೫೦೧
ಗುರುಪ್ರಸಾದವ ಕೊಂಬರೆ
ನಾಚುವದು ಮನ
ಲಿಂಗಪ್ರಸದಾವ ಕೊಂಬರೆ
ನಾಚುವದು ಮನ
ಜಂಗಮಪ್ರಸಾದವ ಕೊಂಬರೆ
ನಾಚುವದು ಮನ
ಸಮಯಪ್ರಸಾದವ ಕೊಂಬರೆ
ನಾಚುವದು ಮನ
ಸೂಳೆಯ ಭೊಜಗನ ಎಂಜಲ ತಿಂಬರೆ
ನಾಚದು ಮನ
ಮಹಂತ ಸಕಳೇಶ್ವರಯ್ಯನು ಮೂಗ ಕೊಯ್ಯದೆ ಮಾಣನು

೫೦೨
ಗುರುವ ಕಂಡಲ್ಲಿ ನಿನ್ನನೇ ಕಾಬೆ
ಲಿಂಗವ ಕಂಡಲ್ಲಿ ನಿನ್ನನೇ ಕಾಬೆ
ಜಂಗಮವ ಕಂಡಲ್ಲಿ ನಿನ್ನನೇ ಕಾಬೆ
ನಿನ್ನಲ್ಲದ ಮತ್ತೊಂದ ತೋರದಿಹ ಅರಿವು ನೀನೇ ಬಲ್ಲೆ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ

೫೦೩
ಗುರುವಾದಡೂ ಕಾಯಕದಿಂದವೆ ಜೀವನ್ಮುಕ್ತಿ
ಲಿಂಗವಾದಡೂ ಕಾಯಕದಿಂದವೆ ವೇಷದ ಪಾಶ ಹರಿವುದು
ಗುರುವಾದಡೂ ಚರಸೇವೆಯ ಮಾಡಬೇಕು
ಲಿಂಗವಾದಡೂ ಚರಸೇವೆಯ ಮಾಡಬೇಕು
ಜಂಗಮವಾದರೂ ಚರಸೇವೆಯ ಮಾಡಬೇಕು
ಚೆನ್ನಬಸವಣ್ಣಪ್ರಿಯ ಚಂದೇಶ್ವರಲಿಂಗದ ಅರಿವು

೫೦೪
ಗುರುವಿಂಗೆ ಗುರುವಿಲ್ಲ
ಲಿಂಗಕ್ಕೆ ಲಿಂಗವಿಲ್ಲ
ಜಂಗಮಕ್ಕೆ ಜಂಗಮವಿಲ್ಲ
ನನಗೆ ನಾನಿಲ್ಲ
ಕಣ್ಣೆರೆದು ನೋಡುವಡೆ
ಆರಿಗೆ ಆರೂ ಇಲ್ಲ
ಕಪಿಲಸಿದ್ಧಮಲ್ಲಿಕಾರ್ಜುನ

೫೦೫
ಗುರುವಿನಡಿಗೆರಗೆನೆಂಬ ಭಾಷೆ ಎನಗೆ
ಲಿಂಗವ ಪೂಜಿಸಿ ವರವ ಬೇಡೆನೆಂಬ ಭಾಷೆ ಎನಗೆ
ಜಡೆಮುಡಿಯುಳ್ಳ ನಿಜಜಂಗಮವ ಕಂಡು
ಅಡಿಗೆರಗದ ಭಾಷೆ ಎನಗೆ
ಹಿಡಿದ ಛಲವ ಬಿಡದೆ ನಡೆಸಿ
ಮೃಡನ ಪಡೆದೆಹೆನೆಂಬ ಭಾಷೆ ಎನಗೆ
ಕಡುಗಲಿಯಾಗಿ ಆಚರಿಸಿ ಜಡಿದೆನು
ಅಜ್ಞಾನಿಗಳ ಬಾಯ ಕೆರಹಿನಲ್ಲಿ
ಮಾತಿನಲ್ಲಿ ವೇಷಧಾರಿಗಳು ಮೃಡನ ಅರಿದೆಹೆನೆಂದು ಗಳಹುತಿಪ್ಪರೆ
ಕೆರಹಿನಟ್ಟೆಯಲ್ಲಿ ಹೊಯ್ಯದೆ ಮಾಣ್ಣನೆ ಅರಿವುಳ್ಳ ಘನಮಹಿಮನು
ಅಮುಗೇಶ್ವರನೆಂಬ ಲಿಂಗವ ಅರಿದಿಪ್ಪ
ಮಹಾಘನಮಹಿಮನ ನಾನೇನೆಂಬೆನಯ್ಯಾ

