೬೫೧
ನಾಯಿಗೆ ಕಾಲು ಕೊಟ್ಟು
ತೋಳಗೆ ಹೊಟ್ಟೆಯ ಕೊಟ್ಟು
ಹುಲಿಗೆ ತಲೆಯ ಕೊಟ್ಟು
ಮೆಲಿಸಿಕೊಂಬವರೆಲ್ಲಕ್ಕು ಬಲವಂತತನವೆ
ಅದರ ಸಲೆ ಬಲುಮೆ
ಆರ್ಕೇಶ್ವರಲಿಂಗವನರಿತವರಿಗಲ್ಲದೆ ಆಗದು

೬೫೨
ನಾರಿ ಹರಿಯಿತ್ತು
ಬಿಲ್ಲು ಮುರಿಯಿತ್ತು
ಅಂಬೇನ ಮಾಡುವುದು
ಎಲೆ ಎಲೆ ನೋಡಿರಣ್ಣ
ಹೊತ್ತು ಹೋಯಿತ್ತು
ನೇಮ ನೀರಡಸಿತ್ತು
ಏನು ಕಾರಣ ಹೇಳಾ
ಗುಹೇಶ್ವರ

೬೫೩
ನಾರಿವಾಳವ ತಂದು ನಾಯಮುಂದೆ ಹಾಕಿದಡೆ
ಒಡೆಯಲರಿಯದು ತಿನಲರಿಯದು
ಅದರವೊಲು
ಜಂಗಮದೊಳಗೆ ಲಿಂಗವರಿದವ ಭಂಗಿಯ ತಿಂದಂತೆ
ತನ್ನ ಹೊದ್ದಿದ್ದ ತಾ ತಿಳಿಯಲರಿಯದಿದ್ದಡೆ
ತೆಂಗ ತಿನಲರಿಯದ ನಾಯಂತೆ
ಎಂದನಂಬಿಗ ಚವುಡಯ್ಯ

೬೫೪
ನಾಳೆ ಬಪ್ಪುದು ನಮಗಿಂದೆ ಬರಲಿ
ಇಂದು ಬಪ್ಪುದು ನಮಗೀಗಲೆ ಬರಲಿ
ಇದಕಾರಂಜುವರು ಇದಕಾರಳುಕುವರು
ಜಾತಸ್ಯ ಮರಣಂ ಧ್ರುವಂ ಎಂದುದಾಗಿ
ನಮ್ಮ ಕೂಡಲಸಂಗದೇವರು
ಬರೆದ ಬರೆಹವ ತಪ್ಪಿಸುವಡೆ
ಹರಿಬ್ರಹ್ಮಾದಿಗಳಿಗಳವಲ್ಲ

೬೫೫
ನಿಃಶಬ್ದ ಲಿಂಗಾನುಭಾವಿ
ಶರಣ ಮುಗ್ಧಾನುಭಾವಿ
ಪ್ರಸಾದಿ ಪರಿಣಾಮಾನುಭಾವಿ
ಇಂತೀ ತ್ರಿವಿಧಾನುಭಾವಿ
ಕೂಡಲಚೆನ್ನಸಂಗಾ
ನಿಮ್ಮ ಶರಣ

೬೫೬
ನಿತ್ಯನಿರಂಜನ ತಾನೆಂದರಿಯದೆ
ತತ್ತ್ವಮಸಿಯೆಂದು ಹೊರರಿಗನೆ ಬಳಸಿ
ಸತ್ತಿತ್ತಲ್ಲಾ ಜಗವೆಲ್ಲಾ ನಾಯಿ ಸಾವ
ತಮ್ಮ ತಾವರಿಯದೆ
ಸತ್ತವರ ಹೆಸರ ಪತ್ರವನೋದಿದಡೆ
ಅದೆತ್ತಣ ಮುಕ್ತಿ
ಗುಹೇಶ್ವರ

೬೫೭
ನಿದ್ರೆಯಿದ್ದೆಡೆಯಲ್ಲಿ ಬುದ್ಧಿಯೆಂಬುದಿಲ್ಲ
ನೋಡಾ
ಕಾಯವೊಂದೆಸೆ ಜೀವವೊಂದೆಸೆ
ಗುಹೇಶ್ವರಲಿಂಗ ತಾನೊಂದೆಸೆ

೬೫೮
ನಿನ್ನನರಿತು ಅರಿದೆನೆಂದಡೆ
ನಾ ಕುತ್ತದ ಕೊಮ್ಮೆ
ನೀ ಮುದ್ದಿನ ಗುಳಿಗೆ
ನಿನ್ನನರಿತು ನೆರೆದಿಹೆನೆಂದಡೆ
ನೀ ಹೆಣ್ಣು
ನಾ ಗಂಡು
ಸಾಕು ಬಲ್ಲಹರ ಮಾತು ಬಿಡು
ನಿನ್ನದು ನೀತಿಯಲ್ಲ
ನಿಃಕಳಂಕ ಮಲ್ಲಿಕಾರ್ಜುನಾ

೬೫೯
ನಿನ್ನರಿಕೆಯ ನರಕವೆ ಮೋಕ್ಷ
ನೋಡಯ್ಯಾ
ನಿನ್ನನರಿಯದ ಮುಕ್ತಿಯೆ ನರಕ
ಕಂಡಯ್ಯಾ
ನೀನೊಲ್ಲದ ಸುಖವೆ ದುಃಖ
ಕಂಡಯ್ಯಾ
ನೀನೊಲಿದ ದುಃಖವೆ ಪರಮಸುಖ
ಕಂಡಯ್ಯಾ
ಚೆನ್ನಮಲ್ಲಿಕಾರ್ಜುನಯ್ಯಾ
ನೀ ಕಟ್ಟಿ ಕೆಡಹಿದ ಬಂಧನವೆ ನಿರ್ಬಂಧವೆಂದಿಪ್ಪೆನು

೬೬೦
ನಿಮ್ಮ ತೇಜವ ನೋಡಲೆಂದು ಹೆರೆಸಾರಿ ನೋಡುತ್ತಿರಲು
ಶತಕೋಟಿ ಸೂರ್ಯರು ಮೂಡಿದಂತಿರ್ದುದಯ್ಯ
ಮಿಂಚಿನ ಬಳ್ಳಿಯ ಸಂಚವ ಕಂಡೆ ಎನಗಿದು ಸೋಜಿಗವಾಯಿತ್ತು
ಗೊಹೇಶ್ವರ
ನೀನು ಜ್ಯೋತಿರ್ಲಿಂಗವಾದರೆ
ಉಪಮಿಸಿ ನೋಡಬಲ್ಲವರಿಲ್ಲಯ್ಯ

೬೬೧
ನಿಮ್ಮ ನೆನೆವುತ್ತಿದ್ದಿತ್ತು
ನೆನೆವ ಮುಖವಾವುದೆಂದರಿಯದೆ
ಪೂಜೆಯ ಪೂಜಿಸುತ್ತಿದ್ದಿತ್ತು
ಪೂಜೆಯ ಮುಖವಾವುದೆಂದರಿಯದೆ
ಆಡಿ ಹಾಡಿ ಬೇಡುತ್ತಿದ್ದಿತ್ತು
ಬೇಡುವ ಮುಖವಾವುದೆಂದರಿಯದೆ
ಕಾಯದಲಿಲ್ಲ ಜೀವದಲ್ಲಿಲ್ಲ ಭಾವದಲಿಲ್ಲ
ಭರಿತವು ಅದು ತಾನಪ್ಪುದು
ತಾನಲ್ಲದುದೇನ ಹೇಳುವೆ ಕೌತುಕವ
ಗುಹೇಶ್ವರನೆಂಬ ಹೆಸರೊಳಗಿದ್ದುದ
ಬೆಸಗೊಂಬವರಿಲ್ಲ ನಿರಾಳದ ಘನವ

೬೬೨
ನಿಮ್ಮನರಿಯದ ಕಾರಣ ಕೈಯಲ್ಲಿ ಹುಲ್ಲು
ನಿಮಗೆರಗದ ಕಾರಣ ಕೊರಳಲ್ಲಿ ನೇಣು
ಹಿಂಡಲೇಕೋ ತೊಳೆಯಲೇಕೋ
ಮುಳುಗಿ ಮುಳುಗಿ ಮೂಗ ಹಿಡಿಯಲೇಕೋ
ಕೂಡಲಸಂಗನ ಶರಣರಲ್ಲಿ
ಡೋಹರ ಕಕ್ಕಯ್ಯನಾವ ತೊರೆಯಲಿ ಮಿಂದ

೬೬೩
ನಿಮ್ಮಲ್ಲಿ ನೀವು ತಿಳಿದು ನೋಡಿರೇ
ಅನ್ಯವಿಲ್ಲ ಕಾಣಿರಣ್ಣ
ಅರಿವು ನಿಮ್ಮಲ್ಲಿಯೇ ತದ್ಗತವಾಗಿಯದೆ
ಅನ್ಯಭಾವವ ನೆನೆಯದೆ
ತನ್ನೊಳಗೆ ತಾನೆಚ್ಚರಬಲ್ಲಡೆ
ತನ್ನಲ್ಲಿಯೆ ತನ್ಮಯ ಗುಹೇಶ್ವರ ಲಿಂಗವು

೬೬೪
ನಿರಾಳವೆಂಬ ಕೂಸಿಂಗೆ ಬೆಣ್ಣೆಯನಿಕ್ಕಿ
ಹೆಸರಿಟ್ಟು ಕರೆದವರಾರೋ
ಅಕಟಕಟಾ
ಶಬ್ದದ ಲಜ್ಜೆಯ ನೋಡಾ
ಗುಹೇಶ್ವರನನರಿಯದ ಅನುಭಾವಿಗಳೆಲ್ಲರ ತರಕಟಗಾಡಿತ್ತು

೬೬೫
ನಿರ್ಣಯವನರಿಯದ ಮನವೇ
ದುಗುಡವನಾಹಾರಂಗೊಂಡೆಯಲ್ಲಾ
ಮಾಯಾಸೂತ್ರವಿದೇನೋ
ಕಂಗಳೊಳಗಣ ಕತ್ತಲೆ ತಿಳಿಯದಲ್ಲಾ
ಬೆಳಗಿನೊಳಗಣ ಶೃಂಗಾರ ಬಳಲುತ್ತಿದೆ
ಗುಹೇಶ್ವರ

೬೬೬
ನೀನಲ್ಲದನ್ಯದೈವವುಂಟೆಂಬವನ ಬಾಯ
ಕೆನ್ನೆವಾರೆ ಸೀಳಿದಲ್ಲದೆ ಎನ್ನ ಮುನಿಸು ಹೋಗದಯ್ಯಾ
ಎನ್ನ ಕೋಪವಡಗದಯ್ಯಾ
ಎನ್ನ ಬಿನ್ನಪವನಧರಿಸು
ಕೂಡಲಸಂಗಮದೇವಾ

೬೬೭
ನೀನಾನೆಂಬ ಭಾವವಾರಿಂದಾಯಿತ್ತು
ಹೇಳಾ
ನೀನೆಂಬುದೇ ಅಜ್ಞಾನ
ನಾನೆಂಬುದೇ ಮಾಯಾಧೀನ
ನೀನೆನ್ನದೆ ನಾನೆನ್ನದೆ ಇಪ್ಪ ಸುಖವ
ಭಿನ್ನವಿಲ್ಲದೆ ಅರಿಯಬಲ್ಲಡೆ
ಆ ಸುಖವು ನಿಮಗರ್ಪಿತ
ಕಾಣಾ ಗುಹೇಶ್ವರ

೬೬೮
ನೀನೀಶನೀಯದೆ ಮಾನೀಸನೀವನೆ
ನೀನೀಸುವ ಕಾರಣ ಮಾನಿಸನೀವನು
ಆ ಮಾನಿಸನ ಹೃದಯದೊಳು ಹೊಕ್ಕು
ನೀನೀಸುವ ಕಾರಣದಿಂದ
ನೀನೆ ಶರಣೆಂಬೆನಯ್ಯ
ರಾಮನಾಥ

೬೬೯
ನೀನು ಅಂಗದಲ್ಲಿ ಕಡಿದುದ ಬಿಟ್ಟು
ಬಿಟ್ಟು ನೋಡಿ ನಿನ್ನ ಕುರುಹ ಕಾಣೆ
ನೀನು ಕರ್ಣದಲ್ಲಿ ಹೇಳಿದುದ ನೆನೆದು ನೆನೆದು ಮನದಲ್ಲಿ ನಿಲ್ಲೆ
ನೀ ಬಿಡೆಂದುದ ಬಿಟ್ಟೆ
ನೀ ಹಿಡಿಯೆಂದುದ ಹಿಡಿದೆ
ನೀ ಅರಿಯೆಂದುದ ಮುಖಗುರುಹ ಕಾಣೆ
ನಿನ್ನರಿಕೆ ಇನ್ನೆಂದಿಗೆ
ಈ ಘಟವ ಬಿಡುವುದಕ್ಕೆ ಮೊದಲೆ
ನಿನ್ನಡಿಯ ಗುಡಿಯ ತೋರಿ
ಗೋಪತಿನಾಥ ವಿಶ್ವೇಶ್ವರಲಿಂಗಾ

೬೭೦
ನೀನೊಲಿದಡೆ ಕೊರಡು ಕೊನರುವುದಯ್ಯಾ
ನೀನೊಲಿದಡೆ ಬರಡು ಹಯನಹುದಯ್ಯಾ
ನೀನೊಲಿದಡೆ ವಿಷವೆಲ್ಲ ಅಮೃತವಹುದಯ್ಯಾ
ನೀನೊಲಿದಡೆ ಸಕಲ ಪಡಿಪದಾರ್ಥ ಇದಿರಲ್ಲಿರ್ಪುವು
ಕೂಡಲಸಂಗಮದೇವಾ

೬೭೧
ನೀರ ಕಂಡಲ್ಲಿ ಮುಳುಗುವರಯ್ಯಾ
ಮರನ ಕಂಡಲ್ಲಿ ಸುತ್ತುವರಯ್ಯಾ
ಬತ್ತುವ ಜಲವ ಒಣಗುವ ಮರನ
ಮಚ್ಚಿದವರು ನಿಮ್ಮನೆತ್ತ ಬಲ್ಲರು
ಕೂಡಲಸಂಗಮದೇವಾ

೬೭೨
ನೀರ ನೆಳಲಿನಲ್ಲಿ ಒಂದು ಆರವೆ ಹುಟ್ಟಿತ್ತು
ಅದು ಬೇರಿಲ್ಲದೆ
ಆ ಮರನ ಮೀರುವ ಕೊಂಬಿಲ್ಲದೆ
ಕೊಂಬ ಮೀರುವ ಎಲೆಯಿಲ್ಲದೆ
ಎಲೆಯ ಮೀರುವ ಹೂವಿಲ್ಲದೆ
ಹೂವ ಮೀರುವ ಕಾಯಿಯಿಲ್ಲದೆ
ಇದು ಚೆನ್ನಾಗಿ ತಿಳಿದು ನೋಡಿ
ಆ ನೀರು ಬೇರ ನುಂಗಿ
ಬೇರು ವೃಕ್ಷವ ನುಂಗಿ
ಪರ್ಣ ಕುಸುಮವ ಕೊಂಡು
ಕಾಯಿ ಹಣ್ಣನು ಮೆದ್ದಲ್ಲಿ
ಭಾವವಳಿಯಿತ್ತು
ಇದನಾರು ಬಲ್ಲರು
ನಿಃಕಳಂಕ ಮಲ್ಲಿಕಾರ್ಜುನ ನೀನೆ ಬಲ್ಲೆ

೬೭೩
ನೀರ ಬೊಬ್ಬುಳಿಕೆಗೆ ಕಬ್ಬುನದ ಕಟ್ಟುಕೊಟ್ಟು
ಸುರಕ್ಷಿತವ ಮಾಡುವ ಭರವ ನೋಡಾ
ಮಹಾದಾನಿ ಕೂಡಲಸಂಗಯ್ಯನ ಪೂಜಿಸಿ
ಬದುಕುವೋ ಕಾಯ ನಿಶ್ಯೈಸದೆ

೬೭೪
ನೀರಬೊಂಬೆಗೆ ನಿರಾಳದ ಗೆಜ್ಜೆಯ ಕಟ್ಟಿ
ಬಯಲಬೊಂಬೆಯ ಕೈಯಲ್ಲಿ ಕೊಟ್ಟು ಮುದ್ದಾಡಿಸುತ್ತಿರ್ದನಯ್ಯಾ
ಕರ್ಪೂರದ ಪುತ್ಥಳಿಗೆ ಅಗ್ನಿಯ ಸಿಂಹಾಸನವನಿಕ್ಕಿ
ಅಗ್ನಿ ಕರಗಿ ಕರ್ಪೂರ ಉಳಿದುದಕ್ಕೆ ಬೆರಗಾದೆನಯ್ಯಾ
ಎನ್ನ ಅಜಗಣ್ಣನ ಯೋಗಕ್ಕೆ

೬೭೫
ನೀರಿಂಗೆ ನೈದಿಲೆಯೆ ಶೃಂಗಾರ
ಸಮುದ್ರಕ್ಕೆ ತೆರೆಯ ಶೃಂಗಾರ
ಊರಿಗೆ ಆಗರವೆ ಶೃಂಗಾರ
ನಾರಿಗೆ ಗುಣವೆ ಶೃಂಗಾರ
ಗಗನಕ್ಕೆ ಚಂದ್ರಮನೆ ಶೃಂಗಾರ
ನಮ್ಮ ಕೂಡಲಸಂಗನ ಶರಣರಿಗೆ
ನೊಸಲ ವಿಭೂತಿಯೆ ಶೃಂಗಾರ