೫೨೬
ಜಗದಗಲ ಮುಗಿಲಗಲ ಮಿಗೆಯಗಲ ನಿಮ್ಮಗಲ
ಪಾತಾಳದಿಂದತ್ತತ್ತ ನಿಮ್ಮ ಶ್ರೀಚರಣ
ಬ್ರಹ್ಮಾಂಡದಿಂದತ್ತತ್ತ ನಿಮ್ಮ ಶ್ರೀಮಕುಟ
ಅಗಮ್ಯ ಅಗೋಚರ ಅಪ್ರತಿಮ ಲಿಂಗವೆ
ಕೂಡಲಸಂಗಮದೇವಯ್ಯಾ
ಎನ್ನ ಕರಸ್ಥಲಕ್ಕೆ ಬಂದು ಚುಳುಕಾದಿರಯ್ಯಾ

೫೨೭
ಜಗದಗಲದ ಗಗನದ ಆನೆ ಕನಸಿನಲ್ಲಿ ಬಂದು ಮೆಟ್ಟಿತ್ತ ಕಂಡೆ
ಅದೇನೆಂಬೆ ಹೇಳಾ
ಮಹಾಘನವನದೆಂತೆಂಬ ಹೇಳಾ
ಗುಹೇಶ್ವರನೆಂಬ ಲಿಂಗವನರಿದು ಮರೆದಡೆ
ಲೋಯಿಸರದ ಮೇಲೆ ಭಂಡಿ ಹರಿದಂತೆ

೫೨೮
ಜಜ್ಜನೆ ಜರಿದೆನು ಜಜ್ಜನೆ ಜರಿದೆನು
ಜಜ್ಜನೆ ಜರಿದೆ ನೋಡಯ್ಯಾ
ಬಿಬ್ಬನೆ ಬಿರಿದೆನು ಬಿಬ್ಬನೆ ಬಿರಿದೆನು
ಬಿಬ್ಬನೆ ಬಿರಿದೆ ನೋಡಯ್ಯಾ
ನಾನೊಬ್ಬನೆ ಉಳಿದೆನು ನಾನೊಬ್ಬನೆ ಉಳಿದೆನು
ನಾನೊಬ್ಬನೆ ಉಳಿದೆ ನೋಡಯ್ಯಾ
ಕೂಡಲಸಂಗಮದೇವಾ
ನಿಮ್ಮ ಶರಣರನಗಲಿದ ಕಾರಣ

೫೨೯
ಜನಮೆಚ್ಚಿ ಶುದ್ಧನಲ್ಲದೆ
ಮನಮೆಚ್ಚಿ ಶುದ್ಧನಲ್ಲವಯ್ಯಾ
ನುಡಿಯಲ್ಲಿ ಜಾಣನಲ್ಲದೆ
ನಡೆಯಲ್ಲಿ ಜಾಣನಲ್ಲವಯ್ಯಾ
ವೇಷದಲ್ಲಿ ಅಧಿಕನಲ್ಲದೆ
ಭಾಷೆಯಲ್ಲಿ ಅಧಿಕನಲ್ಲವಯ್ಯಾ
ಧನ ದೊರಕದಿದಡೆ ನಿಷ್ಪೃಹನಲ್ಲದೆ
ಧನ ದೊರಕಿ ನಿಷ್ಪೃಹನಲ್ಲವಯ್ಯಾ
ಏಕಾಂತದ್ರೋಹಿ ಗುಪ್ತಪಾತಕ ಯುಕ್ತಿಶೂನ್ಯಂಗೆ
ಸಕಳೇಶ್ವರದೇವ ಒಲಿ ಒಲಿಯೆಂದೆಡೆ ಎಂತೊಲಿವನಯ್ಯಾ

