೬೭೬
ನೀರೊಳಗಣ ಕಿಚ್ಚಿಗೆ ನೀರೆ ತಾಯಿ
ಕಲ್ಲೊಳಗಣ ಕಿಚ್ಚಿಗೆ ಕಲ್ಲೆ ತಾಯಿ
ಮರಣದೊಳಗಣ ಕಿಚ್ಚಿಗೆ ಮರನೆ ತಾಯಿ
ಅವು ಹೊರಹೊಮ್ಮಿದಾಗ
ತಾಯ ತಿಂದು ತಾವು ತಲೆದೋರುವಂತೆ
ಕುರುಹಿಂದ ಅರಿವನರಿತು
ಅರಿವು ಕುರುಹು ನಷ್ಟವ ಮಾಡಿ ನಿಂದಲ್ಲಿಯೆ
ಐಘಟದೂರ ರಾಮೇಶ್ವರಲಿಂಗ ಅಂಗವ ಅರಿತು ನಿಂದ ನಿಲವು

೬೭೭
ನೀರೊಳಗಣ ಕಿಚ್ಚು
ತಾಯಲ್ಲಿ ಅಡಗಿತ್ತು
ಶಿಲೆಯೊಳಗಣ ಕಿಚ್ಚು
ತಾಯನುಳುಹಿ ಇದಿರ ಸುಟ್ಟಿತ್ತು
ಮರದೊಳಗಣ ಕಿಚ್ಚು
ಮರನನೂ ಸುಟ್ಟು
ಇದಿರನೂ ಸುಟ್ಟು
ಪರಿಸ್ಪಂದಕ್ಕೆ ಹರಿಯಿತ್ತು
ಇಂತೀ ತ್ರಿವಿಧಭೇದದಿಂದ ಜ್ಞಾನದ ಭೇದವನರಿ
ಐಘಟದೂರ ರಾಮೇಶ್ವರಲಿಂಗವನರಿವುದಕ್ಕೆ

೬೭೮
ನೀರೊಳಗೊಂದು ನೆಳಲು ಸುಳಿಯಿತ್ತು
ನೆಳಲೊಳಗೊಂದು ಹೊಳೆವ ಶಬ್ದವು
ಅದು ನೆಮ್ಮಲ್ಲ ಸೊಮ್ಮಲ್ಲ
ಅಮ್ಮಿದಡಾಯಿತ್ತು
ನೆಮ್ಮಿದಡರಳಿಯಿತ್ತು
ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ
ಬಯಲು

೬೭೯
ನುಡಿದ ಮಾತಿಂಗೆ ಕೊರತೆಯೆಂದು
ಮನವ ಮಾಡಿ ತನು ಅಂಡಿಸಲೇತಕ್ಕೆ
ಹಾವಿನ ಹೇಳಿಗೆಯ ತೆಗೆದ ಕೋಡಗದಂತೆ
ಮಾತಾಡಲೇಕೆ ಮತ್ತುಡುಗಲೇಕೆ
ಮಕರಧ್ವಜವೈರಿ ಮಾರೇಶ್ವರಾ

೬೮೦
ನುಡಿದಂತೆ ಮಿಥ್ಯ ಸುಮ್ಮನಿದ್ದಡೆ ತಥ್ಯವಲ್ಲ
ಈ ಉಭಯದ ಹೆಚ್ಚು ಕುಂದ ಹೊತ್ತುಹೋರಿಯಾಡುತ್ತ
ಮತ್ತೆ ನಿಶ್ಚಯವಂತ ನಾನೆಂದು
ಹೆಚ್ಚು ಕುಂದಿನೊಳಗೆ ಬೇವುತ್ತ
ಮತ್ತೆ ನಿಶ್ಚಯಕ್ಕೆ ದೃಷ್ಟವ ಕೇಳಲಿಲ್ಲ
ಕಾಮಧೂಮ ಧೂಳೇಶ್ವರನು ನಿತ್ಯಾನಿತ್ಯದವನಲ್ಲ

