೪೦೧
ಕಾಯ ಕರ‍ನೆ ಕಂದಿದಡೇನಯ್ಯಾ
ಕಾಯ ಮಿರನೆ ಮಿಂಚಿದಡೇನಯ್ಯಾ
ಅಂತರಂಗ ಶುದ್ಧವಾದ ಬಳಿಕ
ಚನ್ನಮಲ್ಲಿಕಾರ್ಜುನಯ್ಯಾ
ನೀನೊಲಿದ ಕಾಯವು ಹೇಗಿದ್ದರೇನು

೪೦೨
ಕಾಯ ನಿಮ್ಮ ದಾನ
ಜೀವ ನಿಮ್ಮದಾನ
ಕಾಯ ಜೀವ ಉಳ್ಳಲ್ಲಿಯೇ
ನಿಮ್ಮ ಪೂಜಿಸದ ನಾಯಿಗಳನೇನೆಂಬೆ
ಹೇಳ ರಾಮನಾಥ

೪೦೩
ಕಾಯ ಬ್ರಹ್ಮಚಾರಿಯಾದಡೇನಯ್ಯಾ
ಆಸೆ ಬ್ರಹ್ಮಚಾರಿಯಾಗದನ್ನಕ್ಕರ
ಶಬ್ದ ಮೌನಿಯಾದಡೇನಯ್ಯಾ
ನೆನಹು ಮೌನಿಯಾಗದನ್ನಕ್ಕರ
ತನು ಬೋಳಾದಡೇನಯ್ಯಾ
ಮನ ಬೋಳಾಗದನ್ನಕ್ಕರ
ಇದು ಕಾರಣ
ಕೂಡಲಚೆನ್ನಸಂಗಯ್ಯಾ
ನಿಮ್ಮ ಶರಣಸ್ಥಲವಾರಿಗೆಯೂ ಅಳವಡದು

೪೦೪
ಕಾಯ ಭ್ರಮೆಯಿಂದ ಕೈಲಾಸ
ಜೀವ ಭ್ರಮೆಯಿಂದ ಮಹದ ಕೂಟವೆಂಬುದು
ಕಾಯದ ಜೀವದ ಭೇದವನರಿತಲ್ಲಿ
ಅತ್ತಲಿತ್ತಲೆಂದು ಮತ್ತೆ ಹಲುಬಲಿಲ್ಲ
ಇದು ನಿಶ್ಚಯದ ಕೂಟ
ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನನಲ್ಲಿ

೪೦೫
ಕಾಯ ಸಮಾಧಿಯನೊಲ್ಲೆ
ನೆನಹು ಸಮಾಧಿಗೆ ನಿಲ್ಲೆ
ಕೈಲಾಸವೆಂಬ ಭವಸಾಗರವನೊಲ್ಲೆ
ನೀ ಎನ್ನ ಅಲ್ಲಿಗೆ ಇಲ್ಲಿಗೆ ಎಂದೆಳೆಯದೆ
ನಿನ್ನಲ್ಲಿಗೆ ಕೂಟಸ್ಥವ ಮಾಡಿ
ನಿಃಕಳಂಕ ಮಲ್ಲಿಕಾರ್ಜುನಾ

೪೦೬
ಕಾಯಕಕ್ಕಾರದೆ ಮೈಸೋಂಬತನದಿಂದ
ಬೇರೆ ಕೂಳ ಗಳಿಸಲಾರದೆ ಹಸಿದಿಪ್ಪರಯ್ಯಾ
ಉಡಿಲು ಸೀರೆಯ ಗಳಿಸಲಾರದೆ ಕಚ್ಚುಟವ ಕಟ್ಟಿಕೊಂಡಿಪ್ಪರಯ್ಯಾ
ಮೀಯಲೆಣ್ಣೆಯ ಗಳಿಸಲಾರದೆ ಮಂಡೆ ಬೋಳಾಗಿಪ್ಪರಯ್ಯಾ
ದಿಟದಿಂದ ಬಿಡಿಸದೆ
ನಿಸ್ಸಂಸಾರದ ಸಟೆಯನವಧರಿಸಿಕೊಂಡಿಪ್ಪವರಿಗೆ ಆನಂಜುವೆ
ಸಕಳೇಶ್ವರದೇವಾ

