೬೨೬
ನಾ ದೇವನಲ್ಲದೆ ನೀ ದೇವನೇ
ನೀ ದೇವನಾದರೆ ಎನ್ನನೇಕೆ ಸಲಹೆ
ಆರೈದು ಒಂದು ಕುಡಿತೆ ಉದಕವನೆರೆವೆ
ಹಸಿದಾಗ ಒಂದು ತುತ್ತು ಓಗರವನಿಕ್ಕುವೆ
ನಾ ದೇವ ಕಾಣಾ
ಗುಹೇಶ್ವರ

೬೨೭
ನಾ ನಿನ್ನನರಿವಲ್ಲಿ
ನೀನೆನ್ನ ಕೈಯಲ್ಲಿ ಅರಿಯಿಸಿಕೊಂಬಲ್ಲಿ
ಅದೇನು ಭೇದ
ನಾನೆಂದಡೆ ನಿನ್ನ ಸುತ್ತಿದ ಮಾಯೆ
ನೀನೆಂದಡೆ ನನ್ನ ಸುತ್ತಿದ ಮಾಯೆ
ನಾ ನೀನೆಂಬಲ್ಲಿ ಉಳಿಯಿತ್ತು
ಅರ್ಕೇಶ್ವರಲಿಂಗನ ಅರಿಕೆ

೬೨೮
ನಾ ನಿಮ್ಮ ನೆನೆವನು ನೀವೆನ್ನನರಿಯಿರಿ
ನಾ ನಿಮ್ಮನೋಲೈಸುವೆನು ನೀವೆನ್ನ ಕಾಣಿರಿ
ನಾನೆಂತು ಬದುಕುವೆನೆಂತು ಜೀವಿಸುವೆನಯ್ಯಾ
ಕೂಡಲಸಂಗಮದೇವಾ
ಎನಗೆ ನೀವೆ ಪ್ರಾಣ ಗತಿ ಮತಿ ನೋಡಯ್ಯಾ

೬೨೯
ನಾ ಬಂದೆ ಹರಿಭಕ್ತನಾಗಿ
ಬಾಹಾಗ ನಾ ದಾಸನಾಗಿ
ಒಂಬತ್ತು ಜೂಳಿಯ ತಣ್ಣೀರ ಕಣಿತೆಯ ಹೊತ್ತು
ತಿತ್ತಿಗ ನೀರ ಕಾಣೆ
ಲೆಕ್ಕವಿಲ್ಲದ ನಾಮವನಿಕ್ಕಿದೆ
ಸುತ್ತಿ ಸುತ್ತಿ ಬಳಸಿದೆ
ಹೀಲಿಯ ಗರಿಯ ಹೇಕಣ್ಣ
ಪಚ್ಚೆಯ ನಾಮವ ದೃಷ್ಟಿಯ ಮಧ್ಯದಲ್ಲಿ ಇಕ್ಕಿ
ಮತ್ತೆ ಅದರ ನಡುವೆ ನಿಶ್ಚಯ ಬಿಳಿಯ ನಾಮವನಿಕ್ಕಿ
ಹೊತ್ತ ದಾಸಿಕೆ ಹುಸಿಯಾಯಿತ್ತು
ದಾಸೋಹವೆಂಬುದನರಿಯದೆ ಎನ್ನ ವೇಷ ಹುಸಿಯಾಯಿತ್ತು
ನಾರಾಯಣಪ್ರಿಯ ರಾಮನಾಥಾ

೬೩೦
ನಾ ಮಾರಬಂದ ಸುಧೆಯ ಕೊಂಬವರಾರೂ ಇಲ್ಲ
ಹೊರಗಣ ಭಾಜನಕ್ಕೆ ಒಳಗಣ ಇಂದ್ರಿಯಕ್ಕೆ
ಉಂಡು ದಣಿದು ಕಂಡು ದಣಿದು ಸಂದೇಹವ ಬಿಟ್ಟು ದಣಿದು
ಕಂಡುದ ಕಾಣದೆ ಸಂದೇಹದಲ್ಲಿ ಮರೆಯದೆ
ಆನಂದವೆಂಬುದ ಆಲಿಂಗನವ ಮಾಡಿ
ಆ ಕಂಗಳಂ ಮುಚ್ಚಿ ಮತ್ತಮಾ ಕಂಗಳಂ ತೆರೆದು ನೋಡಲಾಗಿ
ಧರ್ಮೇಶ್ವರಲಿಂಗವು ಕಾಣಬಂದಿತ್ತು