೬೮೧
ನುಡಿದಡೆ
ಮುತ್ತಿನ ಹಾರದಂತಿರಬೇಕು
ನುಡಿದಡೆ
ಮಾಣಿಕ್ಯದ ದೀಪ್ತಿಯಂತಿರಬೇಕು
ನುಡಿದಡೆ
ಸ್ಫಟಿಕದ ಸಲಾಕೆಯಂತಿರಬೇಕು
ನುಡಿದಡೆ
ಲಿಂಗ ಮೆಚ್ಚಿ ಅಹುದಹುದನಬೇಕು
ನುಡಿಯೊಳಗಾಗಿ ನಡೆಯದಿದ್ದಡೆ
ಕೂಡಲಸಂಗಮದೇವನೆಂತೊಲಿವನಯ್ಯಾ

೬೮೨
ನುಡಿದೆಹೆನೆಂಬ ಉಲುಹಿನ ಗಲಭೆಯ ತೋಟ ಬಿಡದು
ಉತ್ತಮ ಮಧ್ಯಮ ಕನಿಷ್ಠವೆಂಬುವ
ತಿರುಗಿ ಕಂಡೆಹೆನೆಂಬ ಕಾಲಿನ ಎಡೆಯಾಟ ಬಿಡದು
ಎನಗೆ ಗರ್ವ ಮೊದಲಾದಲ್ಲಿ ನಿಮಗೆ ಗರ್ವ ವೆಗ್ಗಳವಾಯಿತ್ತು
ಈ ಉಭಯ ತೋಟಿಯ ನಾನಿನ್ನಾರಿಗೆ ಹೇಳುವೆ
ಕಪಿಲಸಿದ್ಧಮಲ್ಲಿಕಾರ್ಜುನ

೬೮೩
ನುಡಿಯಲ್ಲಿ ಎಚ್ಚತ್ತು ನಡೆಯಲ್ಲಿ ತಪ್ಪಿದಡೆ
ಹಿಡಿದಿರ್ದ ಲಿಂಗವು ಘಟಸರ್ಪನಯ್ಯಾ
ನುಡಿಯಲೂ ಬಾರದು ನಡೆಯಲೂ ಬಾರದು
ಲಿಂಗದೇವನೆ ದಿಬ್ಯವೊ
ಅಯ್ಯಾ
ಬಡವನ ಕೋಪವು ಅವುಡಿಗೆ ಮೃತ್ಯುವಾದಂತೆ
ಕಡೆಗೆ ದಾಂಟದು ಕಾಣಾ ಕೂಡಲಸಂಗಮದೇವಾ

೬೮೪
ನುಡಿಯಿಂದ ನಡೆಗೆಟ್ಟಿತ್ತು
ನಡೆಯಿಂದ ನುಡಿಗೆಟ್ಟಿತ್ತು
ಭಾವದ ಗುಸುಟು
ಅದು ತಾನೆ ನಾಚಿ ನಿಂದಿತ್ತು
ಗುಹೇಶ್ವರನೆಂಬ ಅರಿವು
ಸಿನೆಬಂಜೆಯಾಯಿತಲ್ಲಾ

೬೮೫
ನುಡಿಯಿರಿದಡೆ ಪಡಿಕೈದೇಕೆ
ಕೈಯಲ್ಲಿ ಅರಿವು ವಸ್ತುವಾದಡೆ
ಬೇರೊಂದು ಕುರುಹೇಕೆ
ಕೈಯಲ್ಲಿ ಕುರುಹು ಕುರುಹಿಂಗೆ ಬೇಕು
ಅರಿವು ಅರಿವಿಂಗೆ ಬೇಕು
ಅರ್ಕೇಶ್ವರಲಿಂಗವನರಿವುದಕ್ಕೆ ಕುರುಹಿನ ಮರೆಬೇಕು

