೭೦೧
ನೋಡುವುದ ನೋಡಲರಿಯದೆ
ಕೆಟ್ಟಿತ್ತೀ ಲೋಕವೆಲ್ಲ
ನೋಡುವುದ ನೋಡಬಲ್ಲಡೆ
ಕೂಡಲಿಲ್ಲ ಅಗಲಲಿಲ್ಲ
ನೋಟದ ಕೂಟದ ಅಗಲದ ಸುಖವನು
ಗುಹೇಶ್ವರ
ನಿಮ್ಮ ಶರಣ ಬಲ್ಲ

೭೦೨
ನೋಡುವುದದು ನೋಡಲೇಬೇಕು
ಮಾಡುವುದದು ಮಾಡಲೇಬೇಕು
ನೋಡಿ ಮಾಡಿ
ಮನದಲ್ಲಿ ಲೀಢವಾಗಿರಬಾರದು
ನೋಡಾ
ಕಪಿಲಸಿದ್ಧಮಲ್ಲಿಕಾರ್ಜುನಾ

೭೦೩
ಪಂಕವಿಲ್ಲದ ಕಮಲಕ್ಕೆ ಸುಗಂಧ ಸುಲಲಿತವೆಂತಪ್ಪುದಯ್ಯಾ
ಹೊನ್ನು ಹೆಣ್ಣು ಮಣ್ಣಿಲ್ಲದೆ ದೇವತಾಯೋಗ್ಯವೆಂತಪ್ಪುದಯ್ಯಾ
ಕಮಲ ಪಂಕದಲಿ ವರ್ತಿಸಿದಂತೆ ವರ್ತಿಸುತಿಪ್ಪರು ನಿಮ್ಮ ಶರಣರು
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ

೭೦೪
ಪಕ್ಕ ಮುರಿದ ಹಕ್ಕಿಯಂತೆ
ಸಾಸಿವೆಯನೊಕ್ಕಿದ ಎತ್ತಿನಂತೆ
ಬೆಳಗ ಕಂಡು ಮೈಮರೆದ ಹುಲ್ಲೆಯಂತೆ
ಅಳಿಕುಲಕ್ಕೆ ವಿಷವಾದ ಸಂಪಿಗೆಯ ಪುಷ್ಪದಂತೆ
ಎನ್ನ ತನು ಮನ ಕುಲಕ್ಕೆ
ನಿಮ್ಮ ನೆನಹೆಂಬ ಜ್ವಾಲೆ ತಾಗಿ
ಸತ್ತೆನಯ್ಯಾ ಸಾಯದಂತೆ
ಹುಲ್ಲಸರವಿಯಲ್ಲಿ ಕಟ್ಟಿದ ಕಿಚ್ಚಿನಂತೆ
ಬೇಯದಂತೆ ಬೆಂದೆನಾಗಿ
ನಿಜಗುರು ಭೋಗೇಶ್ವರಾ
ನಿಮ್ಮ ಸಂಗಸುಖವದೇಕೊ

೭೦೫
ಪಕ್ಷಿಯ ಕುಕ್ಕೆಯೊಳಗಿಕ್ಕಿ ಮಾರಬಹುದಲ್ಲದೆ
ಮತ್ತ ಗಜವ ಮಾರಬಹುದೆ
ಅಯ್ಯಾ
ಚಿತ್ರವ ಬರೆವುದಕ್ಕೆ ಲೆಕ್ಕಣಿಕೆಯಲ್ಲದೆ ಚಿತ್ತಜಗುಂಟೆ
ಪುನರಪಿ ವಸ್ತುವನರಿವುದಕ್ಕೆ ಹೊತ್ತುಗೊತ್ತುಂಟೆ
ಆರ್ಕೇಶ್ವರನ ಕೂಡುವುದಕ್ಕೆ ತತ್ಕಾಲವುಂಟೆ

