೭೬
ಅಯ್ಯಾ ಮರದೊಳಗಣ ಕಿಚ್ಚು ಮರನ ಸುಡುತ್ತಿದಿತ್ತಯ್ಯಾ
ಮರ ಬೆಂದು ನಿಂದುರಿಯಿತ್ತು ಮಣ್ಣು ಜರಿದು ಬಿದಿತ್ತು
ಉರಿ ಹೊಗೆ ನಂದಿತ್ತು ಸ್ವಯಂಪ್ರಕಾಶವಾಗಿಪ್ಪ ಉರಿ ಉಳಿಯಿತ್ತು
ಆ ಉರಿ ಬಂದು ಎನ್ನ ಕರಸ್ಥಲದಲ್ಲಡಗಿತ್ತು
ಇದ ಕಂಡು ನಾ ಬೆರಗಾಗಿ ನೋಡುತ್ತಿದೆನಯ್ಯಾ
ಬಸವಪ್ರಿಯ ಕೂಡಲಚೆನ್ನಸಂಗಮದೇವಾ

೭೭
ಅರಲುಗೊಂಡು ಕೆರೆಗೆ
ತೊರೆಬಂದು ಹಾಯ್ದಂತಾಯಿತ್ತು
ಬರಲುಗೊಂಡ ಸಸಿಗೆ
ಮಳೆ ಸುರಿದಂತಾಯಿತ್ತು ನೋಡಾ
ಇಂದೆನಗೆ ಇಹದ ಸುಖ ಪರದ ಗತಿ
ನಡೆದು ಬಂದಂತಾಯಿತ್ತು ನೋಡಾ
ಎನಗೆ ಚೆನ್ನಮಲ್ಲಿಕಾರ್ಜುನಯ್ಯಾ
ಗುರುಪಾದವ ಕಂಡು ಧನ್ಯಳಾದೆ ನೋಡಾ

೭೮
ಅರಸಿನ ಭಕ್ತಿ ಅಹಂಕಾರದಲ್ಲಿ ಹೋಯಿತ್ತು
ವೇಶಿಯ ಭಕ್ತಿ ಎಂಜಲ ತಿಂದಲ್ಲಿ ಹೋಯಿತ್ತು
ಬ್ರಾಹ್ಮಣನ ಭಕ್ತಿ ಮುಟ್ಟುತಟ್ಟಿನಲ್ಲಿ ಹೋಯಿತ್ತು
ಶೀಲವಂತನ ಭಕ್ತಿ ಪ್ರಪಂಚಿನಲ್ಲಿ ಹೋಯಿತ್ತು
ಸೆಟ್ಟಿಯ ಭಕ್ತಿ ಕುಟಿಲವ್ಯಾಪಾರದಲ್ಲಿ ಹೋಯಿತ್ತು
ಇಂತಿವರ ಭಕ್ತಿಗೆ ಊರಿಂದ ಹೊರಗಣ ಡೊಂಬನೆ ಸಾಕ್ಷಿ
ಕಲಿದೇವರದೇವಾ

೭೯
ಅರಸು ಮುನಿದಡೆ ನಾಡೊಳಗಿರಬಾರದಯ್ಯಾ
ಗಂಡ ಮುನಿದಡೆ ಮನೆಯೊಳಗೆ ಇರಬಾರದಯ್ಯಾ
ಕೂಡಲಸಂಗಮದೇವಾ
ಜಂಗಮ ಮುನಿದಡೆ ನಾನೆಂತು ಬದುಕುವೆ

೮೦
ಅರಸು ವಿಚಾರ ಸಿರಿಯು ಶೃಂಘರ ಸ್ಥಿರವಲ್ಲ ಮಾನವಾ
ಕೆಟ್ಟಿತ್ತು ಕಲ್ಲಾಣ ಹಾಳಾಯಿತ್ತು ನೋಡಾ
ಒಬ್ಬ ಜಂಗಮದಭಿಮಾನದಿಂದ
ಚಾಳುಕ್ಯರಾಯನ ಆಳಿಕೆ ತೆಗೆಯಿತ್ತು
ಸಂದಿತ್ತು ಕೂಡಲಸಂಗಮದೇವಾ ನಿಮ್ಮ ಕವಳಿಗೆಗೆ