೫೩೦
ಜನಿತಕ್ಕೆ ತಾಯಾಗಿ ಹೆತ್ತಳು
ಮಾಯೆ
ಮೋಹಕ್ಕೆ ಮಗಳಾಗಿ ಹುಟ್ಟಿದಳು
ಮಾಯೆ
ಕೂಟಕ್ಕೆ ಸ್ತ್ರೀಯಾಗಿ ಕೂಡಿದಳು
ಮಾಯೆ
ಇದಾವಾವ ಪರಿಯಲ್ಲಿ ಕಾಡಿತ್ತು
ಮಾಯೆ
ಈ ಮಾಯೆಯ ಕಳೆವಡೆ ಎನ್ನಳವಲ್ಲ
ನೀವೆ ಬಲ್ಲಿರಿ
ಕೂಡಲಸಂಗಮದೇವಾ

೫೩೧
ಜಲದ ಮಂಟಪದ ಮೇಲೆ
ಉರಿಯ ಚಪ್ಪರವನಿಕ್ಕಿ
ಆಲಿಕಲ್ಲ ಹಸೆಯ ಹಾಸಿ
ಬಾಸಿಗವ ಕಟ್ಟಿ
ಕಾಲಿಲ್ಲದ ಹೆಂಡತಿಗೆ ತಲೆಯಿಲ್ಲದ ಗಂಡ
ಬಂದು ಮದುವೆಯಾದನು
ಎಂದೆಂದೂ ಬಿಡದ ಬಾಳುವೆಗೆ ಕೊಟ್ಟರೆನ್ನ
ಚೆನ್ನಮಲ್ಲಿಕಾರ್ಜುನನೆಂಬ ಗಂಡಂಗೆನ್ನ
ಮದುವೆಯ ಮಾಡಿದರೆಲೆ ಅವ್ವಾ

೫೩೨
ಜವನಿದ್ದಾನೆ ಜವನ ಪಟ್ಟಣವಿದೆ
ಮಾಮರನಿದೆ ಹೂಮರನಿದೆ ತೋಮರನಿದೆ
ನೋಡಯ್ಯಾ
ಆವ ಕಾರ್ಯವಾದಡೂ ಮಾಡು
ದೇವ ಕಾರ್ಯವ ಮಾಡು
ಸಾವ ಕಾರ್ಯ ತಪ್ಪದು
ನೀ ಕೆಡಬೇಡ ಕಂಡಾ
ಬೇಗಬೇಗ ನಂಬಿ ಪೂಜಿಸು ದೇವ ಸೊಡ್ಡಳನ ಮರುಳೆ

೫೩೩
ಜಾಗ್ರದಲ್ಲಿ ಹೋಹಡೆ
ಎನ್ನ ವ್ರತಕ್ಕೆ ಅರ್ಹರಾಗಿದ್ದವರಲ್ಲಿಗಲ್ಲದೆ ಹೋಗೆನು
ಸ್ವಪ್ನದಲ್ಲಿ ಕಾಂಬಲ್ಲಿ
ಎನ್ನ ಸಮಶೀಲವಂತರನಲ್ಲದೆ ಕಾಣೆನು
ಸುಷುಪ್ತಿಯಲ್ಲಿ ತೊಳಗಿ ಬೆಳಗಿ ಆಡುವಾಗ
ಎನ್ನ ನೇಮದಲ್ಲಿಯೆ ಅಡಗುವೆ
ಈ ಸೀಮೆಯಲ್ಲಿ ತಪ್ಪಿದೆನಾದಡೆ
ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಕ್ಕೆ ತಪ್ಪುಕನಹೆನು

೫೩೪
ಜಾತಿ ಜಾತಿಯ ಕೂಡಿದಲ್ಲದೆ ನಿಹಿತ ಸುಖವಿಲ್ಲ
ಬಲ್ಲವ ಬಲ್ಲವನಲ್ಲಿಯಲ್ಲದೆ ಒಳ್ಳೆಯ ಗುಣವಿಲ್ಲ
ಭಟ ಮುಗ್ಗಿದಡೆ ತಿಳಿದ ಭಟ ಕೈ ಹಿಡಿದೆತ್ತಿ
ಇದಿರಾಗೆಂದಡೆ ಊಣೆಯವೆಲ್ಲಿ ಅಡಗಿತ್ತು
ಕೇಳುವ ಬನ್ನಿ ಅರ್ಕೇಶ್ವರಲಿಂಗವ

೫೩೫
ಜಾತಿ ಜಾತಿಯ ಕೊಂದು
ನಿಹಿತ ಅನಿಹಿತವ ಕೆಡಿಸಿ
ಜಾತ ಅಜಾತನ ಕಂಡು ನಿಹಿತವಾಗಿರಿ
ಅರ್ಕೇಶ್ವರಲಿಂಗವನರಿವುದಕ್ಕೆ

೫೩೬
ಜೀವನೆಂಬ ಅಳತದ ಕೋಲಿನಲ್ಲಿ
ಭಾವಜ್ಞ ನಾನಾದೆನೆಂಬವರೆಲ್ಲರೂ
ಅಳತಕ್ಕೆ ಸಂದು ಹೊರಳಿ ಮರಳುತೈದಾರೆ
ಸರ್ವಸಂಗ ಪರಿತ್ಯಾಗವ ಮಾಡಿದೆನೆಂಬ ಅರುಹಿತಿಯರೆಲ್ಲರೂ
ತಥ್ಯಮಿಥ್ಯವೆಂಬ ಕೋಲಿನಲ್ಲಿ ಅಳತೆಗೊಳಗಾಗುತೈದಾರೆ
ಹಿಂದಕೊಂದು ಕುರುಹಿಲ್ಲ ಮುಂದಕೊಂದು ಲಕ್ಷ್ಯವಿಲ್ಲಾ
ಎಂದು ಹಿಂಗಿ ನುಡಿದು
ನಾವು ನಿರಂಗಿಗಳೆಂದು ಅಂಗವ ಹೊತ್ತು ತಿರುಗಾಡುವರೆಲ್ಲರು
ಬಂಧ ಮೋಕ್ಷ ಕರ್ಮಂಗಳಿಂದ
ಅಂಗಳ ಬಾಗಿಲ ವಾಸಂಗಳಲ್ಲಿ
ಬಾ ಹೋಗೆನಿಸಿಕೊಂಬ ನಿಂದೆಯ ಕೋಲಿನಲ್ಲಿ
ಅಳತಕ್ಕೊಳಗಾಹರೆಲ್ಲರು ಸರ್ವಾಂಗಲಿಂಗಿಗಳಪ್ಪರೆ
ಇದರಂದವ ತಿಳಿದು ಆರಾರ ಇರವು ಅವರಿರವಿನಂತೆ
ತಾವಾಗಿ ಅರಿದವರಲ್ಲಿ ಅರುಹಿಸಿಕೊಂಬನ್ನಕ್ಕ
ಅವರೊಡಗೂಡಿ ಅವರು ತನ್ನನರಿದ ಮತ್ತೆ
ಆ ಆರಿಕೆಯ ತೆರ ತಾನೆಂಬುದನೆ ಪ್ರಮಾಣಿಸಿ
ಪಕ್ವವಾಹನ್ನಕ್ಕ ತೊಟ್ಟಿನೊಳಗಿಪ್ಪ ಫಲದ ತೆರನಂತೆ
ಈ ದೃಷ್ಟ ತನ್ನಷ್ಟವಹನ್ನಕ್ಕ
ತನ್ನ ಕಣ್ಣಿನಿಂದ ಕನ್ನಡಿಯ ನೋಡಿ
ತನ್ನ ತಾನೆ ಅರಿವುದು ಕಣ್ಣೋ ಕನ್ನಡಿಯೋ
ಕನ್ನಡಿಯೆಂದಡೆ ಅಂಧಕಂಗೆ ಪ್ರತಿರೂಪಿಲ್ಲ
ಇದು ಕಾರಣದಲ್ಲಿ ಅವರರಿವ ತಾನರಿದು ತನ್ನರಿವ ಅವರರಿದು
ಉಭಯದರಿವು ಒಡಗೂಡುವನ್ನಕ್ಕ ಹಿಂದಣ ಕುರುಹು
ಮುಂದಣ ಲಕ್ಷ್ಯವ ವಿಚಾರಿಸಿ ಮರೆಯಬೇಕು
ಧಾರೇಶ್ವರಲಿಂಗನ ಕೊಡಬಲ್ಲಡೆ

೫೩೭
ಜೀವವಿಲ್ಲದ ಹೆಣನ ಹಿಡಿದಾಡುವರಯ್ಯ
ಪ್ರತಿಯಿಲ್ಲದ ಪ್ರತಿಗೆ ಪ್ರತಿಯ ಮಾಡುವರಯ್ಯ
ಶಿರವಿಲ್ಲದ ಮುಂಡಕ್ಕೆ ಸೇಸೆಯನಿಕ್ಕುವರು
ಗುಹೇಶ್ವರ

೫೩೮
ಜೀವವುಳ್ಳನ್ನಕ್ಕರ ಕ್ರೋಧದ ಮೂಲ
ಕಾಯವುಳ್ಳನ್ನಕ್ಕರ ಕಾಮದ ಮೂಲ
ಸಂಸಾರವ್ಯಾಪ್ತಿಯುಳ್ಳನ್ನಕ್ಕರ ಆಸೆಯ ಮೂಲ
ಇಂತಪ್ಪಾಸೆಯ ಕೆಡಿಸಿ ಶಿವಯೋಗದ ಲೇಸ ತೋರು
ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ

೫೩೯
ಜೇನುತುಪ್ಪವ ಹೊತ್ತು ಮಾರುವವಳ ಮಡಕೆಯ ಮೇಲೆ
ಮೂರು ತುಂಬಿ ಕುಳಿತೈಧಾವೆ
ಒಂದು ತುಂಬಿ ಇದ್ದಿತ್ತು
ಒಂದು ತುಂಬಿ ಹಾರಿತ್ತು
ಒಂದು ತುಂಬಿ ಸತ್ತಿತ್ತು
ಮೂರು ತುಂಬಿ ಅಂದವ ಕಂಡುದಿಲ್ಲ
ಮಡಕೆ ಒಡೆಯಿತ್ತು
ತುಪ್ಪವೊಕ್ಕಿತ್ತು
ಹೊತ್ತವಳು ಸತ್ತಳು
ಇದೇನು ಕೃತ್ರಿಮವೆಂದು
ಕೇಳುವ ಬನ್ನಿ ಸದಾಶಿವಮೂರ್ತಿಲಿಂಗವ

೫೪೦
ಜ್ಞಾನ ಬಾ
ಮಾಯೆ ಹೋಗೆಂದು ಕಳುಹುತ್ತಿದ್ದೇನೆ
ಅರಿವು ಬಾ
ಅಜ್ಞಾನ ಹೋಗೆಂದು ಕಳುಹುತ್ತಿದ್ದೇನೆ
ನಿಃಕಲ ಬಾ
ಸಕಲ ಹೋಗೆಂದು ಕಳುಹುತ್ತಿದ್ದೇನೆ
ನಿಃಪ್ರಪಂಚ ಬಾ
ಪ್ರಪಂಚ ಹೋಗೆಂದು ಕಳುಹುತ್ತಿದ್ದೇನೆ
ಕೂಡಲಸಂಗಮದೇವರಲ್ಲಿ ಬಸವಣ್ಣನ ಬಲ್ಲವರನೊಳಗೆ ಕೂಡಿ
ಅರಿಯದವರ ಹೊರಗೆ ತಡೆವುತ್ತಿದ್ದೇನೆ

೫೪೧
ಜ್ಞಾನದ ಬಲದಿಂದ ಅಜ್ಞಾನದ ಕೇಡು
ನೋಡಯ್ಯಾ
ಜ್ಯೋತಿಯ ಬಲದಿಂದ ತಮಂಧದ ಕೇಡು
ನೋಡಯ್ಯಾ
ಸತ್ಯದ ಬಲದಿಂದ ಅಸತ್ಯದ ಕೇಡು
ನೋಡಯ್ಯಾ
ಪರುಷದ ಬಲದಿಂದ ಅವಲೋಹದ ಕೇಡು ನೋಡಯ್ಯಾ
ಕೂಡಲಸಂಗನ ಶರಣರ ಅನುಭಾವದ ಬಲದಿಂದ
ಎನ್ನ ಭವದ ಕೇಡು
ನೋಡಯ್ಯಾ

೫೪೨
ತಂದೆ ನೀನು ತಾಯಿ ನೀನು
ಬಂಧು ನೀನು ಬಳಗ ನೀನು
ನೀನಲ್ಲದೆ ಮತ್ತಾರೂ ಇಲ್ಲಯ್ಯಾ
ಕೂಡಲಸಂಗಮದೇವಾ
ಹಾಲಲದ್ದು ನೀರಲದ್ದು

೫೪೩
ತತ್ವಾರ್ಥವ ಬಲ್ಲವಂಗೆ
ಆ ತತ್ವಾರ್ಥವೆ ಕತ್ತಲೆಯ ಮಾಯೆ
ಆಧ್ಯಾತ್ಮವ ಬಲ್ಲವಂಗೆ
ಆ ಪವನನೆ ತನ್ನ ಸುತ್ತಿದ ಮಾಯೆ
ಕ್ರೀಭಾವವಂತರಿಗೆ
ಸಂದೇಹವೆ ತನ್ನ ಸುತ್ತಿದ ಮಾಯೆ
ಇಂತಿವನಹುದಲ್ಲಾ ಎಂಬುದು ತಾ ಮಾಯೆ
ಬಂಕೇಶ್ವರಲಿಂಗವ ಕೇಳಿಕೊಂಬ

೫೪೪
ತನಗೆ ಮುನಿವರಿಗೆ ತಾ ಮುನಿಯಲೇಕಯ್ಯಾ
ತನಗಾದ ಆಗೇನು ಅವರಿಗಾದ ಚೇಗೆಯೇನು
ತನುವಿನ ಕೋಪ ತನ್ನ ಹಿರಿಯತನದ ಕೇಡು
ಮನದ ಕೋಪ ತನ್ನ ಅರಿವಿನ ಕೇಡು
ಮನೆಯೊಳಗಣ ಕಿಚ್ಚು ಮನೆಯ ಸುಟ್ಟಲ್ಲದೆ
ನೆರಮನೆಯ ಸುಡುವುದೆ ಕೂಡಲಸಂಗಮದೇವಾ

೫೪೫
ತನು ಒಂದು ದ್ವೀಪ
ಮನ ಒಂದು ದ್ವೀಪ
ಆಪ್ಯಾಯನ ಒಂದು ದ್ವೀಪ
ವಚನ ಒಂದು ದ್ವೀಪ
ಇಂತೀ ನಾಲ್ಕು ದ್ವೀಪದೆಡೆಯ ಬೆಸಗೊಂಬಡೆ
ಗುಹೇಶ್ವರ ನಿಮ್ಮ ಸ್ಥಾನಂಗಳು

೫೪೬
ತನು ಕರಗದವರಲ್ಲಿ ಮಜ್ಜನವನೊಲ್ಲೆಯಯ್ಯಾ ನೀನು
ಮನ ಕರಗದವರಲ್ಲಿ ಪುಷ್ಪವನೊಲ್ಲೆಯಯ್ಯಾ ನೀನು
ಹದುಳಿಗರಲ್ಲದವರಲ್ಲಿ ಗಂಧಾಕ್ಷತೆಯನೊಲ್ಲೆಯಯ್ಯಾ ನೀನು
ಅರಿವು ಕಣ್ದೆರೆಯದವರಲ್ಲಿ ಆರತಿಯನೊಲ್ಲೆಯಯ್ಯಾ ನೀನು
ಭಾವಶುದ್ಧವಿಲ್ಲದವರಲ್ಲಿ ನೈವೇದ್ಯವನೊಲ್ಲೆಯಯ್ಯಾ ನೀನು
ಪರಿಣಾಮಿಗಳಲ್ಲದವರಲ್ಲಿ ನೈವೇದ್ಯವನೊಲ್ಲೆಯಯ್ಯಾ ನೀನು
ತ್ರಿಕರಣ ಶುದ್ಧವಿಲ್ಲದವರಲ್ಲಿ ತಾಂಬೂಲವನೊಲ್ಲೆಯಯ್ಯಾ ನೀನು
ಹೃದಯಕಮಲ ಅರಳದವರಲ್ಲಿ ಇರಲೊಲ್ಲೆಯಯ್ಯಾ ನೀನು
ಎನ್ನಲ್ಲಿ ಏನುಂಟೆಂದು ಕರಸ್ಥಲವನಿಂಬುಗೊಂಡೆ ಹೇಳಾ
ಚೆನ್ನಮಲ್ಲಿಕಾರ್ಜುನಯ್ಯಾ

೫೪೭
ತನು ಕರಗಿತ್ತು
ಮನ ನಿಂದಿತ್ತು
ಉಲುಹು ಅಡಗಿತ್ತು
ನೆಲೆ ನಿಂದಿತ್ತು
ಮನ ಪವನ ಬಿಂದು ಒಡಗೂಡಿತ್ತು
ಉರಿ ಎದ್ದಿತ್ತು ಊರ್ಧ್ವಕ್ಕೇರಿತ್ತು ಶರಧಿ ಬತ್ತಿತ್ತು
ನೊರೆ ತೆರೆ ಅಡಗಿತ್ತು ಅಷ್ಟಮದವೆಲ್ಲ ಹಿಟ್ಟುಗುಟ್ಟಿತ್ತು
ಕರಣಂಗಳೆಲ್ಲ ಹುರಿದು ಹೋದವು
ಸಪ್ತಧಾತು ಕೆಟ್ಟಿತ್ತು ರಸವರತಿತ್ತು ಅಪ್ಪು ಬರತಿತ್ತು
ಕೆಟ್ಟುಹೋದ ಬಿದಿರಿನಂತೆ ತೊಟ್ಟು ಬಿಟ್ಟು ಬಯಲೊಳಗೆ ಬಿದ್ದು
ನಾನೆತ್ತ ಹೋದೆನೆಂದರಿಯೆನಯ್ಯಾ ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ

೫೪೮
ತನು ತರತರಂಬೋಗಿ
ಮನವು ನಿಮ್ಮಲ್ಲಿ ಸಿಲುಕಿತ್ತಯ್ಯ
ನೋಟವೆ ಪ್ರಾಣವಾಗಿ
ಆಪ್ಯಾಯನ ನಿಮ್ಮಲ್ಲಿ ಅರತುದಯ್ಯ
ಸಿಲುಕಿತ್ತು ಶೂನ್ಯದೊಳಗೆ
ಗುಹೇಶ್ವರ ನಿರಾಳವಯ್ಯ

೫೪೯
ತನು ನಷ್ಟವಾದಡೇನಯ್ಯಾ
ಮನನಷ್ಟವಾಗದನ್ನಕ್ಕ
ವಾಕ್ಕು ನಷ್ಟವಾದಡೇನಯ್ಯಾ
ಬೇಕುಬೇಡೆಂಬುದಳಿಯದನ್ನಕ್ಕ
ಅಂಗಸುಖ ನಷ್ಟವಾದಡೇನಯ್ಯಾ
ಕಂಗಳಪಟಲಹರಿಯದನ್ನಕ್ಕ
ಮನ ಮುಗ್ಧವಾದಡೇನಯ್ಯಾ
ಅಹಂ ಎಂಬುದ ಬಿಡದನ್ನಕ್ಕ
ಇವೆಲ್ಲರೊಳಗಿದ್ದು ವಲ್ಲಭನೆನಿಸಿಕೊಂಬವರ ನುಡಿಯ ಒಲ್ಲರು
ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣ

೫೫೦
ತನು ನಷ್ಟವಾದಲ್ಲಿ ಉಸುರಿಗೆ ಒಡಲಿಲ್ಲ
ಮನ ನಷ್ಟವಾದಲ್ಲಿ ಅರಿವಿಂಗೆ ತೆರಪಿಲ್ಲ
ಅರಿವು ನಷ್ಟವಾದಲ್ಲಿ ಉಭಯವ ಭೇದಿಸುವದಕ್ಕೆ ಅಪ್ರಮಾಣು
ರೂಪು ರುಚಿ ದೃಷ್ಟವಾಗಬೇಕು
ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಾ