೫೧
ಅನೇಕ ಪರಿಯ ಭಕ್ತಿಯ ವೇಷವನಳವಡಿಸಿಕೊಂಡು
ಮನೆಮನೆದಪ್ಪದೆ ತಿರುಗುವೆನು
ಅವರ ಇಚ್ಛಿಗೆ ಅನುಮಾನವಿಡಿದು ನುಡಿವೆನು
ಅವರ ಮನಧರ್ಮವನರಿಯದೆ ನುಡಿದೆನಾದಡೆ
ಅನೇಕ ಪರಿಯಲ್ಲಿ ಭಂಗಬಡುವೆನು
ದಿಟದ ಭಕುತನಂತೆ
ಪುರಾತನ ವಚನಂಗಳ ಉದರ ನಿಮಿತ್ತವಾಗಿ ಬಳಸುವೆನು
ಕಡು ಪಾಪಿಗಿನ್ನೇನು ಹದನಯ್ಯ
ಬಸವಪ್ರಿಯ ಕೂಡಲಚೆನ್ನ ಸಂಗಮದೇವಾ

೫೨
ಅನ್ನವ ನೀಡುವವರಿಂಗೆ ಧಾನ್ಯವೆಸೆವ ಲೋಕ
ಅರ್ಥವ ಕೊಡುವವರಿಂಗೆ ಪಾಷಾಣವೆಸೆವ ಲೋಕ
ಹೆಣ್ಣು ಹೊನ್ನು ಮಣ್ಣು ಮುರನೂ
ಕಣ್ಣಿನಲಿ ನೋಡಿ ಕಿವಿಯಲಿ ಕೇಳಿ
ಕೈಯಲಿ ಮುಟ್ಟಿ ಮಾಡುವ ಭಕ್ತಿ
ಸಣ್ಣವರ ಸಮಾರಾಧನೆಯಾಯಿತ್ತು
ತನ್ನನಿತ್ತು ತುಷ್ಟಿವಡೆವರನೆನಗೆ ತೋರಾ
ಶ್ರೀಗಿರಿ ಚೆನ್ನಮಲ್ಲಿಕಾರ್ಜುನಾ

೫೩
ಅನ್ನವನಿಕ್ಕಿದಡೇನು ಪುಣ್ಯವಹುದು
ವಸ್ತ್ರವ ಕೊಟ್ಟಡೇನು ಧರ್ಮವಹುದು
ಹಣವ ಕೊಟ್ಟಡೇನು ಕೀರ್ತಿಯಹುದು
ತ್ರಿಕರಣ ಶುದ್ಧವಾದಡೇನು ಮುಕ್ತಿಯಹುದು
ಕೂಡಲಚೆನ್ನಸಂಗಯ್ಯನನಲ್ಲಿ

೫೪
ಅಪರಿಮಿತದ ಕತ್ತಲೆಯೊಳಗೆ
ವಿಪರೀತದ ಬೆಳಗನಿಕ್ಕಿದವರಾರೋ
ಬೆಳಗೂ ಅದೆ ಕತ್ತಲೆಯು ಅದೆ
ಇದೇನು ಚೋದ್ಯವೋ ಒಂದಕ್ಕೊಂದಂಜದು
ಆನೆಯೂ ಸಿಂಹವೂ ಒಂದಾಗಿ ಉಂಬುದ ಕಂಡು
ಬೆರಗಾದೆನು ಕಾಣಾ ಗುಹೇಶ್ವರ

೫೫
ಅಪಾರ ಘನಗಂಭೀರದ ಅಂಬುಧಿಯಲ್ಲಿ
ತಾರಾಪಥವಂ ನೋಡಿ ನಡೆಯೆ
ಭೈತ್ರದಿಂದ ದ್ವೀಪ ದ್ವೀಪಾಂತರಕ್ಕೆ
ಸಕಲ ಪದಾರ್ಥವನೆಯ್ದಿಸುವುದು
ಎನ್ನ ದೇವ ಚೆನ್ನಮಲ್ಲಿಕಾರ್ಜುನಯ್ಯನ
ಸಮೀಪ ತೂರ್ಯಸಂಭಾಷಣೆಯನರಿದಡೆ
ಮುನ್ನಿನಲ್ಲಿಗೆಯ್ದಿಸುವುದು

