೆಸೆವ
ಅವ ನಮ್ಮ ಕಂಡಡೆ
ಬೆಟ್ಟೆಮ್ಮ ನಿಟ್ಟೈಸದೆ ಸರಿವ
ಸಕಳೇಶ್ವರದೇವರನರಿಯದ ನಿರ್ಭಾಗ್ಯರನೆಸೆವಾ

೩೯೬
ಕಾಮಾ
ನಿನ್ನ ಬಿಲ್ಲಾಳುತನುವನು
ಎಸುಗೆಯನು ನೋಡುವೆನು
ಕೇಳೆಲವೊ
ಕುಸುಮಶರವನು ತೊಡು ನೀನು
ಎಸು
ನಿನ್ನೆಸುಗೆಯ ನೋಡುವೆನು
ಕೇಳಾ
ಎನಗೂ ಉರಿಲಿಂಗದೇವಗೂ ತೊಟ್ಟೆಸು
ಎಸಲು ನೀ ಬಿಲ್ಲಾಳಹೆಯೋ ಕಾಮಾ

೩೯೭
ಕಾಮಾರಿಯ ಗೆಲಿದನು ಬಸವಾ ನಿಮ್ಮಿಂದ
ಸೋಮಧರನ ಹಿಡಿತಪ್ಪೆನು ಬಸವಾ ನಿಮ್ಮ ಕೃಪೆಯಿಂದ
ನಾಮದಲ್ಲಿ ಹೆಂಗೂಸೆಂಬ ಹೆಸರಾದಡೇನು
ಭಾವಿಸಲು ಗಂಡು ರೂಪು ಬಸವಾ ನಿಮ್ಮ ದಯದಿಂದ
ಅತಿಕಾಮಿ ಚೆನ್ನಮಲ್ಲಿಕಾರ್ಜುನಂಗೆ ತೊಡರಿಕ್ಕಿ
ಎರಡುವರಿಯದೆ ಕೂಡಿದೆನು ಬಸವಾ ನಿಮ್ಮ ಕೃಪೆಯಿಂದ

೩೯೮
ಕಾಮಿಗೆ ಯೋನಿಯೆಲ್ಲವೂ ಸರಿ
ಕ್ರೋಧಿಗೆ ಕೊಲೆ ಸರ್ವಜೀವವೆಲ್ಲವೂ ಸರಿ
ಲೋಭಿಗೆ ಜಯ ಅಪಜಯದಿಂದ ಬಂದ ದ್ರವ್ಯವೆಲ್ಲವೂ ಸರಿ
ಪಾತಕಂಗೆ ಪಾಪಪುಣ್ಯವೆಂಬುದಿಲ್ಲ
ಇಂತೀ ಜಗದ ಸೂತಕಕ್ಕೆ ಹೊರಗಾಗಿ
ತ್ರಿಕರಣಸೂತಕಕ್ಕೆ ಒಳಗಲ್ಲದೆ
ಕಾತು ಕರ್ಮವನರಿಯದೆ ಜೀವ ಭವವನುಣ್ಣದೆ
ಆವ ಠಾವಿನಲ್ಲಿಯೂ ಕಲೆ ನಿಷ್ಟತ್ತಿಯಾದ ಮತ್ತೆ
ಕಾಯಕ್ಕೆ ಕುರುಹಿಲ್ಲ ಜೀವಕ್ಕೆ ಭಯವಿಲ್ಲ
ಅರಿವಿಂಗೆ ಮರವೆಯಿಲ್ಲದೆ ತೋರದ ನಿರಾಳ
ಕಾಮಧೂಮ ಧೂಳೇಶ್ವರ ತಾನೂ ತಾನೆ

೩೯೯
ಕಾಮಿಸಿ ಕಲ್ಪಿಸಿ ಭಾವಿಸಿ
ಬರಿದೆ ಬಳಲಿದೆ
ಚಿಂತೆ ಮರುಳುತನಂ
ಅದೆಂತು ಬಂದುದನಂತೆ ಕಾಬುದು
ಚಿಂತೆ ಮರುಳುತನಂ
ಅಚಿಂತ್ಯ ಸಕಳೇಶ್ವರ ಮಾಡಿದಂತೆ
ಅಂತೆಯಲ್ಲದೆ ಎಂತೂ ಆಗದು
ಚಿಂತೆ ಮರುಳುತನಂ

೪೦೦
ಕಾಮಿಸಿದಲ್ಲದೆ ಕೊಡದು ಕಾಮಧೇನು
ಕಲ್ಪಿಸಿದಲ್ಲದೆ ಕೊಡದು ಕಲ್ಪವೃಕ್ಷ
ಚಿಂತಿಸಿದಲ್ಲದೆ ಕೊಡದು ಚಿಂತಾಮಣಿ
ಭಾವಿಸಿದಲ್ಲದೆ ಕೊಡನು ಶಿವನು
ಕಾಮಿಸದೆ ಕಲ್ಪಿಸದೆ
ಚಿಂತಿಸದೆ ಭಾವಿಸಿದೆ
ಕೊಡಬಲ್ಲರು ಕೂಡಲಚೆನ್ನಸಂಗಾ
ನಿಮ್ಮ ಶರಣರು