೭೦೬
ಪಚ್ಚೆಯ ನೆಲೆಗಟ್ಟು
ಕನಕದ ತೋರಣ
ವಜ್ರದ ಕಂಬ
ಪವಳದ ಚಪ್ಪರವಿಕ್ಕಿ
ಮುತ್ತುಮಾಣಿಕದ ಮೇಲುಕಟ್ಟು ಕಟ್ಟಿ
ಮದುವೆಯ ಮಾಡಿದರು
ಎಮ್ಮವರೆನ್ನ ಮದುವೆಯ ಮಾಡಿದರು
ಚೆನ್ನಮಲ್ಲಿಕಾರ್ಜುನನೆಂಬ ಗಂಡಂಗೆನ್ನ ಮದುವೆಯಮಾಡಿದರು

೭೦೭
ಪದವನರಿಯದ ವಾಚಕ ಘಾತಕದ ಇರವು
ಪುಸಿ ಧನುವಿನಲ್ಲಿ ಸಿಕ್ಕಿದ ಮಿಸುಕಿದ ಕಣೆಯಂತೆ
ಹುಸಿದವನ ಒಡಲಿನ ಪ್ರತಿಮೂದಲೆಯಂತೆ
ಇಂತೀ ಅರಿವಿನ ಒಳಗನರಿಯದ ಜೂಜಿನ ಹುದುಗಿರಿಗೆ ಬಂದು
ಸುರಿಗಾಯಿ ಸುರಿವವನ ವಿಧಿಯಂತೆ
ಗುಡಿಯ ಗುಮ್ಮಟನೊಡೆಯ ಅಗಮೇಶ್ವರಲಿಂಗ

೭೦೮
ಪದವನರ್ಪಿಸಬಹುದಲ್ಲದೆ
ಪದಾರ್ಥವನರ್ಪಿಸಬಾರದು
ಓಗರವನರ್ಪಿಸಬಹುದಲ್ಲದೆ
ಪ್ರಸಾದವನರ್ಪಿಸಬಾರದು
ಗುಹೇಶ್ವರ
ನಿಮ್ಮ ಶರಣರು ಹಿಂದ ನೋಡಿ ಮುಂದನರ್ಪಿಸುವರು

೭೦೯
ಪದವು ಪದಾರ್ಥವು ಎಂಬರು
ಪದವಾವುದೆಂದರಿಯರು
ಪದಾರ್ಥವಾವುದೆಂದರಿಯರು
ಪದವೇ ಲಿಂಗ ಪದಾರ್ಥವೇ ಭಕ್ತ
ಇದನರಿದು ಪದಾರ್ಥವ ತಂದು ಅರ್ಪಿತವ ಮಾಡಬಲ್ಲಡೆ
ಕೂಡಿಕೊಂಡಿಪ್ಪ ನಮ್ಮ ಕೂಡಲಚೆನ್ನಸಂಗಮದೇವ

೭೧೦
ಪರರ ಚಿಂತೆ ಎಮಗೇಕಯ್ಯಾ
ನಮ್ಮ ಚಿಂತೆ ನಮಗೆ ಸಾಲದೆ
ಕೂಡಲಸಂಗಯ್ಯ ಒಲಿದಾನೊ
ಒಲಿಯನೊ ಎಂಬ ಚಿಂತೆ
ಹಾಸಲುಂಟು ಹೊದೆಯಲುಂಟು

೭೧೧
ಪರಿಣಾಮದೊಳಗೆ ಮನದ ಪರಿಣಾಮವೆ ಚೆಲುವ
ಸಂಗದೊಳಗೆ ಶರಣರ ಸಂಗವೆ ಚೆಲುವ
ಕಾಯಗೊಂಡು ಹುಟ್ಟಿದ ಮೂಢರೆಲ್ಲ
ಸಾಯದ ಸಂಚವನರಿವುದೆ ಚೆಲುವ
ಗುಹೇಶ್ವರ

೭೧೨
ಪರುಷದ ಪುತ್ಥಳಿಗೆ ಕಬ್ಬುನದ ಆಭರಣಗಳುಂಟೇ
ಅಯ್ಯಾ
ಲೋಕದೊಳಗೆ ಲಿಂಗ ಲಿಂಗದೊಳಗೆ ಲೋಕವಾದಡೆ
ಹಿಂದಣ ಪ್ರಳಯಗಳೇಕಾದವು
ಇನ್ನು ಮುಂದಿನ ಪ್ರಳಯಗಳಿಗಿನ್ನೆಂತೋ
ಲೋಕವು ಲೋಕದಂತೆ
ಲಿಂಗವು ಲಿಂಗದಂತೆ
ಈ ಉಭಯದ ಭೇದವ
ಗುಹೇಶ್ವರ
ನಿಮ್ಮ ಶರಣನೆ ಬಲ್ಲ

೭೧೩
ಪಾತಾಳದಗ್ಘವಣಿಯ ನೇಣಿಲ್ಲದೆ ತೆಗೆಯಬಹುದೆ
ಸೋಪಾನದ ಬಲದಿಂದಲ್ಲದೆ
ಶಬ್ದಸೋಪಾನದ ಬಲದಿಂದ ನಿಶ್ಯಬ್ದ ಸೋಪಾನವ ಕಟ್ಟಿ
ನಡೆಯಿಸಿದರು ಪುರಾತರು
ದೇವಲೋಕಕ್ಕೆ ಬಟ್ಟೆ ಕಾಣಿರೋ
ಮರ್ತ್ಯರ ಮನದ ಮೈಲಿಗೆಯ ಕಳೆಯಲೆಂದು
ಗೀತಮಾತೆಂಬ ಜ್ಯೋತಿಯ ಬೆಳಗಿಟ್ಟರು
ಕೂಡಲಚೆನ್ನಸಂಗನ ಶರಣರು

೭೧೪
ಪಾತಾಳದಿಂದತ್ತ ಮಾತ ಬಲ್ಲವರಿಲ್ಲ
ಗಗನದಿಂದ ಮೇಲೆ ಅನುಭಾವ ತಾನಿಲ್ಲ
ಒಳಗಣ ಜ್ಯೋತಿಯ ಬೆಳಗ ಬಲ್ಲವರಿಲ್ಲ
ಹೊರಗಣ ಹೊರಗನು ಅರಿಯಬಲ್ಲವರಿಲ್ಲ
ಹಿಂದಣ ಹಿಂದನು ಮುಂದಣ ಮುಂದನೂ
ತಂದೆ ತೋರಿದನು ನಮ್ಮ ಗುಹೇಶ್ವರನು

೭೧೫
ಪುರಾತರು ಪುರಾತರು ಎಂದು
ಪುರಾಣದೊಳಗಣ ಕಥೆಯನೆ ಕಲಿತುಕೊಂಡು
ಪುರದ ಬೀದಿಯೊಳಗೆ ಹರದರಂತೆ
ಮಾತಿನ ಹಸರವನಿಕ್ಕಿ ಮಾರುವ ಅಣ್ಣಗಳಿರಾ
ನೀವು ಕೇಳಿರೊ
ಅಂದು ಹೋದವರ ಸುದ್ದಿಯ ನುಡಿದರೆ ಇಂದು ಬಂದರೊ
ನಿಮಗೆ ಇಂದು ಬಂದವರ ಒಂದೇ ಎಂದರಿಂದ ಭಕ್ತರ
ಆಚರಣೆಯ ತೋರಿ ಬದುಕಿಸಯ್ಯಾ
ಬಸವಪ್ರಿಯ ಕೂಡಲಚೆನ್ನಬಸವಣ್ಣಾ

೭೧೬
ಪುರುಷನ ಮುಂದೆ ಮಾಯೆ
ಸ್ತ್ರೀಯೆಂಬ ಅಭಿಮಾನವಾಗಿ ಕಾಡುವುದು
ಸ್ತ್ರೀಯ ಮುಂದೆ ಮಾಯೆ
ಪುರುಷನೆಂಬ ಅಭಿಮಾನವಾಗಿ ಕಾಡುವುದು
ಲೋಕವೆಂಬ ಮಾಯೆಗೆ ಶರಣಚಾರಿತ್ರ್ಯ
ಮರುಳಾಗಿ ತೋರುವುದು
ಚೆನ್ನಮಲ್ಲಿಕಾರ್ಜುನನೊಲಿದ ಶರಣಂಗೆ
ಮಾಯೆಯಿಲ್ಲ ಮರಹಿಲ್ಲ ಅಭಿಮಾನವೂ ಇಲ್ಲ

