೫೫೧
ತನು ನಿಮ್ಮ ರೂಪಾದ ಬಳಿಕ
ಆರಿಗೆ ಮಾಡುವೆ
ಮನ ನಿಮ್ಮ ರೂಪಾದ ಬಳಿಕ
ಆರ ನೆನೆವೆ
ಪ್ರಾಣ ನಿಮ್ಮ ರೂಪಾದ ಬಳಿಕ
ಆರನಾರಾಧಿಸುವೆ
ಅರಿವು ನಿಮ್ಮಲ್ಲಿ ಸ್ವಯವಾದ ಬಳಿಕ
ಆರನುವೆ
ಚೆನ್ನಮಲ್ಲಿಕಾರ್ಜುನಯ್ಯಾ
ನಿಮ್ಮಿಂದ ನೀವೆಯಾದಿರಾಗಿ
ನಿಮ್ಮನೆ ಅರಿವುತ್ತಿರ್ದೆನು

೫೫೨
ತನು ಮುಟ್ಟಿ ಮನ ಮುಟ್ಟದೆ ದೂರವಾದರಯ್ಯಾ ಬೆಲೆವೆಣ್ಣಿನಂತೆ
ಸೂಳೆ ತನುಮುಟ್ಟಿ ಅಪ್ಪುವಳಲ್ಲದೆ ಮನಮುಟ್ಟಿ ಅಪ್ಪಳಾಗಿ
ಆಚಾರವನರಿಯದ ಅರೆಮರುಳುಗಳು ಶಿವಸುಖವನೆತ್ತ ಬಲ್ಲರು
ಕೂಡಲಚೆನ್ನಸಂಗಮದೇವಾ

೫೫೩
ತನುವ ಪಡದು ಧನವ ಗಳಿಸಬೇಕೆಂದು
ಮನುಜರ ಮನೆಯ ಬಾಗಿಲಿಗೆ ಹೋಗಿ
ಮನಬಂದ ಪರಿಯಲ್ಲಿ ನುಡಿಸಿಕೊಂಡು
ಮನನೊಂದು ಬೆಂದು ಮರುಗುತ್ತಿರಲಾರೆ
ಸಕಳೇಶ್ವರದೇವಾ
ನೀ ಕರುಣಿಸಿ ಇದ ಠಾವಿನಲ್ಲಿ ಇಹಂಥಾ
ಪರಮಸುಖ ಎಂದು ದೊರಕೊಂಬುದೊ

೫೫೪
ತನುವ ಬೇಡಿದಡೀವೆ
ಮನವ ಬೇಡಿದಡೀವೆ
ಧನವ ಬೇಡಿದಡೀವೆ
ಬೇಡು ಬೇಡಲೆ ಹಂದೆ
ಕಣ್ಣ ಬೇಡಿದಡೀವೆ
ತಲೆಯ ಬೇಡಿದಡೀವೆ
ಕೂಡಲಸಂಗಮದೇವಾ
ನಿಮಗಿತ್ತು ಶುದ್ಧನಾಗಿಪ್ಪೆ
ನಿಮ್ಮ ಪುರಾತರ ಮನೆಯಲ್ಲಿ

೫೫೫
ತನುವಿಂಗೆ ತನುವಾಗಿ ಮನಕ್ಕೆ ಮನವಾಗಿ
ಜೀವಕ್ಕೆ ಜೀವವಾಗಿ ಇದ್ದುದನಾರು ಬಲ್ಲರೋ
ಅದು ದೂರವೆಂದು ಸಮೀಪವೆಂದು
ಮಹಂತ ಗುಹೇಶ್ವರನೊಳಗೆಂದು ಹೊರಗೆಂದು
ಬರುಸೂರೆವೋದರು

೫೫೬
ತನುವಿನ ಕೊರತೆಗೆ ಸುಳಿಸುಳಿದು
ಮನದ ಕೊರತೆಗೆ ನೆನೆನೆನೆದು
ಭಾವದ ಕೊರತೆಗೆ ತಿಳಿತಿಳಿದು
ಶಬ್ದದ ಕೊರತೆಗೆ ಉಲಿಉಲಿದ್ದು
ಗುಹೇಶ್ವರನೆಂಬ ಲಿಂಗ ಮನದಲ್ಲಿ ನೆಲೆಗೊಳ್ಳದಾಗಿ

೫೫೭
ತನುವಿನೊಳಗೆ ತನುವಾಗಿ
ಮನದೊಳಗೆ ಮನವಾಗಿ
ಪ್ರಾಣದೊಳಗೆ ಪ್ರಾಣವಾಗಿಪ್ಪುದೆಂದಡೆ
ಕೆಲಬರಿಗೆ ಅರಿಯಬಪ್ಪುದೆ
ಅಂತರಂಗದೊಳಗೆ ಅದೆ ಎಂದಡೇನು
ಮನ ಮುಟ್ಟುವನ್ನಕ್ಕರ ಕಾಣಬಾರದು
ಬಹಿರಂಗದಲ್ಲಿ ಅದೆ ಎಂದಡೇನು
ಪೂಜಿಸುವನ್ನಕ್ಕರ ಕಾಣಬಾರದು
ಸಾಕಾರವಲ್ಲದ ನಿರಾಕಾರ ಲಿಂಗವು
ವ್ಯಾಕುಲವುಳ್ಳನ್ನಕ್ಕರ ಸಾಧ್ಯವಾಗದು
ಎನ್ನ ಮನದೊಳಗೆ ಘನವನನುಗೊಳಿಸಿ ತೋರುವವರಿಲ್ಲದ ಕಾರಣ
ಎನ್ನ ಅಜಗಣ್ಣನಿಕ್ಕಿದ ದಸರಿದೊಡಕಿಂಗೆ
ಬೆರಗಾದೆ ಕಾಣಾ [ಪ್ರಭುವೆ]

೫೫೮
ತನುವೀವಡೆ ತನುವೆನಗಿಲ್ಲ
ಮನವೀವಡೆ ಮನವೆನಗಿಲ್ಲ
ಇಂತೀ ತನುಮನಧನ ಸಕಲಸಂಪತ್ತುಳ್ಳ
ನಿಮ್ಮ ಶರಣರ ತಪ್ಪಲಕ್ಕಿಯನಾಯ್ದು ತಂದು
ಎನ್ನೊಡಲ ಹೊರೆವೆನಲ್ಲದೆ
ಅಮರೇಶ್ವರಲಿಂಗಕ್ಕೆ ನೀಡುವ ಬಯಕೆ ಎನಗಿಲ್ಲ
[ಸಂಗನಬಸವಣ್ಣಾ]

೫೫೯
ತನುವೆಂಬ ಹುತ್ತಕಕ್ಕೆ ಮನವೆಂಬ ಸರ್ಪ ಆವರಿಸಿ
ಹೆಡೆಯೆತ್ತಿ ಆಡುತ್ತಿರಲು
ಆ ಸರ್ಪನ ಕಂಡು ನಾ ಹೆದರಿಕೊಂಡು
ಗುರುಕರುಣವೆಂಬ ಪರುಷವ ತಂದು ಮುಟ್ಟಿಸಲು
ನೋಟ ನಿಂದಿತ್ತು
ಹೆಡೆ ಅಡಗಿತ್ತು
ಹಾವು ಬಯಲಾಯಿತ್ತು
ಆ ಗುರುಕರುಣವೆಂಬ ಪರುಷವೆ ನಿಂದಿತ್ತು
ನಿಂದ ಪರುಷವನೆ ಕೊಂಡು ನಿಜದಲ್ಲಿ ನಿರ್ವಯಲಾಗುವ
ಶರಣರ ಪಾದವ ನಂಬಿ ಕೆಟ್ಟು ಬಟ್ಟಬಯಲಾದೆನಯ್ಯಾ
ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ

೫೬೦
ತನ್ನ ತಾನರಿದಡೆ ತನ್ನರಿವೆ ಗುರು
ತಾನೆ ಲಿಂಗ ತನ್ನ ನಿಷ್ಠೆಯೇ ಜಂಗಮ
ಇಂತೀ ತ್ರಿವಿಧವು ಒಂದಾದಡೆ
ಐಘಟದೂರ ರಾಮೇಶ್ವರಲಿಂಗವು ತಾನೆ

೫೬೧
ತನ್ನ ದೇಹ ತನಗೆ ಹೊರೆಯಾದ ಮತ್ತೆ ತಾ ಹೊರುವುದೇನು
ತಾ ಹೇಳುವ ಅರಿವು ತನಗೆ ಮರವೆಯಾದ ಮತ್ತೆ
ತಾನರಿವುದೇನು
ಇದು ಕಾರಣ ತ್ರಿಪುರಾಂತಕ ಲಿಂಗದಲ್ಲಿ
ಗಾವುದಿ ಮಾಚಯ್ಯ ಹೇಳಿದುದು ದಿಟವೆನ್ನಿರಣ್ಣಾ

೫೬೨
ತನ್ನದಾದಡೇನೋ ಕನ್ನಡಿ
ಅನ್ಯರದಾದಡೇನೋ ಕನ್ನಡಿ
ತನ್ನ ರೂಪ ಕಂಡಡೆ ಸಾಲದೆ
ಸದ್ಗುರು ಆವನಾದಡೇನೋ
ತನ್ನನರುಹಿಸಿದಡೆ ಸಾಲದೆ
ಸಿಮ್ಮಲಿಗೆಯ ಚೆನ್ನರಾಮಾ

೫೬೩
ತನ್ನಾಶ್ರಯದ ರತಿಸುಖವನು ತಾನುಂಬ ಊಟವನು
ಬೇರೆ ಮತ್ತೊಬ್ಬರ ಕೈಯಲ್ಲಿ ಮಾಡಿಸಬಹುದೆ
ತನ್ನ ಲಿಂಗಕ್ಕೆ ಮಾಡುವ ನಿತ್ಯನೇಮವ ತಾ ಮಾಡಬೇಕಲ್ಲದೆ
ಬೇರೆ ಮತ್ತೊಬ್ಬರ ಕೈಯಲ್ಲಿ ಮಾಡಿಸಬಹುದೆ
ಕೆಮ್ಮನೆ ಉಪಚಾರಕ್ಕೆ ಮಾಡುವರಲ್ಲದೆ
ನಿಮ್ಮನೆತ್ತಬಲ್ಲರು ಕೂಡಲಸಂಗಮದೇವಾ

೫೬೪
ತಪವೆಂಬುದು ತಗಹು
ನೇಮವೆಂಬುದು ಬಂಧನ
ಶೀಲವೆಂಬುದು ಸೂತಕ
ಭಾಷೆಯೆಂಬುದು ಪ್ರಾಣಘಾತಕ
ಇಂತೀ ಚತುರ್ವಿಧದೊಳಗಿಲ್ಲ
ಗುಹೇಶ್ವರ
ನಿಮ್ಮ ಶರಣರಗ್ರಗಣ್ಯರು

೫೬೫
ತಮತಮಗೆ ಸಮತೆಯನು ಹೇಳಬಹುದಲ್ಲದೆ
ತಮತಮಗೆ ಸಮತೆಯನು ಆಡಬಹುದಲ್ಲದೆ
ಕನಲಿಕೆಯ ಕಳೆದಿಪ್ಪವರಾರು ಹೇಳಾ
ಒಬ್ಬರೊಬ್ಬರ ಹಳಿಯದಿಯಪ್ಪವರಾರು ಹೇಳಾ
ಮುನಿಸ ಮುಂದಿಟ್ಟಿಪ್ಪರು
ಇದು ಯೋಗಿ ಮಹಾಯೋಗಿಗಳಿಗರಿದಪ್ಪುದು
ನೋಡಾ
ಸಕಳೇಶ್ವರದೇವಾ
ನೀನು ಕರುಣಿಸಿದವರಿಗಲ್ಲದೆಯಿಲ್ಲಾ

೫೬೬
ತಮ್ಮ ತಮ್ಮ ಗಂಡರು ಚೆಲುವರೆಂದು
ಕೊಂಡಾಡುವ ಹೆಣ್ಣುಗಳು ಪುಣ್ಯಜೀವಿಗಳವ್ವಾ
ನಾನೆನ್ನ ನಲ್ಲನೆಂಥಾವನೆಂದರಿಯೆನವ್ವಾ
ಮಹಾಲಿಂಗ ಗಜೇಶ್ವರದೇವನು ನಿರಿಯ ಸೆರಗ ಸಡಲಿಸಲೊಡನೆ
ಆನೇನೆಂದರಿಯೆನವ್ವಾ

೫೬೭
ತಲೆಯಲ್ಲಿ ನಿರಿ ಟೊಂಕದಲ್ಲಿ ಮುಡಿ
ಮೊಳಕಾಲಲ್ಲಿ ಕಿವಿಯೋಲೆಯ ಕಂಡೆ
ಹರವಸದ ಉಡಿಗೆ
ಏಕಾಂತದಲ್ಲಿ ಮುಖವ ಕಂಡು ಕಾಣದೆ
ಚೆನ್ನಮಲ್ಲಿಕಾರ್ಜುನನ ನೆರೆವ ಪರಿಕರ ಹೊಸತು

೫೬೮
ತವನಿಧಿಯ ಬೆಳೆವಂಗ ಕಣಜದ ಹಂಗುಂಟೆ
ವಿರಕ್ತಂಗೆ ಆರೈಕೆಗೊಂಬವರುಂಟೆ
ಕಾಯಕವ ಮಾಡುವ ಭಕ್ತರಿಗೆ ಇನ್ನಾರುವ ಕಾಡಲೇತಕ್ಕೆ
ಆ ಗುಣ ಅಮರೇಶ್ವರಲಿಂಗಕ್ಕೆ ದೂರ

೫೬೯
ತಾ ನಡೆವಡೆ
ನಡೆಗೆಟ್ಟ ನಡೆಯ ನಡೆಯ ಬೇಕು
ತಾ ನುಡಿವಡೆ ನುಡಿಗೆಟ್ಟ
ನುಡಿಯ ನುಡಿಯ ಬೇಕು
ರೂಹಿಲ್ಲದ ಸಂಗವ ಮಾಡಬೇಕು
ಭವವಿಲ್ಲದ ಭಕ್ತಿಯ ಮಾಡಬೇಕು
ತಾನಾವನೆಂದರಿಯದಂತಿಹುದು
ಗುಹೇಶ್ವರ

೫೭೦
ತಾ ಮಾಡಿದ ಹೆಣ್ಣು
ತನ್ನ ತಲೆಯನೇರಿತ್ತು
ತಾ ಮಾಡಿದ ಹೆಣ್ಣು
ತನ್ನ ತೊಡೆಯನೇರಿತ್ತು
ತಾ ಮಾಡಿದ ಹೆಣ್ಣು
ಬ್ರಹ್ಮನ ನಾಲಿಗೆಯನೇರಿತ್ತು
ತಾ ಮಾಡಿದ ಹೆಣ್ಣು
ನಾರಾಯಣನ ಎದೆಯನೇರಿತ್ತು
ಅದು ಕಾರಣ ಹೆಣ್ಣು ಹೆಣ್ಣಲ್ಲ
ಹೆಣ್ಣು ರಾಕ್ಷಸಿಯಲ್ಲ
ಹೆಣ್ಣು ಪ್ರತ್ಯಕ್ಷ ಕಪಿಲಸಿದ್ಧಮಲ್ಲಿಕಾರ್ಜುನ
ನೋಡಾ

೫೭೧
ತಾ ಮಿಥ್ಯನಾದ ಮತ್ತೆ ಜಗವೆಲ್ಲವೂ ತನಗೆ ಮಿಥ್ಯ
ತಾ ತಥ್ಯನಾದ ಮತ್ತೆ ಜಗವೆಲ್ಲವೂ ತನಗೆ ತಥ್ಯ
ಅಂಗೈಯಲ್ಲಿ ಹಿಡಿದು ಕೈದ ನೋಡದೆ
ಅಲಗು ಕೆಟ್ಟಿತ್ತೆಂದು ಹಲಬುವನಂತಾಗದೆ
ತನ್ನ ತಾ ಮರದು ಅನ್ಯರ ದೆಸೆಯಿಂದ ತನ್ನ ಕೀಳುವನಂತಾಗದೆ
ಅರಿ ನಿಜದರಿವ ಮರೆಯದಂತೆ
ಕಾಲಕರ್ಮವಿರಹಿತ ತ್ರಿಪುರಾಂತಕಲಿಂಗದೊಳಗಾದವನ ಇರವು

೫೭೨
ತಾ ವ್ರತಿಯಾಗಿ ಮಕ್ಕಳೆಂದು ಮಾಡದಿರ್ದಡೆ
ಆ ವ್ರತಕ್ಕೆ ತಾನೆ ಹೊರಗು
ತನ್ನಂಗ ಮನ ಭಾವ ಕರಣಂಗಳಲ್ಲಿ ಸಂಗದಲ್ಲಿ ಇದ್ದವರಿಗೆಲ್ಲಕ್ಕೂ
ತನ್ನಂಗದ ವ್ರತವ ಮಾಡಬೇಕು
ಇದು ಸೀಮೆವಂತರ ಯುಕ್ತಿ
ಆಚಾರವೆ ಪ್ರಾಣವಾದ ರಮೇಶ್ವರಲಿಂಗದಾಚಾರದ ಸೊತ್ತು

೫೭೩
ತಾ ಸುಖಿಯಾದಡೆ
ನಡೆಯಲು ಬೇಡ
ತಾ ಸುಖಿಯಾದಡೆ
ನುಡಿಯಲು ಬೇಡ
ತಾನು ಸುಖಿಯಾದಡೆ
ಪೂಜಿಸಲು ಬೇಡ
ಉಣಬೇಡ
ಗುಹೇಶ್ವರ

೫೭೪
ತಾನು ದಂಡುಮಂಡಲಕ್ಕೆ ಹೋದಹೆನೆಂದಡೆ
ನಾನು ಸುಮ್ಮನಿಹೆನ್ನಲದೆ
ತಾನೆನ್ನ ಕೈಯೊಳಗಿದ್ದು
ತಾನೆನ್ನ ಮನದೊಳಗಿದ್ದು
ಎನ್ನ ಕೂಡದಿದ್ದಡೆ ನಾನೆಂತು ಸೈರಿಸುವೆನವ್ವಾ
ನೆನಹೆಂಬ ಕುಂಟಿಣಿ ಚೆನ್ನಮಲ್ಲಿಕಾರ್ಜುನನ
ನೆರಹದಿದ್ದಡೆ ನಾನೇವೆ ಸಖಿಯೆ

೫೭೫
ತಾಯ ಗರ್ಭದ ಶಿಶು ತಾಯ ಕುರುಹನರಿಯದು
ಆ ತಾಯಿ ಶಿಶುವಿನ ಕುರುಹನೆಂದೂ ಅರಿಯಳು
ಮಾಯಾಮೋಹದಲ್ಲಿಪ್ಪ ಭಕ್ತರು ದೇವರನರಿಯರು
ಆ ದೇವರು ಆ ಭಕ್ತರನೆಂದೂ ಅರಿಯನು
ಕಾಣಾ ರಾಮನಾಥ