೪೨೬
ಕಾಲ ಸಡಗರ ಕೈಯಲದೆ
ಕೈಯ ಸಡಗರ ಕಂಗಳಲದೆ
ಅದೇನು ಕಾರಣವೆಂದಡೆ
ಕಂಗಳೇ ಕಾರಣವಾಗಿ
ಒಂದು ಮಾತಿನೊಳಗೆ ವಿಚಾರವದೆ
ಕನ್ನಡಿಯೊಳಗೆ ಕಾರ್ಯವದೆ
ಇದೇನು ಕಾರಣ ತಿಳಿಯಲರಿಯರು
ಹೇಳಾ ಗುಹೇಶ್ವರ

೪೨೭
ಕಾಲವಶದಿಂದ ಕಾಲನೆಡಹಿದಡೆ
ಹಾಲುಗುಡಿದಂತೆ ಪರಿಣಾಮಿಸಬೇಕು
ಕಾಲಕ್ಕೆ ಬೇಸತ್ತು ಬೆಂಬೀಳಲಾಗದು
ಕಾಲ ಮುನ್ನಾದಿಯಲ್ಲಿ ಬಂದುದಯ್ಯ
ಕಾಲನ ಬಯಿಗೆ ಒಳಗಾಗದ ಮುನ್ನ
ಕಾಲಾಂತಕ ಸಕಳೇಶ್ವರದೇವ ಶರಣೆಂದು ಬದುಕಿರಯ್ಯಾ

೪೨೮
ಕಾಲುಗಳೆರಡೂ ಗಾಲಿ ಕಂಡಯ್ಯ
ದೇಹವೆಂಬುದೊಂದು ತುಂಬಿದ ಬಂಡಿ ಕಂಡಯ್ಯ
ಬಂಡಿಯ ಹೊಡೆವವರೈವರು ಮಾನಿಸರು
ಒಬ್ಬರಿಗೊಬ್ಬರು ಸಮವಿಲ್ಲಯ್ಯ
ಅದರಿಚ್ಚೆಯನರಿದು ಹೊಡಯದಿದ್ದರೆ
ಅದರಚ್ಚು ಮುರಿಯಿತ್ತು
ಗುಹೇಶ್ವರ

೪೨೯
ಕಾಲೇ ಕಂಭಗಳಾದವೆನ್ನ
ದೇಹವೇ ದೇಗುಲವಾಯಿತ್ತಯ್ಯ
ಎನ್ನ ನಾಲಗೆಯೆ ಘಂಟೆ
ಶಿರ ಸುವರ್ಣದ ಕಳಶ
ಇದೇನಯ್ಯ
ಸರವೆ ಲಿಂಗಕ್ಕೆ ಸಿಂಹಾಸನವಾಗಿದ್ದಿತ್ತಯ್ಯ
ಗುಹೇಶ್ವರ
ನಿಮ್ಮ ಪ್ರಾಣಲಿಂಗಪ್ರತಿಷ್ಠೆ ಪಲ್ಲಟವಾಗದಂತಿದ್ದೆನಯ್ಯ

೪೩೦
ಕಾವುದು ಹುಟ್ಟುವುದು
ಮೀರಿದಡೆ ಹೊಡೆವುದು
ಗಣ್ಣಿನ ಕೋಲಹಿಡಿದು ಗೋವ ಕಾವುತ್ತಿರಲಾಗಿ
ಕಾವಗಣ್ಣಿನಲ್ಲಿ ಕಾರ್ಮವಡಗಿ
ಕಟ್ಟುವ ಕಗ್ಗಣ್ಣಿನಲ್ಲಿ ಧರ್ಮವಡಗಿ
ಮೀರುವಗಣ್ಣಿನಲ್ಲಿ ವರ್ಮವಡಗಿ
ತ್ರಿವಿಧವನೊಳಕೊಂಡ ಕೋಲು
ಗೋವಿನ ಬೆನ್ನಿನಲ್ಲಿ ಲಯವಾಯಿತ್ತು
ಗೋಪತಿನಾಥ ವಿಶ್ವೇಶ್ವರಲಿಂಗವನರಿಯಲಾಗಿ