೭೧೭
ಪೂಜೆ ಪುಣ್ಯಕ್ಕೆ ಒಡಲು
ಜ್ಞಾನ ಶೂನ್ಯಕ್ಕೆ ಒಡಲು
ಉಂಟು ಇಲ್ಲ ಎಂಬುದು ಸಂದೇಹಕ್ಕೆ ಒಡಲು
ಇಂತೀ ಒಡಲಳಿದು ಕೊಡುವ ಕೊಂಬ ಎಡೆಯಾಟ ನಿಂದು
ಜಿಡ್ಡೆಂಬ ಜಿಗುಡು ಹರಿದು ಶೂನ್ಯವೆಂಬ ಸುಳುಹು ಸತ್ತು
ಮತ್ತಾವುದೂ ಕಲೆದೋರದೆ ನಿಂದ ನಿಜ ತಾನು ತಾನೆ
ಕಾಮಧೂಮ ಧೂಳೇಶ್ವರಾ

೭೧೮
ಪೃಥ್ವಿ ಅಪ್ಪು ತೇಜ ವಾಯು ಆಕಾಶದಿಂದ
ಹೊಂದುವ ಹುಟ್ಟುವ ದೇಹದ ಅಂದಗಾರಿಕೆಯಲ್ಲಿ
ಬಂದುದನರಿಯ
ಬಂದಂತೆ ಹಿಂಗಿತೆಂದು ಇರು
ಮುಂದಣ ನಿಜಲಿಂಗವನರಿಯಾ
ನಿಃಕಳಂಕ ಮಲ್ಲಿಕಾರ್ಜುನಾ

೭೧೯
ಪೃಥ್ವಿಯ ಮೇಲಣ ಶಿಲೆಯ ತಂದು ಪ್ರತಿಮೆಗಳ ಮಾಡಿ
ಕಲ್ಲುಕುಟಿಗನಲ್ಲಿಯೆ ಗುರುವಾರ ಕಲ್ಲು ಶಿಷ್ಯನಾದ
ಹಿಂದಣಾದಿಯನರಿಯದ ಗುರು
ಮುಂದೆ ವೇದಿಸಲಿಲ್ಲದ ಉಪದೇಶಕೊಳ್ಳಲರಿಯದ ಶಿಷ್ಯ
ಈ ಎರಡೂ ಕಲ್ಲಕುಟಿಗನ ಕಲ್ಲಿನಂತೆ
ಕಾಣಾ
ಕಲಿದೇವಯ್ಯ

೭೨೦
ಪೃಥ್ವಿಯನತಿಗಳೆದ ಸ್ಥಾವರಂಗಳಿಲ್ಲ
ಅಪ್ಪುವನತಿಗಳೆದ ತೀರ್ಥಯಾತ್ರೆಗಳಿಲ್ಲ
ಅಗ್ನಿಯನತಿಗಳೆದ ಹೋಮಸಮಾಧಿಗಳಿಲ್ಲ
ವಾಯುವನತಿಗಳೆದ ನೇಮನಿತ್ಯಂಗಳಿಲ್ಲ
ಆಕಾಶವನತಿಗಳೆದ ಧ್ಯಾನ ಮೌನಂಗಳಿಲ್ಲ
ಗುಹೇಶ್ವರನರಿದಂಗೆ
ಇನ್ನಾವಂಗವೂ ಇಲ್ಲ

೭೨೧
ಪೃಥ್ವಿಯೆಂಬ ಅಂಗದ ಧರೆಯಲ್ಲಿ
ಅಪ್ಪುವೆಂಬ ಅಸು ಹರಿವುತ್ತಿರಲಾಗಿ
ಬಹುಚಿತ್ತವೆಂಬ ಜನರು ನೆರೆದು
ಅರುವೆಂಬ ಹರುಗೋಲು ಕೆಟ್ಟಿದೆ
ಕುರುಹಿನ ಜಲ್ಲೆಯ ಹಿಡಿದು
ಒತ್ತುವರಿಲ್ಲದೆ ತಡಿಯಲ್ಲಿ ಕೂಗುತ್ತೈದಾರೆ
ಏಣಾಂಕಧರ ಸೋಮೇಶ್ವರಲಿಂಗವನರಿಯದೆ