೫೦೬
ಗುರುವೆಂಬ ತೆತ್ತಿಗನು ಲಿಂಗವೆಂಬಲಗನು
ಮನನಿಷ್ಠೆಯೆಂಬ ಕೈಯಲ್ಲಿ ಕೊಡಲು
ಕಾದಿದೆ ಗೆಲಿದೆ ಕಾಮನೆಂಬವನ
ಕ್ರೋಧಾದಿಗಳು ಕೆಟ್ಟು ವಿಷಯಂಗಳೊಡಿದವು
ಆಲಗು ಎನ್ನೊಳು ನಟ್ಟು ಆನಳಿದ ಕಾರಣ
ಚೆನ್ನಮಲ್ಲಿಕಾರ್ಜುನಲಿಂಗವ ಕರದಲ್ಲಿ ಹಿಡಿದೆ

೫೦೭
ಗುರುವೆಂಬ ಸೂತಕ ಅರಿವಿನಿಂದ ಹರಿಯಬೇಕು
ಲಿಂಗವೆಂಬ ಸೂತಕ ಅರಿವಿನಿಂದ ಹರಿಯಬೇಕು
ಅರಿವೆಂಬ ಸೂತಕಕ್ಕೆ ಮುಂದೆ ಒಂದ ಕಂಡೆಹೆನೆಂಬ
ಒಡಲಸೂತಕ ಹರಿಯಬೇಕು
ಸೂತಕ ನಿಹಿತವಾದಲ್ಲಿ
ಕಾಮಧೂಮ ಧೂಳೇಶ್ವರ ಎಂದೂ ಏನೂ ಎನಲಿಲ್ಲ

೫೦೮
ಗುರುವೆಂಬೆನೆ ಗುರುವು ನರನು
ಲಿಂಗವೆಂಬೆನೆ ಲಿಂಗವು ಕಲ್ಲು
ಜಂಗಮವೆಂಬೆನೆ ಜಂಗಮವು ಆತ್ಮನು
ಪಾದೋದಕವೆಂಬೆನೆ ಪಾದೋದಕ ನೀರು
ಪ್ರಸಾದವೆಂಬೆನೆ ಪ್ರಸಾದ ಓಗರ
ಇಂತೆಂದುದಾಗಿ
ಹೊನ್ನು ಹೆಣ್ಣು ಮಣ್ಣು ಈ ತ್ರಿವಿಧವ ಹಿಡಿದ ಕಾರಣ
ಗುರುವೆಂಬವನು ನರನು
ಅಷ್ಟವಿಧಾರ್ಚವೆ ಷೋಡಶೋಪಚಾರಕ್ಕೆ ಒಳಗಾದ ಕಾರಣ
ಲಿಂಗವೆಂಬುದು ಕಲ್ಲು
ಆಶೆಪಾಶೆಗೆ ಒಳಗಾದ ಕಾರಣ
ಜಂಗಮವೆಂಬುದು ಆತ್ಮನು
ಲಾಂಛನಿಗಳೆಂದು ಕಾಂಚನಕ್ಕೆ ಕೈಯಾನುವರಲ್ಲಿ
ಪಾದೋದಕ ಪ್ರಸಾದವೆಂದು ಕೊಂಡೆನಾದಡೆ
ಕೆಸರಿನೊಳಗೆ ಬಿದ್ದ ಪಶುವಿನಂತೆ ಆಯಿತ್ತು ಕಾಣಾ
ಅಮುಗೇಶ್ವರಾ

೫೦೯
ಗುರುವೆಂಬೆನೆ ಹಲಬರ ಮಗ
ಲಿಂಗವೆಂಬೆನೆ ಕಲುಕುಟಿಕನ ಮಗ
ಪ್ರಸಾದವೆಂಬೆನೆ ಒಕ್ಕಲಿಗನ ಮಗ
ಪಾದೋದಕವೆಂಬೆನೆ ದೇವೇಂದ್ರನ ಮಗ
ಈಸುವ ಹಿಡಿಯಲೂ ಇಲ್ಲ ಬಿಡಲೂ ಇಲ್ಲ
ತನ್ನೊಳಗ ನೋಡೆಂದನಂಬಿಗ ಚವುಡಯ್ಯ

೫೧೦
ಗುರುಶಿಷ್ಯ ಸಂಬಂಧವರಸಲೆಂದು ಹೋದರೆ
ತಾನೆ ಗುರುವಾದ
ತಾನೆ ಶಿಷ್ಯನಾದ
ತಾನೆ ಲಿಂಗವಾದ
ಗುಹೇಶ್ವರ
ನಿಮ್ಮ ಶರಣನ ಕಾಯದ ಕೈಯಲ್ಲಿ ಲಿಂಗವಕೊಟ್ಟರೆ
ಭಾವ ಬತ್ತಲೆಯಾಯಿತ್ತು