೮೧
ಅರಿದರಿದು ಅರಿವು ಬಂಜೆಯಾಯಿತ್ತು
ಮರೆಮರೆದು ಮರಹು ಬಂಜೆಯಾಯಿತ್ತು
ಗುಹೇಶ್ವರನೆಂಬ ಶಬ್ದ ಸಿನೆಬಂಜೆಯಾಯಿತ್ತು

೮೨
ಅರಿದರಿದು ನಿಮ್ಮ ನೆನೆವ ಪರಿಕರ ಹೊಸತು
ಕುರುಹುಗೆಟ್ಟವನ ಬಂದ ಬಟ್ಟೆಯಲ್ಲಿ ಬಾರದೆ ಹೋದವನ
ಕಂಗಳ ಉಂಡವನ ಮನದಲ್ಲಿ ದಣಿದವನ
ಕಿಚ್ಚಿಲ್ಲದೆ ಬೆಂದ ಅಚ್ಚಲಿಂಗೈಕ್ಯನ ಕೈಯಿಲ್ಲದೆ ಕೊಂದವನ
ಒಡಲಿಲ್ಲದವಗ್ರಹಿಸಿದ ನಮ್ಮ ಗೋಗೇಶ್ವರನಲ್ಲಮನ

೮೩
ಅರಿದಹೆನೆಂಬನ್ನರ ಅಸಗ ನೀರಡಸಿ ಸತ್ತಂತಾಯಿತ್ತು
ಕಟ್ಟೋಗರವ ಹೊತ್ತು ಉಂಡೆಹೆ ಉಂಡೆಹೆನೆಂದು
ಆಪ್ಯಾಯನವಡಸಿ ಸತ್ತಂತಾಯಿತ್ತು
ಅರಿದೆಹೆನೆಂದು ಕೇಳಿಹೆನೆಂಬನ್ನಬರ
ಆತನು ಶಿಲೆಯ ರೇಖೆಯೆ ಬಯಲ ಬ್ರಹ್ಮವೇ
ತಾನಳಿವುದಕ್ಕೆ ಮುನ್ನವೆ ಅರಿದು ಕೂಡಬೇಕೆಂದನಂಬಿಗ ಚೌಡಯ್ಯ

೮೪
ಅರಿದು ಚುಚ್ಚುವರೆಲ್ಲರೂ ದನದಟ್ಟೆ
ಮರೆದು ಚುಚ್ಚುವರೆಲ್ಲರೂ ದನದಟ್ಟೆ
ನಾ ಚುಚ್ಚುವುದೆಲ್ಲ ಸತ್ತ ಜೀವದನದಟ್ಟೆ
ಅಟ್ಟೆಯ ಕೊಯ್ದು ಮೆಟ್ಟಿಸಿದ ಸತ್ಯರಿಗೆಲ್ಲಕ್ಕೂ
ಎನಗೆ ಬಟ್ಟಬಯಲ ತೋರಬೇಕೆಂದು
ನಿಮ್ಮ ಬಟ್ಟೆಯಲ್ಲಿ ನೀವೆ ಹೋಗಿ
ಎನ್ನ ಬಟ್ಟೆ ಕಾಮಧೂಮ ಧೂಳೇಶ್ವರನ ಬಟ್ಟೆಯೇ ಸಾಕು

೮೫
ಅರಿದೆನೆಂದಡೆ ಅರಿಯಬಾರದು
ನೋಡಾ ಘನಕ್ಕೆ ಘನ ತಾನೆ ನೋಡಾ
ಚೆನ್ನಮಲ್ಲಿಕಾರ್ಜುನನ ನಿರ್ಣಯವಿಲ್ಲದೆ ಸೋತೆನು

