೪೫೧
ಕೂಡಿ ಕೂಡುವ ಸುಖದಿಂದ
ಒಪ್ಪಚ್ಚಿ ಅಗಲಿ ಕೂಡುವ ಸುಖ ಲೇಸು
ಕೆಳದಿ
ಒಚ್ಚೊತ್ತಗಲಿದಡೆ ಕಾಣದಿರಲಾರೆ
ಎನ್ನ ದೇವ ಚೆನ್ನಮಲ್ಲಿಕಾರ್ಜುನನಗಲಿಯಗಲದ
ಸುಖವೆಂದಪ್ಪುದೊ

೪೫೨
ಕೂಪರನಗಲುವದು ಆತ್ಮಘಾತುಕವವ್ವಾ
ದಿಬ್ಯವ ತುಡುಕಿದಡೆ
ಕೈ ಬೇವುದಲ್ಲದೆ ಮೈ ಬೇವುದೆ
ಒಲಿದವರನಗಲಿದಡೆ
ಸರ್ವಾಂಗವೂ ಬೇವುದವ್ವಾ
ಮಹಾಲಿಂಗ ಗಜೇಶ್ವರನನಗಲಿ
ಆವುಗೆಯ ಮಧ್ಯದ ಘಟದಂತಾದೆನವ್ವಾ

೪೫೩
ಕೂಸುಳ್ಳ ಸೂಳೆ ಧನದಾಸೆಗೊತ್ತೆಯ ಕೊಂಡಡೆ
ಕೂಸಿಂಗಲ್ಲ ಬೊಜಗಂಗಲ್ಲ
ಕೂಸನೊಮ್ಮೆ ಸಂತವಿಡುವಳು
ಬೊಜಗನನೊಮ್ಮೆ ನೆರೆವಳು
ಧನದಾಸೆ ಬಿಡದು
ಕೂಡಲಸಂಗಮದೇವಾ

೪೫೪
ಕೃತಯುಗದಲ್ಲಿ ಶ್ರೀಗುರು ಶಿಷ್ಯಂಗೆ ಬಡಿದು ಬುದ್ಧಿಯ ಕಲಿಸಿದರೆ
ಆಗಲಿ ಮಹಾಪ್ರಸಾದವೆಂದೆನಯ್ಯ
ತ್ರೇತಾಯುಗದಲ್ಲಿ ಶ್ರೀಗುರು ಶಿಷ್ಯಂಗೆ ಬೈದು ಬುದ್ಧಿಯ ಕಲಿಸಿದರೆ
ಆಗಲಿ ಮಹಾಪ್ರಸಾದವೆಂದೆನಯ್ಯ
ದ್ವಾಪದದಲ್ಲಿ ಶ್ರೀಗುರು ಶಿಷ್ಯಂಗೆ ಝಂಕಿಸಿ ಬುದ್ಧಿಯ ಕಲಿಸಿದರೆ
ಆಗಲಿ ಮಹಾಪ್ರಸಾದವೆಂದೆನಯ್ಯ
ಕಲಿಯುಗದಲ್ಲಿ ಶ್ರೀಗುರು ಶಿಷ್ಯಂಗೆ ವಂದಿಸಿ ಬುದ್ಧಿಯ ಕಲಿಸಿದರೆ
ಆಗಲಿ ಮಹಾಪ್ರಸಾದವೆಂದೆನಯ್ಯ
ಗುಹೇಶ್ವರ
ನಿಮ್ಮ ಕಾಲದ ಕಟ್ಟಳೆಯ ಕಲಿತನಕ್ಕೆ ನಾ ಬೆರಗಾದೆನು