೬೮೬
ನುಡಿಯೆನೆಂಬಲ್ಲಿಯೆ ನುಡಿ ಅದೆ
ನಡೆಯೆನೆಂಬಲ್ಲಿಯೆ ನಡೆ ಅದೆ
ಭಾವಿಸೆನೆಂಬಲ್ಲಿಯೆ ಭಾವ ಅದೆ
ಅರಿದು ಮರೆದೆನೆಂಬಲ್ಲಿಯೆ ಅರಿವು ಮರವೆ ಅದೆ
ಅಂಗದಲ್ಲಿ ಲಿಂಗ ಲೀಯವಾಯಿತ್ತೆಂದಡೆ
ಅಲ್ಲಿಯೆ ಅಂಗ ಅದೆ
ಅನಂಗಸಂಗಿಯಾದೆನೆಂಬಲ್ಲಿಯೆ ವಿಷಯಸೂತಕ ಅದೆ
ನಾನೆ ನಾನಾದೆನೆಂಬಲ್ಲಿಯೆ ನೀನೆಂಬುದು ಅದೆ
ಅರಿದು ಮರೆದ ಪರಿ ಎಂತು ಹೇಳಾ
ಅರಿವು ನಷ್ಟವಾಗಿ ಮರಹು ಲಯವಾಗಿಪ್ಪಡೆ
ಎನ್ನ ಅಜಗಣ್ಣತಂದೆಯಲ್ಲದೆ ಮತ್ತಾರನೂ ಕಾಣೆ

೬೮೭
ನೆನವ ಮನಕ್ಕೆ ಮಣ್ಣನೆ ತೋರಿದೆ
ನೋಡುವ ಕಣ್ಣಿಗೆ ಹೆಣ್ಣನೆ ತೋರಿದೆ
ಪೂಜಿಸುವ ಕೈಗೆ ಹೊನ್ನನೆ ತೋರಿದೆ
ಇಂತೀ ತ್ರಿವಿಧವನೆ ತೋರಿ ಕೊಟ್ಟು
ಮರಹನಿಕ್ಕಿದೆಯಯ್ಯಾ
ಅಮರಗುಂಡದ ಮಲ್ಲಿಕಾರ್ಜುನಯ್ಯಾ
ನೀ ಮಾಡಿದ ಬಿನ್ನಾಣಕ್ಕೆ ನಾನು ಬೆರಗಾದೆ
ಕಾಣಾ ಕಲಿದೇವರದೇವ

೬೮೮
ನೆನೆವುತ್ತಿದೆ ಮನ
ದುರ್ವಾಸನೆಗೆ ಹರಿವುತ್ತಿದೆ ಮನ
ಕೊನೆಗೊಂಬೆಗೆ ಎಳೆವುತ್ತಿದೆ ಮನ
ಕಟ್ಟಿಗೆ ನಿಲ್ಲದು ಮನ
ಬಿಟ್ಟಡೆ ಹೋಗದು ಮನ
ತನ್ನಿಚ್ಛೆಯಲಾಡುವ ಮನವ ಕಟ್ಟಿಗೆ ತಂದು ಗೊತ್ತಿಗೆ ನಿಲಿಸಿ
ಬಚ್ಚಬರಿಯ ಬಯಲಿನೊಳಗೆ ಓಲಾಡುವ
ಶರಣರ ಪಾದದಲ್ಲಿ ನಾ ಬೆಚ್ಚಂತಿದ್ದೆನಯ್ಯಾ
ಅಪ್ಪಣ್ಣಪ್ರಿಯ ಚೆನ್ನಬಸವಣ್ಣ

೬೮೯
ನೆರೆ ಕೆನ್ನೆಗೆ ತೆರೆ ಗಲ್ಲಕೆ
ಶರೀರ ಗೂಡುವೋಗದ ಮುನ್ನ
ಹಲ್ಲು ಹೋಗಿ ಬೆನ್ನು ಬಾಗಿ
ಅನ್ಯರಿಗೆ ಹಂಗಾಗದ ಮುನ್ನ
ಕಾಲಮೇಲೆ ಕೈಯನೂರಿ
ಕೋಲ ಹಿಡಿಯದ ಮುನ್ನ
ಮುಪ್ಪಿಂದೊಪ್ಪವಳಿಯದ ಮುನ್ನ
ಮೃತ್ಯು ಮುಟ್ಟದ ಮುನ್ನ
ಪೂಜಿಸುವೋ ಕೂಡಲಸಂಗಮದೇವನ