೪೦೭
ಕಾಯಕದಲ್ಲಿ ನಿರತನಾದಡೆ
ಗುರುದರ್ಶನವಾದಡೂ ಮರೆಯಬೇಕು
ಲಿಂಗಪೂಜೆಯಾದಡೂ ಮರೆಯಬೇಕು
ಜಂಗಮ ಮುಂದೆ ನಿಂದಿದ್ದಡೂ
ಹಂಗ ಹರಿಯಬೇಕು
ಕಾಯಕವೆ ಕೈಲಾಸವಾದ ಕಾರಣ
ಅಮರೇಶ್ವರಲಿಂಗವಾಯಿತ್ತಾದಡೂ ಕಾಯಕದೊಳಗು

೪೦೮
ಕಾಯಕಕ್ಕೆ ಕರ್ಮ ಗುರುವಾಗಬೇಕು
ಉಭಯ ವೇಧಿಸಿ ನಿಂದಲ್ಲಿ
ಸ್ವಾನುಭಾವ ಸನ್ನದ್ಧನಾಗಿ ಗುರುವಾಗಬೇಕು
ಆತನನುಜ್ಞೆಯಿಂದ ಬಂದ ಚಿತ್ತದ ಗೊತ್ತಿನ ಕುರುಹು
ಅದೆ ವಸ್ತು ನಿಶ್ಚಯ
ಸದಾಶಿವಮೂರ್ತಿಲಿಂಗವು ತಾನಾಗಿ

೪೦೯
ಕಾಯಕ್ಕೆ ಕಾಹ ಕೊಡುವರಲ್ಲದೆ
ಮನಕ್ಕೆ ಕಾಹ ಕೊಡುವರೆ
ಕೆಳದಿ
ಇಂತಪ್ಪ ನಲ್ಲನನೆಲ್ಲಿಯೂ ಕಾಣೆ
ಇಂತಪ್ಪ ಪುರುಷನನೆಲ್ಲಿಯೂ ಕಾಣೆ
ಇಂತಪ್ಪ ಚೋದ್ಯವನೆಲ್ಲಿಯೂ ಕಾಣೆ
ಸದ್ಗುಣದ ಕಾಹನು ಮನಕ್ಕೆ ಕೊಟ್ಟನು
ಉರಿಲಿಂಗದೇವನು
ಅತಿಚೋದ್ಯವೆನಗೆ

೪೧೦
ಕಾಯಕ್ಕೆ ನೆಳಲಾಗಿ ಕಾಡಿತ್ತು
ಮಾಯೆ
ಪ್ರಾಣಕ್ಕೆ ಮನವಾಗಿ ಕಾಡಿತ್ತು
ಮಾಯೆ
ಮನಕ್ಕೆ ನೆನಹಾಗಿ ಕಾಡಿತ್ತು
ಮಾಯೆ
ನೆನಹಿಂಗೆ ಅರುಹಾಗಿ ಕಾಡಿತ್ತು
ಮಾಯೆ
ಅರುಹಿಂಗೆ ಮರಹಾಗಿ ಕಾಡಿತ್ತು
ಮಾಯೆ
ಜಗದ ಜಂಗುಳಿಗೆ ಬೆಂಗೋಲನೆತ್ತಿ ಕಾಡಿತ್ತು
ಮಾಯೆ
ಚೆನ್ನಮಲ್ಲಿಕಾರ್ಜುನಾ
ನೀನೊಡ್ಡಿದ ಮಾಯೆಯನಾರಿಗೂ ಗೆಲಬಾರದು

೪೧೧
ಕಾಯದ ಕಾನನದಲ್ಲಿ ಭಾವದ ನವಿಲು ನಲಿದಾಡುತ್ತಿರೆ
ಒಂದು ಹಾವಿನ ಮರಿ ಬಂದು ಹಾಯಿತ್ತು
ನವಿಲಂಜಿ ಹೋಗುತ್ತಿರಲಾಗಿ ಹಾವಿನ ಮರಿಯ ನವಿಲಗರಿ ನುಂಗಿತ್ತು
ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಲಿಂಗವು
ಚೋದ್ಯವಾದ ಕಾರಣ

೪೧೨
ಕಾಯದ ಲಜ್ಜೆಯ ಕಲ್ಪಿತವ ಕಳೆದು
ಜೀವದ ಲಜ್ಜೆಯ ಮೋಹವನಳಿದು
ಮನದ ಲಜ್ಜೆಯ ನೆನಹ ಸುಟ್ಟು
ಭಾವದ ಕೂಟ ಬತ್ತಲೆಯೆಂದರಿದು
ತವಕದ ಸ್ನೇಹ ವ್ಯವಹಾರಕ್ಕೆ ಹುಗದು
ಕೂಡಲಸಂಗಮದೇವಯ್ಯಾ
[ಎನ್ನ ಹೆತ್ತ ತಾಯಿ ಮಹದೇವಿಕ್ಕನ ನಿಲವ ನೋಡಯ್ಯಾ ಪ್ರಭುವೆ]

