೪೭೬
ಕೋಲೊಂದರಲ್ಲಿ ಹಲವು ಕುಲದ ಗೋವುಗಳ ಚಲಿಸದೆ ನಿಲಿಸುವಂತೆ
ಏಕಚಿತ್ತನಾಗಿ ಸರ್ವವಿಕಾರಂಗಳ ಕಟ್ಟುವಡೆದು
ಇಂದ್ರಿಯಂಗಳ ಇಚ್ಛೆಯಲ್ಲಿ ತ್ರಿವಿಧವ ಹಿಡಿದಿರುವರ ಸಂದಿಯಲ್ಲಿ ನುಸುಳದೆ
ವಸ್ತುವಿನ ಅಂಗದಲ್ಲಿಯೆ ತನ್ನಂಗ ತಲ್ಲೀಯವಾಗಿಪ್ಪುದೆ ಮಹಾ ನಿಜದ ನೆಲೆ
ಗೋಪತಿನಾಥ ವಿಶ್ವೇಶ್ವರಲಿಂಗವನರಿವುದಕ್ಕೆ ಇದೆ ಬಟ್ಟೆ

೪೭೭
ಕ್ರಿಯೆ ಎಂಬುದು ಪಿಪೀಲಿಕನ ಗುಣ
ಜ್ಞಾನವೆಂಬುದು ವಿಹಂಗದ ಗುಣ
ಮೆಲ್ಲಮೆಲ್ಲನೆ ತಿಳಿದಲ್ಲಿ ಕ್ರಿಯೆ ಎನಿಸಿತ್ತು
ಏಕಕಾಲಕ್ಕಳವಟ್ಟಲ್ಲಿ ಕಪಿಲಸಿದ್ಧಮಲ್ಲಿಕಾರ್ಜುನನ ಮನೆಯ
ಸೂರೆಗೊಂಬ ತಸ್ಕರಜ್ಞಾನವೆನಿಸಿತ್ತು ಮರುಳು ಶಂಕರಯ್ಯಾ

೪೭೮
ಕ್ರಿಯೆಯೆ ಜ್ಞಾನ ಆ ಜ್ಞಾನವೆ ಕ್ರಿಯೆ
ಜ್ಞಾನವೆಂದಡೆ ತಿಳಿಯುವುದು
ಕ್ರಿಯೆಯೆಂದಡೆ ತಿಳಿದಂತೆ ಮಡುವುದು
ಪರಿಸ್ತ್ರಿಯ ಭೋಗಿಸಬಾರದೆಂಬುದೆ ಜ್ಞಾನ
ಅದರಂತೆ ಆಚರಿಸುವುದೆ ಕ್ರಿಯೆ
ಅರಿತು ಆಚರಿಸದಿದ್ದಡೆ ಅದೆ ಅಜ್ಞಾನ
ನೋಡಾ ಕೂಡಲಚೆನ್ನ ಸಂಗಮದೇವಾ

೪೭೯
ಕ್ರೀಯ ಮರೆದಲ್ಲಿ ಅರಿವು ಹೀನವಾಗಿಪ್ಪುದು
ಅರಿವ ಮರೆದಲ್ಲಿ ಜ್ಞಾನ ಹೀನವಾಗಿಪ್ಪುದು
ಜ್ಞಾನವ ಮರೆದಲ್ಲಿ ಬೆಳಗಿನ ಕಳೆ ಹೋಯಿತ್ತು
ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವು
ಅವರಿಗೆ ಮರೆಯಾಗಿ ತೊಲಗಿದ