೪೫೫
ಕೃತ್ಯ ಕಾಯಕವಿಲ್ಲದವರು ಭಕ್ತರಲ್ಲ
ಸತ್ಯಶುದ್ಧವಿಲ್ಲದುದು ಕಾಯಕವಲ್ಲ
ಆಸೆಯೆಂಬುದು ಭವದ ಬೀಜ
ನಿರಾಸೆಯೆಂಬುದು ನಿತ್ಯಮುಕ್ತಿ
ಉರಿಲಿಂಗಪೆದ್ದಿಗಳರಸನಲ್ಲಿ ಸದರವಲ್ಲ
ಕಾಣವ್ವಾ

೪೫೬
ಕೆಂಡದ ಗಿರಿಯ ಮೇಲೊಂದು ಅರಗಿನ ಕಂಭವಿದ್ದಿತ್ತು
ನೋಡಾ ಅಯ್ಯ
ಅರಗಿನ ಕಂಭದ ಮೇಲೆ ಒಂದು ಹಂಸೆಯಿದ್ದಿತ್ತು
ಕಂಭ ಬೆಂದಿತ್ತು ಹಂಸೆ ಹಾರಿತ್ತು ಗುಹೇಶ್ವರ

೪೫೭
ಕೆಂಡದ ಮಳೆ ಕರೆವಲ್ಲಿ ಉದಕವಾಗಿರಬೇಕು
ಜಲಪ್ರಳಯವಾದಲ್ಲಿ ವಾಯುವಿನಂತಿರಬೇಕು
ಮಹಾಪ್ರಳಯವಾದಲ್ಲಿ ಆಕಾಶದಂತಿರಬೇಕು
ಜಗತ್ಪ್ರಳಯವಾದಲ್ಲಿ ತನ್ನ ತಾ ಬಿಡಬೇಕು
ಗುಹೇಶ್ವರಲಿಂಗ ತಾನಾಗಿರಬೇಕು

೪೫೮
ಕೆರೆ ಹಳ್ಳ ಬಾವಿಗಳು ಮೈದೆಗೆದಡೆ
ಗುಳ್ಳೆ ಗೊರಜೆ ಚಿಪ್ಪು ಕಾಣಬಹುದು
ವಾರಿಧಿ ಮೈದೆಗೆದಡೆ
ರತ್ನಮುತ್ತಗಳ ಕಾಣಬಹುದು
ಕೂಡಲಸಂಗನ ಶರಣರು
ಮನದೆರೆದು ಮಾತನಾಡಿದಡೆ
ಲಿಂಗವ ಕಾಣಬಹುದು

೪೫೯
ಕೆಸರಲ್ಲಿ ಬಿದ್ದ ಬಡ ಪಶುವಿನಂತೆ ಆನು
ದೆಸೆದೆಸೆಗೆ ಬಾಯ ಬಿಡುತ್ತಿದ್ದೇನೆ
ಅಯ್ಯಾ ಆರೈವವರಿಲ್ಲ
ಅಕಟಕಟ ಪಶುವೆಂದೆನ್ನ ಕೂಡಲಸಂಗಮದೇವ

ಕೊಂಬ ಹಿಡಿದೆತ್ತುವನ್ನಕ್ಕ

೪೬೦
ಕೇಳವ್ವಾ ಕೇಳವ್ವಾ ಕೆಳದಿ ಹೇಳುವೆ ನಿನಗೆ
ಆಹಾ ಕಂಗಳಲ್ಲಿ ಕಾಬೆ ಮತ್ತೆ ಕಾಣೆ
ಮನದಲ್ಲಿ ಹಿಡಿವೆ ಹಿಡಿದು ಮತ್ತೆ ಕಾಣೆನವ್ವಾ
ಮಿಂಚಿನ ರವೆರವೆಯಂತೆ ತೋರುವನಡಗುವ
ನಮ್ಮ ಕಪಿಲಮಲ್ಲಿನಾಥದೇವನು