೪೧೩
ಕಾಯದಿಂದ ಗುರುವ ಕಂಡೆ
ಕಾಯದಿಂದ ಲಿಂಗವ ಕಂಡೆ
ಕಾಯದಿಂದ ಜಂಗಮವ ಕಂಡೆ
ಕಾಯದಿಂದ ಪ್ರಸಾದವ ಕಂಡೆ
ಕಾಯದಿಂದ ಸಕಳೇಶ್ವರದೇವರ ಪೂಜಿಸುವಲ್ಲಿ
ಉತ್ತರಸಾಧಕನಾದೆಯಲ್ಲಾ ಎಲೆ ಕಾಯವೆ

೪೧೪
ಕಾಯದೊಳಗೆ ಕಾಯವಾಗಿ
ಪ್ರಾಣದೊಳಗೆ ಪ್ರಾಣವಾಗಿ
ಮನದೊಳಗೆ ಮನವಾಗಿ
ಭಾವದೊಳಗೆ ಭಾವವಾಗಿ
ಅರಿವಿನೊಳಗೆ ಅರುಹಿನ ತಿರುಳಾಗಿ
ಮರವು ಮಾರಡೆಯಿಲ್ಲದೆ ನಿಜಪದವು ಸಾಧ್ಯವಾದ ಬಳಿಕ
ಆವುದು ವರ್ಮ ಆವುದು ಕರ್ಮ
ಆವುದು ಭೋಧೆ
ಆವುದು ಸಂಬಂಧ
ನಾ ಹೇಳಲಿಲ್ಲ ನೀ ಕೇಳಲಿಲ್ಲ
ಅದೇನು ಕಾರಣವೆಂದರೆಬೆಸಗೊಂಬರೆ ತೆರಹಿಲ್ಲವಾಗಿ
ಗೊಹೇಶ್ವರಲಿಂಗದಲ್ಲಿ ತೆರೆಮರೆ ಯಾವುದು ಹೇಳಯ್ಯ [ಬಸವಣ್ಣ]

೪೧೫
ಕಾಯವ ಮರೆದು ಜೀವವನರಿಯಬೇಕು
ಜೀವನ ಮರೆದು ಜ್ಞಾನವನರಿಯಬೇಕು
ಜ್ಞಾನವ ಮರೆದು ಬೆಳಗನರಿಯಬೇಕು
ಬೆಳಗಿನ ಮರೆಯ ಈಶಾನ್ಯಮೂರ್ತಿ
ಮಲ್ಲಿಕಾರ್ಜುನಲಿಂಗವನರಿಯಬೇಕು

೪೧೬
ಕಾಯವಳಿಯಲಾಗಿ ಜೀವನ ಚೇತನಕ್ಕೆ ಸ್ಥಾಪ್ಯವಿಲ್ಲ
ಜೀವ ಹಿಂಗೆ ಘಟವೊಂದು ದಿನಕ್ಕೆ ಆಶ್ರಯಿಸಿ ನಿಲಲರಿಯದು
ಒಂದ ಬಿಟ್ಟೊಂದ ಹಿಡಿವುದಕ್ಕೆ ಎಡೆತೆರಪಿಲ್ಲ
ಇದು ಕಾರಣದಲ್ಲಿ
ಇಷ್ಟಕ್ಕೂ ಪ್ರಾಣಕ್ಕೂ ಬೆಚ್ಚಂತಿರಬೇಕು
ನಿಂದ ಇರವಿನಲ್ಲಿ ಸಂದು ಮತ್ತೊಂದು ವಿಚಾರಿಸಿಹೆನೆಂಬ
ಸಂದೇಹವಳಿದಲ್ಲಿ
ತೋರುತ್ತದೆ ಬೆಳಗು
ಸದಾಶಿವಮೂರ್ತಿಲಿಂಗದಲ್ಲಿ

೪೧೭
ಕಾಯವಿದ್ದಲ್ಲದೆ ಜೀವಕ್ಕೆ ಬೆಲೆಯಿಲ್ಲ
ಜೀವವಿದ್ದಲ್ಲದೆ ಜ್ಞಾನಕ್ಕೆ ಕುರುಹಿಲ್ಲ
ಜ್ಞಾನವಿದ್ದಲ್ಲದೆ ಬೆಳಗಿಗೆ ಒಡಲಿಲ್ಲ
ಒಂದಕ್ಕೊಂದು ಹಿಂಗಿ ಕಾಬ ಠಾವ ಹೇಳಾ
ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವೆ

೪೧೮
ಕಾಯವಿದ್ದು ಕಾಬುದು ವಿಜ್ಞಾನ
ಜೀವವಿದ್ದು ಕಾಬುದು ಸುಜ್ಞಾನ
ಎರಡಳಿದು ತೋರಿಕೆಯಲ್ಲಿ ಕಾಬುದು ಪರಂಜ್ಯೋತಿಜ್ಞಾನ
ಇಂತೀ ಮೂರು ಮುಖವ ಏಕವ ಮಾಡಿ
ಬೇರೊಂದು ಕಾಬುದು ಪರಮಪ್ರಕಾಶಜ್ಞಾನ
ಇಂತೀ ಅಂತರ ಪಟಂತರದಲ್ಲಿ
ನಿಂದು ನೋಡುವ ಸಂದೇಹವ ಹರಿದ ಸಂದಿನಲ್ಲಿ
ಕುಂದದ ಬೆಳಗು ತೋರುತ್ತದೆ
ಸದಾಶಿವಮೂರ್ತಿಲಿಂಗದಲ್ಲಿ

೪೧೯
ಕಾಯವೆಂಬ ಡಕ್ಕೆ
ಕ್ರೀ ಭಾವವೆಂಬ ಹೊದಕೆ
ಅರಿವೆಂಬ ನೇಣಿನಲ್ಲಿ
ಸ್ಥೂಲಸೂಕ್ಷ್ಮವೆಂಬ ಹೊಡೆಚೆಂಡು ಕಟ್ಟಿ
ಹೊಯ್ವುತ್ತಿದೆ ಡಕ್ಕೆ
ಕಾಲಾಂತಕಭೀಮೇಶ್ವರಲಿಂಗವಲ್ಲದಿಲ್ಲಾ ಎಂದು

೪೨೦
ಕಾಯವೆಂಬ ಡಕ್ಕೆಯ ಮೇಲೆ
ಜೀವವೆಂಬ ಹೊಡೆಚೆಂಡು ಬೀಳೆ
ತ್ರಿವಿಧವ ತಾ ತಾಯೆಂಬ ಆಸೆ ಹಿಂಡಿ ಡಿಂಡಿಯೆನುತ್ತಿದೆ
ಇಂತೀ ಉಲುಹಿನ ಭೇಧದಲ್ಲಿ
ಹೊಲಬುದಪ್ಪದೆ ಗೆಲಬೇಕು ಕಾಲವೆಂಬ ಮಾರಿಯ
ಕಾಲಾಂತಕ ಭೀಮೇಶ್ವರಲಿಂಗವನರಿಯಬಲ್ಲಡೆ

೪೨೧
ಕಾಯವೆಂಬ ಪಟ್ಟಣಕ್ಕೆ ಸತ್ಯವೆಂಬ ಕೋಟೆಯನಿಕ್ಕಿ
ಧರ್ಮಾರ್ಥಕಾಮಮೋಕ್ಷಂಗಳೆಂಬುಕ್ಕಡದವರೆಚ್ಚತ್ತಿರಿ
ಭಯ ಘನ ಭಯ ಘನ
ಅಜ್ಞಾನವೆಂಬ ತೀವ್ರ ಕತ್ತಲೆ
ಕರ ಘನ ಕರ ಘನ
ಒಂಬತ್ತು ಬಾಗಿಲ ಜತನವ ಮಾಡಿ
ಜ್ಞಾನಜ್ಯೋತಿಯ ಪ್ರಬಲವ ಮಾಡಿ ಪ್ರಬಲವ ಮಾಡಿ
ಐವರು ಕಳ್ಳರು ಕನ್ನವ ಕೊರೆವುತ್ತೈದಾರೆ
ಸುಯಿಧಾನವಾಗಿರಿ
ಜೀವಧನವ ಜತನವ ಮಾಡಿ ಜತನವ ಮಾಡಿ
ಬಳಿಕಿಲ್ಲ ಬಳಿಕಿಲ್ಲ
ಆ ಪಟ್ಟಣದ ಮೂಲಸ್ಥಾನದ ಶಿಖರದ ಮೇಲಣ
ಬಾಗಿಲ ತೆರದು ನಡೆವುದೆ ಸುಪಥ ಸ್ವಯಂಭುನಾಥನಲ್ಲಿರೆ
ಇದನರಿತು ಮಹಾಮಹಿಮೆ ಅಮರಗುಂಡದ
ಮಲ್ಲಿಕಾರ್ಜುನದೇವರಲ್ಲಿ
ಎಚ್ಚರಿಕೆಗುಂದದಿರಿ ಎಚ್ಚರಿಕೆಗುಂದದಿರಿ

೪೨೨
ಕಾಯವೊಂದು ಪ್ರಾಣವೊಂದು
ಭಾವವೊಂದು ನಿರ್ಭಾವವೊಂದು
ಒಂದಲ್ಲದೆ ಎರಡುಂಟೆ
ಗುರುವೊಂದು ಲಿಂಗವೊಂದು ಉಪದೇಶವೊಂದು
ಕೂಡಲಚೆನ್ನಸಂಗಯ್ಯನ ಶರನ ಬಸವಣ್ಣನ ಗರುಡಿಯಲ್ಲಿ
[ಇಬ್ಬರಿಗೆಯೂ ಅಭ್ಯಾಸವೊಂದೇ ಕಾಣಾ ಪ್ರಭುವೆ]

೪೨೩
ಕಾಯ ಹೇಯಸ್ಥಲವೆಂದು
ಜೀವ ಹೇಯಸ್ಥಲವೆಂದು
ಭಾವ ಹೆಯಸ್ಥಲವೆಂದು
ಇಂತಿವರೊಳಗಾದ ಸರ್ವಹೇಯಸ್ಥಲವೆಂದು ನುಡಿವಾಗ
ಜ್ಞಾನವೇತರ ನೆಮ್ಮುಗೆಯಿಂದ ರೂಪಾಯಿತ್ತು
ತೊರೆಯ ಹಾವುದಕ್ಕೆ ಹರುಗೋಲು ಲಘು ನೆಮ್ಮುಗೆಗಳಲ್ಲಿ
ಹಾಯ್ವ ತೆರದಂತೆ
ಅವು ಹೇಯವೆಂಬುದಕ್ಕೆ ತೆರಹಿಲ್ಲ
ಅವು ತೊರೆಯ ತಡಿಯಲ್ಲಿಯ ಲಘ
ಹರುಗೋಲು ಉಳಿದ ಮತ್ತೆ
ಅಡಿವಜ್ಜೆಗುಂಟೆ ಅವರ ಹಂಗು
ತಾನರಿದಲ್ಲಿ ಅಹುದಲ್ಲವೆಂದು ಪಡಿಪುಚ್ಚವಿಲ್ಲ
ತಾ ಸದ್ಯೋಜಾತಲಿಂಗದಲ್ಲಿ ನಾಶವಾಗಿ
ತನ್ನಲ್ಲಿ ವಸ್ತು ವಿನಾಶವಾದ ಕಾರಣ

೪೨೪
ಕಾಯಿ ಒಂದರಲ್ಲಿ ಶಾಖೆ ಹಲವಹ ತೆರದಂತೆ
ಅರಿವು ಒಂದೆ ರೂಪು ಭಿನ್ನಂಗಳಾಗಿ ತೋರುವ ತೆರದಂತೆ
ಘಟದ ವಾರಿಯಲ್ಲಿ ತೋರುವ ಇಂದುವಿನಂತೆ
ಅದೊಂದೆ ಭೇದ
ಏಣಾಂಕಧರ ಸೋಮೇಶ್ವರಲಿಂಗದಲ್ಲಿ

೪೨೫
ಕಾರ ಮೇಘವೆದ್ದು ಧಾರಾವರ್ತ ಸುರಿವಾಗ
ಧಾರಿಣಿಯೆಲ್ಲವು ಮುಳುಗಿತ್ತು
ನೋಡಾ
ಕಾರಿರುಳ ಕಣ್ಣೊಳಗೆ ಸೂರ್ಯರನೇಕರು ಮೂಡಿ
ದಾರಿಯ ಹೊಲಬೆಂಬುದು ಕೆಟ್ಟಿತ್ತು
ನೋಡಾ
ಪೂರಾಯ ಗಾಯದಲ್ಲಿ ಸಾಯಕೊಂದಲ್ಲದೆ
ಸೂರ್ಯರನೇಕರು ಮಡಿಯರು
ಗುಹೇಶ್ವರ