೭೫೧
ಬಹುರೂಪಕ್ಕೆ ಭಾಷಾಂಗವಿಲ್ಲದಿರೆ ಮೆಚ್ಚದು ಜಗ
ಗುರುಚರರೂಪ ತಾಳ್ದಲ್ಲಿ ಗುರುವಿಂಗೆ ಗಂಭೀರತೆ ಚರಕ್ಕೆ ನಿಸ್ಪೃಹತ್ವ
ಇಂತೀ ಉಭಯಮೂರ್ತಿ ಅಪೇಕ್ಷೆವಿರಹಿತವಾಗಿ ನಿಂದುದು
ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವು ತಾನೆ

೭೫೨
ಬಹುರೂಪು ತೊಟ್ಟಾಡಿದ ದೇಹ ಒಂದೇ
ವೇಷ ರೂಪಿನ ಪಲ್ಲಟವಲ್ಲದೆ ವೇಷಕ್ಕೆ ತಕ್ಕ ಭಾಷೆ
ಭಾಷೆಗೆ ತಕ್ಕ ವೇಷ ಅರಿವು ಆಚರಣೆ ಒಂದಾಗಬೇಕು
ಬಂಕೇಶ್ವರಲಿಂಗವನರಿವುದಕ್ಕೆ

೭೫೩
ಬಳ್ಳಿ ಮರನ ಸುತ್ತಿ ಅದು ಸಾಲದೆ ಮತ್ತೊಂದಕ್ಕೆ ಅಲ್ಲಾಡುವಂತೆ
ನಿಲ್ಲದು ಮನ ಕ್ರೀಯಲ್ಲಿ
ಸಲ್ಲದು ಮನ ನಿಶ್ಚಯದಲ್ಲಿ
ಬೆಲ್ಲವ ಮೆಲಿದ ಕೋಡಗದಂತೆ
ಕಲ್ಲಿನೊಳಗಾದ ಮತ್ಸ್ಯದಂತೆ
ಅಲ್ಲಿಗೆ ಹೊಲಬು ಕಾಣಬೆ
ಇಲ್ಲಿಗೆ ನೆಲೆಯ ಕಾಣದೆ ತಲ್ಲಣಗೊಳ್ಳುತ್ತಿದ್ದೇನೆ
ಎನ್ನ ಭಾವದಲ್ಲಿ ನೀನಿರು
ನಿಃಕಳಂಕ ಮಲ್ಲಿಕಾರ್ಜುನಾ

೭೫೪
ಬಾಹಾಗ ಕೊಂಡುಬಂದ ಪ್ರಾಪ್ತಿಯಲ್ಲದೆ
ಬೇರೊಂದ ಗಳಿಸಲಿಲ್ಲ
ಬೇರೊಂದ ಕೆಡಿಸಲಿಲ್ಲ
ಬಂದುದು ನಿಂದುದು
ಮಾರಯ್ಯಪ್ರಿಯ ಅಮಲೇಶ್ವರಲಿಂಗ ಕೊಟ್ಟಲ್ಲದಿಲ್ಲ

೭೫೫
ಬಿಟ್ಟು ಮಹೇಶನಾದೆನೆಂಬುದು ಆರುಹಿನ ಕೇಡು
ಹಿಡಿದು ಭಕ್ತನಾದೆನೆಂಬುದು ನಿಜದ ಕೇಡು
ಬಿಡುವುದು ಹಿಡಿವುದು ಮನಃಕಲ್ಪಿತವಲ್ಲದೆ
ಕಲ್ಪನಾರಹಿತ ಭಕ್ತಮಹೇಶರಲ್ಲಿಪ್ಪುದೇನಯ್ಯಾ
ಕಪಿಲಸಿದ್ಧಮಲ್ಲಿಕಾರ್ಜುನ

೭೫೬
ಬಿಟ್ಟೆನೆಂದಡೆ ಬಿಡದೀ ಮಾಯೆ
ಬಿಡದಿದ್ದಡೆ ಬೆಂಬತ್ತಿತ್ತು ಮಾಯೆ
ಯೋಗಿಗೆ ಯೋಗಿಣಿಯಾಯಿತ್ತು ಮಾಯೆ
ಸವಣಂಗೆ ಸವಣಿಯಾಯಿತ್ತು ಮಾಯೆ
ಯತಿಗೆ ಪರಾಕಿಯಾಯಿತ್ತು ಮಾಯೆ
ನಿನ್ನ ಮಾಯೆಗೆ ನಾನಂಜುವಳಲ್ಲ
ಚೆನ್ನಮಲ್ಲಿಕಾರ್ಜುನದೇವಾ
ನಿಮ್ಮಾಣೆ

೭೫೭
ಬಿಡುವುದಕ್ಕೆ ಮುನ್ನವೆ ಮೊನೆ ಮುಂಚಿದಂತಿರಬೇಕು
ಅಡಿ ಏರುವುದಕ್ಕೆ ಮುನ್ನವೆ ಆ ಮೊನೆಯ ಜಾರಿ
ಮತ್ತೆ ತಾನಡಿಯೇರಿ ಮೀರಿ ಮುಂಚಿದಂತಿರಬೇಕು
ನೀನೆಂಬನ್ನಕ್ಕ ಲಕ್ಷ್ಯದಲ್ಲಿ ಆಲಕ್ಷ್ಯವಾಗಬೇಕು
ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನ
ಎಂಬುದಕ್ಕೆ ಮುನ್ನವೆ

೭೫೮
ಬಿತ್ತು ಬೆಳೆಯಿತ್ತು
ಕೆಯ್ಯ ಕೊಯ್ಯಿತ್ತು
ಗೂಡು ಮುರಿಯಿತ್ತು
ಕುತ್ತುರಿಯೊಟ್ಟಿತ್ತು ಒಕ್ಕಿತ್ತು ತೂರಿತ್ತು ಅಳೆಯಿತ್ತು
ಸಲಗೆ ತುಂಬಿತ್ತು
ಕೂಡಲಸಂಗಮದೇವಯ್ಯಾ
ಮೇಟಿ ಕಿತ್ತಿತ್ತು ಕಣ ಹಾಳಾಯಿತ್ತಯ್ಯಾ

೭೫೯
ಬಿದಿರಲಂದಣವಕ್ಕು
ಬಿದಿರೆ ಸತ್ತಿಗೆಯಕ್ಕು
ಬಿದಿರಲ್ಲಿ ಗುಡಿಯು ಗೂಡಾರವಕ್ಕು
ಬಿದಿರಲ್ಲಿ ಸಕಲಸಂಪದವೆಲ್ಲವು
ಬಿದಿರದವರ ಮೆಚ್ಚ ಕೂಡಲಸಂಗಮದೇವ

೭೬೦
ಬಿರುಗಾಳಿ ಬೀಸಿ ಮರ ಮುರಿವಂತಹ ಸುಳಿಹ ಸುಳಿಯದೆ
ತಂಗಾಳಿ ಪರಿಮಳದೊಡಗೂಡಿ ಸುಳಿವಂತೆ ಸುಳಿಯಬೇಕು
ಸುಳಿದಡೆ ನೆಟ್ಟನೆ ಜಂಗಮವಾಗಿ ಸುಳಿಯಬೇಕು
ನಿಂದರೆ ನೆಟ್ಟನೆ ಭಕ್ತನಾಗಿ ನಿಲಬೇಕು
ಸುಳಿದು ಜಂಗಮವಾಗಲರಿಯದ
ನಿಂದು ಭಕ್ತರಾಗಲರಿಯದ
ಉಭಯ ಭ್ರಷ್ಟರನೇನೆಂಬೆ
ಗುಹೇಶ್ವರ

೭೬೧
ಬಿಸಿಲ ಕಹರು ಮಂಜಿನ ಮುಂಡಿಗೆಯ ನೆಟ್ಟು
ಮನೆ ಒಲೆಯದಂತೆ ಅನಲನ ತೊಲೆಯ ಹಾಕಿ ಮಳೆಯ ಗಳು ಬೀಸಿ ಕೆಂಡದ ಹಂಜರಗಟ್ಟು ಕಟ್ಟಿ
ಹಿಂಡುಗಟ್ಟಿಗೆ ಗಳುವಿನ ಸಂದಿಯಲ್ಲಿ ಅಡಗಿತ್ತು
ಅನಿಲನ ಹುಲ್ಲು ಹೊದಿಸಿ ಮನೆ ಹೊಲಬಾಯಿತ್ತು
ನೆಲಗಟ್ಟು ಶುದ್ಧವಿಲ್ಲಾಯೆಂದು
ಗೋರಕ್ಷಪಾಲಕ ಮಹಾಪ್ರಭು ಸಿದ್ಧಸೋಮನಾಥ ಲಿಂಗವು
ಆ ಮನೆಗೆ ಒಕ್ಕಲು ಬಾರ