೪೬೧
ಕೈ ಕೈದ ಹಿಡಿದು ಕಾದುವಾಗ
ಕೈದೊ ಕೈಯೊ ಮನವೊ
ಅಂಗ ಲಿಂಗ ಸಂಬಂಧದಲ್ಲಿ ಸಂಬಂಧಿಸುವಾಗ
ಅಂಗವೊ ಲಿಂಗವೊ ಆತ್ಮನೊ
ಈ ಮೂರಂಗವನರಿದಲ್ಲಿ
ಕಾಲಾಂತ ಭೀಮೆಶ್ವರಲಿಂಗವನರಿದುದು

೪೬೨
ಕೈದ ಹಿಡಿದಾಡುವರೆಲ್ಲರು ಇರಿಯಬಲ್ಲರೆ
ಸಾಧನೆಯ ಮಾಡುವ ಬಾಲರೆಲ್ಲರೂ ಕಾದಬಲ್ಲರೆ
ಅರ್ತಿಗೆ ಮಡುವ ಕೃತ್ಯವಂತರೆಲ್ಲರೂ ಸದ್ಭಕ್ತಪ್ಪರೆ
ಅದು ಚಂದೇಶ್ವರಲಿಂಗಕ್ಕೆ ಸಲ್ಲದ ಮಾಟ

೪೬೩
ಕೈದ ಕೊಡುವರಲ್ಲದೆ ಕಲಿತನವ ಕೊಡುವರುಂಟೆ ಮಾರಯ್ಯಾ
ಹೆಣ್ಣಕೊಡುವರಲ್ಲದೆ ಕೂಟಕ್ಕೊಳಗಾದವರುಂಟೆ ಮಾರಯ್ಯಾ
ಕಳುವಚೋರಂಗೆ ಬಡವರೆಂದು ದಯವುಂಟೆ ಮಾರಯ್ಯಾ
ಮನವನೊರೆದು ಭಕ್ತಿಯನೋಡಿಹೆನೆಂಬವಂಗೆ
ಎಮ್ಮಲ್ಲ ಗುಣವ ಸಂಪಾದಿಸಲಿಲ್ಲ ಮಾರಯ್ಯಾ
ಶೂಲವನೇರಿ ಸಂದಲ್ಲಿ ಮತ್ತಿನ್ನು ಸಾವಿಂಗೆ ಹಂಗುಪಡಲೇಕೆ
ಮಾರಯ್ಯಪ್ರಿಯ ಅಮಲೇಶ್ವರಲಿಂಗಾ ನೀನೆ ಬಲ್ಲೆ

೪೬೪

ಕೈಯಲ್ಲಿ ಹಿಡಿದಡೆ ಕಲ್ಲು ಸಿಕ್ಕಿತ್ತಲ್ಲದೆ ಲಿಂಗವಿಲ್ಲಾ ಎಂದೆ
ಕಣ್ಣಿನಲ್ಲಿ ನೋಡಿ ಕಬಳೀಕರಿಸಿದೆನೆಂದಡೆ ಅದು ಕವುಳಿಕವೆಂಬೆ
ಮನದಲ್ಲಿ ನೆನೆದು ಘನದಲ್ಲಿ ನಿಂದೆಹೆನೆಂದಡೆ ಭವಕ್ಕೆ ಬೀಜವೆಂದೆ
ಕೈಗೂ ಕಣ್ಣಿಗೂ ಮನಕ್ಕೂ ಬಹಾಗ ತೊತ್ತಿನ ಕೂಸೆ
ಕಂಡಕಂಡವರ ಅಪ್ಪಾ ಅಪ್ಪಾ ಎಂಬ ಇಂತೀ ಸುಚಿತ್ತರನರಿಯದೆ
ಉದ್ಯೋಗಿಸಿ ನುಡಿವ ಜಗದ ಭಂಡಕರನೊಲ್ಲೆನೆಂದ
ನಿಃಕಳಂಕ ಮಲ್ಲಿಕಾರ್ಜುನ

೪೬೫
ಕೈಲಾಸ ಕೈಲಾಸವೆಂದು ಬಡಿದಾಡುವ ಅಣ್ಣಗಳಿರಾ
ಕೇಳಿರಯ್ಯಾ
ಕೈಲಾಸವೆಂಬುದೊಂದು ಭೂಮಿಯೊಳಿರುವ ಹಾಳುಬೆಟ್ಟ
ಅಲ್ಲಿರುವ ಮುನಿಗಳೆಲ್ಲ ಜೀವಗಳ್ಳರು
ಅಲ್ಲಿರ್ದ ಚಂದ್ರಶೇಖರನು ಬಹು ಎಡ್ಡ
ಇದರಾಡಂಬರವೇಕಯ್ಯಾ
ಎಮ್ಮ ಪುರಾತರಿಗೆ ಸದಾಚಾರದಿಂದ ವರ್ತಿಸಿ
ಲಿಂಗಾಂಗ ಸಾಮರಸ್ಯವ ತಿಳಿದು
ನಿಮ್ಮ ಪಾದಪದ್ಮದೊಳು ಬಯಲಾದ ಪದವೆ ಕೈಲಾಸವಯ್ಯಾ
ಕಪಿಲಸಿದ್ಧಮಲ್ಲಿಕಾರ್ಜುನ

೪೬೬
ಕೈಲಸ ಮರ್ತ್ಯಲೋಕ ಎಂಬರು
ಕೈಲಾಡಸವೆಂದಡೇನೊ ಮರ್ತ್ಯಲೋಕವೆಂದಡೇನೊ
ಅಲ್ಲಿಯ ನಡೆಯೂ ಒಂದೆ
ಇಲ್ಲಿಯ ನಡೆಯೂ ಒಂದೆ
ಅಲ್ಲಿಯ ನುಡಿಯೂ ಒಂದೆ
ಇಲ್ಲಿಯ ನುಡಿಯೂ ಒಂದೆ ಕಾಣಿರಯ್ಯಾ ಎಂಬರು
ಕೈಲಾಸದವರೆ ದೇವರ್ಕಳೆಂಬರು
ಸುರಲೋಕದೊಳಗೆ ಸಾಸಿರಕಾಲಕ್ಕಲ್ಲದೆ ಅಳಿದಿಲ್ಲವೆಂಬರು
ನರಲೋಕದೊಳಗೆ ಸತ್ತು ಸತ್ತು ಹುಟ್ಟುತಿಹರೆಂಬರು
ಇದ ಕಂಡು ನಮ್ಮ ಶರಣರು
ಸುರಲೋಕವನು ನರಲೋಕವನು ತೃಣವೆಂದು ಭಾವಿಸಿ
ಭವವ ದಾಂಟಿ ತಮ್ಮ ತಮ್ಮ ಹುಟ್ಟನರಿದು
ಮಹಾಬೆಳಗನೆ ಕೂಡಿ ಬೆಳಗಿನಲ್ಲಿ ಬಯಲಾದರಯ್ಯಾ
ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ

೪೬೭
ಕೈಸಿರಿಯ ದಂಡವ ಕೊಳಬಹುದಲ್ಲದೆ
ಮೈಸಿರಿಯ ದಂಡವ ಕೊಳಲುಂಟೆ
ಉಟ್ಟಂತಹ ಉಡಿಗೆ ತೊಡಿಗೆಯನೆಲ್ಲ ಸೆಳೆದುಕೊಳಬಹುದಲ್ಲದೆ
ಮುಚ್ಚಿರ್ದ ಮುಸುಕಿರ್ದ ನಿರ್ವಾಣವ ಸೆಳೆದುಕೊಳಬಹುದೆ
ಚೆನ್ನಮಲ್ಲಿಕಾರ್ಜುನದೇವರ ಬೆಳಗನುಟ್ಟು ಲಜ್ಜೆಗೆಟ್ಟವಳಿಗೆ
ಉಡುಗೆ ತೊಡುಗೆಯ ಹಂಗೇಕೋ ಮರುಳೆ

೪೬೮
ಕೊಟ್ಟ ಕುದುರೆಯನೇರಲರಿಯದೆ
ಮತ್ತೊಂದು ಕುದುರೆಯ ಬಯಸುವರು
ವೀರರೂ ಅಲ್ಲ ಧೀರರೂ ಅಲ್ಲ
ಇದು ಕಾರಣ
ನೆರೆ ಮೂರುಲೋಕವೆಲ್ಲವು
ಹಲ್ಲಣವ ಹೋತ್ತುಕೊಂಡು ಬಳಲುತ್ತೈದಾರೆ
ಗುಹೇಶ್ವರನೆಂಬ ಲಿಂಗವನವರೆತ್ತ ಬಲ್ಲರೋ

೪೬೯
ಕೊಲುವನೇ ಮಾದಿಗ
ಹೊಲಸು ತಿಂಬುವನೇ ಹೊಲೆಯ
ಕುಲವೇನೊ ಅವದಿರ ಕುಲವೇನೊ
ಸಕಲಜೀವಾತ್ಮರಿಗೆ ಲೇಸನೆ ಬಯಸುವ
ನಮ್ಮ ಕೂಡಲಸಂಗನ ಶರಣರೆ ಕುಲಜರು\

೪೭೦
ಕೊಳಲ ದನಿಗೆ ಸರ್ಪ ತಲೆದೂಗಿದಡೇನು
ಒಳಗಣ ವಿಷದ ಬಯಕೆ ಬಿಡದನ್ನಕ್ಕ
ಹಾಡಿದಡೇನು ಕೇಳಿದಡೇನು
ತನ್ನಲುಳ್ಳ ಆವಗುಣ ಬಿಡದನ್ನಕ್ಕ
ಒಳಗನರಿದು ಹೊರಗೆ ಮರೆದವರ
ನೀ ಎನಗೆ ತೋರಯ್ಯಾ ಚೆನ್ನಮಲ್ಲಿಕಾರ್ಜುನಾ

೪೭೧
ಕೊಳ್ಳಿಯ ಬೆಳಕಿನಲ್ಲಿ ಕುಳಿತು
ಒಡ್ಡದ ತಳಿಗೆಯಲಿ ಅಂಬಲಿಯನಿಕ್ಕಿಕೊಂಡು
ಸುರಿದು ಕೈದೊಳೆದು ಮುರಿದ ಗುಡಿಯೊಳಗೆ
ಹರಿದ ತಟ್ಟೆಯ ಮೇಲೆ ಹರಿದ ಬೊಂತೆಯ ಹಾಕಿಕೊಂಡು
ಕೆಡದಿಹಂಗೊಬ್ಬ ಮಗ ಹುಟ್ಟಿ ಸಿರಿವಂತನಾದಡೆ
ಇಳಿಯ ಬಿಟ್ಟು ಕಳೆಯದಹನೆ ಹಿಂದಣ ಕಷ್ಟದರಿದ್ರವ
ಬಂಡಿಯ ಹಿಡಿದಾತನ ತಂದೆಯ ತಲೆ ಹೋಹುದುಯೆಂದು
ಪಿತರಾಚಾರವೆಂದು ವೃಥಾ ಸಾವನೆ
ಕಂದ ಜಾಣನಾದಡೆ ನಮ್ಮ ತಂದೆಯಂತಹನೆ
ವಿಷಯದಿಂ ಬಂದ ದೈವಂಗಳಿಗೆ ಅನು ಎಂದೂ ಎರಗೆ
ಸೊಡ್ಡಳಂಗಲ್ಲದೆ

೪೭೨
ಕೋಗಿಲೆಗಳು ಉಗ್ಘಡಿಸಲು ಮಾಮರಂಗಳ ಮೇಲೆ
ತುಂಬಿಗಳು ಝೆಂಕಾರದಿಂ ಮೊರೆದು ಮೋಹರಿಸಲು
ಮಂದಾನಿಲಗಳ ತನ್ನ ಬೇಹಿಗೆ ಕಳುಹಲು
ಅನಂಗ ತನ್ನ ಬರವರಸಿ ಬಂದು ನಿಲಲು
ರಸಭರತವಾಗಿರ್ದ ಪರಿಯ ಕಬ್ಬಿನ ಬಿಲ್ಲೇರಿಸಿ ಕುಸುವ ಸರವನೆ ತೊಟ್ಟು
ಎಸಲಾರದೆ ಬಿಲ್ಲು ಬೇರಾಗಿ ಇವರೆಲ್ಲರ ಪರಿಯೆಂದು ಬಗೆದುಬಂದೆ
ಕಾಮ ನಿಲ್ಲದಿರೈ
ನಿನ್ನ ರೂಪ ಮಹಾಲಿಂಗ ಕಲ್ಲೇಶ್ವರದೇವ ಬಲ್ಲ
ಸಿದ್ಧರಾಮ ನಿನ್ನಳವಲ್ಲ ಎಲವೊ ಕಾಮಾ

೪೭೩
ಕೋಗಿಲೆಗಳು ಹುಳುವಟ್ಟೆ ಹೋದ ಬನದಂತೆ ಆದೆ
ನೋಡವ್ವಾ
ರಾಮರಾಡಿದ ಹೊಳಲಿನಂತೆ ಆದೆ
ನೋಡವ್ವಾ
ಜವ್ವನೆಗಳು ಬಳಲ್ದ ಸ್ತ್ರೀಯರ ಮುಖ ಕಾಂತಿಯಂತೆ ಆದೆ
ನೋಡವ್ವಾ
ಪರಿಮಳವಿಲ್ಲದದ ಪುಷ್ಪದಂತೆ ಆದೆ
ನೋಡವ್ವಾ
ಚಂದ್ರಮನಿಲ್ಲದ ನಕ್ಷತ್ರಗಳಂತೆ ಆದೆ
ನೋಡವ್ವಾ
ಮಹಾಲಿಂಗ ಗಜೇಶ್ವರನನಗಲುವದರಿಂದ ಸಾವುದು ಸುಖ
ನೋಡವ್ವಾ

೪೭೪
ಕೋಪದ ತಾಪದ ಸಂಗವ ಕಳೆದು
ವಿರೂಪ ನಿರೂಪವಾಯಿತ್ತಯ್ಯಾ
ನಿರಾಲಂಬ ನಿರಾಭಾರಿಯಾಗಿರಲು ಆನು ಅನುವರಿದು
ಹೆಣ್ಣೆಂಬ ನಾಮವ ಕಳೆದು ಸುಖ ವಿಶ್ರಾಂತಿಯನೆಯ್ದುವೆನಯ್ಯಾ
ಸಂಗಯ್ಯಾ ಬಸವನರೂಪವಡಗಿತೆನ್ನಲ್ಲಿ

೪೭೫
ಕೋಲ ತುದಿಯ ಕೋಡಗದಂತೆ
ನೇಣ ತುದಿಯ ಬೊಂಬೆಯಂತೆ
ಆಡಿದೆನಯ್ಯಾ ನೀನಾಡಿಸಿದಂತೆ
ಆನು ನುಡಿದೆನಯ್ಯಾ ನೀ ನುಡಿಸಿದಂತೆ
ಆನು ಇದ್ದೆನಯ್ಯಾ ನೀನು ಇರಿಸಿದಂತೆ
ಜಗದ ಯಂತ್ರವಾಹಕ ಚೆನ್ನಮಲ್ಲಿಕಾರ್ಜುನ
ಸಾಕೆಂಬನ್ನಕ್ಕ