೫೧೧
ಘನತರ ಚಿತ್ರದ ರೂಹ ಬರೆಯ ಬಹುದಲ್ಲದೆ
ಪ್ರಾಣವ ಬರೆಯಬಹುದೇ
ಅಯ್ಯಃ ದಿವ್ಯಾಗಮಂಗಳು ಹೇಳಿದ ಕ್ರಿಯೆಯಲ್ಲಿ
ದೀಕ್ಷೆಯ ಮಾಡಬಹುದಲ್ಲದೆ ಭಕ್ತಿಯ ಮಾಡಬಹುದೆ
ಅಯ್ಯ ಪ್ರಾಣವಹ ಭಕ್ತಿಯ ತನ್ಮಯ ನೀನು
ಈ ಗುಣವುಳ್ಳಲ್ಲಿ ನೀನಿಹೆ ಇಲ್ಲದಲ್ಲಿ ನೀನಿಲ್ಲ
ಗುಹೇಶ್ವರ

೫೧೨
ಚಂದನವ ಕಡಿದು ಕೊರೆದು ತೇದಡೆ
ನೊಂದೆನೆಂದು ಕಂಪ ಬಿಟ್ಟಿತ್ತೆ
ತಂದು ಸುವರ್ಣವ ಕಡಿದೊರೆದಡೆ
ಬೆಂದು ಕಳಂಕ ಹಿಡಿಯಿತ್ತೆ
ಸಂದುಸಂದು ಕಡಿದ ಕಬ್ಬನು ತಂದು ಗಾಣದಲ್ಲಿಕ್ಕಿ ಅರೆದಡೆ
ಬೆಂದು ಪಾಕಗುಡದೆ ಸಕ್ಕರೆಯಾಗಿ ನೊಂದೆನೆಂದು ಸಿಹಿಯ ಬಿಟ್ಟಿತ್ತೆ
ನಾ ಹಿಂದೆ ಮಾಡಿದ ಹೀನಂಗಳೆಲ್ಲವ ತಂದು ಮುಂದಿಳುಹಲು
ನಿಮಗೇ ಹಾನಿ
ಎನ್ನ ತಂದೆ ಚೆನ್ನಮಲ್ಲಿಕಾರ್ಜುನಯ್ಯಾ
ನೀ ಕೊಂದಡೆಯೂ ಶರಣೆಂಬುದ ಮಾಣೆ

೫೧೩
ಚಂದ್ರೋದಯಕ್ಕೆ ಅಂಬುಧಿ ಹೆಚ್ಚುವುದಯ್ಯಾ
ಚಂದ್ರ ಕುಂದೆ ಕುಂದುವುದಯ್ಯಾ
ಚಂದ್ರಂಗೆ ರಾಹು ಅಡ್ಡ ಬಂದಲ್ಲಿ
ಅಂಬುಧಿ ಬೊಬ್ಬಿಟ್ಟಿತ್ತೆ ಅಯ್ಯಾ
ಅಂಬುಧಿಯ ಮುನಿ ಆಪೋಶನವ ಕೊಂಬಲ್ಲಿ
ಚಂದ್ರಮನಡ್ಡ ಬಂದನೆ ಅಯ್ಯಾ
ಆರಿಗಾರೂ ಇಲ್ಲ ಕೆಟ್ಟವಂಗೆ ಕೆಳೆಯಿಲ್ಲ
ಜಗದ ನಂಟ ನೀನೆ ಅಯ್ಯಾ
ಕೂಡಲಸಂಗಮದೇವಯ್ಯಾ

೫೧೪
ಚಕೋರಂಗೆ ಚಂದ್ರಮನ ಬೆಳಗಿನ ಚಿಂತೆ
ಅಂಬುಜಕೆ ಭಾನುವಿನ ಉದಯದ ಚಿಂತೆ
ಭ್ರಮರಂಗೆ ಪರಿಮಳದ ಬಂಡುಂಬ ಚಿಂತೆ
ಎನಗೆ ನಮ್ಮ ಕೂಡಲಸಂಗನ ಶರಣರ ನೆನೆವುದೆ ಚಿಂತೆ

೫೧೫
ಚರಾಚರವೆಂಬುದೊಂದು ಕಿಂಚಿತ್‌
ಚತುರ್ಯುಗವೆಂಬುದೊಂದು ಕಿಂಚಿತ್‌
ಅಪ್ಪುದೆಂಬುದೊಂದು ಕಿಂಚಿತ್‌
ಆಗದೆಂಬುದೊಂದು ಕಿಚಿತ್‌
ತಾನು ಶುದ್ಧವಾದ ಶರಣಂಗೆ
ಗುಹೇಶ್ವರನೆಂಬುದೊಂದು ಕಿಂಚಿತ್‌

೫೧೬
ಚಿಂತೆಯೆಂಬ ಹೂವಿನ ಗಿಡುವನು ನೋಡಿರೆ
ಹೊಲಗೇರಿಯಲ್ಲಿ ಬಿತ್ತುವನೆ ನೋಡಿರೆ
ಜಲಶೇಖರನ ಉದಕವನೆರದಡೆ
ಆಸೆಯೆಂಬ ಹೂವ ಕೊಯ್ದು ಕಾಮಂಗೇರಿಸುವೆನು
ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ

೫೧೭
ಚಿಕ್ಕಟು ಕಡಿದಡೇನು
ಮನಕೃತಿಯರಿಯದು
ಹೊಕ್ಕು ಹರಿದಡೇನು
ಹೊಲನ ಮೇಯಲರಿಯದು
ಮಕ್ಕಳ ಹಡೆದಡೇನು
ಒಕ್ಕಲೂರಾಗದು
ಲೆಕ್ಕಕ್ಕೊಂದೈನೂರಿದ್ದಡೇತಕ್ಕೆ ಬಾತೆಯಯ್ಯಾ
ಮಿಕ್ಕ ಕುಕವಿಗಳ ಅರೆವಚನ
ಹೊಲದ ಕುಕ್ಕತೆನೆಯಾದಂತೆ
ಕಾಣಾ ಸಕಳೇಶ್ವರದೇವಾ

೫೧೮
ಚಿನ್ನ ಲೋಹಾದಿಗಳು ಕರಗಿ ಒಂದುಗೂಡುವುದಲ್ಲದೆ
ಮಣ್ಣು ಬೆಂದು ಹಿಂಗಿ ಓಡಾದುದು ಸರಿಯಿಂದ ಸಂದುಗೂಡುವುದೆ
ಅರಿಯದ ಮರವೆಯ ಒಡಗೂಡಬಹುದಲ್ಲದೆ
ಅರಿತು ಹೇಳಿ ಕೇಳಿ ಮತ್ತರಿಯೆನೆಂದು
ಅಹಂಕಾರದಲ್ಲಿ ನುಡಿವವನ ಒಡಗೂಡಬಹುದೆ
ಇಂತೀ ಗುಣವ ಅರಿದು ಒಪ್ಪಿದಡೆ ಪರಕ್ಕೆ ದೂರ
ಅಲ್ಲ ಅಹುದೆಂದಡೆ ಶರಣರ ಗೆಲ್ಲ ಸೋಲದ ಹೋರಾಟ
ಇಂತಿವರೆಲ್ಲರೂ ಕೂಡಿ ನೊಂದಡೆ ನೋಯಲಿ
ನಾ ಕೊಂಡ ವ್ರತದಲ್ಲಿಗೆ ತಪ್ಪೆನು
ಇದು ವ್ರತಾಚಾರವ ಬಲ್ಲವರ ಭಾಷೆ
ಏಲೇಶ್ವರಲಿಂಗವು ಕುಲ್ಲತನವಾದಡೂ ಒಲ್ಲೆನು

೫೧೯
ಚೆನ್ನ ವಿಶೇಷ ಮಣ್ಣು ಅಧಮವೆಂದಡೆ
ಅದು ನಿಂದು ಕರಗುವುದಕ್ಕೆ
ಮಣ್ಣಿನ ಕೋವೆಯ ಮನೆಯಾಯಿತ್ತು
ಇಷ್ಟವನರಿವ ವಸ್ತುವ ನೆಮ್ಮುವುದಕ್ಕೆ ಇದೇ ದೃಷ್ಪ
ಐಘಟದೂರ ರಾಮೇಶ್ವರಲಿಂಗವನರಿವುದಕ್ಕೆ

೫೨೦
ಚಿನ್ನಕ್ಕರಿಸಿನ ಚಿನ್ನಕ್ಕರಿಸಿನ
ಚಿನ್ನಕ್ಕರಿಸಿನವ ಕೊಳ್ಳಿರವ್ವಾ
ಎಮ್ಮ ನಲ್ಲನ ಮೈಯ ಹತ್ತುವ
ಅರಿಸಿನವ ಕೊಳ್ಳಿರವ್ವಾ
ಒಳಗುಂದದರಿಸಿನವ ಮಿಂದು
ಚೆನ್ನಮಲ್ಲಿಕಾರ್ಜುನನ ಅಪ್ಪಿರವ್ವಾ

೫೨೧
ಚಿಲಿಮಿಲಿ ಎಂದು ಓದುವ ಗಿಳಿಗಳಿರಾ
ನೀವು ಕಾಣಿರೆ ನೀವು ಕಾಣಿರೆ
ಸರವೆತ್ತಿ ಪಾಡುವ ಕೋಗಿಲೆಗಳಿರಾ
ನೀವು ಕಾಣಿರೆ ನೀವು ಕಾಣಿರೆ
ಎರಗಿ ಬಂದಾಡುವ ತುಂಬಿಗಳಿರಾ
ನೀವು ಕಾಣಿರೆ ನೀವು ಕಾಣಿರೆ
ಕೊಳನತಡಿಯೊಳಾಡುವ ಹಂಸೆಗಳಿರಾ
ನೀವು ಕಾಣಿರೆ ನೀವು ಕಾಣಿರೆ
ಗಿರಿ ಗಹ್ವರದೊಳಗಾಡುವ ನವಿಲುಗಳಿರಾ
ನೀವು ಕಾಣಿರೆ ನೀವು ಕಾಣಿರೆ
ಚೆನ್ನಮಲ್ಲಿಕಾರ್ಜುನನೆಲ್ಲಿದ್ದಹನೆಂದು ಹೇಳಿರೆ

೫೨೨
ಚೆನ್ನಯ್ಯನ ಮನೆಯ ದಾಸನ ಮಗನು
ಕಕ್ಕಯ್ಯನ ಮನೆಯ ದಾಸಿಯ ಮಗಳು
ಇವರಿಬ್ಬರು ಹೊಲದಲು ಬೆರಣಿಗೆ ಹೋಗಿ ಸಂಗವ ಮಾಡಿದರು
ಇವರಿಬ್ಬರಿಗೆ ಹುಟ್ಟಿದ ಮಗ ನಾನು
ಕೂಡಲಸಂಗಮದೇವ ಸಾಕ್ಷಿಯಾಗಿ

೫೨೩
ಚೇಳಿಂಗೆ ಬಸುರಾಯಿತ್ತೆ ಕಡೆ
ಬಾಳೆಗೆ ಫಲವಾಯಿತ್ತೆ ಕಡೆ
ರಣರಂಗದಲ್ಲಿ ಕಾದುವ ಓಲೆಕಾರಂಗೆ ಓಸರಿಸಿತ್ತೆ ಕಡೆ
ಮಾಡುವ ಭಕ್ತರಿಗೆ ಮನಹೀನವಾದಡೆ ಅದೇ ಕಡೆ
ಕೂಡಲಸಂಗಮದೇವಾ

೫೨೪
ಛಲಬೇಕು ಶರಣಂಗೆ ಪರಧನವನೊಲ್ಲೆನೆಂಬ
ಛಲಬೇಕು ಶರಣಂಗೆ ಪರಸತಿಯನೊಲ್ಲೆನೆಂಬ
ಛಲಬೇಕು ಶರಣಂಗೆ ಪರದೈವವನೊಲ್ಲೆನೆಂಬ
ಛಲಬೇಕು ಶರಣಂಗೆ ಲಿಂಗಜಂಗಮವನೊಂದೆಂಬ
ಛಲಬೇಕು ಶರಣಂಗೆ ಪ್ರಸಾದ ದಿಟವೆಂಬ
ಛಲವಿಲ್ಲದವರ ಮೆಚ್ಚ ಕೂಡಲಸಂಗಮದೇವ

೫೨೫
ಜಂಬೂದ್ವೀಪದ ವ್ಯವಹಾರಿ
ಖಂಡಭಂಡದ ತುಂಬಿ ಕುಂಭಿನಿಯುದರದ ಮೇಲೆ ಪಸರವನಿಕ್ಕಿದ
ಉಷ್ಣತೃಷೆ ಘನವಾಗಿ ಕಡಲೇಳು ಸಮುದ್ರವ ಕುಡಿದು
ನೀರಡಸಿದಾತ ಅರಲುಗೊಂಡು ಬೆರಗಾದ
ಶಿಶು ತಾಯ ಹೇಣನ ಹೊತ್ತುಕೊಂಡು ಹೆಸರ ಹೇಳುತ್ತೈದಾನೆ
ಗುಹೇಶ್ವರನೆಂಬ ನಿಲವ ವಸುಧೆಯಾಕೃತಿ ನುಂಗಿತ್ತು