೭೬೨
ಬಿಸಿಲೆಂಬ ಗುರುವಿಂಗೆ ನೆಳಲೆಂಬ ಶಿಷ್ಯ
ನಿರಾಳಲಿಂಗಕ್ಕೆ ಬಯಲೆ ಸೆಜ್ಜೆ
ವಾಯವೆ ಶಿವದಾರ
ಬೆಳಗೆ ಸಿಂಹಾಸನ
ಅತ್ತಲಿತ್ತ ಚಿತ್ತವ ಹರಿಯಲೀಯದೆ
ಮಜ್ಜನಕ್ಕೆರೆದು ಸುಖಿಯಾದೆ
ಗುಹೇಶ್ವರ

೭೬೩
ಬೀಜವ ಕಳೆದು ತರು ಬೆಳೆದಂತೆ
ತರುವ ಕಳೆದು ಬೀಜ ಆ ತರುವಿಂಗೆ ಕುರುಹಾದಂತೆ
ಪರಮ ಜೀವನ ಕಳೆದು
ಆ ಜೀವಕ್ಕೆ ತಾ ಪರಮನೆಂಬ ಪರಿಭ್ರಮಣವ ಕಳೆದು
ಪರಶಕ್ತಿಸಮೇತವಾದಲ್ಲಿ
ಮರದಲ್ಲಿ ಹುಟ್ಟಿದ ಕಿಚ್ಚು
ಮರ ನಷ್ಟವಾಗಿ ತಾ ನಷ್ಟವಾದಂತೆ
ಅರಿದ ಅರಿವು ಕುರುಹಿನಲ್ಲಿ ಪರಿಹರಿಸಿದ ಮತ್ತೆ
ತೆರೆ ದರುಶನ ಉಭಯವಡಗಿತ್ತು
ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವನರಿದಲ್ಲಿ

೭೬೪
ಬೀಜವಿಲ್ಲದೆ ಬೆಳೆವುಂಟೆ
ಅಯ್ಯಾ
ನಾದವಿಲ್ಲದೆ ಶಬ್ದವುಂಟೆ
ಅಯ್ಯಾ
ದೃಷ್ಟಿಯಿಲ್ಲದ ಕಳೆ ಉಂಟೆ
ಅಯ್ಯಾ
ಅಂಗಸಹಿತವಾಗಿ ಸರ್ವಸಂಗವನರಿಯಬೇಕಲ್ಲದೆ
ನಿರಂಗ ಅಂಗದಲ್ಲಿ ಹೊಕ್ಕು
ಸರ್ವಭೋಗಂಗಳ ಕಾಬುದಕ್ಕೆ ಇದೇ ದೃಷ್ಟ
ಬಂಗಾರದ ಒಡಲಿನಲ್ಲಿ ಬಣ್ಣ ನಿಂದು ತಿಕ್ಕವಟ್ಟಕ್ಕೆ ಬಾಹಂತೆ
ಆತ್ಮನ ದೃಷ್ಟನ ಕಂಡು ಮತ್ತೆ ಆಧ್ಯಾತ್ಮವೆನಲೇಕೆ
ಘಟದ ಮಧ್ಯದಲ್ಲಿ ನಿಂದು ನುಡಿವುದೆ ಕ್ರೀಯೆಂದೆ
ಸದಾಶಿವಮೂರ್ತಿಲಿಂಗವನರಿವುದಕ್ಕೆ

೭೬೫
ಬೆಟ್ಟಕ್ಕೆ ಚಳಿಯಾದಡೆ
ಏನ ಹೊದಿಸುವರಯ್ಯ
ಬಯಲು ಬತ್ತಲೆಯಿದ್ದರೆ
ಏನನುಡಿಸುವರಯ್ಯ
ಭಕ್ತನು ಭವಿಯಾದಡೆ
ಏನನುಪಮಿಸುವೆನಯ್ಯ
ಗುಹೇಶ್ವರ

೭೬೬
ಬೆಟ್ಟಕ್ಕೆ ಬೆಳ್ಳಾರ ಸುತ್ತಿತಯ್ಯಾ
ಪಾಪದ ಬಲೆಯ ತಂದು ಮುಂದೆ ಒಡ್ಡಿದರಯ್ಯಾ
ಬೇಟೆಕಾರನು ಮೃಗವನಟ್ಟಿ ಬರಲು
ಮೃಗವು ಗೋರಿಗೊಳಗಾಗದಯ್ಯಾ
ಹರನೊಡ್ಡಿದ ಬಲೆಯಲ್ಲಿ ಸಿಲುಕಿದ ಮೃಗವು
ಕೂಡಲಸಂಗಮದೇವಂಗೆ ಓಗರವಾಯಿತ್ತು

೭೬೭
ಬೆಟ್ಟಕ್ಕೆ ಸಾರವಿಲ್ಲೆಂಬರು
ತರುಗಳು ಹುಟ್ಟುವ ಪರಿ ಇನ್ನೆಂತಯ್ಯಾ
ಇದ್ದಲಿಗೆ ರಸವಿಲ್ಲೆಂಬರು
ಕಬ್ಬುನ ಕರಗುವ ಪರಿ ಇನ್ನೆಂತಯ್ಯಾ
ಎನಗೆ ಕಾಯವಿಲ್ಲೆಂಬರು
ಚೆನ್ನಮಲ್ಲಿಕಾರ್ಜುನನೊಲಿವ ಪರಿ ಇನ್ನೆಂತಯ್ಯಾ

೭೬೮
ಬೆಟ್ಟದ ಮೇಲೊಂದು ಮನೆಯ ಮಾಡಿ
ಮೃಗಗಳಿಗಂಜಿದಡೆಂತಯ್ಯಾ
ಸಮುದ್ರದ ತಡಿಯಲೊಂದು ಮನೆಯ ಮಾಡಿ
ನೊರೆ ತೆರೆಗಳಿಗಂಜಿದಡೆಂತಯ್ಯಾ
ಸಂತೆಯೊಳಗೊಂದು ಮನೆಯ ಮಾಡಿ
ಶಬ್ದಕ್ಕೆ ನಾಚಿದಡೆಂತಯ್ಯಾ
ಚೆನ್ನಮಲ್ಲಿಕಾರ್ಜುನದೇವ ಕೇಳಯ್ಯಾ
ಲೋಕದೊಳಗೆ ಹುಟ್ಟಿದ ಬಳಿಕ
ಸ್ತುತಿನಿಂದೆಗಳು ಬಂದಡೆ
ಮನದಲ್ಲಿ ಕೋಪವ ತಾಳದೆ
ಸಮಾಧಾನಿಯಾಗಿರಬೇಕು

೭೬೯
ಬೆಲ್ಲವ ತಿಂದ ಕೋಡಗದಂತೆ
ಸಿಹಿಯ ನೆನೆಯದಿರಾ ಮನವೆ
ಕಬ್ಬ ತಿಂದ ನರಿಯಂತೆ
ಹಿಂದಕ್ಕೆಳಸದಿರಾ ಮನವೆ
ಗಗನವನಡರಿದ ಕಾಗೆಯಂತೆ
ದೆಸೆದೆಸೆಗೆ ಹಂಬಲಿಸದಿರಾ ಮನವೆ
ಕೂಡಲಸಂಗನ ಶರಣರ ಕಂಡು
ಲಿಂಗವೆಂದೆ ನಂಬು ಮನವೆ

೭೭೦
ಬೆವಸಾಯವ ಮಾಡಿ
ಮನೆಯ ಬೀಯಕ್ಕೆ ಬತ್ತವಿಲ್ಲದಿದ್ದರೆ
ಆ ಬೆವಸಾಯದ ಘೋರವೇತಕಯ್ಯ
ಕ್ರಯವಿಕ್ರಯದ ಘೋರವೇತಕಯ್ಯ
ಒಡಯನನೋಲೈಸಿ
ತನುವಿಂಗೆ ಅಷ್ಟಭೋಗವ ಪಡೆಯದಿದ್ದರೆ
ಆ ಓಲಗದ ಘೋರವೇತಕಯ್ಯ
ಭಕ್ತನಾಗಿ ಭವಂನಾಸ್ತಿಯಾಗದಿದ್ದರೆ
ಆ ಉಪದೇಶವ ಕೊಟ್ಟ ಗುರು
ಕೊಂಡ ಶಿಷ್ಯ
ಇವರಿಬ್ಬರ ಮನೆಯಲ್ಲಿ ಮಾರಿ ಹೊಗಲಿ
ಗುಹೇಶ್ವರಲಿಂಗವತ್ತಲೆ ಹೋಗಲಿ

೭೭೧
ಬೇಕೆನಲಾಗದು ಶರಣಂಗೆ
ಬೇಡೆನಲಾಗದು ಶರಣಂಗೆ
ಲಿಂಗವಶದಿಂದ ಬಂದುದ ಪತಿಕರಿಸದಿರ್ದಡೆ
ಮಹಾಘನವು ಅವಗವಿಸದು ನೋಡಾ
ಅದೆಂತೆಂದಡೆ
ಅವ್ರತ ಸುವ್ರ್ತಶ್ಚೈವ ವೇಶ್ಯಾ ದಿವ್ಯಾನ್ನಭೂಷಣಂ
ಅಕಲ್ಪಿತಂಚ ಭೋಗಾನಾಂ ಸರ್ವಂ ಲಿಂಗಸ್ಯ ಪ್ರೇರಣಂ
ಎಂದುದಾಗಿ
ಕೂಡಲಚೆನ್ನಸಂಗಯ್ಯಾ ನಿಮ್ಮ ಶರಣರ
ಪರದ್ದಾರಿಗಳೆಂದು ನುಡಿದವರಿಗೆ ನಾಯಕನರಕವಯ್ಯಾ

೭೭೨
ಬ್ರಹ್ಮದ ಮಾತನಾಡಿ
ಕನ್ನೆಯರ ಕಾಲದೆಸೆಯಲಿ ಕುಳಿತು
ಪರಬೊಮ್ಮದ ಮಾತು
ಅಲ್ಲಿಯೆ ನಿಂದಿತ್ತೆಂದನಂಬಿಗ ಚವುಡಯ್ಯ

೭೭೩
ಭಕ್ತಂಗೆ ಬಡತನವುಂಟೆ
ನಿತ್ಯಂಗೆ ಮರಣವುಂಟೆ
ಭಕ್ತರು ಬಡವರೆಂದು
ಮತ್ತೊಂದ ಕೊಟ್ಟೆಹೆನೆಂದಡೆ
ಮಾರಯ್ಯಪ್ರಿಯ ಅಮಲೇಶ್ವರಲಿಂಗವು ಸತ್ತಂದಿಗಲ್ಲದೆ
ಬಡತನವಿಲ್ಲ

೭೭೪
ಭಕ್ತಂಗೆ ಬೇಡದ ಭಾಷೆ
ನಿನಗೆ ಕೊಡದ ಭಾಷೆ
ಭಕ್ತಂಗೆ ಓಡದ ಭಾಷೆ
ನಿನಗೆ ಕಾಡುವ ಭಾಷೆ
ಭಕ್ತಂಗೆ ಸತ್ಯದ ಬಲ
ನಿನಗೆ ಶಕ್ತಿಯ ಬಲ
ಇಬ್ಬರ ಗೆಲ್ಲ ಸೋಲಕ್ಕೆ ಕಡೆಯಿಲ್ಲ
ಈ ಇಬ್ಬರಿಗೆಯೂ ಒಡೆಯರಿಲ್ಲದ ಲೆಂಕ
ಇನ್ನು ಭಕ್ತನು ಭಕ್ತಿಯ ಛಲವ ಬಿಡನಾಗಿ
ಭಕ್ತ ಸೋತಡೆ ಭಕ್ತನದೆ ಗೆಲುವು
ಭಕ್ತ ಗೆದ್ದಡೆಂತು ಗೆಲುವು
ಇದ ನೀನೆ ವಿಚಾರಿಸಿಕೊಳ್ಳಾ
ಭಕ್ತದೇಹಿಕದೇವ ಸಕಳೇಶ್ವರಾ

೭೭೫
ಭಕ್ತರ ಕಂಡಡೆ ಬೋಳರಪ್ಪಿರಯ್ಯಾ
ಸವಣರ ಕಂಡಡೆ ಬತ್ತಲೆಯಪ್ಪಿರಯ್ಯಾ
ಹಾರುವರ ಕಂಡಡೆ ಹರಿನಾಮವೆಂಬಿರಯ್ಯಾ
ಅವರವರ ಕಂಡಡೆ ಅವರವರಂತೆ
ಸೂಳೆಗೆ ಹುಟ್ಟಿದವರ ತೋರದಿರಯ್ಯಾ
ಕೂಡಲಸಂಗಯ್ಯನ ಪೂಜಿಸಿ ಅನ್ಯದೈವಂಗಳಿಗೆರಗಿ
ಭಕ್ತರೆನಿಸಿಕೊಂಬ ಅಜ್ಞಾನಿಗಳ ನಾನೇನೆಂಬೆನಯ್ಯಾ