೪೮೦
ಖಂಡವ ಮೆದ್ದು ಅರಗಿಸಿ ಹೆಂಡವ ಕುಡಿದು
ಉನ್ಮತ್ತವಿಲ್ಲದೆ ಮಿಕ್ಕಾದ ಕಿರುಹಕ್ಕಿಯ ಕೊಂದು ಕುಕ್ಕೆಯೊಳಗಿಟ್ಟು
ಹೆಬ್ಬದ್ದ ಹಿಡಿದು ಕಬ್ಬದ್ದ ಬಾಣಸವ ಮಾಡಿ
ಹುಲಿಯ ಹಲ್ಲ ಕಿತ್ತು ಎರಳೆಯ ಕಾಲ ಮುರಿದು
ಲಂಘಿಸುವ ಸಿಂಹದ ಅಂಗವ ಸೀಳಿ
ಉನ್ಮತ್ತದಿಂದ ಬಂದಪ್ಪ ಗಜವ ಕಂಗಳು ನುಂಗಿ
ಮೊಲ ನಾಯ ಕಚ್ಚಿ ನರಿ ಬಲೆಯ ನುಂಗಿ
ಸರ್ಪನ ಗಾಳಿ ತಾಗಿ ಗರುಡ ಸತ್ತು
ಇಂತಿವು ಹಗೆ ಕೆಳೆಯಾಗಿರಬಲ್ಲಡೆ ಭಕ್ತ
ಇಂತಹ ಭಕ್ತ ಕೆಳೆಯಾಗಿರಬಲ್ಲಡೆ ಮಾಹೇಶ್ವರ
ಇಂತಹ ಮಾಹೇಶ್ವರ ಕೆಳೆಯಾಗಿರಬಲ್ಲಡೆ ಪ್ರಸಾದಿ
ಇಂಗಹ ಪ್ರಸಾದಿ ಕೆಳೆಯಾಗಿರಬಲ್ಲಡೆ ಪ್ರಾಣಲಿಂಗಿ
ಇಂತಹ ಪ್ರಾಣಲಿಂಗಿ ಕೆಳೆಯಾಗಿರಬಲ್ಲಡೆ ಶರಣ
ಇಂತಹ ಶರಣ ಕೆಳೆಯಾಗಿರಬಲ್ಲಡೆ ಐಕ್ಯ
ಇಂತಹ ಐಕ್ಯಾನುಭಾವ ಕೆಳೆಯಾಗಿರ್ದಲ್ಲಿ ಮಹದೊಳಗಾಯಿತ್ತು
ಆ ಮಹದೊಳಗು ಸಯವಾದಲ್ಲಿ
ಸರ್ವಮಯವೆಂಬುದು ಇಹಪರ ನಾಸ್ತಿ
ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗಕ್ಕೆ ಇದಿರೆಡೆಯಿಲ್ಲ

೪೮೧
ಗಂಡ ನೀನು ಹೆಂಡತಿಯಾನು ಮತ್ತೊಬ್ಬರಿಲ್ಲಯ್ಯ
ನಿನ್ನ ಬೆಂಬಳಿಯಲಾನು ಮಚ್ಚಿ ಬಂದೆ
ಕಂಡಕಂಡವರೆಲ್ಲ ಬಲುಹಿಂದ ಕೈ ಹಿಡಿದರೆ
ಗಂಡಾ ನಿನಗೆ ಸೈರಣೆಯೆಂತಾಯಿತ್ತು ಹೇಳಾ
ಚನ್ನಮಲ್ಲಿಕಾರ್ಜುನಯ್ಯ
ನಿನ್ನ ತೋಳ ಮೇಲಣವಳನನ್ಯರೆಳೆದೊಯ್ಯುವರೆ
ನೋಡುತಿಹುದುಚಿತವೆ ಕರುಣಿಗಳರಸಾ

೪೮೨
ಗಂಡ ಶಿವಲಿಂಗದೇವರ ಭಕ್ತ
ಹೆಂಡತಿ ಮಾರಿ ಮಸಣಿಯ ಭಕ್ತೆ
ಗಂಡ ಕೊಂಬುದು ಪಾದೋದಕ ಪ್ರಸಾದ
ಹೆಂಡತಿ ಕೊಂಬುದು ಸುರೆ ಮಾಂಸ
ಭಾಂಡ ಭಾಜನ ಶುದ್ಧವಿಲ್ಲದವರ ಭಕ್ತಿ
ಹೆಂಡದ ಮಡಕೆಯ ಹೊರಗೆ ತೊಳೆದಂತೆ
ಕೂಡಲಸಂಗಮದೇವಾ

೪೮೩
ಗಂಡನ ಮೇಲೆ ಸ್ನೇಹವಿಲ್ಲದ ಹೆಂಡತಿ
ಲಿಂಗದ ಮೇಲೆ ನಿಷ್ಠೆಯಿಲ್ಲದ ಭಕ್ತ
ಇದ್ದಡೇನೂ ಸತ್ತಡೇನೊ
ಶಿವ ಶಿವಾ
ಕೂಡಲಸಂಗಮದೇವ
ಕೇಳಾ
ಊಡದ ಆವಿಂಗೆ ಉಣ್ಣದ ಕರುವ ಬಿಟ್ಟಂತೆ

೪೮೪
ಗಂಡು ಮೋಹಿಸಿ ಹೆಣ್ಣ ಹಿಡಿದಡೆ
ಅದು ಒಬ್ಬರ ಒಡವೆ ಎಂದು ಅರಿಯಬೇಕು
ಹೆಣ್ಣು ಮೋಹಿಸಿ ಗಂಡ ಹಿಡಿದಡೆ
ಉತ್ತರವಾವುದೆಂದರಿಯಬೇಕು
ಈ ಎರಡರ ಉಭಯವ ಕಲೆದು ಸುಖಿ ತಾನಾಗಬಲ್ಲಡೆ
ನಾಸ್ತಿನಾಥನು ಪರಿಪೂರ್ಣನೆಂಬೆ

೪೮೫
ಗಂಧವ ವಾಯು ಕೊಂಬಾಗ
ಅದ ತಂದು ಕೂಡಿದವರಾರು
ನಿಂದ ಮರಕ್ಕೆ ಸುಗಂಧ ಹುಟ್ಟುವಾಗ
ಅದ ಬಂಧಿಸಿ ತಂದು ಇರಿಸಿದವರಾರು
ಅವು ತಮ್ಮ ಅಮಗದ ಸ್ವಭಾವದಂತೆ
ನಿಂದ ನಿಜವೆ ತಾನಾಗಿ ಅಲ್ಲಿ ಬೇರೊಂದು
ಸಂದೇಹವ ಸಂಧಿಸಲಿಲ್ಲ
ಎಂದನಂಬಿಗ ಚವುಡಯ್ಯ

೪೮೬
ಗಂಧವನೊಳಕೊಂಡ ಕುಸುಮವ ಕೊಯ್ಯಬಹುದಲ್ಲದೆ
ಗಂಧವನೊಳಕೊಂಡ ವಾಯುವ ಕೊಯ್ಯಬಹುದೆ
ಘಟವಕೊಳಕೊಂಡಿದ್ದಾತ್ಮನನರಿಯಬಹುದೆ
ಆತ್ಮನನೊಳಕೊಂಡಿದ್ದ ಘಟವನರಿಯಬಹುದಲ್ಲದೆ
ವಸ್ತು ಅಂಗವಾದಲ್ಲಿ ಅರಿಯಬಹುದಲ್ಲದೆ
ಅಂಗ ವಸ್ತುವಾದಲ್ಲಿ ಹಿಂಗಿ ಅರಿವ ಠಾವಿನ್ನಾವುದು
ಕುಸುಮಕ್ಕೆ ಕಡೆ ನಡು ಮೊದಲಲ್ಲದೆ
ಗಂಧಕ್ಕೆ ಕಡೆ ನಡು ಮೊದಲುಂಟೆ
ಅರಿವುದಕ್ಕೆ ಅರುಹಿಸಿಕೊಂಬುದಕ್ಕೆ ಕುರುಹನರಿತಲ್ಲಿಯೆ
ಸದಾಶಿವಮೂರ್ತಿಲಿಂಗವೆಂಬ ರೂಪು ನಿಂದಿತ್ತು

೪೮೭
ಗಂಪಕ್ಕೆ ಸಿಕ್ಕೆ
ಬಲೆಗೊಳಗಾಗೆ
ಗೂಳಿಯ ಇರಿತದ ಡಾವರಕ್ಕೆ ನಿಲ್ಲೆ
ಸೆಳೆಗೋಲಿನ ಗಾಣದ ಕೀಟಕವನೊಲ್ಲೆ
ನಿನ್ನಾಟ ಅದೇತರ ಮಡುವಿನಾಟ ಹೇಳಾ
ಕದಕತನ ಬೇಡ
ಕದಂಬಲಿಂಗಾ

೪೮೮
ಗಗನವೇ ಗುಂಡಿಗೆ ಆಕಾಶವೇ ಅಗ್ಘವಣಿ
ಚಂದ್ರಸೂರ್ಯರಿಬ್ಬರೂ ಪುಷ್ಪ ನೋಡಾ
ಬ್ರಹ್ಮ ಧೂಪ ವಿಷ್ಣು ದೀಪ
ರುದ್ರನೋಗರಸಯಧಾನ ನೋಡ
ಗುಹೇಶ್ವಲಿಂಗಕ್ಕೆ ಪೂಜೆ ನೋಡಾ