೮೬
ಅರಿದೊಡೆ ಶರಣ ಮರೆದೊಡೆ ಮಾನವ
ಪಾತಕನು ಹೊಲೆಯನು ನಾನೇತಕ್ಕೆ ಬಾತೇ
ಹೊತ್ತಿಂಗೊಂದೊಂದು ಪರಿಯ ಗೋಸುಂಬೆಯಂತೆ
ಈಶನ ಶರಣರ ಕಂಡುದಾಸೀನವ ಮಾಡುವ
ದಾಸೋಹವನರಿಯದ ದೂಷಕನು ನಾನಯ್ಯ
ಏಸು ಬುದ್ಧಿಯ ಹೇಳಿ ಬೇಸತ್ತೆನೀ ಮನಕೆ
ಈಶ ನೀ ಸಲಹಯ್ಯಾ ಉರಿಲಿಂಗತಂದೆ

೮೭
ಅರಿಯದ ಗುರು ಅರಿಯದ ಶಿಷ್ಯಂಗೆ
ಅನುಗ್ರಹವ ಮಾಡಿದಡೇನಪ್ಪುದೆಲವೋ
ಅಂಧಕನ ಕೈಯ ಅಂಧಕ ಹಿಡಿದಂತೆ
ಮುಂದೇನಪ್ಪುದು ಹೇಳೆಲೆ ಮರುಳೆ
ಬರುಮಾತಿನ ರಂಜನೆಯನಾಡದಿರು
ಸಿಮ್ಮಲಿಗೆಯ ಚೆನ್ನರಾಮನೆಂಬ ಲಿಂಗವು
ಹುಸಿಯ ಹಸರದವನಲ್ಲ

೮೮
ಅರಿಯದಂತಿರಲೊಲ್ಲದೆ ಅರದು ಕುರುಹಾದೆಯಲ್ಲಾ
ಹಿರಿಯರೆಲ್ಲರು ನೆರೆದು ನಿನ್ನ ಕಟ್ಟಿದರೆ ಅಯ್ಯ
ಉಪಚಾರಕ್ಕೋಸುಗರ
ಸಾವಿಂಗೆ ಸಂಗಡವದೆಯಲ್ಲಾ ಗುಹೇಶ್ವರ

೮೯
ಅರಿವ ಕತ್ತಿ ಹರಣದ ಇರಿವ ಬಲ್ಲುದೆ
ಬಿರುನುಡಿಯ ನುಡಿವವ ಮಾನ್ಯರ ಮಾನದ ಮನ್ನಣೆಯ ಬಲ್ಲನೆ
ಹೆತ್ತವರಿಗೆ ಕೂಸು ಹುಚ್ಚಾದರೆ
ಅದರರ್ತಿ ಹೆತ್ತವರಿಗಲ್ಲದೆ ಮಿಕ್ಕಾದವರಿಗುಂಟೆ
ನಿಃಕಳಂಕ ಮಲ್ಲಿಕಾರ್ಜುನಾ

೯೦
ಅರಿವಣಲೊಳಗಿಕ್ಕಿ ಅಗಿವುತ್ತಿದೆ ಮರ್ತ್ಯಲೋಕವೆಲ್ಲವು
ಅರಿವು ಉಳಿಯಲರಿಯದೆ ಕೆಟ್ಟಿತ್ತು ಲೋಕವೆಲ್ಲವು
ನಾನೆಂತು ಬದುಕುವೆನಣ್ಣಾ
ಕತ್ತಲೆ ಬೆಳಗ ಕಾಂಬ ಸಂದೇಹಿ ನಾನೊಬ್ಬಳು
ಎನ್ನ ಕಣ್ಣ ಕಟ್ಟಿ ಕನ್ನಡಿಯ ತೋರಿತ್ತೊ ಅಜಗಣ್ಣಾ ನಿನ್ನ ಯೋಗ

೯೧
ಅರಿವನಾಹಾರಗೊಂಬುದೆ ಪರಮಸುಖ
ಮರಲೆಯ ತೆರಹುಂಟೆ
ಶಿವೈಕ್ಯಂಗೆ ಇತರ ಸುಖವೆ ವ್ಯವಹಾರ
ಅರುಹಿರಿಯರ ಸಂಗಸುಖವೆ ಆಹಾರ
ಶ್ರುತಿಯಿಂದತಿಶಯ ಆ ಚರತನ ಮನವ
ಮಹಂತ ಸಕಳೇಶ್ವರದೇವ ತಾನೆ ಬಲ್ಲ

೯೨
ಅರಿವಿನ ಕುರುಹಿದೇನೋ
ಒಳಗೆ ಅನಿಮಿಷನಂದಿನಾಥನಿರಲು
ಪೂಜಿಸುವ ಭಕ್ತನಾರೋ
ಪೂಜೆಗೊಂಬ ದೇವನಾರೋ
ಮುಂದು ಹಿಂದು
ಹಿಂದು ಮುಂದಾದರೆ
ಗುಹೇಶ್ವರ ನೀನು ನಾನು
ನಾನು ನೀನಾದರೆ

೯೩
ಅರಿವಿನ ಬಲದಿಂದ ಕೆಲಬರು ಅರಿಯದವರ ಗೆಲಬೇಕೆಂದು
ಬರುಮಾತಿನ ಉಯ್ಯಲೆಯನೇರಿ
ಒದೆದು ಒರಲಿ ಕೆಡೆವ ದರಿದ್ರರು
ಅರಿವು ತೋರದೆ ಇರಬೇಕು
ಕಾಯನಿರ್ಣಯ ನಿಃಪತಿಯೆಂಬಾತನು
ಸೋಂಕಿನ ಸೋಜಿಗವೆಂಬ ಪರಿಣತೆ ಫಲಿಸಬೇಕು
ಅರಿವು ತೊರೆದ ಎರಡೆಂಬ ಭಿನ್ನವೇಷವ ತೊಟ್ಟು
ಡಂಬಕವ ನುಡಿದಹೆವೆಂಬ ಉದ್ದಂಡರ
ಗುಹೇಶ್ವರ ಕಂಡಡೆ ಕನಲುವ

೯೪
ಅರಿವಿನರಿತವ ಕೆಡಿಸಿತ್ತು ಬಡತನವೆಂಬ ರಾಹು
ಉಳ್ಳವನ ಉಳುವೆಯ ಕೆಡಿಸಿತ್ತು ಮೋಹವೆಂಬ ರಾಹು
ಕಾಬವನ ಕಾಣಿಕೆಯ ಕೆಡಿಸಿತ್ತು ಕಾಮವೆಂಬ ಕತ್ತಲೆ
ಎನ್ನ ಮನದ ಭಯಕ್ಕಂಜಿ ನಿಮ್ಮ ಮೊರೆಹೊಕ್ಕೆ
ಕೂಡಲಸಂಗಮದೇವಾ

೯೫
ಅರಿವು ಅರಿವೆನುತ್ತಿಪ್ಪಿರಿ ಅರಿವು ಸಾಮಾನ್ಯವೆ
ಹಿಂದಣ ಹೆಜ್ಜೆಯ ನೊಡಿ ಕಂಡಲ್ಲದೆ
ನಿಂದ ಹೆಜ್ಜೆಯನರಿಯಬಾರದು
ಮುಂದಣ ಹೆಜ್ಜೆಯಳಿದಲ್ಲದೆ
ಒಂದು ಪಾದ ನೆಲೆಗೊಳ್ಳದು
ನೆಲನ ಬಿಟ್ಟು ಆಕಾಶದಲ್ಲಿ ನಿಂದು
ಮುಗಿಲೊಳಗೆ ಮಿಂಚಿಲ್ಲದೆ ತಾನಾಗಬಾರದು
ಗುಹೇಶ್ವರನೆಂಬುದು ಬರಿದೆ ಬಹುದೆ ಹೇಳಿರೆ

೯೬
ಅರಿವು ಉದಯವಾದಲ್ಲದೆ ಮರಹು ನಷ್ಟವಾಗದು
ಮರಹು ನಷ್ಟವಾದಲ್ಲದೆ ಅರಿವು ಸಯವಾಗದು
ಅರಿವು ಸಯವಾಗಿ ದೊರೆಕೊಂಡ ಬಳಿಕ
ಗುರುವಾರು ಲಿಂಗವಾರು
ಆವುದು ಘನ ಆವುದು ಕಿರಿದು
ಹೇಳಾ ಗುಹೇಶ್ವರಲಿಂಗದಲ್ಲಿ
[ಅರಿದು ಮರೆದು ಉಪದೇಶದ ಪಡೆದರೆ ಮುಂದೆ
ನಿಜವೆಂತು ಸಾಧ್ಯವಪ್ಪುದು ಹೇಳಾ ಮಡಿವಾಳ ಮಾಚಯ್ಯಾ]

೯೭
ಅರಿವುದೊಂದೆ ಎರಡಾಗಬಲ್ಲುದೊಂದೆ
ಬೇರೆ ತೋರಬಲ್ಲುದದೊಂದೆ
ತನ್ನ ಮರೆಯಬಲ್ಲುದದೊಂದೆ
ತಾನಲ್ಲದನ್ಯವಿಲ್ಲೆಂದರಿದ ಅರಿವು ನೀನೆ
ಸಿಮ್ಮಲಿಗೆಯ ಚೆನ್ನರಾಮಾ

೯೮
ಅರಿಸಿನವನೆ ಮಿಂದು ಹೊಂದೊಡಿಗೆಯನೆ ತೊಟ್ಟು
ದೇವಾಂಗವನುಟ್ಟೆನೆಲೆ ಪುರುಷ ಬಾರಾ
ಪುರುಷ ರತ್ನವೆ ಬಾರಾ
ನಿನ್ನ ಬರವೆನ್ನ ಅಸುವಿನ ಬರವಾದುದೀಗ
ಬಾರಯ್ಯಾ ಚೆನ್ನಮಲ್ಲಿಕಾರ್ಜುನಯ್ಯಾ
ನೀನು ಬಂದಹನೆಂದು ಬಟ್ಟೆಯ ನೋಡಿ ಬಾಯಾರುತಿರ್ದೆನು

೯೯
ಅರಿಸಿನವನೆ ಮಿಂದು ಹೊಂದೊಡಿಗೆಯನೆ ತೊಟ್ಟು
ಪುರುಷನ ಒಲವಿಲ್ಲದ ಲಲನೆಯಂತೆ ಆಗಿದ್ದೆನಯ್ಯಾ
ವಿಭೂತಿಯನೆ ಹೂಸಿ ರುದ್ರಾಕ್ಷಿಯನೆ ಕಟ್ಟಿ
ಶಿವ ನಿಮ್ಮೊಲವಿಲ್ಲದಂತೆ ಆಗಿದ್ದೆನಯ್ಯಾ
ಕೆಟ್ಟು ಬಾಳುವರಿಲ್ಲ ಎಮ್ಮವರ ಕುಲದಲ್ಲಿ
ನೀನೊಲಿದಂತೆ ಸಲಹಯ್ಯಾ ಕೂಡಲಸಂಗಮದೇವಾ

೧೦೦
ಅರುವತ್ತೆಂಟು ಸಾವಿರ ವಚನಂಗಳ ಹಾಡಿ ಹಾಡಿ
ಸೋತಿತೆನ್ನ ಮನ ನೋಡಯ್ಯ
ಹಾಡುವುದೊಂದೆ ವಚನ ನೋಡುವುದೊಂದೆ ವಚನ
ವಿಷಯ ಬಿಟ್ಟು ನಿರ್ವಿಷಯನಾಗುವುದೊಂದೆ ವಚನ
ಕಪಿಲಸಿದ್ಧಮಲ್ಲೇಶನಲ್ಲಿ