೫೬
ಅಪ್ಪನು ಡೋಹರ ಕಕ್ಕಯ್ಯನಾಗಿ
ಮುತ್ತಯ್ಯ ಚೆನ್ನಯ್ಯನಾದರೆ ಆನು ಬದುಕೆನೆ
ಮತ್ತಾ ಶ್ವಪಚಯ್ಯನ ಸನ್ನಿಧಿಯಿಂದ
ಭಕ್ತಿಯ ಸದ್ಗುಣವ ನಾನು ಅರಿವೆನಯ್ಯಾ
ಕಷ್ಟಜಾತಿ ಜನ್ಮದಲ್ಲಿ ಜನಿಯಿಸಿದೆ
ಎನಗಿದು ವಿಧಿಯೆ ಕೂಡಲಸಂಗಮದೇವಾ

೫೭
ಅಪ್ಪಾ ಬೊಪ್ಪಾ ಚಿಕ್ಕ ಚೋಹಮಂ ತೊಟ್ಟು
ಮುಖಕ್ಕೆ ಹೊತ್ತಿಗೊಂದು ಪರಿಯ ಬಚ್ಚಣೆಯನಿಕ್ಕಿ
ಮತ್ತದನು ತಲೆಯಲ್ಲಿ ಹೊತ್ತು ತಪ್ಪಿ ಹೆಜ್ಜೆಯನಿಕ್ಕಿ ಆಡುತ್ತಿದ್ದ
ರೇಕಣ್ಣಪ್ರಿಯ ನಾಗಿನಾಥನಲ್ಲಿ ಹೊತ್ತು ಹೋಗದ ಬಹುರೂಪವ

೫೮
ಅಪ್ಪಿನ ಸೋಂಕಿನ ಸುಖವನಗಲುವ ಮನಕ್ಕಿಂದ
ಬಂಜೆಯಾಗಿಪ್ಪುದು ಕರಸುಖ ನೋಡವ್ವಾ
ಕಂಗಳ ನೋಟ ಮನಕ್ಕೆ ಸೈರಿಸದು
ಎಣೆಗೊಂಡು ಬಡವಾದ ಪರಿಯ ನೋಡವ್ವಾ
ತುಪ್ಪುಳನಿಕ್ಕಿದ ಹಂಸೆಯಂತಾದೆನವ್ವಾ
ಮಹಾಲಿಂಗ ಗಜೇಶ್ವರನುಳಿದಡೆ

೫೯
ಅಪ್ಪು ಅಪ್ಪುವ ನುಂಗಿದಂತೆ
ವಿಚಿತ್ರ ಚಿತ್ರದೊಳಡಗಿದಂತೆ
ಮನ ಮಹವ ಕೂಡಿ
ಬೆಳಗು ಬೆಳಗನೊಳಕೊಂಡಂತೆ
ತಾನೆಂಬುದೇನೂ ಕುರುಹುದೋರದೆ
ಮನಸಂದಿತ್ತು ಮಾರೇಶ್ವರಾ

೬೦
ಅಪ್ಪು ತುಂಬಿದ ಕುಂಭದಲ್ಲಿ ಕಿಚ್ಚು ಹಾಕಿ
ಕಟ್ಟಿಗೆಯನಿಕ್ಕಿ ಉರುಹಲಿಕ್ಕೆ ಆ ಅಪ್ಪುವ ಸುಟ್ಟುದುಂಟೆ ಕಿಚ್ಚು
ಆ ಕುಂಭದ ತಪ್ಪಲಿನಲ್ಲಿ ಕಟ್ಟಿಗೆಯನಿಕ್ಕಿ ಉರುಹಲಿಕ್ಕೆ
ಕುಂಭದ ಲೆಪ್ಪದ ಮರೆಯಲ್ಲಿ ಅಪ್ಪುವ ಸುಡಬಲ್ಲುದೆ
ಇದು ಕಾರಣ ಕ್ರೀಯ ಮರೆಯಲ್ಲಿರ್ದ ನಿಃಕ್ರೀ
ಶಿಲೆಯ ಮರೆಯಲ್ಲಿರ್ದ ನೆಲೆ ವಸ್ತುವ
ಚಿತ್ತದ ಒಲವರದಿಂದ ಅರಿಯಬೇಕು
ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವನರಿವಲ್ಲಿ

೬೧
ಅಪ್ಪುವಿನ ಶಿಲೆಯ ಉಳಿಯ ಮೊನೆಯಲ್ಲಿ ಚಿತ್ರಸಬಹುದೇ
ಅರಗಿನ ಘಟವ ಉರಿಯ ಮೊನೆಯಲ್ಲಿ ಅಕ್ಷರವ ಬರೆಯಬಹುದೆ
ಮೃತ್ತಿಕೆಯ ಹರುಗೋಲನೇರಿ ನದಿಯ ತಪ್ಪಲಿಗೆ ಹೋಗಬಹುದೆ
ನಿಜನಿಶ್ಚಯವನರಿಯದವನ ವಾಚಾರಚನೆ ಇಷ್ಟಲ್ಲದಿಲ್ಲ
ನಿಜತ್ವವನರಿದವನ ವಾಚಾರಚನೆಯ ಕುರುಹೆಂತುಟೆಂದಡೆ
ಶಿಲೆಯೊಳಗಣ ಸುರಭಿಯಂತೆ
ಪ್ರಳಯದೊಳಗಾದ ನಿಜನಿವಾಸದಂತೆ
ಆಯದ ಘಾಯದಂತೆ ಸುಘಾಯದ ಸುಖದಂತೆ
ಇಂತೀ ಭಾವರಹಿತವಾದ ಭಾವಜ್ಞನ ತೇರ ಕೂಗಿಂಗೆ ಹೊರಗು
ಮಹಾಮಹಿಮ ಮಾರೇಶ್ವರಾ

೬೨
ಅಯ್ಯಾ ಎನ್ನ ನಾ ಸಂತೈಸಿ ಸಂತೈಸಲಾರೆನು
ಆಹಾ ಅಯ್ಯಾ ನಿನ್ನ ಕೂಟದ ಸವಿಗಳ ನೆನೆನೆನೆದು
ಬೇಯದ ಬೇಗೆಯ ನೋಡಯ್ಯಾ
ಅಯ್ಯಾ ಎನಗಂತಿಂತೆಂದು ಹೇಳುವ ನಲ್ಲ
ಮರೆಗೆ ಮರೆಯದ ಕಿಚ್ಚನಿಕ್ಕಿ ಹೋದೆಯಲ್ಲಾ
ಎನ್ನ ಕಪಿಲಸಿದ್ಧಮಲ್ಲೇಶ್ವರಯ್ಯಾ

೬೩
ಅಯ್ಯಾ ಅಯ್ಯಾ ಎಂದು ಕರೆವುತ್ತಲಿದ್ದೇನೆ
ಅಯ್ಯಾ ಅಯ್ಯಾ ಎಂದು ಒರಲುತ್ತಲಿದ್ದೇನೆ
ಓ ಎನ್ನಲಾಗದೆ ಅಯ್ಯಾ ಆಗಳೂ
ನಿಮ್ಮ ಕರೆವುತ್ತಲಿದ್ದೇನೆ ಮೋನವೇ
ಕೂಡಲಸಂಗಮದೇವಾ

೬೪
ಅಯ್ಯಾ ಎನ್ನ ಹಲ್ಲ ಮರೆಯಲ್ಲಿಪ್ಪ ಬೆಲ್ಲವ ಕಂಡು
ಎಲ್ಲರೂ ಮೆಲಬಂದರು
ಬೆಲ್ಲಗಳಿದ್ದಡೆ ನಿಲಲೀಸದೆ ಎನ್ನ ಕಾಡುತ್ತಿದಾರೆಯೆಂದು
ಆ ಬೆಲ್ಲವನಲ್ಲಿಯೆ ನುಂಗಿದಡೆ ಹಲ್ಲು ಮುರಿದವು
ಮೆಲಬಂದವರೆಲ್ಲ ಅಲ್ಲಿಯೆ ಬಯಲಾದರು
ನಾ ನಿಮ್ಮಲ್ಲಿ ಕೂಡಿ ಸುಖಿಯಾದೆನಯ್ಯಾ
ಬಸವಪ್ರಿಯ ಕೂಡಲಚೆನ್ನಸಂಗಮದೇವಾ

೬೫
ಅಯ್ಯಾ ಕತ್ತಲೆಯ ಕಳೆದುಳಿದ ಸತ್ಯಶರಣರ ಪರಿಯನೇನೆಂಬೆನಯ್ಯಾ
ಘನವನೊಳಕೊಂಡ ಮನದ ಮಹಾನುಭಾವಿಗಳ
ಬಳಿವಿಡಿದು ಬದುಕುವೆನಯ್ಯಾ
ಅಯ್ಯಾ ನಿನ್ನಲ್ಲಿ ನಿಂದು ಬೇರೊಂದರಿಯದ
ಲಿಂಗಸುಖಿಗಳ ಸಂಗದಲ್ಲಿ ದಿನವ ಕಳೆಯಿಸಯ್ಯಾ
ಚೆನ್ನಮಲ್ಲಿಕಾರ್ಜುನಾ

೬೬
ಅಯ್ಯಾ ಗುರುವೆಂಬರ್ಚಕನು ತಂದು
ಎನಗಿಷ್ಟವ ಕಟ್ಟಲಿಕೆ
ಹಂಗನೂಲ ಕೊರಳಲ್ಲಿ ಹಾಕಿ ಕಟ್ಟಿಕೋ ಎಂದನು
ಅದು ಎನಗೊಡವೆಯಲ್ಲವೆಂದು ಕಂಠವ ಹಿಡಿದು
ಲಿಕಿತವ ಲೇಖನವ ಮಾಡಿ ಮಾಡಿ ದಣಿದು
ಹಂಗನೂಲ ಹರಿದು ಹಾಕಿದೆನು
ಇಷ್ಟವನಿಲ್ಲಿಯೇ ಇಟ್ಟೆನು
ಅಯ್ಯಾ ನಾ ಹಿಡಿದ ನೀಲಕಂಠನು
ಶಕ್ತಿ ಸಮೇತವ ಬಿಟ್ಟನು
ಕಲ್ಯಾಣ ಹಾಳಾಯಿತು
ಭಂಡಾರ ಸೊರೆಹೋಯಿತ್ತು
ನಿರ್ವಚನವಾಯಿತ್ತು
ಶಾಂತ ಸಂತೋಷಿಯಾದ ಅರಸರು ನಿರ್ಮಾಲ್ಯಕ್ಕೊಳಗಾದರು
ಅಲೇಖ ನಾಶವಾಯಿತುತು ಪತ್ರ ಹರಿಯಿತ್ತು.
ನಾದ ಶೂನ್ಯವಾಯಿತ್ತು
ಒಡೆಯ ಕಲ್ಲಾದ ಕಾರಣ ಎನ್ನೈವರು ಸ್ತ್ರೀಯರು
ಉಳಲಾಟಗೊಂಡೇಳಲಾರದೆ ಹೋದರು ಕಾಣಾ ಕಲ್ಲಿನಾಥಾ

೬೭
ಅಯ್ಯಾ
ನಾನಧವೆ
ಅಯ್ಯಯ್ಯ ಕೈಯ ಕೋಲಕೊಂಬರೆ
ಅಯ್ಯಾ
ಎಳೆಗರುವಿನ ಎಳಗಂತಿಯನೆಳೆದೊಯ್ವರೆ ಭಕ್ತರು
ಅಯ್ಯೋ ಅಯ್ಯೋ ಎನಲೊಯ್ವರೆ
ಬಸವಣ್ಣಪ್ರಿಯ ಚೆನ್ನಸಂಗಯ್ಯಾ

೬೮
ಅಯ್ಯಾ ನಾನೊಂದ ಬೇಡುವೆ ನಿಮ್ಮಲ್ಲಿ
ಎನಗೊಂದು ಲೇಸ ಮಾಡಯ್ಯ
ನಾರಿಯರುರದ ಗಾಳಿ ಸೋಂಕದಂತೆ
ಎನ್ನುವ ಮಂತ್ರಸಿ ರಕ್ಷಿಸಯ್ಯ
ಎನಗಿನಿಸುಮಾಡಿ ಬದುಕಿಸಯ್ಯ ಎನ್ನ
ಕಪಿಲಸಿದ್ಧಮಲ್ಲಿಕಾರ್ಜುನ

೬೯
ಅಯ್ಯಾ ನಿನ್ನ ಮುಟ್ಟಿ ಮುಟ್ಟದೆನ್ನ ಮನ ನೋಡಾ
ಬಿಚ್ಚಿ ಬೀಸರವಾಯಿತ್ತೆನ್ನ ಮನ
ಹೊಳಲ ಸುಂಕಿಗನಂತೆ ಹೊದಕುಳಿಗೊಂಡಿತ್ತೆನ್ನ ಮನ
ಎರಡೆಂಬುದ ಮರೆದು ಬರಡಾಗದೆನ್ನ ಮನ
ನೀನು ಆನಪ್ಪ ಪರಿಯೆಂತು ಹೇಳಾ
ಚೆನ್ನಮಲ್ಲಿಕಾರ್ಜುನಾ

೭೦
ಅಯ್ಯಾ ನಿನ್ನಾಳಾಗಿ ಆರೆನಯ್ಯಾ ಕೆಲಬರ ಬೋಸರಿಸಲು
ಅಯ್ಯಾ ನಿನ್ನಾಳಾಗಿ ಆರೆನಯ್ಯಾ ಕೆಲಬರ ಸ್ತುತಿಯಿಸಲು
ಅಯ್ಯಾ ನೀ ನಿತ್ಯನೆಂದು ಮರೆವೊಕ್ಕಡೆ ಸೀಯದಮತಿಪ್ಪರೆ
ಶಿವನೆ ನಿನ್ನ ಕಾಮ್ಯಾರ್ಥವ ಬೇಡಿ ಬಾಧೆಬಡಿಸೆ
ನಿನಗೇನುಂಟಯ್ಯಾ ನೀನು ನಿಃಕಾಮಿ
ಅಂಜದಿರು ಫಲಪದವ ಬೇಡೆ ನೀನಿಹ ಲೋಕ ನಿನಗಿರಲಿ
ಕಾಡದೆ ನಿನ್ನವರೊಳಗೆ ಕೂಡಿರುವ ಪದವ ಕರುಣಿಸಯ್ಯಾ
ಕಪಿಲಸಿದ್ಧಮಲ್ಲಿಕಾರ್ಜುನ

೭೧
ಅಯ್ಯಾ ನಿಮ್ಮ ಬರವಿಂಗೆ ಕಣ್ಬೇಟಗೊಂಡೆನು
ಎಲೆ ಅಯ್ಯಾ ನಿಮ್ಮ ಬರವಿಂಗೆ ಎನ್ನ ಮನದ ಮಂಚವ ಪಚ್ಚಡಿಸಿದೆ
ಎಲೆ ಅಯ್ಯಾ ನಿಮ್ಮ ಬರವಿಂಗೆ ಚಿತ್ತಸುಯಿದಾನಿಯಾಗಿದ್ದೇನೆ
ಎಲೆ ಅಯ್ಯಾ ನಿಮ್ಮ ಬರವಿಂಗೆ ಸುಜ್ಞಾನದ ಸೆವಿಗೆ ಹಾಸಿ ಆಸೆಬಡುತ್ತಿದ್ದೇನೆ
ಎಲೆ ಅಯ್ಯಾ ನಿ ಬಂದು ಅವಿರತವಿಲ್ಲದೆ ಕೂಡಿ ನಿನ್ನವಳೆಂದೆನಿಸಾ
ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ

೭೨
ಅಯ್ಯಾ ನಿಮ್ಮ ವಂಶಾವಳಿಯಲು ಒಬ್ಬ ತೊತ್ತಿನ ಮಗ ಹುಟ್ಟಿದ
ಆತನ ತೊತ್ತಿನ ಮಗ ನಾನಯ್ಯಾ
ಬಳಿದೊತ್ತು ಬಳಗದೊತ್ತು ವಂಶದೊತ್ತು ನಾನಯ್ಯಾ
ನಿಮ್ಮ ಒಡೆತನಕ್ಕೆ ಕೇಡಿಲ್ಲವಾಗಿ ಎನ್ನ ತೊತ್ತುತನಕ್ಕೆ ಕೇಡಿಲ್ಲವಯ್ಯಾ

೭೩
ಅಯ್ಯಾ ನಿಮ್ಮ ಶರಣನ ಮರ್ತ್ಯಕ್ಕೆ ತಂದೆಯಾಗಿ
ನೆನೆದು ಸುಖಿಯಾಗಿ ಆನು ಬದುಕಿದೆನಯ್ಯಾ
ಅದೇನು ಕಾರಣ ತಂದೆಯೆಂದರಿದೆನಯ್ಯಾ
ಎನ್ನ ಕಾರಣ ತಂದೆಯೆಂದರಿದೆನಯ್ಯಾ
ಅರಿದರಿದು ನಿಮ್ಮ ಶರಣನು ಆಚರಿಸುವ ಆಚರಣೆಯ ಕಂಡು
ಕಣ್ದೆರೆದೆನಯ್ಯಾ ಕೂಡಲಸಂಗಮದೇವಾ

೭೪
ಅಯ್ಯಾ ನೀನು ಕೇಳಿದಡೆ ಕೇಳು ಕೇಳದಡೆ ಮಾಣು
ಆನು ನಿನ್ನ ಹಾಡಿದಲ್ಲದೆ ಸೈರಿಸಲಾರೆನಯ್ಯಾ
ಅಯ್ಯಾ ನೀನು ನೋಡಿದಡೆ ನೋಡು ನೋಡದಡೆ ಮಾಣು
ಆನು ನಿನ್ನ ನೋಡಿ ಹಿಗ್ಗಿ ಹಾರೈಸಿದಲ್ಲದೆ ಸೈರಿಸಲಾರೆನಯ್ಯಾ
ಅಯ್ಯಾ ನೀನು ಮಚ್ಚಿದೆಡೆ ಮಚ್ಚು ಮಚ್ಚದಡೆ ಮಾಣು
ಆನು ನಿನ್ನನಪ್ಪಿದಲ್ಲಡೆ ಸೈರಿಸಲಾರೆನಯ್ಯಾ
ಅಯ್ಯಾ ನೀನು ಒಲಿದಡೆ ಒಳಿ ಒಲಿಯದಡೆ ಮಾಣು
ಆನು ನಿನ್ನ ಪೂಜಿಸಿದಲ್ಲದೆ ಸೈರಿಸಲಾರೆನಯ್ಯಾ
ಚೆನ್ನಮಲ್ಲಿಕಾರ್ಜುನಯ್ಯಾ
ಆನು ನಿಮ್ಮನರ್ಚಿಸಿ ಪೂಜಿಸಿ ಹರುಷದೊಳೋಲಾಡುವೆನಯ್ಯಾ

೭೫
ಅಯ್ಯಾ ನೀನೆನ್ನ ಮೊರೆಯನಾಲಿಸಿದಡಾಲಿಸು
ಆಲಿಸದಿರ್ದಡೆ ಮಾಣು
ಅಯ್ಯಾ ನೀನೆನ್ನ ದುಃಖವ ನೋಡಿದಡೆ ನೋಡು
ನೋಡದಿರ್ದಡೆ ಮಾಣು
ನಿನಗಿದು ವಿಧಿಯೆ
ನೀನೊಲ್ಲದಡೆ ಆನೊಲಿಸುವ ಪರಿಯೆಂತಯ್ಯಾ
ಮನವೆಳಸಿ ಮಾರುವೋಗಿ ಮರೆವೊಕ್ಕಡೆ
ಕೊಂಬ ಪರಿಯೆಂತಯ್ಯಾ
ಚೆನ್ನಮಲ್ಲಿಕಾರ್ಜುನಾ