೭೨೨
ಪೈರಿಗೆ ನೀರು ಬೇಕೆಂಬಲ್ಲಿ
ಉಚಿತವನರಿದು ಬಿಡಬೇಕು
ಕ್ರೀಗೆ ಅರಿವು ಬೇಕೆಂಬಲ್ಲಿ
ಉಭಯನರಿದು ಘಟಿಸಬೇಕು
ಏರಿ ಹಿಡಿವನ್ನಕ್ಕ ನೀರ ಹಿಡಿದಡೆ ಸುಖವಲ್ಲದೆ ಮೀರಿದರುಂಟೆ
ಕ್ರೀಯ ಬಿಡಲಿಲ್ಲ
ಅರಿವ ಮರೆಯಲಿಲ್ಲ
ಬೆಳೆಯ ಕೊಯಿದ ಮತ್ತೆ ಹೊಕ್ಕೆ ಕಾವಲುಂಟೆ
ಫಲವ ಹೊತ್ತ ಪೈರಿನಂತೆ
ಪೈರನೊಳಕೊಂಡ ಫಲದಂತೆ
ಅರಿವು ಆಚರಣೆಯೆಲ್ಲ ನಿಂದು
ಆಚರಣೆ ಅರಿವಿನಲ್ಲಿ ಲೇಪನಾದ ಮತ್ತೆ
ಕಾಮಭೀಮ ಜೀವಧನನೊಡೆಯನೆಂಬುದ ಭಾವಿಸಲಿಲ್ಲ

೭೨೩
ಪ್ರತಿಯಿಲ್ಲದ ಲಿಂಗದಲ್ಲಿ ಪ್ರತಿರಹಿತವಾದ ಮಹಿಮನಿಗೆ
ಅತಿಶಯವೊಂದಿಲ್ಲಾಗಿ ಸಂಸ್ಕೃತಿ ವಿಸೃತಿಗಳಿಲ್ಲ
ಸೂಕ್ಷ್ಮಾಸೂಕ್ಷ್ಮವಿಲ್ಲ ಯೋಗವಿಯೋಗವಿಲ್ಲ
ಅಭೇದ್ಯ ಚಿತ್ರಕಾಶಂಗೆ ಒಳಹೊರಗಿಲ್ಲ
ಸೌರಾಷ್ಟ್ರ ಸೋಮೇಶ್ವರಾ ನಿಮ್ಮ ಶರಣಂಗೆ

೭೨೪
ಬಂಗಾರದ ರೂಪಿದ್ದಲ್ಲದೆ ಬಣ್ಣವನವಗವಿಸದು
ಬಣ್ಣ ರಂಜನೆಯಾಗಿ ರಂಜಿಸುತ್ತಿರೆ ಎಲ್ಲರ ಕಣ್ಣಿಗೆ ಮಂಗಲ
ಇಂತೀ ಕಾಯ ಜೀವ ಜ್ಞಾನದ ಬೆಳಗು
ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗದ ಒದಗು

೭೨೫
ಬಂಗಾರವನೊರೆದು ಬಣ್ಣವ ಕಾಣಬೇಕಲ್ಲದೆ
ಬಣ್ಣವನೊರೆದು ಬಂಗಾರದ ಇರವನರಿಯಬಹುದೆ
ಜೀವವರಿದು ಜ್ಞಾನದ ಕಾಣಬೇಕಲ್ಲದೆ
ಜೀವವಳಿದು ಜ್ಞಾನಕ್ಕೆ ಉಳಿವುಂಟೆ
ಅದು ಜ್ಯೋತಿಯ ಮೇಲಣ ತಮವದೆ
ಕೆಳಗೆ ಬೆಳಗು ತುದಿಯಲ್ಲಿ ಸಮವದೆ
ತಿಳಿದು ನೋಡಿ
ಆ ಪರಿಯ ಇರವು ಜೀವಪರಮನ ಕಲೆ
ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಲಿಂಗಾ