೬೦೧
ದೇವರೆದ್ದರಾವು ಏಳುವೆವಯ್ಯಾ
ದೇವ ಬಿದ್ದರಾವು ಬೀಳುವೆವಯ್ಯಾ
ದೇವ ಸತ್ತರಾವು ಸಾವೆವಯ್ಯಾ
ದೇವ ಬದುಕಿದರಾವು ಬದುಕುವೆವಯ್ಯಾ
ನಾ ಸತ್ತು ದೇವ ಹಿಂದುಳಿದಡೆ
ಎನ್ನಿಂದ ಬಿಟ್ಟು ವ್ರತಗೇಡಿಗಳಾರು
ಹೇಳಾ ಸಕಳೇಶ್ವರದೇವಾ

೬೦೨
ದೇವಲೋಕ ಮರ್ತ್ಯಲೋಕವೆಂಬುದು ಬೇರೆ ಮತ್ತುಂಟೆ
ಇಹ ಲೋಕದೊಳಗೆ ಮತ್ತೆ ಅನಂತಲೋಕ
ಶಿವಲೋಕ ಶಿವಾಚಾರವಯ್ಯಾ
ಶಿವಭಕ್ತನಿದ್ದ ಠಾವೆ ದೇವಲೋಕ
ಭಕ್ತನಂಗಳವೆ ವಾರಣಾಸಿ
ಕಾಯವೆ ಕೈಲಾಸ
ಇದು ಸತ್ಯ
ಕೂಡಲಸಂಗಮದೇವಾ

೬೦೩
ದೇಶ ಗುರಿಯಾಗಿ
ಲಯವಾಗಿ ಹೋದವರ ಕಂಡೆ
ತಮಂಧ ಗುರಿಯಾಗಿ
ಲಯವಾಗಿ ಹೋದವರ ಕಂಡೆ
ಕಾಮ ಗುರಿಯಾಗಿ
ಬೆಂದು ಹೋದವರ ಕಂಡೆ
ನೀ ಗುರಿಯಾಗಿ ಹೋದವರನಾರನೂ ಕಾಣೆ
ಗುಹೇಶ್ವರ

೬೦೪
ದೇಶ ದೇಶಾಂತರವ ತಿರುಗಿ ತೊಳಲಿ ಬಳಲಿ
ಕೆಲರ ಹಳಿದು ಕೆಲರ ಹೊಗಳಿ
ವೃಥಾ ಹೋಯಿತ್ತೆನ್ನ ಸಂಸಾರ
ಗಿರಿಯ ಶಿಖರದ ಮೇಲೆ ಲಿಂಗಧ್ಯಾನದಲ್ಲಿ
ಮೌನಿಯಾಗಿರಿಸೆನ್ನ ಸಕಳೇಶ್ವರಯ್ಯಾ

೬೦೫
ದೇಹದೊಳಗೆ ದೇವಾಲಯವಿದ್ದು
ಮತ್ತೆ ಬೇರೆ ದೇವಾಲಯವೇಕೆ
ಎರಡಕ್ಕೆ ಹೇಳಲ್ಲಿಯ್ಯ
ಗುಹೇಶ್ವರ
ನೀನು ಕಲ್ಲಾದರೆ ನಾನೇನಪ್ಪೆನು

೬೦೬
ದೊಡ್ಡ ದೊಡ್ಡ ಶೆಟ್ಟಗಳ ಕಂಡು
ಅಡ್ಡಗಟ್ಟಿ ಹೋಗಿ ಶರಣಾರ್ಥಿ ಎಂಬ
ಎಡ್ಡುಗಳ್ಳತನಕ್ಕೆ ತಮ್ಮ ಮಠಕ್ಕೆ ಬನ್ನಿ ಹಿರಿಯರೇ ಎಂಬರು
ಹೋಗಿ ಶರಣಾರ್ಥಿ ಭಕ್ತನೆಂದೊಡೆ ಕೇಳದ ಹಾಗೆ
ಅಡ್ಡ ಮೋರೆಯನಿಕ್ಕಿಕೊಂಡು ಸುಮ್ಮನೆ ಹೋಗುವ
ಹೆಡ್ಡ ಮೂಳರಿಗೆ ದುಡ್ಡೇ ಪ್ರಾಣವಾಯಿತ್ತು
ದುಡ್ಡಿಸ್ತರ ಕುರುಹನರಿಯದೆ ಮೊಳಪಾದದ ಮೇಲೆ
ಹೊಡಹೊಡಕೊಂಡು ನಗುತಿರ್ದಾತ
ನಮ್ಮ ಅಂಬಿಗರ ಚವುಡಯ್ಯ

