೫೭೬
ತಾಯ ತೊರೆದು ನಾನೇನು ಮಾಡುವೆ
ತಂದೆಯ ತೊರೆದು ನಾನೇನು ಮಾಡುವೆ
ಎತ್ತ ಮುಂತಾಗಿ ನಡೆದು ನಾನೇನ ಮಾಡುವೆ
ಚೆನ್ನಮಲ್ಲಿಕಾರ್ಜುನ ನೀನೊಲಿಯದನ್ನಕ್ಕರ

೫೭೭
ತಾಯಿ ಬಂಜೆಯಾದಲ್ಲದೆ ಶಿಶು ಗತವಾಗದು
ಬೀಜ ನಷ್ಟವಾದಲ್ಲದೆ ಸಸಿ ಗತವಾಗದು
ನಾಮ ನಷ್ಟವಾದಲ್ಲದೆ ನೇಮ ನಷ್ಟವಾಗದು
ಮೊದಲು ಕೆಟ್ಟಲ್ಲದೆ ಲಾಭದಾಸೆ ಬಿಡದು
ಗುಹೇಶ್ವರಲಿಂಗದ ನಿಜವನೆಯ್ದುವಡೆ
ಪೂಜೆಯ ಫಲ ಮಾದಲ್ಲದೆ ಭವಂ ನಾಸ್ತಿಯಾಗದು

೫೭೮
ತಾಳಮರದ ಕೆಳಗೆ ಒಂದು ಹಾಲ ಹರಿವಿಯಿದ್ದಡೆ
ಅದ ಹಾಲಹರಿವಿಯೆನ್ನರು
ಸುರೆಯ ಹರವಿಯೆಂಬರು
ಈ ಭಾವನಿಂದೆಯ ಮಾಣಿಸಾ
ಕೂಡಲಸಂಗಮದೇವಾ

೫೭೯
ತಾಳಮಾನ ಸರಿಸವನರಿಯೆ
ಓಜೆ ಬಜಾವಣೆಯ ಲೆಕ್ಕವನರಿಯೆ
ಅಮೃತಗಣ ದೇವಗಣವನರಿಯೆ
ಕೂಡಲಸಂಗಮದೇವಾ
ನಿನಗೆ ಕೇಡಿಲ್ಲವಾಗಿ
ಆನು ಒಲಿದಂತೆ ಹಾಡುವೆ

೫೮೦
ತೀವಿ ಕುಳ್ಳಿರ್ದ ಸಭೆ ಈಯ ಬಲ್ಲುದೆ ದಾನವ
ಸಾವರೆ ಸಂಗ್ರಾಮಕ್ಕೆ ಹೋದವರೆಲ್ಲ
ಇರಿಯಬಲ್ಲರೆ ನೂರಕ್ಕೊಬ್ಬ ಸಹಸ್ರಕೊಬ್ಬ
ಹುಣಿಸೆಯ ಹೂವೆಲ್ಲ ಕಾಯಾಗಬಲ್ಲುದೆ
ರಾಮನಾಥ

೫೮೧
ತುಂಬಿ ಬಂದಡೆ ಪರಿಮಳ ಓಡಿತ್ತ ಕಂಡೆ
ಏನು ಸೋಜಿಗ ಹೇಳಾ
ಮನ ಬಂದಡೆ ಬುದ್ಧಿ ಓಡಿತ್ತ ಕಂಡೆ
ದೇವ ಬಂದಡೆ ದೇಗುಲ ಓಡಿತ್ತ ಕಂಡೆ
ಗುಹೇಶ್ವರ

೫೮೨
ತುಂಬಿದುದು ತುಳುಕದು
ನೋಡಾ
ನಂಬಿದುದು ಸಂದೇಹಿಸದು
ನೋಡಾ
ಒಲಿದುದು ಓಸರಿಸದು
ನೋಡಾ
ನೆರೆಯರಿದುದು ಮರೆಯದು
ನೋಡಾ
ಚೆನ್ನಮಲ್ಲಿಕಾರ್ಜುನಯ್ಯಾ
ನೀನೊಲಿದ ಶರಣಂಗೆ ನಿಸ್ಸೀಮಸುಖವಯ್ಯಾ

೫೮೩
ತುರುಬು ಜಡೆ ಬೋಳು ಬಿಡುಗುರುಳು
ಇವೆಲ್ಲವೂ ರುದ್ರನ ಅಡವೆಜ್ಜೆಯ ಕುರುಹು
ಇಂತೀ ಕುರುಹಿನ ಮುದ್ರೆಗಳಲ್ಲಿ ಬಂದು
ತಮ್ಮಡಿಯ ಇರವನರಿಯದೆ
ಬರಿಯ ಬೊಮ್ಮವನಾಡಿ ನುಡಿವರ
ಸರ್ವಾಂಗದ ತೊಡಿಗೆಯ ಬಂಡೆ ಸಿಡಿಹಿಂಗೆ
ಕತ್ತರಿ ತರುಬಿಂಗ ಬೆಳೆದುದಕ್ಕೆ ತೊರೆಗೂರ
ಮತ್ತೆ
ಹರಿವ ನಖಕ್ಕೆ ಕಡಿಚಣ
ಮತ್ತೆ
ಉಸುರಿನ ದೆಸೆಯ ನಾಸಿಕಕ್ಕೆ ಕಸನ ತೆಗೆಯುವುದಕ್ಕೆ ಅಂಗುಲ ಸಂಗಿ
ಇಂತೀ ಕಾಯಕದ ಬೆಂಬಳಿಯಲ್ಲಿ ತಂದನೆನ್ನ ಬಸವಣ್ಣ
ಆತನಂಗದ ದೆಸೆಯಿಂದ ಬಂದೆ ಕನ್ನಡಿವಿಡಿದು
ಆ ಕನ್ನಡಿಯ ದೆಸೆಯಿಂದ ನಿಮ್ಮ ಕಂಗಳಲ್ಲಿ ನೋಡಿ
ನಿಮ್ಮ ಮಲವ ನೀವೇ ಪರಿಹರಿಸಿಕೊಳ್ಳಿ ಎನಗನ್ಯ ಭಿನ್ನವಿಲ್ಲ
ಕಮಳೇಶ್ವರ ಲಿಂಗವು ಕಳುಹಿದ ಮಣಿಹ

೫೮೪
ತೆಂಗಿನೊಳಗಣ ತಿರುಳು ಸೇವಿಸಬರ್ಪುದಲ್ಲದೆ
ಹೊರಗಣ ಪರಟೆ ಸೇವಿಸಲು ಬಾರದು
ಚಾಂಡಾಲಂಗೆ ಜ್ಞಾನವಂಕುರಿಸಿದಡೆ
ಆತನ ಅಂತರಂಗದ ವೃತ್ತಿಗೆ ಪೂಜ್ಯತೆಯಲ್ಲದೆ
ಬಹಿರಂಗದ ತನುವಿಗೆ ಪೂಜ್ಯತೆಯಾಗದು
ಒಳಹೊರಗೆಂಬ ಭೇದವಿಲ್ಲದೆ ಸೇವಿಸಲುಚಿತವಪ್ಪಂತೆ
ಶಿವಕುಲಪ್ರಸೂತಂಗೆ ಶಿವಜ್ಞಾನವಾಗಲು
ಆತನ ತನುವೃತ್ತಿಗಳೆರಡೂ ಸೇವ್ಯವಾಗಿರ್ಪವು
ಇಂತಿದು ಸಾಧಕರ ಸ್ಥಿತಿಯಯ್ಯಾ
ಕೂಡಲಚೆನ್ನಸಂಗಮದೇವಾ

೫೮೫
ತೆಪ್ಪದ ಮೇಲೆ ನಿಂದು
ಒತ್ತುವ ಕ್ರೀಯೇ ಲಿಂಗವಾಗಿ
ಹಿಡಿವ ಕಣೆಯೇ ಅರಿವ ಮುಖವಾಗಿ
ವ್ಯಾಪಕವೆಂಬ ಹೊಳೆ ದಾಂಟುವುದಕ್ಕೆ ಇದೆ ಪಥ
ಸದಾಶಿವಮೂರ್ತಿಲಿಂಗವನರಿವುದಕ್ಕೆ

೫೮೬
ತೆರಣಿಯ ಹುಳು ತನ್ನ ಸ್ನೇಹದಲ್ಲಿ ಮನೆಯ ಮಾಡಿ
ತನ್ನ ನೂಲು ತನ್ನನೆ ಸುತ್ತಿ ಸಾವಂತೆ
ಮನಬಂದುದನು ಬಯಸಿ ಬೇವುತ್ತಿದ್ದೇನಯ್ಯಾ
ಎನ್ನ ಮನದ ದುರಾಶೆಯ ಮಾಣಿಸಿ
ನಿಮ್ಮತ್ತ ತೋರಾ
ಚೆನ್ನಮಲ್ಲಿಕಾರ್ಜುನಾ

೫೮೭
ತೆರೆಯ ಮರೆಯ ಬಹು ರೂಪದಂತೆ
ಸೀರೆಯ ಮರೆಯ ಉಪಸ್ಥಳದಂತೆ
ಆ ಪೂರ್ವ ಕಟ್ಟಿದ ಮರೆಯ ಬಿಡುವನ್ನಕ್ಕ
ಸೈರಿಸಲಾರದವನಂತೆ ಎನ್ನ ತಲ್ಲಣ
ನಿನ್ನಯ ಕಲ್ಲಿನ ಮರೆಯ ನನ್ನಿಯ ರೂಪ ತೋರು
ಎನ್ನಯ ಕಲ್ಲೆದೆಯ ಬಿಡಿಸು ಮನೋವಲ್ಲಭ
ಅಲೇಖನಾದ ಶೂನ್ಯ
ಉರಿಗಲ್ಲಿನ ಖುಲ್ಲತನವ ಬಿಡು
ಬೇಡಿಕೊಂಬೆ ನಿನ್ನನು

೫೮೮
ತೊಗಲ ಸೀರೆಯ ತೆರೆಯ ಹಿಡಿದು
ಬಲು ಎಲುವಿನ ಗಳುವಿನಲ್ಲಿ
ನರವಿನ ಭೀಮಗಟ್ಟಂ ಕಟ್ಟಿ
ತೆರೆ ನಿಂದಿತ್ತು ಜವನಿಕೆಯ ಮರೆಯಲ್ಲಿ
ಬಂದು ನಿಂದು ಜಜ್ಜರೆ ಪುರೆ[ಹರೆ]ಯಾಯಿತ್ತು
ಹೋಯಿತ್ತು ಎಂಬ ಬಹುರೂಪಮಂ ತೊಟ್ಟು
ರೇಕಣ್ಣಪ್ರಿಯ ನಾಗಿನಾಥಾ
ಭಲರೆ ಧರುರೆ ಎನುತಿರ್ದೆನು

೫೮೯
ತೊರೆಯ ಮೀವ ಅಣ್ಣಗಳಿರಾ
ತೊರೆಯ ಮೀವ ಸ್ವಾಮಿಗಳಿರಾ
ತೊರೆಯಿಂ ಭೋ ತೊರೆಯಿಂ ಭೋ
ಪರನಾರಿಯರ ಸಂಗವ ತೊರೆಯಿಂ ಭೋ
ಪರಧನದಾಮಿಷವ ತೊರೆಯಿಂದ ಭೋ
ಇವ ತೊರೆಯದೆ ಹೋಗಿ ತೊರೆಯ ಮಿಂದಡೆ
ಬರುದೊರೆ ಹೋಹುದು
ಕೂಡಲಸಂಗಮದೇವಾ

೫೯೦
ತೊರೆಯ ಹಾವನ್ನಕ್ಕ ಒಂದು ಹರುಗೋಲ ಬೇಕು
ಹರುಗೋಲದೊಳಗಿಹನ್ನಕ್ಕ ಒಂದು ಅಡಿಗಟ್ಟಿಗೆ ಬೇಕು
ತೊರೆ ಬತ್ತಿ ಹರುಗೋಲ ಹಾಕಿ ಅಡಿಗಟ್ಟಿಗೆ ಮುರಿದಲ್ಲಿ
ತ್ರಿವಿಧವಲ್ಲಿ ನಾನಿಲ್ಲಿ ನೀನೆಲ್ಲಿ
ಮನಸಂದಿತ್ತು ಮಾರೇಶ್ವರಾ

೫೯೧
ತೊಳಸಿಯ ಗಿಡುವ ಮೆಲಲಾರದೆ ಕಿವಿಯೊಳಗಿಕ್ಕಿದೆ
ಕಲಸಿದ ನಾಮಕ್ಕೆ ಹಣೆಯ ಕಾಣದೆ ಎದೆಯೊಳಗಿಕ್ಕಿದೆ
ತಾವರೆಯ ಮಣಿಯ ತಾವಡಿಸೂದಕ್ಕೆ
ಠಾವ ಕಾಣದೆ ಡಾವರಿಸುತ್ತಿದ್ದೆ
ಇದಕಿನ್ನಾವುದು ಹದನಯ್ಯಾ
ಎನ್ನ ನಿಮ್ಮ ದಾಸೋಹದ ದಾಸನ ಮಾಡಿಸಯ್ಯಾ
ನಾರಾಯಣಪ್ರಿಯ ರಾಮಾನಾಥಾ

೫೯೨
ದಯವಿಲ್ಲದ ಧರ್ಮವದೇವುದಯ್ಯಾ
ದಯವೇ ಬೇಕು ಸಕಲಪ್ರಾಣಿಗಳೆಲ್ಲರಲ್ಲಿಯು
ದಯವೇ ಧರ್ಮದ ಮೂಲವಯ್ಯಾ
ಕೂಡಲಸಂಗಯ್ಯನಂತಲ್ಲದೊಲ್ಲನಯ್ಯಾ

೫೯೩
ದರಿದ್ರ ಧನಾಢ್ಯಂಗಂಜುವನಲ್ಲದೆ
ದರಿದ್ರಂಗಂಜುವನೆ
ದೊರೆ ಮಹಾದೊರೆಗಂಜುವನಲ್ಲದೆ
ದೊರೆತನಕ್ಕಂಜುವನೆ
ಪರಶಿವಯೋಗಿ ಅಂತರ್ಯಾಮಿಗಂಜುವನಲ್ಲದೆ
ಲೋಕದ ಗುಂಗಿಗಳಿಗಂಜುವನೆ
ಕಪಿಲಸಿದ್ಧಮಲ್ಲಿಕಾರ್ಜುನ

೫೯೪
ದರ್ಪಣದೊಳಗಣ ರೂಹಿಂಗೆ ಆ ದರ್ಪಣವೆ ಉತ್ಪತ್ತಿಸ್ಥಿತಿಯವಲ್ಲದೆ
ಮರ್ತ್ಯಲೋಕದೊಳಗಣಾಕೃತಿಯಲ್ಲಿಲ್ಲವೇಕಯ್ಯ
ಆ ಲೋಕದೊಳಗೆ ಉತ್ಪತಿಸ್ಥಿತಿಲಯವಿದೇನಯ್ಯ ಕರ್ಮಬದ್ಧರು
ಒಂದರ ಪರಿ ಒಂದಕ್ಕಿಲ್ಲ ಕಂಡಿರೆ
ದೃಷ್ಟವಹ ಗುರುಹಸ್ತದೊಳಗಣ ಸದ್ಭಕ್ತಂಗೆ
ಅಲ್ಲಿಯೆ ಉತ್ಪತಿಸ್ಥಿತಿಲಯ
ಇದೆಂತಹ ಕರ್ಮದ ಪರಿಯೋ
ಮತ್ತಾವ ಪರಿಯೂ ಅಲ್ಲ
ಲಿಂಗದ ಪರಿಯ ಮಾಡಿದ ಗುಹೇಶ್ವರ

೫೯೫
ದಳ್ಳುರಿಯಲ್ಲಿಗೆ ಹೋದಡೆ
ಮೆಲ್ಲನೆ ಮುಟ್ಟುವುದೆ ಅಯ್ಯಾ
ಬಲ್ಲವ ಗೆಲ್ಲ ಸೋಲಕ್ಕೆ ಹೋರಿದಡೆ
ಕಲ್ಲುಹೃದಯಿ ಬಲ್ಲನೆ ಬಲ್ಲವನಿರವ
ಇದೆಲ್ಲಕ್ಕೂ ಸಾಧ್ಯವಲ್ಲ
ನಿಃಕಳಂಕ ಮಲ್ಲಿಕಾರ್ಜುನಾ

೫೯೬
ದಿನ ಒಂದರಲ್ಲಿ ವಾರ ಏಳು
ನೋಡಾ
ಆ ಏಳು ವಾರಗಳೆಂಬುವುದು ಕಲ್ಪಿತವಲ್ಲದೆ
ದೃಷ್ಟಿಯನ್ನಿಟ್ಟು ನೋಡಬಾರದು
ನೋಡಾ
ದೇವರೆಂಬುವುದೊಂದು
ನೋಡಾ
ಆ ದೇವರೆಂಬುವುದೊಂದರಲ್ಲಿ
ಬ್ರಹ್ಮ ವಿಷ್ಣು ರುದ್ರ ಈಶ್ವರ ಸದಾಶಿವ ವಿರಾಟ್ಪುರುಷರೆಂಬುವುದು
ನೋಡಯ್ಯಾ
ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ

೫೯೭
ದಿನಚರಿಯೆಂಬ ಪಟ್ಟಣದಲ್ಲಿ
ಕನಕರತಿಯೆಂಬರಸು
ಮನಸಿಜನೆಂಬ ಪ್ರಧಾನ
ಕನಸಕಂಡಡೆ ಅರಿವ ತಮಸೂನು ತಳವಾರ
ಇವರೆಲ್ಲರ ವಂಚಿಸಿ ಅರಸಿನ ಹೆಂಡತಿ
ಹೆಂಡವ ಕುಡಿವವನ ಅಂಗದಲ್ಲಿ ಸಿಕ್ಕಿದಳು
ಪ್ರಧಾನ ಕಂಡ
ಅರಸು ತಳವಾರ ಕಂಡುದಿಲ್ಲ
ಮನಸಿಜ ಕಂಡು ಬದುಕಿದೆ ಹೋಗೆಂದ
ಅರಸಿಗೆ ಕೂಪನಾದ
ಮಾನಹಾನಿಗೆ ಕೇಡಿಲ್ಲದಂತೆ
ಇಂತೀ ಭೇದವನರಿ
ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ

೫೯೮
ದೀಪದ ಕೊನೆಯ ಮೊನೆಯ ಮೇಲಿದ್ದುದು
ತಮವೋ ಬೆಳಗೋ
ಮನದ ಕೊನೆಯ ಮೇಲಿದ್ದುದು
ಅರಿವೊ ಮರವೆಯೋ
ಬೀಜದ ಕೊನೆಯ ಮೊನೆಯ ಮೇಲಿದ್ದುದು
ಮುಂದಕ್ಕದು ಬೀಜವೋ ಸಂದೇಹವೋ
ಅರಿವುದಕ್ಕೆ ತೆರಹಿಲ್ಲ
ಮರೆವುದಕ್ಕೆ ಒಡಲಿಲ್ಲ
ಅದರ ಹೂ ಮುಡಿಯಲ್ಲಿದ್ದು ಬಿಡುಗಡೆಯಾದೆ
ನಿಃಕಳಂಕ ಮಲ್ಲಿಕಾರ್ಜುನಾ

೫೯೯
ದೀಪದಂತಿಹ ಜನ್ಮ
ಬಂದುದು ತಿಳಿಯಬಾರದು
ಹೋಹುದು ತಿಳಿಯಬಾರದು
ಮೇಘದಂತಿಹ ಜನ್ಮ
ಬಂದುದು ತಿಳಿಯಬಾರದು
ಹೋಹುದು ತಿಳಿಯಬಾರದು
ಶಿಶುವಿನಂತಹ ಜನ್ಮ
ಬದುಕುವುದು ತಿಳಿಯದು
ಬದುಕಿ ಬಾಳೀತೆಂಬುದು ತಿಳಿಯಬಾರದು
ನೋಡಾ
ಕಪಿಲಸಿದ್ಧಮಲ್ಲಿಕಾರ್ಜುನ

೬೦೦
ದೇವನೊಬ್ಬ ನಾಮ ಹಲವು
ಪರಮ ಪತಿವ್ರತೆಗೆ ಗಂಡನೊಬ್ಬ
ಮತ್ತೊಂದಕ್ಕೆರಗಿದಡೆ ಕಿವಿಮೂಗ ಕೊಯ್ವನು
ಹಲವು ದೈವದ ಎಂಜಲ ತಿಂಬವರನೇನೆಂಬೆ
ಕೂಡಲಸಂಗಮದೇವಾ