೪೩೧
ಕಾಳಮೇಘಮಂದಿರದ ಜಾಳಾಂಧರದ ಮನೆಯಲ್ಲಿ
ಒಬ್ಬ ಸೂಳೆಯ ಬಾಗಿಲಲ್ಲಿ
ಎಂಬತ್ತನಾಲ್ಕು ಲಕ್ಷ ಮಿಂಡಗಾರರು
ಅವಳ ಸಂಗದಲ್ಲಿ ಇರಲಮ್ಮರು
ಅವಳು ತಾವೇ ಬರಲೆಂದು ಕರೆಯದಿಹಳು
ಅವಳಿಗೆ ಯೋನಿ ಹಿಂದು ಅಂಡ ಮುಂದು
ಕಣ್ಣು ಅಂಗಾಲಿನಲ್ಲಿ ತಲೆ ಮುಂಗಾಲಿನಲ್ಲಿ
ಕಿವಿ ಭುಜದಲ್ಲಿ ಕೈ ಮಂಡೆಯ ಮೇಲೆ
ಮೂಗು ಹಣೆಯಲ್ಲಿ ಮೂಗಿನ ದ್ವಾರ ಉಂಗುಷ್ಠದಲ್ಲಿ
ಬಸುರು ಬಾಯಲ್ಲಿ ನಡೆವಳು ತಲೆ ಮುಂತಾಗಿ ಕಾಲು ಮೇಲಾಗಿ
ಅವಳ ಕೂಡುವ ಪರಿಯ ಹೇಳಾ
ಅಲೇಖನಾದ ಶೂನ್ಯ ಗೆದ್ದೆಯಲ್ಲಾ ಕಲ್ಲಿನ ಹೊಟ್ಟೆಯ ಮರೆಯಲ್ಲಿ

೪೩೨
ಕಾಳಿಯ ಕಂಕಾಳದಿಂದ ಮುನ್ನ
ತ್ರಿಪುರಸಂಹಾರದಿಂದ ಮುನ್ನ
ಹರಿ ವಿರಿಂಚಿಗಳಿಂದ ಮುನ್ನ
ಉಮೆಯ ಕಲ್ಯಾಣದಿಂದ ಮುನ್ನ
ಮುನ್ನ ಮುನ್ನ ಮುನ್ನ
ಅಂದಿಂಗೆಳೆಯ ನೀನು ಹಳೆಯ ನಾನು
ಮಹಾದಾನಿ ಕೂಡಲಸಂಗಮದೇವಾ

೪೩೩
ಕಾಳೆಗದಲ್ಲಿ ಹೋಗದಿರಯ್ಯ
ಕೋಲು ಬಂದು ನಿಮ್ಮ ತಾಗುಗು
ಆರು ದರುಶನಕ್ಕೆ ತೋರದಿರಿ
ಸೂರೆಗೊಂಡಹವು ನಿಮ್ಮುವ
ನಾಲ್ಕು ವೇದ ಹದಿನಾರು ಶಾಸ್ತ್ರವೆಂಬರ ಬೆನ್ನುಹತ್ತದಿರು
ಬೇರೆ ತೀರ್ಥ ಜಾತ್ರೆಯಂಬವರ ಕೊಂಡು ಆರಡಿತನ ಬೇಡ
ಪುಣ್ಯಪಾಪವೆಂಬೆರಡು ಭಂಡವ ಬೆನ್ನಿಲಿಕ್ಕಿಕೊಂಡು ಬಾರದಿರು
ನಿನ್ನಾತ್ಮನ ನೀ ತಿಳಿ
ಜಗ ನಿನ್ನೊಳಗೆಂದನಂಬಿಗ ಚವುಡಯ್ಯ

೪೩೪
ಕಿಚ್ಚಿಲ್ಲದ ಬೇಗೆಯಲ್ಲಿ ಬೆಂದೆನವ್ವಾ
ಏರಿಲ್ಲದ ಗಾಯದಲ್ಲಿ ನೊಂದೆನವ್ವಾ
ಸುಖವಿಲ್ಲದೆ ಧಾರತಿಗೊಂಡೆನವ್ವಾ
ಚೆನ್ನಮಲ್ಲಿಕಾರ್ಜುನದೇವಂಗೊಲಿದು
ಬಾರದ ಭವಂಗಳಲ್ಲಿ ಬಂದೆನವ್ವಾ

