೭೨೬
ಬಂಜೆ ಬೇನೆಯನರಿವಳೆ
ಬಲದಾಯಿ ಮುದ್ದ ಬಲ್ಲಳೆ
ನೊಂದವರ ನೋವ ನೋಯದವರೆತ್ತ ಬಲ್ಲರೊ
ಚೆನ್ನಮಲ್ಲಿಕಾರ್ಜುನಯ್ಯನಿರಿದಲಗು
ಒಡಲಲ್ಲಿ ಮುರಿದು ಹೊರಳುವೆನ್ನಳಲನು
ನೀವೆತ್ತ ಬಲ್ಲಿರೆ ಎಲೆ ತಾಯಿಗಳಿರಾ

೭೨೭
ಬಂಡಿಯ ಮೇಗಣ ಹೆಳವನಂತೆ
ಕಂಡ ಕಂಡ ಕಡೆಗೆ ಹಲುಬಿದಡೆ
ನಿಮಗೆ ಬಂದುದೇನಿರೊ
ಆ ಮಹಾಘನವರಿಯದನ್ನಕ್ಕ
ಹಾಡಿದಡಿಲ್ಲ ಹರಸಿದಡಿಲ್ಲ
ಹೇಳಿದಡಿಲ್ಲ ಕೇಳಿದಡಿಲ್ಲ
ಇವೇನ ಮಾಡಿದಡೂ
ವಾಯಕ್ಕೆ ವಾಯವೆಂದರು
ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣ

೭೨೮
ಬಂದ ಬಹುರೂಪದಲ್ಲಿ ಸಂದಿಲ್ಲದೆ ಆಟವನಾಡುತ್ತ
ಬಂದ ಬಂದವರ ಮೆಚ್ಚಿಸುತ್ತ
ಆವರವರಂದಕ್ಕೆ ಕೊಂಡಾಡಿ ಬಂದುದ ಕೈಕೊಂಡೆ
ರೇಕಣ್ಣಪ್ರಿಯ ನಾಗಿನಾಥನಲ್ಲಿ

೭೨೯
ಬಂದಿತ್ತು ದಿನ
ಬಸವಣ್ಣ ಕಲ್ಲಿಗೆ
ಚನ್ನಬಸವಣ್ಣ ಉಳುವೆಯಲ್ಲಿಗೆ
ಪ್ರಭು ಅಕ್ಕ ಕದಳಿದ್ವಾರಕ್ಕೆ
ಮಿಕ್ಕಾದ ಪ್ರಮಥರೆಲ್ಲರೂ ತಮ್ಮ ಲಕ್ಷ್ಯಕ್ಕೆ
ನಾ ತುರುವಿನ ಬೆಂಬಳಿಯಲ್ಲಿ ಹೋದ ಮರೆಯಲ್ಲಿ
ಅಡಗಿಹರೆಲ್ಲರು ಅಡಗಿದುದ ಕೇಳಿ ನಾ
ಗೋಪತಿನಾಥ ವಿಶ್ವೇಶ್ವರಲಿಂಗದಲ್ಲಿಯೆ ಉಡುಗುವೆನು

೭೩೦
ಬಂದುದ ಸಾಕೆನ್ನದೆ
ಬಾರದುದ ತಾ ಎನ್ನದೆ
ಗಡಿಗೆ ಬಟ್ಟಲು ನಮ್ಮೆಡೆಯಲ್ಲಿ ಒಡಗೂಡಿ ಸುರಿಯೆನ್ನದೆ
ಮಂತ್ರಭಿನ್ನವಾಗಿ ಮತ್ತರಿಗು ಸಂಚರಿಸದೆ
ಕೆಲಬಲದಿಂದ ಅವರಿಗೆ ಅದು ನೇಮವೆಂದೆನಿಸದೆ
ಲಿಂಗಕ್ಕೆ ಬಂದು ಸಂದುದ
ಆನಂದದಿಂದ ಸ್ವೀಕರಿಸಿ ನಿಂತುದೆ ಭರಿತಾರ್ಪಣ
ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಲ್ಲಿ

೭೩೧
ಬಡತನಕ್ಕೆ ಉಂಬುವ ಚಿಂತೆ
ಉಣಲಾರದೆ ಉಡುವ ಚಿಂತೆ
ಉಡಲಾದರೆ ಇಡುವ ಚಿಂತೆ
ಇಡಲಾದರೆ ಹೆಂಡಿರ ಚಿಂತೆ
ಹೆಂಡಿರಾದರೆ ಮಕ್ಕಳ ಚಿಂತೆ
ಮಕ್ಕಳಾದರೆ ಬದುಕಿನ ಚಿಂತೆ
ಬದುಕಾದರೆ ಕೇಡಿನ ಚಿಂತೆ
ಕೇಡಾದರೆ ಮರಣದ ಚಿಂತೆ
ಇಂತೀ ಹಲವು ಚಿಂತೆಯಲ್ಲಿ ಇಪ್ಪವರ ಕಂಡೆನು
ಶಿವನ ಚಿಂತೆಯಲ್ಲಿದ್ದವರೊಬ್ಬರನೂ ಕಾಣೆನೆಂದಾತ
ನಮ್ಮ ಅಂಬಿಗರ ಚೌಡಯ್ಯನ ನಿಜ ಶರಣನು

೭೩೨
ಬಯಕೆ ಎಂಬುದು ದೂರದ ಕೂಟ
ಬಯಸೆನೆಂಬುದು ಕೂಟದ ಸಂದು
ಈ ಉಭಯವು ಕಪಟದ ಕಣ್ಣಡವಲ್ಲದೆ ಸಹಜವಲ್ಲ
ಕೂಡಿ ಕಂಡ ಪರಿಯೆಂತು ಹೇಳಾ ಇನ್ನು ಲಿಂಗೈಕ್ಯವನು
ಕೂಪರ ಠಾವಿನಲ್ಲಿ ಪರವಶವಾದೆನೆಂಬ ಮಾತ ಮೆಚ್ಚುವನೆ
ನಮ್ಮ ಗೊಹೇಶ್ವರಲಿಂಗವು

೭೩೩
ಬಯಲ ರೂಪ ಮಾಡಬಲ್ಲಾತನೆ ಶರಣನು
ಆ ರೂಪ ಬಯಲ ಮಾಡಬಲ್ಲಾತನೆ ಲಿಂಗಾನುಭಾವಿ
ಬಯಲ ರೂಪ ಮಾಡಲರಿಯದಿದ್ದಡೆ
ಎಂತು ಶರಣನಂಬೆ
ಆ ರೂಪ ಬಯಲು ಮಾಡಲರಿಯದಿದ್ದಡೆ
ಎಂತು ಶರಣನಂಬೆ
ಆ ರೂಪ ಬಯಲು ಮಾಡಲರಿಯದಿದ್ದಡೆ
ಎಂತು ಲಿಂಗಾನುಭಾವಿಯೆಂಬೆ
ಈ ಉಭಯ ಒಂದಾಡೆ
ನಿಮ್ಮಲ್ಲಿ ತೆರಹುಂಟೆ
ಕೂಡಲಸಂಗಮದೇವಾ

೭೩೪
ಬಯಲ ಹೊಲಬಿನಲ್ಲಿ ಹುಟ್ಟಿದ ಬೆಳಗು
ಶಿಲೆ ಲೋಹ ಕಂಚುಗಳಲ್ಲಿ ಬೆಳಗಿನ ಕಳೆ ತೋರುವಂತೆ
ಎನ್ನ ಕರತಳದಲ್ಲಿ ಸ್ವಯಂಭುವಪ್ಪ ಲಿಂಗವೆ
ನಿನ್ನ ಕಳೆ ಎನ್ನ ಕಂಗಳಿಗೆ ಹೊಲಬಾಗಿ ಏಕೆ ತೋರದು
ಅದು ಎನ್ನಯ್ಯ ಜಡವೊ ನಿನ್ನಯ ಪ್ರಕೃತಿಯೊ
ಅದು ನಿನ್ನ ಬಿನ್ನಾಣದ ಗನ್ನದ ಭೇದವೊ
ಎನ್ನಲ್ಲಿ ನೀನಿಲ್ಲದ ಕಾರಣವೊ
ನಾ ನಿನ್ನಲ್ಲಿ ಸುಗುಣವಿಲ್ಲದ ಕಾರಣವೊ
ಎನಗೆ ಭಿನ್ನನಾದೆ ಎನ್ನಯ್ಯಪ್ರಿಯ ಇಮ್ಮಡಿ
ನಿಃಕಳಂಕಮಲ್ಲಿಕಾರ್ಜುನಾ
ಎನ್ನಲ್ಲಿ ನೀ ಸನ್ನದ್ಧನಾಗಿರು

೭೩೫
ಬಯಲು ಬಯಲನೆ ಬಿತ್ತಿ
ಬಯಲು ಬಯಲನೆ ಬೆಳೆದು
ಬಯಲು ಬಯಲಾಗಿ ಬಯಲಾಯಿತ್ತಯ್ಯ
ಬಯಲ ಜೀವನ
ಬಯಲ ಭಾವನೆ
ಬಯಲು ಬಯಲಾಗಿ ಬಯಲಾಯಿತ್ತಯ್ಯ
ನಿಮ್ಮ ಪೂಜಿಸಿದವರು ಮುನ್ನವೆ ಬಯಲಾದರು
ನಾ ನಿಮ್ಮ ನಂಬಿ ಬಯಲಾದೆ
ಗುಹೇಶ್ವರ

೭೩೬
ಬಯಲು ಮೂರ್ತಿಯಾಗಿ ನಿಂದನೊಬ್ಬ ಶರಣ
ಆತನ ವಿದ್ಯಾ ಬುದ್ಧಿಯಿಂದ ಹುಟ್ಟಿದಾತ ಬ್ರಹ್ಮ
ಆತನ ಶಾಂತಿ ಸೈರಣೆಯಿಂದ ಹುಟ್ಟಿದಾತ ವಿಷ್ಣು
ಆತನ ಕೋಪ ಕ್ರೋಧದಿಂದ ಹುಟ್ಟಿದಾತ ರುದ್ರ
ಈ ಮೂರು ಪೀಠವಂತಿರಲಿ
ಈ ತತ್ವತ್ರಯಂಗಳಿಗೆ ತಾನೆ ಕಾರಣವಾಗಿಪ್ಪ
ಶರಣನನಿಲವನರಿದು ಶರಣೆನುತ್ತಿದ್ದೆನು
ಕೂಡಲಚೆನ್ನಸಂಗಮದೇವಾ

೭೩೭
ಬಯಲು ಲಿಂಗವೆಂಬೆನೆ
ಬಗಿದು ನಡೆವಲ್ಲಿ ಹೋಯಿತ್ತು
ಬೆಟ್ಟ ಲಿಂಗವೆಂಬೆನೆ
ಮೆಟ್ಟಿ ನಿಂದಲ್ಲಿ ಹೋಯಿತ್ತು
ತರುಮರಾದಿಗಳು ಲಿಂಗವೆಂಬೆನೆ
ತರಿದಲ್ಲಿ ಹೋಯಿತ್ತು
ಲಿಂಗ ಜಂಗಮದ ಪಾದವೇ ಗತಿಯೆಂದು ನಂಬಿದ
ಚೆನ್ನಮಲ್ಲಿಕಾರ್ಜುನಾ
[ಸಂಗನಬಸವಣ್ಣನ ಮಾತು ಕೇಳದೆ ಕೆಟ್ಟೆನಯ್ಯಾ]

೭೩೮
ಬರಬರ ಭಕ್ತಿ ಅರೆಯಾಯಿತ್ತು ಕಾಣಿರಣ್ಣಾ
ಮೊದಲದಿನ ಹಣೆಮುಟ್ಟಿ ಮರುದಿನ ಕೈಮುಟ್ಟಿ
ಮೂರೆಂಬ ದಿನಕ್ಕೆ ತೂಕಡಿಕೆ ಕಾಣಿರಣ್ಣಾ
ಹಿಡಿದುದ ಬಿಡದಿದ್ದೆಡೆ ಕಡೆಗೆ ಚಾಚುವ
ಅಲ್ಲದಿದ್ದಡೆ ನಡುನೀರಲದ್ದುವ ನಮ್ಮ ಕೂಡಲಸಂಗಮದೇವ

೭೩೯
ಬರು ಸಠಗನ ಭಕ್ತಿ ದಿಟವೆಂದು ನಚ್ಚಲು ಬೇಡ
ಮಠದೊಳಗಣ ಬೆಕ್ಕು ಇಲಿಯ ಕಂಡು
ಪುಟನೆಗೆದಂತಾಯಿತ್ತು
ಕಾಣಾ
ರಾಮನಾಥ

೭೪೦
ಬರುವ ಮುಂದೆ ಪುರುಷನಿದ್ದೆ
ಬಂದ ಬಳಿಕ ಸ್ತ್ರೀಯಾದೆ
ಇನ್ನು ಮೇಲೆ ನಪುಂಸಕನಾದೆ
ನಮ್ಮ ಕಪಿಲಸಿದ್ಧಮಲ್ಲಿಕಾರ್ಜುನನ ಕೂಡಬೇಕೆಂದಲ್ಲಿ
ಪುರುಷನಾದೆ
ನೋಡವ್ವಾ ಎನ್ನ ಹೆತ್ತ ತಾಯೆ

೭೪೧
ಬರೆದು ಮತ್ತೆ ತೊಡೆದಡೆ
ಆಲೇಖ ಶುದ್ಧವಲ್ಲ ಎಂದೆ
ಹಿರಿದು ಮತ್ತೆ ಮರೆದಡೆ
ಆ ಅರಿವಿಂಗೆ ಭಂಗವೆಂದೆ
ಸತ್ತ ಮತ್ತೆ ಸಮುದ್ರವೂ ಸರಿ
ಒಕ್ಕುಡುತೆಯುದಕವೂ ಸರಿ
ಜಾಂಬೇಶ್ವರಾ

೭೪೨
ಬಲ್ಲನಿತ ಬಲ್ಲರಲ್ಲದೆ
ಅರಿಯದುದನೆಂತು ಬಲ್ಲರಯ್ಯ
ಅರಿವು ಸಾಮಾನ್ಯವೆ
ಅರಿಯದುದನಾರಿಗೂ ಅರಿಯಬಾರದು
ಗುಹೇಶ್ವರನೆಂಬ ಲಿಂಗವನರಿಯದಡೆರಡು
ಆರಿದಡೊಂಡೆ

೭೪೩
ಬಲ್ಲವನ ನುಡಿ ಸರ್ವವೆಲ್ಲಕ್ಕೂ ನನ್ನಿ
ಬೆಲ್ಲದ ಘಟ್ಟಿ ಸರ್ವವೆಲ್ಲಕ್ಕೂ ಮಧುರ
ಕಳವಿಲ್ಲದವನ ನುಡಿ ಸರ್ವವೆಲ್ಲಕ್ಕೂ ದಿಟ
ಹುಸಿ ಒಂದಕ್ಕೆ ದಿಟವೆರಡಕ್ಕೆ ಸಂದೇಹ ಮೂರಕ್ಕೆ ಬೀಡು
ಮೂಕೊರೆಗನ ಶುದ್ಧಿಯೇತಕ್ಕೆ
ಆತುರವೈರಿ ಮಾರೇಶ್ವರಾ

೭೪೪
ಬಲ್ಲವನಾಗಿ ಮಾತಿನ ವೈರಕ್ಕೆ ಎಲ್ಲರೊಳಗೂ ಹೋರಿ
ಕೃಪೆಯಿಲ್ಲಿದವನಾಗಿ ತತ್ಕಾಲ ಉಚಿತ ದೇಹಕ್ಕೆ ದಳ್ಳುರಿಯವನಾಗಿ
ಮಿಕ್ಕವರೆಲ್ಲರಿಗೆ ಸನ್ಮತಿಯ ಹೇಳುವ ಜಿಳ್ಳನ ನೋಡಾ
ಆತುರವೈರಿ ಮಾರೇಶ್ವರಾ