೬೦೭
ಧರಣಿಯ ಮೇಲೊಂದು ಹಿರಿದಪ್ಪ ಅಂಗಡಿಯಿಕ್ಕಿ ಹರದ ಕುಳ್ಳಿರ್ದ
ನಮ್ಮ ಮಹಾದೇವಸೆಟ್ಟಿ
ಒಮ್ಮನವಾದಡೆ ಒಡನೆ ನುಡಿವನು
ಇಮ್ಮನವಾದಡೆ ನುಡಿಯನು
ಕಾಣಿಯ ಸೋಲ
ಅರ್ಧಗಾಣಿಯ ಗೆಲ್ಲ
ಜಾಣ ನೋಡವ್ವಾ
ನಮ್ಮ ಕೂಡಲಸಂಗಮದೇವ

೬೦೮
ಧರೆ ಇಲ್ಲದೆ ಬೆಳೆಯಬಹುದೆ ಧಾನ್ಯವ
ಮಳೆ ಇಲ್ಲದೆ ನೋಡಬಹುದೆ ಬೆಳೆಗಳ
ಒಂದು ವಸ್ತುವಿಗಾದಡೂ ದ್ವಂದ್ವವೆ ಬೇಕು
ನಮ್ಮ ಕಪಿಲಸಿದ್ಧಮಲ್ಲನ ನೋಡುವಡೆ
ಲಿಂಗಪ್ರಜೆ ಜಂಗಮದಾಸೋಹವೆ ಬೇಕು

೬೦೯
ಧರೆಗೆ ಸೂತಕವುಂಟೆ
ವಾರಿಧಿಗೆ ಹೊಲೆಯುಂಟೆ
ಉರಿವ ಅನಲಂಗೆ ಜಾತಿಭೇದವುಂಟೆ
ಹರಿದು ಚರಿಸುವ ಅನಿಲಂಗೆ ಸೀಮೆಯುಂಟೆ
ಆಕಾಶಕ್ಕೆ ದಾರಿ ಮೇರೆಯುಂಟೆ
ಇನಿತರಿಂದೊದಗಿದ ಘಟವನು ಆರು ಹೊಲ್ಲೆಂಬರು
ಸಾರವು ಕರ್ಮ ಕೂಡಲಚೆನ್ನಸಂಗಮದೇವಾ
ನಿಮ್ಮ ಶರಣಂಗೆ

೬೧೦
ಧರೆಯ ಮೇಗಣ ಹುಲ್ಲೆ
ಚಂದ್ರಮನೊಳಗಣ ಎರಳೆ
ಕೂರ್ತಡೆ ಫಲವೇನೋ ಕೂಟವಿಲ್ಲದನ್ನಕ್ಕ
ಇಂಬನರಿಯದ ಠಾವಿನಲ್ಲಿ ಕಣ್ಬೇಟವ ಮಾಡಿದಡೆ
ತುಂಬಿದ ತೊರೆಯ ನಡುವೆ ಮಾಮರಕಾತಂತೆ
ಚನ್ನಮಲ್ಲಿಕಾರ್ಜುನದೇವಾ
ದೂರದ ಸ್ನೇಹವ ಮಾಡಲು
ಬಾರದ ಭವಕ್ಕೆ ಬಂದೆ

೬೧೧
ಧರೆಯ ಮೇಲೆ ಬಿದ್ದ ಬೀಜ
ಧರೆಯಲ್ಲಿಯೆ ಅಳಿದು ಆಕಾಶದಲ್ಲಿ ಫಲವಾಯಿತ್ತು
ಆ ಫಲವ ಬಯಲ ಕಣದಲ್ಲಿ ಒಕ್ಕಿ
ಮನದ ಹಗಹದಲ್ಲಿ ತುಂಬಿ
ಬಾಯ ಹಗಹದಲ್ಲಿ ತೆಗೆದು
ಕಣ್ಣಿನ ಕೊಳಗದಲ್ಲಿ ಅಳೆವುತ್ತಿರಲಾಗಿ
ಖಂಡುಗವೆಂಬುದಕ್ಕೆ ಮೊದಲೆ ಕೊರಳಡಗಿತ್ತು
ಕುಂಭೇಶ್ವರಲಿಂಗದಲ್ಲಿದ್ದ ಜಗನ್ನಾಥನರಿಕೆಯಾಗಿ

೬೧೨
ಧರೆಯ ಮೇಲೊಂದು ಪಿರಿದಪ್ಪ ಸಂತೆಯ ನೆರವಿಗೆ ಬಂದವರನೇನೆಂಬೆನು
ಪರಿಪರಿಯ ಭಂಡದ ವ್ಯವಹಾರದೊಳಗೆ
ಕೊಡಲಿಲ್ಲ ಕೊಳಲಿಲ್ಲ
ವೃಥಾ ವಿಳಾಸವಿದೇನೋ
ಅರೆಮರುಳೆಂಬ ಶಿವನು
ನೆರೆಮರುಳೆಂಬ ಜಗವ ಹುಟ್ಟಿಸಿದ ಪರಿಯ ಕಂಡು ಬೆರಗಾದೆ
ಗೊಹೇಶ್ವರ

೬೧೩
ಧರೆಯಗಲದ ಹುಲ್ಲೆ ಹರಿದು ಮೇಯಿತ್ತು ಕಂಡೆ
ಬಲೆಯ ಬೀಸುವ ಗಂಡರಾರೂ ಇಲ್ಲ
ಹರಿದು ಹಿಡಿದಹೆನೆಂದರೆ ತಲೆ ಕಾಣ ಬರುತ್ತದೆ
ಶಿರವ ಹಿಡಿದಹೆನೆಂಬವರಿನ್ನಾರೂ ಇಲ್ಲ
ಹರಿದಾಡುವ ಹುಲ್ಲೆಯ ಕಂಡು ಹಲವು ಬೆಳ್ಳಾರವ ಬಿಟ್ಟು
ಬೇಂಟೆಕಾರ ಬಲೆಯ ಬೀಸಿದಡೆ ಹುಲ್ಲೆಯಂಜಿ ಹೋಯಿತ್ತು
ಮರುಳುದಲೆಯಲ್ಲಿ ಹುಲ್ಲೆಯನೆಸೆಯಬೇಕೆಂದು
ಸರಳ ಬಿಟ್ಟು ಬಾಣವನೊಂದು ಕೈಯಲ್ಲಿ ಹಿಡಿದು
ಹಳ್ಳಕೊಳ್ಳವ ದಾಂಟಿ ಘಟ್ಟ ಬೆಟ್ಟವ ಕಳಿದು
ಅತ್ತ ಬಯಲ ಮರನ ತಾ ಮರೆಗೊಂಡಿತ್ತು
ಹತ್ತೆ ಸಾರಿದ ಮೃಗವ ತಾನೆಚ್ಚಡೆ ನಾರಿಹರಿದು
ಬಿಲ್ಲು ಮುರಿದು ಹುಲ್ಲೆ ಸತ್ತಿತ್ತು
ಅದ ಕಿಚ್ಚಿಲ್ಲದ ನಾಡಿಗೊಯ್ದು ಸುಟ್ಟು ಬಾಣಸವ ಮಾಡಲು
ಸತ್ತ ಹುಲ್ಲೆ ಕರಗಿ ಸಬ ಉಳಿಯಿತ್ತು ನಿಶ್ಚಿಂತವಾಯಿತ್ತು
ಗುಹೇಶ್ವರ ನಿಮ್ಮ ಶರಣ ಕಟ್ಟಿದಿರ ಬಾಣಸದ ಮನೆಗೆ ಬಂದನು

೬೧೪
ಧೃತಿಗೆಟ್ಟು ಅನ್ಯರ ಬೇಡದಂತೆ
ಮತಿಗೆಟ್ಟು ಪರರುವ ಹೊಗಳದಂತೆ
ಪರಸತಿಯರ ರತಿಗೆ ಮನ ಹಾರದಂತೆ
ಶಿವಪಥವೊಲ್ಲದವರೊಡನಾಡದಂತೆ
ಅನ್ಯಜಾತಿಯ ಸಂಗವ ಮಾಡದಂತೆ
ಎನ್ನ ಪ್ರತಿಪಾಲಿಸು ಕೂಡಲಸಂಗಮದೇವಾ

೬೧೫
ನಚ್ಚುಗೆ ಮನ ನಿಮ್ಮಲ್ಲಿ
ಮಚ್ಚುಗೆ ಮನ ನಿಮ್ಮಲ್ಲಿ
ಸಲುಗುಗೆ ಮನ ನಿಮ್ಮಲ್ಲಿ
ಸೋಲುಗೆ ಮನ ನಿಮ್ಮಲ್ಲಿ
ಅಳಲುಗೆ ಮನ ನಿಮ್ಮಲ್ಲಿ
ಬಳಲುಗೆ ಮನ ನಿಮ್ಮಲ್ಲಿ
ಕರಗುಗೆ ಮನ ನಿಮ್ಮಲ್ಲಿ
ಕೊರಗುಗೆ ಮನ ನಿಮ್ಮಲ್ಲಿ
ಎನ್ನ ಪಂಚೇಂದ್ರಿಯಂಗಳು
ಕಬ್ಬುನ ಉಂಡ ನೀರಿನಂತೆ ನಿಮ್ಮಲ್ಲಿ
ಬೆರಸುಗೆ ಚೆನ್ನಮಲ್ಲಿಕಾರ್ಜುನಯ್ಯಾ

೬೧೬
ನಡೆ ನೋಟ ಸೊಲ್ಲೆಡೆಯಲ್ಲಿ ಒಂದು ಕಿಚ್ಚು
ಮಡದಿ ಪುರುಷರೆಡೆಯಲ್ಲಿ ಒಂದು ಕಿಚ್ಚು
ತಡದುಂಬೆಡೆಯಲ್ಲಿ ಒಂದು ಕಿಚ್ಚು
ಪಡೆದರ್ಥ ಕೆಟ್ಟೆಡೆಯಲ್ಲಿ ಒಂದು ಕಿಚ್ಚು
ಕೂಡಿದ ವ್ಯಾಮೋಹದೆಡೆಯಲ್ಲಿ ಒಂದು ಕಿಚ್ಚು
ಇಂತೀ ಐದು ಕಿಚ್ಚನಿಕ್ಕಿ
ಬಾಯಲ್ಲಿ ಮಣ್ಣಹೊಯಿದು ಕೆಡಿಸಿದೆ ರಾಮನಾಥ

೬೧೭
ನಡೆದಡೆ
ನಡೆಗೆಟ್ಟ ನಡೆಯ ನಡೆವುದಯ್ಯ
ನುಡಿದಡೆ
ನುಡಿಗೆಟ್ಟ ನುಡಿಯ ನುಡಿವುದಯ್ಯ
ಒಡಲ ಹಿಡಿದಡೆ
ಹಿಡಿಯದೆ ಹಿಡಿವುದಯ್ಯ
ಕೂಡುವಡೆ
ಕೇಡಿಲ್ಲದೆ ಕೂಟವ ಕೂಡುವುದಯ್ಯ
ಗೊಹೇಶ್ವರ ನಿಮ್ಮಲ್ಲಿ ನಿಲುವುದಯ್ಯ

೬೧೮
ನಡೆದು ನಡೆದು ಕಡೆಯ ಕಂಡವರು
ನುಡಿದು ನುಡಿದು ಹೇಳುತ್ತಿಹರೆ
ನುಡಿದು ನುಡಿದು ಹೇಳುವನ್ನಕ್ಕರ
ನಡೆದುದೆಲ್ಲಾ ಹುಸಿಯೆಂಬೆನು
ಮಾತಿನ ಮಥನದಿಂದಾದ ಅರಿವು
ಕರಣಮಥನದಿಂದಾದುದಲ್ಲದೆ
ಅನುಪಮ ಸ್ವರಭೇದವಾದ ಪರಿ ಎಂತು
ಹೇಳಾ
ಇದಿರ ಗೆಲಬೇಕೆಂದು ನುಡಿದುಕೊಂಡಡೇನು
ಮನಕ್ಕೆ ಮನವೆ ಸಾಕ್ಷಿಯಾಗಿ ನಿಃಪತಿಯಲ್ಲ
ನೋಡಾ
ಎನ್ನ ಅಜಗಣ್ಣತಂದೆ ಶಬುದಕ್ಕೆ ಹೇಸಿ ಮುಗುದನಾದನು

೬೧೯
ನದಿಯ ನೀರು ಹೋದುವಯ್ಯಾ ಸಮುದ್ರಕ್ಕೆ
ಸಮುದ್ರದ ನೀರು ಬಾರವಯ್ಯಾ ನದಿಗೆ
ನಾನು ಹೋದೆನಯ್ಯಾ ಲಿಂಗದ ಕಡೆಗೆ
ಲಿಂಗ ಬಾರದು ನೋಡಯ್ಯಾ ನನ್ನ ಕಡೆಗೆ
ಮಗ ಮುನಿದಡೆ ತಂದೆ ಮುನಿಯನು
ನಾ ಮುನಿದಡೆ ನೀ ಮುನಿಯೆ ನೋಡಯ್ಯಾ
ಕಪಿಲಸಿದ್ಧಮಲ್ಲಿನಾಥಾ

೬೨೦
ನರವಿಂಧ್ಯದೊಳಗೆನ್ನ ಹುಲುಗಿಳಿಯ ಮಾಡಿ ಸಲಹುತ್ತ
ಶಿವ ಶಿವಾ ಎಂದೋದಿಸಯ್ಯಾ
ಭಕ್ತಿಯೆಂಬ ಪಂಜರದೊಳಗಿಕ್ಕಿ ಸಲಹು
ಕೂಡಲಸಂಗಮದೇವಾ

೬೨೧
ನಲ್ಲ ಮುಳಿದು ಹೋಗುತ್ತ
ಎನ್ನ ಮನವ ನಂಬದೆ ಮೈಗಾಹಾಗಿ ಇರಿಸಿದನು
ಉರಿಲಿಂಗದೇವನು ತಾ ಬಂದು ನೆರೆವನ್ನಬರ

೬೨೨
ನಲ್ಲನ ಕೂಡುವ ಭರದಲ್ಲಿ
ಎನ್ನುವನಿದಿರುವನೇನೆಂದರಿಯೆನು
ನಲ್ಲನ ಕೂಡುವಾಗಳೂ
ಎನ್ನುವ ನಲ್ಲನನೇನೆಂದರಿಯೆನು
ಉರಿಲಿಂಗದೇವನ ಕೂಡಿದ ಬಳಿಕ
ನಾನೋ ತಾನೊ ಏನೆಂದರಿಯೆನು

೬೨೩
ನಲ್ಲನ ಕೂಡವ ಸುಖಭೋಗದ್ರವ್ಯವನೆಲ್ಲಿಂದಾ ತಪ್ಪೆನು
ಹೇಳಾ ಕೆಳದಿ
ನಲ್ಲನ ಬೇಡಲು ನಾಚಿಕೆ ಎನಗೆ
ಮತ್ತೆಲ್ಲಿಯು ನಿಲ್ಲೆನು
ಕೂಡವ ಶಕ್ತಿಯ ತಾನರಿದಿಹನು
ಕೇಳಾ ಕೆಳದಿ
ಹೆಣ್ಣು ಹೆಣ್ಣ ಕೂಡುವ ಸುಖವ ಮಣ್ಣಿನಲ್ಲಿ ನೆರಹುವೆನು
ಉರಿಲಿಂಗದೇವನ ಕೂಡುವೆನು

೬೨೪
ನಲ್ಲನ ಕೂಡುವನ್ನಕ್ಕ ಸುಖದ ಸುಗ್ಗಿಯನೇನೆಂದರಿಯೆ
ಕೇಳಾ ಕೆಳದಿ
ಸುಖದ ಸವಿಗೆ ಸ್ರವಿಸಿ ಕೂಡಿದೆ ನೋಡವ್ವ
ತವಕಕ್ಕೆ ತವಕ ಮಿಗೆ ಮೇಲುವರಿದು ಕೂಡಿದಂತೆ
ಕೂಡುವೆನುರಿಲಿಂಗದೇವನ

೬೨೫
ನಲ್ಲನೊಲ್ಲನೆಂದು ಮುನಿದು ನಾನಡಗಲು
ಅಡಗುವ ಎಡೆಯೆಲ್ಲಾ ತಾನೆ
ನೋಡೆಲಗವ್ವಾ
ನಲ್ಲ ನೀನಿಲ್ಲದೆಡೆಯಿಲ್ಲ
ಅಡಗಲಿಕಿಂಬಿಲ್ಲಾಗಿ ಮುನಿದು ನಾನೇಗುವೆನು
ಶರಣುಗತಿವೋಗುವೆನು ಉರಿಲಿಂಗದೇವನ