೬೯೦
ನೆರೆದರೆ ಗಣಂಗಳು
ಹರದಡೆ ಕಂಚುಗಾರರು
ಲಿಂಗವ ಮಾರಿ ಉಂಬ ಭಂಗಾರರು
ತಮ್ಮ ತಳಿಗೆಯ ಕೊಂಡುಹೋಗಿ
ಅನ್ಯರ ಮನೆಯಲುಂಬ ಕುನ್ನಿಗಳೇನೆಂಬೆ
ರಾಮನಾಥ

೬೯೧
ನೆಲ ತಳವಾರನಾದಡೆ
ಕಳ್ಳಂಗೆ ಹೊಗಲೆಡೆಯುಂಟೆ
ಸರ್ವಾಂಗಲಿಂಗಿಗೆ ಅನರ್ಪಿತವುಂಟೆ
ನಿಃಕಳಂಕ ಮಲ್ಲಿಕಾರ್ಜುನ

೬೯೨
ನೆಲದ ಬೊಂಬೆಯ ಮಾಡಿ
ಜಲದ ಬಣ್ಣವನುಡಿಸಿ
ಹಲವು ಪರಿಯಾಶ್ರಮದಲ್ಲಿ ಉಲಿವ ಗೆಜ್ಜೆಯ ಕಟ್ಟಿ
ವಾಯುವನಲನಸಂಚಕ್ಕೆ ಅರಳೆಲೆಯ ಶೃಂಗಾರದ ಮಾಡಿ
ಆಡಿಸುವ ಯಂತ್ರವಾಹಕನಾರೋ
ಬಯಲ ಕಂಭಕ್ಕೆ ತಂದು ಸಯವೆಂದು ಪರವ ಕಟ್ಟಿದಡೆ
ಸಯವದ್ವಯವಾಯಿತ್ತು ಏನೆಂಬೆ
ಗುಹೇಶ್ವರ

೬೯೩
ನೆಲದ ಮರೆಯ ನಿಧಾನದಂತೆ
ಮುಗಿಲ ಮರೆಯಲಡಗಿದ ಮಿಂಚಿನಂತೆ
ಬಯಲ ಮರೆಯಲಡಗಿದ ಮರೀಚಿಯಂತೆ
ಕಂಗಳ ಮರೆಯಡಗಿದ ಬೆಳಗಿನಂತೆ
ಗುಹೇಶ್ವರ ನಿಮ್ಮ ನಿಲುವು

೬೯೪
ನೆಲನೊಂದೆ ಹೊಲಗೇರಿ ಶಿವಾಲಯಕ್ಕೆ
ಜಲವೊಂದೆ ಶೌಚಾಚಮನಕ್ಕೆ
ಕುಲವೊಂದೆ ತನ್ನ ತಾನರಿದವಂಗೆ
ಫಲವೊಂದೆ ಷಡುದರುಶನ ಮುಕ್ತಿಗೆ
ನಿಲವೊಂದೆ ಕೂಡಲಸಂಗಮದೇವಾ ನಿಮ್ಮನರಿದವಂಗೆ

೬೯೫
ನೆಲ್ಲು ನೆಲದಲ್ಲಿಯೆ ಅಳಿದು ಹುಲ್ಲಿನ ಒಡಲಲ್ಲಿಯೆ ಜನಿಸಿ
ಆ ಹುಲ್ಲ ತನ್ನೊಳಗಿರಿಸಿದ ಭೇದವ ನೋಡ
ತನ್ನೊಡಲಳಿದಲ್ಲಿ ನೆಲ್ಲೂ ಅಲ್ಲ ಹುಲ್ಲೂ ಅಲ್ಲ
ಆ ಹೊಡೆಯಲ್ಲಿ ಅಡಗಿತ್ತೆಂದರಿಯೆ
ಕುಂಭೇಶ್ವರಲಿಂಗದಲ್ಲಿ ಜಗನ್ನಾಥನನರಿಯಲಾಗಿ

೬೯೬
ನೆಳಲ ಹೂಳಿಹೆನೆಂದು ಬಳಲುತ್ತಿದೆ ಜಗವೆಲ್ಲ
ನೆಳಲು ಸಾಯಬಲ್ಲುದೆ ಅಂಗಪ್ರಾಣಿಗಳಿಗೆ
ಸಮುದ್ರದಾಚೆಯ ತಡಿಯಲ್ಲಿ ಕಳ್ಳನ ಕಂಡು
ಇಲ್ಲಿ ಮುನಿದು ಬೈದರೆ ಅವ ಸಾಯಬಲ್ಲನೆ
ಭಾವದಲ್ಲಿ ಹೊಲಿದ ಹೊಲಿಗೆಯ ಭೇದವನರಿಯರು
ಕಾಮಿಸಿದರುಂಟೆ ನಮ್ಮ ಗುಹೇಶ್ವರಲಿಂಗವು

೬೯೭
ನೇತ್ರದಲ್ಲಿ ಕಂಡು ಶ್ರೋತ್ರದಲ್ಲಿ ಕೇಳಿ
ಗಾತ್ರದಲ್ಲಿ ಮುಟ್ಟಿ ಚಿತ್ರದಲ್ಲಿ ಒಲಿಸುವಡೆ
ಮತ್ತೊಬ್ಬರಲ್ಲಿ ಹೊತ್ತು ಹೋರಲೇಕಣ್ಣಾ
ಅರ್ಕೇಶ್ವರಲಿಂಗವನರಿವುದಕ್ಕೆ

೬೯೮
ನೇಮಿಯ ನೇಮ ಲಿಂಗಾರ್ಚನೆಯ ಕೆಡಿಸಿತ್ತಲ್ಲಾ
ಮತಿಗೆಟ್ಟ ಕುಂಬಾರ ಮಣ್ಣಸೂಜಿಯ ಮಾಡಿ
ಕಮ್ಮಾರಗೇರಿಗೆ ಮಾರಹೊದಂತೆ
ಸಕಳೇಶ್ವರದೇವಾ ನಿಮ್ಮ ಶರಣರು
ಶೃಂಗಾರದಲ್ಲಿ ಲಿಂಗವ ಮರೆದರಲ್ಲಾ

೬೯೯
ನೇಹವೆಳದಾಯಿತ್ತಾಗಿ
ನೋಟ ವಿಪುಳವಾಯಿತ್ತ ಕಂಡೆ
ಅಂಗದ ಕಳೆ
ಕಂಗಳ ಮೋಹ
ಎವೆಗೆವೆ ಸೈರಿಸದು
ಬೆಳಕಿನ ಮೇಲೆ ಕೆಂಪಡರಿತ್ತು
ಉದಕ ಪಲ್ಲಟ ಮತ್ಸ್ಯಬೆನ್ನು ಬಸುರ ತೋರಿತ್ತು
ಮಾಗಿಯ ಕೋಗಿಲೆಯಂತೆ ಮೂಗನಾಗಿದ್ದೆನವ್ವಾ
ಮಹಾಲಿಂಗ ಗಜೇಶ್ವರನೊಲವಿಂದೆನಗೆ ರಣದಣಕನವ್ವಾ

೭೦೦
ನೋಡುವ ಸೂರ್ಯ ಸುರಿವಜಲ
ಹೊಲೆ ನೆಲೆ ಶುದ್ಧವೆಲ್ಲಕ್ಕೂ ಸರಿ
ಅರಿದು ನುಡಿದವಂಗೆ
ಮರೆದು ನುಡಿದು ತಲ್ಲಣಿಸುವಂಗೆ
ಅವನ ಹೃದಯವೇ ಸಾಕ್ಷಿ
ಗೊಹೇಶ್ವರಲಿಂಗಕ್ಕೆ ತಥ್ಯ ಮಿಥ್ಯವಿಲ್ಲ [ಸಂಗನ ಬಸವಣ್ಣ]