೬೩೧
ನಾಚಿ ಮಾದುದು
ಮಾದುದಲ್ಲ
ನಾಚದೆ ಮಾದುದು
ಮಾದುದಲ್ಲ
ಹೇಸಿ ಮಾದುದು
ಮಾದುದಲ್ಲ
ಹೇಸದೆ ಮಾದುದು
ಮಾದುದಲ್ಲ
ಅಲಸಿ ಮಾದುದು
ಮಾದುದಲ್ಲ
ನಾಚದೆ ಹೇಸದೆ ಅಲಸದೆ
ಮಾದಡೆ ಮಾದುದು
ಗುಹೇಶ್ವರ

೬೩೨
ನಾಡೆಲ್ಲರೂ ಮುಟ್ಟಿ ಪೂಜಿಸುವುದು ಸಿರಿದೇವಿ
ಸತ್ಯರೆಲ್ಲರೂ ಮುಟ್ಟಿ ಪೂಜಿಸುವುದು ಮೂದೇವಿ
ನಾ ಮೊರದಲ್ಲಿ ಹೊತ್ತಾಡುವುದು ಉರಿಮಾರಿ
ಸಿರಿ ಮೂದೇವಿ ಉರಿ ಮೊರದ ಗೋಟಿಗೊಳಗಾಯಿತ್ತು
ಡಕ್ಕೆಯ ದನಿಗೆ ಮುನ್ನವೆ ಸಿಕ್ಕದಿರು
ಕಾಲಾಂತಕ ಭೀಮೇಶ್ವರಲಿಂಗವನರಿಯಬಲ್ಲಡೆ

೬೩೩
ನಾಣ ಮರೆಯ ನಾಚಿಕೆ ಒಂದು ನೂಲ ಮರೆಯಲಡಗಿತ್ತು
ಬಲ್ಲೆನೆಂಬ ಅರುಹಿರಿಯರೆಲ್ಲರು ಅಲ್ಲಿಯೇ ಮರುಳಾದರು
ನೂಲಮಾರಿ ಹತ್ತಿಯ ಬಿಲಿಯ ಹೋದರೆ
ಅದು ಅತ್ತಲೆ ಹೋಯಿತ್ತು
ಗುಹೇಶ್ವರ

೬೩೪
ನಾಣ ಮರೆಯ ನೂಲು ಸಡಿಲಲು
ನಾಚುವರು ನೋಡಾ ಗಂಡು ಹೆಣ್ಣೆಂಬ ಜಾತಿಗಳು
ಪ್ರಾಣದೊಡೆಯ ಜಗದೊಳಗೆ ಮುಳುಗಲು ತೆರಹಿಲ್ಲದಿರಲು
ದೇವರ ಮುಂದೆ ನಾಚಲೆಡೆಯುಂಟೆ
ಚೆನ್ನಮಲ್ಲಿಕಾರ್ಜುನ ಜಗವೆಲ್ಲ ಕಣ್ಣಾಗಿ ನೋಡುತ್ತಿರಲು
ಮುಚ್ಚಿ ಮರಸುವ ಠವಾವುದು
ಹೇಳಯ್ಯಾ

೬೩೫
ನಾದ ಮುನ್ನವೋ
ಬಿಂದು ಮುನ್ನವೋ
ಜೀವ ಮುನ್ನವೋ
ಕಾಯ ಮುನ್ನವೋ
ಜೀವಕಾಯದ ಕುಳಸ್ಥಳಂಗಳ ಬಲ್ಲವರು
ನೀವು ಹೇಳಿರೇ
ಗುಹೇಶ್ವರ
ನೀನು ಮುನ್ನವೋ
ನಾನು ಮುನ್ನವೋ ಬಲ್ಲವರು
ನೀವು ಹೇಳಿರೇ

೬೩೬
ನಾದದ ಬಲದಿಂದ ವೇದಂಗಳಾದವಲ್ಲದೆ
ವೇದ ಸ್ವಯಂಭುವಲ್ಲ
ಮಾತಿನ ಬಲದಿಂದ ಶಾಸ್ತ್ರಂಗಳಾದವಲ್ಲದೆ
ಶಾಸ್ತ್ರ ಸ್ವಯಂಭುವಲ್ಲ
ನಿಲ್ಲು
ಪಾಷಾಣದ ಬಲದಿಂದ ಸಮಯಂಗಳಾದವಲ್ಲದೆ
ಸಮಯ ಸ್ವಯಂಭುವಲ್ಲ
ನಿಲ್ಲು
ಇಂತೀ ಮಾತಿನ ಬಣಬೆಯ ಮುಂದಿಟ್ಟುಕೊಂಡು
ಆತನ ಕಂಡೆಹೆನೆಂದಡೆ
ಆತನತ್ಯತಿಷ್ಪದ್ದಶಾಂಗುಲ
ಆತನೆಂತು ಸಿಲುಕುವನೆಂದಾತನಂಬಿಗ ಚವುಡಯ್ಯ

೬೩೭
ನಾದಪ್ರಿಯ ಶಿವನೆಂಬರು
ನಾದಪ್ರಿಯ ಶಿವನಲ್ಲಯ್ಯಾ
ವೇದಪ್ರಿಯ ಶಿವನೆಂಬರು
ವೇದಪ್ರಿಯ ಶಿವನಲ್ಲಯ್ಯಾ
ನಾದವ ನುಡಿಸಿದ ರಾವಳಂಗೆ ಅರೆ ಆಯುಷ್ಯವಾಯಿತ್ತು
ವೇದವಮಾಡಿದ ಬ್ರಹ್ಮನ ಶಿರ ಹೋಯಿತ್ತು
ನಾದಪ್ರಿಯನೂ ಅಲ್ಲ
ವೇದಪ್ರಿಯನೂ ಅಲ್ಲ
ಭಕ್ತಿಪ್ರಿಯ ನಮ್ಮ ಕೂಡಲಸಂಗಮದೇವ

೬೩೮
ನಾನಾ ಜನ್ಮಂಗಳಲ್ಲಿ ಬಂದಡೂ
ನಾನಾ ಯುಕ್ತಿಯಲ್ಲಿ ನುಡಿದಡೂ
ನಾನಾ ಲಕ್ಷಣಂಗಳಲ್ಲಿ
ಶ್ರುತ ದೃಷ್ಟ ಆನುಮಾನಂಗಳ ಲಕ್ಷಿಸಿ ನುಡಿವಲ್ಲಿ
ಏನನಹುದು ಏನನಲ್ಲಾಯೆಂಬ ಠಾವನರಿಯಬೇಕು
ಮಾತ ಬಲ್ಲೆನೆಂದು ನುಡಿಯದೆ
ನೀತಿವಂತನೆಂದು ಸುಮ್ಮನಿರದೆ
ಆ ತತ್ಕಾಲದ ನೀತಿಯನರಿದು
ಸಾತ್ವಿಕ ಲಕ್ಷಣದಲ್ಲಿಪ್ಪಾತನ ಲಕ್ಷಣವೇ ನಿರೀಕ್ಷಣ
ಕದಂಬಲಿಂಗಾ

೬೩೯
ನಾನಾ ವರ್ಣದ ಗೋವುಗಳೆಲ್ಲವೂ ಕೂಡಿ
ಒಂದೇ ಹೊಲದಲ್ಲಿ ಮೇದು
ಆರು ಕೆರೆಯ ನೀರ ಕುಡಿದು
ಒಂದೇ ದಾರಿಯಲ್ಲಿ ಬಂದು
ಮೂರು ಕೊಟ್ಟಿಗೆಯ ಗೊತ್ತಿಂಗೊಳಗಾದುವು
ಬಿಟ್ಟು ಕರೆಯಲಾಗಿ ಗೋವಿಂಗೆ ಹಲವು
ಹಾಲಿಗೆ ಏಕವರ್ಣ
ಹಾಲ ತಂದು ಭಾಜನದಲ್ಲಿ ನೀಡಿ ಕಾಸುವಲ್ಲಿ
ಚಟ್ಟಿ ಹತ್ತದೆ ಹಸುಕು ನಾರದೆ
ಕೌರು ಏಳದೆ ನೀರ ರಸ ತಪ್ಪಿ ಮಧುರ ರಸ ತುಂಬಿ
ಕಾಸಿ ಉಣಬಲ್ಲಡೆ ಆತನೆ ಭೋಗಿ
ಆತ ನಿರತಿಶಯಾನುಭಾವ ಶುದ್ಧಾತ್ಮನು
ಕಾಲಕರ್ಮವಿರಹಿತ ತ್ರಿಪುರಾಂತಕಲಿಂಗ ತಾನೆ

೬೪೦
ನಾನಾ ವೇಷವ ತೊಟ್ಟು ಆಡುವನಂತೆ
ಬಹುರೂಪು ಬೇರಲ್ಲದೆ ಆಡುವ ತಾನೊಬ್ಬನೆ
ಎಲ್ಲಿ ಅರ್ಪಿತ ಮುಖ ಅಲ್ಲಿಯೂ ನೀನೇ
ಏಣಾಂಕಧರ ಸೋಮೇಶ್ವರಲಿಂಗವೆ

೬೪೧
ನಾನಾ ವ್ರತಂಗಳ ಪಿಡಿವುದೆಲ್ಲವು
ಮನದ ಶಂಕೆ
ಮನ ತನು ಕೂಡಿ ನಡೆವುದೆಲ್ಲವು
ಪ್ರಕೃತಿಯ ಶಂಕೆ
ಮನ ತನು ಪ್ರಕೃತಿ ಮೂರೊಂದಾದಲ್ಲಿ
ಶೀಲವೆಂಬ ಪಾಶ ಜೀವನ ಕೊರಳ ಸುತ್ತಿತ್ತು
ಬಹಿರಂಗದ ವ್ರತ ಅಂತರಂಗದ ಅರಿವು
ಉಭಯವು ಕಟ್ಟುವಡೆದಲ್ಲಿ
ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವೆಂಬ ಗೊತ್ತಾಯಿತ್ತು

೬೪೨
ನಾನಾರ ಸಾರುವೆನೆಂದು ಚಿಂತಸಲೇತಕ್ಕಯ್ಯಾ
ಬಸವಾ
ನಾನಾರ ಹೊಂದುವೆನೆಂದು ಭ್ರಮೆಬಡಲೇತಕ್ಕಯ್ಯಾ
ಬಸವಾ
ನಾನಾರ ಇರವನರಿವೆನೆಂದು ಪ್ರಳಾಪಿಸಲೇತಕ್ಕಯ್ಯಾ
ಬಸವಾ
ಪರಿಣಾಮಮೂರ್ತಿ ಬಸವನರೂಪು
ಎನ್ನ ಕರಸ್ಥಲದಲ್ಲಿ ಬೆಳಗಿದ ಬಳಿಕ
ಸಂಗಯ್ಯನ ಹಂಗು ನಮಗೇತಕ್ಕಯ್ಯಾ
ಬಸವಾ

೬೪೩
ನಾನಾರ ಹೆಸರ ಕುರುಹಿಡಲಯ್ಯಾ
ಬಸವಾ
ನಾನಾರ ರೂಪ ನಿಜವಿಡಲಯ್ಯಾ
ಬಸವಾ
ನಾನಾರ ಮಾತ ನೆಲೆಗೊಳಿಸಲಯ್ಯಾ
ಬಸವಾ
ನಾನಾರ ಮನವನಂಗೈಸಲಯ್ಯಾ
ಬಸವಾ
ಎನ್ನ ಸುಖಾಕಾರಮೂರ್ತಿ ಬಸವನಡಗಿದಬಳಿಕ
ಎನಗೆ ಹೆಸರಿಲ್ಲ
ರೂಪು ನಿರೂಪಾಯಿತ್ತಯ್ಯಾ
ಸಂಗಯ್ಯಾ ಬಸವನಡಗಿದಬಳಿಕ

೬೪೪
ನಾನು ಘನ ತಾನು ಘನವೆಂಬ ಹಿರಿಯರುಂಟೆ
ಜಗದೊಳಗೆ ಹಿರಿಯರ ಹಿರಿಯತನದಿಂದೇನಾಯಿತ್ತು
ಹಿರಿಕಿರಿದೆಂಬ ಶಬ್ದವಡಗಿದಡೆ ಆತನೆ ಶರಣ
ಗುಹೇಶ್ವರ

೬೪೫
ನಾನು ಭಕ್ತನಾದಡೆ
ನೀನು ದೇವನಾದಡೆ
ನೋಡುವೆವೆ ಇಬ್ಬರ ಸಮರಸವನೊಂದು ಮಾಡಿ
ಭೂಮಿಯಾಕಾಶವನೊಂದು ಮಾಡಿ
ಚಂದ್ರ ಸೂರ್ಯರಿಬ್ಬರ ತಾಳವ ಮಾಡಿ ಆಡುವೆವೆ
ಜಡೆಯ ಮೇಲಣ ಗಂಗೆ ನೀನು ಕೇಳಾ
ತೊಡೆಯ ಮೇಲಣ ಗೌರಿ ನೀನು ಕೇಳಾ
ಗುಹೇಶ್ವರನೆಂಬುದು ಲಿಂಗವು ಎನ್ನ ಕೈಯಲಿ ಸತ್ತಡೆ
ರಂಡೆಗೂಳನುಂಬುದು ನಿಮಗೆ ಲೇಸೆ

೬೪೬
ನಾನು ಮೆಟ್ಟುವ ಭೂಮಿಯ
ಭಕ್ತನ ಮಾಡಿದಲ್ಲದೆ ಮೆಟ್ಟೆನಯ್ಯಾ
ನಾ ನೋಡುತಿಹ ಆಕಾಶದ ಚಂದ್ರಸೂರ್ಯರ
ಭಕ್ತರ ಮಾಡಿದಲ್ಲದೆ ನೋಡೆನಯ್ಯಾ
ನಾನು ಬಳಸುವ ಜಲವ
ಭಕ್ತನ ಮಾಡಿದಲ್ಲದೆ ಬಳಸೆನಯ್ಯಾ
ನಾನು ಕೊಂಬ ಹದಿನೆಂಟು ಧಾನ್ಯವ
ಭಕ್ತನ ಮಾಡಿದಲ್ಲದೆ ಕೊಳ್ಳೆನಯ್ಯಾ
ಕೂಡಲಚೆನ್ನಸಂಗಯ್ಯಾ
ನಿಮ್ಮಾಣೆ

೬೪೭
ನಾನೆಂಬುದು ಪ್ರಮಾಣ
ನೀನೆಂಬುದು ಪ್ರಮಾಣ
ಸ್ವಯವೆಂಬುದು ಪ್ರಮಾಣ
ಪರವೆಂಬುದು ಪ್ರಮಾಣ
ಪ್ರಮಾಣವೆಂಬುದು ಪ್ರಮಾಣ
ಗೊಹೇಶ್ವರನೆಂಬುದು ಅಪ್ರಮಾಣ

೬೪೮
ನಾನೇಕೆ ಬಂದೆ ಸುಖವ ಬಿಟ್ಟು
ಬಂದುದಕ್ಕೆ ಒಂದೂ ಆದುದಿಲ್ಲ
ಸಂಸಾರದಲ್ಲಿ ಸುಖಿಯಲ್ಲ
ಪರಮಾರ್ಥದಲ್ಲಿ ಪರಿಣಾಮಿಯಲ್ಲ
ಸಿಕ್ಕಿದೆ ಅರ್ತಿಗಾರಿಕೆಯೆಂಬ ಭಕ್ತಿಯಲ್ಲಿ
ದಾಸಿಯ ಕೂಸಿನಂತೆ ಒಡವೆಗಾಸೆಮಾಡಿ
ಗಾಸಿಯಾದೆ ಮನೆಯೊಡೆಯನ ಕೈಯಲ್ಲಿ
ಈ ಭಾಷೆ ಇನ್ನೇಸು ಕಾಲ
ನಿಃಕಳಂಕ ಮಲ್ಲಿಕಾರ್ಜುನ

೬೪೯
ನಾನೊಂದ ನೆನೆದಡೆ
ತಾನೊಂದ ನೆನೆವುದು
ನಾನಿತ್ತಲೆಳೆದಡೆ
ತಾನತ್ತಲೆಳೆವುದು
ತಾ ಬೇರೆ
ಎನ್ನನಳಲಿಸಿ ಕಾಡಿತ್ತು
ತಾ ಬೇರ
ಎನ್ನ ಬಳಲಿಸಿ ಕಾಡಿತ್ತು
ಕೂಡಲಸಂಗನ ಕೂಡಿಹೆನೆಂದಡೆ
ತಾನೆನ್ನ ಮುಂದುಗೆಡಿಸಿತ್ತು ಮಾಯೆ

೬೫೦
ನಾನೊಂದು ಗಿಳಿಯ ಕಂಡೆ
ಬೆಕ್ಕಿನ ಬಾಧೆ ಘನ
ತಾ ಕೋಲಿನಲ್ಲಿದ್ದಡೆ ಶಯನಕ್ಕೆ ಆಸೆಯಿಲ್ಲ
ಪಂಜರಕ್ಕೆ ಸಂದ ಕೂಡುವ ಸಂಗದವನಿಲ್ಲ
ಕೊರೆಯ ಕೂಳನಿಕ್ಕುವುದಕ್ಕೆ ಅಡಿಗರಟವಿಲ್ಲ
ಗಿಳಿಯ ಹಿಡಿದು ನಾ ಕೆಟ್ಟೆ ಹಕ್ಕಿಯ ಹಂಬಲಿಲ್ಲ
ಗುಡಿಯೊಡೆಯ ಗುಮ್ಮಟನಾಥ ಅಗಮೇಶ್ವರಲಿಂಗ