೭೪೫
ಬಲ್ಲಿದ ಹಗೆಯುವ ತೆಗೆವನ್ನಬರ
ಬಡವರ ಹರಣ ಹಾರಿ ಹೋದ ತೆರನಂತಾಯಿತ್ತು
ನೀ ಕಾಡಿ ಕಾಡಿ ನೋಡುವನ್ನಬರ
ಎನಗಿದು ವಿಧಿಯೇ ಹೇಳಾ ತಂದೆ
ಮೂರುವಾರುವನ್ನಬರ
ಎಮ್ಮೆ ಗಾಳಿಗೆ ಹಾರಿ ಹೋದ ತೆರನಂತಾಯಿತ್ತು
ಎನಗೆ ನೀನಾವ ಪರಿಯಲ್ಲಿ ಕರುಣಿಸುವೆಯಯ್ಯಾ
ಚನ್ನಮಲ್ಲಿಕಾರ್ಜುನಾ

೭೪೬
ಬಲ್ಲೆವು ಬಲ್ಲೆವೆಂದೆಂಬರು
ಬಯಲು ಭ್ರಮೆಗೆ ಬಳಲುತ್ತಿರ್ಪರು
ಹಗಲುಗತ್ತಲೆ ಹಗಲುಗತ್ತಲೆ
ಹದಿರ ನುಡಿವ ಚದುರರಿಗೆಲ್ಲಾ ಹಗಲುಗತ್ತಲೆ
ಬಲ್ಲವರನಲ್ಲೆನಿಸಿತ್ತು
ಸಿಮ್ಮಲಿಗೆಯ ಚೆನ್ನರಾಮನೆಂಬ ನಾಮದೊಡಕು

೭೪೭
ಬಸವನ ಹೆಸರಳಿಯಿತ್ತು
ಬಸವನ ಕುರುಹಳಿಯಿತ್ತು
ಬಸವನ ಭಾವವಳಿಯಿತ್ತು
ಬಸವನಮೂರ್ತಿಯ ಕರ್ಮವ ಹರಿದು
ಆನು ನಿಃಕರ್ಮಿಯಾದೆನಯ್ಯಾ
ನಿಃಕರ್ಮಿಯಾದ ಕಾರಣ ಅರಿವನರಿದು
ಪ್ರಣವಮೂರ್ತಿಯ ತಿಳಿದು
ಆನು ಬದುಕಿದೆನಯ್ಯಾ
ಸಂಗಯ್ಯಾ

೭೪೮
ಬಸವಯ್ಯಾ ಬಸವಯ್ಯಾ
ಹುಯ್ಯಲಿಲ್ಲದ ಹುಲ್ಲೆಯಾದೆಯಾ
ಬಸವಯ್ಯಾ ಬಸವಯ್ಯಾ
ಕಾಯವಿಲ್ಲದ ದೇಹಿಯಾದೆಯಾ
ಬಸವಯ್ಯಾ ಬಸವಯ್ಯಾ
ಕರ್ಮವಿರಹಿತನಾದೆಯಾ
ಸಂಗಯ್ಯನಲ್ಲಿ ನಿರ್ಮಳಮೂರ್ತಿ
ಬಸವಯ್ಯಾ

೭೪೯
ಬಸವಾ ಬಸವಾ ಎಂಬ ಶಬ್ದವಡಗಿತ್ತು
ಬಸವ ಬಸವಾಯೆಂಬ ರೂಪು ನಿರೂಪಾಯಿತ್ತು
ಬಸವನ ಕಾಯವಳಿದು ನಿರಾಕುಳವಾಗಲು
ಆನು ಬಸವಾ ಬಸವಾ ಬಸವಾಯೆಂದು
ಬಯಲಾದೆನಯ್ಯಾ ಸಂಗಯ್ಯಾ

೭೫೦
ಬಹುಜನಂಗಳೆಲ್ಲಾ ಓಲಗವಿಲ್ಲ ಹೋಗಿ
ಸಲಿಗೆವಂತರಲ್ಲಿಲ್ಲ ನಿಲ್ಲಿ
ಕಾಂತ ಸಂಬಂಧರು ಹೋಗಿ
ಲೋಕಾಂತ ಭಂಡರು ನಿಲ್ಲಿ
ಇಂತೀ ಅವರವರ ಸ್ವಸ್ಥಾನಂಗಳ ಸಲುಗೆಯನರಿದುಬಿಡುತ್ತಿದ್ದೇನೆ
ಕೂಡಲಸಂಗಮದೇವರಲ್ಲಿ ಬಸವಣ್ಣನ ಕಾಲವೇಳೆಯನರಿದು