೪೩೫
ಕಿಚ್ಚು ದೈವವೆಂದು ಹವಿಯ ಬೇಳುವರು
ಕಿಚ್ಚು ಹಾರುವರ ಮನೆಯ ಸುಡುವಾಗ
ಬಚ್ಚಲ ಕೆಸರ ಬೀದಿಯ ಧೂಳ ಚೆಲ್ಲಿ
ಬೊಬ್ಬಿರಿದೆಲ್ಲರ ಕರೆವರು
ಸಿಮ್ಮಲಿಗೆಯ ಚೆನ್ನರಾಮನ ಮಂತ್ರ ತಪ್ಪಿದ ಬಳಿಕ
ವಂದಿಸುವುದ ಬಿಟ್ಟು ನಂದಿಸುತ್ತಿದ್ದರು

೪೩೬
ಕಿಚ್ಚು ದೈವವೆಂದು ಹವಿಯನಿಕ್ಕುವ ಹಾರುವರ ಮನೆಯಲು
ಕಿಚ್ಚೆದ್ದು ಸುಡುವಾಗ
ಬಚ್ಚಲ ನೀರ ಬೀದಿಯ ದೂಳ ಹೊಯ್ದು
ಬೊಬ್ಬಿಟ್ಟೆಲ್ಲರ ಕರೆವರಯ್ಯಾ
ಕೂಡಲಸಂಗಮದೇವಾ
ವಂದನೆಯ ಮರೆದು ನಿಂದಿಸುತ್ತಿದ್ದರು

೪೩೭
ಕಿಡಿ ಕಿಡಿ ಕೆದರಿದಡೆ
ಎನಗೆ ಹಸಿವು ತೃಷೆಯಡಗಿತ್ತೆಂಬೆನು
ಮುಗಿಲು ಹರಿದು ಬಿದ್ದಡೆ
ಎನಗೆ ಮಜ್ಜನಕ್ಕೆರೆದರೆಂಬೆನು
ಗಿರಿ ಮೇಲೆ ಬಿದ್ದಡೆ ಎನಗೆ ಪುಷ್ಪವೆಂಬೆನು
ಚೆನ್ನಮಲ್ಲಿಕಾರ್ಜುನಯ್ಯಾ
ಶಿರ ಹರಿದು ಬಿದ್ದಡೆ
ಪ್ರಾಣ ನಿಮಗರ್ಪಿತವೆಂಬೆನು

೪೩೮
ಕೀಳು ಡೋಹರ ಕಕ್ಕ
ಕೀಳು ಮಾದರ ಚೆನ್ನ
ಕೀಳು ಓಹಿಲದೇವ
ಕೀಳು ಉದ್ಭಟಯ್ಯ
ಕೀಳಿಂಗಲ್ಲದೆ ಹಯನು ಕರೆಯದು
ಕಾಣಾ ರಾಮನಾಥ

೪೩೯
ಕುಂಬಾರನ ಆವಿಗೆಯಲ್ಲಿ ಕುಂಬಾರನಿಲ್ಲ
ಕಂಬಾರನ ಕಲಶಂಗಳಲ್ಲಿ ಕಂಬಾರನಿಲ್ಲ
ಆವಿಗೆ ಕಲಶಂಗಳಲ್ಲಿ ಅಸ್ತಿತ್ವ ಉಂಟಾಗಿಹ
ಕುಂಬಾರ ಕಂಬಾರನಂತಿಪ್ಪ ನೋಡಾ
ಈ ಪ್ರಪಂಚದಲ್ಲಿ ಕಪಿಲಸಿದ್ಧಮಲ್ಲಿಕಾರ್ಜುನ

೪೪೦
ಕುಕ್ಕೊಂಬಿನ ಕಾಗೆಯಂತೆ ಜೀವ ಎತ್ತ ಹಂಬಲಿಸಿದಡೂ
ಆಸೆಯೆಂಬ ಗೊತ್ತಿಗೆ ಬಹವರೆಲ್ಲರು ನಿಶ್ಚಯವನರಿಯಬಲ್ಲರೆ
ತುತ್ತು ಕುತ್ತಿಗಾಗಿ ವೇಷವ ತೊಟ್ಟಿಹ
ಚಿತ್ತಶುದ್ಧಾತ್ಮವಿಲ್ಲದವರ ಅರ್ಕೇಶ್ವರಲಿಂಗನೊಪ್ಪನವರ

೪೪೧
ಕುಡಿವ ನೀರೆನ್ನಬಹುದೆ
ಹುಡುಕು ನೀರಲದ್ದುವಾಗ
ಆಡುವ ಕಿಚ್ಚೆನ್ನಬಹುದೆ
ಮನೆಯ ಸುಡುವಾಗ
ಒಡಲು ತನ್ನದೆನ್ನಬಹುದೆ
ಪುಣ್ಯ ಪಾಪವನುಂಬಾಗ
ಒಡಲ ಜೀವನೆನ್ನಬಹುದೆ
ಇಕ್ಕಿಹೋಹಾಗ
ಇವನೊಡೆಬಡಿದು ಕಳೆಯೆಂದಾತನಂಬಿಗ ಚವುಡಯ್ಯ

೪೪೨
ಕುರಿಕೋಳಿ ಕಿರುಮೀನ ತಿಂಬವರ
ಊರೊಳಗೆ ಇರು ಎಂಬರು
ಅಮೃತಾನ್ನವ ಕರೆವ ಗೋವ ತಿಂಬವರ
ಊರಿಂದ ಹೊರಗಿರು ಎಂಬರು
ಆ ತನು ಹರಿಗೋಲಾಯಿತ್ತು
ಬೊಕ್ಕಣ ಸಿದಿಕೆ ಬಾರುಕೋಲು ಪಾದರಕ್ಷೆ
ದೇವರ ಮುಂದೆ ಬಾರಿಸುವುದಕ್ಕೆ ಮದ್ದಳೆಯಾಯಿತ್ತು
ಈ ಬುದ್ಧಲಿಕೆಯೊಳಗಣ ತುಪ್ಪವ ಶುದ್ಧಮಾಡಿ
ತಿಂಬ ಗುಜ್ಜ ಹೊಲೆಯರ ಕಂಡಡೆ
ಉದ್ದನ ಚಮ್ಮಾಳಿಗೆಯ ತೆಕ್ಕೊಂಡು
ಬಾಯ ಕೊಯ್ಯುವೆಯ ಎಂದಾತ ನಮ್ಮ ಅಂಬಿಗರ ಚವುಡಯ್ಯ

೪೪೩
ಕುರಿಯ ಹೆಸರು ಒಂದೆ ಅಗ್ನಿಯ ಹೆಸರು ಒಂದೆ ಆದಲ್ಲಿ
ಅಗ್ನಿಯ ಸಾಮರ್ಥ್ಯ ಕುರಿಗೆ ಬಂದೀತೇನಯ್ಯಾ
ಕಪ್ಪೆಯ ಹೆಸರು ಹಾವಿನ ಹೆಸರು ಒಂದೆ ಆದಲ್ಲಿ
ಹಾವಿನ ಸಾಮರ್ಥ್ಯ ಕಪ್ಪೆಗೆ ಬಂದೀತೇನಯ್ಯಾ
ನನ್ನ ಹೆಸರು ನಮ್ಮ ಶಿವಶರಣರ ಹೆಸರು ಒಂದೆ ಆದಲ್ಲಿ
ಅವರ ಸಾಮರ್ಥ್ಯ ಎನಗೆ ಬಂದೀತೇನಯ್ಯಾ
ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ

೪೪೪
ಕುರಿವಿಂಡು ಕಬ್ಬಿನ ಉಲಿವ ತೋಟವ ಹೊಕ್ಕು
ತೆರನನರಿಯದೆ ತನಿರಸದ
ಹೊರಗಣೆಲೆಯನೆ ಮೆಲಿದುವು
ನಿಮ್ಮನರಿವ ಮದಕರಿಯಲ್ಲದೆ
ಕುರಿ ಬಲ್ಲುದೆ
ಕೂಡಲಸಂಗಮದೇವಾ

೪೪೫
ಕುರುಹುಳ್ಳನ್ನಕ್ಕ ಸಮಯದ ಹಂಗು
ಅರಿದಹೆನೆಂಬನ್ನಕ್ಕ ಆತ್ಮನ ಹಂಗು
ಅಲ್ಲ ಅಹುದೆಂಬನ್ನಕ್ಕ ಎಲ್ಲರ ಹಂಗು
ಗುಹೇಶ್ವರನೆಂಬನ್ನಕ್ಕ ಲಿಂಗದ ಹಂಗು ಬೇಕು [ಘಟ್ಟಿವಾಳಣ್ಣ]

೪೪೬
ಕುರುಹೆಂಬೆನೆ ಕಲ್ಲಿನಲ್ಲಿ ಹತ್ತಿದ ಹಾವಸೆ
ಅರಿವೆಂಬೆನೆ ಕಾಣಬಾರದ ಬಯಲು
ಒಂದನಹುದು ಒಂದನಲ್ಲಾಯೆಂದು ಬಿಡಬಾರದು
ಬಿಟ್ಟಡೆ ಸಮಯವಿಲ್ಲ
ಜಿಡ್ಡ ಹಿಡಿದಡೆ ಜ್ಞಾನವಿಲ್ಲ
ಉಭಯದ ಗುಟ್ಟಿನಲ್ಲಿ ಕೊಳೆವುತ್ತಿದೇನೆ
ಎಂದನಂಬಿಗ ಚವುಡಯ್ಯ

೪೪೭
ಕುಲದಲಧಿಕನು ಹೋಗಿ ಹೊಲೆಗೇರಿಯಲ್ಲಿ ಮನೆಯ ಕಟ್ಟಿದರೆ
ಕುಲಕೆಡದೆಯಿಪ್ಪ ಪರಿಯ ನೋಡಾ
ಆತನ ಕುಲದವರೆಲ್ಲರು ಮುಖವನೋಡಲೊಲ್ಲದೈದಾರೆ
ಕುಲವುಳ್ಳವರೆಲ್ಲರು ಕೈವಿಡಿದರು
ಕುಲಗೆಟ್ಟವನೆಂದು ತಿಳಿದು ವಿಚಾರಿಸಲು
ಹೊಲೆಗಟ್ಟು ಹೋಯಿತ್ತು ಕಾಣಾ
ಗುಹೇಶ್ವರ

೪೪೮
ಕುಲವೆರಡಲ್ಲದೆ ಹಲವಿಲ್ಲ
ದಿನವೆರಡಲ್ಲದೆ ಸಪ್ತದಿನವಿಲ್ಲ
ಅರಿವು ಮರವೆಯೆರಡಲ್ಲದೆ
ಬೇರೊಂದು ತೊಡಿಗೆಯಿಲ್ಲ
ಅರ್ಕೇಶ್ವರಲಿಂಗ ಏಕರೂಪನಲ್ಲದೆ
ಬಹುನಾಮದವನಲ್ಲ

೪೪೯
ಕುಲಸ್ವಾಮಿ ನಿಮ್ಮವ ಒಲಿವುದ ಕಂಡಡೆ
ತಲೆವಾಗುವೆ ಕಾತ ಕಳವೆಯಂತೆ
ಕುಲಜ ಜಾನೆಂದು ತಲೆವಾಗದಿದ್ದಡೆ ಸಲೆ
ಶೂಲದ ತಲೆಯಯ್ಯಾ ರಾಮನಾಥ

೪೫೦
ಕೂಟದಿಂದ ಕೂಸು ಹುಟ್ಟುವಡೆ
ಬ್ರಹ್ಮನ ಆಟಕೋಟಲೆಯೇಕೆ
ಸ್ಥಿತಿ ಆಟದಿಂದ ನಡೆವಡೆ
ವಿಷ್ಣುವಿನ ಭೂತಹಿತವೇಕಯ್ಯಾ
ಘಾತಕದಿಂದ ಕೊಲುವಡೆ
ರುದ್ರನ ಆಸುರವೇತಕ್ಕೆ
ಇಂತಿವೆಲ್ಲವೂ ಜಾತಿಯುಕ್ತವಲ್ಲದೆ
ತಾ ಮಾಡುವ ನೀತಿಯುಕ್ತವಲ್ಲ
ಇದಕಿನ್ನಾವುದು ಗುಣ ಭೇದಿಸಾ
ಗೂಡಿನ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