೪೮೯
ಗರ ಹೊಡೆದಂತೆ ಬೆರತುಕೊಂಡಿಪ್ಪರು
ಮರನೇರಿ ಬಿದ್ದಂತೆ ಹಮ್ಮದಂಬೋದರು
ಉರಗನ ವಿಷವಾವರಿಸಿದಂತೆ ನಾಲಗೆ ಹೊರಳದು ಕಣ್ಗಾಣರು
ನಿಮ್ಮ ಕರುಣವೆ ಕರ ಚೆಲುವು
ಸಕಳೇಶ್ವರಯ್ಯಾ
ಸಿರಿ ಸೋಂಕಿದವನ ಪರಿ ಬೇರೆ ತಂದೆ

೪೯೦
ಗಾರುಡಿಗನ ವಿಷವಡರಬಲ್ಲುದೆ
ಸೂರ್ಯನ ಮಂಜು ಮುಸುಕಬಲ್ಲುದೆ
ಗಾಳಿಯ ಮೊಟ್ಟೆಯ ಕಟ್ಟಬಹುದೆ
ಅಗ್ನಿಯ ಕೈಯಿಂದ ಆಕಾಶ ಬೇಯಬಲ್ಲುದೆ
ನಿಮ್ಮನರಿದ ನಿಜಯೋಗಿಗೆ ಕರ್ಮಪಾಶವೆಲ್ಲಿಯದೊ
ರೇಕಣ್ಣಪ್ರಿಯ ನಾಗಿನಾಥಾ

೪೯೧
ಗಾಳಿಯ ಹಡೆದಲ್ಲಿ ತೂರಿಕೊಳ್ಳಯ್ಯಾ
ಗಾಳಿ ನಿನ್ನಾಧೀನವಲ್ಲಯ್ಯಾ
ನಾಳೆ ತೂರಿಹೆನೆಂದಡೆ ಇಲ್ಲಯ್ಯಾ
ಶಿವಶರಣೆಂಬುದೊಂದು ಗಾಳಿಯ ಹಡೆದಲ್ಲಿ
ಬೇಗ ತೂರೆಂದನಂಬಿಗ ಚವುಡಯ್ಯ

೪೯೨
ಗಾಳಿಯಲೆದ್ದ ಧೂಳು ತೃಣ ಎಲೆ
ಮೊದಲಾದ ಬಹುವ್ಯಾಪಾರ ಗಾಳಿಯ ಮುಟ್ಟಿದುದಿಲ್ಲ
ಶರಣನ ಸರ್ವೇಂದ್ರಿಯ ಗಾಳಿಯ ಧೂಳಿನ ಪರಿಯಂತೆ
ಪಳುಕದ ಭಾಂಡ ಬಹುವರ್ಣದಂತೆ
ಮುಟ್ಟಿಯೂ ಮುಟ್ಟದಿರ್ಪ ಮಹಾಶರಣಂಗೆ ನಮೋ ನಮೋ
ನಿಃಕಳಂಕ ಮಲ್ಲಿಕಾರ್ಜುನಾ

೪೯೩
ಗಿಡುವಿನ ಮೇಲಣ ತುಂಬಿ ಕೂಡೆ ವಿಕಸಿತವಾಯಿತ್ತು
ತುಂಬಿ
ನೋಡಾ
ಆತುಮ ತುಂಬಿ ತುಂಬಿ
ನೋಡಾ
ಪರಮಾತುಮ ತುಂಬಿ ತುಂಬಿ
ನೋಡಾ
ಗುಹೇಶ್ವರನೆಂಬ ಲಿಂಗಕ್ಕೆರಗಿ ನಿಬ್ಬೆರಗಾಯಿತ್ತು
ತುಂಬಿ ನೋಡು

೪೯೪
ಗಿಣಿಯಿಲ್ಲದ ಪಂಜರ ಹಲವು ಮಾತನಾಡಬಲ್ಲುದೆ
ದೇವರಿಲ್ಲದ ದೇಗುಲಕ್ಕೆ ಮಂತ್ರ ಅಭಿಷೇಕವುಂಟೆ
ಅರಿವು ನಷ್ಟವಾಗಿ ಕುರುಹಿನ ಹಾವಚೆಯ
ನಾನರಿಯೆನೆಂದನಂಬಿಗ ಚವುಡಯ್ಯ

೪೯೫
ಗಿರಿಯಲಲ್ಲದೆ ಹುಲ್ಲು ಮೊರಡಿಯಲ್ಲಾಡುವುದೆ ನವಿಲು
ಕೊಳಕ್ಕಲ್ಲದೆ ಕಿರುವಳ್ಳಕ್ಕೆಳಸುವುದೆ ಹಂಸೆ
ಮಾಮರ ತಳಿತಲ್ಲದೆ ಸರಗೈವುದೆ ಕೋಗಿಲೆ
ಪರಿಮಳವಿಲ್ಲದ ಪುಷ್ಪಕ್ಕೆಳಸುವುದೆ ಭ್ರಮರ
ಎನ್ನ ದೇವ ಚೆನ್ನಮಲ್ಲಿಕಾರ್ಜುನಂಗಲ್ಲದೆ
ಅನ್ಯಕ್ಕೆಳಸುವುದೆ ಎನ್ನ ಮನ
ಪೇಳಿರೆ ಕೆಳದಿಯರಿರಾ

೪೯೬
ಗಿಳಿಯ ಹಂಜರವಿಕ್ಕಿ
ಸೊಡರಿಂಗೆಣ್ಣೆಯನೆರೆದು ಬತ್ತಿಯನಿಕ್ಕಿ
ಬರವ ಹಾರತ್ತಿದ್ದೆನೆಲೆಗವ್ವ
ತರುಗೆಲೆ ಗಿರುಕೆಂದಡೆ ಹೊರಗನಾಲಿಸುವೆ
ಅಗಲಿದೆನೆಂದೆನ್ನ ಮನ ಧಿಗೆಲೆಂದಿತ್ತೆಲೆಗವ್ವಾ
ಕೂಡಲಸಂಗನ ಶರಣರು ಬಂದು
ಬಾಗಿಲ ಮುಂದೆ ನಿಂದು
ಶಿವಾ ಎಂದಡೆ ಸಂತೋಷಬಟ್ಟೆನೆಲೆಗವ್ವಾ

೪೯೭
ಗಿಳಿಯೋದಿ ಫಲವೇನು
ಬೆಕ್ಕು ಬಹುದ ಹೇಳಲರಿಯದು
ಜಗವೆಲ್ಲವ ಕಾಬ ಕಣ್ಣು
ತನ್ನ ಕೊಂಬ ಕೊಲ್ಲೆಯ ಕಾಣಲರಿಯದು
ಇದಿರ ಗುಣವ ಬಲ್ಲೆವೆಂಬರು
ತಮ್ಮ ಗುಣವತಾವರಿಯರು
ಕೂಡಲಸಂಗಮದೇವಾ

೪೯೮
ಗುಣ ದೋಷ ಸಂಪಾದನೆಯ ಮಾಡುವನ್ನಕ್ಕ
ಕಾಮದ ಒಡಲು
ಕ್ರೋಧದ ಗೊತ್ತು
ಲೋಭದ ಇಕ್ಕೆ
ಮೋಹದ ಮಂದಿರ
ಮದದಾವರಣ
ಮತ್ಸರದ ಹೊದಕೆ
ಆ ಭಾವವರತಲ್ಲದೆ
ಚೆನ್ನಮಲ್ಲಿಕಾರ್ಜುನನ ಅರಿವುದಕ್ಕೆ ಇಂಬಿಲ್ಲ ಕಾಣಿರಣ್ಣಾ

೪೯೯
ಗುರಿಯನೆಚ್ಚಲ್ಲಿ ತಾಗಿದವೊಲು
ತಪ್ಪಿದ ಭೇದವ ನಿಶ್ಚೈಸಿ ಕೈ ಅರಿವಂತೆ
ಕಾಯ ಜೀವದ ಸಂದಣಿಯಲ್ಲಿ
ಅರಿವೆಂಬ ವಸ್ತು ತಿರುಗಾಡುತ್ತಿರಲಾಗಿ
ಆ ಗುಣವ ಕರಿಗೊಂಡು ಮನಸಂದಿತ್ತು
ಮಾರೇಶ್ವರಾ

೫೦೦
ಗುರು ವೈಭವಕ್ಕೆ ಸಿಕ್ಕಿದಾಗಲೆ ಶಿಷ್ಯರಿಗೆ ನರಕ ಪ್ರಾಪ್ತಿ
ಲಿಂಗ ಭಜನೆಗೆ ಸಿಕ್ಕಿದಾಗಲೆ ಮರಣಕ್ಕೊಳಗು
ಜಂಗಮ ಜಂಗುಳಿಯಾಗಿ
ಕಂಡಕಂಡವರಂಗಕ್ಕೆ ಜಂಘೆಯನಿಕ್ಕಲಾಗಿ ಹೊರಗು
ಇಂತೀ ಇವರು ನಿಂದುದಕ್ಕೆ ಬಂಧವಿಲ್ಲದಿರಬೇಕು
ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವನರಿವುದಕ್ಕೆ